ದಾನಿಯೇಲ
11 ಮೇದ್ಯನಾಗಿದ್ದ ದಾರ್ಯಾವೆಷ+ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ, ಮೀಕಾಯೇಲನನ್ನ ಬೆಂಬಲಿಸೋಕೆ, ಬಲಪಡಿಸೋಕೆ* ನಾನು ಎದ್ದು ನಿಂತೆ. 2 ಈಗ ನಾನು ನಿಮಗೆ ಹೇಳೋದೆಲ್ಲ ಸತ್ಯ:
ಪರ್ಶಿಯದಲ್ಲಿ ಇನ್ನೂ ಮೂರು ರಾಜರು ಎದ್ದು ನಿಲ್ತಾರೆ. ನಾಲ್ಕನೇ ರಾಜ ಬೇರೆಲ್ಲ ರಾಜರಿಗಿಂತ ಜಾಸ್ತಿ ಹಣ ಆಸ್ತಿ ಕೂಡಿಸ್ತಾನೆ. ಅವನು ತನ್ನ ಹಣ ಆಸ್ತಿಯಿಂದ ಶಕ್ತಿಶಾಲಿ ರಾಜನಾಗುವಾಗ ಪ್ರತಿಯೊಬ್ರನ್ನ ಗ್ರೀಸ್ ಸಾಮ್ರಾಜ್ಯದ ವಿರುದ್ಧ ನಿಲ್ಲಿಸ್ತಾನೆ.+
3 ಆಮೇಲೆ ಬಲಿಷ್ಠನಾದ ಒಬ್ಬ ರಾಜ ಏಳ್ತಾನೆ. ಅವನು ಮಹಾ ಬಲದಿಂದ*+ ಆಳ್ವಿಕೆ ಮಾಡ್ತಾನೆ, ತನಗೆ ಇಷ್ಟಬಂದ ಹಾಗೆ ನಡ್ಕೊಳ್ತಾನೆ. 4 ಆದ್ರೆ ಅವನು ಎದ್ದು ನಿಂತ ಮೇಲೆ ಅವನ ಸಾಮ್ರಾಜ್ಯ ಒಡೆದು ಹೋಗುತ್ತೆ. ನಾಲ್ಕು ದಿಕ್ಕಿಗೂ ಅದನ್ನ ಹಂಚಲಾಗುತ್ತೆ.+ ಅವನ ಸಾಮ್ರಾಜ್ಯ ಅವನ ಸಂತತಿಯವ್ರಿಗೆ ಹೋಗಲ್ಲ. ಅವನು ಆಳ್ತಿದ್ದಾಗ ಅವನಿಗೆ ಇದ್ದಷ್ಟು ಬಲ ಆಮೇಲೆ ಇರಲ್ಲ. ಅವನ ಸಾಮ್ರಾಜ್ಯವನ್ನ ಬೇರುಸಮೇತ ಕಿತ್ತು ಹಾಕಲಾಗುತ್ತೆ, ಅದು ಬೇರೆಯವ್ರ ಪಾಲಾಗುತ್ತೆ.
5 ದಕ್ಷಿಣದ ರಾಜ ಅಂದ್ರೆ ಅವನ ಸೇನಾಪತಿಗಳಲ್ಲಿ ಒಬ್ಬ ಬಲಿಷ್ಠನಾಗ್ತಾನೆ. ಆದ್ರೆ ಇನ್ನೊಬ್ಬ* ಅವನಿಗಿಂತ ಬಲಿಷ್ಠನಾಗ್ತಾನೆ, ಮಹಾ ಬಲದಿಂದ ಆಳ್ವಿಕೆ ಮಾಡ್ತಾನೆ. ಇವನು ಅವನಿಗಿಂತ* ಹೆಚ್ಚಿನ ಅಧಿಕಾರ ಪಡ್ಕೊಳ್ತಾನೆ.
