ಧರ್ಮೋಪದೇಶಕಾಂಡ
12 ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮ್ಮ ವಶಕ್ಕೆ ಕೊಡೋ ಆ ದೇಶದಲ್ಲಿ ನೀವು ಬದುಕಿರೋ ತನಕ ಎಲ್ಲ ದಿನ ಈ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಬೇಕು. 2 ನಿಮ್ಮ ಕೈಯಲ್ಲಿ ಸೋತು ಹೋಗೋ ದೇಶಗಳು ದೊಡ್ಡ ಪರ್ವತಗಳ ಮೇಲೆ, ಬೆಟ್ಟಗಳ ಮೇಲೆ, ಹಚ್ಚಹಸುರಾದ ಮರಗಳ ಕೆಳಗೆ ತಮ್ಮ ದೇವರುಗಳ ಸೇವೆ ಮಾಡುತ್ತೆ.+ ಆ ಎಲ್ಲಾ ಜಾಗಗಳನ್ನ ಪೂರ್ತಿ ನಾಶ ಮಾಡಬೇಕು. 3 ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ+ ಚೂರುಚೂರು ಮಾಡಬೇಕು, ಪೂಜಾಕಂಬಗಳನ್ನ* ಸುಟ್ಟುಬಿಡಬೇಕು, ಮೂರ್ತಿಗಳನ್ನ ಕಡಿದು ಹಾಕಬೇಕು.+ ಆ ಜಾಗದಲ್ಲಿ ಆ ದೇವರುಗಳ ಹೆಸ್ರೇ ಇಲ್ಲದ ಹಾಗೆ ಮಾಡಬೇಕು.+
4 ಅಲ್ಲಿನ ಜನ ತಮ್ಮ ದೇವರುಗಳನ್ನ ಆರಾಧಿಸೋ ತರ ನೀವು ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಬಾರದು.+ 5 ನಿಮ್ಮ ಎಲ್ಲ ಕುಲಗಳಿಗೆ ಸಿಕ್ಕಿರೋ ಪ್ರದೇಶಗಳಲ್ಲಿ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ, ವಾಸಕ್ಕಾಗಿ ಒಂದು ಜಾಗ ಆರಿಸ್ಕೊಳ್ತಾನೆ. ನೀವು ಅಲ್ಲಿಗೇ ಹೋಗಿ ಆತನನ್ನ ಆರಾಧಿಸಬೇಕು.+ 6 ಅಲ್ಲಿಗೆ ಸರ್ವಾಂಗಹೋಮ ಬಲಿ,+ ಬೇರೆ ಬಲಿ, ದಶಮಾಂಶ,*+ ಕಾಣಿಕೆ,+ ಹರಕೆಯ ಕಾಣಿಕೆ, ಸ್ವಇಷ್ಟದ ಕಾಣಿಕೆ ತರಬೇಕು.+ ಹಸು ಆಡು ಕುರಿಗಳ ಮೊದಲ ಮರಿಗಳನ್ನ ಆ ಜಾಗಕ್ಕೇ ತರಬೇಕು.+ 7 ಅಲ್ಲಿ ನಿಮ್ಮ ಕುಟುಂಬದ ಜೊತೆ ನಿಮ್ಮ ದೇವರಾದ ಯೆಹೋವನ ಮುಂದೆ ಊಟ ಮಾಡಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವಾದ ಮಾಡೋದ್ರಿಂದ ನೀವು ಮಾಡಿದ ಎಲ್ಲ ಕೆಲಸಗಳಿಗೆ ಆತನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+
8 ನೀವು ಆ ದೇಶಕ್ಕೆ ಹೋದ ಮೇಲೆ ನಿಮ್ಮ ದೃಷ್ಟಿಯಲ್ಲಿ ಸರಿ ಅನಿಸಿದ್ದನ್ನ ಮಾಡಬಾರದು. ಈಗ ನಮ್ಮಲ್ಲಿ ಎಲ್ರೂ ಅದನ್ನೇ ಮಾಡ್ತಾ ಇದ್ದಾರೆ. 9 ಯಾಕಂದ್ರೆ ನೀವಿನ್ನೂ ನಿಮ್ಮ ವಾಸಸ್ಥಳಕ್ಕೆ+ ಅಂದ್ರೆ ನಿಮ್ಮ ದೇವರಾದ ಯೆಹೋವ ಆಸ್ತಿಯಾಗಿ ಕೊಡೋ ದೇಶಕ್ಕೆ ಹೋಗಿಲ್ಲ. 10 ಯೋರ್ದನ್ ದಾಟಿ+ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ್ಮೇಲೆ ಆತನು ಖಂಡಿತ ಸುತ್ತ ಇರೋ ಶತ್ರುಗಳಿಂದ ನಿಮ್ಮನ್ನ ಕಾಪಾಡ್ತಾನೆ. ಆಗ ಸಮಾಧಾನದಿಂದ, ಸುರಕ್ಷಿತವಾಗಿ ಜೀವಿಸ್ತೀರ.