ಎರಡನೇ ಅರಸು
13 ಅಹಜ್ಯನ+ ಮಗನೂ ಯೆಹೂದದ ರಾಜನೂ ಆದ ಯೆಹೋವಾಷನ+ ಆಳ್ವಿಕೆಯ 23ನೇ ವರ್ಷದಲ್ಲಿ ಯೇಹುವಿನ+ ಮಗ ಯೆಹೋವಾಹಾಜ ರಾಜನಾದ. ಅವನು ಸಮಾರ್ಯದಿಂದ ಇಸ್ರಾಯೇಲನ್ನ 17 ವರ್ಷ ಆಳಿದ. 2 ಯೆಹೋವಾಹಾಜ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಇವನು ತನ್ನ ಪಾಪಗಳನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪವನ್ನೇ ಇವನೂ ಮಾಡಿಸಿದ.+ 3 ಹಾಗಾಗಿ ಯೆಹೋವನ ಕೋಪ+ ಇಸ್ರಾಯೇಲ್ಯರ ಮೇಲೆ ಹೊತ್ತಿ ಉರಿತು.+ ಆತನು ಅವ್ರನ್ನ ಅರಾಮ್ಯರ ರಾಜ ಹಜಾಯೇಲನಿಗೆ,+ ಹಜಾಯೇಲನ ಮಗ ಬೆನ್ಹದದನಿಗೆ+ ಒಪ್ಪಿಸಿಬಿಟ್ಟ. ಹೀಗೆ ಇಸ್ರಾಯೇಲ್ಯರು ತುಂಬ ಸಮಯದ ತನಕ ಅವರ ಬಿಗಿಮುಷ್ಟಿಯಲ್ಲಿದ್ರು.
4 ಸ್ವಲ್ಪ ಸಮಯ ಆದ್ಮೇಲೆ ಯೆಹೋವಾಹಾಜ ಯೆಹೋವನ ಕೃಪೆಗಾಗಿ ಬೇಡ್ಕೊಂಡ. ಅರಾಮ್ಯರ ರಾಜ ಇಸ್ರಾಯೇಲ್ಯರ ಮೇಲೆ ಮಾಡ್ತಿದ್ದ ದಬ್ಬಾಳಿಕೆಯನ್ನ ಯೆಹೋವ ನೋಡಿದ್ರಿಂದ ಅವನ ಪ್ರಾರ್ಥನೆಯನ್ನ ಕೇಳಿಸ್ಕೊಂಡ.+ 5 ಹಾಗಾಗಿ ಯೆಹೋವ ಇಸ್ರಾಯೇಲ್ಯರನ್ನ ಅರಾಮ್ಯರ ಬಿಗಿಮುಷ್ಟಿಯಿಂದ ಬಿಡಿಸೋಕೆ ಒಬ್ಬ ಸಹಾಯಕನನ್ನ ಕಳಿಸಿದ.+ ಆಗ ಇಸ್ರಾಯೇಲ್ಯರು ಮೊದಲಿನ ತರ ತಮ್ಮತಮ್ಮ ಮನೆಗಳಲ್ಲಿ ವಾಸಿಸೋಕೆ ಆಯ್ತು.* 6 (ಇಷ್ಟೆಲ್ಲ ಆದ್ರೂ ಯಾರೊಬ್ಬಾಮನ ಮನೆತನದವರು ತಮ್ಮಿಂದ ಮಾಡಿಸಿದ ಪಾಪವನ್ನ ಇಸ್ರಾಯೇಲ್ಯರು ಬಿಡಲೇ ಇಲ್ಲ.+ ಅವರು ಆ ಪಾಪದಲ್ಲಿ ಮುಳುಗಿಹೋಗಿದ್ರು. ಸಮಾರ್ಯದಲ್ಲಿದ್ದ ಅಶೇರ್ ಸ್ತಂಭವನ್ನ*+ ತೆಗೆದುಹಾಕಲಿಲ್ಲ.) 7 ಯೆಹೋವಾಹಾಜನ ಹತ್ರ 50 ಕುದುರೆಸವಾರರು, 10 ರಥಗಳು ಮತ್ತು 10,000 ಕಾಲಾಳುಗಳು ಇದ್ದ ಸೈನ್ಯವನ್ನ ಬಿಟ್ರೆ ಬೇರೇನೂ ಇರಲಿಲ್ಲ. ಯಾಕಂದ್ರೆ ಅರಾಮ್ಯರ ರಾಜ ಅವ್ರನ್ನ ನಾಶಮಾಡಿ+ ಗೋಧಿ ಕಣದ ಧೂಳಿನ ತರ ಮಾಡಿದ್ದ.+
8 ಯೆಹೋವಾಹಾಜನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಮತ್ತು ಅವನ ವೀರ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 9 ಕೊನೆಗೆ ಯೆಹೋವಾಹಾಜ ತೀರಿಹೋದ. ಅವನನ್ನ ಸಮಾರ್ಯದಲ್ಲಿ ಸಮಾಧಿ ಮಾಡಿದ್ರು.+ ಅವನ ನಂತ್ರ ಅವನ ಮಗ ಯೆಹೋವಾಷ ರಾಜನಾದ.
10 ಯೆಹೂದದ ರಾಜ ಯೆಹೋವಾಷನ ಆಳ್ವಿಕೆಯ 37ನೇ ವರ್ಷದಲ್ಲಿ ಯೆಹೋವಾಹಾಜನ ಮಗ ಯೆಹೋವಾಷ+ ರಾಜನಾದ. ಅವನು ಸಮಾರ್ಯದಿಂದ ಇಸ್ರಾಯೇಲನ್ನ 16 ವರ್ಷ ಆಳಿದ. 11 ಯೆಹೋವಾಷ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಇವನು ತನ್ನ ಪಾಪಗಳನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಇವನೂ ಮಾಡಿಸಿದ.+ ಆ ಪಾಪಗಳಲ್ಲೇ ಮುಳುಗಿಹೋಗಿದ್ದ.
12 ಯೆಹೋವಾಷನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ಅವನ ವೀರ ಕೃತ್ಯಗಳ ಬಗ್ಗೆ ಮತ್ತು ಅವನು ಯೆಹೂದದ ರಾಜ ಅಮಚ್ಯನ ವಿರುದ್ಧ ಹೋರಾಡಿದ್ರ+ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 13 ಕೊನೆಗೆ ಯೆಹೋವಾಷ ತೀರಿಹೋದ. ಅವನನ್ನ ಸಮಾರ್ಯದಲ್ಲಿದ್ದ ಇಸ್ರಾಯೇಲ್ ರಾಜರ ಸಮಾಧಿಯಲ್ಲಿ ಹೂಣಿಟ್ರು.+ ಅವನ ನಂತ್ರ ಯಾರೊಬ್ಬಾಮ*+ ಸಿಂಹಾಸನ ಏರಿದ.
14 ಎಲೀಷ+ ತುಂಬ ಹುಷಾರಿಲ್ಲದೆ ಸ್ವಲ್ಪ ದಿನದಲ್ಲಿ ತೀರಿಹೋದ. ಅವನಿಗೆ ಹುಷಾರಿಲ್ಲದೆ ಇದ್ದಾಗ ಇಸ್ರಾಯೇಲ್ ರಾಜ ಯೆಹೋವಾಷ ಅವನ ಹತ್ರ ಬಂದು “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರಾಯೇಲಿನ ರಥ ಮತ್ತು ಕುದುರೆಸವಾರರು ನಮಗೆ ಬೇಕು!” ಅನ್ನುತ್ತಾ ಅವನಿಗಾಗಿ ಅತ್ತ.+ 15 ಆಗ ಎಲೀಷ “ಬಿಲ್ಲನ್ನ, ಬಾಣಗಳನ್ನ ತಗೊ” ಅಂದ. ಯೆಹೋವಾಷ ಬಿಲ್ಲನ್ನ, ಬಾಣಗಳನ್ನ ತಗೊಂಡ. 16 ಎಲೀಷ ಇಸ್ರಾಯೇಲ್ ರಾಜನಿಗೆ “ಬಿಲ್ಲನ್ನ ನಿನ್ನ ಕೈಯಲ್ಲಿ ತಗೊ” ಅಂದ. ಆಗ ಅವನು ಬಿಲ್ಲು ತಗೊಂಡ. ಆಮೇಲೆ ಎಲೀಷ ತನ್ನ ಕೈಗಳನ್ನ ರಾಜನ ಕೈಗಳ ಮೇಲೆ ಇಟ್ಟ. 17 ಎಲೀಷ “ಪೂರ್ವದ ಕಡೆಗಿರೋ ಕಿಟಕಿ ತೆರಿ” ಅಂದಾಗ ಅದನ್ನ ತೆರೆದ. ಆಮೇಲೆ ಎಲೀಷ “ಬಾಣ ಹೊಡಿ!” ಅಂದ. ಆಗ ಅವನು ಹೊಡೆದ. ಆಗ ಎಲೀಷ “ಅದು ಯೆಹೋವನ ವಿಜಯದ* ಬಾಣ! ಅದು ಅರಾಮ್ಯರನ್ನ ಸೋಲಿಸೋ ಬಾಣ! ಅರಾಮ್ಯರು ಪೂರ್ಣವಾಗಿ ನಾಶವಾಗೋ ತನಕ ನೀನು ಅವ್ರ ಜೊತೆ ಅಫೇಕಲ್ಲಿ+ ಯುದ್ಧ ಮಾಡ್ತೀಯ” ಅಂದ.
