ಮಾರ್ಕ
7 ಆಮೇಲೆ ಫರಿಸಾಯರು, ಕೆಲವು ಪಂಡಿತರು ಯೆರೂಸಲೇಮಿಂದ ಯೇಸು ಹತ್ರ ಬಂದ್ರು.+ 2 ಯೇಸುವಿನ ಶಿಷ್ಯರಲ್ಲಿ ಕೆಲವರು ಕೈತೊಳಿಯದೆ* ಊಟ ಮಾಡೋದನ್ನ ನೋಡಿದ್ರು. ಅದು ಅವ್ರ ಆಚಾರದ ಪ್ರಕಾರ ಅಶುದ್ಧವಾಗಿತ್ತು. 3 (ಯಾಕಂದ್ರೆ ಫರಿಸಾಯರು, ಎಲ್ಲ ಯೆಹೂದ್ಯರು ತಮ್ಮ ಪೂರ್ವಿಕರ ಸಂಪ್ರದಾಯದ ಪ್ರಕಾರ ಮೊಣಕೈ ತನಕ ಕೈತೊಳ್ಕೊಂಡೇ ಊಟ ಮಾಡ್ತಿದ್ರು. 4 ಅವರು ಸಂತೆಯಿಂದ ಬಂದ ಮೇಲೆ ತಮ್ಮನ್ನ ಶುದ್ಧಮಾಡದೆ ಊಟ ಮಾಡ್ತಾನೇ ಇರ್ಲಿಲ್ಲ. ಅಷ್ಟೇ ಅಲ್ಲ ಬಟ್ಟಲು, ಹೂಜಿ ಮತ್ತು ತಾಮ್ರದ ಪಾತ್ರೆಯನ್ನ ನೀರಲ್ಲಿ ಮುಳುಗಿಸಿ ತೆಗೆಯುವಂಥ ಹಳೇ ಸಂಪ್ರದಾಯಗಳನ್ನ ಅವರು ಬಿಟ್ಟಿರಲಿಲ್ಲ.)+ 5 ಹಾಗಾಗಿ ಈ ಫರಿಸಾಯರು, ಪಂಡಿತರು ಆತನಿಗೆ “ನಿನ್ನ ಶಿಷ್ಯರು ನಮ್ಮ ಹಿರಿಯರು ಮಾಡಿದ ಸಂಪ್ರದಾಯನ ಯಾಕೆ ಪಾಲಿಸಲ್ಲ? ಕೊಳಕು ಕೈಯಲ್ಲೇ ಊಟ ಮಾಡ್ತಾರಲ್ಲ”+ ಅಂತ ಕೇಳಿದ್ರು. 6 ಅದಕ್ಕೆ ಯೇಸು ಹೀಗೆ ಹೇಳಿದ “ಕಪಟಿಗಳೇ, ನಿಮ್ಮ ಬಗ್ಗೆ ಯೆಶಾಯ ಹೇಳಿದ್ದು ನಿಜ ಆಯ್ತು. ‘ಈ ಜನ್ರು ನನ್ನನ್ನ ತುಟಿಗಳಿಂದ ಗೌರವಿಸ್ತಾರೆ, ಆದ್ರೆ ಅದನ್ನ ಮನಸಾರೆ ಮಾಡಲ್ಲ.+ 7 ಅವರು ಮನುಷ್ಯರ ಆಜ್ಞೆಗಳನ್ನ ದೇವರ ಮಾತುಗಳ ತರ ಕಲಿಸ್ತಾರೆ. ಹಾಗಾಗಿ ಅವರು ನನ್ನನ್ನ ಆರಾಧಿಸೋದು ವ್ಯರ್ಥ’ ಅಂತ ಯೆಶಾಯ ಹೇಳಿದ್ದಾನೆ.+ 8 ನೀವು ದೇವರ ಆಜ್ಞೆಗಳನ್ನ ಗಾಳಿಗೆ ತೂರಿ ಮನುಷ್ಯರ ಸಂಪ್ರದಾಯಗಳನ್ನ ಗಟ್ಟಿಯಾಗಿ ಹಿಡ್ಕೊಳ್ತೀರ.”+
