ನಿರೀಕ್ಷೆ ಹಾಗೂ ಪ್ರೀತಿಯು ಸಿಗದೆಹೋಗುವಾಗ
ಕೆನಡದ ಹದಿನೇಳು ವರ್ಷ ಪ್ರಾಯದ ಹುಡುಗಿಯೊಬ್ಬಳು, ತಾನು ಸಾಯಲು ಬಯಸುತ್ತಿರುವುದಕ್ಕೆ ಕಾರಣಗಳನ್ನು ಬರೆದಿಟ್ಟಳು. ಅದರಲ್ಲಿ ಬೇರೆ ಬೇರೆ ಕಾರಣಗಳಿದ್ದು, ಅವುಗಳಲ್ಲಿ ಕೆಲವನ್ನು ಅವಳು ಹೀಗೆ ಪಟ್ಟಿಮಾಡಿದಳು: ‘ಒಂಟಿತನ ಹಾಗೂ ನನ್ನ ಭವಿಷ್ಯತ್ತಿನ ಕುರಿತು ಭಯದ ಅನಿಸಿಕೆ; ನನ್ನ ಸಹೋದ್ಯೋಗಿಗಳಿಗಿಂತ ನಾನು ಕೀಳೆಂಬ ಭಾವನೆ; ನೂಕ್ಲಿಯರ್ ಯುದ್ಧ; ಓಸೋನ್ ಪದರದ ಕ್ಷೀಣಿಸುವಿಕೆ; ನಾನು ತುಂಬ ಕುರೂಪಿಯಾಗಿದ್ದೇನೆ, ಆದುದರಿಂದ ನನಗೆ ಗಂಡನೆಂದೂ ಸಿಗುವುದಿಲ್ಲ ಮತ್ತು ನಾನು ಒಂಟಿಯಾಗಿಯೇ ಉಳಿಯಬೇಕಾಗುತ್ತದೆ; ಜೀವಿಸುವುದರಲ್ಲಿ ಏನೂ ಫಲವಿಲ್ಲವೆಂದು ನನಗೆ ಅನಿಸುವುದರಿಂದ ನಾನೇಕೆ ಕಾಯಬೇಕು; ನನ್ನ ಸಾವು ಇತರರೆಲ್ಲರ ಹೊರೆಯನ್ನು ಹಗುರಗೊಳಿಸುತ್ತದೆ; ಇನ್ನೆಂದಿಗೂ ನನ್ನನ್ನು ಯಾರೂ ನೋಯಿಸರು.’
ಯುವ ಜನರು ತಮ್ಮನ್ನು ಕೊಂದುಕೊಳ್ಳಲು ಇವು ಕೆಲವು ಕಾರಣಗಳಾಗಿರಬಹುದೊ? ಕೆನಡದಲ್ಲಿ, “ಮೋಟಾರು ವಾಹನಗಳ ಅಪಘಾತವನ್ನು ಬಿಟ್ಟರೆ, ಈಗ ಆತ್ಮಹತ್ಯೆಯ ಪ್ರಕರಣಗಳು ಯುವ ಜನರ ನಡುವೆ ಸಂಭವಿಸುತ್ತಿರುವ ಮರಣಕ್ಕೆ ಅತ್ಯಂತ ಸಾಮಾನ್ಯವಾಗಿರುವ ಕಾರಣಗಳಾಗಿವೆ.”—ದ ಗ್ಲೋಬ್ ಆ್ಯಂಡ್ ಮೈಲ್.
