ವಿಮೋಚನಕಾಂಡ
36 “ಒಹೊಲೀಯಾಬನ ಜೊತೆ, ನಿಪುಣ ಪುರುಷರೆಲ್ಲರ ಜೊತೆ ಬೆಚಲೇಲ ಕೆಲಸ ಮಾಡ್ತಾನೆ. ಅವ್ರಿಗೆ ಯೆಹೋವ ವಿವೇಕ, ತಿಳುವಳಿಕೆ ಕೊಟ್ಟಿದ್ದಾನೆ. ಹಾಗಾಗಿ ಪವಿತ್ರ ಡೇರೆಯ ಎಲ್ಲ ಕೆಲಸಗಳನ್ನ* ಯೆಹೋವ ಆಜ್ಞೆ ಕೊಟ್ಟ ತರಾನೇ ಮಾಡೋಕೆ ಅವರಿಗಾಗುತ್ತೆ.”+
2 ಬೆಚಲೇಲ, ಒಹೊಲೀಯಾಬ ಮತ್ತು ಯಾರಿಗೆಲ್ಲ ಯೆಹೋವ ವಿವೇಕ ಕೊಟ್ಟಿದ್ದನೋ ಆ ಎಲ್ಲ ನಿಪುಣ ಗಂಡಸರನ್ನ ಮೋಶೆ ಕರೆದ.+ ಪವಿತ್ರ ಡೇರೆಯ ಕೆಲಸ ಮಾಡೋಕೆ ಮುಂದೆ ಬರೋಕೆ ಯಾರ ಯಾರ ಹೃದಯ ಪ್ರೇರಿಸ್ತೋ ಅವ್ರನ್ನೆಲ್ಲ ಕರೆದ.+ 3 ಮೋಶೆಯಿಂದ ಅವರು ಪವಿತ್ರ ಡೇರೆಯ ಕೆಲಸಕ್ಕಾಗಿ ಇಸ್ರಾಯೇಲ್ಯರು ಕೊಟ್ಟಿದ್ದ ಎಲ್ಲ ಕಾಣಿಕೆಗಳನ್ನ+ ತಗೊಂಡ್ರು. ಇದಾದ ಮೇಲೂ ಇಸ್ರಾಯೇಲ್ಯರು ದಿನಾ ಬೆಳಿಗ್ಗೆ ಸ್ವಇಷ್ಟದಿಂದ ಕಾಣಿಕೆಗಳನ್ನ ತಂದು ಕೊಡ್ತಾ ಇದ್ರು.
4 ಎಲ್ಲ ನಿಪುಣ ಕೆಲಸಗಾರರು ಪವಿತ್ರ ಡೇರೆಯ ಕೆಲಸ ಶುರು ಮಾಡಿದ್ರು. ಆಮೇಲೆ ಇವರೆಲ್ಲ ಒಬ್ಬರಾದ ಮೇಲೆ ಒಬ್ರು 5 ಮೋಶೆ ಹತ್ರ ಬಂದು “ಜನ ಕಾಣಿಕೆಗಳನ್ನ ತರ್ತಾನೇ ಇದ್ದಾರೆ. ಯೆಹೋವ ಆಜ್ಞೆ ಕೊಟ್ಟ ಕೆಲಸಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚು ಕಾಣಿಕೆ ಬಂದಿದೆ” ಅಂದ್ರು. 6 ಆಗ ಮೋಶೆ ಪಾಳೆಯದಲ್ಲೆಲ್ಲ ಒಂದು ಪ್ರಕಟಣೆ ಮಾಡೋಕೆ ಹೇಳಿದ. ಹಾಗಾಗಿ “ಇಸ್ರಾಯೇಲ್ಯರೇ, ಪವಿತ್ರ ಡೇರೆಗಾಗಿ ನೀವು ಕಾಣಿಕೆ ತಂದ್ಕೊಟ್ಟಿದ್ದು ಸಾಕು, ಇನ್ಮೇಲೆ ತರಬೇಡಿ” ಅಂತ ಹೇಳಿದ್ರು. ಆಮೇಲೆ ಜನ ಕಾಣಿಕೆ ತರಲಿಲ್ಲ. 7 ಪವಿತ್ರ ಡೇರೆಯ ಎಲ್ಲ ಕೆಲಸಕ್ಕೆ ಬೇಕಾದಷ್ಟು ಸಾಮಗ್ರಿ ಇತ್ತು. ಬೇಕಾಗಿರೋದಕ್ಕಿಂತ ಜಾಸ್ತಿನೇ ಇತ್ತು.