18 ಆಮೇಲೆ ಎಲೀಷ “ಬಾಣಗಳನ್ನ ತಗೊ” ಅಂದ. ಆಗ ಯೆಹೋವಾಷ ಬಾಣಗಳನ್ನ ತಗೊಂಡ. ಎಲೀಷ ಅವನಿಗೆ “ನೆಲಕ್ಕೆ ಅವುಗಳನ್ನ ಹೊಡಿ” ಅಂದ. ಆಗ ಅವನು ನೆಲಕ್ಕೆ ಮೂರು ಸಲ ಹೊಡೆದು ಸುಮ್ಮನಾದ. 19 ಆಗ ಸತ್ಯ ದೇವರ ಮನುಷ್ಯನಿಗೆ ಕೋಪ ಬಂತು. “ನೀನು ನೆಲಕ್ಕೆ ಐದು ಅಥವಾ ಆರು ಸಾರಿ ಹೊಡಿಬೇಕಿತ್ತು! ಹಾಗೆ ಮಾಡಿದ್ರೆ ಅರಾಮ್ಯರು ಪೂರ್ಣವಾಗಿ ನಾಶವಾಗೋ ತನಕ ನೀನು ಅವ್ರ ಜೊತೆ ಯುದ್ಧ ಮಾಡ್ತಿದ್ದೆ. ಆದ್ರೆ ಈಗ ಅರಾಮ್ಯರನ್ನ ಮೂರು ಸಲ ಮಾತ್ರ ಸೋಲಿಸ್ತೀಯ”+ ಅಂದ.
20 ಎಲೀಷ ತೀರಿಹೋದ, ಅವನನ್ನ ಸಮಾಧಿ ಮಾಡಿದ್ರು. ಮೋವಾಬಿನ ಲೂಟಿಗಾರರ ಗುಂಪುಗಳು+ ವರ್ಷದ ಆರಂಭದಲ್ಲಿ* ದೇಶಕ್ಕೆ ಬರ್ತಿದ್ರು. 21 ಒಂದಿನ ಜನ ಒಬ್ಬ ಸತ್ತ ವ್ಯಕ್ತಿಯನ್ನ ಸಮಾಧಿ ಮಾಡೋಕೆ ಬಂದಿದ್ರು. ಆಗ ಅವರು ಆ ಲೂಟಿಗಾರರ ಗುಂಪೊಂದನ್ನ ನೋಡಿದ ತಕ್ಷಣ ಆ ಶವವನ್ನ ಎಲೀಷನನ್ನ ಸಮಾಧಿ ಮಾಡಿದ್ದ ಸ್ಥಳಕ್ಕೆ ಎಸೆದು ಓಡಿಹೋದ್ರು. ಆ ವ್ಯಕ್ತಿಯ ಶವ ಎಲೀಷನ ಮೂಳೆಗಳಿಗೆ ತಾಗಿ ಅವನಿಗೆ ಜೀವಬಂದು+ ಎದ್ದುನಿಂತ.
22 ಅರಾಮ್ಯರ ರಾಜ ಹಜಾಯೇಲ+ ಯೆಹೋವಾಹಾಜ ರಾಜನಾಗಿದ್ದ ಕಾಲದಲ್ಲೆಲ್ಲ ಇಸ್ರಾಯೇಲ್ಯರ ಮೇಲೆ ದಬ್ಬಾಳಿಕೆ ಮಾಡಿದ.+ 23 ಆದ್ರೆ ಯೆಹೋವ ಅಬ್ರಹಾಮ,+ ಇಸಾಕ+ ಮತ್ತು ಯಾಕೋಬರ+ ಜೊತೆ ಮಾಡ್ಕೊಂಡಿದ್ದ ಒಪ್ಪಂದದ ಸಲುವಾಗಿ ಇಸ್ರಾಯೇಲ್ಯರ ಮೇಲೆ ಕೃಪೆ, ದಯೆ ಮತ್ತು ಕಾಳಜಿ ತೋರಿಸಿದ.+ ಅವ್ರನ್ನ ನಾಶ ಮಾಡೋಕೆ ಬಯಸಲಿಲ್ಲ. ಈ ದಿನದ ತನಕ ಅವ್ರನ್ನ ತನ್ನ ಸಾನಿಧ್ಯದಿಂದ ತಳ್ಳಿಹಾಕಿಲ್ಲ. 24 ಅರಾಮ್ಯರ ರಾಜ ಹಜಾಯೇಲ ತೀರಿಹೋದಾಗ ಅವನ ಸ್ಥಾನದಲ್ಲಿ ಅವನ ಮಗ ಬೆನ್ಹದದ ರಾಜನಾದ. 25 ರಾಜ ಯೆಹೋವಾಹಾಜನ ವಿರುದ್ಧ ಯುದ್ಧಮಾಡಿ ರಾಜ ಹಜಾಯೇಲ ಪಟ್ಟಣಗಳನ್ನ ತಗೊಂಡಿದ್ದ. ಆ ಪಟ್ಟಣಗಳನ್ನ ಯೆಹೋವಾಹಾಜನ ಮಗ ಯೆಹೋವಾಷ ಹಜಾಯೇಲನ ಮಗ ಬೆನ್ಹದದನಿಂದ ವಾಪಸ್ ಪಡ್ಕೊಂಡ. ಯೆಹೋವಾಷ ಮೂರು ಸಲ ಅವನ ಜೊತೆ ಯುದ್ಧಮಾಡಿ ಇಸ್ರಾಯೇಲಿನ ಆ ಪಟ್ಟಣಗಳನ್ನ ಮತ್ತೆ ವಶ ಮಾಡ್ಕೊಂಡ.+