ಗೃಹ ಜೀವನದ ಹಿಂಸಾಚಾರವನ್ನು ಯಾವುದು ಆಗಿಸುತ್ತದೆ?
“ಬಾಹ್ಯ ಸಮಾಜದ ಒತ್ತಡ, ಪ್ರಯಾಸ, ಮತ್ತು ವಿಚಾರಹೀನತೆಗಳಿಂದ ಆಶ್ರಯಸ್ಥಾನವಾಗುವುದರ ಬದಲಿಗೆ ಕುಟುಂಬವು ಅನೇಕ ವೇಳೆ ಈ ಪ್ರಯಾಸಗಳನ್ನು ರವಾನಿಸುತ್ತದೆ ಯಾ ಅದನ್ನು ಉತ್ಪ್ರೇಕ್ಷಿಸುವುದೂ ಉಂಟು.”—ದಿ ಇಂಟಿಮೆಟ್ ಎನ್ವೈರನ್ಮೆಂಟ್—ಎಕ್ಸ್ಪ್ಲೋರಿಂಗ್ ಮ್ಯಾರೆಜ್ ಆ್ಯಂಡ್ ದ ಫ್ಯಾಮಿಲಿ.
ಕುಟುಂಬ ಹಿಂಸಾಚಾರ ಎಂಬ ವಿಷಯದ ಮೇಲೆ ಸಂಶೋಧನೆಯು ಸಂಬಂಧಸೂಚಕವಾಗಿ ಒಂದು ಹೊಸತಾದ ಪ್ರಯತ್ನವಾಗಿದೆ. ಇತ್ತೀಚಿನ ದಶಕಗಳಲ್ಲಿ ಮಾತ್ರ ಈ ಬಗೆಗೆ ಸವಿಸ್ತಾರವಾದ ಸಮೀಕ್ಷೆಗಳು ನಡೆದಿವೆ. ಇಂಥ ತನಿಖೆಗಳ ಫಲಿತಾಂಶಗಳು ಸದಾ ಹೊಂದಿಕೆಯುಳ್ಳವುಗಳಾಗಿಲ್ಲವಾದರೂ ಗೃಹ ಜೀವನದ ಹಿಂಸಾಚಾರಕ್ಕೆ ಸಹಾಯ ಮಾಡುವ ಕೆಲವು ಮೂಲ ಸಂಗತಿಗಳನ್ನು ಕಂಡುಹಿಡಿಯಲಾಗಿದೆ. ಇವುಗಳಲ್ಲಿ ಕೆಲವನ್ನು ನಾವು ಪರಿಗಣಿಸೋಣ.
ಕುಟುಂಬ ಹಿನ್ನೆಲೆಯು ಯಾವ ಪಾತ್ರ ವಹಿಸುತ್ತದೆ?
ಸಂಶೋಧಕರಲ್ಲಿ ಅನೇಕರು ಅವರ ಕಂಡುಹಿಡಿತಗಳ ಕುರಿತು ಹೇಳಿದ್ದು: “ನಾವು ಪ್ರಶ್ನಿಸಿದ ದಂಪತಿಗಳು ಎಷ್ಟು ಹೆಚ್ಚು ಹಿಂಸಾತ್ಮಕರಾಗಿದ್ದರೋ, ಮಕ್ಕಳೂ ಅಷ್ಟೇ ಹೆಚ್ಚಾಗಿ ಪರಸ್ಪರವಾಗಿಯೂ ಹೆತ್ತವರ ಕಡೆಗೂ ಹಿಂಸಾತ್ಮಕರಾಗಿದ್ದರು.”
ಕುಟುಂಬ ಹಿಂಸಾಚಾರಕ್ಕೆ ಕೇವಲ ಪ್ರತ್ಯಕ್ಷಸಾಕ್ಷಿಯಾಗಿರುವುದು ಸಹ ಒಬ್ಬ ಪುಟ್ಟನ ಮೇಲೆ ಮಹಾ ಪರಿಣಾಮವನ್ನುಂಟು ಮಾಡುತ್ತದೆ. “ತಾಯಿ ಹೊಡೆಯಲ್ಪಡುವುದನ್ನು ನೋಡುವ ಮಗು, ಮಗು ಹೊಡೆಯಲ್ಪಡುವುದಕ್ಕೆ ಸಮಾನ,” ಎಂದು ಗಮನಿಸುತ್ತಾರೆ ಚಿಕಿತ್ಸಕ ಜಾನ್ ಬ್ರ್ಯಾಡ್ಶಾ. ಎಡ್ ಎಂಬ ಒಬ್ಬ ಯುವಕ ತನ್ನ ತಂದೆಯು ತಾಯಿಗೆ ಹೊಡೆಯುವುದನ್ನು ನೋಡಲು ದ್ವೇಷಿಸುತ್ತಿದ್ದನು. ಆದರೂ, ಅವನು ಆಗ ಇದನ್ನು ಗ್ರಹಿಸದೆ ಇದ್ದಿರಬಹುದಾಗಿದ್ದರೂ, ಪುರುಷರು ಸ್ತ್ರೀಯರನ್ನು ನಿಯಂತ್ರಿಸಬೇಕು, ಮತ್ತು ಹಾಗೆ ಮಾಡಬೇಕಾದರೆ ಅವರು ಸ್ತ್ರೀಯರನ್ನು ಹೆದರಿಸಿ, ನೋಯಿಸಿ, ಹೀನೈಸಬೇಕೆಂದು ಅವನಿಗೆ ಕಲಿಸಲಾಗುತ್ತಿತ್ತು. ಎಡ್ ಪ್ರಾಪ್ತ ವಯಸ್ಕನಾದಾಗ, ಈ ನಿಂದಿಸುವ, ಹಿಂಸಾಚಾರದ ವಿಧಾನಗಳನ್ನು ತನ್ನ ಪತ್ನಿಯ ಮೇಲೆ ಉಪಯೋಗಿಸಿದನು.
