ಯೆಶಾಯ
2 “ಈಜಿಪ್ಟಿನವರಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಏಳೋ ಹಾಗೆ ನಾನು ಅವ್ರನ್ನ ಪ್ರಚೋದಿಸ್ತೀನಿ,
ಅವರು ಒಬ್ಬರ ವಿರುದ್ಧ ಒಬ್ಬರು ಹೊಡೆದಾಡ್ತಾರೆ,
ಪ್ರತಿಯೊಬ್ಬ ತನ್ನ ಸಹೋದರನ ಜೊತೆ, ನೆರೆಯವನ ಜೊತೆ ಜಗಳ ಆಡ್ತಾನೆ,
ಒಂದು ಪಟ್ಟಣ ಇನ್ನೊಂದು ಪಟ್ಟಣದ ವಿರುದ್ಧ, ಒಂದು ಸಾಮ್ರಾಜ್ಯ ಮತ್ತೊಂದು ಸಾಮ್ರಾಜ್ಯದ ವಿರುದ್ಧ ಹೊಡೆದಾಡುತ್ತೆ.
ಅವರು ಪ್ರಯೋಜನಕ್ಕೆ ಬಾರದ ತಮ್ಮ ದೇವರುಗಳನ್ನ ಆಶ್ರಯಿಸ್ತಾರೆ,
ಅಷ್ಟೇ ಅಲ್ಲ ಮಂತ್ರವಾದಿಗಳ, ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ ಮತ್ತು ಭವಿಷ್ಯ ಹೇಳೋರ ಮೊರೆ ಹೋಗ್ತಾರೆ.+
4 ಕಠಿಣವಾಗಿ ನಡ್ಕೊಳ್ಳೋ ಯಜಮಾನನ ಕೈಗೆ ನಾನು ಈಜಿಪ್ಟಿನ ಜನ್ರನ್ನ ಒಪ್ಪಿಸ್ತೀನಿ,
ಅವ್ರ ಮೇಲೆ ಕ್ರೂರಿ ರಾಜ ಆಳ್ವಿಕೆ ಮಾಡ್ತಾನೆ”+ ಅಂತ ನಿಜವಾದ ಒಡೆಯನೂ ಸೈನ್ಯಗಳ ದೇವರೂ ಆದ ಯೆಹೋವ ಘೋಷಿಸ್ತಿದ್ದಾನೆ.
5 ಸಮುದ್ರದ ನೀರು ಇಂಗಿಹೋಗುತ್ತೆ,
ನೀರು ಬತ್ತಿ ಹೋಗಿ ನದಿ ಒಣಗಿಹೋಗುತ್ತೆ.+
6 ನದಿಗಳಿಂದ ಕೆಟ್ಟ ವಾಸನೆ ಬರುತ್ತೆ,
ಈಜಿಪ್ಟಿನ ನೈಲ್ ನದಿ ಕಾಲುವೆಗಳಲ್ಲಿ ನೀರು ಕಮ್ಮಿ ಆಗಿ ಬತ್ತಿಹೋಗ್ತವೆ.
ಆಪುಹುಲ್ಲು, ಜಂಬುಹುಲ್ಲು ಕೊಳೆತು ಹೋಗ್ತವೆ.+
7 ನೈಲ್ ನದಿ ಉದ್ದಗಲಕ್ಕೂ ಇರೋ ಗಿಡಗಳು, ಅದು ಹರಿಯೋ ಕಡೆ ಇರೋ ಎಲ್ಲ ಗಿಡಗಳು,
ಗಾಳಿ ಅವುಗಳನ್ನ ಅತ್ತಿತ್ತ ಹೊಡ್ಕೊಂಡು ಹೋಗುತ್ತೆ.
8 ಮೀನುಗಾರರು ಗೋಳಾಡ್ತಾರೆ,
ನೈಲ್ ನದಿಯಲ್ಲಿ ಮೀನಿಗಾಗಿ ಗಾಳ ಹಾಕುವವರು ಅಳ್ತಾರೆ,
ನೀರಿನ ಮೇಲೆ ತಮ್ಮ ಬಲೆಗಳನ್ನ ಬೀಸುವವರ ಸಂಖ್ಯೆ ಕಮ್ಮಿಆಗುತ್ತೆ.
9 ಅಗಸೆ ನಾರಿನ ಕೆಲಸ ಮಾಡುವವರು,+
ಬಿಳಿ ಬಟ್ಟೆ ನೇಯುವವರು ಅವಮಾನಕ್ಕೆ ಗುರಿಯಾಗ್ತಾರೆ.
10 ಈಜಿಪ್ಟಿನ ನೇಕಾರರು ನೊಂದುಹೋಗ್ತಾರೆ,
ಅದ್ರ ಕೂಲಿ ಕೆಲಸಗಾರರೆಲ್ಲಾ ಗೋಳಾಡ್ತಾರೆ.
11 ಸೋನ್ ಪಟ್ಟಣದ+ ಅಧಿಕಾರಿಗಳು ಅವಿವೇಕಿಗಳು.
