ಧರ್ಮೋಪದೇಶಕಾಂಡ
9 ಇಸ್ರಾಯೇಲ್ಯರೇ, ಇವತ್ತು ನೀವು ಯೋರ್ದನನ್ನ+ ದಾಟ್ತೀರ. ನಿಮಗಿಂತ ಬಲಿಷ್ಠವಾದ, ದೊಡ್ಡದಾದ ಜನಾಂಗಗಳ ದೇಶವನ್ನ,+ ಅಲ್ಲಿನ ಆಕಾಶ ಮುಟ್ಟೋಷ್ಟು ಎತ್ರವಾದ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳನ್ನ ವಶ ಮಾಡ್ಕೊತೀರ.+ 2 ನಿಮಗಿಂತ ಎತ್ರ ಇರೋ, ಹೆಚ್ಚು ಜನಸಂಖ್ಯೆಯಲ್ಲಿರೋ ಅನಾಕ್ಯರನ್ನ+ ಸೋಲಿಸ್ತೀರ. ಅವ್ರ ಬಗ್ಗೆ ನಿಮಗೆ ಗೊತ್ತೇ ಇದೆ. ‘ಅನಾಕ್ಯರನ್ನ ಸೋಲಿಸೋಕೆ ಯಾರಿಂದ್ಲೂ ಆಗಲ್ಲ’ ಅಂತ ಜನ ಮಾತಾಡೋದನ್ನ ಕೇಳಿಸ್ಕೊಂಡಿದ್ದೀರ. 3 ಹಾಗಾಗಿ ಇವತ್ತು ಒಂದು ವಿಷ್ಯನ ಚೆನ್ನಾಗಿ ನೆನಪಿಟ್ಕೊಳ್ಳಿ. ಏನಂದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮ ಮುಂದೆ ಹೋಗಿ ಯೋರ್ದನನ್ನ ದಾಟ್ತಾನೆ.+ ಸುಡೋ ಬೆಂಕಿ ತರ ಇರೋ+ ಅವ್ರನ್ನ ನಾಶ ಮಾಡ್ತಾನೆ. ನಿಮ್ಮ ಕಣ್ಮುಂದೆನೇ ಅವ್ರನ್ನ ಸೋಲಿಸ್ತಾನೆ. ಯೆಹೋವ ನಿಮಗೆ ಮಾತು ಕೊಟ್ಟ ಹಾಗೆ ನೀವು ಅವ್ರನ್ನ ಆ ದೇಶದಿಂದ ಓಡಿಸಿ ನಾಶ ಮಾಡಿಬಿಡ್ತೀರ.+
4 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಎದುರಿಂದ ಓಡಿಸಿಬಿಟ್ಟ ಮೇಲೆ ನೀವು ಮನಸ್ಸಲ್ಲಿ ‘ನಾವು ನೀತಿವಂತರಾಗಿ ಇರೋದ್ರಿಂದಾನೇ ಯೆಹೋವ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದು ಈ ದೇಶನ ಆಸ್ತಿಯಾಗಿ ಕೊಟ್ಟಿದ್ದಾನೆ’ + ಅಂತ ನೆನಸಬೇಡಿ. ಯೆಹೋವ ಈ ಜನ್ರನ್ನ ನಿಮ್ಮ ಎದುರಿಂದ ಓಡಿಸ್ತಿರೋದು ಅವರು ಕೆಟ್ಟವರಾಗಿ ಇರೋದ್ರಿಂದ.+ 5 ಈ ದೇಶ ನಿಮಗೆ ಆಸ್ತಿಯಾಗಿ ಸಿಗ್ತಿರೋದು ನೀವು ತುಂಬ ನೀತಿವಂತರು, ಪ್ರಾಮಾಣಿಕ ಜನ್ರು ಅಂತಲ್ಲ. ಆ ಜನ್ರು ಕೆಟ್ಟವರು ಆಗಿರೋದ್ರಿಂದ ನಿಮ್ಮ ದೇವರಾದ ಯೆಹೋವ ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸ್ತಿದ್ದಾನೆ.+ ಅಷ್ಟೇ ಅಲ್ಲ ನಿಮ್ಮ ಪೂರ್ವಜರಾದ ಅಬ್ರಹಾಮ,+ ಇಸಾಕ,+ ಯಾಕೋಬರಿಗೆ+ ಕೊಟ್ಟ ಮಾತನ್ನ ಯೆಹೋವ ನೆರವೇರಿಸಬೇಕು ಅಂತಿದ್ದಾನೆ. 6 ಹಾಗಾಗಿ ತಿಳ್ಕೊಳ್ಳಿ, ಈ ಒಳ್ಳೇ ದೇಶನ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡ್ತಿರೋದು ನೀವು ನೀತಿವಂತರು ಅಂತಲ್ಲ. ಯಾಕಂದ್ರೆ ನೀವು ಹಠಮಾರಿಗಳು.+
