ಯೆಶಾಯ
63 ಎದೋಮಿಂದ ಬರ್ತಿರೋ ಇವನು ಯಾರು?+
ಬಣ್ಣಬಣ್ಣದ* ವಸ್ತ್ರಗಳನ್ನ ಹಾಕಿ ಬೊಚ್ರದಿಂದ+ ಬರ್ತಿರೋ ಇವನು ಯಾರು?
ವೈಭವಯುತ ವಸ್ತ್ರಗಳನ್ನ ಹಾಕಿ,
ಮಹಾಬಲದಿಂದ ನಡೆದು ಬರ್ತಿರೋ ಇವನು ಯಾರು?
“ಅವನು ಬೇರೆ ಯಾರೂ ಅಲ್ಲ, ನೀತಿಯಿಂದ ಮಾತಾಡುವವನೂ,
ಮಹಾಬಲದಿಂದ ರಕ್ಷಿಸುವವನೂ ಆಗಿರುವ ನಾನೇ.”
2 ನಿನ್ನ ಬಟ್ಟೆ ಯಾಕೆ ಕೆಂಪಾಗಿದೆ?
ನಿನ್ನ ಬಟ್ಟೆ ಯಾಕೆ ದ್ರಾಕ್ಷಿತೊಟ್ಟಿಯಲ್ಲಿ ದ್ರಾಕ್ಷಿಗಳನ್ನ ತುಳಿಯುವವರ ಬಟ್ಟೆ ತರ ಇದೆ?+
3 “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ದ್ರಾಕ್ಷಿಗಳನ್ನ ತುಳಿದೆ.
ಜನಾಂಗಗಳ ಜನ್ರಲ್ಲಿ ನನ್ನ ಜೊತೆ ಯಾರೂ ಇರಲಿಲ್ಲ.
ನಾನು ಕೋಪದಿಂದ ಶತ್ರುಗಳನ್ನ ತುಳಿತಾ ಇದ್ದೆ,
ನಾನು ಕ್ರೋಧದಿಂದ ಅವ್ರನ್ನ ಹೊಸಕಿಹಾಕ್ತಾ ಇದ್ದೆ.+
ಅವ್ರ ರಕ್ತ ನನ್ನ ಬಟ್ಟೆ ಮೇಲೆಲ್ಲ ಆಯ್ತು,
ಅದ್ರಿಂದ ನನ್ನ ಬಟ್ಟೆಯೆಲ್ಲ ಕಲೆ ಆಯ್ತು.
4 ಯಾಕಂದ್ರೆ ಸೇಡು ತೀರಿಸೋಕೆ ನಾನೊಂದು ದಿನವನ್ನ ಈಗಾಗಲೇ ನಿರ್ಣಯಿಸಿದ್ದೀನಿ,+
ಅಷ್ಟೇ ಅಲ್ಲ ನನ್ನ ಜನ್ರನ್ನ ಬಿಡಿಸ್ಕೊಂಡು ಬರೋ ವರ್ಷ ಹತ್ರ ಆಗಿದೆ.
5 ನಾನು ಆಕಡೆ ಈಕಡೆ ನೋಡಿದೆ, ಆದ್ರೆ ಸಹಾಯ ಮಾಡುವವರು ಯಾರೂ ಇರಲಿಲ್ಲ,
ಬೆಂಬಲಿಸೋಕೆ ಯಾರೂ ಮುಂದೆ ಬರಲಿಲ್ಲ, ಇದನ್ನ ನೋಡಿ ನನಗೆ ಆಶ್ಚರ್ಯ ಆಯ್ತು.
6 ನಾನು ಕೋಪದಲ್ಲಿ ಜನಾಂಗಗಳ ಜನ್ರನ್ನ ತುಳಿದುಹಾಕಿದೆ,
ಅವ್ರಿಗೆ ನನ್ನ ಕ್ರೋಧವನ್ನ ಕುಡಿಸಿ ಮತ್ತೇರಿಸಿದೆ,+
ಅವ್ರ ರಕ್ತವನ್ನ ನೆಲದ ಮೇಲೆ ಸುರಿದೆ.”
