ಒಂದನೇ ಸಮುವೇಲ
28 ಆ ದಿನಗಳಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ತಮ್ಮ ಸೈನ್ಯವನ್ನ ಒಟ್ಟುಸೇರಿಸಿದ್ರು.+ ಹಾಗಾಗಿ ಆಕೀಷ್ ದಾವೀದನಿಗೆ “ನೀನು, ನಿನ್ನ ಗಂಡಸ್ರು ನನ್ನ ಜೊತೆ ಯುದ್ಧಕ್ಕೆ ಬರಬೇಕಂತ ನಿನಗೆ ಗೊತ್ತೇ ಇದೆ”+ ಅಂದ. 2 ಅದಕ್ಕೆ ದಾವೀದ ಆಕೀಷ್ಗೆ “ನಿನ್ನ ಸೇವಕ ಏನು ಮಾಡ್ತಾನಂತ ನಿನಗೆ ಚೆನ್ನಾಗಿ ಗೊತ್ತು” ಅಂದ. ಆಗ ಆಕೀಷ್ ದಾವೀದನಿಗೆ “ಅದಕ್ಕೇ ನಾನು ನಿನ್ನನ್ನ ಶಾಶ್ವತವಾಗಿ ನನ್ನ ಅಂಗರಕ್ಷಕನಾಗಿ* ನೇಮಿಸ್ತೀನಿ”+ ಅಂದ.
3 ಸಮುವೇಲ ಈಗಾಗ್ಲೇ ತೀರಿಹೋಗಿದ್ದ. ಇಸ್ರಾಯೇಲ್ಯರೆಲ್ಲ ಅವನಿಗಾಗಿ ತುಂಬ ದುಃಖಪಟ್ಟು ಅವನನ್ನ ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿ ಮಾಡಿದ್ರು.+ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳುವವ್ರನ್ನ ಸೌಲ ದೇಶದಿಂದ ಹೊರಗೆ ಹಾಕಿದ್ದ.+
4 ಫಿಲಿಷ್ಟಿಯರು ಒಟ್ಟುಗೂಡಿ ಶೂನೇಮಿಗೆ+ ಹೋಗಿ ಅಲ್ಲಿ ಪಾಳೆಯ ಹಾಕಿದ್ರು. ಆಗ ಸೌಲ ಎಲ್ಲ ಇಸ್ರಾಯೇಲ್ಯರನ್ನ ಒಟ್ಟುಸೇರಿಸಿ ಗಿಲ್ಬೋವದಲ್ಲಿ+ ಪಾಳೆಯ ಹಾಕಿದ. 5 ಫಿಲಿಷ್ಟಿಯರ ಪಾಳೆಯ ನೋಡಿದಾಗ ಸೌಲ ತುಂಬ ಹೆದರಿದ, ಅವನ ಹೃದಯ ಭಯದಿಂದ ಜೋರಾಗಿ ಬಡ್ಕೊಳ್ಳೋಕೆ ಶುರು ಆಯ್ತು.+ 6 ಸೌಲ ಯೆಹೋವನ ಹತ್ರ ಬೇಡ್ಕೊಂಡ್ರೂ+ ಯೆಹೋವ ಕನಸಿನ ಮೂಲಕ, ಊರೀಮಿನ+ ಮೂಲಕ ಅಥವಾ ಪ್ರವಾದಿಗಳಿಂದ ಅವನಿಗೆ ಉತ್ತರ ಕೊಡ್ಲಿಲ್ಲ. 7 ಕೊನೆಗೆ ಸೌಲ ತನ್ನ ಸೇವಕರಿಗೆ “ನನಗಾಗಿ ಸತ್ತವರನ್ನ ಮಾತಾಡಿಸ್ತೀನಿ ಅಂತ ಹೇಳ್ಕೊಳ್ಳೋ ಒಬ್ಬ ಸ್ತ್ರೀಯನ್ನ ಹುಡುಕಿ.+ ನಾನು ಹೋಗಿ ಅವಳನ್ನ ಭೇಟಿಯಾಗ್ತೀನಿ” ಅಂದ. ಅದಕ್ಕೆ ಅವನ ಸೇವಕರು “ಎಂದೋರಿನಲ್ಲಿ+ ಒಬ್ಬ ಸ್ತ್ರೀ ಇದ್ದಾಳೆ” ಅಂದ್ರು.
