ಒಂದನೇ ಸಮುವೇಲ
25 ಸ್ವಲ್ಪ ಸಮಯ ಆದ್ಮೇಲೆ ಸಮುವೇಲ+ ತೀರಿಹೋದ. ಅವನಿಗೋಸ್ಕರ ಗೋಳಾಡೋಕೆ, ರಾಮದಲ್ಲಿದ್ದ ಅವನ ಮನೆ ಹತ್ರ+ ಅವನನ್ನ ಸಮಾಧಿ ಮಾಡೋಕೆ ಎಲ್ಲ ಇಸ್ರಾಯೇಲ್ಯರು ಸೇರಿಬಂದ್ರು. ಆಮೇಲೆ ದಾವೀದ ಪಾರಾನಿನ ಕಾಡಿಗೆ ಹೋದ.
2 ಮಾವೋನಿನಲ್ಲಿ+ ಒಬ್ಬ ಮನುಷ್ಯ ಇದ್ದ. ಅವನು ಕರ್ಮೆಲಲ್ಲಿ*+ ಕೆಲಸ ಮಾಡ್ತಿದ್ದ, ತುಂಬ ಶ್ರೀಮಂತ. ಅವನ ಹತ್ರ 3,000 ಕುರಿ 1,000 ಆಡು ಇತ್ತು. ಆ ಸಮಯದಲ್ಲಿ ಅವನು ಕರ್ಮೆಲಲ್ಲಿ ಕುರಿಗಳ ಉಣ್ಣೆಯನ್ನ ಕತ್ತರಿಸ್ತಿದ್ದ. 3 ಅವನ ಹೆಸ್ರು ನಾಬಾಲ.+ ಅವನು ಕಾಲೇಬನ ವಂಶದವನಾಗಿದ್ದ.+ ಅವನ ಹೆಂಡತಿ ಹೆಸ್ರು ಅಬೀಗೈಲ್.+ ಅವಳು ತುಂಬಾ ಜಾಣೆ, ನೋಡೋಕೆ ಸುಂದರವಾಗಿದ್ದಳು. ಆದ್ರೆ ಗಂಡ ತುಂಬ ಒರಟು. ಕೆಟ್ಟದಾಗಿ ನಡ್ಕೊಳ್ಳೋ ವ್ಯಕ್ತಿ.+ 4 ನಾಬಾಲ ಕುರಿಗಳ ಉಣ್ಣೆ ಕತ್ತರಿಸ್ತಾ ಇದ್ದಾನೆ ಅನ್ನೋ ಸುದ್ದಿ ಕಾಡಲ್ಲಿದ್ದ ದಾವೀದನ ಕಿವಿಗೆ ಬಿತ್ತು. 5 ಹಾಗಾಗಿ ದಾವೀದ 10 ಯುವಕರನ್ನ ಕಳಿಸಿ ಅವ್ರಿಗೆ “ನೀವು ಕರ್ಮೆಲಿನ ತನಕ ಹೋಗಿ ನಾಬಾಲನನ್ನ ನೋಡಿದಾಗ ನನ್ನ ಹೆಸ್ರಲ್ಲಿ ಅವನು ಹೇಗಿದ್ದಾನೆ ಅಂತ ವಿಚಾರಿಸಿ. 6 ಆಮೇಲೆ ಅವನಿಗೆ ‘ನೀನು ತುಂಬ ವರ್ಷ ಬದುಕು ಮತ್ತು ಚೆನ್ನಾಗಿರು.* ನಿನ್ನ ಕುಟುಂಬದವ್ರಿಗೆಲ್ಲ ಒಳ್ಳೇದಾಗ್ಲಿ, ನಿನ್ನ ಹತ್ರ ಇರೋದೆಲ್ಲ ಚೆನ್ನಾಗಿರಲಿ. 