ಎರಡನೇ ಅರಸು
20 ಆ ದಿನಗಳಲ್ಲಿ ಹಿಜ್ಕೀಯ ಹುಷಾರಿಲ್ಲದೆ ಸಾಯೋ ಸ್ಥಿತಿಗೆ ಬಂದ.+ ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯ ಅವನ ಹತ್ರ ಬಂದು “ಯೆಹೋವ ಹೇಳೋದು ಏನಂದ್ರೆ: ‘ನೀನು ನಿನ್ನ ಕುಟುಂಬದವ್ರಿಗೆ ಕೊಡಬೇಕಾದ ನಿರ್ದೇಶನಗಳನ್ನ ಕೊಡು. ಯಾಕಂದ್ರೆ ನಿನಗೆ ವಾಸಿಯಾಗಲ್ಲ, ತೀರಿಹೋಗ್ತೀಯ’”+ ಅಂದ. 2 ಆಗ ಹಿಜ್ಕೀಯ ಗೋಡೆ ಕಡೆ ಮುಖ ಮಾಡ್ಕೊಂಡು ಯೆಹೋವನಿಗೆ ಪ್ರಾರ್ಥಿಸೋಕೆ ಶುರುಮಾಡಿದ. 3 “ಯೆಹೋವನೇ, ನಾನು ನಿನ್ನ ಹತ್ರ ಬೇಡ್ಕೊಳ್ತೀನಿ. ನಾನು ನಿನ್ನ ಮುಂದೆ ನಂಬಿಗಸ್ತನಾಗಿ ಪೂರ್ಣ ಹೃದಯದಿಂದ ನಡೆದದ್ದನ್ನ ದಯವಿಟ್ಟು ನೆನಪಿಸ್ಕೊ. ನಾನು ನಿನಗೆ ಇಷ್ಟ ಆಗೋದನ್ನೇ ಮಾಡಿದೆ”+ ಅಂತ ಹೇಳಿ ಬಿಕ್ಕಿಬಿಕ್ಕಿ ಅತ್ತ.
4 ಯೆಶಾಯ ಅರಮನೆಯ ಮಧ್ಯದಲ್ಲಿದ್ದ ಅಂಗಳ ದಾಟೋ ಮುಂಚೆನೇ ಯೆಹೋವನ ಸಂದೇಶ ಅವನಿಗೆ ಸಿಕ್ತು. ಅದೇನಂದ್ರೆ+ 5 “ವಾಪಸ್ ಹೋಗಿ, ನನ್ನ ಜನ್ರ ನಾಯಕನಾಗಿರೋ ಹಿಜ್ಕೀಯನಿಗೆ ಹೀಗೆ ಹೇಳು: ‘ನಿನ್ನ ಪೂರ್ವಜ ದಾವೀದನ ದೇವರಾಗಿರೋ ಯೆಹೋವ ಹೇಳೋದು ಏನಂದ್ರೆ “ನಿನ್ನ ಪ್ರಾರ್ಥನೆ ಕೇಳಿದ್ದೀನಿ. ನಿನ್ನ ಕಣ್ಣೀರನ್ನ ನೋಡಿದ್ದೀನಿ.+ ನಿನ್ನನ್ನ ವಾಸಿಮಾಡ್ತೀನಿ.+ ಮೂರನೇ ದಿನ ನೀನು ಎದ್ದು ಯೆಹೋವನ ಆಲಯಕ್ಕೆ ಹೋಗ್ತೀಯ.+ 6 ನಾನು ನಿನ್ನ ಆಯಸ್ಸಿಗೆ ಇನ್ನೂ 15 ವರ್ಷಗಳನ್ನ ಸೇರಿಸ್ತೀನಿ. ನಿನ್ನನ್ನ, ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಯಿಂದ ರಕ್ಷಿಸ್ತೀನಿ.+ ನಾನು ಈ ಪಟ್ಟಣವನ್ನ ನನ್ನ ಹೆಸ್ರಿಗಾಗಿ ಮತ್ತು ನನ್ನ ಸೇವಕ ದಾವೀದನ ಸಲುವಾಗಿ ಕಾಪಾಡ್ತೀನಿ.”’”+
