ಯೆಹೋಶುವ
24 ಆಮೇಲೆ ಯೆಹೋಶುವ ಇಸ್ರಾಯೇಲಿನ ಎಲ್ಲ ಕುಲಗಳನ್ನ ಅವುಗಳ ಹಿರಿಯರನ್ನ ಮುಖ್ಯಸ್ಥರನ್ನ ನ್ಯಾಯಾಧೀಶರನ್ನ ಅಧಿಕಾರಿಗಳನ್ನ+ ಶೆಕೆಮಿನಲ್ಲಿ ಒಟ್ಟು ಸೇರಿಸಿದ. ಅವರು ಬಂದು ಸತ್ಯ ದೇವರ ಮುಂದೆ ನಿಂತ್ರು. 2 ಯೆಹೋಶುವ ಎಲ್ಲ ಜನ್ರಿಗೆ ಹೀಗಂದ: “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ಅಬ್ರಹಾಮನ ಮತ್ತು ನಾಹೋರನ ತಂದೆ ತೆರಹ ಮತ್ತು ನಿಮ್ಮ ಬೇರೆ ಪೂರ್ವಜರು+ ತುಂಬ ಸಮಯದ ಹಿಂದೆ ನದಿ* ಆಕಡೆ ಇದ್ರು.+ ಬೇರೆ ದೇವರುಗಳನ್ನ ಆರಾಧನೆ ಮಾಡ್ತಿದ್ರು.+
3 ಸ್ವಲ್ಪ ಸಮಯ ಆದ್ಮೇಲೆ ನಾನು, ನಿಮ್ಮ ಪೂರ್ವಜ ಅಬ್ರಹಾಮನನ್ನ+ ನದಿ ಆಕಡೆಯಿಂದ ಬರೋಕೆ ಹೇಳಿ ಕಾನಾನ್ ದೇಶದಲ್ಲೆಲ್ಲ ಸುತ್ತಾಡೋ ತರ ಮಾಡ್ದೆ. ಅವನ ಸಂತಾನವನ್ನ ಜಾಸ್ತಿ ಮಾಡ್ದೆ.+ ಅವನಿಗೆ ಇಸಾಕನನ್ನ ಕೊಟ್ಟೆ.+ 4 ಆಮೇಲೆ ನಾನು ಇಸಾಕನಿಗೆ ಯಾಕೋಬ, ಏಸಾವನನ್ನ+ ಕೊಟ್ಟೆ. ಏಸಾವನಿಗೆ ಸೇಯೀರ್ ಬೆಟ್ಟವನ್ನ ಸೊತ್ತಾಗಿ ಕೊಟ್ಟೆ.+ ಯಾಕೋಬ, ಅವನ ಮಕ್ಕಳು ಈಜಿಪ್ಟ್ ದೇಶಕ್ಕೆ ಹೋದ್ರು.+ 5 ಆಮೇಲೆ ನಾನು ಮೋಶೆ ಮತ್ತು ಆರೋನನನ್ನ ಕಳಿಸಿ+ ಈಜಿಪ್ಟಿನ ಮೇಲೆ ಕಷ್ಟಗಳನ್ನ ತಂದು+ ನಿಮ್ಮನ್ನ ಅಲ್ಲಿಂದ ಕರ್ಕೊಂಡು ಬಂದೆ. 6 ನಿಮ್ಮ ಪೂರ್ವಜರನ್ನ ಈಜಿಪ್ಟಿಂದ ಕರ್ಕೊಂಡು ಬರುವಾಗ+ ಅವರು ಕೆಂಪು ಸಮುದ್ರದ ಹತ್ರ ಬಂದ್ರು. ಈಜಿಪ್ಟಿನವರು ಯುದ್ಧ ರಥಗಳ, ಕುದುರೆಸವಾರರ ಜೊತೆ ನಿಮ್ಮ ಪೂರ್ವಜರನ್ನ ಅಟ್ಟಿಸ್ಕೊಂಡು ಕೆಂಪು ಸಮುದ್ರದ ತನಕ ಬಂದ್ರು.+ 7 ಆಗ ನಿಮ್ಮ ಪೂರ್ವಜರು ಯೆಹೋವನಾದ ನನ್ನನ್ನ ಬೇಡ್ಕೊಂಡ್ರು.+ ಹಾಗಾಗಿ ನಿಮ್ಮ ಮತ್ತು ಈಜಿಪ್ಟಿನವರ ಮಧ್ಯ ನಾನು ಕತ್ತಲು ಕವಿಯೋ ತರ ಮಾಡಿ ಈಜಿಪ್ಟಿನವರನ್ನ ಸಮುದ್ರದ ನೀರಿಂದ ಮುಚ್ಚಿ ಅದ್ರಲ್ಲಿ ಮುಳುಗಿಸಿಬಿಟ್ಟೆ.+ ಈಜಿಪ್ಟಲ್ಲಿ ನಾನು ಏನು ಮಾಡ್ದೆ ಅಂತ ಕಣ್ಣಾರೆ ನೋಡಿದ್ರಿ.+ ಆಮೇಲೆ ತುಂಬ ವರ್ಷ ಕಾಡಲ್ಲಿ ವಾಸ ಮಾಡಿದ್ರಿ.+
