ಯೆಹೋಶುವ
5 ಇಸ್ರಾಯೇಲ್ಯರು ಯೋರ್ದನ್ ನದಿ ದಾಟೋಕೆ ಯೆಹೋವ ಅದನ್ನ ಒಣಗಿಸಿಬಿಟ್ಟನು ಅನ್ನೋ ಸುದ್ದಿ ಯೋರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ+ ಮತ್ತು ಸಮುದ್ರದ ಕಡೆಗಿದ್ದ ಕಾನಾನ್ಯರ+ ಎಲ್ಲ ರಾಜರಿಗೆ ಮುಟ್ತು. ಇದನ್ನ ಕೇಳಿ ಭಯದಿಂದ ಅವ್ರ ಹೃದಯ ನಡುಗ್ತು.*+ ಇಸ್ರಾಯೇಲ್ಯರಿಂದಾಗಿ ಅವ್ರಿಗೆ ಧೈರ್ಯನೇ ಇಲ್ಲದ ಹಾಗಾಯ್ತು.+
2 ಆ ಸಮಯದಲ್ಲಿ ಯೆಹೋವ ಯೆಹೋಶುವನಿಗೆ “ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡು”*+ ಅಂದನು. 3 ಆಗ ಯೆಹೋಶುವ ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಗಿಬೆಯತ್-ಹಾರಲೊತ್* ಅನ್ನೋ ಜಾಗದಲ್ಲಿ ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡಿದನು.+ 4 ಯೆಹೋಶುವ ಯಾಕೆ ಸುನ್ನತಿ ಮಾಡಿದನಂದ್ರೆ, ಈಜಿಪ್ಟಿಂದ ಬಂದಿದ್ದ ಗಂಡಸ್ರೆಲ್ಲ ಅಂದ್ರೆ ಯುದ್ಧ ಮಾಡ್ತಿದ್ದ ಗಂಡಸ್ರೆಲ್ಲ* ಕಾಡಲ್ಲಿ ಪ್ರಯಾಣ ಮಾಡುವಾಗ ತೀರಿಹೋದ್ರು.+ 5 ಈಜಿಪ್ಟನ್ನ ಬಿಟ್ಟುಬಂದ ಎಲ್ಲ ಗಂಡಸ್ರಿಗೆ ಸುನ್ನತಿ ಆಗಿತ್ತು. ಆದ್ರೆ ಅಲ್ಲಿಂದ ಹೊರಟ ಮೇಲೆ ಕಾಡಲ್ಲಿ ಹುಟ್ಟಿದವರಿಗೆ ಸುನ್ನತಿ ಆಗಿರಲಿಲ್ಲ. 6 ಈಜಿಪ್ಟನ್ನ ಬಿಟ್ಟು ಬಂದ ಇಡೀ ಜನಾಂಗ ಅಂದ್ರೆ ಯುದ್ಧ ಮಾಡೋಕೆ ಅರ್ಹರಾಗಿದ್ದ ಗಂಡಸ್ರೆಲ್ಲ ಯೆಹೋವನ ಮಾತು ಕೇಳದೆ ಇದ್ದದ್ರಿಂದ ಅವ್ರೆಲ್ಲ ಸಾಯೋ ತನಕ+ ಇಸ್ರಾಯೇಲ್ಯರು ಕಾಡಲ್ಲೇ 40 ವರ್ಷ ಅಲೆದಾಡಿದ್ರು.+ ಯೆಹೋವ ತನ್ನ ಜನ್ರಿಗೆ ಹಾಲೂ ಜೇನೂ ಹರಿಯೋ ದೇಶ+ ಕೊಡ್ತೀನಿ ಅಂತ ಅವ್ರ ತಾತ-ಮುತ್ತಾತರಿಗೆ ಮಾತು ಕೊಟ್ಟಿದ್ದನು.+ ಆದ್ರೆ ಯಾವುದೇ ಕಾರಣಕ್ಕೂ ಅವ್ರಿಗೆ ಆ ದೇಶ ನೋಡೋಕೆ ಬಿಡಲ್ಲ ಅಂತ ಯೆಹೋವ ಶಪಥ ಮಾಡಿದ್ದನು.+ 7 ಹಾಗಾಗಿ ದೇವರು ಅವ್ರ ಬದ್ಲು ಅವ್ರ ಮಕ್ಕಳನ್ನ ಆ ದೇಶಕ್ಕೆ ಕರ್ಕೊಂಡು ಬಂದನು.+ ಯೆಹೋಶುವ ಅವ್ರಿಗೆ ಸುನ್ನತಿ ಮಾಡಿದ. ಯಾಕಂದ್ರೆ ಪ್ರಯಾಣದ ಸಮಯದಲ್ಲಿ ಅವ್ರಿಗೆ ಸುನ್ನತಿ ಆಗಿರಲಿಲ್ಲ.
