ಎಜ್ರ
4 ಸೆರೆವಾಸದಿಂದ ವಾಪಸ್ ಬಂದವರು+ ಇಸ್ರಾಯೇಲ್ ದೇವರಾದ ಯೆಹೋವನ ಆಲಯ ಕಟ್ತಿದ್ದಾರೆ ಅಂತ ಯೆಹೂದ್ಯರ, ಬೆನ್ಯಾಮೀನ್ಯರ ಶತ್ರುಗಳಿಗೆ+ ಗೊತ್ತಾಯ್ತು. 2 ಆಗ ಅವರು ತಕ್ಷಣ ಜೆರುಬ್ಬಾಬೆಲನ ಹತ್ರ, ಕುಲದ ಮುಖ್ಯಸ್ಥರ ಹತ್ರ “ನಿಮ್ಮ ಜೊತೆ ಸೇರಿ ನಾವೂ ಆಲಯ ಕಟ್ತೀವಿ. ನಿಮ್ಮ ಹಾಗೆ ನಾವೂ ನಿಮ್ಮ ದೇವ್ರನ್ನ ಆರಾಧಿಸ್ತಾ ಇದ್ದೀವಿ.*+ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದ+ ಅಶ್ಶೂರ್ಯರ ರಾಜ ಏಸರ್-ಹದ್ದೋನನ+ ಕಾಲದಿಂದಾನೂ ದೇವ್ರಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದೀವಿ” ಅಂದ್ರು. 3 ಹಾಗಿದ್ರೂ ಜೆರುಬ್ಬಾಬೆಲ್, ಯೇಷೂವ, ಇಸ್ರಾಯೇಲ್ ಕುಲದ ಉಳಿದ ಮುಖ್ಯಸ್ಥರು ಅವ್ರಿಗೆ “ನಮ್ಮ ದೇವರ ಆಲಯನ ನೀವು ಕಟ್ಟಕ್ಕಾಗಲ್ಲ.+ ಇಸ್ರಾಯೇಲ್ ದೇವರಾದ ಯೆಹೋವನಿಗೆ ಆಲಯ ಕಟ್ಟಬೇಕಂತ ಪರ್ಶಿಯ ರಾಜ ಕೋರೆಷ ನಮಗೆ ಆಜ್ಞೆ ಕೊಟ್ಟಿದ್ದಾನೆ.+ ಅದನ್ನ ನಾವೇ ಕಟ್ತೀವಿ” ಅಂದ್ರು.
4 ಆಗ ಸುತ್ತಮುತ್ತ ದೇಶದ ಜನ ಯೆಹೂದ್ಯರು ಧೈರ್ಯ ಕಳ್ಕೊಳ್ಳೋ ತರ ಮಾಡಿದ್ರು. ಬೇಜಾರಾಗಿ* ಅವರು ಕಟ್ಟೋ ಕೆಲ್ಸ ನಿಲ್ಲಿಸಿಬಿಡ್ಲಿ ಅಂತ ಹೀಗೆ ಮಾಡಿದ್ರು.+ 5 ಆ ಜನ ಸಲಹೆಗಾರರಿಗೆ ಹಣ ಕೊಟ್ಟು ಯೆಹೂದ್ಯರ ವಿರುದ್ಧ ಕೆಲಸ ಮಾಡೋಕೆ ಅವ್ರನ್ನ ಕರೆಸ್ಕೊಂಡ್ರು. ಪರ್ಶಿಯ ರಾಜ ಕೋರೆಷನ ಕಾಲದಿಂದ ಪರ್ಶಿಯ ರಾಜ ದಾರ್ಯಾವೆಷನ+ ಕಾಲದ ತನಕ ಅವ್ರ ಯೋಜನೆ ಹಾಳು ಮಾಡೋಕೆ ಪ್ರಯತ್ನಿಸ್ತಾ ಇದ್ರು.