ನೆಹೆಮೀಯ
9 ಏಳನೇ ತಿಂಗಳ 24ನೇ ದಿನ ಇಸ್ರಾಯೇಲ್ಯರೆಲ್ಲ ಸೇರಿ ಬಂದ್ರು. ಗೋಣಿ ಕಟ್ಕೊಂಡು ತಮ್ಮ ಮೇಲೆ ಧೂಳು ಹಾಕೊಂಡು ಉಪವಾಸ ಮಾಡ್ತಿದ್ರು.+ 2 ಆಗ ಇಸ್ರಾಯೇಲ್ ವಂಶದಲ್ಲಿ ಹುಟ್ಟಿದವರು ತಮ್ಮನ್ನ ಎಲ್ಲ ವಿದೇಶಿಯರಿಂದ ಬೇರ್ಪಡಿಸ್ಕೊಂಡ್ರು.+ ಅವರು ನಿಂತ್ಕೊಂಡು ತಮ್ಮ ಪಾಪಗಳನ್ನ, ಪೂರ್ವಜರ ತಪ್ಪುಗಳನ್ನ ಒಪ್ಕೊಂಡ್ರು.+ 3 ಆಮೇಲೆ ಅಲ್ಲೇ ನಿಂತ್ಕೊಂಡು ತಮ್ಮ ದೇವರಾದ ಯೆಹೋವನ ನಿಯಮ ಪುಸ್ತಕವನ್ನ+ ಸುಮಾರು ಮೂರು ತಾಸು ತನಕ* ಗಟ್ಟಿಯಾಗಿ ಓದಿದ್ರು. ಆಮೇಲೆ ಮತ್ತೆ ಮೂರು ತಾಸಿನ ತನಕ ದೇವರಾದ ಯೆಹೋವನ ಮುಂದೆ ಅಡ್ಡಬಿದ್ದು ತಮ್ಮ ಪಾಪಗಳನ್ನ ಒಪ್ಕೊಳ್ತಾ ಇದ್ರು.
4 ಯೆಷೂವ, ಬಾನಿ, ಕದ್ಮೀಯೇಲ್, ಶೆಬನ್ಯ, ಬುನ್ನಿ, ಶೇರೇಬ್ಯ,+ ಬಾನಿ, ಕೆನಾನಿ ಅನ್ನೋರು ಲೇವಿಯರ ವೇದಿಕೆ+ ಮೇಲೆ ನಿಂತು ತಮ್ಮ ದೇವರಾದ ಯೆಹೋವನಿಗೆ ಗಟ್ಟಿಯಾಗಿ ಪ್ರಾರ್ಥನೆ ಮಾಡಿದ್ರು. 5 ಲೇವಿಯರಾದ ಯೆಷೂವ, ಕದ್ಮೀಯೇಲ್, ಬಾನಿ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಹೀಗಂದ್ರು: “ಎದ್ದು ನಿಂತು ನಿಮ್ಮ ದೇವರಾದ ಯೆಹೋವನನ್ನ ಸದಾಕಾಲ* ಹೊಗಳಿ.+ ದೇವರೇ, ನಿನ್ನ ಹೆಸ್ರನ್ನ ಎಷ್ಟು ಹೊಗಳಿದ್ರೂ, ಸ್ತುತಿಸಿದ್ರೂ ಅದು ಕಡಿಮೆನೇ. ಆದ್ರೂ ಇವ್ರಿಗೆ ನಿನ್ನ ಸೊಗಸಾದ ಹೆಸ್ರನ್ನ ಹೊಗಳೋ ಅವಕಾಶ ಕೊಡು.