7 ಕಾಡಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಬರೋ ತರ ನಡ್ಕೊಂಡಿದ್ದನ್ನ ನೆನಪಿಸ್ಕೊಳ್ಳಿ.+ ಅದನ್ನ ಯಾವತ್ತೂ ಮರಿಬೇಡಿ. ನೀವು ಈಜಿಪ್ಟನ್ನ ಬಿಟ್ಟು ಬಂದ ದಿನದಿಂದ ಈ ಸ್ಥಳಕ್ಕೆ ಬರೋ ತನಕ ಯೆಹೋವನ ವಿರುದ್ಧ ದಂಗೆ ಏಳ್ತಾನೇ ಇದ್ದೀರ.+ 8 ಹೋರೇಬಿನಲ್ಲಿ ಇದ್ದಾಗ್ಲೂ ನೀವು ಯೆಹೋವನ ಕೋಪ ಕೆರಳಿಸಿದ್ರಿ. ಯೆಹೋವನಿಗೆ ನಿಮ್ಮನ್ನ ನಾಶ ಮಾಡಬೇಕು ಅನ್ನೋಷ್ಟು ಕೋಪ ಬಂತು.+ 9 ನಾನಾಗ ಯೆಹೋವ ನಿಮ್ಮ ಜೊತೆ ಮಾಡ್ಕೊಂಡಿದ್ದ ಒಪ್ಪಂದದ+ ಮಾತುಗಳಿರೋ ಕಲ್ಲಿನ ಹಲಗೆಗಳನ್ನ+ ತರೋಕೆ ಹೋರೇಬ್ ಬೆಟ್ಟ ಹತ್ತಿ ಹೋಗಿದ್ದೆ. 40 ದಿನ ಹಗಲೂರಾತ್ರಿ+ ಏನೂ ತಿನ್ನದೆ, ನೀರೂ ಕುಡಿಯದೆ ಅಲ್ಲೇ ಬೆಟ್ಟದ ಮೇಲಿದ್ದೆ. 10 ಆಗ ಯೆಹೋವ ದೇವರು ತನ್ನ ಕೈಯಿಂದಾನೇ* ಬರೆದ ಎರಡು ಕಲ್ಲಿನ ಹಲಗೆ ಕೊಟ್ಟನು. ನೀವು ಬೆಟ್ಟದ ಹತ್ರ ಸೇರಿ ಬಂದಿದ್ದಾಗ ಯೆಹೋವ ಬೆಟ್ಟದ ಮೇಲಿಂದ ಬೆಂಕಿ ಒಳಗಿಂದ ಮಾತಾಡಿ ನಿಮಗೆ ಹೇಳಿದ ಎಲ್ಲ ಮಾತುಗಳನ್ನ ಆ ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದನು.+ 11 40 ದಿನ ಹಗಲೂರಾತ್ರಿ ಕಳೆದ ಮೇಲೆ ಒಪ್ಪಂದದ ಮಾತುಗಳಿರೋ ಆ ಕಲ್ಲಿನ ಹಲಗೆಗಳನ್ನ ಯೆಹೋವ ನನಗೆ ಕೊಟ್ಟನು. 12 ಆಗ ಯೆಹೋವ ನನಗೆ ‘ನೀನು ಬೇಗ ಬೆಟ್ಟ ಇಳಿದು ಹೋಗು. ಈಜಿಪ್ಟಿಂದ ನೀನು ಕರ್ಕೊಂಡು ಬಂದ ನಿನ್ನ ಜನ ಕೆಟ್ಟು ಹೋಗಿದ್ದಾರೆ.+ ನಾನು ಕೊಟ್ಟ ಆಜ್ಞೆಗಳನ್ನ* ಅವರು ಎಷ್ಟು ಬೇಗ ಮೀರಿ ನಡೆದಿದ್ದಾರೆ ನೋಡು! ಅವರು ತಮಗಾಗಿ ಅಚ್ಚಲ್ಲಿ ಲೋಹ ಹೊಯ್ದು ಮೂರ್ತಿ ಮಾಡ್ಕೊಂಡಿದ್ದಾರೆ’ + ಅಂದನು. 13 ಆಮೇಲೆ ಯೆಹೋವ ನನಗೆ ‘ಈ ಜನ ತುಂಬ ಹಠಮಾರಿಗಳು ಅಂತ ನಂಗೊತ್ತು.+ 14 ನನ್ನನ್ನ ತಡಿಬೇಡ. ಅವ್ರನ್ನೆಲ್ಲ ನಾಶಮಾಡಿ ಭೂಮಿ ಮೇಲಿಂದ ಅವ್ರ ಹೆಸ್ರೇ ಇಲ್ಲದ ಹಾಗೆ ಮಾಡ್ತೀನಿ. ಅವ್ರಿಗೆ ಬದ್ಲು ನಿನ್ನ ವಂಶದವರನ್ನೇ ಅವ್ರಿಗಿಂತ ಬಲಿಷ್ಠವಾದ, ದೊಡ್ಡದಾದ ಜನಾಂಗ ಆಗೋ ತರ ಮಾಡ್ತೀನಿ’ + ಅಂದನು.