8 ಆಮೇಲೆ ನಾನು ನಿಮ್ಮನ್ನ ಯೋರ್ದನಿನ ಆಕಡೆ* ವಾಸ ಮಾಡ್ತಿದ್ದ ಅಮೋರಿಯರ ದೇಶಕ್ಕೆ ಕರ್ಕೊಂಡು ಹೋದೆ. ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದ್ರು.+ ಆದ್ರೆ ನೀವು ಆ ದೇಶನ ವಶ ಮಾಡ್ಕೊಳ್ಳೋ ತರ ನಾನು ಅವ್ರನ್ನ ನಿಮ್ಮ ಕೈಗೆ ಒಪ್ಪಿಸಿ ನಾಶ ಮಾಡಿಬಿಟ್ಟೆ.+ 9 ಆಮೇಲೆ ಚಿಪ್ಪೋರನ ಮಗ ಮೋವಾಬಿನ ರಾಜನಾಗಿದ್ದ ಬಾಲಾಕ ಇಸ್ರಾಯೇಲಿನ ವಿರುದ್ಧ ಹೋರಾಡಿದ. ನಿಮ್ಮ ಮೇಲೆ ಶಾಪ ಹಾಕೋಕೆ ಬೆಯೋರನ ಮಗ ಬಿಳಾಮನನ್ನ ಕರೆಸಿದ.+ 10 ಆದ್ರೆ ಬಿಳಾಮ ಹೇಳೋದನ್ನ ನಾನು ಕೇಳಿಸ್ಕೊಳ್ಳದೆ+ ಅವನು ಪದೇಪದೇ ನಿಮಗೆ ಆಶೀರ್ವದಿಸೋ ತರ ಮಾಡ್ದೆ.+ ನಿಮ್ಮನ್ನ ಅವನ ಕೈಯಿಂದ ಬಿಡಿಸಿದೆ.+
11 ಆಮೇಲೆ ನೀವು ಯೋರ್ದನ್ ದಾಟಿ+ ಯೆರಿಕೋಗೆ ಬಂದ್ರಿ.+ ಯೆರಿಕೋ ನಾಯಕರು,* ಅಮೋರಿಯರು, ಪೆರಿಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು ಮತ್ತು ಯೆಬೂಸಿಯರು ನಿಮ್ಮ ವಿರುದ್ಧ ಹೋರಾಡಿದ್ರು. ಆದ್ರೆ ನಾನು ಅವರನ್ನ ನಿಮ್ಮ ಕೈಗೆ ಒಪ್ಪಿಸಿದೆ.+ 12 ಹಾಗಾಗಿ ನೀವು ಹೋಗೋ ಮುಂಚೆನೇ ನಾನು ಅವ್ರಲ್ಲಿ ನಿರಾಶೆ* ಹುಟ್ಟಿಸಿದೆ. ಆ ನಿರಾಶೆ ಅಮೋರಿಯರ ಇಬ್ಬರು ರಾಜರನ್ನ ನಿಮ್ಮ ಮುಂದಿಂದ ಓಡಿಸಿದ ತರಾನೇ ಇವ್ರನ್ನೂ ಓಡಿಸಿಬಿಡ್ತು.+ ಇದು ನಿಮ್ಮ ಕತ್ತಿಯಿಂದಾಗ್ಲಿ ನಿಮ್ಮ ಬಿಲ್ಲಿಂದಾಗ್ಲಿ ಆಗಲಿಲ್ಲ.+ 13 ಹೀಗೆ ನೀವು ಕಷ್ಟಪಟ್ಟು ಸಂಪಾದಿಸದ ಪ್ರದೇಶನ, ನೀವು ಕಟ್ಟದ ಪಟ್ಟಣಗಳನ್ನ ನಿಮಗೆ ಕೊಟ್ಟೆ.+ ಈಗ ನೀವು ಅವುಗಳಲ್ಲಿ ಇದ್ದೀರ. ನೀವು ನೆಡದ ದ್ರಾಕ್ಷಿಯ ತೋಟದಿಂದ, ಆಲಿವ್ ತೋಟದಿಂದ ಹಣ್ಣುಗಳನ್ನ ತಿಂತಿದ್ದೀರ.’+
