ಎರಡನೇ ಸಮುವೇಲ
2 ಆಮೇಲೆ ದಾವೀದ ಯೆಹೋವನ ಹತ್ರ ವಿಚಾರಿಸ್ತಾ+ “ಯೆಹೂದದ ಯಾವುದಾದ್ರೂ ಒಂದು ಪಟ್ಟಣಕ್ಕೆ ನಾನು ಹೋಗ್ಲಾ?” ಅಂತ ಕೇಳಿದ. ಅದಕ್ಕೆ ಯೆಹೋವ “ಹೋಗು” ಅಂದನು. ದಾವೀದ “ಯಾವ ಪಟ್ಟಣಕ್ಕೆ ಹೋಗ್ಲಿ?” ಅಂತ ಕೇಳಿದಾಗ “ಹೆಬ್ರೋನಿಗೆ+ ಹೋಗು” ಅಂದನು. 2 ಹಾಗಾಗಿ ದಾವೀದ ಇಜ್ರೇಲಿನ ಅಹೀನೋವಮ+ ಮತ್ತು ಅಬೀಗೈಲ+ ಇಬ್ರನ್ನೂ ಕರ್ಕೊಂಡು ಹೋದ. ಈ ಅಬೀಗೈಲ ತೀರಿಹೋಗಿದ್ದ ಕರ್ಮೆಲಿನ ನಾಬಾಲನ ಹೆಂಡತಿ. 3 ದಾವೀದ ತನ್ನ ಜೊತೆ ಇದ್ದ ಗಂಡಸ್ರನ್ನ ಕೂಡ ಕರ್ಕೊಂಡು ಹೋದ.+ ಅವರು, ಅವ್ರ ಕುಟುಂಬದವರು ಹೆಬ್ರೋನ್ ಸುತ್ತ ಇದ್ದ ಪಟ್ಟಣಗಳಲ್ಲಿ ವಾಸ ಮಾಡಿದ್ರು. 4 ಆಮೇಲೆ ಯೆಹೂದದ ಗಂಡಸ್ರು ಅಲ್ಲಿಗೆ ಬಂದು ದಾವೀದನನ್ನ ಯೆಹೂದ ವಂಶದ ಮೇಲೆ ರಾಜನಾಗಿ ಅಭಿಷೇಕಿಸಿದ್ರು.+
ಅವರು ದಾವೀದನಿಗೆ “ಯಾಬೆಷ್-ಗಿಲ್ಯಾದಿನ ಗಂಡಸ್ರೇ ಸೌಲನನ್ನ ಸಮಾಧಿ ಮಾಡಿದ್ರು” ಅಂದ್ರು. 5 ಆಗ ದಾವೀದ ಸಂದೇಶವಾಹಕರನ್ನ ಯಾಬೆಷ್-ಗಿಲ್ಯಾದಿನ ಗಂಡಸ್ರ ಹತ್ರ ಕಳಿಸಿ “ನಿಮ್ಮ ಒಡೆಯನಾದ ಸೌಲನನ್ನ ಸಮಾಧಿ ಮಾಡಿ ಅವನಿಗೆ ಶಾಶ್ವತ ಪ್ರೀತಿ ತೋರಿಸಿದ್ದೀರ.+ ಅದಕ್ಕೆ ಯೆಹೋವ ನಿಮ್ಮನ್ನ ಆಶೀರ್ವಾದ ಮಾಡ್ತಾನೆ. 6 ಯೆಹೋವ ನಿಮಗೆ ಶಾಶ್ವತ ಪ್ರೀತಿ ತೋರಿಸ್ತಾನೆ, ನಂಬಿಗಸ್ತನಾಗಿ ಇರ್ತಾನೆ. ನಾನು ಕೂಡ ನಿಮಗೆ ಕರುಣೆ ತೋರಿಸ್ತೀನಿ.+ 7 ನಿಮ್ಮ ಒಡೆಯನಾದ ಸೌಲ ತೀರಿಹೋದ ಅಂತ ಬೇಜಾರು ಮಾಡ್ಕೋಬೇಡಿ, ಧೈರ್ಯಶಾಲಿಗಳಾಗಿ ಇರಿ. ಯಾಕಂದ್ರೆ ಯೆಹೂದ ವಂಶ ನನ್ನನ್ನ ರಾಜನಾಗಿ ಅಭಿಷೇಕಿಸಿದೆ” ಅಂದ.
