ನೆಹೆಮೀಯ
4 ನಾವು ಗೋಡೆ ಕಟ್ತಿದ್ದೀವಿ ಅನ್ನೋ ವಿಷ್ಯ ಸನ್ಬಲ್ಲಟನ+ ಕಿವಿಗೆ ಬಿದ್ದಾಗ ಅವನ ಕೋಪ ನೆತ್ತಿಗೇರಿತು. ಅವನಿಗೆ ಸಹಿಸಕ್ಕಾಗದೆ ಯೆಹೂದ್ಯರನ್ನ ಗೇಲಿ ಮಾಡೋಕೆ ಶುರುಮಾಡಿದ. 2 ಅವನು ತನ್ನ ಸಹೋದರರ, ಸಮಾರ್ಯದ ಸೈನ್ಯದವ್ರ ಮುಂದೆ “ಆ ಬಲಹೀನ ಯೆಹೂದ್ಯರು ಏನು ಮಾಡ್ತಿದ್ದಾರೆ? ಆ ಕೆಲಸವನ್ನ ತಮ್ಮ ಸ್ವಂತ ಶಕ್ತಿಯಿಂದ ಮಾಡ್ತಾರಾ? ಬಲಿಗಳನ್ನ ಅರ್ಪಿಸ್ತಾರಾ? ಒಂದು ದಿನದಲ್ಲಿ ಆ ಕೆಲಸ ಮುಗಿಸ್ತಾರಾ? ಸುಟ್ಟು ಅವಶೇಷಗಳ ಮಧ್ಯ ರಾಶಿರಾಶಿಯಾಗಿ ಬಿದ್ದಿರೋ ಕಲ್ಲುಗಳನ್ನ ತಂದು ಕಟ್ಟಕ್ಕಾಗುತ್ತಾ?”+ ಅಂತ ಹೇಳ್ತಿದ್ದ.
3 ಅವನ ಪಕ್ಕದಲ್ಲಿ ನಿಂತಿದ್ದ ಅಮ್ಮೋನಿಯನಾದ+ ಟೋಬೀ+ “ಅವರು ಕಟ್ತಿರೋ ಕಲ್ಲಿನ ಗೋಡೆನ ಒಂದು ನರಿ ಹತ್ತಿದ್ರೂ ಸಾಕು, ಬಿದ್ದು ಹೋಗುತ್ತೆ” ಅಂದ.
4 ಆಗ ನಾನು “ನಮ್ಮ ದೇವರೇ, ನೋಡು ಈ ಜನ ಹೇಗೆ ನಮಗೆ ಅವಮಾನ ಮಾಡ್ತಿದ್ದಾರೆ.+ ಅದೇ ತರ ಅವ್ರಿಗೂ ಬೇರೆಯವರು ಅವಮಾನ ಮಾಡೋ ತರ ಆಗ್ಲಿ.+ ಕೊಳ್ಳೆ ಹೊಡೆದ ವಸ್ತುವಿನ ಹಾಗೆ ಅವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗೋ ತರ ಮಾಡು. 5 ಅವರು ಗೋಡೆ ಕಟ್ಟೋರಿಗೆ ಅವಮಾನ ಮಾಡಿದ್ದಾರೆ. ಅವ್ರ ಅಪರಾಧಗಳನ್ನ ಮುಚ್ಚಿಹಾಕಬೇಡ.+ ಪಾಪಗಳನ್ನ ಅಳಿಸಬೇಡ” ಅಂತ ಪ್ರಾರ್ಥನೆ ಮಾಡಿದೆ.
6 ನಾವು ಗೋಡೆ ಕಟ್ಟೋದನ್ನ ಬಿಡಲಿಲ್ಲ. ಎಲ್ಲೆಲ್ಲ ಗೋಡೆ ಬಿದ್ದುಹೋಗಿತ್ತೋ ಅಲ್ಲೆಲ್ಲ ಮತ್ತೆ ಕಟ್ಟಿದ್ವಿ. ಹೀಗೆ ಪಟ್ಟಣದ ಸುತ್ತ ಗೋಡೆಯನ್ನ ಅರ್ಧ ಎತ್ರಕ್ಕೆ ಕಟ್ಟಿದ್ವಿ. ಜನ್ರು ಮನಸ್ಸು* ಕೊಟ್ಟು ಕೆಲಸ ಮಾಡ್ತಾನೇ ಇದ್ರು.
