ಕ್ಯಾಲಿಫೋರ್ನಿಯದ ಭೂಕಂಪಗಳು—ಭಾರಿಯಾದ ಒಂದು ಯಾವಾಗ ಸಂಭವಿಸುವುದು?
ನೆಲವು ಓಲಾಡಿತು. ಅನಿಲ ಪೂರೈಕೆಯ ಕೊಳವೆಗಳು ತುಂಡಾದವು. ಕಟ್ಟಡಗಳು ಕುಸಿದವು. ಬೆಂಕಿಗಳು ಪ್ರಬಲವಾದವು. ಇದು ಇತ್ತೀಚೆಗಿನ ಲಾಸ್ ಆ್ಯಂಜಲಿಸ್ ಭೂಕಂಪದ ಕುರಿತಾಗಿದೆಯೊ? ಇಲ್ಲ. ಅದು ಏಪ್ರಿಲ್ 18, 1906ರಲ್ಲಿ ಸಾನ್ ಫ್ರಾನ್ಸಿಸ್ಕೊಗೆ ಬಡಿದ ಕಂಪನವಾಗಿತ್ತು. ಆ ಕಂಪನ, ಮತ್ತು ಅದನ್ನನುಸರಿಸಿದ ಮೂರು ದಿನದ ಬೆಂಕಿಯು, ಪಟ್ಟಣದ ಕೇಂದ್ರದಲ್ಲಿನ 512 ವಠಾರಗಳನ್ನು ನಾಶಪಡಿಸಿತು ಮತ್ತು 700ರಷ್ಟು ಜೀವಗಳನ್ನು ಬಲಿ ತೆಗೆದುಕೊಂಡಿತು.
ಇಂಥ ದುರಂತಗಳನ್ನು ಯಾವುದು ಉತ್ಪಾದಿಸುತ್ತದೆ?
ಶಿಲಾ ಪದರ ರಚನೆಗಳ ವಾದವನ್ನುಪಯೋಗಿಸುವುದರ ಮೂಲಕ ವಿಜ್ಞಾನಿಗಳು ವಿವರಿಸಲು ಪ್ರಯತ್ನಿಸುತ್ತಾರೆ. ಭೂಮಿಯ ಹೊರಪದರವು ನಿಧಾನವಾಗಿ ಚಲಿಸುವ, ಕೆಲವು ಸಂದರ್ಭಗಳಲ್ಲಿ ಒಂದು ಇನ್ನೊಂದರ ಕೆಳಗೆ ಜಾರುತ್ತಿರುವ, ಸುಮಾರು 20 ಗಡುಸಾದ ಶಿಲೆಯ ಪದರಗಳ ಮೇಲೆ, ಅಥವಾ ಹಲಗೆಗಳ ಮೇಲೆ ಇದೆಯೆಂದು ಅವರು ಹೇಳುತ್ತಾರೆ. ಶಾಂತ ಸಾಗರದ ಪದರವು ಉತ್ತರ ಅಮೆರಿಕದ ಪದರವನ್ನು ದಾಟುತ್ತಾ, ಉತ್ತರದ ಕಡೆಗೆ ನಿಧಾನವಾಗಿ ಜಾರುತ್ತದೆ. ಈ ಎರಡು ಪದರಗಳ ನಡುವಣ ಜಾರುವಿಕೆಯ ವಲಯವು ಸಾನ್ ಆ್ಯಂಡ್ರೇಯಸ್ ಫಾಲ್ಟ್ (ಸರ್ತಭಂಗ) ಎಂದು ಕರೆಯಲ್ಪಟ್ಟಿದೆ. ಅದು ಕ್ಯಾಲಿಫೋರ್ನಿಯಾ ಖಾರಿಯ ನೆತ್ತಿಯಿಂದ, ಉತ್ತರಕ್ಕೆ ಸುಮಾರು 46 ಕಿಲೊಮೀಟರ್ ವರೆಗೆ ಚಾಚುತ್ತಾ, ಸಾನ್ ಫ್ರಾನ್ಸಿಸ್ಕೊವಿನ ಬಳಿಯ ಶಾಂತ ಸಾಗರದೊಳಗೆ ಕಾಣೆಯಾಗುತ್ತದೆ.