6 ಯೆಹೋವನೇ, ನೀನೊಬ್ಬನೇ ನಿಜವಾದ ದೇವರು.+ ಆಕಾಶ, ಈ ವಿಶಾಲ ಆಕಾಶವನ್ನ, ಅದ್ರ ಎಲ್ಲ ಸೈನ್ಯವನ್ನ, ಭೂಮಿ ಅದ್ರಲ್ಲಿರೋ ಎಲ್ಲವನ್ನ, ಸಮುದ್ರ ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿದವನು ನೀನೇ. ಅದನ್ನೆಲ್ಲ ಜೀವಂತವಾಗಿ ಕಾಪಾಡ್ತಾ ಇರೋದು ನೀನೇ. ಆಕಾಶದ ಸೈನ್ಯ ನಿನ್ನ ಮುಂದೆ ತಲೆ ತಗ್ಗಿಸುತ್ತೆ. 7 ಅಬ್ರಾಮನನ್ನ+ ಆಯ್ಕೆಮಾಡಿ ಕಸ್ದೀಯರ ಊರ್+ ಪಟ್ಟಣದಿಂದ ಕರ್ಕೊಂಡು ಬಂದು ಅಬ್ರಹಾಮ+ ಅಂತ ಹೆಸ್ರು ಕೊಟ್ಟ ಸತ್ಯ ದೇವರಾಗಿರೋ ಯೆಹೋವ ನೀನೇ. 8 ಅವನು ಹೃದಯದಿಂದ ನಿನಗೆ ನಂಬಿಗಸ್ತನಾಗಿ+ ಇದ್ದ ಅಂತ ತಿಳ್ಕೊಂಡೆ. ಹಾಗಾಗಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಯೆಬೂಸಿಯರ, ಗಿರ್ಗಾಷಿಯರ ದೇಶವನ್ನ ಅವನಿಗೂ ಅವನ ಸಂತತಿಗೂ ಕೊಡ್ತೀನಂತ+ ಅವನ ಜೊತೆ ಒಪ್ಪಂದ ಮಾಡ್ಕೊಂಡೆ. ನೀನು ನೀತಿವಂತ ಆಗಿರೋದ್ರಿಂದ ನಿನ್ನ ಮಾತು ಉಳಿಸ್ಕೊಂಡೆ.
9 ಈಜಿಪ್ಟಲ್ಲಿ ನಮ್ಮ ಪೂರ್ವಜರು ಕಷ್ಟಪಡೋದನ್ನ ನೀನು ನೋಡ್ದೆ.+ ಕೆಂಪು ಸಮುದ್ರದ ಹತ್ರ ಅವರು ಪ್ರಾರ್ಥನೆ ಮಾಡಿದಾಗ ಅದನ್ನ ಕೇಳಿಸ್ಕೊಂಡೆ. 10 ಫರೋಹನ, ಅವನ ಸೇವಕರ, ಅವನ ದೇಶದ ಎಲ್ಲ ಜನ್ರ ವಿರುದ್ಧ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ನೀನು ಮಾಡ್ದೆ.+ ಯಾಕಂದ್ರೆ ನಿನ್ನ ಜನ್ರ ಜೊತೆ ಅವ್ರು ದುರಹಂಕಾರದಿಂದ ನಡ್ಕೊಂಡ್ರು ಅಂತ ನಿನಗೆ ಗೊತ್ತಿತ್ತು.+ ಹಾಗೆ ಮಾಡಿ ನಿನಗಾಗಿ ಹೆಸ್ರು ಮಾಡ್ಕೊಂಡೆ. ಆ ಹೆಸ್ರು ಇವತ್ತಿಗೂ ಇದೆ.+ 11 ನಿನ್ನ ಜನ ಸಮುದ್ರದ ಒಣನೆಲದ ಮೇಲೆ ನಡ್ಕೊಂಡು ಹೋಗೋಕೆ ಅವ್ರ ಮುಂದೆನೇ ಸಮುದ್ರವನ್ನ ಎರಡು ಭಾಗ ಮಾಡ್ದೆ.+ ಅಲ್ಲೋಲ ಕಲ್ಲೋಲವಾದ ನೀರಿಗೆ ಕಲ್ಲು ಎಸೆದ ಹಾಗೆ ನಿನ್ನ ಜನ್ರನ್ನ ಅಟ್ಟಿಸ್ಕೊಂಡು ಬರ್ತಿದ್ದ ಶತ್ರುಗಳನ್ನ ಸಮುದ್ರದ ಆಳಕ್ಕೆ ಎಸೆದುಬಿಟ್ಟೆ.+ 12 ನೀನು ಹಗಲಲ್ಲಿ ಮೋಡದಲ್ಲಿದ್ದು ನಿನ್ನ ಜನ್ರನ್ನ ನಡೆಸಿದೆ. ರಾತ್ರಿಯಲ್ಲಿ ಬೆಳಕು ಕೊಡೋಕೆ ಬೆಂಕಿಯಲ್ಲಿದ್ದು ಅವರು ನಡಿಬೇಕಾಗಿದ್ದ ದಾರಿ ತೋರಿಸ್ಕೊಟ್ಟೆ.