6 ಕೆಲವು ವರ್ಷ ಆದ್ಮೇಲೆ ಅವರು ಒಂದು ಸಂಬಂಧ ಬೆಳೆಸ್ತಾರೆ. ಒಂದು ಒಪ್ಪಂದ ಮಾಡ್ಕೊಳ್ಳೋಕೆ ದಕ್ಷಿಣದ ರಾಜನ ಮಗಳು ಉತ್ತರದ ರಾಜನ ಹತ್ರ ಬರ್ತಾಳೆ. ಆದ್ರೆ ಆ ಮಗಳ ಶಕ್ತಿ ಅಳಿದು ಹೋಗುತ್ತೆ. ಅಷ್ಟೇ ಅಲ್ಲ ಸ್ವತಃ ರಾಜನೇ ತನ್ನ ಶಕ್ತಿ ಕಳ್ಕೊಳ್ತಾನೆ. ಆ ಮಗಳನ್ನ ಮತ್ತೊಬ್ಬರಿಗೆ ಒಪ್ಪಿಸಲಾಗುತ್ತೆ. ಆ ಮಗಳನ್ನ, ಅವಳನ್ನ ಕರ್ಕೊಂಡು ಬಂದವ್ರನ್ನ, ಅವಳ ತಂದೆಯನ್ನ, ಆ ಸಮಯದಲ್ಲಿ ಅವಳನ್ನ ಬಲಪಡಿಸಿದವನನ್ನ ಇವ್ರನ್ನೆಲ್ಲ ಬೇರೆಯವ್ರ ಕೈಗೆ ಒಪ್ಪಿಸಲಾಗುತ್ತೆ. 7 ಆ ಮಗಳ ಕುಟುಂಬದ ಸದಸ್ಯನೊಬ್ಬ ಅವನ* ಸ್ಥಾನದಲ್ಲಿ ನಿಂತ್ಕೊಳ್ತಾನೆ. ಅವನು ಸೈನ್ಯದ ವಿರುದ್ಧ ಬರ್ತಾನೆ. ಉತ್ತರದ ರಾಜನ ಭದ್ರಕೋಟೆ ಮೇಲೆ ದಾಳಿ ಮಾಡಿ, ಅವರ ವಿರುದ್ಧ ಹೆಜ್ಜೆ ತಗೊಂಡು ಮೇಲುಗೈ ಸಾಧಿಸ್ತಾನೆ. 8 ಜೊತೆಗೆ ಅವನು ಅವ್ರ ದೇವರುಗಳನ್ನ, ಅವರು ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ, ಅವ್ರ ಚಿನ್ನ, ಬೆಳ್ಳಿಯ ಅಮೂಲ್ಯ ವಸ್ತುಗಳನ್ನ ತಗೊಂಡು, ಕೈದಿಗಳನ್ನ ಕರ್ಕೊಂಡು ಈಜಿಪ್ಟಿಗೆ ಬರ್ತಾನೆ. ಸ್ವಲ್ಪ ವರ್ಷಗಳ ತನಕ ಅವನು ಉತ್ತರದ ರಾಜನ ತಂಟೆಗೆ ಹೋಗಲ್ಲ. 9 ಆದ್ರೆ ಉತ್ತರದ ರಾಜ ಯುದ್ಧ ಮಾಡೋದಕ್ಕಾಗಿ ದಕ್ಷಿಣದ ರಾಜನ ಸಾಮ್ರಾಜ್ಯಕ್ಕೆ ಬರ್ತಾನೆ. ಆಮೇಲೆ ತನ್ನ ರಾಜ್ಯಕ್ಕೆ ವಾಪಸ್ ಹೋಗ್ತಾನೆ.
10 ಅವನ* ಮಕ್ಕಳು ಯುದ್ಧದ ತಯಾರಿ ಮಾಡ್ತಾರೆ, ಒಂದು ಮಹಾ ಸೈನ್ಯ ಒಟ್ಟುಸೇರಿಸ್ತಾರೆ. ಅವನು ಮುಂದೆ ಹೋಗ್ತಾನೆ, ಒಂದು ಪ್ರವಾಹದ ತರ ಎಲ್ಲವನ್ನ ಕೊಚ್ಕೊಂಡು ಹೋಗ್ತಾನೆ. ಆದ್ರೆ ಅವನು ವಾಪಸ್ ಹೋಗ್ತಾನೆ, ತನ್ನ ಭದ್ರಕೋಟೆಯನ್ನ ತಲಪೋ ತನಕ ಯುದ್ಧ ಮಾಡ್ತಾನೆ.