14 ಹಾಗಾಗಿ ಯೆಹೋವನಿಗೆ ಭಯಪಡಿ. ನಿಯತ್ತಿಂದ* ಮತ್ತು ನಂಬಿಕೆಯಿಂದ* ಆತನನ್ನ ಆರಾಧಿಸಿ.+ ನದಿ ಆಕಡೆಯಲ್ಲಿ ಮತ್ತು ಈಜಿಪ್ಟಲ್ಲಿ ನಿಮ್ಮ ಪೂರ್ವಜರು ಆರಾಧನೆ ಮಾಡ್ತಿದ್ದ ದೇವರುಗಳನ್ನ ತೆಗೆದುಹಾಕಿ+ ಯೆಹೋವನನ್ನೇ ಆರಾಧಿಸಿ. 15 ಯೆಹೋವನನ್ನ ಆರಾಧಿಸೋಕೆ ನಿಮಗೆ ಇಷ್ಟ ಇಲ್ಲಾಂದ್ರೆ ನೀವು ಯಾರನ್ನ ಆರಾಧಿಸಬೇಕಂತ ಇವತ್ತೇ ಆರಿಸ್ಕೊಳ್ಳಿ.+ ನದಿ ಆಕಡೆ ನಿಮ್ಮ ಪೂರ್ವಜರು ಆರಾಧಿಸ್ತಿದ್ದ ದೇವರುಗಳನ್ನ ಆರಾಧಿಸ್ತೀರಾ+ ಅಥವಾ ನೀವು ಯಾರ ದೇಶದಲ್ಲಿ ವಾಸವಾಗಿದ್ದೀರೋ ಆ ಅಮೋರಿಯರ ದೇವರುಗಳನ್ನ ಆರಾಧಿಸ್ತೀರಾ ನೀವೇ ತೀರ್ಮಾನ ಮಾಡಿ.+ ಆದ್ರೆ ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಆರಾಧಿಸ್ತೀವಿ.”
16 ಆಗ ಜನ ಹೀಗೆ ಉತ್ತರ ಕೊಟ್ರು: “ಯೆಹೋವನನ್ನ ತೊರೆದು ಬೇರೆ ದೇವರುಗಳ ಆರಾಧನೆ ಮಾಡೋದ್ರ ಬಗ್ಗೆ ಯೋಚಿಸಕ್ಕೂ ನಮ್ಮಿಂದ ಆಗಲ್ಲ. 17 ನಮ್ಮ ದೇವರಾದ ಯೆಹೋವನೇ ನಮ್ಮನ್ನ ಮತ್ತು ನಮ್ಮ ಪೂರ್ವಜರನ್ನ ಈಜಿಪ್ಟಿಂದ ಕರ್ಕೊಂಡು ಬಂದನು,+ ಗುಲಾಮಗಿರಿಯಿಂದ ಬಿಡಿಸಿದನು.+ ನಮ್ಮ ಕಣ್ಮುಂದೆನೇ ಅದ್ಭುತಗಳನ್ನ ಮಾಡಿದನು.+ ನಮ್ಮನ್ನ ದಾರಿಯುದ್ದಕ್ಕೂ, ನಾವು ದಾಟ್ತಾ ಬಂದ ಜನಾಂಗಗಳಿಂದ ಆತನೇ ನಮ್ಮನ್ನ ಕಾಪಾಡ್ತಾ ಬಂದನು.+ 18 ಈ ದೇಶದಲ್ಲಿ ನಮಗಿಂತ ಮುಂಚೆ ಇದ್ದ ಎಲ್ಲ ಜನಾಂಗಗಳನ್ನ ಅಮೋರಿಯರನ್ನ ಯೆಹೋವ ಓಡಿಸಿಬಿಟ್ಟನು. ಹಾಗಾಗಿ ನಾವೂ ಯೆಹೋವನನ್ನೇ ಆರಾಧಿಸ್ತೀವಿ. ಯಾಕಂದ್ರೆ ಆತನೇ ನಮ್ಮ ದೇವರು.”