ಈ ಶಿಲಾಪದರಗಳು ಅತಿ ನಿಧಾನವಾಗಿ, ತಕ್ಕಮಟ್ಟಿಗೆ ನಿಮ್ಮ ಬೆರಳ ಉಗುರುಗಳು ಬೆಳೆಯುವ ಪ್ರಮಾಣದಲ್ಲಿ—ವರುಷ ಒಂದಕ್ಕೆ ಸಾಮಾನ್ಯವಾಗಿ ಕೆಲವು ಸೆಂಟಿಮೀಟರುಗಳು—ಚಲಿಸುತ್ತವೆ. ಅನೇಕ ವರುಷಗಳ ಸಮಯದಲ್ಲಿ ಶಿಲಾಪದರಗಳು ಜಾರುತ್ತಾ ಒಂದನ್ನೊಂದು ದಾಟಲು ಪ್ರಯತ್ನಿಸುವಾಗ ಸಿಕ್ಕಿಕೊಳ್ಳುವುದರಿಂದ ಒತ್ತಡವು ವೃದ್ಧಿಯಾಗುತ್ತದೆ. ಬಳಿಕ ಅವು ಸ್ಫೋಟಕ ಶಕಿಯ್ತಿಂದ ಒಂದರಿಂದೊಂದು ತಪ್ಪಿಸಿಕೊಳ್ಳಬಹುದು.
ಸಾನ್ ಆ್ಯಂಡ್ರೇಯಸ್ ಸರ್ತಭಂಗವು ಲಾಸ್ ಆ್ಯಂಜಲೀಸ್ನ ಈಶಾನ್ಯದೆಡೆಗೆ 53 ಕಿಲೊಮೀಟರು ದೂರದಲ್ಲಿ ಶಾಂತ ಸಾಗರದೊಳಗೆ ದಾಟಿ ಹೋಗುತ್ತದೆ. ದೊಡ್ಡಭೂಕಂಪವೆಂದು ಕರೆಯಲ್ಪಡುವುದರ ಕುರಿತು ಕ್ಯಾಲಿಫೋರ್ನಿಯಾದವರು ಚಿಂತಿತರಾಗಿರುವುದು ಸೋಜಿಗವೊ?
ಸಾನ್ ಫ್ರಾನ್ಸಿಸ್ಕೊ
ಇಸವಿ 1906ರ ಭೂಕಂಪದ ಅನಂತರ, ಸಾನ್ ಆ್ಯಂಡ್ರೇಯಸ್ ಸರ್ತಭಂಗದ ಉತ್ತರಾಂತ್ಯವು ಸಾಪೇಕ್ಷವಾಗಿ ತಣ್ಣಗಿತ್ತು. ಅನಂತರ, ಅಕ್ಟೋಬರ 17, 1989ರ ಸಂಜೆ 5:04ಕ್ಕೆ, ಸಾನ್ ಫ್ರಾನ್ಸಿಸ್ಕೊದಿಂದ ಬೇಸ್ಬಾಲಿನ ಲೋಕ ಶ್ರೇಣಿಯನ್ನು ಅವಲೋಕಿಸಲು ಅಂದಾಜಿಸಲಾದ ಐದು ಕೋಟಿ ಅಮೆರಿಕನರು ತಮ್ಮ ಟೀವೀಗಳನ್ನು ಲಕ್ಷ್ಯವಿಟ್ಟು ನೋಡುತ್ತಿದ್ದರು. ಹಠಾತ್ತಾಗಿ, ಕ್ಯಾಮರಗಳು ನೆಗೆದಾಡಲಾರಂಭಿಸಿದವು. ಸಾನ್ ಫ್ರಾನ್ಸಿಸ್ಕೊದಿಂದ ಸುಮಾರು ನೂರು ಕಿಲೊಮೀಟರ್ ದಕ್ಷಿಣಕ್ಕೆ ಸಾನ್ ಆ್ಯಂಡ್ರೇಯಸ್ ಸರ್ತಭಂಗದ ಎರಡು ಪಕ್ಕಗಳು ಒಂದನ್ನೊಂದು ವೇಗವಾಗಿ ದಾಟಿ ಹೋಗಿದ್ದವು. ಇದು 63 ಜನರನ್ನು ಕೊಂದು, ರಾಜ ಮಾರ್ಗಗಳನ್ನು ಧ್ವಂಸಗೊಳಿಸಿ, ವಾಹನಗಳನ್ನು ಜಜ್ಜಿ, ಸಾವಿರಾರು ಜನರನ್ನು ಮನೆಯಿಲ್ಲದವರಾಗಿ ಮಾಡಿದ ಒಂದು ಭೂಕಂಪವನ್ನುಂಟುಮಾಡಿತು. ಆದರೆ ಆ ಭೂಕಂಪವು ನಿರೀಕ್ಷಿಸಿದ್ದ ಭಾರೀ ಭೂಕಂಪದ ಮುಂತಿಳಿಸಲ್ಪಟ್ಟಿದ್ದ ಪರಿಮಾಣಕ್ಕಿಂತ ಎಷ್ಟೋ ಕಡಮೆ ಶಕ್ತಿಯದ್ದಾಗಿತ್ತು.
