ಯಾಜಕಕಾಂಡ
8 ಯೆಹೋವ ಮೋಶೆಗೆ 2 “ಆರೋನನನ್ನ ಅವನ ಮಕ್ಕಳನ್ನ ನೀನು ಕರ್ಕೊಂಡು ಬಾ.+ ಅವರಿಗಾಗಿ ತಯಾರಿಸಿದ ಬಟ್ಟೆಗಳನ್ನ,+ ಅಭಿಷೇಕ ತೈಲವನ್ನ,+ ಪಾಪಪರಿಹಾರಕ ಬಲಿಗಾಗಿ ಹೋರಿಯನ್ನ ತಗೊಂಡು ಬಾ. ಅಷ್ಟೇ ಅಲ್ಲ ಎರಡು ಟಗರುಗಳನ್ನ, ಹುಳಿ ಇಲ್ಲದ ರೊಟ್ಟಿಗಳಿರೋ+ ಬುಟ್ಟಿಯನ್ನ ಕೂಡ ತಗೊ. 3 ಎಲ್ಲ ಜನ್ರಿಗೆ ದೇವದರ್ಶನ ಡೇರೆಯ ಬಾಗಿಲ ಹತ್ರ ಬರೋಕೆ ಹೇಳು” ಅಂದನು.
4 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ. ಜನ್ರೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದ್ರು. 5 ಆಗ ಮೋಶೆ “ಹೀಗೆಹೀಗೆ ಮಾಡಬೇಕಂತ ಯೆಹೋವ ನಮಗೆ ಆಜ್ಞೆ ಕೊಟ್ಟಿದ್ದಾನೆ” ಅಂತ ಹೇಳಿದ. 6 ಮೋಶೆ ಆರೋನನನ್ನ ಅವನ ಮಕ್ಕಳನ್ನ ಬಾಗಿಲ ಹತ್ರ ಕರ್ಕೊಂಡು ಬಂದು ಅವರಿಗೆ ಸ್ನಾನ ಮಾಡೋಕೆ ಹೇಳಿದ.+ 7 ಮೋಶೆ ಆರೋನನಿಗೆ ಉದ್ದ ಅಂಗಿ+ ಹಾಕಿ ಸೊಂಟಪಟ್ಟಿ+ ಸುತ್ತಿದ. ಆಮೇಲೆ ತೋಳಿಲ್ಲದ ಅಂಗಿ+ ಹಾಕಿಸಿ ಅದ್ರ ಮೇಲೆ ಏಫೋದನ್ನ+ ಹಾಕಿ ಏಫೋದಿನ ನೇಯ್ದ ಪಟ್ಟಿಯನ್ನ*+ ಭದ್ರವಾಗಿ ಕಟ್ಟಿದ. 8 ಎದೆಪದಕನ+ ಕಟ್ಟಿ ಊರೀಮ್ ಮತ್ತು ತುಮ್ಮೀಮ್*+ ಅನ್ನು ಅದ್ರೊಳಗೆ ಇಟ್ಟ. 9 ಅವನ ತಲೆ ಮೇಲೆ ವಿಶೇಷ ಪೇಟ+ ಇಟ್ಟು ಅದ್ರ ಮುಂದೆ ಪಳಪಳ ಹೊಳೆಯೋ ಚಿನ್ನದ ಫಲಕ ಕಟ್ಟಿದ. ಇದು ಸಮರ್ಪಣೆಯ ಪವಿತ್ರ ಚಿಹ್ನೆ.*+ ಮೋಶೆ ಎಲ್ಲವನ್ನ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
10 ಆಮೇಲೆ ಮೋಶೆ ಅಭಿಷೇಕ ತೈಲ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲವನ್ನ+ ಅಭಿಷೇಕಿಸಿ ದೇವರ ಸೇವೆಗಾಗಿ ಮೀಸಲಾಗಿಟ್ಟ. 11 ಸ್ವಲ್ಪ ತೈಲ ತಗೊಂಡು ಯಜ್ಞವೇದಿ ಮೇಲೆ, ಅದ್ರ ಎಲ್ಲ ಉಪಕರಣಗಳ ಮೇಲೆ, ದೊಡ್ಡ ಬೋಗುಣಿ ಮೇಲೆ, ಅದ್ರ ಪೀಠದ ಮೇಲೆ ಏಳು ಸಲ ಚಿಮಿಕಿಸಿ ಅವನ್ನ ದೇವರ ಸೇವೆಗಾಗಿ ಪ್ರತ್ಯೇಕಿಸಿದ. 12 ಕೊನೆಗೆ ಮೋಶೆ ಸ್ವಲ್ಪ ಅಭಿಷೇಕ ತೈಲನ ಆರೋನನ ತಲೆ ಮೇಲೆ ಹೊಯ್ದು ಅವನನ್ನ ಅಭಿಷೇಕಿಸಿ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+