+ 6 ಆ ಜನ ರಾಜ ಅಹಷ್ವೇರೋಷನ ಆಳ್ವಿಕೆಯ ಆರಂಭದಲ್ಲಿ ಯೆಹೂದದ ಜನ್ರ ವಿರುದ್ಧ, ಯೆರೂಸಲೇಮಿನ ಜನ್ರ ವಿರುದ್ಧ ಸುಳ್ಳಾರೋಪ ಹಾಕಿ ಒಂದು ಪತ್ರ ಬರೆದ್ರು. 7 ರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಅವನ ಜೊತೆ ಕೆಲ್ಸ ಮಾಡ್ತಿದ್ದ ಬೇರೆ ಜನ್ರು ಸೇರಿ ರಾಜ ಅರ್ತಷಸ್ತನಿಗೆ ಕೂಡ ಒಂದು ಪತ್ರ ಬರೆದ್ರು. ಆ ಪತ್ರವನ್ನ ಅವರು ಅರಾಮಿಕ್ ಭಾಷೆಗೆ+ ಭಾಷಾಂತರಿಸಿ ಅರಾಮಿಕ್ ಭಾಷೆಯ ಲಿಪಿಯಲ್ಲಿ ಬರೆದ್ರು.*
8 * ಮುಖ್ಯ ಸರ್ಕಾರಿ ಅಧಿಕಾರಿಯಾಗಿದ್ದ ರೆಹೂಮ್ ಮತ್ತು ಬರಹಗಾರನಾಗಿದ್ದ ಶಿಂಷೈ ಯೆರೂಸಲೇಮಿನ ವಿರುದ್ಧ ರಾಜ ಅರ್ತಷಸ್ತನಿಗೆ ಬರೆದ ಆ ಪತ್ರದಲ್ಲಿ ಹೀಗಿತ್ತು: 9 (ಆ ಪತ್ರವನ್ನ ಮುಖ್ಯ ಸರ್ಕಾರಿ ಅಧಿಕಾರಿ ರೆಹೂಮ್, ಬರಹಗಾರ ಶಿಂಷೈ, ಅವ್ರ ಬೇರೆ ಜೊತೆ ಕೆಲಸಗಾರರು ಅಂದ್ರೆ ನ್ಯಾಯಾಧೀಶರು, ಉಪ ರಾಜ್ಯಪಾಲರು, ಕಾರ್ಯದರ್ಶಿಗಳು, ಯೆರೆಕ್ಯರು,+ ಬಾಬೆಲಿನವರು, ಶೂಷನಿನಲ್ಲಿ+ ವಾಸವಿದ್ದ ಏಲಾಮ್ಯರು+ ಸೇರಿ ಬರೆದ್ರು. 10 ಅವ್ರ ಜೊತೆ ಘನತೆ, ಗೌರವ ಇರೋ ಆಸೆನಪ್ಪರನ ಕೈದಿಗಳಾಗಿ ಹೋಗಿ ಸಮಾರ್ಯದಲ್ಲಿ ಇದ್ದ+ ಬೇರೆ ಜನಾಂಗಗಳ ಜನ, ನದಿಯ ಈಕಡೆಯಲ್ಲಿ* ಇದ್ದ ಬೇರೆ ಜನ ಸಹ ಸೇರ್ಕೊಂಡಿದ್ರು. 11 ಅವರು ಅರ್ತಷಸ್ತನಿಗೆ ಕಳಿಸಿದ ಆ ಪತ್ರದ ಒಂದು ಪ್ರತಿ ಹೀಗಿತ್ತು.)
