ಯೆರೆಮೀಯ
16 ಯೆಹೋವ ಮತ್ತೆ ನನಗೆ ಹೀಗೆ ಹೇಳಿದನು 2 “ನೀನು ಮದ್ವೆ ಆಗಬಾರದು, ನಿನಗೆ ಈ ಜಾಗದಲ್ಲಿ ಮಕ್ಕಳು ಇರಬಾರದು. 3 ಈ ದೇಶದಲ್ಲಿ ಹುಟ್ಟಿದ ಮಕ್ಕಳ ಬಗ್ಗೆ, ಅವ್ರನ್ನ ಹೆತ್ತ ತಂದೆತಾಯಂದಿರ ಬಗ್ಗೆ ಯೆಹೋವ ಹೇಳೋದು ಏನಂದ್ರೆ 4 ‘ಜೀವ ತೆಗಿಯೋ ಕಾಯಿಲೆಗಳು ಬಂದು ಅವರು ಸಾಯ್ತಾರೆ.+ ಅವ್ರಿಗಾಗಿ ಯಾರೂ ಎದೆ ಬಡ್ಕೊಳ್ಳಲ್ಲ, ಅವ್ರನ್ನ ಯಾರೂ ಸಮಾಧಿ ಮಾಡಲ್ಲ. ಅವ್ರ ಹೆಣಗಳು ಮಣ್ಣಿಗೆ ಗೊಬ್ಬರ ಆಗುತ್ತೆ.+ ಅವರು ಕತ್ತಿ, ಬರಗಾಲಕ್ಕೆ ತುತ್ತಾಗಿ ನಾಶ ಆಗ್ತಾರೆ.+ ಅವ್ರ ಶವಗಳನ್ನ ಪ್ರಾಣಿಪಕ್ಷಿಗಳು ತಿಂದುಬಿಡುತ್ತೆ.’
5 ಯೆಹೋವ ಹೇಳೋದು ಏನಂದ್ರೆ
‘ದುಃಖದಲ್ಲಿ ಇರೋರಿಗೆ ಊಟ ಕೊಡೋ ಮನೆಗೆ ನೀನು ಹೋಗಬೇಡ.
ಗೋಳಾಡೋಕೆ ಸಮಾಧಾನ ಮಾಡೋಕೆ ಅಲ್ಲಿಗೆ ಹೋಗಬೇಡ.’+
6 ಈ ದೇಶದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಚಿಕ್ಕವರ ತನಕ ಎಲ್ರೂ ಸಾಯ್ತಾರೆ.
ಅವ್ರನ್ನ ಯಾರೂ ಸಮಾಧಿ ಮಾಡಲ್ಲ,
ಯಾರೂ ಅವ್ರಿಗಾಗಿ ಅಳಲ್ಲ,
ಅವರು ಸತ್ರು ಅಂತ ಯಾರೂ ಮೈಮೇಲೆ ಗಾಯಮಾಡ್ಕೊಳ್ಳಲ್ಲ, ತಲೆ ಬೋಳಿಸ್ಕೊಳ್ಳಲ್ಲ.*
7 ಸತ್ತವರಿಗಾಗಿ ಎದೆ ಬಡ್ಕೊಳ್ಳುವವರನ್ನ ಸಮಾಧಾನ ಮಾಡೋಕೆ ಯಾರೂ ಊಟ ಕೊಡಲ್ಲ,
ಅಪ್ಪಅಮ್ಮನನ್ನ ಕಳ್ಕೊಂಡವರನ್ನ ಸಮಾಧಾನ ಮಾಡೋಕೆ ಯಾರೂ ದ್ರಾಕ್ಷಾಮದ್ಯ ಕೊಡಲ್ಲ.
8 ಔತಣದ ಮನೆಗೆ ಹೋಗಬೇಡ,
ಅವರ ಜೊತೆ ತಿಂದು ಕುಡಿಬೇಡ.’
