ವಿಮೋಚನಕಾಂಡ
24 ಆಮೇಲೆ ದೇವರು ಮೋಶೆಗೆ “ಆರೋನ, ನಾದಾಬ್, ಅಬೀಹೂ+ ಮತ್ತು ಇಸ್ರಾಯೇಲ್ಯರ 70 ಹಿರಿಯರನ್ನ ಕರ್ಕೊಂಡು ಬೆಟ್ಟ ಹತ್ತಿ ಬಾ. ನೀವು ದೂರದಲ್ಲೇ ಇದ್ದು ಯೆಹೋವನಾದ ನನಗೆ ಅಡ್ಡಬೀಳಬೇಕು. 2 ಯೆಹೋವನಾದ ನನ್ನ ಹತ್ರ ನೀನೊಬ್ಬನೇ ಬರಬೇಕು, ಉಳಿದವರು ಬರಬಾರದು. ಉಳಿದ ಜನ್ರು ಬೆಟ್ಟ ಹತ್ತಬಾರದು”+ ಅಂದನು.
3 ಆಮೇಲೆ ಮೋಶೆ ಜನ್ರ ಹತ್ರ ಬಂದು ಯೆಹೋವ ಹೇಳಿದ್ದನ್ನ, ಎಲ್ಲ ತೀರ್ಪುಗಳನ್ನ ಅವರಿಗೆ ತಿಳಿಸಿದ.+ ಆಗ ಜನ್ರೆಲ್ಲ ಒಟ್ಟಾಗಿ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ”+ ಅಂದ್ರು. 4 ಮೋಶೆ ಯೆಹೋವ ಹೇಳಿದ್ದನ್ನೆಲ್ಲ ಬರೆದಿಟ್ಟ.+ ಬೆಳಿಗ್ಗೆ ಬೇಗ ಎದ್ದು ಬೆಟ್ಟದ ಬುಡದಲ್ಲಿ ಒಂದು ಯಜ್ಞವೇದಿ ಕಟ್ಟಿ ಇಸ್ರಾಯೇಲ್ಯರ 12 ಕುಲಗಳಿಗೆ ಸರಿಯಾಗಿ 12 ಕಂಬಗಳನ್ನ ನಿಲ್ಲಿಸಿದ. 5 ಆಮೇಲೆ ಇಸ್ರಾಯೇಲ್ಯರ ಯುವಕರನ್ನ ಆರಿಸಿದ. ಅವರು ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಿದ್ರು, ಹೋರಿಗಳನ್ನ ಸಮಾಧಾನ ಬಲಿಗಳಾಗಿ+ ಅರ್ಪಿಸಿದ್ರು. 6 ಆಮೇಲೆ ಮೋಶೆ ಆ ಪ್ರಾಣಿಗಳ ರಕ್ತದಲ್ಲಿ ಅರ್ಧ ತಗೊಂಡು ಬೋಗುಣಿಗಳಲ್ಲಿ ಹಾಕಿದ. ಉಳಿದದ್ದನ್ನ ಯಜ್ಞವೇದಿ ಮೇಲೆ ಚಿಮಿಕಿಸಿದ. 7 ಆಮೇಲೆ ಅವನು ಒಪ್ಪಂದದ ಪುಸ್ತಕ ತಗೊಂಡು ಜನ್ರ ಮುಂದೆ ಗಟ್ಟಿಯಾಗಿ ಓದಿದ.+ ಆಗ ಜನ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ, ಆತನ ಆಜ್ಞೆಗಳನ್ನ ಪಾಲಿಸ್ತೀವಿ”+ ಅಂದ್ರು. 8 ಹಾಗಾಗಿ ಮೋಶೆ ರಕ್ತ ತಗೊಂಡು ಜನ್ರ ಮೇಲೆ ಚಿಮಿಕಿಸಿ+ “ಈ ರಕ್ತ ಯೆಹೋವ ನಿಮ್ಮ ಜೊತೆ ಮಾಡಿರೋ ಒಪ್ಪಂದವನ್ನ ಶುರುಮಾಡಿದೆ. ಈ ಒಪ್ಪಂದದಲ್ಲಿ ಇರೋ ಮಾತನ್ನೆಲ್ಲ ಪಾಲಿಸ್ತೀವಿ ಅಂತ ನೀವು ಒಪ್ಕೊಂಡಿದ್ದೀರ”+ ಅಂದ.