19 ಆಗ ಯೆಹೋಶುವ ಜನ್ರಿಗೆ ಹೀಗಂದ: “ಯೆಹೋವನನ್ನ ಆರಾಧಿಸೋಕೆ ನಿಮ್ಮಿಂದ ನಿಜವಾಗ್ಲೂ ಆಗುತ್ತಾ? ಯಾಕಂದ್ರೆ ಆತನು ಪವಿತ್ರ ದೇವರಾಗಿದ್ದಾನೆ.+ ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರಾಗಿದ್ದಾನೆ.+ ಒಂದುವೇಳೆ ನೀವು ಈ ವಿಷ್ಯದಲ್ಲಿ ತಪ್ಪಿದ್ರೆ ಆತನು ನಿಮ್ಮ ಅಪರಾಧಗಳನ್ನ* ಪಾಪಗಳನ್ನ ಕ್ಷಮಿಸಲ್ಲ.+ 20 ನೀವು ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸಿದ್ರೆ ಆತನು ನಿಮಗೆ ಬೆನ್ನು ಹಾಕ್ತಾನೆ. ನಿಮಗೆ ಒಳ್ಳೇದನ್ನ ಮಾಡಿದ ಆತನೇ ನಿಮ್ಮನ್ನ ಸರ್ವನಾಶ ಮಾಡಿಬಿಡ್ತಾನೆ.”+
21 ಜನ್ರು ಯೆಹೋಶುವಗೆ “ಇಲ್ಲ, ನಾವು ಯೆಹೋವನನ್ನೇ ಆರಾಧಿಸ್ತೀವಿ!” ಅಂದ್ರು.+ 22 ಆಗ ಯೆಹೋಶುವ ಜನ್ರಿಗೆ “ಯೆಹೋವನನ್ನ ಆರಾಧಿಸಬೇಕಂತ ನೀವೇ ನಿರ್ಧಾರ ಮಾಡಿದ್ದೀರ. ಇದಕ್ಕೆ ನಿಮಗೆ ನೀವೇ ಸಾಕ್ಷಿ”+ ಅಂದ. ಅದಕ್ಕೆ ಅವರು “ಹೌದು ಈ ಮಾತಿಗೆ ನಾವೇ ಸಾಕ್ಷಿ” ಅಂದ್ರು.
23 “ಹಾಗಾಗಿ ನಿಮ್ಮ ಮಧ್ಯ ಇರೋ ಬೇರೆ ದೇವರುಗಳನ್ನ ತೆಗೆದುಹಾಕಿ. ಇಸ್ರಾಯೇಲ್ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧಿಸಿ.” 24 ಅದಕ್ಕೆ ಜನ್ರು ಯೆಹೋಶುವನಿಗೆ ಹೀಗಂದ್ರು: “ನಾವು ನಮ್ಮ ದೇವರಾಗಿರೋ ಯೆಹೋವನನ್ನ ಆರಾಧಿಸ್ತೀವಿ. ಆತನ ಮಾತನ್ನ ಕೇಳ್ತೀವಿ.”
25 ಹಾಗಾಗಿ ಆ ದಿನ ಜನ್ರ ಜೊತೆ ಯೆಹೋಶುವ ಒಂದು ಒಪ್ಪಂದ ಮಾಡಿ, ಶೆಕೆಮಿನಲ್ಲಿ ಅವರಿಗೋಸ್ಕರ ಒಂದು ನಿಯಮವನ್ನ ಸ್ಥಾಪಿಸಿದ. 26 ಆಮೇಲೆ ಯೆಹೋಶುವ ಈ ಮಾತುಗಳನ್ನ ದೇವರ ನಿಯಮ ಪುಸ್ತಕದಲ್ಲಿ+ ಬರೆದ ಮತ್ತು ದೊಡ್ಡ ಕಲ್ಲನ್ನ+ ತಗೊಂಡು ಹೋಗಿ ಯೆಹೋವನ ಪವಿತ್ರ ಸ್ಥಳದ ಹತ್ರ ಇದ್ದ ದೊಡ್ಡ ಮರದ ಕೆಳಗೆ ನಿಲ್ಲಿಸಿದ.