7 ಯೆಶಾಯ “ಜಜ್ಜಿರೋ ಒಣ ಅಂಜೂರಗಳ ಒಂದು ಬಿಲ್ಲೆ ತಗೊಂಡು ಬನ್ನಿ” ಅಂದ. ಆಗ ಅವರು ಅದನ್ನ ತಂದು ಅವನ ಹುಣ್ಣಿನ ಮೇಲೆ ಹಚ್ಚಿದ್ರು. ಇದಾದ ಮೇಲೆ ಹಿಜ್ಕೀಯ ನಿಧಾನವಾಗಿ ಚೇತರಿಸ್ಕೊಂಡ.+
8 ಹಿಜ್ಕೀಯ ತಾನು ವಾಸಿ ಆಗೋ ಮುಂಚೆ ಯೆಶಾಯನಿಗೆ “ಯೆಹೋವ ನನ್ನನ್ನ ವಾಸಿ ಮಾಡ್ತಾನೆ, ನಾನು ಮೂರನೇ ದಿನ ಯೆಹೋವನ ಆಲಯಕ್ಕೆ ಹೋಗ್ತೀನಿ ಅನ್ನೋದಕ್ಕೆ ಏನಾದ್ರೂ ಸೂಚನೆ ಇದ್ಯಾ?”+ ಅಂತ ಕೇಳಿದ್ದ. 9 ಆಗ ಯೆಶಾಯ “ಯೆಹೋವ ತಾನು ಹೇಳಿದ ಮಾತುಗಳನ್ನ ಉಳಿಸ್ಕೊಳ್ತಾನೆ ಅನ್ನೋದಕ್ಕೆ ಯೆಹೋವ ನಿನಗೆ ಕೊಟ್ಟ ಈ ಸೂಚನೆ ಏನಂದ್ರೆ, ಈ ಮೆಟ್ಟಿಲ* ಮೇಲಿರೋ ನೆರಳು ಹತ್ತು ಹೆಜ್ಜೆ ಮುಂದೆ ಹೋಗಬೇಕಂತ ಬಯಸ್ತೀಯೋ ಅಥವಾ ಹಿಂದೆ ಬರಬೇಕಂತ ಬಯಸ್ತೀಯೋ ಹೇಳು”+ ಅಂದ. 10 ಅದಕ್ಕೆ ಹಿಜ್ಕೀಯ “ನೆರಳು ಹತ್ತು ಹೆಜ್ಜೆ ಹಿಂದೆ ಬರೋದಕ್ಕಿಂತ ಹತ್ತು ಹೆಜ್ಜೆ ಮುಂದೆ ಹೋಗೋದು ಸುಲಭ” ಅಂದ. 11 ಆಗ ಪ್ರವಾದಿ ಯೆಶಾಯ ಯೆಹೋವನಿಗೆ ಪ್ರಾರ್ಥಿಸಿದ. ಈಗಾಗ್ಲೇ ಆಹಾಜನ ಮೆಟ್ಟಿಲುಗಳ ಮೇಲೆ ಮುಂದೆ ಹೋಗಿದ್ದ ನೆರಳನ್ನ ದೇವರು ಹತ್ತು ಹೆಜ್ಜೆ ಹಿಂದೆ ಬರೋ ತರ ಮಾಡಿದನು.+
12 ಅದೇ ಸಮಯದಲ್ಲಿ ಬಾಬೆಲಿನ ರಾಜನೂ ಬಲದಾನನ ಮಗನೂ ಆದ ಬೆರೋದಕ-ಬಲದಾನನಿಗೆ ಹಿಜ್ಕೀಯ ಕಾಯಿಲೆ ಬಿದ್ದಿದ್ದಾನೆ ಅಂತ ಗೊತ್ತಾಯ್ತು. ಆಗ ಅವನು ತನ್ನ ಸಂದೇಶವಾಹಕರ ಮೂಲಕ ಹಿಜ್ಕೀಯನಿಗೆ ಪತ್ರಗಳನ್ನ, ಉಡುಗೊರೆಯನ್ನ ಕಳಿಸ್ಕೊಟ್ಟ.+ 13 ಹಿಜ್ಕೀಯ ಅವ್ರನ್ನ ಸ್ವಾಗತಿಸಿ* ಅವ್ರಿಗೆ ತನ್ನ ಇಡೀ ಭಂಡಾರ ತೋರಿಸಿದ.+ ಅವನು ಬೆಳ್ಳಿ, ಬಂಗಾರ, ಸುಗಂಧ ತೈಲ, ಬೇರೆ ಬೆಲೆ ಬಾಳೋ ತೈಲ, ಅವನ ಆಯುಧಗಳ ಭಂಡಾರ ಹೀಗೆ ತನ್ನ ಖಜಾನೆಯಲ್ಲಿದ್ದ ಸಕಲವನ್ನೂ ತೋರಿಸಿದ. ಹಿಜ್ಕೀಯ ತನ್ನ ಅರಮನೆಯಲ್ಲಿ, ರಾಜ್ಯದಲ್ಲಿ ಅವ್ರಿಗೆ ತೋರಿಸದೆ ಇದ್ದ ಒಂದು ವಸ್ತುನೂ ಇರಲಿಲ್ಲ.
