ತೆರೆಗಳ ಕೆಳಗೆ ಕೆಂಪು ಸಮುದ್ರದ ಅದ್ಭುತಗಳು
ಸೌಂದರ್ಯವು ಕೇವಲ ಬಾಹ್ಯರೂಪದ್ದಾಗಿದ್ದು ಆಳವಿಲ್ಲದೆಂದು ಜನರು ಹೇಳುತ್ತಾರೆ. ಆದರೆ ನಿಜ ಸೌಂದರ್ಯ ಅನೇಕ ವೇಳೆ ಮೇಲ್ಮೈಯ ಕೆಳಗಡೆ ಇರುತ್ತದೆ ಮತ್ತು ಇದು ಕೇವಲ ಜನರಿಗೆ ಅನ್ವಯಿಸುವುದಿಲ್ಲ. ಕೆಂಪು ಸಮುದ್ರದ ಸಂಬಂಧದಲ್ಲಿ ಇದು ಸರಿಯೆಂದು ನಾನು ಕಂಡುಹಿಡಿದೆ. ಅದರ ನೀರುಗಳ ಮೇಲ್ಮೈಯ ಕೆಳಗಡೆ ಪರೀಕ್ಷಿಸುವ ಧನ್ಯ ಈಜುಗಾರನಿಗಾಗಿ ಕಾಯುತ್ತಿರುವ ನಂಬಲಾಗದ ಸೌಂದರ್ಯದ ಯಾವ ಸುಳಿವನ್ನೂ ಆ ಬಂಜರು ತೀರವು ನನಗೆ ಕೊಡಲಿಲ್ಲ.
ಹವಳ ದಿಬ್ಬದ ಅದ್ಭುತಗಳನ್ನು ಅನ್ವೇಷಿಸುವ ಸಂಬಂಧದಲ್ಲಿ ಕೆಂಪು ಸಮುದ್ರವು ಲೋಕದ ಅತಿ ಆಸಕ್ತಿಯ ನಿವೇಶನಗಳಲ್ಲಿ ಒಂದು ಎಂಬ ಸತ್ಕೀರ್ತಿ ಅದಕ್ಕಿದೆ. ಆದುದರಿಂದ ಅದರ ಪ್ರಖ್ಯಾತಿಯು ನ್ಯಾಯಸಮ್ಮತವೂ ಅಲ್ಲವೋ ಎಂದು ಸಾಕ್ಷಾತ್ತಾಗಿ ನೋಡಲು ನಾನು ಉತ್ಸುಕನಾಗಿದ್ದೆ.
ನೀರಿನಡಿಯ ಜಗತ್ತನ್ನು ನಾನು ನೋಡಿದ ಮೇಲೆ ಅದನ್ನು ಹೆಚ್ಚು ವಿವರವಾಗಿ ತಿಳಿಯಲು ನನಗೆ ಮನಸ್ಸಿತ್ತು. ಕೆಂಪು ಸಮುದ್ರದ ಕಡಲಜೀವಿಗಳ ಸಂಬಂಧದಲ್ಲಿ ಪರಿಣತರಾದ ಕಡಲಿನ ಜೀವಶಾಸ್ತ್ರಜ್ಞ ಆ್ಯರನ್ ಮೀರಾಸ್ ಎಂಬ ಪರಿಣತರು ನನ್ನ ಪ್ರಶ್ನೆಗಳನ್ನು ಉತ್ತರಿಸಿದರು.
ಕೆಂಪು ಸಮುದ್ರದ ನೀರುಗಳು ಅಷ್ಟು ಸಮೃದ್ಧವೇಕೆ?
