ಧರ್ಮೋಪದೇಶಕಾಂಡ
8 ಇವತ್ತು ನಾನು ಕೊಡ್ತಿರೋ ಎಲ್ಲ ಆಜ್ಞೆಗಳನ್ನ ನೀವು ತಪ್ಪದೆ ಪಾಲಿಸಬೇಕು. ಆಗ ನೀವು ತುಂಬ ವರ್ಷ ಬದುಕ್ತೀರ,+ ನಿಮ್ಮ ಜನಸಂಖ್ಯೆ ಜಾಸ್ತಿ ಆಗ್ತಾ ಹೋಗುತ್ತೆ. ಯೆಹೋವ ನಿಮ್ಮ ಪೂರ್ವಜರಿಗೆ ಆಣೆ ಮಾಡಿದ ದೇಶಕ್ಕೆ ನೀವು ಹೋಗಿ ಅದನ್ನ ವಶ ಮಾಡ್ಕೊಳ್ತೀರ.+ 2 ನಿಮ್ಮ ದೇವರಾದ ಯೆಹೋವ ಈ 40 ವರ್ಷ ನಿಮ್ಮನ್ನ ಕಾಡಲ್ಲಿ+ ತುಂಬ ದೂರ ನಡೆಸ್ಕೊಂಡು ಬಂದಿದ್ದನ್ನ ಯಾವತ್ತೂ ಮರಿಬೇಡಿ. ನಿಮಗೆ ದೀನತೆ ಕಲಿಸೋಕೆ, ನಿಮ್ಮ ಹೃದಯದಲ್ಲಿ ಏನಿದೆ,+ ಆತನ ಆಜ್ಞೆಗಳನ್ನ ಪಾಲಿಸ್ತೀರಾ ಇಲ್ವಾ ಅಂತ ಪರೀಕ್ಷೆ ಮಾಡಿ ತಿಳ್ಕೊಳ್ಳೋಕೆ ಆತನು ಹಾಗೆ ಮಾಡಿದನು.+ 3 ಮನುಷ್ಯ ಬರೀ ಆಹಾರ ತಿನ್ನೋದ್ರಿಂದ ಅಲ್ಲ ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕ್ತಾನೆ+ ಅನ್ನೋದನ್ನ ನೀವು ಅರ್ಥ ಮಾಡ್ಕೋಬೇಕಂತ ಆತನು ನಿಮ್ಮನ್ನ ಹಸಿವೆಯಿಂದ ಇರೋಕೆ ಬಿಟ್ಟನು.+ ನಿಮಗೆ ನಿಮ್ಮ ತಾತ-ಮುತ್ತಾತರಿಗೆ ಗೊತ್ತೇ ಇಲ್ಲದ ಮನ್ನ+ ಕೊಟ್ಟು ಸಾಕಿದನು. ನಿಮಗೆ ದೀನತೆ ಕಲಿಸಿದನು. 4 ಈ 40 ವರ್ಷಗಳಲ್ಲಿ ನೀವು ಹಾಕಿದ್ದ ಬಟ್ಟೆ ಹಳೇದಾಗಿ ಹರಿದುಹೋಗಲಿಲ್ಲ. ನಿಮ್ಮ ಕಾಲು ಊದ್ಕೊಳ್ಳಲಿಲ್ಲ.*+ 5 ಅಪ್ಪ ಮಗನನ್ನ ತಿದ್ದೋ ತರ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ತಿದ್ತಾ ಬಂದ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.+
6 ನಿಮ್ಮ ದೇವರಾದ ಯೆಹೋವ ತೋರಿಸಿದ ದಾರೀಲಿ ನಡೀರಿ, ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನ ಪಾಲಿಸಿ. 7 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಒಳ್ಳೇ ದೇಶಕ್ಕೆ ಕರ್ಕೊಂಡು ಹೋಗ್ತಿದ್ದಾನೆ.+ ಅಲ್ಲಿನ ಕಣಿವೆ ಬಯಲಲ್ಲಿ, ಬೆಟ್ಟ ಪ್ರದೇಶದಲ್ಲಿ ತೊರೆ ಒರತೆ ಬುಗ್ಗೆ* ಉಕ್ಕಿ ಹರಿಯುತ್ತೆ. 8 ಗೋದಿ, ಬಾರ್ಲಿ,* ದ್ರಾಕ್ಷಿಬಳ್ಳಿ, ಅಂಜೂರ ಮರ, ದಾಳಿಂಬೆ,+ ಆಲಿವ್ ಎಣ್ಣೆ, ಜೇನು+ ಅಲ್ಲಿ ಬೇಕಾದಷ್ಟು ಇದೆ. 9 ಅಲ್ಲಿ ಯಾವತ್ತೂ ಆಹಾರಕ್ಕೆ ಬರ ಬರಲ್ಲ. ಯಾವುದಕ್ಕೂ ಕೊರತೆ ಇರಲ್ಲ. ಅಲ್ಲಿರೋ ಕಲ್ಲುಗಳಲ್ಲಿ ಕಬ್ಬಿಣ ತುಂಬಿದೆ. ಅಲ್ಲಿರೋ ಬೆಟ್ಟಗಳನ್ನ ಅಗೆದ್ರೆ ತಾಮ್ರ ಸಿಗುತ್ತೆ.