14 ಆಮೇಲೆ ಪ್ರವಾದಿ ಯೆಶಾಯ ರಾಜ ಹಿಜ್ಕೀಯನ ಹತ್ರ ಬಂದು “ಆ ಗಂಡಸ್ರು ಎಲ್ಲಿಂದ ಬಂದಿದ್ರು? ನಿನ್ನ ಹತ್ರ ಏನು ಮಾತಾಡಿದ್ರು?” ಅಂತ ಕೇಳಿದ. ಆಗ ಹಿಜ್ಕೀಯ “ಅವರು ತುಂಬ ದೂರ ದೇಶವಾದ ಬಾಬೆಲಿಂದ ಬಂದಿದ್ರು”+ ಅಂದ. 15 ಯೆಶಾಯ “ನಿನ್ನ ಅರಮನೆಯಲ್ಲಿ ಅವರು ಏನೆಲ್ಲ ನೋಡಿದ್ರು?” ಅಂತ ಕೇಳಿದ. ಅದಕ್ಕೆ ಹಿಜ್ಕೀಯ “ಅವರು ನನ್ನ ಅರಮನೆಯಲ್ಲಿ ಇರೋದೆಲ್ಲ ನೋಡಿದ್ರು. ನಾನು ನನ್ನ ಖಜಾನೆಯಲ್ಲಿ ಅವ್ರಿಗೆ ತೋರಿಸದೆ ಬಿಟ್ಟ ವಸ್ತು ಯಾವುದೂ ಇಲ್ಲ” ಅಂದ.
16 ಆಗ ಯೆಶಾಯ ಹಿಜ್ಕೀಯನಿಗೆ “ಯೆಹೋವನ ಮಾತನ್ನ ಕೇಳು.+ 17 ಯೆಹೋವ ಹೇಳ್ತಿದ್ದಾನೆ: ‘ನೋಡು, ನಿನ್ನ ಅರಮನೆಯಲ್ಲಿ ಇರೋದನ್ನೆಲ್ಲ ಮತ್ತು ನಿನ್ನ ಪೂರ್ವಜರು ಇವತ್ತಿನ ತನಕ ಕೂಡಿಸಿದ್ದನ್ನೆಲ್ಲ ಬಾಬೆಲಿಗೆ ತಗೊಂಡು ಹೋಗೋ+ ದಿನ ಹತ್ರ ಆಗ್ತಿದೆ. ಆಗ ಏನೂ ಉಳಿಯಲ್ಲ. 18 ಅಷ್ಟೇ ಅಲ್ಲ ನಿನಗೆ ಹುಟ್ಟೋ ಗಂಡು ಮಕ್ಕಳಲ್ಲಿ ಕೆಲವ್ರನ್ನ ಬಾಬೆಲಿಗೆ ತಗೊಂಡು ಹೋಗಿ,+ ಅವ್ರನ್ನ ಬಾಬೆಲಿನ ರಾಜನ ಅರಮನೆಯಲ್ಲಿ ಆಸ್ಥಾನದ ಅಧಿಕಾರಿಗಳಾಗಿ ಮಾಡಲಾಗುತ್ತೆ’”+ ಅಂದ.
19 ಅದಕ್ಕೆ ಹಿಜ್ಕೀಯ ಯೆಶಾಯನಿಗೆ “ನೀನು ಹೇಳಿದ ಯೆಹೋವನ ಆ ಮಾತು ನ್ಯಾಯವಾಗಿದೆ.+ ನಾನು ಬದುಕಿರೋ ತನಕ ನನ್ನ ರಾಜ್ಯದಲ್ಲಿ ಶಾಂತಿ, ಭದ್ರತೆ* ಇರೋದು ದೇವರ ದಯೆ”+ ಅಂದ.
20 ಹಿಜ್ಕೀಯನ ಉಳಿದ ಜೀವನಚರಿತ್ರೆ ಬಗ್ಗೆ, ಅವನ ಎಲ್ಲ ವೀರ ಕೆಲಸಗಳ ಬಗ್ಗೆ ಮತ್ತು ಅವನು ಹಳ್ಳವನ್ನ+ ಮಾಡಿ ಕಾಲುವೆ ಮೂಲಕ ನೀರನ್ನ ಪಟ್ಟಣಕ್ಕೆ ಬರೋ+ ತರ ಮಾಡಿದ್ರ ಬಗ್ಗೆ, ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 21 ಕೊನೆಗೆ ಹಿಜ್ಕೀಯ ತೀರಿಹೋದ.+ ಅವನ ನಂತ್ರ ಅವನ ಮಗ ಮನಸ್ಸೆ+ ರಾಜನಾದ.+