11 ದಕ್ಷಿಣದ ರಾಜ ಕೋಪದಿಂದ ಅವನ ಜೊತೆ ಅಂದ್ರೆ ಉತ್ತರದ ರಾಜನ ಜೊತೆ ಯುದ್ಧ ಮಾಡೋಕೆ ಹೋಗ್ತಾನೆ. ಅವನು ಒಂದು ದೊಡ್ಡ ಸಮೂಹವನ್ನ ಒಟ್ಟುಸೇರಿಸ್ತಾನೆ. ಆದ್ರೆ ಆ ಸಮೂಹವನ್ನ ಆ ರಾಜನ* ಕೈಗೆ ಒಪ್ಪಿಸಲಾಗುತ್ತೆ. 12 ಆ ಸಮೂಹವನ್ನ ತಗೊಂಡು ಹೋಗಲಾಗುತ್ತೆ. ಆ ರಾಜನ ಹೃದಯ ಅಹಂಕಾರದಿಂದ ಉಬ್ಬಿಕೊಳ್ಳುತ್ತೆ. ಅವನು ಲಕ್ಷ ಲಕ್ಷ ಜನ್ರನ್ನ ನಾಶ ಮಾಡ್ತಾನೆ. ಆದ್ರೆ ಅವನು ತನ್ನ ಶಕ್ತಿನ ಸರಿಯಾಗಿ ಬಳಸ್ಕೊಳ್ಳಲ್ಲ.
13 ಉತ್ತರದ ರಾಜ ವಾಪಸ್ ಬರ್ತಾನೆ, ಮುಂಚೆಗಿಂತ ದೊಡ್ಡದಾದ ಒಂದು ಸಮೂಹವನ್ನ ಒಟ್ಟುಸೇರಿಸ್ತಾನೆ. ಸ್ವಲ್ಪ ಸಮಯ ಆದ್ಮೇಲೆ, ಸ್ವಲ್ಪ ವರ್ಷಗಳು ಉರುಳಿದ ಮೇಲೆ ಅವನು ಖಂಡಿತ ಸುಸಜ್ಜಿತವಾದ ಒಂದು ದೊಡ್ಡ ಸೈನ್ಯದ ಜೊತೆ ಬರ್ತಾನೆ. 14 ಆ ಸಮಯದಲ್ಲಿ ತುಂಬ ಜನ್ರು ದಕ್ಷಿಣದ ರಾಜನ ವಿರುದ್ಧ ಏಳ್ತಾರೆ.
ನಿನ್ನ ಜನ್ರಲ್ಲಿರೋ ಕ್ರೂರಿಗಳು ಬೇರೆಯವರ ಪ್ರಭಾವದಿಂದ ದರ್ಶನವನ್ನ ನಿಜ ಮಾಡೋಕೆ ಪ್ರಯತ್ನಿಸ್ತಾರೆ. ಆದ್ರೆ ಅವರು ಎಡವಿ ಬೀಳ್ತಾರೆ.
15 ಉತ್ತರದ ರಾಜ ಬರ್ತಾನೆ, ಭದ್ರಕೋಟೆ ಇರೋ ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ದಿಬ್ಬ ಕಟ್ತಾನೆ. ದಕ್ಷಿಣದ ಸೈನ್ಯಕ್ಕಾಗಲಿ ಅದ್ರ ಅತ್ಯುತ್ತಮವಾದ ಸೈನಿಕರಿಗಾಗಲಿ ಅವನ ಮುಂದೆ ನಿಲ್ಲೋಕೆ ಆಗಲ್ಲ. ವಿರೋಧಿಸೋ ಶಕ್ತಿ ಅವರಿಗೆ ಇರಲ್ಲ. 16 ದಕ್ಷಿಣ ರಾಜನ ವಿರುದ್ಧ ಬರುವವನು* ತನ್ನಿಷ್ಟ ಬಂದ ಹಾಗೆ ಮಾಡ್ತಾನೆ. ಅವನ ಮುಂದೆ ಯಾರೂ ನಿಲ್ಲಲ್ಲ. ಅವನು ಅಂದವಾದ* ದೇಶದಲ್ಲಿ+ ನಿಂತ್ಕೊಳ್ತಾನೆ, ಅವನಿಗೆ ನಾಶ ಮಾಡೋ ಶಕ್ತಿ ಇರುತ್ತೆ. 17 ಅವನು ದೃಢ ನಿರ್ಧಾರ ಮಾಡಿ ತನ್ನ ಸಾಮ್ರಾಜ್ಯದ ಸಂಪೂರ್ಣ ಬಲದಿಂದ ಬರ್ತಾನೆ. ಆದ್ರೆ ಅವನು ಆ ರಾಜನ ಜೊತೆ ಒಪ್ಪಂದ ಮಾಡ್ಕೊಳ್ತಾನೆ, ಹೆಜ್ಜೆ ತಗೊಳ್ತಾನೆ. ಅವನಿಗೆ ಸ್ತ್ರೀಯ ಮಗಳನ್ನ ನಾಶ ಮಾಡೋ ಅನುಮತಿ ಸಿಗುತ್ತೆ. ಅವಳು ತಾಳ್ಕೊಳ್ಳಲ್ಲ, ಅವನಿಗೆ ನಿಷ್ಠೆಯಿಂದ ಇರಲ್ಲ. 18 ಅವನು ತನ್ನ ಗಮನವನ್ನ ಕಡಲ ಪ್ರದೇಶಗಳ ಕಡೆಗೆ ತಿರುಗಿಸ್ತಾನೆ, ತುಂಬ ಪ್ರದೇಶಗಳನ್ನ ವಶ ಮಾಡ್ಕೊಳ್ತಾನೆ. ಅವನು ಬೇರೆಯವನ ಕೈಯಿಂದ ಅನುಭವಿಸಿದ ಅವಮಾನವನ್ನ ಒಬ್ಬ ಸೇನಾಪತಿ ಬಂದು ಕೊನೆ ಮಾಡ್ತಾನೆ. ಹೀಗೆ ಆ ಅವಮಾನ ನಿಂತುಹೋಗುತ್ತೆ. ಅವಮಾನ ಮಾಡಿದವನಿಗೇ ಆ ಅವಮಾನ ಆಗೋ ತರ ಮಾಡ್ತಾನೆ. 19 ಆಮೇಲೆ ರಾಜ ತನ್ನ ದೇಶದ ಕೋಟೆಗೆ ವಾಪಸ್ ಬರ್ತಾನೆ. ಅವನು ಎಡವಿ ಬೀಳ್ತಾನೆ. ಅವನು ಹೇಳ ಹೆಸ್ರಿಲ್ಲದೆ ಹೋಗ್ತಾನೆ.
20 ಅವನ ಸ್ಥಾನಕ್ಕೆ ಇನ್ನೊಬ್ಬ ಬರ್ತಾನೆ. ತೆರಿಗೆ ವಸೂಲಿ ಮಾಡೋ ಒಬ್ಬನನ್ನ ವೈಭವಯುತ ಸಾಮ್ರಾಜ್ಯದ ಮೂಲಕ ಹಾದು ಹೋಗೋ ತರ ಮಾಡ್ತಾನೆ. ಆದ್ರೆ ಕೆಲವೇ ದಿನದಲ್ಲಿ ಅವನು ನಾಶ ಆಗ್ತಾನೆ. ಅವನ ನಾಶಕ್ಕೆ ಯಾವುದೇ ಕೋಪ ಆಗಲಿ, ಯುದ್ಧ ಆಗಲಿ ಕಾರಣ ಅಲ್ಲ.