+ 11 ನಾನು ಹೇಳಿದ್ದನ್ನೆಲ್ಲ ಅಂದ್ರೆ ಸರ್ವಾಂಗಹೋಮ ಬಲಿ, ಬೇರೆ ಬಲಿ, ಹತ್ತರ ಒಂದು ಭಾಗ,+ ಕಾಣಿಕೆ, ಯೆಹೋವನಿಗೆ ಮಾಡಿದ ಹರಕೆ ತೀರಿಸೋಕೆ ಕೊಡೋ ಎಲ್ಲ ಕಾಣಿಕೆ ಇದನ್ನೆಲ್ಲ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ+ ನೀವು ತರಬೇಕು. 12 ಆಗ ನೀವು, ಮಕ್ಕಳು, ನಿಮ್ಮ ದಾಸದಾಸಿಯರು, ಯಾವುದೇ ಪಾಲು, ಆಸ್ತಿ ಸಿಗದೆ+ ನಿಮ್ಮ ಪಟ್ಟಣಗಳಲ್ಲಿ ವಾಸಿಸ್ತಿರೋ ಲೇವಿಯರು ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+ 13 ನಿಮಗೆ ಇಷ್ಟ ಆಗೋ ಜಾಗದಲ್ಲಿ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬಾರದು, ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ!+ 14 ಯೆಹೋವ ಯಾವ ಕುಲದ ಪ್ರದೇಶದಿಂದ ತನಗಾಗಿ ಒಂದು ಜಾಗ ಆರಿಸ್ಕೊಳ್ತಾನೋ ಅಲ್ಲಿ ಮಾತ್ರ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕು. ನಾನು ಹೇಳಿದ್ದನ್ನೆಲ್ಲ ಅದೇ ಜಾಗದಲ್ಲಿ ಮಾಡಬೇಕು.+
15 ನಿಮಗೆ ಮಾಂಸ ತಿನ್ನೋಕೆ ಮನಸ್ಸಾದಾಗೆಲ್ಲ ನಿಮ್ಮ ಪಟ್ಟಣಗಳಲ್ಲಿ ಪ್ರಾಣಿಯನ್ನ ಕಡಿದು ಅದ್ರ ಮಾಂಸ ತಿನ್ನಬಹುದು.+ ನಿಮ್ಮ ದೇವರಾದ ಯೆಹೋವನ ಆಶೀರ್ವಾದದಿಂದ ನಿಮ್ಮ ಹತ್ರ ಇರೋ ಪ್ರಾಣಿಗಳಲ್ಲಿ ನಿಮಗೆ ಬೇಕಾದಷ್ಟು ಕಡಿದು ತಿನ್ನಬಹುದು. ಜಿಂಕೆಯ ಮಾಂಸದ ತರ* ಈ ಮಾಂಸವನ್ನ ಸಹ ಶುದ್ಧರಾಗಿರೋ ಮತ್ತು ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು. 16 ಆದ್ರೆ ನೀವು ರಕ್ತ ತಿನ್ನಬಾರದು.+ ಅದನ್ನ ನೀರಿನ ಹಾಗೆ ನೆಲಕ್ಕೆ ಸುರಿಬೇಕು.+ 17 ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ, ಇವುಗಳಲ್ಲಿ ಹತ್ತನೇ ಒಂದು ಭಾಗ, ಹಸು ಆಡು ಕುರಿಗಳ ಮೊದಲ ಮರಿಗಳನ್ನ,+ ಕಾಣಿಕೆಗಳನ್ನ, ಹರಕೆ ತೀರಿಸೋಕೆ ಕೊಡೋ ಯಾವುದೇ ಕಾಣಿಕೆಯನ್ನ, ಸ್ವಇಷ್ಟದ ಕಾಣಿಕೆಗಳನ್ನ ನಿಮ್ಮ ಪಟ್ಟಣಗಳಲ್ಲಿ ತಿನ್ನಬಾರದು. 18 ಇದನ್ನೆಲ್ಲ ನೀವು ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲೇ+ ತಿನ್ನಬೇಕು. ನೀವು, ನಿಮ್ಮ ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು ಇವುಗಳನ್ನ ನಿಮ್ಮ ದೇವರಾದ ಯೆಹೋವನ ಮುಂದೆ ತಿನ್ನಬೇಕು. ನೀವು ಮಾಡಿದ ಎಲ್ಲ ಕೆಲಸಗಳಿಗಾಗಿ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು. 19 ನಿಮ್ಮ ದೇಶದಲ್ಲಿ ಜೀವಿಸೋಷ್ಟು ಕಾಲ ಲೇವಿಯರನ್ನ ಅಸಡ್ಡೆ ಮಾಡಬಾರದು.+ ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.