ದಕ್ಷಿಣ ಆಸ್ಟ್ರೇಲಿಯದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ರಿಯಾಸ್ ಹಾಸನ್ ಅವರು, “ಮೊಟಕುಗೊಳಿಸಲ್ಪಟ್ಟ ಜೀವಗಳು: ಯುವ ಜನತೆಯ ಆತ್ಮಹತ್ಯೆಯಲ್ಲಿರುವ ಹೊಸ ಪ್ರವೃತ್ತಿಗಳು” ಎಂಬ ತಮ್ಮ ಲಿಖಿತ ದಾಖಲೆಯಲ್ಲಿ ಹೀಗೆ ಹೇಳುತ್ತಾರೆ: “ಆ ಪ್ರಶ್ನೆಗೆ ಅನ್ವಯವಾಗುವಂತಹ ಅನೇಕ ಸಮಾಜಶಾಸ್ತ್ರಸಂಬಂಧಿತ ಕಾರಣಗಳಿವೆ ಮತ್ತು ಅವು ಹದಿಪ್ರಾಯದ ಆತ್ಮಹತ್ಯೆಯಲ್ಲಿನ ಏರಿಕೆಯನ್ನು ಗಮನಾರ್ಹವಾಗಿ ಪ್ರಭಾವಿಸಿರುವಂತೆ ತೋರುತ್ತದೆ. ಇವು ಯಾವುವೆಂದರೆ, ಯುವ ಜನರಲ್ಲಿ ಅತ್ಯಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ; ಆಸ್ಟ್ರೇಲಿಯದ ಕುಟುಂಬಗಳಲ್ಲಿ ಬದಲಾವಣೆಗಳು; ಅಮಲೌಷಧದ ಬಳಸುವಿಕೆ ಹಾಗೂ ಅದರ ದುರುಪಯೋಗದಲ್ಲಿ ಹೆಚ್ಚಳ; ಯುವ ಜನತೆಯ ಹೆಚ್ಚುತ್ತಿರುವ ಹಿಂಸಾಚಾರ; ಮಾನಸಿಕ ತುಮುಲ; ಹಾಗೂ ‘ತಾತ್ತ್ವಿಕ ಸ್ವಾತಂತ್ರ್ಯ’ ಮತ್ತು ಪ್ರಾಯೋಗಿಕ ವ್ಯಕ್ತಿಸ್ವಾತಂತ್ರ್ಯದ ನಡುವಿನ ಅಂತರವು ಹೆಚ್ಚಾಗಿರುವುದು.” ಆ ದಾಖಲೆಯು ಇನ್ನೂ ಹೇಳುವುದೇನೆಂದರೆ, ಅನೇಕ ಸಮೀಕ್ಷೆಗಳ ಫಲಿತಾಂಶಗಳು, ಭವಿಷ್ಯತ್ತಿನ ಕುರಿತು ಅಶುಭ ಪ್ರತೀಕ್ಷೆಯನ್ನು ನೀಡುತ್ತಿವೆ ಮತ್ತು “ಅಧಿಕಾಂಶ ಯುವ ಜನರು ತಮ್ಮ ಭವಿಷ್ಯತ್ತನ್ನು ಹಾಗೂ ಲೋಕದ ಭವಿಷ್ಯತ್ತನ್ನು, ಭಯ ಹಾಗೂ ಕಳವಳದಿಂದ ವೀಕ್ಷಿಸುತ್ತಾರೆ ಎಂದು ಸೂಚಿಸುತ್ತವೆ. ಲೋಕವು ನೂಕ್ಲಿಯರ್ ಯುದ್ಧದಿಂದ ಧ್ವಂಸಗೊಳಿಸಲ್ಪಡುತ್ತದೆ, ಮತ್ತು ಮಾಲಿನ್ಯ ಹಾಗೂ ಪರಿಸರೀಯ ಅವನತಿಯಿಂದ ಹಾಳಾಗುತ್ತದೆ, ಮತ್ತು ಸಮಾಜವು ಮಾನವೀಯತೆಯನ್ನೇ ಕಳೆದುಕೊಂಡಿದೆ, ತಾಂತ್ರಿಕತೆಯು ಹದ್ದು ಮೀರಿದೆ, ಇದರಿಂದಾಗಿ ನಿರುದ್ಯೋಗವು ವ್ಯಾಪಕವಾಗಿದೆ ಎಂದು ಅವರು ಭಾವಿಸುತ್ತಾರೆ.”
16ರಿಂದ 24 ವರ್ಷ ಪ್ರಾಯದವರ ಗ್ಯಾಲಪ್ ಮತಸಂಖ್ಯೆಗನುಸಾರ, ಆತ್ಮಹತ್ಯೆಯ ಪ್ರಕರಣಗಳಿಗೆ ಬೇರೆ ಮುಖ್ಯ ಕಾರಣಗಳು ಯಾವುವೆಂದರೆ, ಬಡವ-ಶ್ರೀಮಂತರ ನಡುವಿನ ಅಂತರಗಳು ಹೆಚ್ಚಾಗುತ್ತಿರುವುದು, ಏಕ ಹೆತ್ತವರ ಮನೆವಾರ್ತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವುದು, ಬಂದೂಕುಗಳ ಉಪಯೋಗವು ಜನಪ್ರಿಯವಾಗುತ್ತಿರುವುದು, ಮಕ್ಕಳ ದುರುಪಯೋಗ, ಹಾಗೂ ಹೆಚ್ಚು ಸಾಮಾನ್ಯವಾಗಿರುವ “ಭವಿಷ್ಯತ್ತಿನಲ್ಲಿನ ನಂಬಿಕೆಯ ಕೊರತೆ.”