8 ಎಲ್ಲ ನಿಪುಣ ಕೆಲಸಗಾರರು+ ಹತ್ತು ಬಟ್ಟೆಗಳಿಂದ ಪವಿತ್ರ ಡೇರೆ+ ಮಾಡಿದ್ರು. ಆ ಬಟ್ಟೆಗಳನ್ನ ಹೊಸೆದ ಉತ್ತಮ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ತಯಾರಿಸಿದ್ರು. ಅವನು* ಆ ಬಟ್ಟೆಗಳ ಮೇಲೆ ಕೆರೂಬಿಯರ ಚಿತ್ರಗಳನ್ನ ಕಸೂತಿ ಹಾಕಿದ.+ 9 ಪ್ರತಿಯೊಂದು ಬಟ್ಟೆ 28 ಮೊಳ* ಉದ್ದ, 4 ಮೊಳ ಅಗಲ ಇತ್ತು. ಎಲ್ಲ ಬಟ್ಟೆಗಳ ಅಳತೆ ಒಂದೇ ಆಗಿತ್ತು. 10 ಬೆಚಲೇಲ ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಜೋಡಿಸಿದ. ಅದೇ ರೀತಿ ಇನ್ನೂ ಐದು ಬಟ್ಟೆಗಳನ್ನ ಒಂದಕ್ಕೊಂದು ಜೋಡಿಸಿದ. 11 ಆಮೇಲೆ ಅವನು ಆ ಎರಡೂ ದೊಡ್ಡ ಬಟ್ಟೆಗಳನ್ನ ಜೋಡಿಸೋಕಂತ ಅವುಗಳಲ್ಲಿ ಪ್ರತಿಯೊಂದ್ರ ಕೊನೆಯಲ್ಲೂ ನೀಲಿ ದಾರದಿಂದ ಕುಣಿಕೆಗಳನ್ನ ಹೊಲಿದ. 12 ಆಮೇಲೆ ಒಂದು ದೊಡ್ಡ ಬಟ್ಟೆಗೆ 50 ಕುಣಿಕೆಗಳನ್ನ ಇನ್ನೊಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಿದ. ಇದ್ರಿಂದಾಗಿ ಆ ಎರಡು ಬಟ್ಟೆಗಳು ಜೋಡಣೆ ಆಗೋ ಕಡೆ ಅವುಗಳ ಕುಣಿಕೆಗಳು ಎದುರುಬದುರಾಗಿ ಇತ್ತು. 13 ಕೊನೆಗೆ ಅವನು ಚಿನ್ನದ 50 ಕೊಂಡಿಗಳನ್ನ ಮಾಡಿ ಅವುಗಳಿಂದ ಆ ಎರಡು ದೊಡ್ಡ ಬಟ್ಟೆಗಳನ್ನ ಜೋಡಿಸಿದ. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಯ್ತು.
14 ಆಮೇಲೆ ಅವನು ಪವಿತ್ರ ಡೇರೆ ಮೇಲೆ ಹೊದಿಸೋಕಂತ ಆಡುಕೂದಲಿನ 11 ಬಟ್ಟೆಗಳನ್ನ ಮಾಡಿದ.+ 15 ಪ್ರತಿಯೊಂದು ಬಟ್ಟೆ 30 ಮೊಳ ಉದ್ದ, 4 ಮೊಳ ಅಗಲ ಇತ್ತು. 11 ಬಟ್ಟೆಗಳ ಅಳತೆ ಒಂದೇ ಆಗಿತ್ತು. 16 ಆಮೇಲೆ ಅವನು ಆ ಬಟ್ಟೆಗಳಲ್ಲಿ ಐದನ್ನ ಒಂದಕ್ಕೊಂದು ಜೋಡಿಸಿದ. ಉಳಿದ ಆರು ಬಟ್ಟೆಗಳನ್ನೂ ಒಂದಕ್ಕೊಂದು ಜೋಡಿಸಿದ. 17 ಆಮೇಲೆ ಒಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಿದ. ಇನ್ನೊಂದು ದೊಡ್ಡ ಬಟ್ಟೆಗೆ ಅದು ಮೊದಲನೇ ದೊಡ್ಡ ಬಟ್ಟೆ ಜೊತೆ ಜೋಡಣೆ ಆಗೋ ಅಂಚಲ್ಲಿ 50 ಕುಣಿಕೆಗಳನ್ನ ಮಾಡಿದ. 18 ಎರಡು ದೊಡ್ಡ ಬಟ್ಟೆಗಳನ್ನ ಕೂಡಿಸಿ ಒಂದೇ ಬಟ್ಟೆ ಮಾಡೋಕೆ ತಾಮ್ರದ 50 ಕೊಂಡಿಗಳನ್ನ ಮಾಡಿದ.