“ರಾಜ ಅರ್ತಷಸ್ತನೇ, ನದಿಯ ಈಕಡೆ ಇರೋ ನಿನ್ನ ಜನ್ರು ಬರಿಯೋದು ಏನಂದ್ರೆ: 12 ನಿನ್ನ ಹತ್ರದಿಂದ ನಮ್ಮ ಹತ್ರ ಬಂದಿರೋ ಯೆಹೂದ್ಯರು ಯೆರೂಸಲೇಮ್ ಪಟ್ಟಣಕ್ಕೆ ಬಂದು ತಲುಪಿದ್ದಾರೆ ಅಂತ ಹೇಳೋಕೆ ಇಷ್ಟಪಡ್ತೀವಿ. ಅವ್ರು ಆ ಪಟ್ಟಣವನ್ನ ಮತ್ತೆ ಕಟ್ತಿದ್ದಾರೆ. ಆ ಪಟ್ಟಣದ ಜನ ತಿರುಗಿ ಬೀಳೋ ಸ್ವಭಾವದವರು, ಕೆಟ್ಟವರು. ಆ ಪಟ್ಟಣದ ಗೋಡೆಗಳನ್ನ ಮತ್ತೆ ಕಟ್ತಿದ್ದಾರೆ,+ ಅಡಿಪಾಯಗಳನ್ನ ಸರಿ ಮಾಡ್ತಿದ್ದಾರೆ. 13 ಈ ಪಟ್ಟಣವನ್ನ, ಅದ್ರ ಗೋಡೆಗಳನ್ನ ಮತ್ತೆ ಕಟ್ಟಿದ್ರೆ ಅವ್ರು ತೆರಿಗೆ ಕಪ್ಪ+ ಸುಂಕ ಕೊಡಲ್ಲ. ಇದ್ರಿಂದ ರಾಜರ ಖಜಾನೆಗಳಿಗೆ ನಷ್ಟ ಆಗುತ್ತೆ. 14 ನಾವು ಅರಮನೆಯ ಉಪ್ಪು ತಿಂದಿರೋದ್ರಿಂದ* ರಾಜನಿಗೆ ನಷ್ಟ ಆಗ್ತಿರೋದನ್ನ ನೋಡಿ ನೋಡದ ಹಾಗೆ ಇರೋದು ಸರಿಯಲ್ಲ. ಹಾಗಾಗಿ ಈ ವಿಷ್ಯ ರಾಜನ ಗಮನಕ್ಕೆ ತರಬೇಕಂತ ಈ ಪತ್ರ ಬರೀತಾ ಇದ್ದೀವಿ. 15 ರಾಜ, ನಿನ್ನ ಪೂರ್ವಜರ ದಾಖಲೆಗಳಲ್ಲಿ ಏನಿದೆ ಅಂತ ತನಿಖೆ ಮಾಡಿ ನೋಡು.+ ಆ ದಾಖಲೆಗಳ ಪುಸ್ತಕದಿಂದ ಈ ಪಟ್ಟಣ ದಂಗೆಕೋರ ಪಟ್ಟಣ ಅಂತ ಗೊತ್ತಾಗುತ್ತೆ. ರಾಜರಿಗೂ ನಮ್ಮ ಪ್ರಾಂತ್ಯಗಳಿಗೂ* ಹಾನಿ ಮಾಡೋ ವಿಷ್ಯ ಅಂತ ಗೊತ್ತಾಗುತ್ತೆ. ಹಿಂದಿನ ಕಾಲದಿಂದ್ಲೂ ಈ ಪಟ್ಟಣದ ಜನ ರಾಜದ್ರೋಹಕ್ಕೆ ಕುಮ್ಮಕ್ಕು ಕೊಡೋರು, ಅದೇ ಕಾರಣಕ್ಕೆ ಈ ಪಟ್ಟಣ ನಾಶ ಆಗಿದ್ದು ಅಂತ ನಿನಗೆ ಗೊತ್ತಾಗುತ್ತೆ.+ 16 ಮತ್ತೆ ಈ ಪಟ್ಟಣವನ್ನ, ಅದ್ರ ಗೋಡೆಗಳನ್ನ ಕಟ್ಟಿ ಮುಗಿಸಿದ್ರೆ ನದಿಯ+ ಈಕಡೆ ಎಲ್ಲ ಪ್ರದೇಶಗಳು ರಾಜನ ಕೈತಪ್ಪಿ ಹೋಗುತ್ತೆ ಅಂತ ರಾಜನಿಗೆ ಗೊತ್ತಿರಲಿ.”