ನ್ಯೂಸ್ವೀಕ್ ಪತ್ರಿಕೆಯು ವರದಿಸುವುದೇನೆಂದರೆ, ಅಮೆರಿಕದಲ್ಲಿ, “[ಹದಿಪ್ರಾಯದ ಆತ್ಮಹತ್ಯೆಯಲ್ಲಿ] ಬಂದೂಕುಗಳ ಇರುವಿಕೆ ಅತ್ಯಂತ ಪ್ರಮುಖವಾದ ಕಾರಣವಾಗಿರಬಹುದು. ಸುವ್ಯಕ್ತವಾದ ಯಾವುದೇ ಮಾನಸಿಕ ರೋಗಗಳಿಲ್ಲದೆ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಮಕ್ಕಳನ್ನು, ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸದ ಮಕ್ಕಳೊಂದಿಗೆ ಹೋಲಿಸಿ ನೋಡಿದಾಗ, ಒಂದು ಅಧ್ಯಯನವು ಒಂದೇ ಒಂದು ವ್ಯತ್ಯಾಸವನ್ನು ಕಂಡುಕೊಂಡಿತು: ಮನೆಯಲ್ಲಿ ಗುಂಡು ತುಂಬಿರುವ ಬಂದೂಕು ಇರುವುದೇ. ಬಂದೂಕುಗಳು ಜನರನ್ನು ಕೊಲ್ಲುವುದಿಲ್ಲ, ಜನರೇ ಕೊಲ್ಲುವುದು ಎಂದು ಹೇಳುವ ಮೂಲಕ, ಬಂದೂಕು ತಮ್ಮ ಬಳಿ ಇರುವುದರಿಂದ ಯಾವುದೇ ಅಪಾಯವು ಉಂಟಾಗುವುದಿಲ್ಲವೆಂಬುದು ಬರೀ ಪೊಳ್ಳು ಮಾತು.” ಮತ್ತು ಅಸಂಖ್ಯಾತ ಮನೆಗಳಲ್ಲಿ ಗುಂಡು ತುಂಬಿರುವ ಬಂದೂಕುಗಳಿವೆ!
ಭಯ ಹಾಗೂ ಸಮಾಜದಿಂದ ನಿರ್ಲಕ್ಷಿಸಲ್ಪಡುವುದು, ಸುಲಭವಾಗಿ ಬಲಿಪಶುಗಳಾಗುವ ಯುವ ಜನರು ಬೇಗನೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಸಾಧ್ಯವಿದೆ. ಇದರ ಕುರಿತು ಆಲೋಚಿಸಿರಿ: 12ರಿಂದ 19 ವರ್ಷ ಪ್ರಾಯದವರ ವಿರುದ್ಧ ನಡೆಸಲ್ಪಡುವ ಹಿಂಸಾತ್ಮಕ ದುಷ್ಕೃತ್ಯಗಳ ಪ್ರಮಾಣವು, ಜನಸಾಮಾನ್ಯರ ವಿರುದ್ಧ ನಡೆಸಲ್ಪಡುವ ದುಷ್ಕೃತ್ಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. “14ರಿಂದ 24 ವರ್ಷ ಪ್ರಾಯದ ಯುವತಿಯರು, ಹಲ್ಲೆಗೆ ಒಳಗಾಗುವ ಸಂಭವನೀಯತೆಯು ಹೆಚ್ಚಾಗಿದೆ” ಎಂದು ಅಧ್ಯಯನಗಳು ಕಂಡುಕೊಂಡಿವೆ ಎಂಬುದಾಗಿ ಮ್ಯಾಕ್ಲಿನ್ಸ್ ಪತ್ರಿಕೆಯು ವರದಿಸಿತು. “ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಹೇಳುವಂತಹ ಜನರಿಂದಲೇ, ಸ್ತ್ರೀಯರು ಆಗಿಂದಾಗ್ಗೆ ಆಕ್ರಮಣಕ್ಕೆ ಒಳಗಾಗುತ್ತಾರೆ ಮತ್ತು ಕೊಲ್ಲಲ್ಪಡುತ್ತಾರೆ.” ಫಲಿತಾಂಶವೇನು? ಇಂತಹ ಭಯ ಹಾಗೂ ಇನ್ನಿತರ ಭಯಗಳು, “ಈ ಹುಡುಗಿಯರ ಆತ್ಮವಿಶ್ವಾಸವನ್ನು ಹಾಗೂ ಭದ್ರತೆಯ ಅನಿಸಿಕೆಯನ್ನು ಧ್ವಂಸಮಾಡಿಬಿಡುತ್ತವೆ.” ಒಂದು ಅಧ್ಯಯನದಲ್ಲಿ, ಲೈಂಗಿಕ ಶೋಷಣೆಯಿಂದ ಪಾರಾದವರೊಂದಿಗೆ ನಡೆಸಲ್ಪಟ್ಟ ಸಂದರ್ಶನದಲ್ಲಿ, ಮೂರನೇ ಒಂದು ಭಾಗದಷ್ಟು ಹುಡುಗಿಯರು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನಿರ್ಧರಿಸಿದ್ದರು.