9 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಿಮ್ಮ ಜೀವಮಾನದಲ್ಲೇ, ನಿಮ್ಮ ಕಣ್ಮುಂದೆನೇ ಈ ಜಾಗದಲ್ಲಿ ಸಂತೋಷ ಸಂಭ್ರಮದ ಸದ್ದು, ಮದುಮಗ ಮದುಮಗಳ ಸ್ವರ ನಿಲ್ಲಿಸಿಬಿಡ್ತೀನಿ.’+
10 ನೀನು ಈ ಮಾತುಗಳನ್ನೆಲ್ಲ ಜನ್ರಿಗೆ ಹೇಳುವಾಗ ಅವರು ನಿನಗೆ ‘ಯೆಹೋವ ಇಷ್ಟು ದೊಡ್ಡ ಕಷ್ಟಗಳನ್ನೆಲ್ಲ ನಮ್ಮ ಮೇಲೆ ತರ್ತಾನೆ ಅಂತ ಯಾಕೆ ಹೇಳಿದ್ದಾನೆ? ನಮ್ಮ ದೇವರಾದ ಯೆಹೋವನ ವಿರುದ್ಧ ನಾವು ಯಾವ ತಪ್ಪು ಮಾಡಿದ್ದೀವಿ? ಅಂಥದ್ದೇನು ಪಾಪ ಮಾಡಿದ್ದೀವಿ?’ ಅಂತ ಕೇಳ್ತಾರೆ.+ 11 ಆಗ ನೀನು ಅವ್ರಿಗೆ ಏನು ಹೇಳಬೇಕಂದ್ರೆ ‘ಯೆಹೋವ ಹೀಗೆ ಹೇಳ್ತಾನೆ “ಯಾಕಂದ್ರೆ ನಿಮ್ಮ ಪೂರ್ವಜರು ನನ್ನನ್ನ ಬಿಟ್ಟು+ ಬೇರೆ ದೇವರುಗಳನ್ನ ಆರಾಧಿಸ್ತಾ, ಅವುಗಳ ಸೇವೆ ಮಾಡ್ತಾ, ಅವುಗಳಿಗೆ ಅಡ್ಡಬೀಳ್ತಾರೆ.+ ಅವರು ನನ್ನಿಂದ ದೂರ ಆದ್ರು, ನನ್ನ ನಿಯಮಗಳನ್ನ ಪಾಲಿಸಲಿಲ್ಲ.+ 12 ಅವ್ರಿಗಿಂತ ನೀವು ಕಡೆ.+ ನಿಮ್ಮಲ್ಲಿ ಪ್ರತಿಯೊಬ್ಬ ನನ್ನ ಮಾತನ್ನ ಕೇಳ್ದೆ ಹಠಮಾರಿಯಾಗಿ ತನ್ನ ಕೆಟ್ಟಹೃದಯ ಹೇಳಿದ ಹಾಗೆ ನಡಿತಾ ಇದ್ದಾನೆ.+ 13 ಹಾಗಾಗಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ದೇಶಕ್ಕೆ ನಿಮ್ಮನ್ನ ಈ ದೇಶದಿಂದ ಬಿಸಾಡಿಬಿಡ್ತೀನಿ.+ ಅಲ್ಲಿ ನೀವು ಹಗಲೂರಾತ್ರಿ ಬೇರೆ ದೇವರುಗಳ ಸೇವೆ ಮಾಡಬೇಕಾಗುತ್ತೆ.+ ನಾನು ಸ್ವಲ್ಪನೂ ದಯೆ ತೋರಿಸಲ್ಲ.”’
14 ಯೆಹೋವ ಹೇಳೋದು ಏನಂದ್ರೆ ‘ಆಗ ಅವರು “ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ!”+ ಅಂತ ಹೇಳಲ್ಲ. 15 ಅದ್ರ ಬದಲು “ಇಸ್ರಾಯೇಲ್ಯರನ್ನ ಉತ್ತರ ದೇಶದಿಂದ, ತಾನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ” ಅಂತ ಹೇಳೋ ಕಾಲ ಬರುತ್ತೆ. ಅಷ್ಟೇ ಅಲ್ಲ ನಾನು ಅವ್ರ ಪೂರ್ವಜರಿಗೆ ಕೊಟ್ಟ ದೇಶಕ್ಕೆ ಅವ್ರನ್ನ ಮತ್ತೆ ಕರ್ಕೊಂಡು ಬರ್ತಿನಿ.’+
16 ಯೆಹೋವ ಹೇಳೋದು ಏನಂದ್ರೆ ‘ನಾನು ತುಂಬ ಮೀನುಗಾರರನ್ನ ಕರಿಸ್ತೀನಿ,
ಆ ಮೀನುಗಾರರು ಅವ್ರನ್ನ ಹುಡುಕಿ ಹಿಡಿತಾರೆ.