19 ಪವಿತ್ರ ಡೇರೆಯ ಮೇಲೆ ಹೊದಿಸೋಕೆ ಅವನು ಕೆಂಪು ಬಣ್ಣ ಹಾಕಿದ ಟಗರುಚರ್ಮದಿಂದ ಇನ್ನೊಂದು ಹೊದಿಕೆ ಮಾಡಿದ. ಆ ಕೆಂಪು ಹೊದಿಕೆ ಮೇಲೆ ಹಾಕೋಕೆ ಸೀಲ್ ಪ್ರಾಣಿಯ* ಚರ್ಮದ ಮತ್ತೊಂದು ಹೊದಿಕೆ ಮಾಡಿದ.+
20 ಅವನು ಅಕೇಶಿಯ ಮರದಿಂದ*+ ಪವಿತ್ರ ಡೇರೆಯ ಚೌಕಟ್ಟುಗಳನ್ನ ಮಾಡಿ ನೇರವಾಗಿ ನಿಲ್ಲಿಸಿದ.+ 21 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ ಒಂದೂವರೆ ಮೊಳ ಅಗಲ ಇತ್ತು. 22 ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು* ಇತ್ತು. ಎಲ್ಲ ಕೂರಂಚುಗಳು ಒಂದೇ ಸಮನಾಗಿ ಇತ್ತು. ಪವಿತ್ರ ಡೇರೆಯ ಎಲ್ಲ ಚೌಕಟ್ಟುಗಳನ್ನ ಅವನು ಹೀಗೇ ಮಾಡಿದ. 23 ಪವಿತ್ರ ಡೇರೆಯ ದಕ್ಷಿಣ ಭಾಗಕ್ಕಾಗಿ 20 ಚೌಕಟ್ಟುಗಳನ್ನ ಮಾಡಿದ. 24 ಒಂದೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು ಇದ್ವು. ಹಾಗಾಗಿ ಅವನು ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ. ಹೀಗೆ 20 ಚೌಕಟ್ಟುಗಳಿಗೆ ಬೆಳ್ಳಿಯ 40 ಅಡಿಗಲ್ಲುಗಳನ್ನ ಮಾಡಿದ.+ 25 ಪವಿತ್ರ ಡೇರೆಯ ಇನ್ನೊಂದು ಬದಿಗಾಗಿ ಅಂದ್ರೆ ಉತ್ತರ ಭಾಗಕ್ಕಾಗಿ ಅವನು 20 ಚೌಕಟ್ಟುಗಳನ್ನ ಮಾಡಿ 26 ಅವುಗಳಿಗಾಗಿ ಬೆಳ್ಳಿಯ 40 ಅಡಿಗಲ್ಲುಗಳನ್ನ ಮಾಡಿದ, ಅಂದ್ರೆ ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ.
27 ಪವಿತ್ರ ಡೇರೆಯ ಹಿಂಭಾಗಕ್ಕಾಗಿ ಅಂದ್ರೆ ಪಶ್ಚಿಮ ಭಾಗಕ್ಕಾಗಿ ಆರು ಚೌಕಟ್ಟುಗಳನ್ನ ಮಾಡಿದ.+ 28 ಪವಿತ್ರ ಡೇರೆಯ ಹಿಂಭಾಗದ ಎರಡು ಮೂಲೆಗಳಲ್ಲಿ ಆಧಾರಕ್ಕಾಗಿ ಎರಡು ಚೌಕಟ್ಟುಗಳನ್ನ ಮಾಡಿದ. 29 ಈ ಎರಡು ಚೌಕಟ್ಟುಗಳಲ್ಲಿ ಪ್ರತಿಯೊಂದಕ್ಕೂ ಕೆಳಗಿಂದ ಮೇಲಕ್ಕೆ ಎರಡು ಭಾಗ ಇತ್ತು. ಆ ಎರಡು ಭಾಗ ಮೊದಲ ಬಳೆ ಇರೋ ಕಡೆ ಕೂಡುತ್ತೆ. ಎರಡೂ ಮೂಲೆಗಳಿಗೆ ಆಧಾರವಾಗೋ ಎರಡೂ ಚೌಕಟ್ಟುಗಳಿಗೆ ಅವನು ಹೀಗೇ ಮಾಡಿದ. 30 ಹಿಂಭಾಗಕ್ಕಾಗಿ ಒಟ್ಟು ಎಂಟು ಚೌಕಟ್ಟುಗಳನ್ನ ಅವುಗಳಿಗೆ ಬೆಳ್ಳಿಯ 16 ಅಡಿಗಲ್ಲುಗಳನ್ನ ಮಾಡಿದ. ಪ್ರತಿಯೊಂದು ಚೌಕಟ್ಟಿನ ಕೆಳಗೆ ಇಡೋಕಂತ ಎರಡೆರಡು ಅಡಿಗಲ್ಲುಗಳನ್ನ ಮಾಡಿದ.