7 ಯೆರೂಸಲೇಮ್ ಗೋಡೆಯನ್ನ ಮತ್ತೆ ಕಟ್ಟೋ ಕೆಲ್ಸ ಚೆನ್ನಾಗಿ ನಡಿತಿದೆ, ಅದ್ರ ಸಂದುಗಳನ್ನ ಮುಚ್ತಿದ್ದಾರೆ ಅಂತ ಸನ್ಬಲ್ಲಟ, ಟೋಬೀಯ,+ ಅರಬಿಯರು,+ ಅಮ್ಮೋನಿಯರು, ಅಷ್ಡೋದಿನವರು+ ಕೇಳಿಸ್ಕೊಂಡಾಗ ಅವ್ರಿಗೆ ತುಂಬ ಕೋಪ ಬಂತು. 8 ಯೆರೂಸಲೇಮಿಗೆ ಬಂದು ಅದ್ರ ವಿರುದ್ಧ ಯುದ್ಧ ಮಾಡೋಕೆ, ಕೆಲ್ಸ ನಿಲ್ಲಿಸೋಕೆ ಸಂಚು ಮಾಡಿದ್ರು. 9 ಆದ್ರೆ ನಾವು ಸಹಾಯಕ್ಕಾಗಿ ದೇವರ ಹತ್ರ ಪ್ರಾರ್ಥಿಸಿದ್ವಿ. ಅವ್ರಿಂದ ನಮ್ಮನ್ನ ಕಾಪಾಡೋಕೆ ಹಗಲೂರಾತ್ರಿ ಬಾಗಿಲು ಕಾಯೋರನ್ನ ನೇಮಿಸಿದ್ವಿ.
10 ಆಗ ಯೆಹೂದದ ಜನ “ಕಟ್ಟಡ ಕಟ್ಟೋ ಜನ್ರ* ಶಕ್ತಿ ಕಮ್ಮಿ ಆಗಿದೆ. ಇನ್ನೂ ತುಂಬ ಅವಶೇಷಗಳನ್ನ ತೆಗಿಬೇಕು. ಈ ಗೋಡೆಯನ್ನ ನಮ್ಮಿಂದ ಕಟ್ಟೋಕೆ ಸಾಧ್ಯನೇ ಇಲ್ಲ” ಅಂದ್ರು.
11 ಆಕಡೆ ನಮ್ಮ ಶತ್ರುಗಳು “ನಮ್ಮ ಯೋಜನೆ ಬಗ್ಗೆ ಅವ್ರಿಗೆ ಗೊತ್ತಾಗೋ ಮುಂಚೆ, ನಮ್ಮನ್ನ ನೋಡೋ ಮುಂಚೆನೇ, ಅವ್ರ ಮಧ್ಯದಲ್ಲಿ ನುಗ್ಗಿ ಅವ್ರನ್ನ ಕೊಂದುಬಿಡೋಣ. ಅವ್ರ ಕೆಲ್ಸ ನಿಲ್ಲಿಸಿಬಿಡೋಣ” ಅಂತ ಮಾತಾಡ್ಕೊಳ್ತಿದ್ರು.
12 ಶತ್ರುಗಳ ಅಕ್ಕಪಕ್ಕದಲ್ಲಿ ವಾಸಿಸ್ತಿದ್ದ ಯೆಹೂದ್ಯರು ನಮ್ಮ ಹತ್ರ ಬಂದಾಗೆಲ್ಲ “ಶತ್ರುಗಳು ಎಲ್ಲ ಕಡೆಗಳಿಂದ ನಮ್ಮ ಮೇಲೆ ದಾಳಿ ಮಾಡಿಬಿಡ್ತಾರೆ” ಅಂತ ಪದೇಪದೇ* ಹೇಳ್ತಿದ್ರು.