+ 13 ನೀನು ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದು+ ಇಸ್ರಾಯೇಲ್ಯರ ಜೊತೆ ಸ್ವರ್ಗದಿಂದ ಮಾತಾಡಿದೆ.+ ನ್ಯಾಯವಾದ ತೀರ್ಪುಗಳನ್ನ ಸತ್ಯದ ನಿಯಮಗಳನ್ನ* ಒಳ್ಳೇ ಆಜ್ಞೆಗಳನ್ನ ಕೊಟ್ಟೆ.+ 14 ಪವಿತ್ರ ಸಬ್ಬತ್ತಿನ+ ಬಗ್ಗೆ ಅವ್ರಿಗೆ ಹೇಳ್ಕೊಟ್ಟೆ. ನಿನ್ನ ಸೇವಕ ಮೋಶೆ ಮೂಲಕ ಅವ್ರಿಗೆ ಆಜ್ಞೆಗಳನ್ನ ನಿಯಮಗಳನ್ನ ಕೊಟ್ಟೆ. 15 ಅವರು ಹಸಿದಿದ್ದಾಗ ಸ್ವರ್ಗದಿಂದ ಆಹಾರ ಕೊಟ್ಟೆ.+ ಬಾಯಾರಿದ್ದಾಗ ಕಡಿದಾದ ಬಂಡೆಯಿಂದ ನೀರು ಕೊಟ್ಟೆ.+ ಅವ್ರಿಗೆ ಕೊಡ್ತೀನಂತ ಮಾತು ಕೊಟ್ಟಿದ್ದ ಆ ದೇಶಕ್ಕೆ ಹೋಗಿ ಅದನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ಹೇಳಿದೆ.
16 ಆದ್ರೆ ನಮ್ಮ ಪೂರ್ವಜರು ಅಹಂಕಾರದಿಂದ ನಡ್ಕೊಂಡ್ರು,+ ಮೊಂಡರಾದ್ರು.+ ನಿನ್ನ ಆಜ್ಞೆಗಳಿಗೆ ಬೆಲೆನೇ ಕೊಡಲಿಲ್ಲ. 17 ನಿನ್ನ ಮಾತು ಕೇಳೋಕೆ ಇಷ್ಟಪಡಲಿಲ್ಲ.+ ಅವ್ರ ಮುಂದೆ ನೀನು ಮಾಡಿದ ಅದ್ಭುತಗಳನ್ನ ನೆನಪು ಮಾಡ್ಕೊಳ್ಳಲಿಲ್ಲ. ಎಷ್ಟು ಹಠಮಾರಿಗಳಾದ್ರು ಅಂದ್ರೆ ಈಜಿಪ್ಟಿನ ಗುಲಾಮರಾಗಿ ವಾಪಸ್ ಹೋಗೋಕೆ ಒಬ್ಬ ನಾಯಕನ ಆರಿಸ್ಕೊಂಡ್ರು.+ ಆದ್ರೆ ನೀನು ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಿರೋ ದೇವರು. ಕನಿಕರ,* ಕರುಣೆ ಇರೋ ದೇವರು. ಬೇಗ ಕೋಪ ಮಾಡ್ಕೊಳ್ಳಲ್ಲ. ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.+ ಅದಕ್ಕೇ ನೀನು ಅವ್ರನ್ನ ದೂರಮಾಡಲಿಲ್ಲ.+ 18 ಅವರು ತಮಗೋಸ್ಕರ ಅಚ್ಚಲ್ಲಿ ಲೋಹ ಹೊಯ್ದು ಕರುವಿನ ಮೂರ್ತಿ ಮಾಡ್ಕೊಂಡು ‘ನಮ್ಮನ್ನ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದಿದ್ದು ಈ ದೇವರೇ’+ ಅಂತ ಹೇಳಿ ನಿನ್ನನ್ನ ಅವಮಾನ ಮಾಡಿದ್ರು. 19 ಇಷ್ಟಾದ್ರೂ ಅವ್ರಿಗೆ ತುಂಬಾ ಕರುಣೆ ತೋರಿಸ್ದೆ, ಕಾಡಲ್ಲಿ ಅವ್ರ ಕೈಬಿಡಲಿಲ್ಲ.+ ಹಗಲಲ್ಲಿ ದಾರಿ ತೋರಿಸ್ತಿದ್ದ ಮೋಡ, ರಾತ್ರಿಯಲ್ಲಿ ದಾರಿಗೆ ಬೆಳಕಾಗಿದ್ದ ಬೆಂಕಿ ಅವ್ರನ್ನ ಬಿಟ್ಟುಹೋಗಲಿಲ್ಲ.