ಲಾಸ್ ಆ್ಯಂಜಲಿಸ್ ಮತ್ತು ಸಾನ್ ಫ್ರಾನ್ಸಿಸ್ಕೊವಿನ ಸುಮಾರು ಮಧ್ಯದಲ್ಲಿರುವ, ಪಾರ್ಕ್ಫೀಲ್ಡ್ನ ಸಣ್ಣ ಪಟ್ಟಣದ ಬಳಿ 1988ರಿಂದ ಐದು ವರುಷಗಳೊಳಗೆ ಪರಿಮಾಣ 6ರ ಕಂಪನವು ಸಂಭವಿಸುವುದೆಂದು 1985ರಷ್ಟು ಹಿಂದಿನ ವಸಂತಕಾಲದಲ್ಲಿ, ಯು. ಎಸ್. ಜೀಒಲಾಜಿಕಲ್ ಸರ್ವೆಯು ಮುಂತಿಳಿಸಿತು. ಈ ನಿರೀಕ್ಷಿತ ಭೂಕಂಪಕ್ಕೆ ಮುಂಚಿತವಾಗಿ ನೆಲದ ಚಲನೆಯನ್ನು ಅಭ್ಯಸಿಸುವ ಮೂಲಕ ಭೂಕಂಪಗಳನ್ನು ಮುಂತಿಳಿಸುವುದು ಹೇಗೆಂದು ಕಲಿಯುವಂತೆ ಮತ್ತು ಭೂಕಂಪ ಹೊಡೆಯುವುದಕ್ಕೆ ಪ್ರಾಯಶಃ ತಾಸುಗಳಿಗೆ ಅಥವಾ ದಿನಗಳಿಗೂ ಮುಂಚೆ ಎಚ್ಚರಿಕೆ ಕೊಡುವ ಸಾಮರ್ಥ್ಯವುಳ್ಳವರಾಗುವುದನ್ನು ಅವರು ನಿರೀಕ್ಷಿಸಿದರು. ಈ ಅಧ್ಯಯನದ ವೆಚ್ಚ 15 ಮಿಲಿಯ ಡಾಲರುಗಳಾದರೂ ಆ ಕಂಪನವು ಎಂದೂ ಸಂಭವಿಸಲಿಲ್ಲ. ಯು. ಎಸ್. ಜೀಒಲಾಜಿಕಲ್ ಸರ್ವಿಸ್ನ ವಿಲಿಯಮ್ ಎಲ್ಜ್ವರ್ತ್ ಒಮ್ಮೆ ಹೇಳಿದಂತೆ, “ಭೂಕಂಪನದ ರೂಪಿಕೆಗಳ ಅರ್ಥವಿವರಣೆಯು ಒಂದು ಅನಿಷ್ಕೃಷ್ಟವಾದ ವಿಜ್ಞಾನವಾಗಿದೆ.”