9 ಆಮೇಲೆ ಅವ್ರಿಗೆ ಹೀಗಂದನು “ನೀವು ನಿಮ್ಮ ಸಂಪ್ರದಾಯ ಕಾಪಾಡ್ಕೊಳ್ಳೋಕೆ ದೇವರ ಆಜ್ಞೆನ ಪಕ್ಕಕ್ಕೆ ಇಡೋದು ಹೇಗೆ ಅಂತ ತುಂಬ ತಲೆ ಓಡಿಸ್ತೀರ.+ 10 ಉದಾಹರಣೆಗೆ ‘ಅಪ್ಪಅಮ್ಮಗೆ ಗೌರವ ಕೊಡಬೇಕು’+ ಮತ್ತು ‘ಅಪ್ಪಅಮ್ಮನನ್ನ ಬೈಯುವವನನ್ನ* ಸಾಯಿಸಬೇಕು’+ ಅಂತ ಮೋಶೆ ಹೇಳಿದ್ದಾನೆ. 11 ಆದ್ರೆ ಒಬ್ಬ ವ್ಯಕ್ತಿ ಅವನ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವರಿಗೆ ಕಾಣಿಕೆಯಾಗಿ* ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’ ಅಂತ ಹೇಳಿದ್ರೆ ಅದನ್ನ ಸರಿ ಅಂತೀರ. 12 ಆಮೇಲೆ ಅವನು ಅಪ್ಪಅಮ್ಮಗೆ ಯಾವ ಸಹಾಯ ಮಾಡೋಕೂ ನೀವು ಬಿಡಲ್ಲ.+ 13 ಹೀಗೆ ನಿಮ್ಮ ಸಂಪ್ರದಾಯಗಳನ್ನ ಉಳಿಸ್ಕೊಳ್ಳೋಕೆ ದೇವರ ಮಾತನ್ನ ತಳ್ಳಿಹಾಕ್ತೀರ.+ ಇಂಥದ್ದೇ ತುಂಬ ವಿಷ್ಯಗಳನ್ನ ಮಾಡ್ತೀರ.”+ 14 ಆಮೇಲೆ ಯೇಸು ಜನ್ರನ್ನ ತನ್ನ ಹತ್ರ ಮತ್ತೆ ಕರೆದು “ನೀವೆಲ್ಲ ನಾನು ಹೇಳೋದನ್ನ ಕೇಳಿಸ್ಕೊಳ್ಳಿ, ಅರ್ಥಮಾಡ್ಕೊಳ್ಳಿ.+ 15 ಬಾಯೊಳಗೆ ಹೋಗೋದು ಮನುಷ್ಯನನ್ನ ಅಶುದ್ಧ ಮಾಡಲ್ಲ. ಬಾಯಿಂದ ಬರೋದೇ ಅಶುದ್ಧ ಮಾಡುತ್ತೆ”+ ಅಂದನು. 16 *——
17 ಆಮೇಲೆ ಆತನು ಜನ್ರನ್ನ ಬಿಟ್ಟು ಒಂದು ಮನೆಗೆ ಹೋದನು. ಆಗ ಶಿಷ್ಯರು ಆ ಉದಾಹರಣೆಯ ಅರ್ಥ ಏನಂತ ಕೇಳಿದ್ರು.+ 18 ಅದಕ್ಕೆ “ನಿಮಗೂ ಅವ್ರ ತರ ಅರ್ಥ ಆಗಿಲ್ವಾ? ಬಾಯೊಳಗೆ ಹೋಗೋದು ಯಾವುದೂ ಮನುಷ್ಯನನ್ನ ಅಶುದ್ಧ ಮಾಡಲ್ಲ ಅಂತ ನಿಮಗೆ ಗೊತ್ತಲ್ವಾ? 19 ಯಾಕಂದ್ರೆ ಅದು ಅವನ ಹೃದಯಕ್ಕೆ ಹೋಗಲ್ಲ, ಹೊಟ್ಟೆಗೆ ಹೋಗಿ ಹೊರಗೆ ಬರುತ್ತೆ” ಅಂದನು. ಹೀಗೆ ಎಲ್ಲ ಆಹಾರ ಪದಾರ್ಥ ಶುದ್ಧ ಅಂತ ಸೂಚಿಸಿದನು. 20 ಆಮೇಲೆ ಹೀಗಂದನು “ಆದ್ರೆ ಒಬ್ಬನ ಒಳಗಿಂದ ಹೊರಗೆ ಬರೋದು ಅವನನ್ನ ಅಶುದ್ಧ ಮಾಡುತ್ತೆ.