7 ಶಾಶ್ವತ ಪ್ರೀತಿಯಿಂದ ಯೆಹೋವ ಮಾಡಿದ ಕೆಲಸಗಳ ಬಗ್ಗೆ ನಾನು ಹೇಳ್ತೀನಿ,
ಹೊಗಳಿಕೆಗೆ ಅರ್ಹವಾಗಿರೋ ಯೆಹೋವನ ಕೆಲಸಗಳ ಬಗ್ಗೆ ನಾನು ಮಾತಾಡ್ತೀನಿ,
ಯಾಕಂದ್ರೆ ಯೆಹೋವ ನಮಗಾಗಿ ಎಷ್ಟೋ ವಿಷ್ಯಗಳನ್ನ ಮಾಡಿದ್ದಾನೆ.+
ಆತನು ಕರುಣೆಯಿಂದ, ಶಾಶ್ವತವಾದ ಮಹಾ ಪ್ರೀತಿಯಿಂದ
ಇಸ್ರಾಯೇಲ್ ಮನೆತನದವರಿಗಾಗಿ ತುಂಬ ಒಳ್ಳೇ ವಿಷ್ಯಗಳನ್ನ ಮಾಡಿದ್ದಾನೆ.
8 ಯಾಕಂದ್ರೆ “ಅವರು ನನ್ನ ಜನ್ರು, ನನಗೆ ನಂಬಿಕೆದ್ರೋಹ ಮಾಡದ* ನನ್ನ ಮಕ್ಕಳು”+ ಅಂತ ದೇವರು ಅಂದ್ಕೊಂಡನು.
ಹಾಗಾಗಿ ಆತನು ಅವ್ರ ರಕ್ಷಕನಾದನು.+
9 ಅವರು ಸಂಕಟದಲ್ಲಿದ್ದಾಗ ಆತನಿಗೂ ಸಂಕಟ ಆಯ್ತು.+
ಆತನ ಸ್ವಂತ ಸಂದೇಶವಾಹಕನೇ* ಅವ್ರನ್ನ ರಕ್ಷಿಸಿದನು.+
ತನ್ನ ಪ್ರೀತಿಯಿಂದಾಗಿ, ಕರುಣೆಯಿಂದಾಗಿ ಅವ್ರನ್ನ ಬಿಡುಗಡೆ ಮಾಡಿದನು.+
ಹಿಂದಿನ ಕಾಲದಿಂದನೂ ಆತನು ಅವ್ರನ್ನ ಎತ್ಕೊಂಡು ಹೊರ್ತಾ ಬಂದನು.+
10 ಆದ್ರೆ ಅವರು ಆತನ ವಿರುದ್ಧ ದಂಗೆ ಎದ್ದರು,+ ಆತನ ಪವಿತ್ರ ಶಕ್ತಿಯನ್ನ ದುಃಖಪಡಿಸಿದ್ರು.+
11 ಆಗ ಅವರು ಹಳೇ ದಿನಗಳನ್ನ,
ಅಂದ್ರೆ ಆತನ ಸೇವಕ ಮೋಶೆಯ ದಿನಗಳನ್ನ ನೆನಪಿಸ್ಕೊಂಡು ಹೀಗಂದ್ರು
“ತನ್ನ ಮಂದೆಯನ್ನ ಅದ್ರ ಕುರುಬನ ಜೊತೆ+ ಸಮುದ್ರದ ಮೂಲಕ ಹೊರಗೆ ಕರ್ಕೊಂಡು ಬಂದ ದೇವರು ಎಲ್ಲಿ?+
ಮೋಶೆ ಮೇಲೆ* ತನ್ನ ಪವಿತ್ರಶಕ್ತಿ ಸುರಿಸಿದ ದೇವರು ಎಲ್ಲಿ?+
12 ತನ್ನ ಮಹಿಮಾಭರಿತ ಬಾಹುವಿಂದ ಮೋಶೆಯ ಬಲಗೈಯನ್ನ ಹಿಡಿದ ದೇವರು ಎಲ್ಲಿ?+
13 ಬಯಲಲ್ಲಿ* ಕುದುರೆ ನಡೆದುಹೋಗೋ ಹಾಗೆ
ಉಕ್ಕೇರೋ ಸಮುದ್ರದ ಮಧ್ಯದಿಂದ
ಜನ ಮುಗ್ಗರಿಸದೆ ನಡೆದುಹೋಗೋ ತರ ಮಾಡಿದ ದೇವರು ಎಲ್ಲಿ?