ಕೆಲವು ಹೆತ್ತವರು ಎಚ್ಚರಿಕೆಯಿಂದ ತಮ್ಮ ಮಕ್ಕಳು ಟೆಲಿವಿಷನ್ನಲ್ಲಿ ಹಿಂಸಾಚಾರವನ್ನು ನೋಡುವುದನ್ನು ನಿಷೇಧಿಸುತ್ತಾರೆ, ಮತ್ತು ಇದು ಒಳ್ಳೆಯ ಸಂಗತಿ. ಆದರೆ ತಮ್ಮ ಪರಿಣಾಮಕ್ಕೊಳಗಾಗುವ ಮಕ್ಕಳಿಗೆ ಅನುಕರಣೀಯ ಮಾದರಿಗಳಾಗಿರುವ ತಮ್ಮ ಸ್ವಂತ ವರ್ತನೆಗಳನ್ನು ಕ್ರಮಗೊಳಿಸುವ ಸಂಬಂಧದಲ್ಲಿ ಹೆತ್ತವರು ಇನ್ನೂ ಹೆಚ್ಚು ಎಚ್ಚರಿಕೆಯಿಂದಿರಬೇಕು.
ಒತ್ತಡವು ಯಾವ ಪಾತ್ರ ವಹಿಸುತ್ತದೆ?
ಗರ್ಭಧಾರಣೆ, ನಿರುದ್ಯೋಗ, ಹೆತ್ತವರಲ್ಲೊಬ್ಬರ ಮರಣ, ಸ್ಥಳ ಬದಲಾವಣೆ, ಕಾಯಿಲೆ, ಮತ್ತು ಆರ್ಥಿಕ ಸಮಸ್ಯೆಗಳು, ಇತರ ವಿಷಯಗಳಂತೆಯೇ ಒತ್ತಡಗಳನ್ನು ತರುತ್ತದೆ. ಅಧಿಕಾಂಶ ಜನರು ಒತ್ತಡವನ್ನು ಹಿಂಸಾಚಾರವಿಲ್ಲದೆ ನಿಭಾಯಿಸುತ್ತಾರೆ. ಆದರೆ ಕೆಲವರಿಗೆ ಒತ್ತಡವು, ವಿಶೇಷವಾಗಿ ಇತರ ಸಂಗತಿಗಳು ಕೂಡಿರುವಲ್ಲಿ, ಹಿಂಸಾಚಾರಕ್ಕೆ ಪೀಠಿಕೆಯಾಗಬಲ್ಲದು. ಉದಾಹರಣೆಗೆ, ವೃದ್ಧ ಹೆತ್ತವರ ಪರಾಮರಿಕೆ—ವಿಶೇಷವಾಗಿ ಹೆತ್ತವರು ಕಾಯಿಲೆ ಬಿದ್ದಿರುವಾಗ—ಪರಾಮರಿಸುವವನು ಇತರ ಕುಟುಂಬ ಜವಾಬ್ದಾರಿಗಳಿಂದ ವಿಪರೀತ ಹೇರಲ್ಪಟ್ಟಿರುವಾಗ ಅನೇಕ ವೇಳೆ ಅಪಪ್ರಯೋಗಕ್ಕೆ ನಡೆಸಿದೆ.
ಮಕ್ಕಳನ್ನು ಬೆಳೆಸುವುದು ಒತ್ತಡವನ್ನು ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ, ಕುಟುಂಬದ ಗಾತ್ರದ ಮೇಲೆ ಹೊಂದಿಕೊಂಡು ಮಗುವಿನ ಅಪಪ್ರಯೋಗದ ಸಂಭವನೀಯತೆ ಹೆಚ್ಚಬಹುದು. ಮಕ್ಕಳು ವಿವಾಹ ಜೊತೆಯ ಅಪಪ್ರಯೋಗವನ್ನೂ ಹೆಚ್ಚಿಸಬಹುದು. ಏಕೆಂದರೆ “ಮಕ್ಕಳ ಮೇಲೆ ನಡೆಯುವ ಜಗಳವೇ ದಂಪತಿಗಳನ್ನು ಹೊಡೆತಕ್ಕೆ ನಡೆಸುವುದು ಅತಿ ಹೆಚ್ಚು ಸಂಭಾವ್ಯ,” ಎಂದು ಬಿಹೈಂಡ್ ಕ್ಲೋಸ್ಡ್ ಡೋರ್ಸ್ ವರದಿ ಮಾಡುತ್ತದೆ.
ಲಿಂಗ ಜಾತಿಗಳ ಅಯೋಗ್ಯ ವೀಕ್ಷಣ
ಕೆನಡದಲ್ಲಿ ಒಂದು ಸಲಹೆ ನೀಡುವ ತಂಡವನ್ನು ನಡೆಸುವ ಡ್ಯಾನ್ ಬೆಜಾರೆಕ್ ಹೇಳುವುದೇನಂದರೆ ಅಪಪ್ರಯೋಗ ಮಾಡುವ ಪುರುಷರಿಗೆ ಹೆಂಗುಸರ ವಿಷಯದಲ್ಲಿ ತಪ್ಪಾದ ವೀಕ್ಷಣವಿದೆ: “ಯಾವುದೇ ಸಂಸ್ಕೃತಿಯವರಾಗಿರಲಿ, ಪುರುಷರು ಒಂದನೆಯ ನಂಬರಿನವರೆಂದು ನಂಬುವಂತೆ ಅವರನ್ನು ಬೆಳೆಸಲಾಗಿದೆ.” ಅಪಪ್ರಯೋಗ ಮಾಡುವ ಪುರುಷರ ಒಂದು ಚಿಕಿತ್ಸಾ ಕಾರ್ಯಕ್ರಮದ ನೇತಾರರಾಗಿರುವ ಹೇಮಿಷ್ ಸ್ಲಿಂಕ್ಯಾರಾಹೇಳುವುದೇನಂದರೆ, ತಾವು ಸ್ತ್ರೀಯರಿಗಿಂತ ಶ್ರೇಷ್ಠರೆಂದು ನಂಬುವಂತೆ ಮತ್ತು “ಅವರನ್ನು ಶಿಕ್ಷಿಸುವುದು, ಶಿಸ್ತುಗೊಳಿಸುವುದು ಮತ್ತು ಹೆದರಿಸುವುದು” ತಮ್ಮ ಹಕ್ಕೆಂದು ನಂಬುವಂತೆ ಪುರುಷರು ತರಬೇತು ಹೊಂದಿದ್ದಾರೆ.