ನ್ಯೂ ಸೀಲೆಂಡ್ನ ಒಂದು ವರದಿಯು, ಯುವ ಜನರ ಆತ್ಮಹತ್ಯೆಯ ಕಾರಣದ ಮತ್ತೊಂದು ನೋಟವನ್ನು ನೀಡುತ್ತದೆ. ಅದು ಹೀಗೆ ಹೇಳುತ್ತದೆ: “ವ್ಯಕ್ತಿಯೊಬ್ಬನ ಯಶಸ್ಸನ್ನು, ಐಶ್ವರ್ಯ, ಸೌಂದರ್ಯ, ಹಾಗೂ ಅಧಿಕಾರದೊಂದಿಗೆ ಸರಿದೂಗಿಸುವಂತಹ ಇಂದಿನ ಪ್ರಾಪಂಚಿಕ ಮೌಲ್ಯಗಳು, ತಾವು ಅಸಮರ್ಥರು ಹಾಗೂ ಸಮಾಜವು ತಮ್ಮನ್ನು ಅಂಗೀಕರಿಸುವುದಿಲ್ಲ ಎಂದು ಅನೇಕ ಯುವ ಜನರು ಭಾವಿಸುವಂತೆ ಮಾಡುತ್ತವೆ.” ಇದಕ್ಕೆ ಕೂಡಿಸಿ, ದ ಫ್ಯೂಚರಿಸ್ಟ್ ಈ ವಿಷಯವನ್ನು ಹೀಗೆ ಹೇಳುತ್ತದೆ: “[ಯುವ ಜನರಲ್ಲಿ] ತತ್ಕ್ಷಣವೇ ಪ್ರತಿಫಲವನ್ನು ಪಡೆದುಕೊಳ್ಳುವ ಅಪೇಕ್ಷೆಯಿರುತ್ತದೆ; ಅವರು ಸರ್ವಸ್ವವನ್ನೂ ತಮ್ಮದಾಗಿ ಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಅದನ್ನು ಶೀಘ್ರವಾಗಿ ಪಡೆಯಲು ಬಯಸುತ್ತಾರೆ. ಟಿವಿಯಲ್ಲಿ ಬರುವ ಧಾರವಾಹಿಗಳು ಅವರ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿವೆ. ತಮ್ಮ ಜೀವಿತವು ಸಹ, ಅದೇ ರೀತಿಯ ಸೌಂದರ್ಯಭರಿತ ಜನರಿಂದ, ಅತ್ಯಾಧುನಿಕ ಶೈಲಿಯ ಬಟ್ಟೆಗಳನ್ನು ಧರಿಸಿರುವ, ಹೇರಳವಾದ ಹಣ ಹಾಗೂ ಘನತೆಯಿರುವ, ಮತ್ತು ಹೆಚ್ಚು ಶ್ರಮಪಡಬೇಕಾಗಿಲ್ಲದ ಪರಿಸ್ಥಿತಿಯಿಂದ ತುಂಬಿರುವಂತೆ ಅವರು ಇಷ್ಟಪಡುತ್ತಾರೆ.” ಅಂತಹ ಅವಾಸ್ತವಿಕವಾದ, ನೈಜವಾಗದ ನಿರೀಕ್ಷೆಗಳು, ಸ್ವಲ್ಪಮಟ್ಟಿಗೆ ಹತಾಶೆಯನ್ನು ಉಂಟುಮಾಡಿ, ಆತ್ಮಹತ್ಯೆಗೆ ನಡಿಸಲು ಕಾರಣವಾಗಬಹುದು.
ಒಂದು ಜೀವರಕ್ಷಕ ಗುಣವೊ?