ವಿವೇಕಿಗಳಾದ ಫರೋಹನ ಸಲಹೆಗಾರರು ತಲೆಕೆಟ್ಟ ಸಲಹೆ ಕೊಡ್ತಾರೆ.+
ನೀನು ಫರೋಹನಿಗೆ “ನಾನು ವಿವೇಕಿಗಳ ವಂಶಸ್ಥ,
ಪುರಾತನ ಕಾಲದ ರಾಜರ ಸಂತತಿಯವನು” ಅಂತ ಹೇಗೆ ಹೇಳ್ತೀಯ?
12 ಫರೋಹನೇ, ವಿವೇಕಿಗಳಾದ ನಿನ್ನ ಸಲಹೆಗಾರರು ಎಲ್ಲಿ?+
ಈಜಿಪ್ಟಿಗೆ ಸೈನ್ಯಗಳ ದೇವರಾದ ಯೆಹೋವ ಏನು ಮಾಡೋಕೆ ನಿರ್ಧರಿಸಿದ್ದಾನೆ ಅಂತ ಗೊತ್ತಿದ್ರೆ ಅವರು ನಿನಗೆ ಹೇಳಲಿ.
13 ಸೋನ್ ಪಟ್ಟಣದ ಅಧಿಕಾರಿಗಳು ಅವಿವೇಕಿಗಳ ತರ ನಡ್ಕೊಂಡಿದ್ದಾರೆ,
ನೋಫ್*+ ಪಟ್ಟಣದ ಅಧಿಕಾರಿಗಳು ಮೋಸಹೋಗಿದ್ದಾರೆ,
ಈಜಿಪ್ಟಿನ ಕುಲಾಧಿಪತಿಗಳು ಈಜಿಪ್ಟನ್ನ ದಾರಿತಪ್ಪಿಸಿದ್ದಾರೆ.
14 ಯೆಹೋವ ಈಜಿಪ್ಟನ್ನ ಗಲಿಬಿಲಿ ಮಾಡಿದ್ದಾನೆ,+
ಕುಡಿದ ವ್ಯಕ್ತಿಯೊಬ್ಬ ತನ್ನ ವಾಂತಿಯಲ್ಲೇ ಜಾರಿ ಬೀಳೋ ತರ,
ಅದ್ರ ನಾಯಕರು ಎಲ್ಲ ಕೆಲಸಗಳಲ್ಲಿ ಈಜಿಪ್ಟನ್ನ ದಾರಿತಪ್ಪಿಸಿದ್ರು.
15 ಈಜಿಪ್ಟಿಗೆ ಮಾಡೋಕೆ ಯಾವುದೇ ಕೆಲಸ ಇರಲ್ಲ,
ಅದ್ರ ತಲೆಗಾಗಲಿ, ಬಾಲಕ್ಕಾಗಲಿ, ಸಸಿಗಾಗಲಿ, ಜಂಬುಹುಲ್ಲಿಗಾಗಲಿ* ಏನೂ ಕೆಲಸ ಇರಲ್ಲ.
16 ಆ ದಿನ ಸೈನ್ಯಗಳ ದೇವರಾದ ಯೆಹೋವ ಈಜಿಪ್ಟನ್ನ ಹೆದರಿಸೋಕೆ ಅದ್ರ ವಿರುದ್ಧ ತನ್ನ ಕೈ ಎತ್ತೋದ್ರಿಂದ+ ಅದು ಸ್ತ್ರೀ ತರ ಆಗುತ್ತೆ. ಭಯದಿಂದ ನಡುಗಿಹೋಗುತ್ತೆ, ದಿಗಿಲುಪಡುತ್ತೆ. 17 ಈಜಿಪ್ಟಿನ ಭಯಕ್ಕೆ ಯೆಹೂದ ಕಾರಣವಾಗುತ್ತೆ. ಸೈನ್ಯಗಳ ದೇವರಾದ ಯೆಹೋವ ಈಗಾಗಲೇ ಈಜಿಪ್ಟಿನ ವಿರುದ್ಧ ತೀರ್ಮಾನ ತಗೊಂಡಿದ್ದಾನೆ.+ ಹಾಗಾಗಿ ಯೆಹೂದದ ಹೆಸ್ರನ್ನ ಕೇಳಿದ್ರೆನೇ ಈಜಿಪ್ಟಿನವರು ಹೆದರಿಹೋಗ್ತಾರೆ.
18 ಆ ದಿನ ಈಜಿಪ್ಟ್ ದೇಶದ ಐದು ಪಟ್ಟಣಗಳಲ್ಲಿ ಕಾನಾನಿನ ಭಾಷೆ ಮಾತಾಡಲಾಗುತ್ತೆ.+ ಅವು ಸೈನ್ಯಗಳ ದೇವರಾದ ಯೆಹೋವನಿಗೆ ನಿಷ್ಠೆ ತೋರಿಸ್ತೀವಿ ಅಂತ ಪ್ರಮಾಣಮಾಡ್ತವೆ. ಅದ್ರಲ್ಲೊಂದನ್ನ “ನಾಶನದ ಪಟ್ಟಣ” ಅಂತ ಕರೆಯಲಾಗುತ್ತೆ.