ಲ್ಯಾಂಡರ್ಸ್ ಕಂಪನ
ಹೀಗೆ, ಜೂನ್ 28, 1992ರಂದು, ಕ್ಯಾಲಿಫೋರ್ನಿಯಾದ ಮಹಾವಿ ಮರುಭೂಮಿಯಲ್ಲಿ, ಲ್ಯಾಂಡರ್ಸ್ ಬಳಿ ಒಂದು ವಿರಳವಾಗಿ ನಿವಾಸಿತ ಪ್ರಾಂತದಲ್ಲಿ 7.5 ಪರಿಮಾಣದ ಕಂಪನವು ಹೊಡೆಯುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಕಂಪನದ ಕುರಿತು ಟೈಮ್ ಪತ್ರಿಕೆಯು ಹೇಳಿದ್ದು: “ಕೆಲವೇ ಭಯಭರಿತ ಸೆಕೆಂಡುಗಳಲ್ಲಿ, ಅದು ಅದ್ಭುತಕರವಾಗಿ ಕೇವಲ ಒಂದು ಜೀವವನ್ನು ಬಲಿತೆಗೆದುಕೊಂಡು, ರಸ್ತೆಗಳ ಪಥವನ್ನು ಬದಲಾಯಿಸಿತು, ವಾಹನ ನಿಲ್ಲಿಸುವ ಸ್ಥಳಗಳನ್ನು ಪುನಃ ಸಾಲುಗೊಳಿಸಿತು ಮತ್ತು ಅಸಂಖ್ಯಾತ ಚಂಚಲ ವಿಧಾನಗಳಲ್ಲಿ ಭೂ ದೃಶ್ಯವನ್ನು ಪುನರ್ರೂಪಿಸಿತು.” ಈ ಪರಿಮಾಣದ ಒಂದು ಕಂಪನಕ್ಕೆ, ಆ ಹಾನಿಯು ಅತ್ಯಲ್ಪವಾಗಿತ್ತು.
ಹೀಗೆ ಇದು ಕೂಡ ಭಾರೀ ಭೂಕಂಪವಾಗಿರಲಿಲ್ಲ. ನಿಜತ್ವದಲ್ಲಿ, ಅದು ಸಾನ್ ಆ್ಯಂಡ್ರೇಯಸ್ ಸರ್ತಭಂಗದ ಮೇಲೆಯೂ ಆಗಿರಲಿಲ್ಲ ಬದಲಾಗಿ ಅದನ್ನು ಸುತ್ತುವರಿದ ಸಣ್ಣ ಸರ್ತಭಂಗಗಳಿಂದ ಆಗಿತ್ತು.
ಆದರೂ, ಬಿಗ್ ಬೇರ್ ಲೇಕ್ನ ಪರಿಸರದ ಒಂದು ಸಣ್ಣಕಂಪನದೊಂದಿಗೆ ಲ್ಯಾಂಡರ್ ಕಂಪನವು, ಸಾನ್ ಆ್ಯಂಡ್ರೇಯಸ್ ಸರ್ತಭಂಗದ ಹತ್ತಿರದ ಭಾಗಗಳನ್ನು ಸಕ್ರಿಯಗೊಳಿಸಿದ ಸಾಧ್ಯತೆ ಇರಬಹುದು. ಸಾನ್ ಆ್ಯಂಡ್ರೇಯಸ್ನ ಅತ್ಯಂತ ದಕ್ಷಿಣದ ಭಾಗದಲ್ಲಿನ ಸಿಕ್ಕಿಕೊಂಡ ಪದರಗಳು ಮುಂದಿನ 30 ವರುಷಗಳೊಳಗೆ ಎಂದಾದರೂ ಫಕ್ಕನೆ ಬೇರ್ಪಡುವ ಸಾಧ್ಯತೆ 40 ಪ್ರತಿಶತ ಇದೆಯೆಂದು ವಿಜ್ಞಾನಿಗಳು ಹೇಳಿರುತ್ತಾರೆ. ಅದು 8ರ ಪರಿಮಾಣದಲ್ಲಿ, ಲ್ಯಾಂಡರ್ಸ್ನದಕ್ಕಿಂತ ಸುಮಾರು ಐದು ಪಟ್ಟುಗಳಷ್ಟು ಶಕ್ತಿಯುತವಾಗಿದ್ದು, ಭಯದಿಂದ ದೀರ್ಘ ನಿರೀಕ್ಷಿತವಾದ ಭಾರೀ ಭೂಕಂಪವನ್ನು ವಿಯೋಜಿಸಬಲ್ಲದು.