15 ಆಮೇಲೆ ನಾನು ಒಪ್ಪಂದದ ಮಾತುಗಳಿದ್ದ ಆ ಹಲಗೆಗಳನ್ನ ಕೈಗಳಲ್ಲಿ ಹಿಡ್ಕೊಂಡು+ ಉರಿತಿದ್ದ ಆ ಬೆಟ್ಟದಿಂದ+ ಇಳಿದು ಬಂದೆ. 16 ಆಗ ನೀವು ಅಚ್ಚಲ್ಲಿ ಹೊಯ್ದು ಮಾಡ್ಕೊಂಡಿದ್ದ ಲೋಹದ ಕರುವನ್ನ ನೋಡಿದೆ. ನೀವು ನಿಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡಿದ್ರಿ. ಯೆಹೋವ ನಿಮಗೆ ಕೊಟ್ಟ ಆಜ್ಞೆಗಳನ್ನ* ಪಾಲಿಸೋದನ್ನ ಅಷ್ಟು ಬೇಗ ಬಿಟ್ಟುಬಿಟ್ಟಿದ್ರಿ.+ 17 ಆಗ ನಿಮ್ಮ ಕಣ್ಮುಂದೆನೇ ನನ್ನ ಕೈಯಲ್ಲಿದ್ದ ಆ ಎರಡು ಹಲಗೆಗಳನ್ನ ಕೆಳಗೆ ಎಸೆದುಬಿಟ್ಟೆ, ಅವು ಚೂರುಚೂರು ಆದ್ವು.+ 18 ನಾನು ಮೊದ್ಲು ಮಾಡಿದ ಹಾಗೇ ಯೆಹೋವನ ಮುಂದೆ ಅಡ್ಡಬಿದ್ದೆ. 40 ದಿನ ಹಗಲೂರಾತ್ರಿ ಹೀಗೆ ಮಾಡ್ತಾ ಇದ್ದೆ. ಆ ಸಮಯದಲ್ಲಿ ಏನೂ ತಿನ್ನಲಿಲ್ಲ, ನೀರೂ ಕುಡಿಲಿಲ್ಲ.+ ನೀವು ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡಿ ಪಾಪ ಮಾಡಿದ್ರಿಂದ, ಆತನನ್ನ ರೇಗಿಸಿದ್ರಿಂದ ನಾನು ಹೀಗೆ ಮಾಡಬೇಕಾಯ್ತು. 19 ನಾನು ತುಂಬ ಹೆದರಿದ್ದೆ. ಯಾಕಂದ್ರೆ ಯೆಹೋವನಿಗೆ ನಿಮ್ಮ ಮೇಲೆ ಎಷ್ಟು ಕೋಪ ಬಂದಿತ್ತೆಂದ್ರೆ+ ಆತನು ನಿಮ್ಮನ್ನ ನಾಶ ಮಾಡಬೇಕು ಅಂತ ಇದ್ದನು. ಆದ್ರೆ ಆಗ್ಲೂ ಯೆಹೋವ ನನ್ನ ಪ್ರಾರ್ಥನೆ ಕೇಳಿದನು.+
20 ಆರೋನನ ಮೇಲೂ ಯೆಹೋವನಿಗೆ ತುಂಬ ಕೋಪ ಬಂತು. ಅವನನ್ನ ನಾಶ ಮಾಡ್ತೀನಿ ಅಂದನು.+ ಆಗ್ಲೂ ನಾನು ಆರೋನನಿಗಾಗಿ ಅಂಗಲಾಚಿ ಬೇಡ್ಕೊಂಡೆ. 21 ಆಮೇಲೆ ನಾನು ನಿಮ್ಮ ಪಾಪಕ್ಕೆ ಸಾಕ್ಷಿಯಾಗಿದ್ದ ಕರುವಿನ ಮೂರ್ತಿಯನ್ನ+ ತೆಗೆದು ಬೆಂಕಿಯಲ್ಲಿ ಸುಟ್ಟುಬಿಟ್ಟೆ. ಅದನ್ನ ಜಜ್ಜಿ ಚೆನ್ನಾಗಿ ಅರೆದು ಧೂಳಿನ ಹಾಗೆ ಪುಡಿಪುಡಿ ಮಾಡಿ ಬೆಟ್ಟದಿಂದ ಹರಿದು ಬರೋ ತೊರೆಯಲ್ಲಿ ಚೆಲ್ಲಿದೆ.+