10 ಅಲ್ಲಿ ಹೊಟ್ಟೆ ತುಂಬಾ ತಿಂದು ಖುಷಿಯಾಗಿ ಇರುವಾಗ ಆ ಒಳ್ಳೇ ದೇಶನ ಕೊಟ್ಟಿದ್ದಕ್ಕಾಗಿ ನಿಮ್ಮ ದೇವರಾದ ಯೆಹೋವನನ್ನ ನೀವು ಹೊಗಳಬೇಕು.+ 11 ನಾನು ಇವತ್ತು ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ತೀರ್ಪುಗಳನ್ನ ನಿಯಮಗಳನ್ನ ನೀವು ಪಾಲಿಸಬೇಕು, ಆತನನ್ನ ಮರಿಬಾರದು. 12 ನೀವು ಅಲ್ಲಿ ಹೊಟ್ಟೆ ತುಂಬ ತಿಂದು ಖುಷಿಯಿಂದ ಇರುವಾಗ, ಒಳ್ಳೊಳ್ಳೇ ಮನೆಗಳನ್ನ ಕಟ್ಕೊಂಡು ಇರುವಾಗ,+ 13 ನಿಮ್ಮ ಹತ್ರ ಹಸು-ಹೋರಿ, ಆಡು-ಕುರಿ, ಚಿನ್ನಬೆಳ್ಳಿ ಹೆಚ್ಚಾದಾಗ, ಯಾವುದಕ್ಕೂ ಕೊರತೆನೇ ಇಲ್ಲದಾಗ 14 ನಿಮ್ಮ ಹೃದಯ ಹೆಮ್ಮೆಯಿಂದ ಉಬ್ಬಿಹೋಗಬಾರದು.+ ಈಜಿಪ್ಟ್ ದೇಶದ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಮರಿಬಾರದು.+ 15 ಆತನು ನಿಮ್ಮನ್ನ ತುಂಬ ದೊಡ್ಡದಾದ, ಭಯಾನಕ ಕಾಡಲ್ಲಿ+ ನಡಿಸ್ಕೊಂಡು ಬಂದಿದ್ದನ್ನ ಮರಿಬೇಡಿ. ಅಲ್ಲಿ ವಿಷ ಹಾವುಗಳು, ಚೇಳುಗಳು ಇತ್ತು, ನೆಲ ನೀರಿಲ್ಲದೆ ಬತ್ತಿಹೋಗಿತ್ತು. ಅಲ್ಲಿ ದೇವರು ಗಟ್ಟಿಯಾದ ಬಂಡೆಯಿಂದ ನೀರು ಬರೋ ತರ ಮಾಡಿದನು.+ 16 ನಿಮ್ಮ ತಾತ-ಮುತ್ತಾತರಿಗೆ ಗೊತ್ತಿಲ್ಲದ ಮನ್ನವನ್ನ ಕಾಡಲ್ಲಿ ಕೊಟ್ಟು ನಿಮ್ಮನ್ನ ಸಾಕಿದನು.+ ನಿಮಗೆ ದೀನತೆ ಕಲಿಸೋಕೆ,+ ನಿಮ್ಮನ್ನ ಪರೀಕ್ಷಿಸೋಕೆ ಆ ಆಹಾರ ಕೊಟ್ಟನು. ಮುಂದೆ ನಿಮಗೆ ಪ್ರಯೋಜನ ಆಗಬೇಕು ಅಂತ ಹಾಗೆ ಮಾಡಿದನು.+ 17 ‘ನಮ್ಮ ಶಕ್ತಿ ಸಾಮರ್ಥ್ಯದಿಂದಾನೇ ಇಷ್ಟೊಂದು ಹಣ-ಆಸ್ತಿ ಗಳಿಸಿದ್ದೀವಿ’ ಅಂತ ನಿಮ್ಮ ಮನಸ್ಸು ಹೇಳಿದ್ರೆ+ 18 ಹಣ-ಆಸ್ತಿ ಗಳಿಸೋಕೆ ಶಕ್ತಿ ಕೊಡೋದು ನಿಮ್ಮ ದೇವರಾದ ಯೆಹೋವನೇ ಅಂತ ನೆನಪು ಮಾಡ್ಕೊಳ್ಳಿ.+ ಆತನು ನಿಮ್ಮ ಪೂರ್ವಜರಿಗೆ ಆಣೆ ಮಾಡಿ ಅವ್ರ ಜೊತೆ ಮಾಡ್ಕೊಂಡ ಒಪ್ಪಂದದ ಪ್ರಕಾರ ನಡಿಯೋಕೆ ನಿಮಗೆ ಹೀಗೆ ಸಹಾಯ ಮಾಡ್ತಾ ಇದ್ದಾನೆ. ಇವತ್ತಿನ ತನಕ ಆತನು ಆ ಒಪ್ಪಂದದ ಪ್ರಕಾರ ನಡೀತಿದ್ದಾನೆ.+
19 ಯಾವತ್ತಾದ್ರೂ ನಿಮ್ಮ ದೇವರಾದ ಯೆಹೋವನನ್ನ ನೀವು ಮರ್ತು ಬೇರೆ ದೇವರುಗಳ ಹಿಂದೆ ಹೋದ್ರೆ, ಅವುಗಳ ಸೇವೆ ಮಾಡಿದ್ರೆ, ಅಡ್ಡಬಿದ್ರೆ ಖಂಡಿತ ನಾಶ ಆಗ್ತೀರ ಅಂತ ಇವತ್ತೇ ಎಚ್ಚರಿಕೆ ಕೊಡ್ತಾ ಇದ್ದೀನಿ.+ 20 ನಿಮ್ಮ ದೇವರಾದ ಯೆಹೋವನ ಮಾತನ್ನ ಕೇಳದೆ ಹೋದ್ರೆ ಯೆಹೋವ ಈಗ ನಿಮ್ಮ ಮುಂದೆ ನಾಶ ಮಾಡ್ತಿರೋ ಜನಾಂಗಗಳ ಹಾಗೇ ನೀವೂ ನಾಶ ಆಗ್ತೀರ.+