+ 20 ವಿವೇಚನೆಯಿಂದ ನಡ್ಕೊಳ್ಳೋಕೆ* ಅವ್ರಿಗೆ ನಿನ್ನ ಪವಿತ್ರಶಕ್ತಿ* ಕೊಟ್ಟೆ.+ ಮನ್ನ ಕೊಡೋದನ್ನ ನಿಲ್ಲಿಸಲಿಲ್ಲ.+ ಬಾಯಾರಿದಾಗ ನೀರು ಕೊಟ್ಟೆ.+ 21 ಅವ್ರಿಗೆ ನೀನು 40 ವರ್ಷ ಕಾಡಲ್ಲಿ ಆಹಾರ ಕೊಟ್ಟೆ.+ ಯಾವುದ್ರ ಕೊರತೆನೂ ಆಗದ ಹಾಗೆ ನೋಡ್ಕೊಂಡೆ. ಬಟ್ಟೆಗಳು ಹರಿಲಿಲ್ಲ.+ ಪಾದಗಳು ಊದ್ಕೊಳ್ಳಲಿಲ್ಲ.
22 ನೀನು ರಾಜರ ರಾಜ್ಯಗಳನ್ನ, ಅವ್ರ ಜನ್ರನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದೆ. ಅವ್ರ ಪ್ರದೇಶಗಳನ್ನ ನಿನ್ನ ಜನ್ರಿಗೆ ಭಾಗ ಮಾಡ್ಕೊಟ್ಟೆ.+ ಅದಕ್ಕೇ ಅವರು ಹೆಷ್ಬೋನಿನ+ ರಾಜ ಸೀಹೋನನ+ ಪ್ರದೇಶವನ್ನ, ಬಾಷಾನಿನ ರಾಜ ಓಗನ+ ಪ್ರದೇಶವನ್ನ ವಶ ಮಾಡ್ಕೊಂಡ್ರು. 23 ಅವ್ರ ಮಕ್ಕಳನ್ನ ಆಕಾಶದ ನಕ್ಷತ್ರಗಳ ತರ ಲೆಕ್ಕ ಇಲ್ಲದಷ್ಟು ಮಾಡಿದೆ.+ ಆಮೇಲೆ ನೀನು ಮಾತು ಕೊಟ್ಟ ದೇಶಕ್ಕೆ ಕರ್ಕೊಂಡು ಬಂದೆ. ಆ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತಾರೆ ಅಂತ ಅವ್ರ ಪೂರ್ವಜರಿಗೆ ಮಾತು ಕೊಟ್ಟಿದ್ದೆ.+ 24 ಹಾಗಾಗಿ ಅವ್ರ ಮಕ್ಕಳು ಆ ದೇಶವನ್ನ ವಶ ಮಾಡ್ಕೊಂಡ್ರು,+ ನೀನು ಅಲ್ಲಿನ ಜನ್ರರಾಗಿದ್ದ ಕಾನಾನ್ಯರನ್ನ ಅವ್ರ ಕೈಗೊಪ್ಪಿಸಿದೆ.+ ಅವ್ರ ರಾಜರನ್ನ, ಅಲ್ಲಿನ ಜನ್ರನ್ನ ಇಸ್ರಾಯೇಲ್ಯರ ವಶ ಮಾಡಿದೆ. ಹೀಗೆ ಮಾಡಿ ಇಸ್ರಾಯೇಲ್ಯರು ಅವ್ರ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಳ್ಳೋ ಹಾಗೆ ಮಾಡಿದೆ. 25 ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ,+ ಫಲವತ್ತಾದ* ದೇಶವನ್ನ+ ವಶ ಮಾಡ್ಕೊಂಡ್ರು. ಎಲ್ಲ ರೀತಿಯ ಉತ್ತಮ ವಸ್ತುಗಳಿಂದ ತುಂಬಿದ್ದ ಮನೆ, ತೋಡಿದ್ದ ಬಾವಿ, ದ್ರಾಕ್ಷಿತೋಟ, ಆಲಿವ್ ತೋಪುಗಳನ್ನ ಕೊಟ್ಟೆ.+ ಬೇಕಾದಷ್ಟು ಹಣ್ಣಿನ ಮರಗಳನ್ನ ಅವ್ರಿಗೆ ಆಸ್ತಿಯಾಗಿ ಕೊಟ್ಟೆ. ಅವರು ತಿಂದು ತೃಪ್ತರಾಗಿ ದಷ್ಟಪುಷ್ಟರಾದ್ರು. ನಿನ್ನ ಅಪಾರವಾದ ಒಳ್ಳೇತನದಿಂದ ಹಾಯಾಗಿದ್ರು.