21 ಅವನ ಸ್ಥಾನದಲ್ಲಿ ಒಬ್ಬ ನೀಚ ವ್ಯಕ್ತಿ ಏಳ್ತಾನೆ. ಅವರು ಸಾಮ್ರಾಜ್ಯದ ಘನತೆಯನ್ನ ಅವನಿಗೆ ಕೊಡಲ್ಲ. ಅವನು ನೆಮ್ಮದಿಯ ಸಮಯದಲ್ಲಿ* ಬರ್ತಾನೆ, ಕಪಟದ ಮಾತುಗಳನ್ನಾಡಿ* ಸಾಮ್ರಾಜ್ಯದ ಅಧಿಕಾರ ಪಡ್ಕೊಳ್ತಾನೆ. 22 ಅವನು ಪ್ರವಾಹದ ತರ ಇರೋ ಸೈನ್ಯಗಳನ್ನ ಸೋಲಿಸ್ತಾನೆ. ಅವುಗಳನ್ನ ನಾಶ ಮಾಡಲಾಗುತ್ತೆ, ಒಪ್ಪಂದದ+ ನಾಯಕನನ್ನ+ ಸಹ ಕೊಂದು ಹಾಕಲಾಗುತ್ತೆ. 23 ಅವರು ಅವನ ಜೊತೆ ಬೆಳೆಸ್ಕೊಂಡಿರೋ ಸಂಬಂಧದಿಂದಾಗಿ ಅವನು ಮೋಸ ಮಾಡ್ತಾನೇ ಇರ್ತಾನೆ. ಅಷ್ಟೇ ಅಲ್ಲ, ಅವನು ಏಳ್ತಾನೆ, ಒಂದು ಚಿಕ್ಕ ದೇಶದ ಸಹಾಯದಿಂದ ಬಲಿಷ್ಠನಾಗ್ತಾನೆ. 24 ನೆಮ್ಮದಿಯ ಸಮಯದಲ್ಲಿ ಅವನು ಪ್ರಾಂತ್ಯದ ಅತ್ಯುತ್ತಮ ಜಾಗಗಳಿಗೆ ಬರ್ತಾನೆ. ತನ್ನ ಪೂರ್ವಜರು ಮಾಡದಿದ್ದ ಕೆಲಸ ಮಾಡ್ತಾನೆ. ತಾನು ಲೂಟಿ ಮಾಡಿದ, ಕೊಳ್ಳೆ ಹೊಡೆದ ವಸ್ತುಗಳನ್ನ ಜನ್ರಿಗೆ ಹಂಚಿಬಿಡ್ತಾನೆ. ಭದ್ರ ಕೋಟೆಗಳಿರೋ ಸ್ಥಳಗಳ ವಿರುದ್ಧ ಪಿತೂರಿ ಮಾಡ್ತಾನೆ. ಆದ್ರೆ ಇದೆಲ್ಲ ಒಂದು ಕಾಲದ ತನಕ ಮಾತ್ರ.
25 ಅವನು ತನ್ನ ಶಕ್ತಿ, ಧೈರ್ಯವನ್ನೆಲ್ಲ* ಒಟ್ಟುಸೇರಿಸಿ ಒಂದು ದೊಡ್ಡ ಸೈನ್ಯದ ಜೊತೆ ದಕ್ಷಿಣದ ರಾಜನ ವಿರುದ್ಧ ಬರ್ತಾನೆ. ದಕ್ಷಿಣದ ರಾಜ ತುಂಬ ದೊಡ್ಡ, ಶಕ್ತಿಶಾಲಿ ಸೈನ್ಯದ ಜೊತೆ ಯುದ್ಧಕ್ಕೆ ಸಿದ್ಧನಾಗ್ತಾನೆ. ಆದ್ರೆ ಅವನು ನಿಲ್ಲಲ್ಲ. ಯಾಕಂದ್ರೆ ಅವನ ವಿರುದ್ಧ ಸಂಚು ಮಾಡಲಾಗುತ್ತೆ. 26 ಅವನ ಜೊತೆ ಮೃಷ್ಟಾನ್ನ ಭೋಜನ ಮಾಡುವವ್ರೇ ಅವನನ್ನ ಬೀಳಿಸ್ತಾರೆ.
ಅವನ ಸೈನ್ಯದ ವಿಷ್ಯಕ್ಕೆ ಬರೋದಾದ್ರೆ, ಅದನ್ನ ಧೂಳಿಪಟ ಮಾಡಲಾಗುತ್ತೆ.* ತುಂಬ ಜನ್ರನ್ನ ಕೊಲ್ಲಲ್ಲಾಗುತ್ತೆ.
27 ಈ ಎರಡು ರಾಜರ ಹೃದಯ ಕೆಟ್ಟದ್ದರ ಕಡೆಗೆ ವಾಲಿಕೊಂಡಿರುತ್ತೆ. ಅವರು ಒಂದೇ ಮೇಜಲ್ಲಿ ಕೂತು ಒಬ್ರು ಇನ್ನೊಬ್ರಿಗೆ ಸುಳ್ಳು ಹೇಳ್ತಾರೆ. ಆದ್ರೆ ಯಾವುದೂ ಗೆಲ್ಲಲ್ಲ. ಯಾಕಂದ್ರೆ ದೇವರು ನಿಶ್ಚಯಿಸಿರೋ ಸೂಕ್ತ ಸಮಯಕ್ಕೆ ಅಂತ್ಯ ಬರುತ್ತೆ.+
28 ಅವನು* ತುಂಬ ಸರಕು ತಗೊಂಡು ತನ್ನ ದೇಶಕ್ಕೆ ಹೋಗ್ತಾನೆ. ಅವನ ಹೃದಯ ಪವಿತ್ರ ಒಪ್ಪಂದದ ವಿರುದ್ಧವಾಗಿರುತ್ತೆ. ಅವನು ತನ್ನ ಮನಸ್ಸಲ್ಲಿರೋ ಉದ್ದೇಶಗಳನ್ನ ಪೂರೈಸಿ, ತನ್ನ ದೇಶಕ್ಕೆ ವಾಪಸ್ ಹೋಗ್ತಾನೆ.