13 ಮೋಶೆ ಆರೋನನ ಮಕ್ಕಳನ್ನ ಕರ್ಕೊಂಡು ಬಂದು ಅವರಿಗೆ ಉದ್ದ ಅಂಗಿ ಹಾಕಿ ಸೊಂಟಪಟ್ಟಿ ಸುತ್ತಿದ. ಅವರ ತಲೆ ಮೇಲೆ ಪೇಟ ಇಟ್ಟ.+ ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
14 ಆಮೇಲೆ ಮೋಶೆ ಪಾಪಪರಿಹಾರಕ ಬಲಿಗಾಗಿ ಹೋರಿ ತಂದ. ಆರೋನ, ಅವನ ಮಕ್ಕಳು ಆ ಹೋರಿ ತಲೆ ಮೇಲೆ ತಮ್ಮ ಕೈಗಳನ್ನ ಇಟ್ರು.+ 15 ಮೋಶೆ ಆ ಹೋರಿಯನ್ನ ಕಡಿದು ಅದ್ರ ರಕ್ತ ತಗೊಂಡು+ ಅದ್ರಲ್ಲಿ ತನ್ನ ಬೆರಳನ್ನ ಅದ್ದಿ ಯಜ್ಞವೇದಿಯ ಎಲ್ಲ ಕೊಂಬುಗಳಿಗೆ ಹಚ್ಚಿ ಯಜ್ಞವೇದಿಯನ್ನ ಪರಿಶುದ್ಧ ಮಾಡಿದ. ಉಳಿದ ರಕ್ತನ ಯಜ್ಞವೇದಿ ಬುಡದಲ್ಲಿ ಸುರಿದ. ಹೀಗೆ ಅವರು ಅದ್ರ ಮೇಲೆ ಬಲಿಗಳನ್ನ ಅರ್ಪಿಸೋಕೆ ಆಗೋ ತರ ಮೋಶೆ ಅದನ್ನ ದೇವರ ಸೇವೆಗೆ ಪ್ರತ್ಯೇಕಿಸಿದ. 16 ಅವನು ಆ ಹೋರಿಯ ಕರುಳುಗಳ ಮೇಲಿದ್ದ ಎಲ್ಲ ಕೊಬ್ಬು, ಪಿತ್ತಜನಕಾಂಗದ ಮೇಲಿದ್ದ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು ತೆಗೆದು ಯಜ್ಞವೇದಿ ಮೇಲಿಟ್ಟು ಸುಟ್ಟ. ಅದ್ರಿಂದ ಹೊಗೆ ಮೇಲೆ ಹೋಯ್ತು.+ 17 ಆಮೇಲೆ ಆ ಹೋರಿಯ ಚರ್ಮ, ಮಾಂಸ, ಸಗಣಿ ಹೀಗೆ ಉಳಿದಿದ್ದೆಲ್ಲ ಪಾಳೆಯದ ಹೊರಗೆ ತಗೊಂಡು ಹೋಗಿ ಬೆಂಕಿಯಿಂದ ಸುಟ್ಟ.+ ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
18 ಮೋಶೆ ಸರ್ವಾಂಗಹೋಮ ಬಲಿಗಾಗಿ ಟಗರನ್ನ ತಂದ. ಆರೋನ, ಅವನ ಮಕ್ಕಳು ಅದ್ರ ತಲೆ ಮೇಲೆ ತಮ್ಮ ಕೈಗಳನ್ನ ಇಟ್ರು.+ 19 ಆಮೇಲೆ ಮೋಶೆ ಅದನ್ನ ಕಡಿದು ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ. 20 ಅವನು ಆ ಟಗರನ್ನ ತುಂಡುತುಂಡು ಮಾಡಿ ಆ ತುಂಡುಗಳನ್ನ, ಅದ್ರ ತಲೆಯನ್ನ ಮೂತ್ರಪಿಂಡಗಳ ಸುತ್ತ ಇದ್ದ ಕೊಬ್ಬನ್ನ ಯಜ್ಞವೇದಿ ಮೇಲೆ ಸುಟ್ಟ. 21 ಟಗರಿನ ಕರುಳುಗಳನ್ನ, ಕಾಲುಗಳನ್ನ ನೀರಲ್ಲಿ ತೊಳೆದ. ಇಡೀ ಟಗರನ್ನ ಯಜ್ಞವೇದಿ ಮೇಲೆ ಸುಟ್ಟ. ಈ ಸರ್ವಾಂಗಹೋಮ ಬಲಿಯಿಂದ ಮೇಲೇರಿದ ಹೊಗೆಯ ಸುವಾಸನೆಯಿಂದ ದೇವರಿಗೆ ಸಂತೋಷ* ಆಯ್ತು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