“ಕೆಂಪು ಸಮುದ್ರವು ಒಂದು ಭಾರೀ ಇರುಕಲಾಗಿ ಕಂಡು ಹಾಗೆ ವರ್ತಿಸುತ್ತಾ ಹಿಂದೂ ಸಾಗರದ ಅನೇಕ ಮತ್ಸ್ಯಗಳನ್ನು ಶೇಖರಿಸುತ್ತದೆ. ಇದಲ್ಲದೆ ನಮಗೆ ಇಲ್ಲಿ ಹವಳಗಳ ಅಸಾಧಾರಣವಾದ ಸಮೃದ್ಧಿಯಿದೆ. ದಿಬ್ಬದಲ್ಲಿ ನೀವು ಅನೇಕ ವೇಳೆ ಕೇವಲ ಒಂದು ಮೀಟರ್ ಬಂಡೆಯಲ್ಲಿ 20ರಷ್ಟೂ ವಿಭಿನ್ನ ಜಾತಿಯ ಹವಳಗಳು ಬೆಳೆಯುವುದನ್ನು ಕಾಣಬಹುದು. ನೀರಿನ ಆದರ್ಶ ರೀತಿಯ ಶಾಖದ ಮಟ್ಟವೇ ಹವಳದ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇಲ್ಲಿ ಈ ಶಾಖದ ಮಟ್ಟದಲ್ಲಿ ವರ್ಷವಿಡೀ ಕೇವಲ ಕೆಲವೇ ಡಿಗ್ರಿಗಳ ವ್ಯತ್ಯಾಸವಿರುತ್ತದೆ. ಇದಲ್ಲದೆ ಈ ಪ್ರದೇಶದಲ್ಲಿ ಬೀಳುವ ಕಡಮೆ ಮಳೆಯ ಕಾರಣ ಕಡಮೆ ಮಡ್ಡಿ ಸಮುದ್ರಕ್ಕೆ ಹೋಗುತ್ತದೆ. ಇದು, ಸರದಿಯಾಗಿ, ಮಲಿನ ಮಾಡುವ ವಸ್ತುಗಳ ಮೊತ್ತವನ್ನು ಕಡಮೆ ಮಾಡುತ್ತದೆ. ಆದರೂ ಕಳೆದ 15 ವರ್ಷಗಳಲ್ಲಿ ಪರಿಸ್ಥಿತಿಯು ಕೆಟ್ಟಿದೆ ಎಂದು ಹೇಳಲು ನಾನು ವಿಷಾದಿಸುತ್ತೇನೆ.”
ಈ ಕಡಲನಿಧಿಯನ್ನು ಸಂರಕ್ಷಿಸುವುದರಲ್ಲಿರುವ ಸಮಸ್ಯೆಗಳಾವುವು?
“ಸಾಪೇಕ್ಷವಾಗಿ ಹಾಳಾಗದಿರುವ ಇರು ನೆಲೆಯನ್ನು ನಿಭಾಯಿಸುವಾಗ ಮಾಲಿನ್ಯವು ಅತಿ ಮಹತ್ತಾದ ಸಮಸ್ಯೆ. ಕೆಂಪು ಸಮುದ್ರದಲ್ಲಿ ಮಾಲಿನ್ಯವು ಮೂರು ಮುಖ್ಯ ಮೂಲಗಳಿಂದ ಬರುತ್ತದೆ: ಫಾಸ್ಫಾರಿಕ್ ಆಮ್ಲದ ಲವಣ, ಮೀನು ವ್ಯವಸಾಯಗಳು, ಮತ್ತು ಕರಾವಳಿ ಪಟ್ಟಣಗಳ ಚರಂಡಿಯ ಹೊಲಸು. ಸ್ಕೂಬ ಡೈವಿಂಗ್ ನಿವೇಶನಗಳ ಜನಪ್ರಿಯತೆ ಸಹ ಸಮಸ್ಯೆಗಳನ್ನು ತರಬಲ್ಲದು. ಸೂಕ್ಷ್ಮ ರಚನೆಯ ಹವಳ ದಿಬ್ಬವನ್ನು ಅಲಕ್ಷ್ಯ ಭಾವದ ಮುಳುಕರು ಸುಲಭವಾಗಿ ಹಾಳುಮಾಡಬಲ್ಲರು.”
ನೀವು ಕೆಂಪು ಸಮುದ್ರದಲ್ಲಿ ಹವಳ ದಿಬ್ಬವನ್ನು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದೀರಿ. ನೀವು ಕಲಿತಿರುವ ಕೆಲವು ಸಂಗತಿಗಳಾವುವು?