8 ನೇರನ ಮಗನೂ ಸೌಲನ ಸೇನಾಪತಿಯೂ ಆಗಿದ್ದ ಅಬ್ನೇರ+ ಸೌಲನ ಮಗನಾದ ಈಷ್ಬೋಶೆತನನ್ನ+ ನದಿಯ ಆಕಡೆ ಇದ್ದ ಮಹನಯಿಮಿಗೆ+ ಕರ್ಕೊಂಡು ಬಂದ. 9 ಅವನನ್ನ ಗಿಲ್ಯಾದಿನ+ ಮೇಲೆ, ಆಶೇರಿನ ಜನ್ರ ಮೇಲೆ, ಇಜ್ರೇಲ್,+ ಎಫ್ರಾಯೀಮ್,+ ಬೆನ್ಯಾಮೀನ್, ಇಡೀ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದ. 10 ಸೌಲನ ಮಗ ಈಷ್ಬೋಶೆತ ಇಸ್ರಾಯೇಲಿಗೆ ರಾಜನಾದಾಗ ಅವನಿಗೆ 40 ವರ್ಷ. ಅವನು ಎರಡು ವರ್ಷ ರಾಜನಾಗಿ ಆಳಿದ. ಆದ್ರೆ ಯೆಹೂದ ವಂಶದವರು ದಾವೀದನಿಗೆ ಬೆಂಬಲ ಕೊಟ್ರು.+ 11 ದಾವೀದ ಯೆಹೂದ ವಂಶದ ಮೇಲೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳು ರಾಜನಾಗಿ ಆಳಿದ.+
12 ಅದೇ ಸಮಯದಲ್ಲಿ, ನೇರನ ಮಗ ಅಬ್ನೇರ ಮತ್ತು ಸೌಲನ ಮಗ ಈಷ್ಬೋಶೆತನ ಸೇವಕರು ಮಹನಯಿಮಿನಿಂದ+ ಗಿಬ್ಯೋನಿಗೆ+ ಹೋದ್ರು. 13 ಚೆರೂಯಳ+ ಮಗ ಯೋವಾಬ,+ ದಾವೀದನ ಸೇವಕರು ಗಿಬ್ಯೋನಿನ ಹಳ್ಳದ ಹತ್ರ ಅವ್ರನ್ನ ಭೇಟಿಯಾದ್ರು. ಒಂದು ಗುಂಪು ಹಳ್ಳದ ಈಕಡೆ ಕೂತ್ರೆ ಇನ್ನೊಂದು ಗುಂಪು ಹಳ್ಳದ ಆಕಡೆ ಕೂತ್ಕೊಂಡಿತ್ತು. 14 ಕೊನೆಗೆ ಅಬ್ನೇರ ಯೋವಾಬನಿಗೆ “ಒಂದು ಕೆಲಸ ಮಾಡೋಣ. ನಮ್ಮ ಯುವಕರಿಗೆ ನಮ್ಮ ಮುಂದೆ ಹೋರಾಡೋಕೆ ಹೇಳೋಣ”* ಅಂದ. ಅದಕ್ಕೆ ಯೋವಾಬ “ಸರಿ” ಅಂದ. 15 ಆಗ ಸೌಲನ ಮಗ ಈಷ್ಬೋಶೆತನ ಪರವಾಗಿ ಮತ್ತು ಬೆನ್ಯಾಮೀನ್ಯರ ಪರವಾಗಿ 12 ಜನ ಮುಂದೆ ಬಂದ್ರು. ದಾವೀದನ ಸೇವಕರಲ್ಲಿ 12 ಜನ ಮುಂದೆ ಬಂದ್ರು. 16 ಅವ್ರಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಎದುರಾಳಿಯ ತಲೆಕೂದಲು ಹಿಡಿದು ಪಕ್ಕೆಗೆ ಕತ್ತಿಯಿಂದ ತಿವಿದ್ರು, ಎಲ್ರೂ ಸತ್ತುಹೋದ್ರು. ಹಾಗಾಗಿ ಗಿಬ್ಯೋನಿನ ಆ ಜಾಗಕ್ಕೆ ಹೆಲ್ಕಾತ್-ಹಜ್ಜುರಿಮ್ ಅಂತ ಹೆಸ್ರು ಬಂತು.
17 ಆ ದಿನ ದೊಡ್ಡ ಯುದ್ಧ ನಡೀತು. ಅಬ್ನೇರ ಮತ್ತು ಇಸ್ರಾಯೇಲಿನ ಗಂಡಸ್ರು ದಾವೀದನ ಸೇವಕರ ಕೈಯಲ್ಲಿ ಸೋತುಹೋದ್ರು. 18 ಅಲ್ಲಿ ಚೆರೂಯಳ+ ಮೂವರು ಮಕ್ಕಳಾದ ಯೋವಾಬ,+ ಅಬೀಷೈ,+ ಅಸಾಹೇಲ+ ಇದ್ರು. ಅಸಾಹೇಲ ಕಾಡುಜಿಂಕೆ ತರ ತುಂಬ ಚುರುಕಾಗಿ ಓಡ್ತಿದ್ದ. 19 ಅಸಾಹೇಲ ಅಬ್ನೇರನನ್ನ ಅಟ್ಟಿಸ್ಕೊಂಡು ಹೋದ. ಎಡಕ್ಕಾಗ್ಲಿ ಬಲಕ್ಕಾಗ್ಲಿ ತಿರುಗದೆ ಅವನ ಹಿಂದೆನೇ ಹೋದ. 20 ಆಗ ಅಬ್ನೇರ ಹಿಂದೆ ತಿರುಗಿ ನೋಡಿ “ಅಸಾಹೇಲ, ನೀನಾ?” ಅಂದ. ಅದಕ್ಕೆ ಅವನು “ಹೌದು, ನಾನೇ” ಅಂದ. 21 ಆಮೇಲೆ ಅಬ್ನೇರ ಅಸಾಹೇಲನಿಗೆ “ನಿನ್ನ ಬಲಗಡೆನೊ ಎಡಗಡೆನೊ ತಿರುಗಿ ಯುವಕರಲ್ಲಿ ಒಬ್ಬನನ್ನ ಹಿಡಿದು, ಅವನಿಂದ ಏನು ಬೇಕೋ ಕಿತ್ಕೊ” ಅಂದ. ಆದ್ರೆ ಅಸಾಹೇಲನಿಗೆ ಅಬ್ನೇರನ ಬೆನ್ನುಬಿಡೋಕೆ ಇಷ್ಟ ಇರಲಿಲ್ಲ. 22 ಅಬ್ನೇರ ಇನ್ನೊಂದು ಸಲ ಅಸಾಹೇಲನಿಗೆ “ಯಾಕೆ ನನ್ನ ಬೆನ್ನ ಹಿಂದೆ ಬಿದ್ದಿದ್ದೀಯಾ? ನನ್ನ ಕೈಯಲ್ಲಿ ಒಂದು ಕೊಲೆ ಮಾಡಿಸಬೇಕು ಅಂತ ಇದ್ದೀಯಾ? ನಿನ್ನನ್ನ ಕೊಂದ್ರೆ ನಿನ್ನ ಸಹೋದರನಾದ ಯೋವಾಬನಿಗೆ ನಾನು ಹೇಗೆ ಮುಖ ತೋರಿಸ್ಲಿ?” ಅಂದ. 23 ಆಗ್ಲೂ ಅವನು ಹಿಂದೆನೇ ಓಡ್ತಾ ಇದ್ದಿದ್ರಿಂದ ಅಬ್ನೇರ ಈಟಿಯ ಹಿಡಿಯಿಂದ ಅವನ ಹೊಟ್ಟೆಗೆ ತಿವಿದ.+ ಆಗ ಈಟಿ ಅವನ ಹೊಟ್ಟೆ ತೂರಿ ಬೆನ್ನಿಂದ ಹೊರಗೆ ಬಂತು. ಅವನು ಅಲ್ಲೇ ಸತ್ತುಹೋದ. ಜನ್ರು ಅಸಾಹೇಲ ಸತ್ತುಬಿದ್ದಿದ್ದ ಜಾಗವನ್ನ ಹಾದು ಹೋಗುವಾಗ ಸ್ವಲ್ಪ ಹೊತ್ತು ಅಲ್ಲೇ ನಿಂತುಬಿಡ್ತಿದ್ರು.
24 ಆಮೇಲೆ ಯೋವಾಬ ಮತ್ತು ಅಬೀಷೈ ಅಬ್ನೇರನನ್ನ ಅಟ್ಟಿಸ್ಕೊಂಡು ಹೋದ್ರು. ಸೂರ್ಯ ಮುಳುಗೋ ಸಮಯಕ್ಕೆ ಅವರು ಅಮ್ಮಾ ಅನ್ನೋ ಬೆಟ್ಟಕ್ಕೆ ಬಂದ್ರು. ಅದು ಗಿಬ್ಯೋನ್ ಕಾಡಿಗೆ ಹೋಗೋ ದಾರಿಯಲ್ಲಿದ್ದ ಗೀಯದ ಮುಂದೆ ಇತ್ತು. 25 ಬೆನ್ಯಾಮೀನ್ಯರು ಗುಂಪು ರಚಿಸಿ ಅಬ್ನೇರನ ಸುತ್ತ ಬೆಟ್ಟದ ಮೇಲೆ ನಿಂತ್ರು. 26 ಆಮೇಲೆ ಅಬ್ನೇರ ಯೋವಾಬನನ್ನ ಕರೆದು “ಇನ್ನೂ ಎಷ್ಟು ಹೊತ್ತು ನಾವು ಒಬ್ರನ್ನೊಬ್ರು ಹೀಗೇ ಕೊಲ್ಲಬೇಕು? ವೇದನೆನೇ ಇದ್ರ ಕೊನೆ ಅಂತ ನಿಂಗೊತ್ತಿಲ್ವಾ? ಸಹೋದರರನ್ನ ಅಟ್ಟಿಸ್ಕೊಂಡು ಹೋಗೋದನ್ನ ನಿಲ್ಲಿಸೋಕೆ ನಿನ್ನ ಜನ್ರಿಗೆ ಹೇಳು” ಅಂದ. 27 ಅದಕ್ಕೆ ಯೋವಾಬ “ಜೀವ ಇರೋ ಸತ್ಯ ದೇವರಾಣೆ, ಈಗ ನೀನು ಈ ಮಾತುಗಳನ್ನ ಹೇಳದೆ ಇದ್ದಿದ್ರೆ ನನ್ನ ಜನ್ರು ತಮ್ಮ ಸಹೋದರರನ್ನ ಬೆಳಗಾದ್ರೂ ಅಟ್ಟಿಸ್ಕೊಂಡು ಹೋಗೋದನ್ನ ನಿಲ್ಲಿಸ್ತಾ ಇರಲಿಲ್ಲ” ಅಂದ. 28 ಆಮೇಲೆ ಯೋವಾಬ ಕೊಂಬು ಊದಿದ. ಆಗ ಅವನ ಗಂಡಸ್ರು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಹೋಗೋದನ್ನ ನಿಲ್ಲಿಸಿದ್ರು, ಯುದ್ಧ ನಿಂತೋಯ್ತು.
29 ಆಮೇಲೆ ಅಬ್ನೇರ, ಅವನ ಗಂಡಸ್ರು ಅರಾಬಾದ+ ಮೂಲಕ ರಾತ್ರಿಯಿಡೀ ನಡ್ಕೊಂಡು ಬಂದು ಯೋರ್ದನ್ ದಾಟಿದ್ರು. ಅಲ್ಲಿಂದ ಕೊರಕಲು ದಾರಿಯಲ್ಲೇ* ನಡಿತಾ ಕೊನೆಗೂ ಮಹನಯಿಮ್+ ತಲುಪಿದ್ರು. 30 ಅಬ್ನೇರನನ್ನ ಅಟ್ಟಿಸೋದನ್ನ ಬಿಟ್ಟು ಯೋವಾಬ ವಾಪಸ್ ಬಂದ್ಮೇಲೆ ಎಲ್ಲ ಜನ್ರನ್ನ ಸೇರಿಸಿದ. ದಾವೀದನ ಸೇವಕರಲ್ಲಿ ಅಸಾಹೇಲನನ್ನ ಬಿಟ್ಟು 19 ಜನ ಕಾಣೆಯಾಗಿದ್ರು. 31 ಆದ್ರೆ ದಾವೀದನ ಸೇವಕರು ಬೆನ್ಯಾಮೀನ್ಯರನ್ನ, ಅಬ್ನೇರನ ಗಂಡಸ್ರನ್ನ ಸೋಲಿಸಿದ್ರು. ಅವರ ಕಡೆಯವ್ರಲ್ಲಿ 360 ಗಂಡಸ್ರು ಸತ್ತು ಹೋದ್ರು. 32 ಅಸಾಹೇಲನನ್ನ+ ಬೆತ್ಲೆಹೇಮಲ್ಲಿರೋ+ ಅವನ ತಂದೆ ಸಮಾಧಿಯಲ್ಲಿ ಹೂಣಿಟ್ರು. ಆಮೇಲೆ ಯೋವಾಬ, ಅವನ ಗಂಡಸ್ರು ರಾತ್ರಿಯೆಲ್ಲಾ ನಡೆದು ಮುಂಜಾನೆ ಹೆಬ್ರೋನಿಗೆ+ ಬಂದು ಸೇರಿದ್ರು.