8 ಆಗ ಸೌಲ ಬಟ್ಟೆ ಬದಲಾಯಿಸಿ ಮಾರುವೇಷದಲ್ಲಿ ತನ್ನ ಇಬ್ರು ಗಂಡಸ್ರ ಜೊತೆ ಆ ಸ್ತ್ರೀ ಹತ್ರ ರಾತ್ರಿ ಹೊತ್ತಲ್ಲಿ ಹೋದ. ಅವನು ಅವಳಿಗೆ “ದಯವಿಟ್ಟು ಸತ್ತವರ ಜೊತೆ+ ಮಾತಾಡೋಕೆ ನಿನಗಿರೋ ಶಕ್ತಿ ಬಳಸಿ ನಾನು ಹೇಳುವವನನ್ನ ಕರೆಸಿ ಭವಿಷ್ಯ ನೋಡು” ಅಂದ. 9 ಆದ್ರೆ ಆ ಸ್ತ್ರೀ ಸೌಲನಿಗೆ “ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ತಿದ್ದ ಜನ್ರನ್ನ, ಭವಿಷ್ಯ ಹೇಳುವವರನ್ನ ಸೌಲ ಹೇಗೆ ದೇಶದಿಂದ ಹೊರಗೆ ಹಾಕ್ದ+ ಅಂತ ನಿನಗೇ ಗೊತ್ತು. ಹಾಗಿದ್ರೂ ನೀನ್ಯಾಕೆ ನನ್ನನ್ನ ಸಿಕ್ಕಿಸಿ ನನ್ನ ಮೇಲೆ ಮರಣದಂಡನೆ ತರಬೇಕು ಅಂತಿದ್ದೀಯಾ?”+ ಅಂತ ಕೇಳಿದಳು. 10 ಆಗ ಸೌಲ ಯೆಹೋವನ ಮೇಲೆ ಆಣೆ ಮಾಡಿ ಅವಳಿಗೆ “ಜೀವ ಇರೋ ದೇವರಾದ ಯೆಹೋವನ ಆಣೆ, ನಿನಗೆ ಯಾವ ಶಿಕ್ಷೆನೂ ಸಿಗಲ್ಲ!” ಅಂದ. 11 ಅದಕ್ಕೆ ಆ ಸ್ತ್ರೀ “ನಾನು ಯಾರನ್ನ ಕರಿಲಿ?” ಅಂತ ಕೇಳಿದಾಗ ಸೌಲ “ಸಮುವೇಲನನ್ನ ಕರಿ” ಅಂದ. 12 ಯಾವಾಗ ಆ ಸ್ತ್ರೀ “ಸಮುವೇಲನನ್ನ”*+ ನೋಡಿದಳೋ ಆಗ ಅವಳು ಜೋರಾಗಿ ಅಳ್ತಾ ಸೌಲನಿಗೆ “ನೀನ್ಯಾಕೆ ನನಗೆ ಮೋಸ ಮಾಡ್ದೆ? ನೀನು ಸೌಲ ತಾನೇ!” ಅಂದಳು. 13 ರಾಜ ಅವಳಿಗೆ “ಹೆದರಬೇಡ. ನಿನಗೇನು ಕಾಣಿಸ್ತಿದೆ?” ಅಂತ ಕೇಳಿದಾಗ ಅವಳು “ದೇವರ ತರ ಇರುವವನು ಭೂಮಿ ಒಳಗಿಂದ ಮೇಲೆ ಬರ್ತಿರೋದು ಕಾಣಿಸ್ತಿದೆ” ಅಂದಳು. 14 ತಕ್ಷಣ ಸೌಲ “ಅವನು ನೋಡೋಕೆ ಹೇಗಿದ್ದಾನೆ?” ಅಂದಾಗ ಅವಳು “ಮೇಲೆ ಬರ್ತಿರುವವನು ಒಬ್ಬ ವೃದ್ಧ, ತೋಳಿಲ್ಲದ ನಿಲುವಂಗಿ ಹಾಕಿದ್ದಾನೆ”+ ಅಂದಳು. ಆಗ ಸೌಲನಿಗೆ ಅದು “ಸಮುವೇಲ” ಅಂತ ಗೊತ್ತಾಗಿ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.