“ಮೀನುಗಳಿಗೆ ಉಣ್ಣುವ ಕಾಲತಖ್ತೆಗಳಿವೆಯೆಂದು ನಾವು ಕಂಡುಹಿಡಿದಿದ್ದೇವೆ. ಕೆಲವು ಮೀನುಗಳು ಬೆಳಗ್ಗೆ ಏಳು ಗಂಟೆಗೆ ಆರಂಭಿಸಿ ಮೂರು ತಾಸು ಉಣಿಸಲ್ಪಟ್ಟು, ಬಳಿಕ ತಂಗಿ, ಮಧ್ಯಾಹ್ನದ ಮೇಲೆ ಪುನಃ ಮೂರು ತಾಸು ತಿನ್ನುತ್ತವೆ. ಕೆಲವು ಮೀನುಗಳು ಕೇವಲ ರಾತ್ರಿಯಲ್ಲಿ ತಿನ್ನುತ್ತವೆ. ಈ ಕಾಲತಖ್ತೆಗಳು ಪ್ರಾಮುಖ್ಯ. ಚಿಕ್ಕದಾದ ಮೀನುಗಳು ದಿನವಿಡೀ ಕೊಂದು ತಿನ್ನುವ ಮೀನುಗಳಿಂದ ಸತತ ಒತ್ತಡಕ್ಕೊಳಗಾಗುವುದಾದರೆ, ಅವುಗಳಿಗೆ ತಮ್ಮ ಆಹಾರ ಸಿಕ್ಕುವುದು ಕಷ್ಟವಾಗಬಹುದು. ಮತ್ತು ಮೀನುಗಳು, ಮಾನವರಂತೆ, ಸೂಕ್ಷ್ಮ ಅಭಿರುಚಿಯ ತಿನ್ನುವವರಾಗಿರಸಾಧ್ಯವಿದೆ. ಉದಾಹರಣೆಗೆ, ನೀಲಿ ಮಚ್ಚೆಯ ಗ್ರೂಪರ್ ಮೀನಿಗೆ ಕೆಂಪು ಸಮುದ್ರದಲ್ಲಿ ಅತಿ ಸಾಮಾನ್ಯವಾಗಿರುವ ಫೇರಿ ಬಾಸ್ಲೆಟ್ ಎಂಬ ಮೀನು ವಿಶೇಷವಾಗಿ ಇಷ್ಟ. ನಮ್ಮ ಜಲಜೀವಿಗೃಹದಲ್ಲಿರುವ ಮೀನುಗಳಿಗೆ ಸಹ ಅವುಗಳ ಪ್ರಿಯ ಆಹಾರವಿದೆ—ಕೆಲವಕ್ಕೆ ಟೂನ ಬೇಕು, ಇನ್ನು ಕೆಲವು ಸಾರ್ಡೀನ್ ಮೀನನ್ನು ಇಷ್ಟಪಡುತ್ತವೆ.
“ಒಂದು ಮೀನಿಗೆ ಎಲ್ಲ ಮಾನವರು ಒಂದೇಯಾಗಿ ಕಾಣುತ್ತಾರೆಂದು ನೀವೆಣಿಸಬಹುದು. ಆದರೆ ವಿಷಯ ಹಾಗಿಲ್ಲ. ಮೀನುಗಳು ಮತ್ತು ಕೆಲವು ಅಕಶೇರುಕಗಳು ಸಹ ಜನರನ್ನು ಗುರುತಿಸಲು ಕಲಿಯುತ್ತವೆ. ಒಮ್ಮೆ ನಮ್ಮ ಒಬ್ಬ ಸಿಬ್ಬಂದಿ ಒಂದು ಅಷ್ಟಪಾದಿಯನ್ನು ವಿನೋದಕ್ಕಾಗಿ ಅಪ್ಪಳಿಸಿದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಅದಕ್ಕೆ ಹಾಗೆ ಅಪ್ಪಳಿಸಿಕೊಳ್ಳುವುದು ಇಷ್ಟವಾಗದರ್ದಿಂದ ಅದು ಆ ವ್ಯಕ್ತಿಯಿಂದ ಆಮೇಲೆ ಆಹಾರವನ್ನು ತಕ್ಕೊಳ್ಳಲೇ ಇಲ್ಲ. ಪ್ರಾಸಂಗಿಕವಾಗಿ, ಸೌಮ್ಯ ಜನರು ಮೀನುಗಳೊಂದಿಗೆ ಅತ್ಯುತ್ತಮವಾಗಿ ವ್ಯವಹರಿಸುತ್ತಾರೆಂದೂ ಆಕ್ರಮಣಶೀಲರು ಅಥವಾ ತಾಳ್ಮೆಗೆಡುವ ವ್ಯಕ್ತಿ ಅವುಗಳನ್ನು ಪುಕ್ಕಲಾಗಿಸುತ್ತಾನೆಂದೂ ನಾವು ಕಂಡುಹಿಡಿದಿದ್ದೇವೆ.”