27 ಯೆಹೋಶುವ ಮುಂದುವರಿಸಿ ಎಲ್ಲ ಜನ್ರಿಗೆ “ನೋಡಿ! ಈ ಕಲ್ಲು ನಮಗೆ ಸಾಕ್ಷಿಯಾಗಿ ಇರುತ್ತೆ.+ ಯಾಕಂದ್ರೆ ಯೆಹೋವ ನಮಗೆ ಹೇಳಿದ ಎಲ್ಲ ಮಾತುಗಳನ್ನ ಇದು ಕೇಳಿಸ್ಕೊಂಡಿದೆ. ನಿಮ್ಮ ದೇವರನ್ನ ಬಿಟ್ಟು ಹೋಗದೆ ಇರೋಕೆ ಇದು ಸಾಕ್ಷಿಯಾಗಿ ಇರುತ್ತೆ” 28 ಅಂತ ಹೇಳಿ ಜನ್ರನ್ನ ಅವ್ರವ್ರ ಪ್ರದೇಶಗಳಿಗೆ ಕಳಿಸಿಬಿಟ್ಟ.+
29 ಇದೆಲ್ಲ ನಡೆದ ಮೇಲೆ ಯೆಹೋವನ ಸೇವಕ ಯೆಹೋಶುವ ತೀರಿಹೋದ. ಆಗ ಅವನಿಗೆ 110 ವರ್ಷ.+ 30 ಅವನಿಗೆ ಆಸ್ತಿಯಾಗಿ ಸಿಕ್ಕಿದ್ದ ತಿಮ್ನತ್-ಸೆರಹದಲ್ಲಿ+ ಅವನನ್ನ ಸಮಾಧಿ ಮಾಡಿದ್ರು. ಅದು ಗಾಷ್ ಬೆಟ್ಟದ ಉತ್ತರಕ್ಕಿರೋ ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿತ್ತು. 31 ಯೆಹೋಶುವ ಮತ್ತು ಯೆಹೋಶುವನಿಗಿಂತ ಜಾಸ್ತಿ ವರ್ಷ ಬದುಕಿದ ಹಿರಿಯರು ಜೀವಂತವಾಗಿರೋ ತನಕ ಇಸ್ರಾಯೇಲ್ಯರು ಯೆಹೋವನ ಆರಾಧನೆಯನ್ನೇ ಮಾಡಿದ್ರು. ಯೆಹೋವ ಇಸ್ರಾಯೇಲ್ಯರಿಗಾಗಿ ಮಾಡಿದ ಕೆಲಸಗಳನ್ನೆಲ್ಲ ಆ ಹಿರಿಯರು ನೋಡಿದ್ದರು.+
32 ಇಸ್ರಾಯೇಲ್ಯರು ಈಜಿಪ್ಟಿಂದ ತಂದಿದ್ದ ಯೋಸೇಫನ ಮೂಳೆಗಳನ್ನ+ ಶೆಕೆಮ್ ಅನ್ನೋ ಊರಿನ ಹೊಲದಲ್ಲಿ ಹೂಣಿಟ್ರು. ಯಾಕೋಬ ಶೆಕೆಮನ ತಂದೆ ಹಮೋರನ ಮಕ್ಕಳಿಗೆ+ 100 ಬೆಳ್ಳಿ ತುಂಡುಗಳನ್ನ+ ಕೊಟ್ಟು ಈ ಹೊಲವನ್ನ ಖರೀದಿಸಿದ್ದ. ಆಮೇಲೆ ಇದು ಯೋಸೇಫನ ಮಕ್ಕಳ ಆಸ್ತಿ ಆಯ್ತು.+
33 ಆರೋನನ ಮಗ ಎಲ್ಲಾಜಾರನೂ ತೀರಿಹೋದ.+ ಆಗ ಜನ್ರು ಅವನನ್ನ ಅವನ ಮಗ ಫೀನೆಹಾಸನ+ ಬೆಟ್ಟದಲ್ಲಿ ಹೂಣಿಟ್ರು. ಆ ಜಾಗ ಅವನಿಗೆ ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿ ಆಸ್ತಿಯಾಗಿ ಸಿಕ್ಕಿತ್ತು.