13 ಹಾಗಾಗಿ ನಾನು ತೆರೆದ ಬಯಲುಗಳಲ್ಲಿ, ಎಲ್ಲೆಲ್ಲಿ ಗೋಡೆಯ ಎತ್ರ ಕಮ್ಮಿ ಇತ್ತೋ ಆ ಜಾಗಗಳಲ್ಲಿ ಗಂಡಸ್ರನ್ನ ಬಾಗಿಲು ಕಾಯೋಕೆ ಇಟ್ಟೆ. ಅವ್ರನ್ನ ಅವ್ರ ಮನೆತನಗಳ ಪ್ರಕಾರ ನಿಲ್ಲಿಸಿ ಅವ್ರಿಗೆ ಕತ್ತಿ, ಈಟಿ, ಬಿಲ್ಲು ಕೊಟ್ಟೆ. 14 ಜನ್ರಲ್ಲಿ ಭಯ ನೋಡಿದಾಗ ತಕ್ಷಣ ಅಲ್ಲಿದ್ದ ಪ್ರಧಾನರಿಗೆ,+ ಉಪಾಧಿಪತಿಗಳಿಗೆ, ಬೇರೆ ಜನ್ರಿಗೆ “ಭಯಪಡಬೇಡಿ.+ ಮಹಾನ್ ದೇವರಾದ, ಭಯವಿಸ್ಮಯ ಹುಟ್ಟಿಸೋ ದೇವರಾದ+ ಯೆಹೋವನನ್ನ ನೆನಪಿಸ್ಕೊಳ್ಳಿ. ನಿಮ್ಮ ಸಹೋದರರಿಗಾಗಿ, ಮಕ್ಕಳಿಗಾಗಿ, ಹೆಂಡತಿಯರಿಗಾಗಿ, ಮನೆಗಳಿಗಾಗಿ ಹೋರಾಡಿ” ಅಂದೆ.
15 ಶತ್ರುಗಳಿಗೆ ಅವ್ರ ಯೋಜನೆ ನಮಗೆ ಗೊತ್ತಾಗಿದೆ, ಸತ್ಯ ದೇವರು ಅವ್ರ ಯೋಜನೆ ತಲೆಕೆಳಗೆ ಮಾಡಿದ್ದಾನೆ ಅಂತ ಗೊತ್ತಾಯ್ತು. ನಾವೆಲ್ಲ ಗೋಡೆ ಕಟ್ಟೋ ಕೆಲಸಕ್ಕೆ ಮತ್ತೆ ಹೋದ್ವಿ. 16 ಅವತ್ತಿಂದ ನನ್ನ ಜನ್ರಲ್ಲಿ ಅರ್ಧದಷ್ಟು ಜನ ಕಟ್ಟೋ ಕೆಲಸ ಮಾಡ್ತಿದ್ರು.+ ಬೇರೆ ಅರ್ಧ ಜನ ಕೈಯಲ್ಲಿ ಈಟಿ, ಗುರಾಣಿ, ಬಿಲ್ಲು ಹಿಡ್ಕೊಂಡು ಯುದ್ಧ ಕವಚ ಹಾಕೊಂಡು ನಿಲ್ತಿದ್ರು. ಯೆಹೂದ್ಯರಿಗೆ ಸಹಾಯ ಮಾಡೋಕೆ ನಾಯಕರು+ ಅವ್ರ ಹಿಂದೆ ನಿಂತ್ಕೊಳ್ತಿದ್ರು. 17 ಈ ಯೆಹೂದ್ಯರು ಗೋಡೆಯನ್ನ ಕಟ್ತಿದ್ರು. ಹೊರೆ ಹೊರೋರು ಒಂದು ಕೈಯಲ್ಲಿ ಕೆಲಸ ಮಾಡ್ತಾ, ಇನ್ನೊಂದು ಕೈಯಲ್ಲಿ ಆಯುಧಗಳನ್ನ* ಹಿಡ್ಕೊಳ್ತಿದ್ರು. 18 ಕಟ್ಟೋ ಕೆಲಸ ಮಾಡ್ತಿದ್ದ ಪ್ರತಿಯೊಬ್ಬನೂ ತನ್ನ ಸೊಂಟಕ್ಕೆ ಕತ್ತಿಯನ್ನ ಗಟ್ಟಿಯಾಗಿ ಕಟ್ಕೊಳ್ತಿದ್ದ. ಕೊಂಬು ಊದೋನು+ ನನ್ನ ಪಕ್ಕದಲ್ಲಿ ನಿಂತ್ಕೊಳ್ತಿದ್ದ.