ಅನೇಕ ದೇಶಗಳಲ್ಲಿ ಪುರುಷನಿಗೆ ತನ್ನ ಹೆಂಡತಿಯನ್ನು ಕೇವಲ ಒಂದು ವಸ್ತುವಿನಂತೆ, ತನ್ನ ಸೊತ್ತಿನ ಒಂದು ಭಾಗದಂತೆ ನೋಡುವ ಹಕ್ಕಿದೆ ಎಂದು ಎಣಿಸಲಾಗುತ್ತದೆ. ಹೆಂಡತಿಯ ಮೇಲೆ ಅವನಿಗಿರುವ ನಿಯಂತ್ರಣ ಮತ್ತು ಅಧಿಕಾರ ನಡೆಸುವಿಕೆಯನ್ನು ಅವನ ಪೌರುಷ ಮತ್ತು ಘನತೆಯ ಮಟ್ಟವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಹೆಂಡತಿಯರಿಗೆ ಭಯಂಕರ ರೀತಿಯಲ್ಲಿ ಹೊಡೆಯಲಾಗುತ್ತದೆ, ಮತ್ತು ಇತರ ರೀತಿಯಲ್ಲಿ ಅಪಪ್ರಯೋಗಿಸಲಾಗುತ್ತದೆ, ಮತ್ತು ಇಂಥ ದೇಶಗಳಲ್ಲಿ ಅದು ಸಮುದಾಚಾರವಾಗಿರುವುದರಿಂದ ನ್ಯಾಯ ಪದ್ಧತಿಗಳು ಅದರ ವಿಷಯ ಕಿಂಚಿತ್ತನ್ನೇ ಮಾಡುತ್ತವೆ. ಪುರುಷನು ಶ್ರೇಷ್ಠನು, ಸ್ತ್ರೀಯು ಕೆಳಮಟ್ಟದವಳು; ಆದುದರಿಂದ ಅವನು ಎಷ್ಟೇ ನೀತಿಗೆಟ್ಟವನು, ಹಿಂಸಾತ್ಮಕನು, ವಿಕೃತಸ್ವಭಾವಿ, ಯಾ ಸ್ವಾರ್ಥಿಯಾಗಿರಲಿ, ಆಕೆ ಅವನಿಗೆ ಪೂರ್ತಿ ವಿಧೇಯಳಾಗಿರಬೇಕು.
ಸಿಬಿಎಸ್ ಟೆಲಿವಿಷನ್ ವರದಿಗಾರ ಮಾರ್ಲಿ ಸೇಫರ್, ಒಂದು ದಕ್ಷಿಣ ಅಮೆರಿಕ ದೇಶದ ಕುರಿತು ವರದಿ ಮಾಡಿದ್ದು: “ಲ್ಯಾಟಿನ್ ಅಮೆರಿಕದಲ್ಲಿ ಪುರುಷ ಶ್ರೇಷ್ಠತೆಯ ಪಂಥ ಇಲ್ಲಿರುವಷ್ಟು ಸ್ಪಷ್ಟವಾಗಿಗಿ ಇನ್ನೆಲ್ಲಿಯೂ ಇಲ್ಲ. . . . ಇದು ಇಡೀ ಸಮಾಜದಲ್ಲಿ, ನ್ಯಾಯಾಲಯದ ಸಮೇತ, ಹರಡಿದೆ. ನ್ಯಾಯಾಲಯದಲ್ಲಿ ತನ್ನ ಗೌರವವನ್ನು ರಕ್ಷಿಸುವುದರಲ್ಲಿ, ಒಬ್ಬ ಪುರುಷನು, ವಿಶೇಷವಾಗಿ ತನ್ನ ಸ್ತ್ರೀಯ ಸಂಬಂಧದಲ್ಲಿ ಶಿಕ್ಷೆಯ ಭಯವಿಲ್ಲದೆ ತನಗೆ ಇಷ್ಟವಿರುವುದನ್ನು ಮಾಡಬಲ್ಲನು.” ಆ ದೇಶ ಮಾಡುವಂತೆ “ಲೋಕದ ಇನ್ನಾವ ಸ್ಥಳವೂ ಸ್ತ್ರೀಯರನ್ನು ಹೀನಯಿಸುವುದಿಲ್ಲ” ಎಂದು ಅವರು ಪ್ರತಿಪಾದಿಸಿದರು. ಆದರೆ ಪುರುಷಾಧಿಕಾರ ಮತ್ತು ಸ್ತ್ರೀಯರನ್ನು ಕೀಳಾಗಿ ನೋಡುವಿಕೆ ವ್ಯಾಪಕವಾಗಿದೆ. ಇದು ಒಂದು ದೇಶದಲ್ಲಿ ಎಷ್ಟೇ ಕಠಿನವಾಗಿದ್ದರೂ ಅದು ಅಲ್ಲಿಗೆ ಮಾತ್ರ ಸೀಮಿತವಾಗಿರುವುದಿಲ್ಲ.
ನ್ಯೂ ಯಾರ್ಕಿನ ಡೊಮೆಸ್ಟಿಕ್ ವೈಲೆನ್ಸ್ ಆ್ಯಂಡ್ ಲಾ ಎನ್ಫೋರ್ಸ್ಮೆಂಟ್ ಏಜನ್ಸಿಯ ಡೈರೆಕ್ಟರ್, ಮಿನ ಷುಲ್ಮೆನ್ ಹೇಳಿದ್ದೇನಂದರೆ ಹಿಂಸಾವರ್ತನೆಯು ಪುರುಷರು ಸ್ತ್ರೀಯರ ಮೇಲೆ ತಮ್ಮ ನಿಯಂತ್ರಣವನ್ನು ಇಟ್ಟುಕೊಳ್ಳಲು ಮತ್ತು ಶಕ್ತಿ ಮತ್ತು ಅಧಿಕಾರವನ್ನು ಪ್ರದರ್ಶಿಸಲು ಉಪಯೋಗಿಸುವ ಉಪಕರಣವಾಗಿದೆ. ಅವರು ಕೂಡಿಸಿ ಹೇಳಿದ್ದು: “ಗೃಹ ಜೀವನದ ಹಿಂಸಾಚಾರ, ಆಧಿಕಾರ ಮತ್ತು ನಿಯಂತ್ರಣದ ದುರುಪಯೋಗದಂತೆ ನಾವು ವೀಕ್ಷಿಸುತ್ತೇವೆ.”