ಲಾಸ್ ಆ್ಯಂಜಲಿಸ್
ಅನಂತರ, ಈ ವರುಷದ ಜನವರಿ 17ರಂದು, ಬೆಳಗ್ಗೆ 4:31ಕ್ಕೆ ಲಾಸ್ ಆ್ಯಂಜಲಿಸ್ ಎಚ್ಚತ್ತುಕೊಳ್ಳವಂತೆ ಕುಲುಕಲ್ಪಟ್ಟಿತು. ಲಾಸ್ ಆ್ಯಂಜಲಿಸ್ನಲ್ಲಿ, ದಟ್ಟವಾಗಿ ನಿವಾಸಿತವಾದ ಸಾನ್ ಫೆರ್ನಾಂಡೊ ವ್ಯಾಲಿಯ ಮೇಲ್ಮೈಯ ಸುಮಾರು 18 ಕಿಲೊಮೀಟರ್ ಕೆಳಗೆ, ಒಂದು ಆಳವಾಗಿ ಹುಗಿಯಲ್ಪಟ್ಟಿರುವ ಸರ್ತಭಂಗದಲ್ಲಿ ಒಂದು ಶಿಲೆಯ ತೇಪೆಯು 5.5 ಮೀಟರ್ಗಳಷ್ಟು ಜಾರಿರುವುದಾಗಿ ಆಲೋಚಿಸಲಾಗುತ್ತದೆ. ಈ 6.6 ಪರಿಮಾಣದ ಹತ್ತು ಸೆಕಂಡುಗಳ ಕುಲುಕಾಟವು ಕಡಿಮೆ ಪಕ್ಷ 57 ಜೀವಗಳನ್ನು ಬಲಿತೆಗೆದುಕೊಂಡಿತು. ದುಃಖಕರವಾಗಿ, ಒಂದು ಮನೆಯ ಕಟ್ಟಡದ ಕುಸಿತದಲ್ಲಿ 16 ಜನರು ಸತ್ತರು. ವಾಹನಗಳನ್ನು ನಿಲ್ಲಿಸುವ ಒಂದು ಕುಸಿದುಬಿದ್ದಿದ್ದ ಕಟ್ಟಡದಲ್ಲಿ 20 ಟನ್ ಜಲ್ಲಿಗಾರೆಯ ಕೆಳಗೆ ಪಾರಾದ ಒಬ್ಬ ಮನುಷ್ಯನು ಎಂಟು ತಾಸು ಸಿಕ್ಕಿಕೊಂಡಿದ್ದನು. ಒಂದು ಹೆದ್ದಾರಿಯ ಕುಸಿತವು ನಗರದ ಉತ್ತರಕ್ಕಿರುವ ಮುಖ್ಯ ಮಾರ್ಗವನ್ನು ಬೇರ್ಪಡಿಸಿತು. ಚರ್ಚುಗಳು, ಶಾಲೆಗಳು, ಅಂಗಡಿಗಳು, ಮತ್ತು ಒಂದು ಪ್ರಮುಖ ಆಸ್ಪತ್ರೆಯು ಮುಚ್ಚಲ್ಪಟ್ಟಿತು. ಸಾಮಾನ್ಯವಾಗಿ ಸಂಭವಿಸುವಂತೆ, ಆಧುನಿಕ ಭೂಕಂಪ ನಿಯಮಗಳು ಸ್ಥಾಪಿಸಲ್ಪಡುವ ಮುಂಚೆ ಕಟ್ಟಲ್ಪಟ್ಟ ಹಳೇ ಕಟ್ಟಡಗಳಲ್ಲಿ ಜೀವಿಸುತ್ತಿದ್ದುದರಿಂದ, ಕಡಮೆ ಆದಾಯದ ಕುಟುಂಬಗಳು ಹೆಚ್ಚು ಕಷ್ಟಾನುಭವಿಸಿದವು.