17 ಆಗ ರಾಜ ಅರ್ತಷಸ್ತ ಮುಖ್ಯ ಸರ್ಕಾರಿ ಅಧಿಕಾರಿಯಾಗಿದ್ದ ರೆಹೂಮನಿಗೆ, ಬರಹಗಾರ ಶಿಂಷೈಗೆ, ಸಮಾರ್ಯದಲ್ಲಿ ವಾಸಿಸ್ತಿದ್ದ ಬೇರೆ ಜೊತೆ ಕೆಲಸಗಾರರಿಗೆ, ನದಿಯ ಈಕಡೆ ಇದ್ದ ಬೇರೆ ಜನ್ರಿಗೆ ಈ ಸಂದೇಶ ಕಳಿಸಿದ:
“ನಿಮ್ಮೆಲ್ರಿಗೂ ನಮಸ್ಕಾರ! 18 ನಮಗೆ ಕಳಿಸಿದ ಪತ್ರವನ್ನ ನನ್ನ ಮುಂದೆ ಸ್ಪಷ್ಟವಾಗಿ ಓದಿಸ್ದೆ.* 19 ತನಿಖೆ ಮಾಡಿಸ್ದೆ. ಅದ್ರಿಂದ ಗೊತ್ತಾದ ವಿಷ್ಯ ಏನಂದ್ರೆ ಮುಂಚಿನಿಂದಾನೂ ಆ ಪಟ್ಟಣದ ಜನ ರಾಜರ ವಿರುದ್ಧ ತಿರುಗಿ ಬೀಳ್ತಾನೇ ಇದ್ದಾರೆ. ಆ ಪಟ್ಟಣದಲ್ಲಿ ಗಲಭೆಗಳು ನಡೆದಿವೆ.+ 20 ಯೆರೂಸಲೇಮಲ್ಲಿ ತುಂಬ ಶಕ್ತಿಶಾಲಿ ರಾಜರು ಇದ್ರು. ಅವ್ರು ನದಿಯ ಈಕಡೆ ಎಲ್ಲ ಪ್ರದೇಶಗಳನ್ನ ಆಳ್ತಿದ್ರು. ಆ ಪ್ರದೇಶಗಳಿಂದ ತೆರಿಗೆ, ಕಪ್ಪ, ಸುಂಕ ತಗೊಳ್ತಿದ್ರು. 21 ಹಾಗಾಗಿ ಈಗ ಆ ಕೆಲಸ ನಿಲ್ಲಿಸಬೇಕಂತ ಅವ್ರಿಗೆ ಆಜ್ಞೆ ಕೊಡಿ. ನಾನು ಹೇಳೋ ತನಕ ಆ ಪಟ್ಟಣವನ್ನ ಮತ್ತೆ ಕಟ್ಟಬಾರದಂತ ಹೇಳಿ. 22 ರಾಜನಿಗೆ ಮತ್ತಷ್ಟು ನಷ್ಟ ಆಗದ ಹಾಗೆ+ ಈ ವಿಷ್ಯಾನ ಬೇಗ ಮಾಡಿ, ಅಸಡ್ಡೆ ಮಾಡಬೇಡಿ.”
23 ರಾಜ ಅರ್ತಷಸ್ತನ ಪತ್ರವನ್ನ ರೆಹೂಮನ, ಬರಹಗಾರ ಶಿಂಷೈಯ, ಅವ್ರ ಜೊತೆ ಕೆಲಸಗಾರರ ಮುಂದೆ ಓದಲಾಯ್ತು. ತಕ್ಷಣ ಯೆರೂಸಲೇಮಲ್ಲಿದ್ದ ಯೆಹೂದ್ಯರ ಹತ್ರ ಹೋಗಿ ಅವ್ರ ಮೇಲೆ ಒತ್ತಡ ಹಾಕಿ ಕೆಲ್ಸ ನಿಲ್ಲಿಸಿದ್ರು. 24 ಅವತ್ತು ನಿಂತುಹೋದ ಯೆರೂಸಲೇಮಿನ ದೇವಾಲಯದ ಕೆಲಸ ಪರ್ಶಿಯ ರಾಜ ದಾರ್ಯಾವೆಷ ಆಳ್ತಿದ್ದ ಎರಡನೇ ವರ್ಷದ ತನಕ ಶುರುವಾಗ್ಲೇ ಇಲ್ಲ.+