29 ನಿಶ್ಚಿತ ಸಮಯಕ್ಕೆ ಅವನು ವಾಪಸ್ ಬರ್ತಾನೆ, ದಕ್ಷಿಣದ ಮೇಲೆ ದಾಳಿ ಮಾಡ್ತಾನೆ. ಆದ್ರೆ ಈ ಸಾರಿ ಮುಂಚೆ ಇದ್ದ ಹಾಗೆ ಇರಲ್ಲ. 30 ಯಾಕಂದ್ರೆ ಕಿತ್ತೀಮಿನ+ ಹಡಗುಗಳು ಅವನ ವಿರುದ್ಧ ಬರುತ್ತೆ. ಅವನ ಸೊಕ್ಕನ್ನ ಮುರಿಯಲಾಗುತ್ತೆ.
ಅವನು ವಾಪಸ್ ಹೋಗ್ತಾನೆ. ಪವಿತ್ರ ಒಪ್ಪಂದವನ್ನ+ ಉಗ್ರವಾಗಿ ಖಂಡಿಸ್ತಾನೆ, ಹೆಜ್ಜೆ ತಗೊಳ್ತಾನೆ. ಅವನು ವಾಪಸ್ ಹೋಗ್ತಾನೆ, ಪವಿತ್ರ ಒಪ್ಪಂದವನ್ನ ಬಿಟ್ಟುಬಿಡುವವ್ರ ಕಡೆ ಗಮನ ಕೊಡ್ತಾನೆ. 31 ಅವನ ಸೈನ್ಯ ಏಳುತ್ತೆ. ಅದು ಅವ್ರ ಕೋಟೆಯನ್ನ ಅಂದ್ರೆ ಆರಾಧನಾ ಸ್ಥಳವನ್ನ ಅಪವಿತ್ರ ಮಾಡುತ್ತೆ,+ ಪ್ರತಿದಿನ ಬಲಿಗಳನ್ನ ನಿಲ್ಲಿಸುತ್ತೆ.+
ಅವರು ಹಾಳುಮಾಡೋ ಅಸಹ್ಯವಾದ ವಸ್ತುವನ್ನ ಸ್ಥಾಪಿಸ್ತಾರೆ.+
32 ಒಪ್ಪಂದದ ವಿರುದ್ಧವಾಗಿ ಕೆಟ್ಟ ಕೆಲಸಗಳನ್ನ ಮಾಡ್ತಿರೋ ಜನರನ್ನ ಅವನು* ತನ್ನ ಕಪಟದ ಮಾತುಗಳಿಂದ ಧರ್ಮಭ್ರಷ್ಟತೆಗೆ ನಡಿಸ್ತಾನೆ. ಆದ್ರೆ ತಮ್ಮ ದೇವರನ್ನ ಚೆನ್ನಾಗಿ ತಿಳ್ಕೊಂಡಿರೋ ಜನ್ರು ಮೇಲುಗೈ ಸಾಧಿಸ್ತಾರೆ, ಹೆಜ್ಜೆ ತಗೊಳ್ತಾರೆ. 33 ಜನ್ರಲ್ಲಿ ಯಾರಿಗೆ ತಿಳುವಳಿಕೆ*+ ಇದ್ಯೋ ಅವರು ತುಂಬ ಜನ್ರಿಗೆ ಅರ್ಥ ಮಾಡಿಸ್ತಾರೆ. ಸ್ವಲ್ಪ ದಿನಗಳ ತನಕ ಅವ್ರನ್ನ ಕತ್ತಿಯಿಂದ, ಬೆಂಕಿಯಿಂದ, ಸೆರೆವಾಸದಿಂದ, ಕೊಳ್ಳೆ ಹೊಡೆಯೋ ಮೂಲಕ ಕಷ್ಟ ಪಡೋ ತರ ಮಾಡಲಾಗುತ್ತೆ. 34 ಆದ್ರೆ ಅವರು ಕಷ್ಟ ಪಡುವಾಗ ಅವ್ರಿಗೆ ಸ್ವಲ್ಪ ಸಹಾಯ ಕೊಡಲಾಗುತ್ತೆ. ಆಮೇಲೆ ತುಂಬ ಜನ ಸುಮ್ಮನೆ ಹೊಗಳ್ತಾ ಅವರ ಜೊತೆ ಸೇರಿಕೊಳ್ತಾರೆ. 