14 ಕಣಿವೆ ಬಯಲಿಗೆ ಇಳಿದು ಹೋಗುವಾಗ ಪ್ರಾಣಿಗಳು ವಿಶ್ರಾಂತಿ ಪಡ್ಕೊಳ್ಳೋ ತರ,
ಯೆಹೋವನ ಪವಿತ್ರಶಕ್ತಿ ಅವ್ರಿಗೆ ವಿಶ್ರಾಂತಿ ಕೊಟ್ಟಿತು.”+
ನಿನ್ನ ಹೆಸ್ರಿನ ಘನತೆ, ಮಾನಕ್ಕಾಗಿ+
ನೀನು ನಿನ್ನ ಜನ್ರನ್ನ ಹೀಗೆ ಮುನ್ನಡೆಸಿದೆ.
15 ಸ್ವರ್ಗದಿಂದ ಕೆಳಗೆ ನೋಡು,
ಪವಿತ್ರವೂ ಮಹಿಮಾಭರಿತವೂ ಆಗಿರೋ ನಿನ್ನ ಎತ್ತರ ಸ್ಥಳದಿಂದ ನೋಡು.
ನೀನು ನಮಗೆ ಯಾಕೆ ಗಮನ ಕೊಡ್ತಿಲ್ಲ, ಯಾಕೆ ನಿನ್ನ ಬಲವನ್ನ ತೋರಿಸ್ತಿಲ್ಲ?
ಯಾಕೆ ನಿನಗೆ ನಮ್ಮ ಮೇಲೆ ಕನಿಕರವಾಗಲಿ+ ಕರುಣೆಯಾಗಲಿ ಹುಟ್ಟುತ್ತಿಲ್ಲ?+
ಯಾಕೆ ನೀನು ಅವುಗಳನ್ನ ನಮ್ಮಿಂದ ತಡೆಹಿಡಿದಿದ್ದೀಯ?
ಅಬ್ರಹಾಮನಿಗೆ ನಮ್ಮ ಪರಿಚಯ ಇಲ್ಲದಿದ್ರೂ,
ಇಸ್ರಾಯೇಲ್ ನಮ್ಮನ್ನ ಗುರುತಿಸದಿದ್ರೂ
ಯೆಹೋವನೇ, ನೀನೇ ನಮ್ಮ ತಂದೆ.
‘ಪುರಾತನ ಕಾಲದಿಂದನೂ ನಮ್ಮನ್ನ ಬಿಡಿಸಿದವನು’ ಅನ್ನೋ ಹೆಸ್ರು ನಿನಗಿದೆ.+
17 ಯೆಹೋವನೇ, ನಿನ್ನ ಮಾರ್ಗಗಳನ್ನ ಬಿಟ್ಟು ನಾವು ಅಲೆದಾಡೋ ತರ ನೀನ್ಯಾಕೆ ಅನುಮತಿಸಿದ್ದೀಯ?
ನಿನಗೆ ಹೆದರದ ಹಾಗೆ ನಾವು ನಮ್ಮ ಹೃದಯಗಳನ್ನ ಕಠಿಣ ಮಾಡ್ಕೊಳ್ಳೋಕೆ ನೀನ್ಯಾಕೆ ಬಿಟ್ಟೆ?+
ನಿನ್ನ ಸೇವಕರ ಸಲುವಾಗಿ ವಾಪಸ್ ಬಾ,
ನಿನ್ನ ಸ್ವತ್ತಾಗಿರೋ ನಿನ್ನ ಕುಲಗಳಿಗಾಗಿ ತಿರುಗಿ ಬಾ.+
18 ನಿನ್ನ ದೇಶ ಸ್ವಲ್ಪ ಸಮ್ಯದ ತನಕ ಮಾತ್ರ ನಿನ್ನ ಪವಿತ್ರ ಜನ್ರ ಅಧೀನದಲ್ಲಿತ್ತು.
ನಮ್ಮ ಶತ್ರುಗಳು ನಿನ್ನ ಆರಾಧನಾ ಸ್ಥಳವನ್ನ ತುಳಿದುಹಾಕಿದ್ರು.+
19 ನೀನು ಯಾವತ್ತೂ ಆಳ್ವಿಕೆ ಮಾಡಿರದ ಜನ್ರ ತರ, ನಿನ್ನ ಹೆಸ್ರಿಂದ ಯಾವತ್ತೂ ಕರಸ್ಕೊಳ್ಳದ ಜನ್ರ ತರ
ನಾವು ತುಂಬ ಕಾಲದ ತನಕ ಇದ್ವಿ.