ಕೆಲವು ಪತ್ನಿಹೊಡೆಗರು ಕಡಮೆ ಆತ್ಮಾಭಿಮಾನದಿಂದ ಬಳಲುತ್ತಾರೆ ಮತ್ತು ಇದೇ ಪ್ರವೃತ್ತಿಯನ್ನು ಅವರು ತಮ್ಮ ಬಲಿಪಶುಗಳಲ್ಲಿಯೂ ಉಂಟುಮಾಡುತ್ತಾರೆ. ಅವರು ಇದನ್ನು ಮಾಡುವಲ್ಲಿ ಅವರ ಸ್ವಾಭಿಮಾನ ತೃಪ್ತಿಗೊಳ್ಳುತ್ತದೆ, ಮತ್ತು ತಾವು ಇನ್ನೊಬ್ಬ ವ್ಯಕ್ತಿಗಿಂತ ಶ್ರೇಷ್ಠರು ಮತ್ತು ಅವನ ಮೇಲೆ ನಿಯಂತ್ರಣವಿರುವವರು ಎಂಬ ಅನಿಸಿಕೆ ಅವರಿಗಾಗುವುದು. ಅವರು ತಮ್ಮ ಪುರುಷತ್ವವನ್ನು ಹೀಗೆ ರುಜುಪಡಿಸುತ್ತೇವೆಂದು ಅಭಿಪ್ರಯಿಸುತ್ತಾರೆ. ಆದರೆ, ಇದು ನಿಜವೊ? ಅವರು ತಮ್ಮ ಹಿಂಸಾಚಾರವನ್ನು ದೈಹಿಕವಾಗಿ ಬಲಹೀನರಾಗಿರುವ ಸ್ತ್ರೀಯರ ಮೇಲೆ ನಡೆಸುವುದರಿಂದ, ಇದು ಅವರು ಬಲಾಢ್ಯರಾದ ಪುರುಷರೆಂದು ಸಾಬೀತು ಪಡಿಸುತ್ತದೆಯೆ, ಅಥವಾ ಅವರು ವಿಚಾರಹೀನರೆಂದು ಇದು ತೋರಿಸುತ್ತದೆಯೆ? ಹೆಚ್ಚು ಬಲವಿರುವ ಒಬ್ಬ ಪುರುಷನು, ಬಲಹೀನಳಾದ ಮತ್ತು ಅರಕ್ಷಿತಳಾದ ಸ್ತ್ರೀಗೆ ಹೊಡೆಯುವುದು ನಿಜವಾದ ಪೌರುಷವೆ? ಬಲಾಢ್ಯವಾದ ನೈತಿಕ ಶೀಲವುಳ್ಳ ಒಬ್ಬ ಪುರುಷನು ಹೆಚ್ಚು ಬಲಹೀನರಿಗೆ ಮತ್ತು ಹೆಚ್ಚು ಅರಕ್ಷಿತರಿಗೆ ಪರಿಗಣನೆ ಮತ್ತು ಕನಿಕರವನ್ನು ತೋರಿಸುವನೇ ಹೊರತು ಅವರಿಂದ ಸ್ವಪ್ರಯೇಜನವನ್ನು ಪಡೆದುಕೊಳ್ಳನು.
ಇಂಥ ಅಪಪ್ರಯೋಗಿಯ ವಿವೇಕಹೀನ ವಿಚಾರದ ಇನ್ನೊಂದು ಪ್ರದರ್ಶನವೇನಂದರೆ, ಅವನು ಅನೇಕ ವೇಳೆ ಇಂಥ ಬಡಿತವನ್ನು ಉದ್ರೇಕಿಸಿದ್ದು ಅವನ ಹೆಂಡತಿಯೇ ಎಂದು ಹೇಳಿ ಅವಳನ್ನು ದೂರುವುದೇ. ಅವನು, ‘ನೀನು ಇದನ್ನು ಯೋಗ್ಯ ರೀತಿಯಲ್ಲಿ ಮಾಡದೆ ಇರುವುದೇ ನಾನು ನಿನ್ನನ್ನು ಹೊಡೆಯಲು ಕಾರಣ’ ಎಂದೋ, ‘ಊಟವನ್ನು ಸಮಯ ಮೀರಿ ನನಗೆ ಕೊಟ್ಟಿರುವುದರಿಂದ ತಕ್ಕದಾಗಿರುವುದು ನಿನಗೆ ದೊರೆಯುತ್ತಿದೆ’ ಎಂದೋ ಸೂಚಿಸಬಹುದು, ಇಲ್ಲವೆ ಅವಳಿಗೆ ಹೇಳಲೂ ಬಹುದು. ಅಪಪ್ರಯೋಗಿಯ ಮನಸ್ಸಿನಲ್ಲಿ, ಅದು ಅವಳ ತಪ್ಪು. ಆದರೂ, ವಿವಾಹಜೊತೆಯ ಯಾವುದೇ ತಪ್ಪಿಗೆ ಹೊಡೆಯುವುದು ನ್ಯಾಯವಲ್ಲ.
ಮದ್ಯವು ವ್ಯತ್ಯಾಸವನ್ನು ಮಾಡುತ್ತದೆಯೆ?