31 ಆಮೇಲೆ ಅವನು ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿದ. ಪವಿತ್ರ ಡೇರೆಯ+ ಒಂದು ಬದಿಯ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ, 32 ಪವಿತ್ರ ಡೇರೆಯ ಇನ್ನೊಂದು ಬದಿಯ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ ಮಾಡಿದ. ಪವಿತ್ರ ಡೇರೆಯ ಪಶ್ಚಿಮ ಭಾಗದ ಅಂದ್ರೆ ಹಿಂಭಾಗದ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲುಗಳನ್ನ ಮಾಡಿದ. 33 ಅವನು ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ಇರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕಂತ ಚೌಕಟ್ಟುಗಳ ಮಧ್ಯದಲ್ಲಿ ಇಡೋಕೆ ಒಂದು ಕೋಲು ಮಾಡಿದ. 34 ಅವನು ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಿದ. ಚೌಕಟ್ಟುಗಳಲ್ಲಿ ಚಿನ್ನದ ಬಳೆಗಳನ್ನ ಮಾಡಿದ. ಆ ಬಳೆಗಳು ಕೋಲುಗಳಿಗೆ ಹಿಡಿಗಳಾಗಿ ಇತ್ತು. ಕೋಲುಗಳಿಗೂ ಚಿನ್ನದ ತಗಡುಗಳನ್ನ ಹೊದಿಸಿದ.+
35 ಆಮೇಲೆ ಅವನು ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಉತ್ತಮ ಗುಣಮಟ್ಟದ ನಾರಿಂದ ಒಂದು ಪರದೆ+ ಮಾಡಿದ. ಅದ್ರ ಮೇಲೆ ಕೆರೂಬಿಯರ+ ಚಿತ್ರಗಳನ್ನ ಕಸೂತಿ ಹಾಕಿದ.+ 36 ಆ ಪರದೆ ತೂಗುಹಾಕೋಕೆ ಅಕೇಶಿಯ ಮರದಿಂದ ನಾಲ್ಕು ಕಂಬಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಿದ. ಆ ಕಂಬಗಳಿಗೆ ಚಿನ್ನದ ಕೊಕ್ಕೆಗಳನ್ನ ಮಾಡಿದ. ಅಚ್ಚಲ್ಲಿ ಬೆಳ್ಳಿ ಹೊಯ್ದು ನಾಲ್ಕು ಅಡಿಗಲ್ಲುಗಳನ್ನ ಮಾಡಿದ. 37 ಆಮೇಲೆ ಅವನು ಡೇರೆಯ ಬಾಗಿಲಿಗೆ ಒಂದು ಪರದೆ ಮಾಡಿದ. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಉತ್ತಮ ಗುಣಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಿದ.+ 38 ಪರದೆನ ತೂಗುಹಾಕೋಕಂತ ಐದು ಕಂಬಗಳನ್ನ ಕಂಬಗಳಲ್ಲಿ ಕೊಕ್ಕೆಗಳನ್ನ ಮಾಡಿದ. ಕಂಬಗಳ ಮೇಲ್ಭಾಗಕ್ಕೆ ಮತ್ತು ಕಟ್ಟುಗಳಿಗೆ* ಅವನು ಚಿನ್ನದ ತಗಡುಗಳನ್ನ ಹೊದಿಸಿದ. ಆದ್ರೆ ಕಂಬಗಳ ಐದು ಅಡಿಗಲ್ಲುಗಳನ್ನ ತಾಮ್ರದಿಂದ ಮಾಡಿದ.