22 ಮೋಶೆ ಇನ್ನೊಂದು ಟಗರನ್ನ ತಂದ. ಪುರೋಹಿತ ಸೇವೆಗೆ ನೇಮಿಸೋ ಸಮಯದಲ್ಲಿ+ ಅರ್ಪಿಸೋಕೆ ಅದನ್ನ ತಂದಿದ್ದ. ಆ ಟಗರಿನ ತಲೆ ಮೇಲೆ ಆರೋನ ಮತ್ತು ಅವನ ಮಕ್ಕಳು ಕೈಗಳನ್ನ ಇಟ್ರು.+ 23 ಮೋಶೆ ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಿದ. 24 ಆಮೇಲೆ ಆರೋನನ ಮಕ್ಕಳನ್ನ ಕರೆದು ಅವರ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ರಕ್ತ ಹಚ್ಚಿದ. ಉಳಿದ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+
25 ಅವನು ಆ ಟಗರಿನ ಕೊಬ್ಬನ್ನ ಅಂದ್ರೆ ಕೊಬ್ಬಿದ ಬಾಲ, ಕರುಳಿನ ಸುತ್ತ ಇದ್ದ ಕೊಬ್ಬು, ಪಿತ್ತಜನಕಾಂಗದ ಮೇಲಿದ್ದ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು, ಬಲಗಾಲು ತಗೊಂಡ.+ 26 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿದ್ದ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ,+ ಎಣ್ಣೆ ಬೆರೆಸಿ ಮಾಡಿದ ಒಂದು ಬಳೆ ಆಕಾರದ ರೊಟ್ಟಿಯನ್ನ,+ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವುಗಳನ್ನ ಟಗರಿನ ಕೊಬ್ಬಿನ ಮೇಲೆ ಬಲಗಾಲಿನ ಮೇಲೆ ಇಟ್ಟ. 27 ಅವನು ಅವುಗಳನ್ನೆಲ್ಲ ಆರೋನ ಮತ್ತು ಅವನ ಮಕ್ಕಳ ಅಂಗೈಯಲ್ಲಿಟ್ಟು ಯೆಹೋವನ ಎದುರು ಹಿಂದೆ ಮುಂದೆ ಆಡಿಸಿದ. ಇದು ಓಲಾಡಿಸೋ ಅರ್ಪಣೆ. 28 ಮೋಶೆ ಅವುಗಳನ್ನ ಅವರ ಕೈಗಳಿಂದ ತಗೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಸುಟ್ಟ. ಇದು ಪುರೋಹಿತ ಸೇವೆಗೆ ನೇಮಿಸೋ ಸಮಯದಲ್ಲಿ ಬೆಂಕಿ ಮೂಲಕ ಅರ್ಪಿಸಿದ ಬಲಿ. ಇದ್ರಿಂದ ಮೇಲೇರಿದ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಯ್ತು.