ಮದ್ಯವು ನಿಯಂತ್ರಣವನ್ನು ಕಡಮೆ ಮಾಡಿ ಆವೇಗದಿಂದ ವರ್ತಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ, ಇದು ಅಪಪ್ರಯೋಗವನ್ನು ಉದ್ರೇಕಿಸುತ್ತದೆಂದು ಕೆಲವರು ಅಭಿಪ್ರಯಿಸುವುದು ಆಶ್ಚರ್ಯವಲ್ಲ. ಅನೇಕ ವೇಳೆ ಒಬ್ಬನು ಸಮಮನಸ್ಸಿನಲ್ಲಿರುವಾಗ ತನ್ನ ಹಿಂಸಾತ್ಮಕ ಭಾವವನ್ನು ನಿಯಂತ್ರಿಸಿಕೊಳ್ಳಶಕ್ತನಾಗುತ್ತಾನಾದರೂ, ಹಲವು ಬಾರಿ ಕುಡಿದ ಬಳಿಕ ಅವನು ಅಪಪ್ರಯೋಗಕ್ಕೆ ತೊಡಗುತ್ತಾನೆ. ಮದ್ಯಸಾರವು ಅವನ ಮಾನಸಿಕ ಸಾಮರ್ಥ್ಯವನ್ನು ಮಂದಗೊಳಿಸಿ ಅವನ ಸಿಡುಕನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಡಮೆ ಮಾಡುತ್ತದೆ.
ಆದರೆ ಇತರರು, ಸಮಸ್ಯೆಯು ಮದ್ಯಕ್ಕಿಂತ ಹೆಚ್ಚಾಗಿ ಒತ್ತಡದಲ್ಲಿದೆ ಎಂದು ವಾದಿಸುತ್ತಾರೆ. ಒತ್ತಡವನ್ನು ನಿಭಾಯಿಸಲು ಮದ್ಯವನ್ನು ಉಪಯೋಗಿಸುವವನು ಅದೇ ಉದ್ದೇಶಕ್ಕಾಗಿ ಹಿಂಸಾಚಾರವನ್ನು ಉಪಯೋಗಿಸುವ ವ್ಯಕ್ತಿಯ ವಿಧದವನಾಗಿದ್ದಾನೆಂದು ಅವರು ಹೇಳುತ್ತಾರೆ. ಅಂದರೆ ಮದ್ಯ ಕುಡಿಯುವವನು ಮತ್ತನಾಗಿರುವಾಗ ಎಷ್ಟೋ, ಸಮ ಮನಸ್ಸಿನವನಾಗಿರುವಾಗಲೂ ಅಷ್ಟೇ ಅಪಪ್ರಯೋಗಿಯಾಗಿರಬಹುದೆಂದು ಅರ್ಥ. ಆದರೂ, ಈ ಬಗೆಗೆ ತರ್ಕವು ಯಾವುದೇ ಇರಲಿ, ಮದ್ಯವು ಒಬ್ಬನು ತನ್ನ ಭಾವಾವೇಶವನ್ನು ನಿಯಂತ್ರಿಸಲು ನಿಶ್ಚಯವಾಗಿಯೂ ಸಹಾಯಕವಲ್ಲ; ಬದಲಿಗೆ ಅದು ಸಾಮಾನ್ಯವಾಗಿ ಅದಕ್ಕೆ ವಿರುದ್ಧವಾಗಿರುವುದನ್ನು ಮಾಡುತ್ತದೆ.
ವಾರ್ತಾ ಮಾಧ್ಯಮಗಳು ವರ್ತನೆಗಳನ್ನು ಪ್ರಭಾವಿಸುವ ವಿಧ
ಟೆಲಿವಿಷನ್ ಮತ್ತು ಸಿನೆಮ, ಪುರುಷರನ್ನು ಪುರುಷಾಧಿಕಾರದ ಸಂಬಂಧದಲ್ಲಿ ಉತ್ತೇಜಿಸಿ, ಹಿಂಸಾಚಾರವೇ ತಿಕ್ಕಾಟ ಮತ್ತು ಕೋಪದೊಂದಿಗೆ ವ್ಯವಹರಿಸುವ ನ್ಯಾಯವಾದ ಮಾರ್ಗವೆಂದು ಕಲಿಸುತ್ತದೆಂದು ಕೆಲವರ ವಾದ. ಒಬ್ಬ ಕುಟುಂಬ ಸಲಹೆಗಾರನು ಒಪ್ಪುವುದು: “ರ್ಯಾಂಬೊ ಚಲನಚಿತ್ರಕ್ಕೆ ನನ್ನ ಸ್ವಂತ ತೀವ್ರ ಪ್ರತಿವರ್ತನೆಯಿಂದ ನಾನು ಮೋಹಿತನಾದೆ. ನನ್ನ ನಿಯಮ ವಿಧೇಯ [ಆಂತರಿಕ] ಪ್ರಾಪ್ತ ವಯಸ್ಕನು ರ್ಯಾಂಬೋವಿನ ಕಗ್ಗೊಲೆಗಳಿಂದ ಅತಿ ಜುಗುಪ್ಸೆಗೊಂಡರೂ ನನ್ನ [ಆಂತರಿಕ] ಮಗುವು ಇನ್ನೂ ಕೊಲ್ಲುತ್ತ ಹೋಗುವಂತೆ ಉತ್ತೇಜನ ಕೊಡುತ್ತದೆ.”
ಅನೇಕ ಮಕ್ಕಳು, ಹಿಂಸಾಚಾರ, ಬಲಾತ್ಕಾರ ಸಂಭೋಗ, ಮತ್ತು ಇತರ ಮನುಷ್ಯರ, ಮುಖ್ಯವಾಗಿ ಸ್ತ್ರೀಯರ ಹೀನೈಸುವಿಕೆಯ ಅಸಂಖ್ಯಾತ ವರ್ತನೆಗಳಿರುವ ಸಾವಿರಾರು ತಾಸುಗಳ ಟೆಲಿವಿಷನ್ ವೀಕ್ಷಣಕ್ಕೆ ಬಲಿಯಾಗುವುದರಿಂದ, ಅವರು ಬೆಳೆದು ಅಂತಹದೇ ಸಮಾಜಕಂಟಕ ಗುಣಗಳನ್ನು ಇತರರ ಮೇಲೆ ನಡೆಸುವುದು ಆಶ್ಚರ್ಯವಲ್ಲ. ಮತ್ತು ಮಕ್ಕಳು ಮಾತ್ರವಲ್ಲ ವಯಸ್ಕರೂ ಇದರಿಂದ ಪ್ರಭಾವಿಸಲ್ಪಡುತ್ತಾರೆ.