ಶೇಕ್ಸ್ಪಿಯರ್ ಬರೆದುದು: “ಮಳೆಗರೆದ ಬಳಿಕ ಬರುವ ಬಿಸಿಲಿನಂತೆ ಪ್ರೀತಿಯು ಮುದನೀಡುತ್ತದೆ.” ಬೈಬಲು ಹೇಳುವುದು: “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:8) ಯುವ ಜನರು ಆತ್ಮಹತ್ಯೆಗೆ ಮನಸ್ಸುಮಾಡುವ ಕಾರಣವು, ಪ್ರೀತಿ ಹಾಗೂ ಸಂವಾದಕ್ಕಾಗಿರುವ ಹಂಬಲವಾಗಿದೆ. ಈ ಸಮಸ್ಯೆಗೆ ಕೀಲಿ ಕೈ ಆ ಗುಣದಲ್ಲಿದೆ. ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಎನ್ಸೈಕ್ಲೊಪೀಡಿಯ ಆಫ್ ಮೆಡಿಸಿನ್ ಹೇಳುವುದು: “ಆತ್ಮಹತ್ಯೆಯ ಮನೋಭಾವವುಳ್ಳವರಿಗೆ, ಸಾಮಾನ್ಯವಾಗಿ ತುಂಬ ಒಂಟಿತನದ ಅನಿಸಿಕೆಯಾಗುತ್ತದೆ, ಮತ್ತು ಕೆಲವೊಮ್ಮೆ ಅನುಕಂಪ ತೋರಿಸುವ, ತಮ್ಮನ್ನು ಅರ್ಥಮಾಡಿಕೊಳ್ಳುವ ಕೇಳುಗನೊಂದಿಗೆ ಮಾತಾಡುವಂತಹ ಅವಕಾಶವು ತಾನೇ ಈ ನಿರಾಶಾಜನಕ ಕೃತ್ಯವನ್ನು ತಡೆಗಟ್ಟಲು ಸಾಕಾಗಿದೆ.”
ಅನೇಕವೇಳೆ ಯುವ ಜನರಿಗೆ ಪ್ರೀತಿ ಮತ್ತು ಜನರ ಸ್ನೇಹದ ಮಹತ್ತರವಾದ ಆವಶ್ಯಕತೆಯಿರುತ್ತದೆ. ಈ ಪ್ರೀತಿರಹಿತ ಹಾಗೂ ವಿನಾಶಕರ ಲೋಕದಲ್ಲಿ, ದಿನಕಳೆದಂತೆ ಈ ಆವಶ್ಯಕತೆಯನ್ನು ಪೂರೈಸುವುದು ಒಂದು ಸವಾಲಾಗಿದೆ—ಈ ಲೋಕದಲ್ಲಿ ಯುವ ಜನರು ಬಯಸುವುದು ಏನೂ ನಡೆಯುವುದಿಲ್ಲ. ವಿಭಾಜಿತ ಕುಟುಂಬಗಳು ಹಾಗೂ ವಿವಾಹ ವಿಚ್ಛೇದದ ಕಾರಣದಿಂದ ಉಂಟಾಗುವ ಹೆತ್ತವರ ಅಲಕ್ಷ್ಯ ಭಾವವು, ಹದಿವಯಸ್ಕರ ಆತ್ಮಹತ್ಯೆಗೆ ಒಂದು ಕಾರಣವಾಗಿರಬಹುದು. ಮತ್ತು ಈ ಅಲಕ್ಷ್ಯವನ್ನು ಅನೇಕ ವಿಧಗಳಲ್ಲಿ ವ್ಯಕ್ತಪಡಿಸಸಾಧ್ಯವಿದೆ.
ಮನೆಯಲ್ಲಿ ತಮ್ಮ ಮಕ್ಕಳಿಗೆ ಸಮಯವನ್ನೇ ಬದಿಗಿರಿಸದ ಹೆತ್ತವರ ಉದಾಹರಣೆಯನ್ನು ಪರಿಗಣಿಸಿರಿ. ತಾಯಿತಂದೆಯರು ಸಂಪೂರ್ಣವಾಗಿ ತಮ್ಮ ಉದ್ಯೋಗಗಳಲ್ಲೇ ತಲ್ಲೀನರಾಗಿರಬಹುದು ಅಥವಾ ತಮ್ಮ ಮಕ್ಕಳನ್ನು ಒಳಗೂಡಿಸದಂತಹ ಯಾವುದೋ ಒಂದು ರೀತಿಯ ಮನೋರಂಜನೆಯನ್ನು ಬೆನ್ನಟ್ಟುತ್ತಿರಬಹುದು. ತಮ್ಮನ್ನು ಅಲಕ್ಷಿಸಲಾಗುತ್ತಿದೆ ಎಂಬ ವಿಚಾರವು ಮಕ್ಕಳಿಗೆ ಸ್ಪಷ್ಟವಾಗುತ್ತದೆ. ಪ್ರಖ್ಯಾತ ಪತ್ರಿಕೋದ್ಯಮಿ ಹಾಗೂ ಸಂಶೋಧಕರಾದ ಹ್ಯೂ ಮಕೆ ಹೇಳುವುದೇನೆಂದರೆ, “ಹೆತ್ತವರು ಹೆಚ್ಚೆಚ್ಚು ಸ್ವಾರ್ಥಮಗ್ನರಾಗುತ್ತಿದ್ದಾರೆ. ತಮ್ಮ ಜೀವನ ಶೈಲಿಗಳನ್ನು ಮುಂದುವರಿಸಿಕೊಂಡು ಹೋಗಲು ಅವರು ತಮ್ಮ ಕುರಿತು ಹೆಚ್ಚು ಚಿಂತಿಸುತ್ತಾರೆ. . . . ಕಠಿನ ಶಬ್ದಗಳಲ್ಲಿ ಹೇಳುವುದಾದರೆ, ಜನರಿಗೆ ಮಕ್ಕಳ ಕಡೆಗೆ ಒಂದು ಒಳ್ಳೆಯ ದೃಷ್ಟಿಕೋನವಿಲ್ಲ. . . . ಜೀವನವು ಕಷ್ಟಕರವಾಗಿದೆ ಮತ್ತು ಜನರು ತಮ್ಮ ಸ್ವಂತ ವಿಷಯಗಳಲ್ಲೇ ಹೆಚ್ಚು ಮಗ್ನರಾಗುತ್ತಾರೆ.”