ಒಬ್ಬ ಆರಂಭಿಗ ಮುಳುಕನ ಮನಮುಟ್ಟಿಸುವುದು ಅಲ್ಲಿರುವ ಸೌಂದರ್ಯ ಮತ್ತು ವರ್ಣಗಳ ನಂಬಲಾಗದ ವೈವಿಧ್ಯವೇ.
“ನಿಜವಾಗಿಯೂ ವರ್ಣರಂಜಿತ ಮೀನುಗಳು ಮನಮುಟ್ಟಿಸುತ್ತವೆ. ಆದರೆ ಅನೇಕರಿಗೆ, ಕೆಲವು ಮೀನುಗಳು ತಮ್ಮ ಬಣ್ಣಗಳನ್ನು ಸಂಕೇತಗಳನ್ನು ಕೊಡಲು—ಹೆಚ್ಚುಕಡಮೆ ನಾವು ಟ್ರ್ಯಾಫಿಕ್ ಲೈಟನ್ನು ಬಳಸುವಂತೆ—ಉಪಯೋಗಿಸುತ್ತವೆಂದು ಅನೇಕರು ಗ್ರಹಿಸಿರುವುದಿಲ್ಲ. ಉದಾಹರಣೆಗೆ, ರೆಡ್ ಗ್ರೂಪರ್ ಮೀನು ತನ್ನ ಕ್ಷೇತ್ರವನ್ನು ಕೇವಲ ಕಾಯುತ್ತಾ ಇರುವ ಬದಲಾಗಿ ಬೇಟೆಯಾಡುವಾಗ, ಅವನ ಬಣ್ಣ ಕಡುಗೆಂಪಾಗುತ್ತದೆ. ಗ್ರೂಪರ್ ಮೀನು ಯಾವುದನ್ನು ತಿನ್ನುತ್ತದೋ ಆ ಕ್ಲೌನ್ ಮೀನಿಗೆ ಗ್ರೂಪರ್ನ ಬಣ್ಣದಿಂದ ಅವನು ‘ಕೆಲಸದಲ್ಲಿಲ್ಲ,’ ಎಂದು ತಿಳಿಯಸಾಧ್ಯವಾಗುತ್ತದೆ. ಈ ಅಪಾಯರಹಿತ ಸಮಯಗಳಲ್ಲಿ, ಈ ಕ್ಲೌನ್ ಮೀನು ತನ್ನ ಟೆರಿಟೊರಿಯನ್ನು ಆಕ್ರಮಿಸುವ ಗ್ರೂಪರ್ನನ್ನು ಧೈರ್ಯದಿಂದ ಓಡಿಸಿಬಿಡುತ್ತದೆ.”