ಇದಲ್ಲದೆ, ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ, ಟೆಲಿವಿಷನ್ ಮತ್ತು ಚಲನ ಚಿತ್ರಗಳಲ್ಲಿ ಹಿಂಸಾಚಾರ, ಅನೈತಿಕತೆ, ಮತ್ತು ಸ್ತ್ರೀಯರ ಹೀನೈಸುವಿಕೆಯ ಚಿತ್ರೀಕರಣದ ಮಟ್ಟ ಗಮನಾರ್ಹವಾಗಿ ವೃದ್ಧಿಸಿದೆ. ಇದು ಗೃಹ ಜೀವನದ ಹಿಂಸಾಚಾರದ ದೃಶ್ಯವನ್ನು ಕೆಡುಕಾಗಿ ಮಾಡದಿರಲು ಸಾಧ್ಯವಿಲ್ಲ. ಒಂದು ಸಂಶೋಧಕ ಗುಂಪು ಕಂಡುಹಿಡಿದಿರುವಂತೆ, “ಹಿಂಸಾಚಾರವನ್ನು ನೋಡುವುದಕ್ಕೂ ಆಕ್ರಮಣಾತ್ಮಕ ವರ್ತನೆಗೂ ಒಂದು ಸ್ಪಷ್ಟವಾಗಿದ . . . ಅನ್ಯೋನ್ಯ ಸಂಬಂಧವಿದೆ.”
ಬೇರ್ಪಟ್ಟಿರುವುದರ ಪರಿಣಾಮ
ಇಂದು ಅನೇಕರಿಗೆ ಜೀವನವು ಅವ್ಯಕ್ತಿಪರವೂ ಒಂಟಿಗ ಭಾವನೆಯದ್ದೂ ಆಗಿದೆ. ಮಿತ್ರಭಾವದ ನೆರೆಯ ಕಿರಾಣಿ ಅಂಗಡಿಯ ಸ್ಥಾನದಲ್ಲಿ ಸೂಪರ್ಮಾರ್ಕೆಟುಗಳು ಮತ್ತು ಕಡಮೆ ಬೆಲೆಯ ಅಂಗಡಿಗಳು ಬಂದಿವೆ. ನಗರ ನವೀಕರಣ ಕಾರ್ಯಕ್ರಮ, ಆರ್ಥಿಕ ಸಮಸ್ಯೆಗಳು ಮತ್ತು ನಿರುದ್ಯೋಗ, ಕುಟುಂಬಗಳು ಅಸ್ಥಿರವಾಗಿರುವಂತೆ ಒತ್ತಾಯಿಸುತ್ತವೆ. ಬಲವಾದ ಸಾಮಾಜಿಕ ಸಂಪರ್ಕಗಳಿಲ್ಲದವರ ಮಧ್ಯೆ ಗೃಹ ಜೀವನದ ಹಿಂಸಾಚಾರದ ಉನ್ನತ ಪ್ರಮಾಣ ಕಂಡುಬರುತ್ತದೆ.
ಜೇಮ್ಸ್ ಸಿ. ಕೋಲ್ಮೆನ್, ಇಂಟಿಮೆಟ್ ರಿಲೇಷನ್ಶಿಪ್ಸ್, ಮ್ಯಾರೆಜ್, ಆ್ಯಂಡ್ ದ ಫ್ಯಾಮಿಲಿ ಎಂಬ ತನ್ನ ಪುಸ್ತಕದಲ್ಲಿ, ಇದು ಹೀಗೇಕೆ ಎಂಬುದನ್ನು ವಿವರಿಸುತ್ತಾರೆ. ಒಂಟಿಗನಾಗಿರುವುದು ಅರ್ಥಪೂರ್ಣ ಸಂಭಾಷಣೆಯನ್ನು ಕಡಮೆ ಮಾಡುತ್ತದೆ ಮತ್ತು ಅಪಪ್ರಯೋಗಿಯು ತನ್ನ ಪರಿಸ್ಥಿತಿಯನ್ನು ವಾಸ್ತವಿಕವಾಗಿ ನೋಡಲು ಮತ್ತು ಒಬ್ಬ ಭರವಸಾರ್ಹ ಮಿತ್ರನಿಂದ ಸಹಾಯ ಪಡೆಯಲು ಇದು ಕಷ್ಟ ಮಾಡುತ್ತದೆ. ಹದಕ್ಕೆ ತರಬಲ್ಲ ಮಿತ್ರರು ಮತ್ತು ಹತ್ತಿರದ ಸಂಬಂಧಿಗಳು ಇಲ್ಲದ ಕಾರಣ, ಮತ್ತು ಅವನ ತಪ್ಪು ಯೋಚನೆಯು ಪ್ರತಿ ದಿನ ಅವನ ಹತ್ತಿರದವರಿಂದ ಪ್ರತಿವರ್ತಿಸಲ್ಪಡದಿರುವ ಕಾರಣ, ಆ ವ್ಯಕ್ತಿ ತನ್ನ ಸ್ವಾರ್ಥವನ್ನು ಸುಲಭವಾಗಿ ನಡೆಸುವಂತೆ ಸಾಧ್ಯ ಮಾಡುತ್ತದೆ. ಇದು ಜ್ಞಾನೋಕ್ತಿ 18:1ರಲ್ಲಿ ಹೇಳಿರುವಂತೆಯೇ ಇದೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.”