8 ಇಡೀ ಜನಾಂಗಕ್ಕೆ ಸುನ್ನತಿಯಾದ ಮೇಲೆ ಅವರು ಚೇತರಿಸ್ಕೊಳ್ಳೋ ತನಕ ತಾವು ಪಾಳೆಯ ಹೂಡಿದ್ದಲ್ಲೇ ಉಳ್ಕೊಂಡ್ರು.
9 ಆಗ ಯೆಹೋವ ಯೆಹೋಶುವನಿಗೆ “ಈಜಿಪ್ಟ್ ಜನ್ರು ನಿಮಗೆ ಮಾಡಿದ ಅವಮಾನವನ್ನ ಇವತ್ತು ತೆಗೆದುಹಾಕ್ತಿನಿ”* ಅಂದನು. ಹಾಗಾಗಿ ಇವತ್ತಿಗೂ ಆ ಜಾಗಕ್ಕೆ ಗಿಲ್ಗಾಲ್*+ ಅಂತ ಹೆಸ್ರಿದೆ.
10 ಇಸ್ರಾಯೇಲ್ಯರು ಯೆರಿಕೋವಿನ ಬಯಲು ಪ್ರದೇಶದ ಗಿಲ್ಗಾಲಲ್ಲಿ ಹೂಡಿದ್ದ ಪಾಳೆಯದಲ್ಲೇ ಇದ್ರು. ಆ ತಿಂಗಳ 14ನೇ ದಿನ ಸಾಯಂಕಾಲ ಪಸ್ಕ ಹಬ್ಬ ಮಾಡಿದ್ರು.+ 11 ಪಸ್ಕ ಹಬ್ಬದ ಮಾರನೇ ದಿನ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು. ಅದೇ ದಿನ ಅವರು ಹುಳಿ ಇಲ್ಲದ ರೊಟ್ಟಿ,+ ಸುಟ್ಟ ಧಾನ್ಯಗಳನ್ನ ತಿಂದ್ರು. 12 ದೇಶದ ಬೆಳೆಯನ್ನ ತಿಂದ ದಿನಾನೇ ಮನ್ನ ನಿಂತೋಯ್ತು. ಅವತ್ತಿಂದ ಇಸ್ರಾಯೇಲ್ಯರಿಗೆ ಮನ್ನ ಸಿಗಲಿಲ್ಲ.+ ಆದ್ರೆ ಆ ವರ್ಷದಿಂದ ಅವರು ಕಾನಾನ್ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು.+
13 ಒಂದಿನ ಯೆಹೋಶುವ ಯೆರಿಕೋವಿನ ಹತ್ರ ಇದ್ದಾಗ ಒಬ್ಬ ಮನುಷ್ಯ+ ಕೈಯಲ್ಲಿ ಕತ್ತಿ ಹಿಡ್ಕೊಂಡು ನಿಂತಿರೋದನ್ನ+ ನೋಡಿದ. ಯೆಹೋಶುವ ಅವನ ಹತ್ರ ಹೋಗಿ “ನೀನು ನಮ್ಮ ಕಡೆಯವ್ನಾ ಅಥವಾ ನಮ್ಮ ವಿರೋಧಿಗಳ ಕಡೆಯವ್ನಾ?” ಅಂತ ಕೇಳಿದ. 14 ಅದಕ್ಕೆ ಅವನು “ನಾನು ಇಬ್ರ ಕಡೆಯವನೂ ಅಲ್ಲ, ನಾನು ಯೆಹೋವನ ಸೈನ್ಯದ ನಾಯಕ”*+ ಅಂದನು. ಆಗ ಯೆಹೋಶುವ ಮಂಡಿಯೂರಿ ಬಗ್ಗಿ “ನಿಮ್ಮ ಈ ಸೇವಕ ಏನ್ ಮಾಡಬೇಕು, ಹೇಳಿ ಯಜಮಾನ” ಅಂದ. 15 ಆಗ ಯೆಹೋವನ ಸೈನ್ಯದ ನಾಯಕ ಯೆಹೋಶುವನಿಗೆ “ನಿನ್ನ ಚಪ್ಪಲಿ ಬಿಚ್ಚಿಡು, ಯಾಕಂದ್ರೆ ನೀನು ನಿಂತಿರೋ ಜಾಗ ಪವಿತ್ರವಾದ ಜಾಗ” ಅಂದನು. ತಕ್ಷಣ ಯೆಹೋಶುವ ಹಾಗೇ ಮಾಡಿದ.+