ಈ ಕಂಪನವು, ದೊಡ್ಡ ನಗರದ ನೇರ ತಳದಲ್ಲಿರುವ ಸ್ಥಳೀಯ ಸಣ್ಣ ಸರ್ತಭಂಗಗಳೊಂದಿಗೂ ಉದ್ಭವಿಸಬಹುದಾದ ಸಮಸ್ಯೆಯನ್ನು ಪ್ರತ್ಯಕ್ಷಾಭಿನಯಿಸಿತು. ಜನರ ಕುರಿತಾದರೊ, ಅವರು ಭೂಕಂಪಕೇಂದ್ರದ ಮೇಲ್ಗಡೆ ಮಲಗಿರುವಲ್ಲಿ, ಅವರಿಗೆ ಒಂದು ಭಾರೀ ಭೂಕಂಪವಾಗುವುದು!
ಸ್ಥಳೀಯ ಕಟ್ಟಡ ರಚನಾ ನಿಯಮಗಳು ಕಟ್ಟುನಿಟ್ಟಾಗಿರದೆ ಇರುತ್ತಿದ್ದರೆ ವಿನಾಶವು ಅತಿ ಹೆಚ್ಚಾಗಿರುತಿತ್ತು. ಪ್ರತಿಯೊಂದು ಭೂಕಂಪನವು ಮುಂದಿನ ಸಲ ಸುಲಭವನ್ನಾಗಿ ಮಾಡಬಹುದಾದ ಪಾಠಗಳನ್ನು ಕಲಿಸುತ್ತದೆ. ಹಿಂದಣ ಕಂಪನಗಳ ಅನಂತರ ಬಲಗೊಳಿಸಲಾದ ಕೆಲವು ಹೆದ್ದಾರಿಯ ಮೇಲುಮಾರ್ಗಗಳು ಇದನ್ನು ಪಾರಾದವು; ಕೆಲವು ಪಾರಾಗಲಿಲ್ಲ. ಆದರೆ ನಿಜಪರೀಕ್ಷೆಯು, ಒಂದು ಹೆಚ್ಚು ದೊಡ್ಡ ಭೂಕಂಪ—ನಿಜವಾಗಿಯೂ ಭಾರಿಯಾದದ್ದು—ದೊಡ್ಡ ನಗರವೊಂದರ ಬಳಿ ಹೊಡೆಯುವಲ್ಲಿ ಬರುವುದು. ಪುನಃ ಲಾಸ್ ಆ್ಯಂಜಲಿಸ್, ಆಗಿರಬಹುದೊ?
ಒಂದು ದ್ವಿತೀಯ ಭಾರೀ ಭೂಕಂಪವೊಂದು ಬರಲಿದೆಯೊ?
‘ಓಹ್, ಇಲ್ಲ! ಮತ್ತೊಂದು ಬೇಡ! ಒಂದೇ ಬಹಳವಾಯಿತು!’ ಆದರೂ, ಇನ್ನೊಂದು ಭಾರೀ ಭೂಕಂಪವನ್ನು ಕೆಲವು ಭೂವಿಜ್ಞಾನಿಗಳು ಹತ್ತಿರದ ಭವಿಷ್ಯತ್ತಿನಲ್ಲಿ ಕಾಣುತ್ತಾರೆ. ಜನವರಿ 22, 1994ರ ನ್ಯೂ ಸೈಎನ್ಟಿಸ್ಟ್ ಪತ್ರಿಕೆ ಹೇಳಿದ್ದು: “ಲಾಸ್ ಆ್ಯಂಜಲಿಸ್ನ ಕೆಳಗೆ ಹಾದು ಹೋಗುವ ಅಪಾಯಕಾರಿ ಸರ್ತಭಂಗ ಸಾಲುಗಳು ಸಾನ್ ಆ್ಯಂಡ್ರೇಯಸ್ನ ಸರ್ತಭಂಗದ ಮೇಲೆ ನಿರೀಕ್ಷಿಸಲಾದಂತಹ ಭೂಕಂಪದಷ್ಟೇ ಧ್ವಂಸಕಾರಕವಾದ ‘ಭಾರೀ ಭೂಕಂಪ’ವನ್ನು ಉಂಟುಮಾಡಬಲ್ಲದು ಎಂದು ಪರಿಣತರು ಎಚ್ಚರಿಸುತ್ತಾರೆ. . . . ಲಾಸ್ ಆ್ಯಂಜಲಿಸ್ ತಗ್ಗುಪ್ರದೇಶವು ವಿಶೇಷವಾಗಿ ಚಾಚು ಸರ್ತಭಂಗಗಳಿಂದ ಹೇರಳವಾಗಿದೆ. ಸಾನ್ ಆ್ಯಂಡ್ರಿಯಾಸ್ ಸರ್ತಭಂಗವು—ರಾಜ್ಯದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುತ್ತದೆ—ಲಾಸ್ ಆ್ಯಂಜಲಿಸ್ನಲ್ಲಿ ಪಶ್ಚಿಮಕ್ಕೆ ತಿರಿಚುಕೊಳ್ಳುತ್ತಿದಾದುದರಿಂದ, ಆ ಬಿಂದುವಿನಲ್ಲಿ ಹೆಚ್ಚಿನ ಒತ್ತಡಗಳನ್ನು ಉಂಟು ಮಾಡುತ್ತವೆ. ಹೇಗೋ, ಶಾಂತ ಸಾಗರದ ಪದರದ ಮೇಲಿನ ವಲಸೆ ಹೋಗುವ ಭೂಮಿಯು ಆ ತಿರುವನ್ನು ದಾಟಿಹೋಗಿ, ಅದರ ದಕ್ಷಿಣಾಭಿಮುಖದ ಸವಾರಿಯನ್ನು ಮುಂದುವರಿಸಲೇ ಬೇಕು.”