+ 21 ಯಾಕಂದ್ರೆ ಕೆಟ್ಟ ಆಲೋಚನೆಗಳು ಒಳಗಿಂದ ಅಂದ್ರೆ ಹೃದಯದಿಂದ ಬರುತ್ತೆ.+ ಆ ಆಲೋಚನೆಗಳು: ಲೈಂಗಿಕ ಅನೈತಿಕತೆ,* ಕಳ್ಳತನ, ಕೊಲೆ, 22 ಅಕ್ರಮ ಸಂಬಂಧ, ಅತಿಯಾಸೆ, ಕೆಟ್ಟ ಕೆಲಸ, ಮೋಸ, ನಾಚಿಕೆಗೆಟ್ಟ ನಡತೆ,* ಹೊಟ್ಟೆಕಿಚ್ಚು, ದೇವದೂಷಣೆ, ಅಹಂಕಾರ ಮತ್ತು ಮೂರ್ಖತನಕ್ಕೆ ನಡೆಸುತ್ತೆ. 23 ಈ ಎಲ್ಲ ಕೆಟ್ಟ ವಿಷ್ಯಗಳೇ ಮನುಷ್ಯನ ಒಳಗಿಂದ ಹೊರಗೆ ಬಂದು ಅವನನ್ನ ಅಶುದ್ಧ ಮಾಡುತ್ತೆ.”
24 ಆಮೇಲೆ ಯೇಸು ಅಲ್ಲಿಂದ ತೂರ್ ಮತ್ತು ಸೀದೋನ್ ಪ್ರದೇಶಕ್ಕೆ ಹೋದನು.+ ಒಂದು ಮನೆ ಒಳಗೆ ಹೋಗಿ ಅಲ್ಲಿ ಇರೋದು ಯಾರಿಗೂ ಗೊತ್ತಾಗಬಾರದು ಅಂತ ನೆನಸಿದನು. ಆದ್ರೆ ಜನ್ರು ಹೇಗೋ ಆತನನ್ನ ನೋಡಿಬಿಟ್ರು. 25 ತಕ್ಷಣ ಒಬ್ಬ ಸ್ತ್ರೀ ಆತನ ಹತ್ರ ಬಂದು ಕಾಲಿಗೆ ಬಿದ್ದಳು. ಯಾಕಂದ್ರೆ ಅವಳ ಪುಟ್ಟ ಮಗಳಿಗೆ ಕೆಟ್ಟ ದೇವದೂತನೊಬ್ಬ ಕಾಟ ಕೊಡ್ತಿದ್ದ.+ 26 ಗ್ರೀಕ್ ಸ್ತ್ರೀ ಆಗಿದ್ದ ಅವಳು ಸಿರಿಯ ದೇಶದ ಫೊಯಿನಿಕೆ ಪ್ರದೇಶಕ್ಕೆ ಸೇರಿದವಳು. ಅವಳು ತನ್ನ ಮಗಳಿಂದ ಆ ಕೆಟ್ಟ ದೇವದೂತನನ್ನ ಬಿಡಿಸು ಅಂತ ಯೇಸು ಹತ್ರ ಬೇಡ್ತಾ ಇದ್ದಳು. 27 ಅದಕ್ಕೆ ಯೇಸು “ಮೊದಲು ಮಕ್ಕಳ ಹೊಟ್ಟೆ ತುಂಬಲಿ. ಮಕ್ಕಳಿಗೆ ಕೊಡೋ ರೊಟ್ಟಿನ ನಾಯಿಮರಿಗಳಿಗೆ ಹಾಕೋದು ಸರಿಯಲ್ಲ”+ ಅಂದನು. 28 ಆಗ ಅವಳು “ಸ್ವಾಮಿ, ಅದು ನಿಜ. ಆದ್ರೆ ಮಕ್ಕಳ ಕೈಯಿಂದ ಬೀಳೋ ರೊಟ್ಟಿ ತುಂಡನ್ನ ನಾಯಿಮರಿ ತಿನ್ನುತ್ತಲ್ವಾ” ಅಂದಳು. 29 ಅದಕ್ಕೆ ಯೇಸು “ನೀನು ಈ ಮಾತು ಹೇಳಿದ್ರಿಂದ ಆ ಕೆಟ್ಟ ದೇವದೂತ ನಿನ್ನ ಮಗಳನ್ನ ಬಿಟ್ಟು ಹೋಗಿದ್ದಾನೆ. ಮನೆಗೆ ಹೋಗು”+ ಅಂದನು. 30 ಅವಳು ಮನೆಗೆ ಹೋದಳು. ಅವಳ ಮಗಳು ಹಾಸಿಗೆ ಮೇಲೆ ಮಲಗಿರೋದನ್ನ ನೋಡಿದಳು. ಕೆಟ್ಟ ದೇವದೂತ ಅವಳನ್ನ ಬಿಟ್ಟುಹೋಗಿದ್ದ.+