ಹಿಂಸಾಚಾರದ ಕುಟುಂಬಕ್ಕೆ ಸಹಾಯ
ಗೃಹ ಜೀವನದ ಹಿಂಸಾಚಾರಕ್ಕೆ ನೀಡಲ್ಪಟ್ಟಿರುವ ವಿವರಣೆಗಳಲ್ಲಿ ಕೇವಲ ಒಂದು ಭಾಗವನ್ನು ನಾವು ಚರ್ಚಿಸಿದ್ದೇವೆ. ಇತರ ವಿವರಣೆಗಳೂ ಇವೆ. ಕಾರಣಗಳಲ್ಲಿ ಕೆಲವನ್ನು ಗುರುತಿಸಿರುವ ನಾವು ಈಗ ಅವುಗಳ ಪರಿಹಾರವನ್ನು ಪರೀಕ್ಷಿಸುವುದು ಅಗತ್ಯ. ಒಬ್ಬನು ಒಂದು ಹಿಂಸಾಚಾರದ ಕುಟುಂಬದಲ್ಲಿರುವಲ್ಲಿ, ಈ ಅಪಪ್ರಯೋಗದ ನಮೂನೆಯನ್ನು ನಿಲ್ಲಿಸುವುದು ಹೇಗೆ ಸಾಧ್ಯ? ಬೈಬಲ್ಲಿನ ದೃಷ್ಟಿಕೋನವೇನು? ಗೃಹ ಜೀವನದ ಹಿಂಸಾಚಾರ ಎಂದಾದರೂ ಅಂತ್ಯಗೊಳ್ಳುವುದೆ? ಹತ್ತನೆಯ ಪುಟದಲ್ಲಿರುವ ಲೇಖನ ಈ ಪ್ರಶ್ನೆಗಳನ್ನು ಸಂಬೋಧಿಸುವುದು.
[ಪುಟ 9 ರಲ್ಲಿರುವ ಚೌಕ/ಚಿತ್ರಗಳು]
ಭಾವಾತ್ಮಕ ಹಿಂಸಾಚಾರ—ಮಾತುಗಳಿಂದ ಗಟ್ಟಿಯಾಗಿ ಹೊಡೆಯುವುದು
ಶಾರೀರಿಕ ಅಪಪ್ರಯೋಗದಲ್ಲಿ ಮುಷ್ಟಿಯಿಂದ ಆಕ್ರಮಣ ನಡೆಯುತ್ತದೆ; ಭಾವಾತ್ಮಕ ಅಪಪ್ರಯೋಗದಲ್ಲಿ ಆಕ್ರಮಣ ಮಾತುಗಳಿಂದ. ಇರುವ ಏಕಮಾತ್ರ ವ್ಯತ್ಯಾಸ ಆಯುಧಗಳ ಆಯ್ಕೆಯೇ. ಇದು ಜ್ಞಾನೋಕ್ತಿ 12:18ರಲ್ಲಿ ಹೇಳಿದಂತೆ ಇದೆ: “ಕತ್ತಿ ತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.”
“ಕತ್ತಿ ತಿವಿದಂತೆ” ಇರುವ ಈ ಭಾವಾತ್ಮಕ ಹಿಂಸಾಚಾರ ಎಷ್ಟು ಅಪಾಯಕಾರಿಯಾಗಿದೆ? ಡಾ. ಸೂಸನ್ ಫಾರ್ವರ್ಡ್ ಬರೆಯುವುದು: “ಪರಿಣಾಮ [ಶಾರೀರಿಕ ಅಪಪ್ರಯೋಗದ] ಹಾಗೆಯೇ. ನಿಮಗೆ ಅಷ್ಟೇ ಹೆದರಿಕೆ, ಅಷ್ಟೇ ಸಹಾಯಶೂನ್ಯತೆ ಇರುತ್ತದೆ, ಮತ್ತು,” ಭಾವಾತ್ಮಕವಾಗಿ ಮಾತಾಡುವುದಾದರೆ, “ಅಷ್ಟೇ ನೋವು ಇರುತ್ತದೆ.”
ಪತಿ, ಪತ್ನಿಯರ ಮೇಲೆ ಭಾವಾತ್ಮಕ ಹಿಂಸಾಚಾರ: “ದಾಂಪತ್ಯದ ಹಿಂಸಾಚಾರ ಕೇವಲ ಶಾರೀರಿಕವಲ್ಲ. ಇದರಲ್ಲಿ ಒಂದು ದೊಡ್ಡ ಭಾಗ, ಪ್ರಾಯಶಃ ಅತಿ ದೊಡ್ಡ ಭಾಗ, ಶಾಬ್ದಿಕ ಮತ್ತು ಭಾವಾತ್ಮಕ,” ಎನ್ನುತ್ತಾಳೆ, ಒಬ್ಬ ದೀರ್ಘಾವಧಿಯ ಬಲಿಪಶು. ಈ ಅಪಪ್ರಯೋಗದಲ್ಲಿ, ಅವಮರ್ಯಾದೆಯ ಮಾತುಗಳು, ಕಿರಿಚುವುದು, ಸತತ ಟೀಕೆ, ಕೀಳರ್ತದ ಮುಖಭಂಗ, ಮತ್ತು ಶಾರೀರಿಕ ಹಿಂಸಾಚಾರದ ಬೆದರಿಕೆ ಸೇರಿರಬಹುದು.
ಜರೆಯುವ, ಅಪಮಾನ ಮಾಡುವ ಯಾ ಹೆದರಿಸುವ, ದುರುದ್ದೇಶದ ಮಾತುಗಳು ಗುರುತರವಾದ ಹಾನಿಯನ್ನು ಮಾಡಬಲ್ಲವು. ಬಂಡೆಯ ಮೇಲೆ ತೊಟ್ಟಿಕ್ಕುವ ನೀರಿನಂತೆ, ಅಪಮಾನಗೊಳಿಸುವ ವ್ಯಂಗ್ಯೋಕ್ತಿಗಳು ಮೊದಮೊದಲು ಹಾನಿಕರವಲ್ಲದಂತೆ ಕಂಡುಬರಬಹುದು. ಆದರೆ ಆತ್ಮಾಭಿಮಾನ ಬೇಗನೆ ಕೊರೆಯಲ್ಪಡುತ್ತದೆ. “ನನಗೆ ಶಾರೀರಿಕ ಮತ್ತು ಶಾಬ್ದಿಕ ಅಪಪ್ರಯೋಗಗಳ ಮಧ್ಯೆ ಆಯ್ದುಕೊಳ್ಳುವ ಅವಕಾಶವಿರುವಲ್ಲಿ, ನಾನು ಯಾವ ಸಮಯದಲ್ಲಿಯೂ ಏಟನ್ನು ಆರಿಸಿಕೊಂಡೇನು,” ಎನ್ನುತ್ತಾಳೆ ಒಬ್ಬ ಸ್ತ್ರೀ. “ನೀವು ಕಲೆಗಳನ್ನು ನೋಡಬಲ್ಲಿರಿ, ಆದುದರಿಂದ ಜನರು ನಿಮ್ಮನ್ನು ನೋಡಿ ಮರುಗುತ್ತಾರೆ. ಆದರೆ ಶಾಬ್ದಿಕ ದುರುಪಯೋಗ ನಿಮ್ಮನ್ನು ವಿಪರೀತವಾಗಿ ಕಲಕುತ್ತದೆ. ಗಾಯಗಳು ಅದೃಶ್ಯ. ಯಾರೂ ಲಕ್ಷ್ಯ ಮಾಡುವುದಿಲ್ಲ.”