20 ನಿಮ್ಮ ದೇವರಾದ ಯೆಹೋವ ತಾನು ಮಾತುಕೊಟ್ಟ+ ಹಾಗೆ ನಿಮ್ಮ ಪ್ರದೇಶವನ್ನ ವಿಸ್ತರಿಸಿದ+ ಮೇಲೆ ನಿಮಗೆ ಮಾಂಸ ತಿನ್ನಬೇಕಂತ ಆಸೆಯಾದಾಗೆಲ್ಲ ನೀವು ಮಾಂಸ ತಿನ್ನಬಹುದು.+ 21 ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳ+ ನೀವು ವಾಸವಾಗಿರೋ ಸ್ಥಳದಿಂದ ದೂರ ಇದ್ರೆ ಯೆಹೋವ ನಿಮಗೆ ಕೊಟ್ಟಿರೋ ಹಸು-ಹೋರಿಗಳಲ್ಲಿ ಅಥವಾ ಆಡು-ಕುರಿಗಳಲ್ಲಿ ಕೆಲವನ್ನ ನೀವು ಕಡಿದು ನಿಮ್ಮನಿಮ್ಮ ಪಟ್ಟಣಗಳಲ್ಲೇ ತಿನ್ನಬಹುದು. ನಿಮಗೆ ಮಾಂಸ ತಿನ್ನೋಕೆ ಆಸೆಯಾದಾಗೆಲ್ಲ ನಾನು ಕೊಟ್ಟ ಆಜ್ಞೆ ಪ್ರಕಾರನೇ ಮಾಡಬೇಕು. 22 ಜಿಂಕೆಯ+ ಮಾಂಸದ ತರ* ಈ ಮಾಂಸವನ್ನ ಸಹ ಶುದ್ಧರಾಗಿರೋ ಮತ್ತು ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು. 23 ಆದ್ರೆ ರಕ್ತ ತಿನ್ಲೇಬಾರದು+ ಅಂತ ದೃಢ ತೀರ್ಮಾನ ಮಾಡಿ. ಯಾಕಂದ್ರೆ ರಕ್ತ ಜೀವವಾಗಿದೆ.+ ನೀವು ಒಂದು ಪ್ರಾಣಿಯ ಮಾಂಸದ ಜೊತೆ ಅದ್ರ ಜೀವವನ್ನ ತಿನ್ನಬಾರದು. 24 ನೀವು ರಕ್ತ ತಿನ್ನಬಾರದು. ಅದನ್ನ ನೀರಿನ ಹಾಗೆ ನೆಲದಲ್ಲಿ ಸುರಿಬೇಕು.+ 25 ನೀವು ರಕ್ತ ತಿನ್ಲೇಬಾರದು. ಹೀಗೆ ನೀವು ಯೆಹೋವನ ದೃಷ್ಟಿಯಲ್ಲಿ ಸರಿಯಾದನ್ನ ಮಾಡಿದ್ರೆ ನಿಮಗೂ ನಿಮ್ಮ ಮಕ್ಕಳಿಗೂ ಒಳ್ಳೇದಾಗುತ್ತೆ. 26 ಯೆಹೋವ ಆರಿಸ್ಕೊಳ್ಳೋ ಸ್ಥಳಕ್ಕೆ ಹೋಗುವಾಗ ನಿಮ್ಮ ಪವಿತ್ರ ಉಡುಗೊರೆಗಳನ್ನ, ನಿಮ್ಮ ಹರಕೆಯ ಕಾಣಿಕೆಗಳನ್ನ ಮಾತ್ರ ತಗೊಂಡು ಹೋಗಬೇಕು. 