ಆಮೇಲೆ ತುಂಬ ಬೇಟೆಗಾರರನ್ನ ಕರಿಸ್ತೀನಿ.
ಆ ಬೇಟೆಗಾರರು ಅವ್ರನ್ನ ಪ್ರತಿಯೊಂದು ಪರ್ವತದ ಮೇಲೂ ಪ್ರತಿಯೊಂದು ಬೆಟ್ಟದ ಮೇಲೂ
ಕಡಿದಾದ ಬಂಡೆಗಳ ಸಂದುಗಳಲ್ಲೂ ಬೇಟೆ ಆಡ್ತಾರೆ.
17 ಅವರು ಮಾಡೋ ಪ್ರತಿಯೊಂದನ್ನ ನೋಡ್ತಾ ಇದ್ದೀನಿ,
ನನ್ನ ಕಣ್ಣಿಂದ ಯಾವುದನ್ನೂ ಬಚ್ಚಿಡೋಕೆ ಆಗಲ್ಲ.
ಅವ್ರಿಗೆ ತಮ್ಮ ತಪ್ಪುಗಳನ್ನ ನನ್ನಿಂದ ಮುಚ್ಚಿಡೋಕೆ ಆಗಲ್ಲ.
18 ಅವರು ಮಾಡಿದ ತಪ್ಪುಗಳಿಗೆ, ಪಾಪಗಳಿಗೆ ನಾನು ಮೊದಲು ಅವ್ರಿಗೆ ಪೂರ್ತಿ ಸೇಡು ತೀರಿಸ್ತೀನಿ.+
ಯಾಕಂದ್ರೆ ಅವರು ಜೀವ ಇಲ್ಲದ ಅಸಹ್ಯ ಮೂರ್ತಿಗಳನ್ನ ಆರಾಧಿಸಿ ನನ್ನ ದೇಶವನ್ನ ಅಪವಿತ್ರ ಮಾಡಿದ್ದಾರೆ.
ನನ್ನ ಆಸ್ತಿ ಆಗಿರೋ ದೇಶದಲ್ಲಿ ತಮ್ಮ ಅಸಹ್ಯ ವಸ್ತುಗಳನ್ನ ತುಂಬಿಸಿದ್ದಾರೆ.’”+
19 ಯೆಹೋವನೇ, ನನ್ನ ಬಲವೇ, ನನ್ನ ಭದ್ರವಾದ ಕೋಟೆಯೇ,
ಕಷ್ಟಕಾಲದಲ್ಲಿ ನಾನು ಓಡಿ ಹೋಗೋ ಆಶ್ರಯತಾಣವೇ,+
ಭೂಮಿಯ ಮೂಲೆಮೂಲೆಗಳಿಂದ ಜನ್ರು ನಿನ್ನ ಹತ್ರ ಬರ್ತಾರೆ,
ಅಷ್ಟೇ ಅಲ್ಲ ಅವರು “ನಮ್ಮ ಪೂರ್ವಜರು ಸುಳ್ಳು ದೇವರುಗಳನ್ನ ಆರಾಧಿಸೋ ಸಂಪ್ರದಾಯವನ್ನ ಅನುಸರಿಸ್ತಾ ಬಂದಿದ್ದಾರೆ,
ಅದ್ರಿಂದ ಏನೂ ಪ್ರಯೋಜನ ಇಲ್ಲ” ಅಂತಾರೆ.+
20 ಒಬ್ಬ ಮನುಷ್ಯ ತನಗಾಗಿ ದೇವರುಗಳನ್ನ ಮಾಡ್ಕೊಳ್ಳೋಕೆ ಹೇಗಾಗುತ್ತೆ?
ಅವನು ಮಾಡಿದ್ದು ಯಾವ್ದೂ ನಿಜ ದೇವರುಗಳಲ್ಲ.+
21 “ಹಾಗಾಗಿ ನನಗೆ ಎಷ್ಟು ಶಕ್ತಿಬಲ ಇದೆ ಅಂತ ಅವ್ರಿಗೆ ತೋರಿಸ್ತೀನಿ,
ಅದನ್ನ ಅವ್ರಿಗೆ ಅರ್ಥ ಮಾಡಿಸ್ತೀನಿ,
ನನ್ನ ಹೆಸ್ರು ಯೆಹೋವ ಅಂತ ಆಗ ಅವ್ರಿಗೆ ಗೊತ್ತಾಗುತ್ತೆ.”