ದೇವರ ಸೃಷ್ಟಿಯ ಅಸಾಧಾರಣವಾದ ಸೌಂದರ್ಯವನ್ನು ಅನೇಕ ಅಸಂಭವವಿರುವ ಸ್ಥಳಗಳಲ್ಲಿ ಕಂಡುಹಿಡಿಯಬಹುದೆಂಬುದಕ್ಕೆ ಸಂದೇಹವಿಲ್ಲ. ಈ ಸೌಂದರ್ಯದ ಒಂದು ಚಿಕ್ಕ ನಮೂನೆಯನ್ನು ಪರೀಕ್ಷಿಸಿದುದರಿಂದ ನನ್ನ ಜೀವನ ಸಂಪದ್ಯುಕ್ತವಾಯಿತು. ಆ ತೆರೆಗಳ ಕೆಳಗಡೆಯಿರುವ ಕ್ಷೇತ್ರಕ್ಕೆ ಕೊಟ್ಟ ಆ ಅಲ್ಪಕಾಲಿಕ ಭೇಟಿಯು ನಮ್ಮ ಗ್ರಹದಲ್ಲಿ ಅಡಕವಾಗಿರುವ ನೈಸರ್ಗಿಕ ನಿಧಿಗಳಿಗೆ ನನ್ನ ಗಣ್ಯತೆಯನ್ನು ಆಳವಾಗಿಸಿತು.—ದತ್ತಲೇಖನ. (g94 10⁄8)
[ಪುಟ 24 ರಲ್ಲಿರುವ ಚಿತ್ರ]
ಒಂದು ಸಿಂಹಮೀನು (ಲಯನ್ಫಿಶ್) ಕೊಂದು ತಿನ್ನುವ ಮೀನುಗಳ ಚಿಂತೆಯೇ ಇಲ್ಲದೆ ನಿಧಾನವಾಗಿ ತೇಲಿಹೋಯಿತು. ಆ ಮೀನುಗಳು ದೂರವಿರುತ್ತವೆ, ಏಕೆಂದರೆ ಅವನ ಮುಳ್ಳಿಡಿದ ಈಜುರೆಕ್ಕೆಯಲ್ಲಿ ಶಕ್ತಿಯುತವಾದ ವಿಷವಿದೆ.
[ಪುಟ 24 ರಲ್ಲಿರುವ ಚಿತ್ರ]
ಕ್ಲೌನ್ ಮೀನು ತನ್ನ ಬಿಡಾರದಿಂದ ಹೆಚ್ಚು ದೂರ ಹೋಗುವುದು ವಿರಳ. ಅದರ ಬಿಡಾರ ಒಂದು ದೊಡ್ಡ ಕಡಲ ಆ್ಯನಿಮೋನ್ ಪ್ರಾಣಿಜಾತಿಯ ಗ್ರಹಣಾಂಗದ ಮಧ್ಯದಲ್ಲಿರುತ್ತದೆ. ತನ್ನ ಆತಿಥೇಯನನ್ನು ಅವನು ಶುಚಿಯಾಗಿಡಲು ಸಹಾಯ ನೀಡುವಾಗ ಆತಿಥೇಯನ ಆಲಿಂಗನದಿಂದ ಅವನು ರಕ್ಷಿತನಾಗಿರುತ್ತಾನೆ.
[ಪುಟ 24 ರಲ್ಲಿರುವ ಚಿತ್ರ]
ಚಿಟ್ಟೆಮೀನುಗಳು (ಬಟರ್ಫ್ಲೈ ಫಿಶ್) ವಿವಿಧ ಬಣ್ಣಗಳಲ್ಲಿ ಬರುತ್ತವೆ. ಅವುಗಳ ಬಿಲ್ಲೆಯಂತಿರುವ ದೇಹಗಳು ಅತ್ತಿತ್ತ ಅಲ್ಲಾಡುತ್ತಾ ನನಗೆ ಚಿಟ್ಟೆಹುಳುವಿನ ಜ್ಞಾಪಕ ಹುಟ್ಟಿಸಿತು.
[ಪುಟ 24 ರಲ್ಲಿರುವ ಚಿತ್ರ]
ಪಿಕಾಸೊ ಮೀನು, ಅದರ ಥಳುಕಿನ ಪಟ್ಟೆಗಳು ಮತ್ತು ಹೊಳೆಯುವ ಹಳದಿ ತುಟಿಕಡ್ಡಿಯಂತೆ ಕಂಡ ವಸ್ತುವಿನೊಂದಿಗೆ ನನಗೆ ಒಬ್ಬ ಭಾವನಾ ಚಿತ್ರಕಾರನ ಕೃತಿಯಂತೆ ಕಂಡಿತು.
[ಪುಟ 24 ರಲ್ಲಿರುವ ಚಿತ್ರ]
ಎಂಪರರ್ ಏಂಜಲ್ ಮೀನಿಗೆ ಅದು ಬೆಳೆಯುವಾಗ ಬಣ್ಣ ಮತ್ತು ವಿನ್ಯಾಸ ಮಾರ್ಪಡುವ ಒಂದು ಬಹುವರ್ಣಗಳ ಕವಚವಿದೆ.