22 ಆಮೇಲೆ ತಬೇರಾ,+ ಮಸ್ಸ+ ಮತ್ತು ಕಿಬ್ರೋತ್-ಹತಾವಾದಲ್ಲಿ+ ಕೂಡ ನೀವು ಯೆಹೋವನಿಗೆ ಕೋಪ ಬರೋ ತರ ಮಾಡಿದ್ರಿ. 23 ಕಾದೇಶ್-ಬರ್ನೇಯದಿಂದ+ ಯೆಹೋವ ನಿಮ್ಮನ್ನ ಕಳಿಸಿದಾಗ ‘ಆ ದೇಶವನ್ನ ನಿಮಗೆ ಖಂಡಿತ ಕೊಡ್ತೀನಿ. ಹೋಗಿ ಅದನ್ನ ವಶ ಮಾಡ್ಕೊಳ್ಳಿ’ ಅಂತ ಹೇಳಿದನು. ಆದ್ರೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೆ ಮಾಡದೆ ಮತ್ತೆ ದಂಗೆಯೆದ್ರಿ.+ ಆತನ ಮೇಲೆ ನಂಬಿಕೆ ಇಡಲಿಲ್ಲ,+ ಆತನ ಮಾತು ಕೇಳಲಿಲ್ಲ. 24 ನಂಗೆ ನಿಮ್ಮ ಪರಿಚಯ ಆದ ದಿನದಿಂದ ನೀವು ಯೆಹೋವನ ವಿರುದ್ಧ ತಿರುಗಿ ಬೀಳ್ತಾ ಇದ್ದೀರ.
25 ಯೆಹೋವ ನಿಮ್ಮನ್ನ ನಾಶ ಮಾಡ್ತಾನೆ ಅಂತ ಹೇಳಿದ್ರಿಂದ ನಾನು 40 ದಿನ ಹಗಲೂರಾತ್ರಿ+ ಯೆಹೋವನ ಮುಂದೆ ಅಡ್ಡಬಿದ್ದು ಬಿದ್ದು 26 ಯೆಹೋವನ ಹತ್ರ ಅಂಗಲಾಚಿ ಬೇಡ್ತಾ ‘ವಿಶ್ವದ ರಾಜ ಯೆಹೋವನೇ ನಿನ್ನ ಜನ್ರನ್ನ ನಾಶ ಮಾಡಬೇಡ. ಅವರು ನಿನ್ನ ಸೊತ್ತು.+ ನಿನ್ನ ಶ್ರೇಷ್ಠತೆ, ಮಹಾ ಶಕ್ತಿ ತೋರಿಸಿ* ಅವ್ರನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದೆ.+ 27 ನಿನ್ನ ಸೇವಕರಾದ ಅಬ್ರಹಾಮ, ಇಸಾಕ, ಯಾಕೋಬರನ್ನ ನೆನಪು ಮಾಡ್ಕೊ.+ ಈ ಜನ್ರ ಹಠಮಾರಿತನ, ಕೆಟ್ಟತನ, ಪಾಪವನ್ನ ಗಮನಕ್ಕೆ ತಗೊಬೇಡ.+ 28 ನೀನು ಇವ್ರನ್ನ ನಾಶ ಮಾಡಿದ್ರೆ, ಯಾವ ದೇಶದಿಂದ ನೀನು ನಮ್ಮನ್ನ ಕರ್ಕೊಂಡು ಬಂದ್ಯೋ ಆ ದೇಶದವರು “ಮಾತು ಕೊಟ್ಟ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗೋಕೆ ಯೆಹೋವನ ಕೈಯಲ್ಲಿ ಆಗಲಿಲ್ಲ. ಅವ್ರ ಮೇಲೆ ದ್ವೇಷ ಇದ್ದ ಕಾರಣ ಅವ್ರನ್ನ ಇಲ್ಲಿಂದ ಕರ್ಕೊಂಡು ಹೋಗಿ ಕಾಡಲ್ಲಿ ಸಾಯಿಸಿಬಿಟ್ಟ”+ ಅಂತ ಹೇಳಬಹುದು. 29 ಇವರು ನಿನ್ನ ಜನ್ರು, ನಿನ್ನ ಸೊತ್ತು.+ ನೀನೇ ಇವ್ರನ್ನ ನಿನ್ನ ಮಹಾ ಶಕ್ತಿಯಿಂದ* ಕರ್ಕೊಂಡು ಬಂದೆ’ + ಅಂತ ಹೇಳ್ದೆ.