31 ಆಮೇಲೆ ಆತನು ತೂರ್ ಪ್ರದೇಶದಿಂದ ವಾಪಸ್ ಬರುವಾಗ ಸೀದೋನ್ ಮಾರ್ಗವಾಗಿ ದೆಕಪೊಲಿ* ಪ್ರದೇಶವನ್ನ ಹಾದು ಗಲಿಲಾಯ ಸಮುದ್ರದ ಹತ್ರ ಬಂದನು.+ 32 ದೆಕಪೊಲಿಯಲ್ಲಿ ಜನ ಒಬ್ಬ ವ್ಯಕ್ತಿಯನ್ನ ಕರ್ಕೊಂಡು ಬಂದ್ರು. ಅವನಿಗೆ ಕಿವಿ ಕೇಳ್ತಾ ಇರಲಿಲ್ಲ, ತೊದಲ್ತಾ ಮಾತಾಡ್ತಿದ್ದ.+ ಅವನನ್ನ ವಾಸಿಮಾಡು* ಅಂತ ಜನ ಆತನನ್ನ ಬೇಡ್ಕೊಂಡ್ರು. 33 ಯೇಸು ಆ ವ್ಯಕ್ತಿಯನ್ನ ಗುಂಪಿಂದ ಸ್ವಲ್ಪ ದೂರ ಕರ್ಕೊಂಡು ಹೋದನು. ಅವನ ಕಿವಿಗಳಲ್ಲಿ ತನ್ನ ಬೆರಳಿಟ್ಟು ಆಮೇಲೆ ಉಗುಳಿ ಅವನ ನಾಲಿಗೆ ಮುಟ್ಟಿದನು.+ 34 ಆಕಾಶದ ಕಡೆ ನೋಡಿ ನಿಟ್ಟುಸಿರುಬಿಟ್ಟು ಅವನಿಗೆ “ಎಫ್ಫಥಾ” ಅಂದನು. ಅಂದ್ರೆ “ತೆರೆಯಲಿ” ಅಂತ ಅರ್ಥ. 35 ಆಗ ಅವನಿಗೆ ಕಿವಿ ಕೇಳಿಸೋಕೆ ಶುರು ಆಯ್ತು.+ ತೊದಲದೆ ಚೆನ್ನಾಗಿ ಮಾತಾಡೋಕೆ ಶುರುಮಾಡಿದ. 36 ಈ ವಿಷ್ಯ ಯಾರಿಗೂ ಹೇಳಬಾರದು+ ಅಂತ ಯೇಸು ಜನ್ರಿಗೆ ಆಜ್ಞೆ ಕೊಟ್ಟನು. ಎಷ್ಟು ಸಲ ಹೇಳಿದ್ರೂ ಅವರು ಕೇಳಲಿಲ್ಲ. ಬೇರೆಯವ್ರಿಗೆ ಹೇಳ್ತಾ ಹೋದ್ರು.+ 37 ಯಾಕಂದ್ರೆ ಅವ್ರಿಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.+ ಹಾಗಾಗಿ ಅವರು “ಯೇಸು ಎಷ್ಟೋ ಅದ್ಭುತಗಳನ್ನ ಮಾಡಿ ಜನ್ರಿಗೆ ತುಂಬ ಸಹಾಯ ಮಾಡ್ತಾ ಇದ್ದಾನೆ. ಕಿವುಡರನ್ನ, ಮೂಕರನ್ನ ಸಹ ವಾಸಿ ಮಾಡ್ತಾ ಇದ್ದಾನೆ”+ ಅಂತ ಹೇಳ್ತಾ ಇದ್ರು.