ಎರಡನೇ ಪೂರ್ವಕಾಲವೃತ್ತಾಂತ
12 ರೆಹಬ್ಬಾಮ ತನಗೆ ಅಧಿಕಾರ ಸಿಕ್ಕ ಮೇಲೆ ಬಲಿಷ್ಠನಾದ+ ತಕ್ಷಣ ಯೆಹೋವನ ನಿಯಮ ಪಾಲಿಸೋದನ್ನ ಬಿಟ್ಟುಬಿಟ್ಟ.+ ಎಲ್ಲ ಇಸ್ರಾಯೇಲ್ಯರು ಹಾಗೇ ಮಾಡಿದ್ರು. 2 ಅವರು ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರು. ಹಾಗಾಗಿ ರಾಜ ರೆಹಬ್ಬಾಮನ ಆಳ್ವಿಕೆಯ ಐದನೇ ವರ್ಷದಲ್ಲಿ ಈಜಿಪ್ಟಿನ ರಾಜ ಶೀಶಕ್+ ಯೆರೂಸಲೇಮನ್ನ ಆಕ್ರಮಣ ಮಾಡಿದ. 3 ಅವನ ಹತ್ರ 1,200 ರಥಗಳು, 60,000 ಕುದುರೆ ಸವಾರರು ಮತ್ತು ಈಜಿಪ್ಟಿಂದ ಅಂದ್ರೆ ಲಿಬ್ಯ, ಸುಕ್ಕೀ, ಇಥಿಯೋಪ್ಯದವರಿಂದ+ ಬಂದಿದ್ದ ಲೆಕ್ಕಾನೇ ಇಲ್ಲದಷ್ಟು ಸೈನಿಕರ ಗುಂಪಿತ್ತು. 4 ಅವನು ಯೆಹೂದದ ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ ವಶ ಮಾಡ್ಕೊಂಡು ಕೊನೆಗೆ ಯೆರೂಸಲೇಮನ್ನ ತಲುಪಿದ.
5 ರೆಹಬ್ಬಾಮ ಮತ್ತು ಯೆಹೂದದ ಅಧಿಕಾರಿಗಳು ಶೀಶಕನಿಗೆ ಭಯಪಟ್ಟು ಯೆರೂಸಲೇಮಲ್ಲಿ ಒಟ್ಟುಸೇರಿದ್ರು. ಪ್ರವಾದಿ ಶೆಮಾಯ+ ಅವ್ರ ಹತ್ರ ಬಂದು “ಯೆಹೋವ ಹೀಗೆ ಹೇಳ್ತಾನೆ, ‘ನೀವು ನನ್ನನ್ನ ಬಿಟ್ಟುಬಿಟ್ರಿ. ಅದಕ್ಕೇ ನಾನು ನಿಮ್ಮನ್ನ ಶೀಶಕನ ಕೈಗೆ ಒಪ್ಪಿಸಿದ್ದೀನಿ’”+ ಅಂದ. 6 ಆಗ ರಾಜ ಮತ್ತು ಇಸ್ರಾಯೇಲಿನ ಅಧಿಕಾರಿಗಳು ತಮ್ಮನ್ನ ತಗ್ಗಿಸಿಕೊಂಡು+ “ಯೆಹೋವ ನೀತಿವಂತನು” ಅಂದ್ರು. 7 ಅವರು ತಮ್ಮನ್ನ ತಗ್ಗಿಸಿಕೊಂಡಿದ್ದನ್ನ ಯೆಹೋವ ನೋಡಿದಾಗ ಶೆಮಾಯಗೆ ಯೆಹೋವ ಈ ಸಂದೇಶ ಕೊಟ್ಟನು “ಅವರು ತಮ್ಮನ್ನೇ ತಗ್ಗಿಸಿಕೊಂಡ್ರು. ಹಾಗಾಗಿ ನಾನು ಅವ್ರನ್ನ ನಾಶಮಾಡಲ್ಲ.+ ಆದಷ್ಟು ಬೇಗ ನಾನು ಅವ್ರನ್ನ ಕಾಪಾಡ್ತೀನಿ. ಶೀಶಕನ ಮೂಲಕ ನಾನು ನನ್ನ ರೋಷವನ್ನ ಯೆರೂಸಲೇಮಿನ ಮೇಲೆ ಸುರಿಸಲ್ಲ. 8 ಆದ್ರೆ ಅವರು ಶೀಶಕನ ಸೇವಕರಾಗ್ತಾರೆ. ಆಗ ಅವ್ರಿಗೆ, ನನಗೆ ಸೇವೆ ಮಾಡೋದಕ್ಕೂ ಬೇರೆ ದೇಶದ ರಾಜರ* ಸೇವೆ ಮಾಡೋದಕ್ಕೂ ಇರೋ ವ್ಯತ್ಯಾಸ ಗೊತ್ತಾಗುತ್ತೆ” ಅಂದನು.