29 ಆಮೇಲೆ ಮೋಶೆ ಟಗರಿನ ಎದೆಭಾಗನ ಯೆಹೋವನ ಎದುರು ಓಲಾಡಿಸೋ ಅರ್ಪಣೆಯಾಗಿ ಹಿಂದೆ ಮುಂದೆ ಆಡಿಸಿದ.+ ಪುರೋಹಿತ ಸೇವೆಗೆ ನೇಮಿಸಿದ ಸಮಯದಲ್ಲಿ ಅರ್ಪಿಸಿದ ಟಗರಿನ ಎದೆಭಾಗ ಮೋಶೆಗೆ ಸಿಕ್ತು. ಯೆಹೋವ ಅವನಿಗೆ ಆಜ್ಞೆ ಕೊಟ್ಟ ಹಾಗೇ ಅದು ಅವನಿಗೆ ಸಿಕ್ತು.+
30 ಮೋಶೆ ಅಭಿಷೇಕ ತೈಲದಲ್ಲಿ ಸ್ವಲ್ಪ+ ಹಾಗೂ ಯಜ್ಞವೇದಿ ಮೇಲಿದ್ದ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಿದ. ಹೀಗೆ ಆರೋನನನ್ನ, ಅವನ ಬಟ್ಟೆಗಳನ್ನ, ಅವನ ಮಕ್ಕಳನ್ನ, ಅವರ ಬಟ್ಟೆಗಳನ್ನ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+
31 ಆರೋನನಿಗೆ ಅವನ ಮಕ್ಕಳಿಗೆ ಮೋಶೆ ಹೀಗಂದ: “ನೀವು ಟಗರಿನ ಮಾಂಸವನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ಬೇಯಿಸಿ+ ಅಲ್ಲೇ ತಿನ್ನಬೇಕು. ಪುರೋಹಿತ ಸೇವೆಗೆ ನೇಮಿಸುವಾಗ ಬಳಸೋ ಬುಟ್ಟಿಯಲ್ಲಿರೋ ರೊಟ್ಟಿ ಜೊತೆ ಆ ಮಾಂಸ ತಿನ್ನಬೇಕು. ಅದನ್ನ ತಿನ್ನಬೇಕಂತ ಆರೋನನಿಗೆ ಅವನ ಮಕ್ಕಳಿಗೆ ಹೇಳಬೇಕು+ ಅಂತ ದೇವರು ನನಗೆ ಹೇಳಿದ್ದಾನೆ. 32 ಈ ಮಾಂಸದಲ್ಲಿ ರೊಟ್ಟಿಯಲ್ಲಿ ಉಳಿದಿದ್ದನ್ನ ಬೆಂಕಿಯಿಂದ ಸುಡಬೇಕು.+ 33 ನಿಮ್ಮನ್ನ ಪುರೋಹಿತ ಸೇವೆಗೆ ನೇಮಿಸೋಕೆ ಏಳು ದಿನ ಹಿಡಿಯುತ್ತೆ. ಹಾಗಾಗಿ ಆ ಏಳು ದಿನ ನೀವು ದೇವದರ್ಶನ ಡೇರೆಯ ಬಾಗಿಲ ಹತ್ರಾನೇ ಇರಬೇಕು. ನಿಮ್ಮನ್ನ ಪುರೋಹಿತ ಸೇವೆಗೆ ನೇಮಿಸೋ ತನಕ ನೀವು ಆ ಸ್ಥಳ ಬಿಟ್ಟು ಹೋಗಬಾರದು.+ 34 ಯೆಹೋವ ಆಜ್ಞೆ ಕೊಟ್ಟ ಹಾಗೇ ನಿಮ್ಮ ಪ್ರಾಯಶ್ಚಿತ್ತಕ್ಕಾಗಿ ನಾವು ಇವತ್ತು ಇದನ್ನೆಲ್ಲ ಮಾಡಿದ್ವಿ.+ 35 ನೀವು ಏಳು ದಿನ ಹಗಲೂರಾತ್ರಿ ದೇವದರ್ಶನ ಡೇರೆಯ ಬಾಗಿಲ ಹತ್ರಾನೇ ಇರಬೇಕು.+ ಯೆಹೋವ ಹೇಳಿದ್ದೆಲ್ಲ ತಪ್ಪದೆ ಮಾಡಬೇಕು.+ ಆಗ ನೀವು ಸಾಯಲ್ಲ. ಹೀಗೇ ಮಾಡಬೇಕು ಅಂತ ದೇವರು ನನಗೆ ಆಜ್ಞೆ ಕೊಟ್ಟಿದ್ದಾನೆ.”
36 ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟದ್ದೆಲ್ಲ ಆರೋನ, ಅವನ ಮಕ್ಕಳು ಮಾಡಿದ್ರು.