35 ತಿಳುವಳಿಕೆ ಇರುವವ್ರಲ್ಲಿ ಕೆಲವರು ಬೀಳ್ತಾರೆ. ಇದ್ರಿಂದಾಗಿ ಪರಿಷ್ಕರಣದ ಕೆಲಸ, ಅಂತ್ಯದ ಸಮಯದ ತನಕ ಸ್ವಚ್ಛ ಮಾಡೋ ಶುದ್ಧೀಕರಿಸೋ+ ಕೆಲಸ ಮುಂದುವರಿಲಿ ಅಂತ ಹೀಗೆ ಮಾಡಲಾಗುತ್ತೆ. ಯಾಕಂದ್ರೆ ಅದು ನಿಶ್ಚಿತ ಸಮಯದಲ್ಲಿ ನಡಿಯುತ್ತೆ.
36 ರಾಜ ತನಗಿಷ್ಟ ಬಂದ ಹಾಗೆ ನಡ್ಕೊಳ್ತಾನೆ. ಅವನು ತನ್ನನ್ನೇ ಮೇಲೆ ಏರಿಸ್ಕೊಳ್ತಾನೆ, ಎಲ್ಲ ದೇವರುಗಳಿಗಿಂತ ತಾನೇ ದೊಡ್ಡವನು ಅಂತ ಹೆಚ್ಚಿಸ್ಕೊಳ್ತಾನೆ. ಎಲ್ಲ ದೇವರುಗಳಿಗಿಂತ ಅತ್ಯುನ್ನತನಾದ ದೇವರ+ ವಿರುದ್ಧ ಅಹಂಕಾರದಿಂದ ಮಾತಾಡ್ತಾನೆ. ಉಗ್ರ ಖಂಡನೆ ಸಂಪೂರ್ಣ ಆಗೋ ತನಕ ಅವನು ಮಾಡೋದೆಲ್ಲ ಸಫಲ ಆಗುತ್ತೆ. ಯಾಕಂದ್ರೆ ದೇವರು ನಿಶ್ಚಯಿಸಿರೋದು ನಡಿಲೇಬೇಕು. 37 ಅವನು ತಾನೇ ಎಲ್ಲರಿಗಿಂತ ಮೇಲೆ ಅಂತ ಹೆಚ್ಚಿಸ್ಕೊಳ್ತಾನೆ. ತನ್ನ ಪೂರ್ವಜರ ದೇವರನ್ನ ಗೌರವಿಸಲ್ಲ. ಯಾವ ಸ್ತ್ರೀಯನ್ನಾಗಲಿ ಆಸೆ ಪಡಲ್ಲ. ಬೇರೆ ಯಾವ ದೇವರಿಗೂ ಬೆಲೆ ಕೊಡಲ್ಲ. 38 ಅವನು ಭದ್ರಕೋಟೆಗಳ ದೇವರಿಗೆ ಬೆಲೆ ಕೊಡ್ತಾನೆ. ಅವನ ಪೂರ್ವಜರಿಗೆ ಗೊತ್ತಿಲ್ಲದ ದೇವರಿಗೆ ಅವನು ಚಿನ್ನ, ಬೆಳ್ಳಿ, ಅಮೂಲ್ಯ ಕಲ್ಲು, ವಸ್ತುಗಳ ಮೂಲಕ ಮಹಿಮೆ ಸಲ್ಲಿಸ್ತಾನೆ. 39 ಅವನು ಬೇರೆ ದೇವರ ಸಹಾಯದಿಂದ ಭದ್ರ ಕೋಟೆಗಳಿರೋ ಆಶ್ರಯ ಸ್ಥಳಗಳ ವಿರುದ್ಧ ಹೆಜ್ಜೆ ತಗೊಳ್ತಾನೆ. ಅವನಿಗೆ ಬೆಂಬಲ ಕೊಡುವವ್ರಿಗೆ* ಅವನು ತುಂಬ ಗೌರವ ಕೊಡ್ತಾನೆ. ತುಂಬ ಜನ್ರ ಮೇಲೆ ಆಳ್ವಿಕೆ ಮಾಡೋಕೆ ಅವ್ರಿಗೆ ಅಧಿಕಾರ ಕೊಡ್ತಾನೆ. ದುಡ್ಡಿಗೆ ಅವನು ಜಮೀನನ್ನ ಹಂಚ್ಕೊಡ್ತಾನೆ.