15 ಆಗ “ಸಮುವೇಲ” ಸೌಲನಿಗೆ “ನನ್ನನ್ನ ಮೇಲೆ ಏಳಿಸಿ ನೀನ್ಯಾಕೆ ನನಗೆ ತೊಂದ್ರೆ ಕೊಟ್ಟೆ” ಅಂತ ಕೇಳಿದ. ಅದಕ್ಕೆ ಸೌಲ “ನಾನು ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಹಾಕೊಂಡಿದ್ದೀನಿ. ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡ್ತಿದ್ದಾರೆ. ದೇವರು ನನ್ನನ್ನ ಬಿಟ್ಟುಬಿಟ್ಟಿದ್ದಾನೆ. ಆತನು ಪ್ರವಾದಿಗಳ ಮೂಲಕ ಕನಸುಗಳ ಮೂಲಕ ನನಗೆ ಉತ್ರ ಕೊಡ್ತಿಲ್ಲ.+ ನಾನು ಏನು ಮಾಡಬೇಕಂತ ತಿಳ್ಕೊಳ್ಳೋಕೆ ನಿನ್ನನ್ನ ಕರೆದೆ”+ ಅಂದ.
16 ಆಗ “ಸಮುವೇಲ” ಸೌಲನಿಗೆ “ಯೆಹೋವ ನಿನ್ನನ್ನ ಬಿಟ್ಟು ಹೋಗಿರುವಾಗ,+ ಆತನು ನಿನ್ನ ವಿರೋಧಿ ಆಗಿರುವಾಗ ನನ್ನ ಹತ್ರ ನೀನ್ಯಾಕೆ ವಿಚಾರಿಸ್ತಾ ಇದ್ದೀಯಾ? 17 ಯೆಹೋವ ನನ್ನ ಮೂಲಕ ಹೇಳಿಸಿರೋ ಭವಿಷ್ಯವಾಣಿ ನಿಜ ಆಗುತ್ತೆ. ಯೆಹೋವ ನಿನ್ನಿಂದ ರಾಜ್ಯ ಕಿತ್ತು ನಿನ್ನ ಜೊತೆಗಾರರಲ್ಲಿ ಒಬ್ಬನಾದ ದಾವೀದನಿಗೆ ಕೊಡ್ತಾನೆ.+ 18 ಯಾಕಂದ್ರೆ ನೀನು ಯೆಹೋವನ ಮಾತು ಕೇಳಲಿಲ್ಲ. ಆತನಿಗೆ ತುಂಬ ಕೋಪ ಬರೋ ತರ ಮಾಡಿದ ಅಮಾಲೇಕ್ಯರನ್ನ ನಾಶ ಮಾಡಲಿಲ್ಲ.+ ಹಾಗಾಗಿ ಯೆಹೋವ ಇವತ್ತು ನಿನಗೆ ಹೀಗೆ ಮಾಡ್ತಿದ್ದಾನೆ. 19 ಯೆಹೋವ ನಿನ್ನನ್ನೂ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಗೆ ಒಪ್ಪಿಸ್ತಾನೆ.+ ನೀನು,+ ನಿನ್ನ ಮಕ್ಕಳು+ ನಾಳೆ ನನ್ನ ಜೊತೆ ಇರ್ತೀರ. ಅಷ್ಟೇ ಅಲ್ಲ ಯೆಹೋವ ಇಸ್ರಾಯೇಲ್ಯರ ಸೈನ್ಯವನ್ನ ಫಿಲಿಷ್ಟಿಯರ ಕೈಗೆ ಒಪ್ಪಿಸ್ತಾನೆ”+ ಅಂದ.