ಕೆಲವು ಸಂಸ್ಕೃತಿಗಳಲ್ಲಿ ಪುರುಷತ್ವಕ್ಕೆ ಹೆಚ್ಚು ಮಹತ್ವವು ಕೊಡಲ್ಪಡುತ್ತದೆ, ಮತ್ತು ಅಂತಹ ಪುರುಷರು ಪರಾಮರಿಕೆ ಮಾಡುವ ಪೋಷಕರಾಗಿ ಕಂಡುಕೊಳ್ಳಲು ಇಷ್ಟಪಡದಿರಬಹುದು. ಪತ್ರಿಕೋದ್ಯಮಿ ಕೇಟ್ ಲೆಗ್ ಅದನ್ನು ಒಳ್ಳೆಯ ರೀತಿಯಲ್ಲಿ ವಿವರಿಸುತ್ತಾರೆ: “ಯಾವ ಪುರುಷನು ಸಾರ್ವಜನಿಕ ಸೇವೆಯನ್ನು ಮಾಡಲು ಇಚ್ಛೆಯುಳ್ಳವನಾಗಿರುತ್ತಾನೋ ಅವನು, ಮಕ್ಕಳ ಪರಾಮರಿಸುವ ಕೆಲಸಕ್ಕೆ ಬದಲಾಗಿ, ಜೀವರಕ್ಷಕ ಕೆಲಸ ಅಥವಾ ಅಗ್ನಿಶಾಮಕ ಕೆಲಸವನ್ನು ಮಾಡುವ ಆಯ್ಕೆಮಾಡುತ್ತಾನೆ. . . . ಅವರು ಪ್ರಬಲವಾದ, ಮೌನ ವೀರನಾಯಕತನವನ್ನು ತೋರಿಸುವ ಹೊರಗಿನ ಬಲಗಳೊಂದಿಗೆ ಹೋರಾಡಲು ಇಷ್ಟಪಡುತ್ತಾರೆ.” ಇಂದು ಇತರರನ್ನು ನೋಡಿಕೊಳ್ಳುವಂತಹ ಪರಸ್ಪರ ಪ್ರಭಾವಯುಕ್ತ ಕೆಲಸಗಳಲ್ಲಿ ಒಂದು, ಒಬ್ಬ ಹೆತ್ತವನಾಗಿರುವುದು ಎಂಬುದು ಖಂಡಿತ. ಹೆತ್ತವರು ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದಿರುವುದು, ಒಂದು ಮಗುವನ್ನು ತಿರಸ್ಕರಿಸುವುದಕ್ಕೆ ಸರಿಸಮವಾಗಿದೆ. ಇದರ ಫಲಿತಾಂಶವಾಗಿ, ನಿಮ್ಮ ಮಗನೊ ಮಗಳೊ ನಕಾರಾತ್ಮಕವಾದ ಭಾವನೆಯನ್ನು ಬೆಳೆಸಿಕೊಳ್ಳಬಹುದು ಹಾಗೂ ಅವರ ಸಾಮಾಜಿಕ ಕೌಶಲಗಳಲ್ಲಿ ನ್ಯೂನತೆಯುಂಟಾಗಬಹುದು. ದಿ ಎಡ್ಯುಕೇಷನ್ ಡೈಜಸ್ಟ್ ಹೀಗೆ ದಾಖಲಿಸುತ್ತದೆ: “ಸ್ವತಃ ತಮ್ಮ ಕುರಿತು ಉತ್ತಮ ಭಾವನೆಯಿಲ್ಲದಿರುವುದರಿಂದ, ಆ ಮಕ್ಕಳು ತಮ್ಮ ಹಿತಚಿಂತನೆಗಾಗಿ ನಿರ್ಣಯಗಳನ್ನು ಮಾಡಲು ಯಾವುದೇ ಆಧಾರವಿರುವುದಿಲ್ಲ.”
