ಎರಡನೇ ಅರಸು
6 ಪ್ರವಾದಿಗಳ ಗಂಡು ಮಕ್ಕಳು+ ಎಲೀಷನಿಗೆ “ನಾವು ನಿನ್ನ ಜೊತೆ ವಾಸಿಸ್ತಿರೋ ಈ ಸ್ಥಳ ನಮಗೆ ತುಂಬ ಇಕ್ಕಟ್ಟಾಗಿದೆ. 2 ಹಾಗಾಗಿ ದಯವಿಟ್ಟು ನಮಗೆ ಯೋರ್ದನಿಗೆ ಹೋಗೋಕೆ ಅನುಮತಿ ಕೊಡು. ನಮ್ಮಲ್ಲಿ ಪ್ರತಿಯೊಬ್ರು ಅಲ್ಲಿಂದ ಮರದ ಒಂದೊಂದು ದಿಮ್ಮಿ ತಗೊಂಡು ಹೋಗಿ ಅದ್ರ ಹತ್ರ ವಾಸಕ್ಕಾಗಿ ಒಂದು ಸ್ಥಳ ಮಾಡ್ಕೊಳ್ತೀವಿ” ಅಂದ್ರು. ಅದಕ್ಕೆ ಅವನು “ಸರಿ, ಹಾಗೇ ಮಾಡಿ” ಅಂದ. 3 ಅವ್ರಲ್ಲಿ ಒಬ್ಬ “ದಯವಿಟ್ಟು ನೀನು ನಮ್ಮ ಜೊತೆ ಬರ್ತಿಯಾ?” ಅಂತ ಕೇಳಿದ. ಅದಕ್ಕೆ ಎಲೀಷ “ಬರ್ತಿನಿ” ಅಂದ. 4 ಅವನು ಅವ್ರ ಜೊತೆ ಹೋದ. ಅವ್ರೆಲ್ಲ ಯೋರ್ದನಿನ ಹತ್ರ ಬಂದು ಮರಗಳನ್ನ ಕಡಿಯೋಕೆ ಶುರು ಮಾಡಿದ್ರು. 5 ಅವ್ರಲ್ಲಿ ಒಬ್ಬ ಮರ ಕಡಿತಾ ಇರುವಾಗ ಅವನ ಕೊಡಲಿ ನೀರಿಗೆ ಬಿತ್ತು. ಆಗ ಅವನು “ಅಯ್ಯೋ, ನನ್ನ ಒಡೆಯನೇ ಅದನ್ನ ನಾನು ಬೇರೆಯವ್ರಿಂದ ಸಾಲವಾಗಿ ತಂದಿದ್ದೆ” ಅಂತ ಕೂಗಿ ಹೇಳಿದ. 6 ಅದಕ್ಕೆ ಸತ್ಯ ದೇವರ ಮನುಷ್ಯ ಅವನನ್ನ “ಅದು ಎಲ್ಲಿ ಬಿತ್ತು?” ಅಂತ ಕೇಳಿದ. ಆಗ ಆ ವ್ಯಕ್ತಿ ಅದು ಬಿದ್ದ ಜಾಗ ತೋರಿಸಿದ. ನಂತ್ರ ಸತ್ಯ ದೇವರ ಮನುಷ್ಯ ಮರದ ಒಂದು ತುಂಡನ್ನ ಕಡಿದು ಆ ಜಾಗಕ್ಕೆ ಎಸೆದು ಕೊಡಲಿ ತೇಲೋ ತರ ಮಾಡಿದ. 7 ಸತ್ಯ ದೇವರ ಮನುಷ್ಯ “ಅದನ್ನ ಎತ್ಕೊ” ಅಂದ. ಆಗ ಆ ವ್ಯಕ್ತಿ ತನ್ನ ಕೈಚಾಚಿ ಅದನ್ನ ಎತ್ಕೊಂಡ.
8 ಅರಾಮ್ಯದ ರಾಜ ಇಸ್ರಾಯೇಲ್ಯರ ವಿರುದ್ಧ ಯುದ್ಧಕ್ಕೆ ಹೊರಟ.+ ಅವನು ತನ್ನ ಸೇವಕರ ಜೊತೆ ಚರ್ಚಿಸಿ “ನಾನು ನಿಮ್ಮ ಜೊತೆ ಇಂಥ ಸ್ಥಳದಲ್ಲಿ ಪಾಳೆಯ ಹೂಡ್ತೀನಿ” ಅಂದ. 9 ಆಗ ಸತ್ಯ ದೇವರ ಮನುಷ್ಯ+ ಇಸ್ರಾಯೇಲ್ ರಾಜನಿಗೆ “ಆ ಸ್ಥಳವನ್ನ ನೀನು ದಾಟಿ ಹೋಗಬೇಡ. ಯಾಕಂದ್ರೆ ಅರಾಮ್ಯರ ಸೈನ್ಯ ದಾಳಿ ಮಾಡೋಕೆ ಅಲ್ಲಿಗೆ ಬರುತ್ತೆ” ಅನ್ನೋ ಸಂದೇಶ ಕಳಿಸಿದ. 10 ಹಾಗಾಗಿ ಇಸ್ರಾಯೇಲ್ ರಾಜ ಸತ್ಯ ದೇವರ ಮನುಷ್ಯ ಎಚ್ಚರಿಸಿದ್ದ ಆ ಸ್ಥಳದಲ್ಲಿ ವಾಸವಿದ್ದ ತನ್ನ ಜನ್ರಿಗೆ ಒಂದು ಸಂದೇಶ ಕಳಿಸಿದ. ಹೀಗೆ ಸತ್ಯ ದೇವರ ಮನುಷ್ಯ ರಾಜನನ್ನ ಎಚ್ಚರಿಸ್ತಾ ಇದ್ದ. ರಾಜ ಆ ಸ್ಥಳಗಳಿಂದ ದೂರನೇ ಉಳಿದ. ತುಂಬ ಸಲ* ಹೀಗೇ ಆಯ್ತು.+
11 ಇದ್ರಿಂದ ಅರಾಮ್ಯದ ರಾಜನಿಗೆ ತುಂಬ ಕೋಪ ಬಂತು. ಆಗ ಅವನು ತನ್ನ ಸೇವಕರನ್ನ ಒಟ್ಟುಸೇರಿಸಿ “ಹೇಳಿ, ನಮ್ಮಲ್ಲಿ ಯಾರು ಇಸ್ರಾಯೇಲ್ ರಾಜನ ಪಕ್ಷದವರು?” ಅಂತ ಕೇಳಿದ. 12 ಆಗ ಸೇವಕರಲ್ಲಿ ಒಬ್ಬ “ನನ್ನ ಒಡೆಯನಾದ ರಾಜನೇ, ನಮ್ಮಲ್ಲಿ ಯಾರೂ ಅಂಥವ್ರಿಲ್ಲ. ಇಸ್ರಾಯೇಲಿನಲ್ಲಿ ಎಲೀಷ ಅಂತ ಒಬ್ಬ ಪ್ರವಾದಿ ಇದ್ದಾನೆ. ನೀನು ನಿನ್ನ ಮಲಗೋ ಕೋಣೆಯಲ್ಲಿ ಮಾತಾಡೋ ವಿಷ್ಯಗಳನ್ನ ಸಹ ಅವನು ತನ್ನ ರಾಜನಿಗೆ ಹೇಳ್ತಾನೆ”+ ಅಂದ. 13 ಇದನ್ನ ಕೇಳಿ ರಾಜ “ಹೋಗಿ, ಅವನು ಎಲ್ಲಿದ್ದಾನೆ ಅಂತ ಕಂಡುಹಿಡಿರಿ. ಅವನನ್ನ ಹಿಡಿಯೋಕೆ ಜನ್ರನ್ನ ಕಳಿಸ್ತೀನಿ” ಅಂದ. ಆಮೇಲೆ ರಾಜನಿಗೆ “ಎಲೀಷ ದೋತಾನಲ್ಲಿ+ ಇದ್ದಾನೆ” ಅನ್ನೋ ಸುದ್ದಿ ಮುಟ್ಟಿಸಲಾಯ್ತು. 14 ರಾಜ ತಕ್ಷಣ ಕುದುರೆ ಮತ್ತು ಯುದ್ಧರಥಗಳ ಸಮೇತ ಒಂದು ದೊಡ್ಡ ಸೈನ್ಯನ ಎಲೀಷ ಇದ್ದಲ್ಲಿಗೆ ಕಳಿಸಿದ. ಅವರು ರಾತ್ರಿ ಹೊತ್ತಲ್ಲಿ ದೋತಾನ್ ಪಟ್ಟಣ ತಲುಪಿ ಅದನ್ನ ಸುತ್ತುವರಿದ್ರು.
15 ಸತ್ಯ ದೇವರ ಮನುಷ್ಯನ ಸೇವಕ ಬೆಳಿಗ್ಗೆ ಬೇಗ ಎದ್ದು ಹೊರಗೆ ಬಂದ. ಆಗ ಅವನು ಅರಾಮ್ಯರು ಕುದುರೆಗಳ ಮತ್ತು ಯುದ್ಧರಥಗಳ ಸಮೇತ ಪಟ್ಟಣವನ್ನ ಸುತ್ತುವರಿದು ನಿಂತಿರೋದನ್ನ ನೋಡಿದ. ತಕ್ಷಣ ಅವನು “ಅಯ್ಯೋ, ನನ್ನ ಒಡೆಯನೇ! ನಾವೀಗ ಏನು ಮಾಡೋಣ?” ಅಂದ. 16 ಅದಕ್ಕೆ ಎಲೀಷ “ಹೆದರಬೇಡ!+ ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ”+ ಅಂದ. 17 ಎಲೀಷ “ಯೆಹೋವನೇ, ದಯವಿಟ್ಟು ಇವನ ಕಣ್ಣುಗಳನ್ನ ತೆರಿ. ಇವನೂ ನೋಡೋಕಾಗೋ ತರ ಮಾಡು”+ ಅಂತ ಪ್ರಾರ್ಥಿಸಿದ. ತಕ್ಷಣ ಯೆಹೋವ ಆ ಸೇವಕನ ಕಣ್ಣುಗಳನ್ನ ತೆರೆದನು. ಆಗ ಆ ಸೇವಕ ಸುತ್ತ ಇರೋ ಬೆಟ್ಟ ಪ್ರದೇಶದಲ್ಲೆಲ್ಲ ಪ್ರಜ್ವಲಿಸೋ ಕುದುರೆಗಳು ಮತ್ತು ಅಗ್ನಿಮಯ ಯುದ್ಧರಥಗಳು+ ಎಲೀಷನ ರಕ್ಷಣೆಗಾಗಿ ಬಂದು ನಿಂತಿರೋದನ್ನ ಕಂಡ.+
18 ಅರಾಮ್ಯರ ಸೈನ್ಯ ಎಲೀಷನ ಕಡೆಗೆ ಬರ್ತಿದ್ದಾಗ ಅವನು ಯೆಹೋವನಿಗೆ “ದಯವಿಟ್ಟು, ಈ ಜನ* ಕುರುಡರಾಗೋ ತರ ಮಾಡು”+ ಅಂತ ಪ್ರಾರ್ಥಿಸಿದ. ದೇವರು ಎಲೀಷನ ಬೇಡಿಕೆ ಪ್ರಕಾರನೇ ಆ ಜನ್ರನ್ನ ಕುರುಡರಾಗೋ ತರ ಮಾಡಿದ. 19 ಆಗ ಎಲೀಷ ಅವ್ರಿಗೆ “ನೀವು ಹೋಗಬೇಕಾಗಿರೋ ದಾರಿ ಇದಲ್ಲ. ನೀವು ದಾಳಿ ಮಾಡಬೇಕಂತಿರೋ ಪಟ್ಟಣ ಇದಲ್ಲ. ನೀವು ನನ್ನ ಜೊತೆ ಬನ್ನಿ, ನೀವು ಹುಡುಕ್ತಿರೋ ಆ ಮನುಷ್ಯನ ಹತ್ರ ನಾನು ನಿಮ್ಮನ್ನ ಕರ್ಕೊಂಡು ಹೋಗ್ತೀನಿ” ಅಂದ. ಆದ್ರೆ ಎಲೀಷ ಅವ್ರನ್ನ ಸಮಾರ್ಯ+ ಪಟ್ಟಣಕ್ಕೆ ಕರ್ಕೊಂಡು ಹೋದ.
20 ಅವರು ಸಮಾರ್ಯ ತಲುಪಿದಾಗ ಎಲೀಷ “ಯೆಹೋವನೇ, ಇವ್ರ ಕಣ್ಣುಗಳನ್ನ ತೆರಿ. ಇವರು ನೋಡೋಕೆ ಆಗೋ ತರ ಮಾಡು” ಅಂತ ಪ್ರಾರ್ಥಿಸಿದ. ಹಾಗಾಗಿ ಯೆಹೋವ ಅವ್ರ ಕಣ್ಣುಗಳನ್ನ ತೆರೆದ. ಆಗ ಅವ್ರಿಗೆ ತಾವು ಸಮಾರ್ಯದ ಮಧ್ಯ ನಿಂತಿದ್ದೀವಿ ಅಂತ ಗೊತ್ತಾಯ್ತು. 21 ಇಸ್ರಾಯೇಲ್ ರಾಜ ಅವ್ರನ್ನ ಕಂಡು ಎಲೀಷನಿಗೆ “ನನ್ನ ಒಡೆಯನೇ, ನಾನು ಅವ್ರನ್ನ ಸಾಯಿಸ್ಲಾ?” ಅಂತ ಕೇಳಿದ. 22 ಆದ್ರೆ ಎಲೀಷ ಅವನಿಗೆ “ನೀನು ಅವ್ರನ್ನ ಸಾಯಿಸಬಾರದು. ನೀನು ಯುದ್ಧ ಮಾಡಿ ಕೈದಿಯಾಗಿ ತಂದವ್ರನ್ನ ಸಾಯಿಸ್ತೀಯಾ? ಅವ್ರಿಗೆ ಊಟ, ನೀರು ಕೊಡು. ಅವರು ಊಟ ಮಾಡಿ+ ತಮ್ಮ ಯಜಮಾನನ ಹತ್ರ ವಾಪಸ್ ಹೋಗ್ಲಿ” ಅಂದ. 23 ಹಾಗಾಗಿ ರಾಜ ಅವ್ರಿಗಾಗಿ ಒಂದು ದೊಡ್ಡ ಔತಣ ಮಾಡಿಸಿದ. ಅವರು ಅಲ್ಲಿ ತಿಂದು ಕುಡಿದ್ರು. ಆಮೇಲೆ ಅವನು ಅವ್ರನ್ನ ಅವ್ರ ಯಜಮಾನನ ಹತ್ರ ಕಳಿಸ್ಕೊಟ್ಟ. ಅರಾಮ್ಯದ ಲೂಟಿಗಾರರ ಗುಂಪು+ ಮುಂದೆ ಯಾವತ್ತೂ ಇಸ್ರಾಯೇಲಿನ ವಿರುದ್ಧ ಯುದ್ಧಕ್ಕೆ ಬರಲಿಲ್ಲ.
24 ಆಮೇಲೆ ಅರಾಮ್ಯದ ರಾಜ ಬೆನ್ಹದದ ತನ್ನ ಇಡೀ ಸೈನ್ಯ ಕರ್ಕೊಂಡು ಸಮಾರ್ಯದ ವಿರುದ್ಧ ಹೋಗಿ ಅದಕ್ಕೆ ಮುತ್ತಿಗೆ ಹಾಕಿದ.+ 25 ಸಮಾರ್ಯದಲ್ಲಿ ದೊಡ್ಡ ಬರ+ ಬಂತು. ತುಂಬ ಸಮಯದ ತನಕ ಮುತ್ತಿಗೆ ಹಾಕಿದ್ರಿಂದ ಒಂದು ಕತ್ತೆ ತಲೆಯನ್ನ+ 80 ಬೆಳ್ಳಿ ಶೆಕೆಲಿಗೆ ಮತ್ತು ಎರಡು ಹಿಡಿಯಷ್ಟು* ಪಾರಿವಾಳದ ಹಿಕ್ಕೆಗಳನ್ನ 5 ಬೆಳ್ಳಿ ಶೆಕೆಲಿಗೆ ಮಾರೋ ಪರಿಸ್ಥಿತಿ ಬಂತು. 26 ಒಂದಿನ ಇಸ್ರಾಯೇಲ್ ರಾಜ ಪಟ್ಟಣದ ಗೋಡೆ ಮೇಲೆ ನಡೆದು ಹೋಗ್ತಿದ್ದಾಗ ಒಬ್ಬ ಸ್ತ್ರೀ “ನನ್ನ ಒಡೆಯನಾದ ರಾಜನೇ, ನನಗೆ ಸಹಾಯ ಮಾಡು” ಅಂತ ಕೂಗಿಕೊಂಡಳು. 27 ಅದಕ್ಕೆ ಅವನು “ನಿನ್ನನ್ನ ಯೆಹೋವನೇ ಕೈಬಿಟ್ಟಿರುವಾಗ ನಾನು ಹೇಗೆ ಸಹಾಯ ಮಾಡ್ಲಿ? ಆಹಾರ, ಎಣ್ಣೆ ಅಥವಾ ದ್ರಾಕ್ಷಾಮದ್ಯವನ್ನ ಎಲ್ಲಿಂದ ತಂದು ಕೊಡ್ಲಿ?” ಅಂದ. 28 ರಾಜ ಅವಳನ್ನ “ನಿನ್ನ ಸಮಸ್ಯೆ ಏನು?” ಅಂತ ಕೇಳಿದ. ಅದಕ್ಕೆ ಅವಳು “ಈ ಸ್ತ್ರೀ ನನಗೆ ‘ಇವತ್ತು ನಿನ್ನ ಮಗನನ್ನ ಕೊಡು. ನಾವಿಬ್ರೂ ಅವನನ್ನ ತಿಂದುಬಿಡೋಣ. ನಾಳೆ ನಾವು ನನ್ನ ಮಗನನ್ನ ತಿನ್ನೋಣ’ ಅಂತ ಹೇಳಿದ್ದಳು.+ 29 ಹಾಗಾಗಿ ನಾವು ನನ್ನ ಮಗನನ್ನ ಬೇಯಿಸಿ ತಿಂದ್ವಿ.+ ಮಾರನೇ ದಿನ ನಾನು ಅವಳಿಗೆ ‘ನಿನ್ನ ಮಗನನ್ನ ಕೊಡು ನಾವು ಅವನನ್ನ ತಿನ್ನೋಣ’ ಅಂತ ಕೇಳಿದ್ರೆ ಅವಳು ತನ್ನ ಮಗನನ್ನ ಕೊಡದೆ ಬಚ್ಚಿಟ್ಟಿದ್ದಾಳೆ” ಅಂದಳು.