40 ಅಂತ್ಯದ ಸಮಯದಲ್ಲಿ ದಕ್ಷಿಣದ ರಾಜ ಅವನ ಜೊತೆ ಕಾಳಗ ಮಾಡ್ತಾನೆ.* ಉತ್ತರದ ರಾಜ ಯುದ್ಧರಥಗಳ ಜೊತೆ, ಕುದುರೆ ಸವಾರರ ಜೊತೆ, ತುಂಬ ಹಡಗುಗಳ ಜೊತೆ ಅವನ ವಿರುದ್ಧ ಒಂದು ಬಿರುಗಾಳಿ ತರ ಬರ್ತಾನೆ. ಅವನು ತುಂಬ ದೇಶಗಳಿಗೆ ನುಗ್ಗಿ ಪ್ರವಾಹದ ತರ ಎಲ್ಲವನ್ನ ಕೊಚ್ಕೊಂಡು ಹೋಗ್ತಾನೆ. 41 ಅವನು ಅಂದವಾದ* ದೇಶಕ್ಕೂ+ ನುಗ್ತಾನೆ. ತುಂಬ ದೇಶಗಳು ಸೋತು ಹೋಗುತ್ತೆ. ಆದ್ರೆ ಎದೋಮ್, ಮೋವಾಬ್, ಅಮ್ಮೋನ್ಯರ ಮುಖ್ಯ ಭಾಗಗಳು ಅವನ ಕೈಯಿಂದ ತಪ್ಪಿಸ್ಕೊಳ್ಳುತ್ತೆ. 42 ಅವನು ದೇಶಗಳ ಮೇಲೆ ದಾಳಿ ಮಾಡ್ತಾನೇ ಇರ್ತಾನೆ. ಈಜಿಪ್ಟ್ ದೇಶನೂ ತಪ್ಪಿಸ್ಕೊಳ್ಳಲ್ಲ. 43 ರಹಸ್ಯವಾಗಿ ಇಟ್ಟಿರೋ ಈಜಿಪ್ಟ್ ದೇಶದ ಚಿನ್ನ, ಬೆಳ್ಳಿ, ಎಲ್ಲ ಅಮೂಲ್ಯ ವಸ್ತುಗಳ ಮೇಲೆ ಅವನು ಆಳ್ತಾನೆ. ಲಿಬ್ಯರು, ಇಥಿಯೋಪ್ಯದವರು ಅವನ ಕಾಲ ಹತ್ರ ಇರ್ತಾರೆ.*
44 ಆದ್ರೆ ಪೂರ್ವದಿಂದ, ಉತ್ತರದಿಂದ ಬರೋ ವರದಿಗಳು ಅವನ ನಿದ್ದೆ ಕೆಡಿಸುತ್ತೆ. ಅವನು ಕೋಪದಿಂದ ತುಂಬ ಜನ್ರನ್ನ ನಾಶ ಮಾಡೋಕೆ, ಸರ್ವನಾಶ ಮಾಡೋಕೆ ಹೊರಡ್ತಾನೆ. 45 ಅವನು ಮಹಾ ಸಮುದ್ರ, ಅಂದವಾದ* ದೇಶದ+ ಪವಿತ್ರ ಬೆಟ್ಟದ ಮಧ್ಯ ತನ್ನ ರಾಜ ಡೇರೆಗಳನ್ನ ಹಾಕ್ಕೊಳ್ತಾನೆ. ಕೊನೆಗೂ ಅವನ ಅಂತ್ಯ ಆಗುತ್ತೆ. ಅವನಿಗೆ ಯಾರೂ ಸಹಾಯ ಮಾಡಲ್ಲ.