19 ನಾನು ಪ್ರಧಾನರಿಗೆ, ಉಪಾಧಿಪತಿಗಳಿಗೆ, ಬೇರೆ ಜನ್ರಿಗೆ “ಇದು ತುಂಬ ದೊಡ್ಡ ಕೆಲ್ಸ. ಮಾಡೋಕೆ ಇನ್ನೂ ಜಾಸ್ತಿ ಇದೆ. ನಾವು ಗೋಡೆಯ ಬೇರೆಬೇರೆ ಭಾಗಗಳಲ್ಲಿ ಕೆಲ್ಸ ಮಾಡ್ತಿದ್ದೀವಿ. ಇದ್ರಿಂದಾಗಿ ನಾವು ದೂರದೂರ ನಿಂತ್ಕೊಂಡಿದ್ದೀವಿ. 20 ಹಾಗಾಗಿ ಕೊಂಬೂದೋ ಶಬ್ದ ನಿಮಗೆ ಕೇಳಿಸಿದ ತಕ್ಷಣ ನೀವೆಲ್ಲ ನಾವಿರೋ ಜಾಗಕ್ಕೆ ಬರಬೇಕು. ನಮಗಾಗಿ ನಮ್ಮ ದೇವರು ಯುದ್ಧ ಮಾಡ್ತಾನೆ”+ ಅಂದೆ.
21 ಹೀಗೆ ಅರ್ಧ ಜನ ಕೈಯಲ್ಲಿ ಈಟಿಗಳನ್ನ ಹಿಡ್ಕೊಂಡು ನಿಂತಿರುವಾಗ ನಾವು ನಸುಕಿಂದ ನಕ್ಷತ್ರಗಳು ಮೂಡೋ ತನಕ ಕೆಲಸ ಮಾಡ್ತಾ ಇದ್ವಿ. 22 ಆಗ ಜನ್ರಿಗೆ “ಪ್ರತಿಯೊಬ್ಬ ತನ್ನ ಸೇವಕನ ಜೊತೆ ರಾತ್ರಿಯನ್ನ ಯೆರೂಸಲೇಮಲ್ಲೇ ಕಳಿಲಿ. ಹಗಲಲ್ಲಿ ಕೆಲಸ ಮಾಡಿ, ರಾತ್ರಿಯಲ್ಲಿ ಸರದಿ ಪ್ರಕಾರ ಬಾಗಿಲು ಕಾಯ್ಲಿ” ಅಂದೆ. 23 ಹಾಗಾಗಿ ನಾನು, ನನ್ನ ಸಹೋದರರು, ನನ್ನ ಸೇವಕರು,+ ನನ್ನ ಹಿಂದೆ ಬಂದ ಬಾಗಿಲು ಕಾಯೋರು, ಹೀಗೆ ನಾವೆಲ್ಲ ನಮ್ಮ ಬಟ್ಟೆ ಬದಲಾಯಿಸ್ಲೇ ಇಲ್ಲ. ನಮ್ಮನಮ್ಮ ಆಯುಧವನ್ನ ಬಲಗೈಯಲ್ಲಿ ಹಿಡ್ಕೊಂಡು ಯಾವಾಗ್ಲೂ ತಯಾರಾಗಿ ಇರ್ತಿದ್ವಿ.