ಇದರ ಫಲಿತಾಂಶವು ಹತಾಶ ಭಾವನೆಯಾಗಿರಸಾಧ್ಯವಿದೆ
ಆತ್ಮಹತ್ಯೆಗೆ, ಆಶಾಹೀನತೆಯು ಒಂದು ಪ್ರಮುಖ ಕಾರಣವಾಗಿದೆಯೆಂದು ಸಂಶೋಧಕರು ನಂಬುತ್ತಾರೆ. ಆಸ್ಟ್ರೇಲಿಯದ ಯುವ ಜನತೆಯ ಆತ್ಮಹತ್ಯೆಯ ಕುರಿತಾದ ಒಬ್ಬ ಬರಹಗಾರರಾದ ಗೇಲ್ ಮಾಸನ್ ಗಮನಿಸಿದ್ದು: “ಆಶಾಹೀನತೆಯು, ಖಿನ್ನತೆಗಿಂತಲೂ ಹೆಚ್ಚಾಗಿ ಆತ್ಮಹತ್ಯೆಯ ಆಲೋಚನೆಗಳೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದೆ. ಕೆಲವೊಮ್ಮೆ ಆಶಾಹೀನತೆಯನ್ನು, ಖಿನ್ನತೆಯ ಒಂದು ರೋಗಲಕ್ಷಣವಾಗಿ ಅರ್ಥನಿರೂಪಿಸಲಾಗುತ್ತದೆ. . . . ಇದು ಯುವ ಜನರ ಭವಿಷ್ಯತ್ತಿನ ವಿಷಯದಲ್ಲಿ, ಸಾಮಾನ್ಯವಾಗಿ ಹತಾಶೆ ಹಾಗೂ ಎದೆಗುಂದುವಿಕೆಯ ರೂಪದಲ್ಲಿರುತ್ತದೆ ಮತ್ತು ವಿಶೇಷವಾಗಿ ಅವರ ಆರ್ಥಿಕ ಭವಿಷ್ಯತ್ತಿನ ಮತ್ತು ಭೌಗೋಳಿಕ ಸನ್ನಿವೇಶದ ವಿಷಯದಲ್ಲಿ ಸ್ವಲ್ಪಮಟ್ಟಿಗಿನ ಹತಾಶ ಭಾವನೆಯಾಗಿದೆ.”
ಜನನಾಯಕರು ಪ್ರಾಮಾಣಿಕತೆಯ ಒಳ್ಳೆಯ ಮಾದರಿಯನ್ನು ಇಡುವುದಿಲ್ಲ. ಆದುದರಿಂದ, ಇದು ಯುವ ಜನರು ತಮ್ಮ ಸ್ವಂತ ನೈತಿಕತೆಯ ಮಟ್ಟಗಳನ್ನು ಉತ್ತಮಗೊಳಿಸುವಂತೆ ಪ್ರೇರಿಸುವುದಿಲ್ಲ. ಆಗ “ನಾನು ಏಕೆ ಪ್ರಾಮಾಣಿಕನಾಗಿರಬೇಕು?” ಎಂಬ ಮನೋಭಾವವು ಉಂಟಾಗುತ್ತದೆ. ಕಪಟತನವನ್ನು ಯುವ ಜನರು ಕಂಡುಹಿಡಿಯುವ ಸಾಮರ್ಥ್ಯದ ಕುರಿತು ಹಾರ್ಪರ್ಸ್ ಮ್ಯಾಗಸಿನ್ ಹೀಗೆ ಹೇಳಿಕೆ ನೀಡುತ್ತದೆ: “ಕಪಟತನವನ್ನು ಪತ್ತೆಹಚ್ಚುವುದರಲ್ಲಿ ಯುವ ಜನರು ತುಂಬ ಚುರುಕಾಗಿರುವುದರಿಂದ, ಅವರು ನಿಪುಣರಾದ ಓದುಗರಾಗಿದ್ದಾರೆ—ಆದರೆ ಪುಸ್ತಕಗಳ ಓದುಗರಲ್ಲ. ಯಾವ ಸಂಕೇತಗಳು ಲೋಕದಿಂದ ದೊರಕುತ್ತಿವೆಯೋ, ಹಾಗೂ ಯಾವುದರಿಂದ ಅವರು ಜೀವನೋಪಾಯವನ್ನು ಮಾಡಬೇಕಾಗಿದೆಯೋ, ಅಂತಹ ಸಾಮಾಜಿಕ ಸಂಕೇತಗಳನ್ನು ಅವರು ಬಹಳ ಚುರುಕಾಗಿ ಓದುತ್ತಾರೆ.” ಮತ್ತು ಆ ಸಂಕೇತಗಳು ಏನನ್ನು ಸೂಚಿಸುತ್ತವೆ? ಲೇಖಕಿಯಾದ ಸ್ಟೆಫನೀ ಡೌರಿಕ್ ಹೇಳುವುದು: “ಹೇಗೆ ಜೀವಿಸಬೇಕು ಎಂಬ ವಿಷಯದಲ್ಲಿ ನಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಾಹಿತಿಯು ಈಗ ಒದಗಿಸಲ್ಪಟ್ಟಿದೆ. ಜನರು ಹೆಚ್ಚು ಶ್ರೀಮಂತರಾಗಿದ್ದಾರೆ ಮತ್ತು ಹೆಚ್ಚು ಶಿಕ್ಷಿತರಾಗಿದ್ದಾರೆ, ಆದರೂ ಎಲ್ಲ ಕಡೆಗಳಲ್ಲಿ ಹತಾಶೆಯು ತುಂಬಿತುಳುಕುತ್ತಿದೆ.” ಮತ್ತು ರಾಜಕೀಯ ಹಾಗೂ ಧಾರ್ಮಿಕ ಸಮಾಜದ ಉಚ್ಚ ವರ್ಗಗಳಲ್ಲಿ, ಕೇವಲ ಕೆಲವೇ ಮಂದಿ ಆದರ್ಶಪ್ರಾಯರಿದ್ದಾರೆ. ಡೌರಿಕ್ ಅವರು ಕೆಲವು ಯೋಗ್ಯವಾದ ಪ್ರಶ್ನೆಗಳನ್ನು ಕೇಳುತ್ತಾರೆ: “ಅರ್ಥಹೀನವಾದ ಈ ಕಷ್ಟಾನುಭವಗಳಿಂದ, ನಾವು ವಿವೇಕ, ನವಚೈತನ್ಯ, ಹಾಗೂ ಅರ್ಥವನ್ನು ಹೇಗೆ ಕಂಡುಕೊಳ್ಳುತ್ತೇವೆ? ಸ್ವಾರ್ಥಭಾವ, ಸಿಡುಕು ಹಾಗೂ ಲೋಭವಿರುವ ವಾತಾವರಣದಲ್ಲಿ ನಾವು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?”
ನಮ್ಮ ಮುಂದಿನ ಲೇಖನದಲ್ಲಿ ನೀವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಿರಿ, ಮತ್ತು ಅವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಅಧಿಕಾಂಶ ಯುವ ಜನರು ತಮ್ಮ ಭವಿಷ್ಯತ್ತನ್ನು ಹಾಗೂ ಲೋಕದ ಭವಿಷ್ಯತ್ತನ್ನು, ಭಯ ಹಾಗೂ ಕಳವಳದಿಂದ ವೀಕ್ಷಿಸುತ್ತಾರೆ”
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಕೆಲವೊಮ್ಮೆ ಅನುಕಂಪ ತೋರಿಸುವ, ತಮ್ಮನ್ನು ಅರ್ಥಮಾಡಿಕೊಳ್ಳುವ ಕೇಳುಗನೊಂದಿಗೆ ಮಾತಾಡುವಂತಹ ಅವಕಾಶವು ತಾನೇ ಈ ನಿರಾಶಾಜನಕ ಕೃತ್ಯವನ್ನು ತಡೆಗಟ್ಟಲು ಸಾಕಾಗಿದೆ.”
[ಪುಟ 6 ರಲ್ಲಿರುವ ಚೌಕ]
ಆತ್ಮಹತ್ಯೆಯ ಕೆಲವು ಲಕ್ಷಣಗಳು
• ನಿದ್ರೆಯ ಸಮಸ್ಯೆಗಳು, ಹಸಿವೆಯಿಲ್ಲದಿರುವಿಕೆ
• ಒಂಟಿತನ ಮತ್ತು ಪ್ರತ್ಯೇಕಿಸಿಕೊಳ್ಳುವುದು, ಯಾವಾಗಲೂ ಆಕಸ್ಮಿಕ ಘಟನೆಗಳನ್ನು ಉಂಟುಮಾಡುವ ಪ್ರವೃತ್ತಿ
• ಮನೆಬಿಟ್ಟು ಓಡಿಹೋಗುವುದು
• ಹೊರತೋರಿಕೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳಾಗುವುದು
• ಅಮಲೌಷಧದ ಮತ್ತು/ಅಥವಾ ಮದ್ಯಪಾನದ ದುರುಪಯೋಗ
• ಮಾನಸಿಕ ತೊಳಲಾಟ ಹಾಗೂ ಅಧಿಕಾರವನ್ನು ಪ್ರಶ್ನಿಸುವ ಪ್ರವೃತ್ತಿ
• ಸಾವಿನ ಕುರಿತು ