ನೆಹೆಮೀಯ
10 ಆ ಪತ್ರಕ್ಕೆ ಸಹಿ ಮಾಡಿದವರು+ ಯಾರಂದ್ರೆ:
ಹಕಲ್ಯನ ಮಗನೂ ರಾಜ್ಯಪಾಲನೂ* ಆಗಿದ್ದ ನೆಹೆಮೀಯ
ಮತ್ತು ಚಿದ್ಕೀಯ, 2 ಸೆರಾಯ, ಅಜರ್ಯ, ಯೆರೆಮೀಯ, 3 ಪಷ್ಹೂರ್, ಅಮರ್ಯ, ಮಲ್ಕೀಯ, 4 ಹಟ್ಟೂಷ್, ಶೆಬನ್ಯ, ಮಲ್ಲೂಕ್, 5 ಹಾರಿಮ್,+ ಮೆರೇಮೋತ್, ಓಬದ್ಯ, 6 ದಾನಿಯೇಲ,+ ಗಿನ್ನೆತೋನ್, ಬಾರೂಕ, 7 ಮೆಷುಲ್ಲಾಮ, ಅಬೀಯ, ಮಿಯ್ಯಾಮೀನ್, 8 ಮಾಜ್ಯ, ಬಿಲ್ಗೈ, ಶೆಮಾಯ. ಇವರು ಪುರೋಹಿತರಾಗಿದ್ರು.
9 ಸಹಿ ಹಾಕಿದ ಲೇವಿಯರು ಯಾರಂದ್ರೆ: ಅಜನ್ಯನ ಮಗ ಯೆಷೂವ, ಹೇನಾದಾದನ ಗಂಡು ಮಕ್ಕಳಲ್ಲಿ ಒಬ್ಬನಾದ ಬಿನ್ನೂಯ್, ಕದ್ಮೀಯೇಲ್,+ 10 ಅವ್ರ ಸಹೋದರರಾದ ಶೆಬನ್ಯ, ಹೋದೀಯ, ಕೆಲೀಟ, ಪೆಲಾಯ, ಹಾನಾನ್,11 ಮೀಕ, ರೆಹೋಬ್, ಹಷಬ್ಯ, 12 ಜಕ್ಕೂರ್, ಶೇರೇಬ್ಯ,+ ಶೆಬನ್ಯ, 13 ಹೋದೀಯ, ಬಾನಿ, ಬೆನೀನೂ.
14 ಸಹಿ ಹಾಕಿದ ಇಸ್ರಾಯೇಲಿನ ಮುಖ್ಯಸ್ಥರು ಯಾರಂದ್ರೆ: ಪರೋಷ್, ಪಹತ್-ಮೋವಾಬ್,+ ಏಲಾಮ್, ಜತ್ತೂ, ಬಾನಿ, 15 ಬುನ್ನಿ, ಅಜ್ಗಾದ್, ಬೇಬೈ, 16 ಅದೋನೀಯ, ಬಿಗ್ವೈ, ಆದೀನ್, 17 ಆಟೇರ್, ಹಿಜ್ಕೀಯ, ಅಜ್ಜೂರ್, 18 ಹೋದೀಯ, ಹಾಷುಮ್, ಬೇಚೈ, 19 ಹಾರೀಫ್, ಅನಾತೋತ್, ನೇಬೈ, 20 ಮಗ್ಪೀಯಾಷ್, ಮೆಷುಲ್ಲಾಮ, ಹೇಜೀರ್, 21 ಮೆಷೇಜಬೇಲ್, ಚಾದೋಕ್, ಯದ್ದೂವ, 22 ಪೆಲಟ್ಯ, ಹಾನಾನ್, ಅನಾಯ, 23 ಹೋಷೇಯ, ಹನನ್ಯ, ಹಷ್ಷೂಬ, 24 ಹಲೋಹೇಷ್, ಪಿಲ್ಹ, ಶೋಬೇಕ್, 25 ರೆಹೂಮ್, ಹಷಬ್ನ, ಮಾಸೇಯ, 26 ಅಹೀಯ, ಹಾನಾನ್, ಆನಾನ್, 27 ಮಲ್ಲೂಕ್, ಹಾರಿಮ್ ಮತ್ತು ಬಾಣ.
28 ಉಳಿದ ಜನ ಅಂದ್ರೆ ಪುರೋಹಿತರು, ಲೇವಿಯರು, ಬಾಗಿಲು ಕಾಯೋರು, ಗಾಯಕರು, ದೇವಾಲಯದ ಸೇವಕರು,* ಸತ್ಯ ದೇವರ ನಿಯಮಗಳನ್ನ ಪಾಲಿಸೋಕೆ ಅಕ್ಕಪಕ್ಕದ ದೇಶಗಳ ಜನ್ರಿಂದ ತಮ್ಮನ್ನ ಬೇರ್ಪಡಿಸ್ಕೊಂಡಿದ್ದ ಪ್ರತಿಯೊಬ್ರೂ,+ ಅವ್ರ ಹೆಂಡತಿಯರು, ಅವ್ರ ಮಕ್ಕಳು ಅಷ್ಟೇ ಅಲ್ಲ ಜ್ಞಾನ ಮತ್ತು ತಿಳುವಳಿಕೆ ಇರೋ ಎಲ್ರೂ,* 29 ತಮ್ಮ ಸಹೋದರರ ಮತ್ತು ಪ್ರಧಾನರ ಜೊತೆಸೇರಿ ಸತ್ಯ ದೇವರು ತನ್ನ ಸೇವಕ ಮೋಶೆ ಮೂಲಕ ಕೊಟ್ಟ ನಿಯಮ ಪುಸ್ತಕದ ಪ್ರಕಾರ ನಡಿತೀವಿ ಮತ್ತು ನಮ್ಮ ಒಡೆಯನಾದ ಯೆಹೋವನ ಆಜ್ಞೆಗಳನ್ನ, ಆತನ ತೀರ್ಪುಗಳನ್ನ, ಆತನ ನಿಯಮಗಳನ್ನ ತಪ್ಪದೆ ಪಾಲಿಸ್ತೀವಿ ಅಂತ ಆಣೆ ಮಾಡಿದ್ರು. ಮಾತು ಕೊಟ್ಟ ಹಾಗೆ ನಡೀದೆ ಹೋದ್ರೆ ತಮ್ಮ ಮೇಲೆ ಶಾಪ ಬರಲಿ ಅಂತನೂ ಹೇಳಿದ್ರು. 30 ನಮ್ಮ ಹೆಣ್ಣು ಮಕ್ಕಳನ್ನ ಬೇರೆ ದೇಶದವ್ರಿಗೆ ಕೊಡೋದಿಲ್ಲ, ಅವ್ರ ಹೆಣ್ಣು ಮಕ್ಕಳನ್ನ ನಮ್ಮ ಗಂಡು ಮಕ್ಕಳಿಗೆ ತರಲ್ಲ+ ಅಂತ ಆಣೆ ಮಾಡಿದ್ರು.
31 ಬೇರೆ ದೇಶದ ಜನ್ರು ಸಬ್ಬತ್ ದಿನದಲ್ಲಿ ತಮ್ಮ ವಸ್ತುಗಳನ್ನ, ಎಲ್ಲ ತರದ ಧಾನ್ಯಗಳನ್ನ ಮಾರೋಕೆ ಬಂದ್ರೆ ಸಬ್ಬತ್ ದಿನದಲ್ಲಾಗಲಿ+ ಅಥವಾ ಪವಿತ್ರವಾದ ದಿನದಲ್ಲಾಗಲಿ+ ನಾವು ಅವ್ರಿಂದ ಏನನ್ನೂ ಕೊಂಡುಕೊಳ್ಳಲ್ಲ. ಏಳನೇ ವರ್ಷದಲ್ಲಿ ಬರೋ ಭೂಮಿಯ ಫಸಲನ್ನ ಬಿಟ್ಟುಬಿಡ್ತೀವಿ,+ ಸಾಲ ಮನ್ನಾ ಮಾಡ್ತೀವಿ.+
32 ಅಷ್ಟೇ ಅಲ್ಲ ನಮ್ಮಲ್ಲಿ ಪ್ರತಿಯೊಬ್ರು ನಮ್ಮ ದೇವರ ಆಲಯದ ಸೇವೆಗಾಗಿ ಶೆಕೆಲಿನ* ಮೂರನೇ ಒಂದು ಭಾಗ ಪ್ರತಿವರ್ಷ ಕೊಡಬೇಕಂತ ನಮ್ಮಲ್ಲೇ ಪ್ರತಿಜ್ಞೆ ಮಾಡ್ಕೊಂಡಿದ್ದೀವಿ.+ 33 ಆ ಹಣವನ್ನ ಅರ್ಪಣೆಯ ರೊಟ್ಟಿಗಳಿಗಾಗಿ,+ ತಪ್ಪದೆ ಅರ್ಪಿಸಬೇಕಾದ ಧಾನ್ಯಕ್ಕಾಗಿ,+ ಸಬ್ಬತ್+ ಮತ್ತು ಅಮಾವಾಸ್ಯೆಯ ದಿನಗಳಲ್ಲಿ+ ತಪ್ಪದೆ ಅರ್ಪಿಸಬೇಕಾದ ಸರ್ವಾಂಗಹೋಮ ಬಲಿಗಾಗಿ ಬಳಸ್ತೀವಿ. ಅಷ್ಟೇ ಅಲ್ಲ ವರ್ಷದ ಬೇರೆಬೇರೆ ಸಮಯಗಳಲ್ಲಿ ಆಚರಿಸೋ ಹಬ್ಬಗಳಿಗಾಗಿ,+ ಪವಿತ್ರ ವಸ್ತುಗಳಿಗಾಗಿ, ಇಸ್ರಾಯೇಲ್ಯರ ಪ್ರಾಯಶ್ಚಿತ್ತ ಮಾಡೋಕೆ ಅರ್ಪಿಸೋ ಪಾಪಪರಿಹಾರಕ ಬಲಿಗಾಗಿ,+ ದೇವರ ಆಲಯದ ಎಲ್ಲ ಕೆಲಸಗಳಿಗಾಗಿ ಬಳಸ್ತೀವಿ.
34 ಅಷ್ಟೇ ಅಲ್ಲ ಪುರೋಹಿತರ, ಲೇವಿಯರ, ಬೇರೆ ಜನ್ರ ತಂದೆಯ ಮನೆತನಗಳ ಪ್ರಕಾರ ಚೀಟುಹಾಕಿ ನಮ್ಮ ದೇವರ ಆಲಯಕ್ಕಾಗಿ ವರ್ಷದ ಯಾವ ಸಮಯದಲ್ಲಿ ಯಾರು ಕಟ್ಟಿಗೆಗಳನ್ನ ತರಬೇಕಂತ ತೀರ್ಮಾನ ಮಾಡ್ತೀವಿ. ಹಾಗೆ ತರ್ತಿದ್ದ ಕಟ್ಟಿಗೆಗಳನ್ನ ನಿಯಮ ಪುಸ್ತಕದಲ್ಲಿ ಬರೆದಿರೋ ಪ್ರಕಾರ+ ನಮ್ಮ ದೇವರಾದ ಯೆಹೋವನ ಯಜ್ಞವೇದಿ ಮೇಲೆ ಸುಡೋಕೆ ಬಳಸ್ತೀವಿ. 35 ನಾವು ಪ್ರತಿವರ್ಷ ನಮ್ಮ ಜಮೀನಿನ ಮೊದಲ್ನೇ ಬೆಳೆಯನ್ನ, ಎಲ್ಲ ರೀತಿಯ ಮರಗಳ ಮೊದಲ ಹಣ್ಣುಗಳನ್ನ ಯೆಹೋವನ ಆಲಯಕ್ಕೆ ತಂದ್ಕೊಡ್ತೀವಿ.+ 36 ಜೊತೆಗೆ ನಿಯಮ ಪುಸ್ತಕದಲ್ಲಿ ಇರೋ ತರ ನಮ್ಮ ಮೊದಲ ಗಂಡು ಮಕ್ಕಳನ್ನ, ನಮ್ಮ ದನಎತ್ತುಗಳ ಕುರಿಆಡುಗಳ ಮೊದಲ ಮರಿಗಳನ್ನ+ ದೇವರ ಆಲಯದ ಸೇವೆಮಾಡೋ ಪುರೋಹಿತರಿಗೆ ತಂದ್ಕೊಡ್ತೀವಿ.+ 37 ನಮ್ಮ ಮೊದಲ ಬೆಳೆಯ ಹಿಟ್ಟಿನ ಮೊದಲ ಭಾಗವನ್ನ,+ ನಮ್ಮ ಕಾಣಿಕೆಗಳನ್ನ, ಎಲ್ಲ ತರದ ಮರಗಳ ಹಣ್ಣುಗಳನ್ನ,+ ಹೊಸ ದ್ರಾಕ್ಷಾಮದ್ಯವನ್ನ, ಎಣ್ಣೆಯನ್ನ+ ನಮ್ಮ ದೇವರ ಆಲಯದ ಕಣಜಗಳಿಗೆ* ಅಂದ್ರೆ ಪುರೋಹಿತರ ಹತ್ರ ತರ್ತೀವಿ.+ ಜೊತೆಗೆ ಬೆಳೆಯ ಹತ್ತರಲ್ಲಿ ಒಂದು ಭಾಗವನ್ನ* ಲೇವಿಯರಿಗೆ ಕೊಡ್ತೀವಿ.+ ಯಾಕಂದ್ರೆ ನಮ್ಮ ದೇಶದಲ್ಲಿ ವ್ಯವಸಾಯ ಮಾಡೋ ಆ ಪಟ್ಟಣಗಳಿಂದ ಹತ್ತರಲ್ಲಿ ಒಂದು ಭಾಗ ಲೇವಿಯರಿಗೇ ಸೇರಬೇಕಲ್ವಾ.
38 ಲೇವಿಯರು ಹತ್ತರಲ್ಲಿ ಒಂದು ಭಾಗವನ್ನ ಶೇಖರಿಸುವಾಗ ಅವ್ರ ಜೊತೆ ಆರೋನನ ವಂಶಸ್ಥನಾದ ಪುರೋಹಿತ ಇರ್ಲೇಬೇಕು. ತಮಗೆ ಸಿಕ್ಕಿದ್ರಲ್ಲಿ ಲೇವಿಯರು ಹತ್ತರಲ್ಲಿ ಒಂದು ಭಾಗವನ್ನ ದೇವರ ಆಲಯಕ್ಕೆ ಕೊಡಬೇಕು.+ ಅದನ್ನ ಕಣಜದ ಕೋಣೆಗಳಲ್ಲಿ* ಇಡಬೇಕು. 39 ಈ ಕೋಣೆಗಳಲ್ಲೇ ಮುಂಚೆ ಇಸ್ರಾಯೇಲ್ಯರು ಮತ್ತು ಲೇವಿಯರು ಕೊಟ್ಟ ಧಾನ್ಯದ ಕಾಣಿಕೆಯನ್ನ,+ ಹೊಸ ದ್ರಾಕ್ಷಾಮದ್ಯವನ್ನ, ಎಣ್ಣೆಯನ್ನ+ ಸಂಗ್ರಹಿಸಿ ಇಡ್ತಿದ್ರು. ಇಲ್ಲೇ ಆರಾಧನಾ ಸ್ಥಳದ ಪವಿತ್ರ ಪಾತ್ರೆಗಳನ್ನೂ ಇಡ್ತಿದ್ರು. ಆಲಯದ ಸೇವೆ ಮಾಡ್ತಿದ್ದ ಪುರೋಹಿತರು, ಕಾವಲುಗಾರರು, ಗಾಯಕರು ಅಲ್ಲಿಗೆ ಹೋಗಿ ಬರ್ತಿದ್ರು. ನಾವು ನಮ್ಮ ದೇವರ ಆಲಯವನ್ನ ಯಾವತ್ತೂ ಅಸಡ್ಡೆ ಮಾಡಲ್ಲ.+