26 ಹಾಗಿದ್ರೂ ನಿನ್ನ ಮಾತು ಕೇಳದೆ ನಿನ್ನ ವಿರುದ್ಧ ತಿರುಗಿಬಿದ್ರು.+ ನಿನ್ನ ನಿಯಮ ಪುಸ್ತಕವನ್ನ ತಿರಸ್ಕರಿಸಿದ್ರು. ನಿನ್ನ ಹತ್ರ ವಾಪಸ್ ಬರೋಕೆ ಪ್ರವಾದಿಗಳು ಅವ್ರನ್ನ ಎಚ್ಚರಿಸಿದ್ರು. ಆದ್ರೆ ಆ ನಿನ್ನ ಪ್ರವಾದಿಗಳನ್ನೇ ಕೊಂದು ಹಾಕಿದ್ರು. ಅವರು ಕೆಟ್ಟ ಕೆಲಸ ಮಾಡಿ ನಿನಗೆ ತುಂಬ ಅವಮಾನ ಮಾಡಿದ್ರು.+ 27 ಹಾಗಾಗಿ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದೆ.+ ಆ ಶತ್ರುಗಳು ತುಂಬ ಕಷ್ಟ ಕೊಟ್ರು.+ ಆ ಕಷ್ಟದಿಂದಾಗಿ ಅವರು ಪ್ರಾರ್ಥನೆ ಮಾಡಿದಾಗೆಲ್ಲ ನೀನು ಸ್ವರ್ಗದಿಂದ ಕೇಳಿಸ್ಕೊಳ್ತಿದ್ದೆ. ಅವ್ರ ಕೈಯಿಂದ ಕಾಪಾಡೋಕೆ ರಕ್ಷಕರನ್ನ ಕಳಿಸ್ತಿದ್ದೆ.+ ಹೀಗೆ ನಿನ್ನ ಮಹಾ ಕರುಣೆಯನ್ನ ತೋರಿಸ್ತಾ ಹೋದೆ.
28 ಆದ್ರೆ ಅವ್ರಿಗೆ ಸಮಾಧಾನ ಸಿಕ್ಕಿದ ತಕ್ಷಣ ಮತ್ತೆ ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡ್ತಿದ್ರು.+ ಆಗ ನೀನು ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿಬಿಡ್ತಿದ್ದೆ. ಅವ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ರು.+ ಆಮೇಲೆ ನಿನ್ನ ಹತ್ರ ವಾಪಸ್ ಬಂದು ಸಹಾಯಕ್ಕಾಗಿ ಬೇಡ್ತಿದ್ರು.+ ಅದನ್ನ ಸ್ವರ್ಗದಿಂದ ಕೇಳಿಸ್ಕೊಂಡು ಅವ್ರಿಗೆ ನಿನ್ನ ಮಹಾ ಕರುಣೆ ತೋರಿಸ್ತಿದ್ದೆ. ಹೀಗೆ ಅವ್ರನ್ನ ಪದೇ ಪದೇ ಕಾಪಾಡ್ತಿದ್ದೆ.