27 ಅಲ್ಲಿ ನಿಮ್ಮ ಸರ್ವಾಂಗಹೋಮ ಬಲಿಯ ಪ್ರಾಣಿಗಳ ಮಾಂಸವನ್ನ, ರಕ್ತವನ್ನ+ ನಿಮ್ಮ ದೇವರಾದ ಯೆಹೋವನ ಯಜ್ಞವೇದಿ ಮೇಲೆ ಅರ್ಪಿಸಬೇಕು. ಬೇರೆ ಬಲಿಗಳಿಗಾಗಿ ನೀವು ಅರ್ಪಿಸೋ ಪ್ರಾಣಿಗಳ ರಕ್ತವನ್ನ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಪಕ್ಕದಲ್ಲಿ ಸುರಿಬೇಕು.+ ಅವುಗಳ ಮಾಂಸ ತಿನ್ನಬಹುದು.
28 ನಾನು ಹೇಳಿರೋ ಎಲ್ಲಾ ವಿಷ್ಯಗಳನ್ನ ತಪ್ಪದೆ ಪಾಲಿಸಬೇಕು. ಹೀಗೆ ನಿಮ್ಮ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡ್ತಾ ಇರೋದಾದ್ರೆ ನಿಮಗೆ ನಿಮ್ಮ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ.
29 ನೀವು ವಶ ಮಾಡ್ಕೊಳ್ಳೋ ದೇಶದ ಜನ್ರನ್ನ ನಿಮ್ಮ ದೇವರಾದ ಯೆಹೋವ ನಾಶ ಮಾಡಿ+ ಆ ದೇಶದಲ್ಲಿ ನೀವು ವಾಸ ಮಾಡ್ತಿರುವಾಗ 30 ಆ ಜನ್ರ ಬಲೆಗೆ ಬೀಳಬೇಡಿ. ಈ ವಿಷ್ಯದಲ್ಲಿ ಹುಷಾರಾಗಿರಿ. ಅವ್ರ ದೇವರುಗಳ ಬಗ್ಗೆ ತಿಳ್ಕೊಳ್ಳೋಕೆ ಹೋಗಬೇಡಿ. ‘ಅವರು ತಮ್ಮ ದೇವರುಗಳನ್ನ ಹೇಗೆ ಆರಾಧಿಸ್ತಿದ್ರು? ನಾನೂ ಅದನ್ನೇ ಮಾಡ್ತೀನಿ’ + ಅನ್ನಬೇಡಿ. 31 ಆ ಜನ ತಮ್ಮ ದೇವರುಗಳನ್ನ ಆರಾಧಿಸೋ ತರ ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಬಾರದು. ಯಾಕಂದ್ರೆ ಯೆಹೋವ ದ್ವೇಷಿಸೋ ಎಲ್ಲ ಅಸಹ್ಯ ವಿಷ್ಯಗಳನ್ನ ಅವರು ತಮ್ಮ ದೇವರುಗಳಿಗಾಗಿ ಮಾಡ್ತಾರೆ. ಎಷ್ಟರ ಮಟ್ಟಿಗಂದ್ರೆ ಆ ದೇವರುಗಳಿಗೆ ಬಲಿ ಅರ್ಪಿಸೋಕೆ ತಮ್ಮ ಮಕ್ಕಳನ್ನೇ ಬೆಂಕಿಯಲ್ಲಿ ಸುಡ್ತಾರೆ.+ 32 ನಾನು ಹೇಳಿರೋ ಪ್ರತಿಯೊಂದು ವಿಷ್ಯವನ್ನ ನೀವು ಜಾಗ್ರತೆಯಿಂದ ಪಾಲಿಸಬೇಕು.+ ಆ ಆಜ್ಞೆಗಳಿಗೆ ಏನನ್ನೂ ಸೇರಿಸಬಾರದು, ಏನನ್ನೂ ತೆಗಿಬಾರದು.+