20 “ಸಮುವೇಲನ” ಈ ಮಾತುಗಳನ್ನ ಕೇಳಿಸ್ಕೊಂಡ ತಕ್ಷಣ ಸೌಲ ನೆಲಕ್ಕೆ ಕುಸಿದುಬಿದ್ದ, ತುಂಬ ಭಯಪಟ್ಟ. ಅವನ ಕೈಕಾಲೆಲ್ಲ ಸೋತು ಹೋಯ್ತು. ಯಾಕಂದ್ರೆ ಆ ಇಡೀ ದಿನ, ರಾತ್ರಿ ಅವನು ಏನೂ ತಿಂದಿರಲಿಲ್ಲ. 21 ಆ ಸ್ತ್ರೀ ಸೌಲನ ಹತ್ರ ಬಂದಾಗ ಅವನು ತುಂಬ ಕಷ್ಟದಲ್ಲಿ ಇರೋದನ್ನ ನೋಡಿ ಅವನಿಗೆ “ನಿನ್ನ ಈ ಸೇವಕಿ ನಿನ್ನ ಮಾತು ಕೇಳಿದ್ದಾಳೆ. ನನ್ನ ಪ್ರಾಣ ಪಣಕಿಟ್ಟು+ ನೀನು ಹೇಳಿದ ಹಾಗೇ ಮಾಡಿದ್ದೀನಿ. 22 ಹಾಗಾಗಿ ಈಗ ದಯವಿಟ್ಟು ನಿನ್ನ ಸೇವಕಿ ಹೇಳಬೇಕು ಅಂತಿರೋದನ್ನ ಕೇಳು. ನಾನು ನಿನಗೆ ತಿನ್ನೋಕೆ ಸ್ಪಲ್ಪ ರೊಟ್ಟಿ ಕೊಡ್ತೀನಿ. ಅದನ್ನ ತಿನ್ನು. ಆಗ ನಿನಗೆ ನಿನ್ನ ದಾರಿಹಿಡಿದು ಹೋಗೋಕೆ ಶಕ್ತಿ ಸಿಗುತ್ತೆ” ಅಂದಳು. 23 ಅವನು ಅದಕ್ಕೆ ಒಪ್ಪದೆ “ಇಲ್ಲ ನಾನು ತಿನ್ನಲ್ಲ” ಅಂದ. ಆದ್ರೆ ಅವನ ಸೇವಕರು ಮತ್ತು ಆ ಸ್ತ್ರೀ ಒತ್ತಾಯಿಸ್ತಾ ಇದ್ರು. ಕೊನೆಗೆ ಅವನು ಅವ್ರ ಮಾತು ಕೇಳಿ ನೆಲದಿಂದ ಎದ್ದು ಮಂಚದ ಮೇಲೆ ಕೂತ. 24 ಆ ಸ್ತ್ರೀಯ ಮನೇಲಿ ಕೊಬ್ಬಿದ ಕರು ಇತ್ತು. ಅವಳು ಅದನ್ನ ತಕ್ಷಣ ಕಡಿದಳು.* ಹಿಟ್ಟನ್ನ ತಗೊಂಡು ನಾದಿ ಅದ್ರಿಂದ ಹುಳಿ ಇಲ್ಲದ ರೊಟ್ಟಿಗಳನ್ನ ಮಾಡಿದಳು. 25 ಅವಳು ಸೌಲನಿಗೂ ಅವನ ಸೇವಕರಿಗೂ ಅದನ್ನ ಬಡಿಸಿದಾಗ ಅವರು ತಿಂದ್ರು. ಆಮೇಲೆ ಅವರು ಎದ್ದು ಆ ರಾತ್ರಿನೇ ಹೋದ್ರು.+