ಒಂದು ಮಗುವಿನ ಕಡೆಗೆ ಭಾವಾತ್ಮಕ ಹಿಂಸಾಚಾ: ಇದರಲ್ಲಿ ಮಗುವಿನ ತೋರಿಕೆ, ಬುದ್ಧಿಶಕ್ತಿ, ದಕ್ಷತೆ, ಯಾ ವ್ಯಕ್ತಿಯೋಪಾದಿ ಅವನ ಮೌಲ್ಯದ ಬಗೆಗೆ ಎಡೆಬಿಡದ ಟೀಕೆ ಮತ್ತು ಜರೆತ, ಸೇರಿರಬಹುದು. ಮನ ನೋಯಿಸುವ ಮಾತುಗಳು ವಿಶೇಷವಾಗಿ ಹಾನಿಕರ. ಮಕ್ಕಳು ಇಂತಹ ಮನ ನೋಯಿಸುವ ಮಾತುಗಳನ್ನು ಅವುಗಳ ಮುಖ ಮೂಲ್ಯದ ಅರ್ಥದಲ್ಲಿ ತೆಗೆದುಕೊಳ್ಳುತ್ತಾರೆ. ಯಾವುದು ಮನಃಪೂರ್ವಕವಾಗಿ ಹೇಳಲ್ಪಡುತ್ತದೆ, ಯಾವುದು “ವಿನೋದ”ಕ್ಕಾಗಿ ಹೇಳಲ್ಪಡುತ್ತದೆ ಎಂಬುದರ ಮಧ್ಯೆ ಅವರು ವ್ಯತ್ಯಾಸವನ್ನು ಮಾಡುವುದಿಲ್ಲ. ಕುಟುಂಬ ಚಿಕಿತ್ಸಕ ಷಾನ್ ಹೋಗನ್ ಡೌನಿ ಗಮನಿಸುವುದು: “ಮಗುವಿಗೆ ನೋವಾದರೂ ಎಲ್ಲರೂ ನಗುವುದರಿಂದ, ಅವನು ತನ್ನ ಅನಿಸಿಕೆಗಳಲ್ಲಿ ಭರವಸವಿಡದಿರಲು ಕಲಿಯುತ್ತಾನೆ.”
ಹೀಗೆ, ಹೆಚ್ಚಿನ ಸಂದರ್ಭಗಳಲ್ಲಿ, ಸ್ಕಾಟಿಷ್ ಇತಿಹಾಸಗಾರ ಮತ್ತು ಲಘುಲೇಖಕ ಥಾಮಸ್ ಕಾರ್ಲೈಲ್ ಒಮ್ಮೆ ಹೇಳಿದುದರಲ್ಲಿ ಸತ್ಯವಿದೆ: “ನಾನೀಗ ಸಾಮಾನ್ಯವಾಗಿ ಕೆಣಕುವ ಮಾತುಗಳನ್ನು ಸೈತಾನನ ಭಾಷೆ ಎಂದು ಎಣಿಸುತ್ತೇನೆ; ಈ ಕಾರಣದಿಂದ, ನಾನು ಬಹಳ ಸಮಯದಿಂದ ಅದನ್ನು ಕಾರ್ಯತಃ ತ್ಯಜಿಸಿದ್ದೇನೆ.”
ಮಗುವಿನ ಅಪಪ್ರಯೋಗದ ವಿಷಯದಲ್ಲಿ ನಿಪುಣೆ ಜಾಯ್ ಬಯರ್ಸ್ ಹೇಳುವುದು: “ಶಾರೀರಿಕ ಅಪಪ್ರಯೋಗ ಮಗುವನ್ನು ಕೊಲ್ಲಬಹುದು, ಆದರೆ ನೀವು ಅವನ ಮನೋಭಾವವನ್ನೂ ಕೊಲ್ಲಬಲ್ಲಿರಿ, ಮತ್ತು ಹೆತ್ತವರ ಎಡೆಬಿಡದ ನಕಾರಾತ್ಮಕ ಮಾತುಗಳ ನಮೂನೆಯು ಇದನ್ನು ಮಾಡಬಲ್ಲದು.” ಎಫೆಲ್ಎಡ್ಯುಕೇಟರ್ ಪತ್ರಿಕೆ ಹೇಳುವುದು: “ಗುರುತಿಸಲ್ಪಡುವ ಆದರೆ ಮಾಸಿಹೋಗುವ ಜಜ್ಜು ಗಾಯಕ್ಕೆ ಅಸದೃಶವಾಗಿ, ಭಾವಾತ್ಮಕ ಅಪಪ್ರಯೋಗವು ಮಗುವಿನ ಮನ ಮತ್ತು ವ್ಯಕ್ತಿತ್ವದಲ್ಲಿ ಅದೃಶ್ಯ ಬದಲಾವಣೆಗಳನ್ನು ಉಂಟುಮಾಡಬಲ್ಲದು, ಮತ್ತು ಇದು ಅವನ ವಾಸ್ತವಿಕತೆಯನ್ನು ಮತ್ತು ಇತರರೊಂದಿಗೆ ಅವನ ಪರಸ್ಪರ ಕ್ರಿಯೆಯನ್ನು ಕಾಯಂ ಬದಲಾಯಿಸಬಲ್ಲದು.”
[ಪುಟ 7 ರಲ್ಲಿರುವ ಚಿತ್ರ]
ಹಿಂಸಾಚಾರಕ್ಕೆ ಒಡ್ಡಲ್ಪಡುವುದು ಒಂದು ಮಗುವಿನ ತರುವಾಯದ ನಡತೆಯ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