30 ಆ ಸ್ತ್ರೀಯ ಮಾತುಗಳನ್ನ ಕೇಳಿ ರಾಜ ತನ್ನ ಬಟ್ಟೆ ಹರ್ಕೊಂಡ.+ ರಾಜ ಪಟ್ಟಣದ ಗೋಡೆ ಮೇಲೆ ದಾಟಿ ಹೋಗ್ತಿದ್ದಾಗ ಅವನು ತನ್ನ ಬಟ್ಟೆಗಳ ಒಳಗೆ* ಗೋಣಿ ಸುತ್ಕೊಂಡಿರೋದನ್ನ ಜನ ಗಮನಿಸಿದ್ರು. 31 ಆಗ ರಾಜ “ನಾನು ಇವತ್ತು ಶಾಫಾಟನ ಮಗ ಎಲೀಷನ ತಲೆ ತೆಗಿದಿದ್ರೆ ದೇವರು ನನಗೆ ದೊಡ್ಡ ಶಿಕ್ಷೆ ಕೊಡ್ಲಿ”+ ಅಂದ.
32 ಎಲೀಷ ತನ್ನ ಮನೇಲಿ ಕೂತಿದ್ದ. ಅವನ ಜೊತೆ ಊರಿನ ಹಿರಿಯರು ಸಹ ಇದ್ರು. ರಾಜ ತನ್ನ ಮುಂದೆ ತನ್ನ ಒಬ್ಬ ಸಂದೇಶವಾಹಕನನ್ನ ಕಳಿಸಿದ. ಆ ಸಂದೇಶವಾಹಕ ಅಲ್ಲಿ ಬರೋದಕ್ಕೂ ಮುಂಚೆನೇ ಎಲೀಷ ಆ ಹಿರಿಯರಿಗೆ “ನನ್ನ ತಲೆ ತೆಗಿಯೋಕೆ ಆ ಕೊಲೆಗಾರನ+ ಮಗ ಒಬ್ಬನನ್ನ ಕಳಿಸಿದ್ದಾನೆ. ನೀವು ಎಚ್ಚರವಾಗಿದ್ದು ಅವನು ಬರುವಾಗ ಬಾಗಿಲು ಮುಚ್ಚಿಬಿಡಿ. ಯಾವುದೇ ಕಾರಣಕ್ಕೂ ಅವನು ಒಳಗೆ ಬರದೇ ಇರೋ ತರ ಬಾಗಿಲನ್ನ ಗಟ್ಟಿಯಾಗಿ ಹಿಡ್ಕೊಳ್ಳಿ. ಅವನ ಹಿಂದೆನೇ ಅವನ ಒಡೆಯನೂ ಬರ್ತಿದ್ದಾನೆ” ಅಂದ. 33 ಎಲೀಷ ಅವ್ರ ಜೊತೆ ಮಾತಾಡ್ತಾ ಇರುವಾಗ್ಲೇ ಆ ಸಂದೇಶವಾಹಕ ಅಲ್ಲಿಗೆ ಬಂದ. ಅವನ ನಂತ್ರ ಬಂದ ರಾಜ ಎಲೀಷನಿಗೆ “ಈ ಕಷ್ಟ ಯೆಹೋವನಿಂದ ಬಂದಿದೆ. ಹಾಗಿರುವಾಗ ನಾನು ಇನ್ನೂ ಯಾಕೆ ಯೆಹೋವನಿಗೋಸ್ಕರ ಕಾಯಬೇಕು?” ಅಂದ.