ಶಾಂತ ಸಾಗರದ ಪದರವು ಚಲಿಸಿದಂತೆ, ಲಾಸ್ ಆ್ಯಂಜಲಿಸ್ನ ತಗ್ಗುಪ್ರದೇಶದಲ್ಲಿ ಈ ವರ್ಷದಾರಂಭದಲ್ಲಿ ಅನುಭವಿಸಿದ ಒಂದು ಕಂಪನಕ್ಕೆ ಕಾರಣವಾದಂತಹ, ಚಾಚು ಸರ್ತಭಂಗಗಳ ಜಾಲ ಬಂಧವು ರಚಿಸಲ್ಪಟ್ಟಿತು ಎಂದು ಭೂ ವಿಜ್ಞಾನಿಗಳು ಯೋಚಿಸುತ್ತಾರೆ. ಆ ಕಂಪನದ ಕುರಿತು ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು ಅದರ ಮೊದಲ ವರದಿಯನ್ನು ಒಂದು ವಾರದ ಅನಂತರ ಈ ರೀತಿಯಲ್ಲಿ ಬರೆದು ವರದಿಸಿತು: “ಕಾರಣವಾದ ಸರ್ತಭಂಗವು ಒಂದು ಚಾಚು ಸರ್ತಭಂಗ—ಎಲ್ಲಿ ಒಂದು ಶಿಲಾ ಚಪ್ಪಡಿಯು ಮೇಲಕ್ಕೆ ಮತ್ತು ಇನ್ನೊಂದರ ಮೇಲಿನಿಂದ ಜಾರಿ ಹೋಗುತ್ತದೋ ಅಂತಹದ್ದು—ಎಂದು ವಿಜ್ಞಾನಿಗಳು ಇನ್ನೂ ನಂಬುತ್ತಾರೆ. ಕಳೆದ ವಾರದ ಕಂಪನದಲ್ಲಿ, ಕಂಪನಾ ಕೇಂದ್ರದ ದಕ್ಷಿಣಕ್ಕಿರುವ ಸಾಂಟಾ ಸುಜಾನ ಪರ್ವತಗಳು ಕಡಿಮೆಪಕ್ಷ 40 ಸೆಂಟಿಮೀಟರ್ಗಳಷ್ಟು ಎತ್ತರಿಸಲ್ಪಟ್ಟವು ಮತ್ತು ಅದೇ ಸಮಯದಲ್ಲಿ 15 ಸೆಂಟಿಮೀಟರ್ ಉತ್ತರಾಭಿಮುಖವಾಗಿ ಚಲಿಸಿದವು.”
ಕ್ಯಾಲ್ಟೆಕ್ನ ಭೂವಿಜ್ಞಾನಿಯಾದ ಕಾರಿ ಸೆ, ಲಾಸ್ ಆ್ಯಂಜಲಿಸ್ನ ತಗ್ಗುಪ್ರದೇಶದಲ್ಲಿ ಅಡ್ಡಾದಿಡಿಯ್ಡಾಗಿ ಹಾದುಹೋಗುವ ಸಣ್ಣದಾದ ಚಾಚು ಸರ್ತಭಂಗಗಳು ಸಾನ್ ಆ್ಯಂಡ್ರೇಯಸ್ ಮೇಲೆ ಇನ್ನೂ ನಿರೀಕ್ಷಿಸಲಾದ ಪರಿಮಾಣ 8ರಷ್ಟೇ ಅಪಾಯಕಾರಿಯಾಗಿರಬಲ್ಲವು ಎಂದು ಅಭಿಪ್ರಯಿಸುತ್ತಾರೆ. ಸೆ ಅನಂತರ ಲಾಸ್ ಆ್ಯಂಜಲಿಸನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಳುವುದು: “ನಗರದ ಪೇಟೆಯ ಕೆಳಗೆ, 8ರ ಪರಿಮಾಣದ, ನಿಜವಾಗಿ ಭಾರೀ ಭೂಕಂಪವನ್ನು ನಾವು ಪಡೆಯುವುದು ಸಾಧ್ಯವೊ?” ಲಕ್ಷಗಟ್ಟಲೆ ಜನರು ಅದರ ಮೇಲೆ ಕೂತಿರುವುದನ್ನು ಗಮನಿಸುವಾಗ, ಅದೊಂದು ಬೆದರಿಸುವ ಪ್ರಶ್ನೆಯಾಗಿದೆ!
ಇತರ ಜನರು ಚಂಡಮಾರುತ, ನೆರೆ, ಯಾ ಬಿರುಗಾಳಿ ಮಳೆಗಳೊಂದಿಗೆ ಜೀವಿಸುವಂತೆ, ಕ್ಯಾಲಿಫೋರ್ನಿಯಾದವರು ಭೂಕಂಪಗಳೊಂದಿಗೆ ಜೀವಿಸುತ್ತಿರುವಂತೆ ಕಾಣುತ್ತದೆ.
[ಅಧ್ಯಯನ ಪ್ರಶ್ನೆಗಳು]
Footnote is missing in Archives
[ಪುಟ 22ರಲ್ಲಿರುವಚಿತ್ರ]
(For fully formatted text, see publication)
ಲಾಸ್ ಆ್ಯಂಜಲಿಸ್ ತಗ್ಗುಪ್ರದೇಶದಲ್ಲಿ ಚಾಚು ಸರ್ತಭಂಗದ ಗೆರೆಗಳು
ಸಾನ್ ಆ್ಯಂಡ್ರೇಯಸ್ ಸರ್ತಭಂಗ
ಲಾಸ್ ಆ್ಯಂಜಲಿಸ್
ಶಾಂತ ಸಾಗರ
[ಪುಟ 21 ರಲ್ಲಿರುವ ಚಿತ್ರ]
ಇಸವಿ 1994ರ ಲಾಸ್ ಆ್ಯಂಜಲಿಸ್ ಕಂಪನವು ಬಿಟ್ಟುಹೋದ ಹೆದ್ದಾರಿ ಹಾನಿ
[ಕೃಪೆ]
Hans Gutknecht/Los Angeles Daily News
[ಪುಟ 23 ರಲ್ಲಿರುವ ಚಿತ್ರ]
ಇಸವಿ 1994ರ ಕಂಪನದಿಂದ ತುಂಡಾದ ಅನಿಲ ಪೂರೈಕೆಯ ಕೊಳವೆಯಿಂದ ಜ್ವಾಲೆಗಳು ಚಿಮ್ಮುವುದು
[ಕೃಪೆ]
Tina Gerson/Los Angeles Daily News
[ಪುಟ 24 ರಲ್ಲಿರುವ ಚಿತ್ರ]
ಲಾಸ್ ಆ್ಯಂಜಲಿಸ್ ಹೆದ್ದಾರಿಯ ಈ ಕುಸಿದ ಭಾಗವನ್ನು 6.6 ಪರಿಮಾಣದ ಹತ್ತು ಸೆಕಂಡುಗಳ ಕುಲುಕಾಟವು ಬಿಟ್ಟು ಹೋಯಿತು.
[ಕೃಪೆ]
Gene Blevins/Los Angeles Daily News