19 ಆ ದಿನ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ ಇರುತ್ತೆ, ಈಜಿಪ್ಟಿನ ಗಡಿಯಲ್ಲಿ ಯೆಹೋವನನ್ನ ಗೌರವಿಸೋಕೆ ಒಂದು ಸ್ತಂಭ ಇರುತ್ತೆ. 20 ಈಜಿಪ್ಟಿನಲ್ಲಿ ಸೈನ್ಯಗಳ ದೇವರಾದ ಯೆಹೋವನನ್ನ ನೆನಪಿಸ್ಕೊಳ್ಳೋಕೆ ಇವು ಜನ್ರಿಗೆ ಗುರುತಾಗಿರುತ್ತೆ. ದಬ್ಬಾಳಿಕೆ ಮಾಡುವವರ ಕಿರುಕುಳ ಸಹಿಸುವಾಗ ಅವರು ಯೆಹೋವನಿಗೆ ಪ್ರಾರ್ಥಿಸಿದ್ರೆ ಆತನು ಅವ್ರಿಗಾಗಿ ಒಬ್ಬ ರಕ್ಷಕನನ್ನ ಕಳಿಸ್ತಾನೆ. ಅವನೊಬ್ಬ ಮಹಾನ್ ವ್ಯಕ್ತಿ, ಅವ್ರನ್ನ ರಕ್ಷಿಸ್ತಾನೆ. 21 ಆ ದಿನ ಸ್ವತಃ ಯೆಹೋವನೇ ತನ್ನ ಬಗ್ಗೆ ಈಜಿಪ್ಟಿನವರಿಗೆ ಹೇಳ್ತಾನೆ ಮತ್ತು ಅವರು ಯೆಹೋವನನ್ನ ತಿಳ್ಕೊಳ್ತಾರೆ. ಅವರು ಆತನಿಗಾಗಿ ಬಲಿಗಳನ್ನ ಅರ್ಪಿಸ್ತಾರೆ, ಉಡುಗೊರೆಗಳನ್ನ ಕೊಡ್ತಾರೆ. ಯೆಹೋವನಿಗೆ ಹರಕೆ ಹೊತ್ತು ಅದನ್ನ ತೀರಿಸ್ತಾರೆ. 22 ಯೆಹೋವ ಈಜಿಪ್ಟನ್ನ ಹೊಡಿತಾನೆ,+ ಆತನು ಅದನ್ನ ಹೊಡೆದು ವಾಸಿಮಾಡ್ತಾನೆ. ಆಗ ಅವರು ಯೆಹೋವನ ಹತ್ರ ವಾಪಸ್ ಬರ್ತಾರೆ. ಆತನು ಅವ್ರ ವಿನಂತಿಗಳನ್ನ ಕೇಳಿ ಅವ್ರನ್ನ ವಾಸಿಮಾಡ್ತಾನೆ.
23 ಆ ದಿನ ಈಜಿಪ್ಟಿಂದ ಅಶ್ಶೂರಿಗೆ ಒಂದು ಹೆದ್ದಾರಿ ಇರುತ್ತೆ.+ ಆಗ ಅಶ್ಶೂರ್ ಈಜಿಪ್ಟಿಗೆ ಬರುತ್ತೆ. ಈಜಿಪ್ಟ್ ಅಶ್ಶೂರಕ್ಕೆ ಹೋಗುತ್ತೆ. ಈಜಿಪ್ಟ್ ಅಶ್ಶೂರಿನ ಜೊತೆ ಸೇರಿ ದೇವರನ್ನ ಆರಾಧಿಸುತ್ತೆ. 24 ಆ ದಿನ ಇಸ್ರಾಯೇಲ್ ಸಹ ಈಜಿಪ್ಟ್ ಮತ್ತು ಅಶ್ಶೂರಿನ ಜೊತೆ ಸೇರಿಕೊಳ್ಳುತ್ತೆ.+ ಅದು ಇಡೀ ಭೂಮಿಗೆ ಒಂದು ಆಶೀರ್ವಾದವಾಗುತ್ತೆ. 25 ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ “ನನ್ನ ಜನ್ರಾಗಿರೋ ಈಜಿಪ್ಟಿನವರೇ ನೀವು ಆಶೀರ್ವಾದ ಪಡೀರಿ. ನನ್ನ ಕೈಕೆಲಸವಾಗಿರೋ ಅಶ್ಶೂರೇ ನನ್ನ ಸೊತ್ತಾಗಿರೋ ಇಸ್ರಾಯೇಲೇ ನೀವು ಆಶೀರ್ವಾದ ಪಡೀರಿ”+ ಅಂತ ಈಗಾಗಲೇ ಆಶೀರ್ವದಿಸಿದ್ದಾನೆ.