9 ಮೋಶೆ, ಆರೋನ, ನಾದಾಬ್, ಅಬೀಹೂ ಮತ್ತು ಇಸ್ರಾಯೇಲ್ಯರ 70 ಹಿರಿಯರು ಬೆಟ್ಟ ಹತ್ತಿ 10 ಇಸ್ರಾಯೇಲಿನ ದೇವರನ್ನ ನೋಡಿದ್ರು.+ ಆತನ ಕಾಲ ಕೆಳಗೆ ನೀಲಮಣಿಯ ನೆಲ ಇತ್ತು. ಅದು ಆಕಾಶದ ತರ ಶುಭ್ರವಾಗಿತ್ತು.+ 11 ಆತನು ಇಸ್ರಾಯೇಲ್ಯರ ಪ್ರಮುಖ ಪುರುಷರಿಗೆ+ ಹಾನಿ ಮಾಡಲಿಲ್ಲ. ಅವರು ತಿಂದು ಕುಡಿತಾ ಇರುವಾಗ ಒಂದು ದರ್ಶನದಲ್ಲಿ* ಸತ್ಯದೇವರನ್ನ ನೋಡಿದ್ರು.
12 ಆಗ ಯೆಹೋವ ಮೋಶೆಗೆ “ನೀನು ಬೆಟ್ಟ ಹತ್ತಿ ಬಂದು ನನ್ನ ಜೊತೆ ಇಲ್ಲೇ ಇರು. ಜನ್ರಿಗೆ ಕಲಿಸೋಕೆ ನಿಯಮಗಳನ್ನ, ಆಜ್ಞೆಗಳನ್ನ ನಾನು ಕಲ್ಲಿನ ಹಲಗೆಗಳ ಮೇಲೆ ಬರೆದು ಕೊಡ್ತೀನಿ”+ ಅಂದನು. 13 ಹಾಗಾಗಿ ಮೋಶೆ ತನ್ನ ಸಹಾಯಕ ಯೆಹೋಶುವನನ್ನ+ ಕರ್ಕೊಂಡು ಹೊರಟ. ಮೋಶೆ ಸತ್ಯ ದೇವರ ಬೆಟ್ಟ ಹತ್ತಿದ.+ 14 ಆದ್ರೆ ಅವನು ಹಿರಿಯರಿಗೆ “ನಾವು ವಾಪಸ್ ಬರೋ ತನಕ ನೀವು ಇಲ್ಲೇ ಇರಿ.+ ನಿಮ್ಮ ಜೊತೆ ಆರೋನ ಮತ್ತು ಹೂರ+ ಇರ್ತಾರೆ. ಯಾರಿಗಾದ್ರೂ ಮೊಕದ್ದಮೆ ಇದ್ರೆ ಅವರಿಬ್ರ ಹತ್ರ ಹೋಗಬಹುದು”+ ಅಂದ. 15 ಮೋಡ ಬೆಟ್ಟವನ್ನ ಆವರಿಸ್ತಿದ್ದಾಗ ಮೋಶೆ ಬೆಟ್ಟ ಹತ್ತಿದ.+
16 ಯೆಹೋವನ ಮಹಿಮೆ+ ಸಿನಾಯಿ ಬೆಟ್ಟದ+ ಮೇಲೆ ಇತ್ತು. ಆರು ದಿನ ಮೋಡ ಅದನ್ನ ಆವರಿಸಿತ್ತು. ಏಳನೇ ದಿನ ಆತನು ಮೋಡದ ಮಧ್ಯದಿಂದ ಮೋಶೆನ ಕರೆದನು. 17 ಬೆಟ್ಟವನ್ನೇ ನೋಡ್ತಿದ್ದ ಇಸ್ರಾಯೇಲ್ಯರಿಗೆ ತುದಿಯಲ್ಲಿ ಯೆಹೋವನ ಮಹಿಮೆ ಧಗಧಗನೆ ಉರಿಯೋ ಬೆಂಕಿ ತರ ಕಾಣಿಸ್ತು. 18 ಮೋಶೆ ಮೋಡದೊಳಗೆ ಹೋಗಿ ಬೆಟ್ಟ ಹತ್ತಿದ.+ ಅವನು 40 ದಿನ ಹಗಲೂರಾತ್ರಿ ಅಲ್ಲೇ ಇದ್ದ.+