9 ಹಾಗಾಗಿ ಈಜಿಪ್ಟಿನ ರಾಜ ಶೀಶಕ್ ಯೆರೂಸಲೇಮಿನ ವಿರುದ್ಧ ಬಂದ. ಅವನು ಯೆಹೋವನ ಆಲಯ ಮತ್ತು ರಾಜನ ಅರಮನೆಯಲ್ಲಿದ್ದ ನಿಕ್ಷೇಪಗಳನ್ನ ತಗೊಂಡ.+ ಅಷ್ಟೆ ಅಲ್ಲ ಸೊಲೊಮೋನ ಮಾಡಿಸಿದ್ದ ಚಿನ್ನದ ಗುರಾಣಿಗಳ ಸಮೇತ ಎಲ್ಲ ತಗೊಂಡು ಹೋದ.+ 10 ಹಾಗಾಗಿ ರಾಜ ರೆಹಬ್ಬಾಮ ಚಿನ್ನದ ಗುರಾಣಿಗಳ ಬದ್ಲು ತಾಮ್ರದ ಗುರಾಣಿಗಳನ್ನ ಮಾಡಿಸಿದ. ಅವುಗಳನ್ನ ಅರಮನೆಯ ಬಾಗಿಲು ಕಾಯುವವರ* ಮುಖ್ಯಸ್ಥರಿಗೆ ಕೊಟ್ಟ. 11 ರಾಜ ಯೆಹೋವನ ಆಲಯಕ್ಕೆ ಬಂದಾಗೆಲ್ಲ ಬಾಗಿಲು ಕಾಯೋರು ಒಳಗೆ ಬಂದು ಗುರಾಣಿಗಳನ್ನ ತಗೊಂಡು ಅವನ ಜೊತೆ ಹೋಗ್ತಿದ್ರು. ಆಮೇಲೆ ಅವರು ಅದನ್ನ ವಾಪಸ್ ಅವ್ರ ಕೋಣೆಯಲ್ಲಿ ಇಡ್ತಿದ್ರು. 12 ರಾಜ ತನ್ನನೇ ತಗ್ಗಿಸಿಕೊಂಡಿದ್ರಿಂದ ಯೆಹೋವ ಅವನ ಮೇಲೆ ಕೋಪ ತೋರಿಸಲಿಲ್ಲ.+ ಅಷ್ಟೇ ಅಲ್ಲ ಯೆಹೂದದ ಜನ್ರಲ್ಲಿ ಕೆಲವು ಒಳ್ಳೇ ವಿಷ್ಯಗಳೂ ಇದ್ವು.+ ಹಾಗಾಗಿ ಆತನು ಅವ್ರನ್ನ ಪೂರ್ತಿ ನಾಶಮಾಡಲಿಲ್ಲ.+
13 ರಾಜ ರೆಹಬ್ಬಾಮ ಯೆರೂಸಲೇಮಲ್ಲಿ ರಾಜನಾಗೇ ಆಳ್ವಿಕೆ ಮುಂದುವರಿಸಿದ. ಅವನು ರಾಜನಾದಾಗ ಅವನಿಗೆ 41 ವರ್ಷ. ಯೆಹೋವ ಇಸ್ರಾಯೇಲಿನ ಎಲ್ಲ ಕುಲಗಳಿಂದ ತನ್ನ ಹೆಸ್ರಿಗಾಗಿ ಆರಿಸಿಕೊಂಡ ಪಟ್ಟಣದಲ್ಲಿ ಅಂದ್ರೆ ಯೆರೂಸಲೇಮಲ್ಲಿ ಅವನು 17 ವರ್ಷ ಆಳಿದ. ಅಮ್ಮೋನಿಯಳಾದ ನಯಮಾ ಅವನ ತಾಯಿ.+ 14 ಅವನು ಕೆಟ್ಟ ಕೆಲಸಗಳನ್ನ ಮಾಡಿದ. ಯಾಕಂದ್ರೆ ಅವನು ಯೆಹೋವನನ್ನ ಹುಡುಕಬೇಕು ಅಂತ ಹೃದಯದಲ್ಲಿ ತೀರ್ಮಾನ ಮಾಡಿರಲಿಲ್ಲ.+
15 ರೆಹಬ್ಬಾಮನ ಜೀವನಚರಿತ್ರೆಯ ಬಗ್ಗೆ ಪ್ರವಾದಿ ಶೆಮಾಯ+ ಮತ್ತು ದೇವದರ್ಶನ ನೋಡ್ತಿದ್ದ ಇದ್ದೋ+ ಬರೆದ ವಂಶಾವಳಿಯ ದಾಖಲೆಯಲ್ಲಿದೆ. ರೆಹಬ್ಬಾಮ ಮತ್ತು ಯಾರೊಬ್ಬಾಮನ ಮಧ್ಯ ಯಾವಾಗ್ಲೂ ಯುದ್ಧ ನಡೀತಾನೇ ಇತ್ತು.+ 16 ಆಮೇಲೆ ರೆಹಬ್ಬಾಮ ಸತ್ತುಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. ಅವನಾದ ಮೇಲೆ ಅವನ ಮಗ ಅಬೀಯ+ ರಾಜನಾದ.