7 ನೀನು ಕುರಿಗಳ ಉಣ್ಣೆ ಕತ್ತರಿಸ್ತಿದ್ದೀಯ ಅಂತ ಕೇಳಿಸ್ಕೊಂಡೆ. ನಿನ್ನ ಕುರುಬರು ನಮ್ಮ ಜೊತೆ ಇದ್ದಾಗ ನಾವು ಅವ್ರಿಗೆ ಹಾನಿ ಮಾಡಲಿಲ್ಲ.+ ಅವರು ಕರ್ಮೆಲಲ್ಲಿದ್ದ ಸಮಯದಲ್ಲೆಲ್ಲ ಏನನ್ನೂ ಕಳ್ಕೊಳ್ಳಲಿಲ್ಲ. 8 ಬೇಕಾದ್ರೆ ನಿನ್ನ ಯುವಕರನ್ನ ಕೇಳಿ ನೋಡು, ಅವರು ಹೇಳ್ತಾರೆ. ನನ್ನ ಯುವಕರನ್ನ ದಯೆಯಿಂದ ಬರಮಾಡ್ಕೊ. ಯಾಕಂದ್ರೆ ನಾವು ಸಂತೋಷದ ಸಮಯದಲ್ಲಿ* ಬಂದಿದ್ದೀವಿ. ದಯವಿಟ್ಟು ನಿನ್ನ ಸೇವಕರಿಗೆ, ನಿನ್ನ ಮಗ ದಾವೀದನಿಗೆ ನಿನ್ನ ಕೈಲಾದದ್ದನ್ನ ಕೊಡು’ ಅಂತ ಹೇಳಿ”+ ಅಂದ.
9 ಆಗ ಯುವಕರು ಹೋಗಿ ದಾವೀದ ಹೇಳಿದ್ದನ್ನೆಲ್ಲ ಅವನ ಹೆಸ್ರಲ್ಲಿ ನಾಬಾಲನಿಗೆ ಹೇಳಿದ್ರು. 10 ನಾಬಾಲ ದಾವೀದನ ಸೇವಕರಿಗೆ “ದಾವೀದ ಯಾರು? ಇಷಯನ ಮಗ ಯಾರು? ಇತ್ತೀಚೆಗೆ ತುಂಬ ಸೇವಕರು ತಮ್ಮ ಯಜಮಾನರನ್ನ ಬಿಟ್ಟು ಓಡಿಹೋಗ್ತಿದ್ದಾರೆ.+ 11 ನನ್ನ ಕುರಿಗಳ ಉಣ್ಣೆ ಕತ್ತರಿಸುವವರಿಗಾಗಿ ಸಿದ್ಧಮಾಡಿರೋ ಆಹಾರ, ನೀರು ಮತ್ತು ಮಾಂಸವನ್ನ ಯಾರಿಗೋ ನಾನು ಕೊಡಬೇಕಾ?” ಅಂದ.
12 ಆಗ ದಾವೀದನ ಯುವಕರು ವಾಪಸ್ ಹೋಗಿ ಈ ಮಾತುಗಳನ್ನೆಲ್ಲ ಅವನಿಗೆ ಹೇಳಿದ್ರು. 13 ತಕ್ಷಣ ದಾವೀದ ತನ್ನ ಗಂಡಸ್ರಿಗೆ “ಎಲ್ರೂ ನಿಮ್ಮನಿಮ್ಮ ಕತ್ತಿ ಕಟ್ಕೊಳ್ಳಿ!”+ ಅಂದ. ಆಗ ಎಲ್ರೂ ತಮ್ಮತಮ್ಮ ಕತ್ತಿಗಳನ್ನ ಸೊಂಟಕ್ಕೆ ಕಟ್ಕೊಂಡ್ರು ಮತ್ತು ದಾವೀದ ಕೂಡ ಕಟ್ಕೊಂಡ. ದಾವೀದನ ಜೊತೆ ಸುಮಾರು 400 ಗಂಡಸ್ರು ಹೋದ್ರು. ಬೇರೆ 200 ಗಂಡಸ್ರು ವಸ್ತುಗಳನ್ನ ಕಾಯ್ತಿದ್ರು.
14 ಇದೆಲ್ಲದ್ರ ಮಧ್ಯ ಸೇವಕರಲ್ಲೊಬ್ಬ ಬಂದು ನಾಬಾಲನ ಹೆಂಡತಿ ಅಬೀಗೈಲಳಿಗೆ “ನೋಡು, ಯಜಮಾನನ ಕ್ಷೇಮ ವಿಚಾರಿಸೋಕೆ ದಾವೀದ ಕಾಡಿಂದ ಸಂದೇಶವಾಹಕರನ್ನ ಕಳಿಸಿದ್ದ. ಆದ್ರೆ ಯಜಮಾನ ಅವ್ರಿಗೆ ಅವಮಾನ ಮಾಡ್ತಾ ಜೋರಾಗಿ ಕೂಗಾಡಿದ.+ 15 ಆ ಗಂಡಸ್ರು ನಮ್ಮ ಜೊತೆ ತುಂಬ ಚೆನ್ನಾಗಿ ನಡ್ಕೊಂಡಿದ್ರು. ಅವರು ಯಾವತ್ತೂ ನಮಗೆ ಹಾನಿ ಮಾಡಲಿಲ್ಲ. ನಾವು ಅವ್ರ ಜೊತೆ ಕಾಡಲ್ಲಿದ್ದಾಗ ನಮ್ಮ ಒಂದು ವಸ್ತು ಕೂಡ ಕಳೆದು ಹೋಗಲಿಲ್ಲ.+ 16 ನಾವು ಅವ್ರ ಜೊತೆ ಇದ್ದು ಕುರಿ ಕಾಯ್ತಿದ್ದಾಗ ಹಗಲು ರಾತ್ರಿಯೆನ್ನದೆ ಅವರು ನಮ್ಮ ಸುತ್ತ ಗೋಡೆ ತರ ಇದ್ದು ಕಾಪಾಡಿದ್ರು. 17 ಈಗ ಮುಂದೆ ಏನು ಮಾಡಬೇಕು ಅಂತ ನೀನೇ ತೀರ್ಮಾನಿಸು. ನಮ್ಮ ಯಜಮಾನನ ಮೇಲೂ ಮತ್ತು ಅವನ ಮನೆಯವ್ರ ಮೇಲೂ ದೊಡ್ಡ ಕಷ್ಟ ಬರುತ್ತೆ.+ ನಮ್ಮ ಯಜಮಾನ ಎಷ್ಟು ಅಯೋಗ್ಯ+ ಅಂದ್ರೆ* ಅವನ ಜೊತೆ ಯಾರಿಗೂ ಮಾತಾಡೋಕೆ ಆಗಲ್ಲ” ಅಂದ.
18 ತಕ್ಷಣ ಅಬೀಗೈಲ್+ 200 ರೊಟ್ಟಿ, ಎರಡು ದೊಡ್ಡ ಜಾಡಿಗಳಲ್ಲಿ ದ್ರಾಕ್ಷಾಮದ್ಯ, ಈಗಾಗ್ಲೇ ಕತ್ತರಿಸಿ ಸಿದ್ಧಪಡಿಸಿದ ಐದು ಕುರಿ, ಐದು ಸೆಯಾ ಅಳತೆಯ* ಸುಟ್ಟ ಧಾನ್ಯ, ಒಣದ್ರಾಕ್ಷಿಯ 100 ಬಿಲ್ಲೆ ಮತ್ತು ಜಜ್ಜಿರೋ ಅಂಜೂರದ 200 ಬಿಲ್ಲೆ ತಗೊಂಡು ಅವುಗಳನ್ನೆಲ್ಲ ಕತ್ತೆಗಳ ಮೇಲೆ ಇಟ್ಟಳು.+ 19 ಆಮೇಲೆ ತನ್ನ ಸೇವಕರಿಗೆ “ನೀವು ಮುಂದೆ ಹೋಗಿ, ನಾನು ನಿಮ್ಮ ಹಿಂದೆ ಬರ್ತಿನಿ” ಅಂದಳು. ಆದ್ರೆ ತನ್ನ ಗಂಡ ನಾಬಾಲನಿಗೆ ಏನೂ ಹೇಳಲಿಲ್ಲ.
20 ಅವಳು ಕತ್ತೆ ಮೇಲೇರಿ ಬೆಟ್ಟದ ಮರೆಯಲ್ಲಿ ಇಳಿದು ಬರ್ತಿದ್ದಾಗ ದಾವೀದ, ಅವನ ಗಂಡಸ್ರು ಮುಂದೆ ಸಿಕ್ಕಿದ್ರು. ಆಗ ಅವಳು ಅವ್ರನ್ನ ಭೇಟಿಯಾದಳು. 21 ಅದಕ್ಕೂ ಮುಂಚೆ ದಾವೀದ “ಈ ವ್ಯಕ್ತಿಗೆ ಸೇರಿದ ಎಲ್ಲವನ್ನ ಕಾಡಲ್ಲಿ ಕಾಪಾಡಿದ್ದು ವ್ಯರ್ಥ ಆಯ್ತು. ಅವನಿಗೆ ಸೇರಿದ ಒಂದೇ ಒಂದು ವಸ್ತು ಸಹ ಕಳೆದುಹೋಗಲಿಲ್ಲ.+ ಆದ್ರೆ ಅವನು ಒಳ್ಳೇದು ಮಾಡೋ ಬದ್ಲು ಕೆಟ್ಟದು ಮಾಡ್ತಿದ್ದಾನೆ”+ ಅಂತ ಹೇಳ್ತಿದ್ದ. 22 “ಬೆಳಗಾಗುವಷ್ಟರಲ್ಲಿ ನಾನು ಅವನ ಮನೆಯಲ್ಲಿರೋ ಒಬ್ಬ ಗಂಡಸನ್ನೂ* ಉಳಿಸಲ್ಲ, ಉಳಿಸಿದ್ರೆ ದೇವರು ದಾವೀದನ ಶತ್ರುಗಳನ್ನ* ಕಠಿಣವಾಗಿ ಶಿಕ್ಷಿಸಲಿ” ಅಂದ.
23 ಅಬೀಗೈಲ್ ದಾವೀದನನ್ನ ನೋಡಿದ ತಕ್ಷಣ ಕತ್ತೆ ಮೇಲಿಂದ ಬೇಗಬೇಗ ಇಳಿದು ದಾವೀದನ ಮುಂದೆ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದಳು. 24 ಆಮೇಲೆ ದಾವೀದನ ಕಾಲಿಗೆ ಬಿದ್ದು: “ನನ್ನ ಒಡೆಯನೇ, ನಡೆದ ಅಪರಾಧ ನನ್ನ ಮೇಲಿರಲಿ. ನಿನ್ನ ಸೇವಕಿಗೆ ಮಾತಾಡೋದಕ್ಕೆ ಅಪ್ಪಣೆ ಕೊಡು. ನಿನ್ನ ಸೇವಕಿ ಹೇಳೋದನ್ನ ಕೇಳು. 25 ದಯವಿಟ್ಟು, ನನ್ನ ಒಡೆಯನ ಗಮನ ಅಯೋಗ್ಯನಾಗಿರೋ ಆ ನಾಬಾಲನ+ ಮೇಲೆ ಹೋಗದಿರಲಿ. ಅವನು ನಾಬಾಲ* ಅನ್ನೋ ತನ್ನ ಹೆಸ್ರಿಗೆ ತಕ್ಕ ಹಾಗೆ ಇದ್ದಾನೆ. ಮೂರ್ಖತನ ಅನ್ನೋದು ಅವನ ಜೊತೆನೇ ಇದೆ. ನನ್ನ ಒಡೆಯನ ಯುವಕರು ಬಂದಾಗ ನಾನು ಅಲ್ಲಿ ಇರ್ಲಿಲ್ಲ. 26 ಹಾಗಾಗಿ ನನ್ನ ಒಡೆಯನೇ, ಜೀವ ಇರೋ ದೇವರಾದ ಯೆಹೋವನ ಆಣೆ ಮತ್ತು ನಿನ್ನಾಣೆ, ಇವತ್ತು ರಕ್ತಾಪರಾಧ+ ನಿನ್ನ ಮೇಲೆ ಬರದ ಹಾಗೆ, ನಿನ್ನ ಸ್ವಂತ ಕೈಯಿಂದ ಸೇಡು ತೀರಿಸದ ಹಾಗೆ* ಯೆಹೋವನೇ ನಿನ್ನನ್ನ ತಡೆದಿದ್ದಾನೆ.+ ನನ್ನ ಒಡೆಯನ ಶತ್ರುಗಳು, ನನ್ನ ಒಡೆಯನಿಗೆ ಹಾನಿ ಮಾಡುವವರು ನಾಬಾಲನ ತರ ಆಗಲಿ. 27 ನಾನು ನನ್ನ ಒಡೆಯನಿಗಾಗಿ ತಂದಿರೋ ಈ ಉಡುಗೊರೆ*+ ನನ್ನ ಒಡೆಯನನ್ನ ಹಿಂಬಾಲಿಸೋ ಯುವಕರಿಗೆ ಸಲ್ಲಲಿ.+ 28 ದಯವಿಟ್ಟು ಈ ಸೇವಕಿಯ ಅಪರಾಧವನ್ನ ಕ್ಷಮಿಸು. ಯೆಹೋವ ನನ್ನ ಒಡೆಯನ ಮನೆಯನ್ನ ತಪ್ಪದೆ ತುಂಬ ವರ್ಷ ಸ್ಥಿರಪಡಿಸ್ತಾನೆ.+ ಯಾಕಂದ್ರೆ ನನ್ನ ಒಡೆಯ ಯೆಹೋವನಿಗಾಗಿ ಯುದ್ಧಗಳನ್ನ ಮಾಡ್ತಾನೆ.+ ಇಲ್ಲಿ ತನಕ ನೀನು ಕೆಟ್ಟದು ಮಾಡಿಲ್ಲ.+ 29 ಯಾರಾದ್ರೂ ನಿನ್ನನ್ನ ಬೆನ್ನಟ್ಟಿ ನಿನ್ನ ಜೀವ ತೆಗಿಯೋಕೆ ಬಂದ್ರೆ ನಿನ್ನ ದೇವರಾದ ಯೆಹೋವ ತನ್ನ ಹತ್ರ ಇರೋ ಜೀವದ ಚೀಲದಲ್ಲಿ ನಿನ್ನ ಪ್ರಾಣವನ್ನ ಸುರಕ್ಷಿತವಾಗಿ ಸುತ್ತಿಡ್ತಾನೆ. ಆದ್ರೆ ಆತನು ನಿನ್ನ ಶತ್ರುಗಳ ಪ್ರಾಣವನ್ನ ಕವಣೆಯಿಂದ ಕಲ್ಲನ್ನ ಎಸಿಯೋ ತರ ಎಸೆದುಬಿಡ್ತಾನೆ. 30 ಯೆಹೋವ ನಿನಗೆ ಮಾತು ಕೊಟ್ಟ ಎಲ್ಲ ಒಳ್ಳೇ ವಿಷ್ಯಗಳನ್ನ ಆತನು ಮಾಡುವಾಗ, ನಿನ್ನನ್ನ ಇಸ್ರಾಯೇಲಿನ ಮೇಲೆ ನಾಯಕನಾಗಿ ನೇಮಿಸುವಾಗ,+ 31 ಯಾವುದೇ ರೀತಿಯ ದುಃಖ ಅಥವಾ ವಿಷಾದ* ನಿನ್ನ ಹೃದಯದಲ್ಲಿ ಇರಲ್ಲ. ಯಾಕಂದ್ರೆ ನೀನು ಕಾರಣ ಇಲ್ಲದೆ ನಿರಪರಾಧಿಯ ರಕ್ತ ಸುರಿಸಿರಲ್ಲ, ನಿನ್ನ ಕೈಯಾರೆ ಸೇಡು ತೀರಿಸಿರಲ್ಲ.*+ ಯೆಹೋವ ನನ್ನ ಒಡೆಯನಿಗೆ ಒಳ್ಳೇದನ್ನ ಮಾಡಿದಾಗ ನಿನ್ನ ಈ ಸೇವಕಿಯನ್ನ ದಯವಿಟ್ಟು ನೆನಪಿಸ್ಕೊ” ಅಂದಳು.
32 ಅದಕ್ಕೆ ದಾವೀದ ಅಬೀಗೈಲಳಿಗೆ “ಇವತ್ತು ನನ್ನನ್ನ ಭೇಟಿಯಾಗೋಕೆ ನಿನ್ನನ್ನ ಕಳಿಸಿದ ಇಸ್ರಾಯೇಲ್ ದೇವರಾದ ಯೆಹೋವನಿಗೆ ಹೊಗಳಿಕೆ ಆಗಲಿ! 33 ನಿನಗಿರೋ ಬುದ್ಧಿಗೆ, ಇವತ್ತು ನನ್ನಿಂದ ರಕ್ತಾಪರಾಧ+ ಆಗದ ಹಾಗೆ ನನ್ನ ಕೈಯಾರೆ ಸೇಡು ತೀರಿಸದ ಹಾಗೆ* ನೀನು ತಡೆದಿದ್ದಕ್ಕೆ ದೇವರು ನಿನಗೆ ಆಶೀರ್ವಾದ ಮಾಡ್ಲಿ. 34 ನಿನಗೆ ಹಾನಿಮಾಡದ ಹಾಗೆ ನನ್ನನ್ನ ತಡೆದ+ ಇಸ್ರಾಯೇಲಿನ ಜೀವ ಇರೋ ದೇವರಾದ ಯೆಹೋವನ ಆಣೆ, ನೀನು ನನ್ನನ್ನ ಭೇಟಿಯಾಗೋಕೆ ಬೇಗ ಬಂದಿರಲಿಲ್ಲ+ ಅಂದ್ರೆ ಬೆಳಿಗ್ಗೆ ಆಗೋಷ್ಟರಲ್ಲಿ ನಾಬಾಲನಿಗೆ ಸೇರಿದ ಒಬ್ಬ ಗಂಡಸೂ* ಉಳಿತಿರಲಿಲ್ಲ”+ ಅಂದ. 35 ಹೀಗೆ ಹೇಳಿ ಅವಳು ತನಗೋಸ್ಕರ ತಂದಿದ್ದನ್ನ ದಾವೀದ ಸ್ವೀಕರಿಸಿದ. ಆಮೇಲೆ ಅವಳಿಗೆ “ನೀನು ಸಮಾಧಾನವಾಗಿ ಮನೆಗೆ ಹೋಗು. ನಾನು ನಿನ್ನ ಬಿನ್ನಹ ಕೇಳಿಸ್ಕೊಂಡಿದ್ದೀನಿ, ಅದನ್ನ ಒಪ್ಕೊಂಡಿದ್ದೀನಿ” ಅಂದ.
36 ಅಬೀಗೈಲ್ ನಾಬಾಲನ ಹತ್ರ ವಾಪಸ್ ಬಂದಾಗ ಅವನು ಮನೇಲಿ ರಾಜನ ತರ ಔತಣ ಮಾಡ್ತಾ ಇದ್ದ. ನಾಬಾಲ* ಸಂತೋಷದ ಲಹರಿಯಲ್ಲಿದ್ದ. ಅವನು ಕಂಠಪೂರ್ತಿ ಕುಡಿದಿದ್ದ. ಅದಕ್ಕೇ ಅವಳು ಬೆಳಗಾಗೋ ತನಕ ಅವನಿಗೆ ಏನೂ ಹೇಳಲಿಲ್ಲ. 37 ಬೆಳಿಗ್ಗೆ ನಾಬಾಲನ ಅಮಲೆಲ್ಲ ಇಳಿದ ಮೇಲೆ ಅವಳು ಅವನಿಗೆ ಈ ವಿಷ್ಯಗಳನ್ನ ಹೇಳಿದಳು. ಆಗ ಅವನ ಹೃದಯ ಸತ್ತ ಮನುಷ್ಯನ ಹೃದಯದ ತರ ಆಯ್ತು. ಲಕ್ವ ಹೊಡೆದು ಅವನು ಕಲ್ಲಿನ ತರ ಬಿದ್ದ. 38 ಸುಮಾರು 10 ದಿನ ಆದ್ಮೇಲೆ ನಾಬಾಲ ಯೆಹೋವನ ಕೈಯಿಂದ ಸತ್ತು ಹೋದ.
39 ನಾಬಾಲ ಸತ್ತು ಹೋದ ಅನ್ನೋ ವಿಷ್ಯ ದಾವೀದನ ಕಿವಿಗೆ ಬಿದ್ದಾಗ “ನನ್ನನ್ನ ಅವಮಾನಿಸಿದ ನಾಬಾಲನಿಂದ+ ನ್ಯಾಯ ದೊರಕಿಸಿ ಕೊಟ್ಟ ಯೆಹೋವನನ್ನ+ ಎಲ್ರೂ ಹೊಗಳಿ! ಆತನು ತನ್ನ ಸೇವಕ ಯಾವುದೇ ರೀತಿಯಲ್ಲಿ ತಪ್ಪುಮಾಡದ ಹಾಗೆ ಕಾಪಾಡಿದ್ದಾನೆ.+ ಯೆಹೋವ ನಾಬಾಲನ ಕೆಟ್ಟತನವನ್ನ ಅವನ ತಲೆ ಮೇಲೇ ತಂದಿದ್ದಾನೆ!” ಅಂದ. ದಾವೀದ ಅಬೀಗೈಲಳನ್ನ ತನ್ನ ಹೆಂಡತಿಯಾಗಿ ಸ್ವೀಕರಿಸೋಕೆ ಇಷ್ಟಪಡ್ತೀನಿ ಅನ್ನೋ ಸಂದೇಶವನ್ನ ಅವಳಿಗೆ ಕಳಿಸಿದ. 40 ದಾವೀದನ ಸೇವಕರು ಕರ್ಮೆಲಿನಲ್ಲಿರೋ ಅಬೀಗೈಲಳ ಹತ್ರ ಬಂದು “ದಾವೀದ ನಿನ್ನನ್ನ ತನ್ನ ಹೆಂಡತಿಯಾಗಿ ಸ್ವೀಕರಿಸೋಕೆ ನಮ್ಮನ್ನ ನಿನ್ನ ಹತ್ರ ಕಳಿಸಿದ್ದಾನೆ” ಅಂದ್ರು. 41 ಅವಳು ತಕ್ಷಣ ಎದ್ದು, ಮಂಡಿಯೂರಿ ನೆಲಕ್ಕೆ ಮುಖಮಾಡಿ ನಮಸ್ಕಾರ ಮಾಡಿ “ನಾನು ಒಬ್ಬ ದಾಸಿ ತರ ನನ್ನ ಒಡೆಯನ ಸೇವಕರ ಪಾದಗಳನ್ನ ತೊಳಿಯೋಕೆ+ ಸಿದ್ಧಳಾಗಿದ್ದೀನಿ” ಅಂದಳು. 42 ಆಮೇಲೆ ಅಬೀಗೈಲ್+ ಬೇಗ ಬಂದು ಕತ್ತೆ ಮೇಲೆ ಕೂತಳು. ಅವಳ ಐದು ಸೇವಕಿಯರು ಅವಳ ಹಿಂದೆನೇ ನಡಿತಾ ಹೋದ್ರು. ಅಬೀಗೈಲ್ ದಾವೀದನ ಸಂದೇಶವಾಹಕರ ಜೊತೆ ಬಂದು ದಾವೀದನ ಹೆಂಡತಿ ಆದಳು.
43 ದಾವೀದ ಇಜ್ರೇಲಿನವಳಾದ+ ಅಹೀನೋವಮಳನ್ನೂ+ ಮದುವೆ ಮಾಡ್ಕೊಂಡಿದ್ದ. ಅವರಿಬ್ರೂ ಅವನ ಹೆಂಡತಿಯರಾದ್ರು.+
44 ಆದ್ರೆ ಸೌಲ ತನ್ನ ಮಗಳು ಮತ್ತು ದಾವೀದನ ಹೆಂಡತಿ ಆಗಿದ್ದ ಮೀಕಲಳನ್ನ+ ಲಯಿಷನ ಮಗ ಪಲ್ಟೀ+ ಅನ್ನುವವನಿಗೆ ಮದುವೆ ಮಾಡಿ ಕೊಟ್ಟಿದ್ದ. ಇವನು ಗಲ್ಲೀಮ್ ಊರಿನವನಾಗಿದ್ದ.