+ 29 ನಿನ್ನ ನಿಯಮಗಳನ್ನ ಮತ್ತೆ ಪಾಲಿಸಬೇಕಂತ ಅವ್ರನ್ನ ಎಷ್ಟು ಎಚ್ಚರಿಸಿದ್ರೂ ಅಹಂಕಾರದಿಂದ ನಡ್ಕೊಂಡ್ರು. ನಿನ್ನ ಆಜ್ಞೆಗಳನ್ನ ಪಾಲಿಸಲಿಲ್ಲ.+ ನಿನ್ನ ತೀರ್ಪುಗಳನ್ನ ಪಾಲಿಸಿದ್ರೆ ಒಬ್ಬ ಮನುಷ್ಯ ಜೀವ ಕಾಪಾಡ್ಕೊಳ್ತಾನೆ.+ ಆದ್ರೆ ಆ ನಿನ್ನ ತೀರ್ಪುಗಳ ವಿರುದ್ಧ ಪಾಪಮಾಡಿದ್ರು. ಹಟಮಾರಿಗಳಾಗಿ ನಿನಗೆ ತಿರುಗಿ ಬಿದ್ರು. ಮೊಂಡರಾಗಿ ನಿನ್ನ ಮಾತು ಕೇಳೋಕೆ ಇಷ್ಟಪಡಲಿಲ್ಲ. 30 ಎಷ್ಟೋ ವರ್ಷ ನೀನು ಅವ್ರಿಗೆ ತಾಳ್ಮೆ ತೋರಿಸಿದೆ.+ ನಿನ್ನ ಪವಿತ್ರ ಶಕ್ತಿಯಿಂದ ಪ್ರವಾದಿಗಳ ಮೂಲಕ ಎಚ್ಚರಿಸ್ತಾ ಬಂದೆ, ಆಗ್ಲೂ ನಿನ್ನ ಮಾತು ಕೇಳಲಿಲ್ಲ. ಕೊನೆಗೆ ಸುತ್ತಮುತ್ತ ಇದ್ದ ದೇಶಗಳ ಜನ್ರ ಕೈಗೆ ಅವ್ರನ್ನ ಒಪ್ಪಿಸಿಬಿಟ್ಟೆ.+ 31 ಆದ್ರೂ ಅವ್ರ ಮೇಲೆ ನಿಂಗೆ ತುಂಬಾ ಕರುಣೆ ಇತ್ತು, ಅವ್ರನ್ನ ಬೇರುಸಮೇತ ಕಿತ್ತುಹಾಕಲಿಲ್ಲ+ ಅಥವಾ ಅವ್ರ ಕೈಬಿಡಲಿಲ್ಲ. ಯಾಕಂದ್ರೆ ನೀನು ಕನಿಕರ,* ಕರುಣೆ ತೋರಿಸೋ ದೇವರು.+
32 ನೀನು ಮಹಾನ್ ದೇವರು, ಶಕ್ತಿಶಾಲಿ, ಭಯವಿಸ್ಮಯ ಹುಟ್ಟಿಸೋನು, ಮಾಡ್ಕೊಂಡ ಒಪ್ಪಂದವನ್ನ ಉಳಿಸ್ಕೊಂಡು ಶಾಶ್ವತ ಪ್ರೀತಿ ತೋರಿಸೋ ದೇವರು.+ ನಾವೂ ನಮ್ಮ ರಾಜರೂ ನಾಯಕರೂ+ ಪುರೋಹಿತರೂ+ ಪ್ರವಾದಿಗಳೂ+ ಪೂರ್ವಜರೂ ನಿನ್ನ ಎಲ್ಲ ಜನ್ರೂ ಅಶ್ಶೂರ್ಯರ+ ರಾಜರ ದಿನದಿಂದ ಇವತ್ತಿನ ತನಕ ಅನುಭವಿಸಿರೋ ಕಷ್ಟಗಳನ್ನ ಹಗುರವಾಗಿ ತಗೊಳ್ಳಬೇಡ. 33 ನೀನು ನಮಗೆ ಯಾವುದೇ ರೀತಿ ಮೋಸ ಮಾಡಲಿಲ್ಲ. ಕೆಟ್ಟವರಾಗಿ ನಡ್ಕೊಂಡವರು ನಾವೇ.+ ನಮಗೆ ಇಂಥ ಸ್ಥಿತಿ ಬಂದಿರೋದ್ರಲ್ಲಿ ತಪ್ಪೇ ಇಲ್ಲ. ಯಾಕಂದ್ರೆ ನೀನು ನಂಬಿಗಸ್ತನಾಗೇ ನಡ್ಕೊಂಡೆ. 34 ನಮ್ಮ ರಾಜರು, ನಾಯಕರು, ಪುರೋಹಿತರು, ಪೂರ್ವಜರು ನಿನ್ನ ನಿಯಮ ಪಾಲಿಸಲಿಲ್ಲ. ಅವ್ರನ್ನ ಎಚ್ಚರಿಸೋಕೆ ಕೊಟ್ಟ ನಿನ್ನ ಆಜ್ಞೆಗಳಿಗಾಗಲಿ ನೀನು ಮತ್ತೆ ಮತ್ತೆ ನೆನಪು ಹುಟ್ಟಿಸಿದ ನಿರ್ದೇಶನಗಳಿಗಾಗಲಿ ಗಮನ ಕೊಡಲಿಲ್ಲ. 35 ಅವರು ತಮ್ಮ ರಾಜ್ಯದಲ್ಲಿದ್ದಾಗ, ನೀನು ಅವ್ರಿಗೆ ಧಾರಾಳವಾಗಿ ಕೊಟ್ಟ ಒಳ್ಳೇ ವಿಷ್ಯಗಳನ್ನ ಅನುಭವಿಸ್ತಿದ್ದಾಗ, ಅವ್ರಿಗೆ ನೀಡಿದ ವಿಶಾಲವಾದ, ಫಲವತ್ತಾದ* ದೇಶದಲ್ಲಿ ವಾಸ ಮಾಡ್ತಿದ್ದಾಗ ಕೂಡ ಅವರು ನಿನ್ನನ್ನ ಆರಾಧಿಸಲಿಲ್ಲ.+ ತಮ್ಮ ಕೆಟ್ಟ ಆಚರಣೆಗಳನ್ನ ಬಿಡಲಿಲ್ಲ. 36 ಹಾಗಾಗಿ ಇವತ್ತು ನಾವು ಇಲ್ಲಿ ಗುಲಾಮರಾಗಿ ಇದ್ದೀವಿ.+ ಯಾವ ದೇಶವನ್ನ ನಮ್ಮ ಪೂರ್ವಜರಿಗೆ ಉತ್ತಮವಾದ ಹಣ್ಣುಗಳನ್ನ ತಿನ್ನೋಕೆ, ಒಳ್ಳೇ ವಿಷ್ಯಗಳನ್ನ ಅನುಭವಿಸೋಕೆ ಕೊಟ್ಯೋ ಆ ದೇಶದಲ್ಲಿ ಗುಲಾಮರಾಗಿ ಇದ್ದೀವಿ. 37 ಈ ದೇಶದಲ್ಲಿ ಬೆಳೆಯೋ ಬೆಳೆ ನಮ್ಮ ಪಾಪಗಳಿಂದಾಗಿ ನಮಗೆ ಸಿಗ್ತಿಲ್ಲ.+ ನೀನು ನಮ್ಮ ಮೇಲೆ ಇಟ್ಟಿರೋ ರಾಜರ ಬಾಯಿಗೆ ಸೇರ್ತಿದೆ. ಆ ರಾಜರು ನಮ್ಮನ್ನ, ನಮ್ಮ ಪ್ರಾಣಿಗಳನ್ನ ಮನಸ್ಸು ಬಂದ ಹಾಗೆ ಆಳ್ತಾರೆ. ನಾವು ತುಂಬ ಕಷ್ಟದಲ್ಲಿ ಇದ್ದೀವಿ.
38 ಹಾಗಾಗಿ ಇದೆಲ್ಲ ನೋಡಿ ಇವತ್ತು ನಿನ್ನ ಜೊತೆ ಒಂದು ಒಪ್ಪಂದ ಮಾಡ್ಕೊಳ್ತಾ ಇದ್ದೀವಿ.+ ಅದನ್ನ ಬರೆದು ಕೊಡ್ತೀವಿ. ಅದ್ರ ಮೇಲೆ ನಮ್ಮ ನಾಯಕರು, ಲೇವಿಯರು ಪುರೋಹಿತರು ಮುದ್ರೆಯೊತ್ತಿ ಅದನ್ನ ಪಕ್ಕಾ ಮಾಡ್ತಾರೆ.”+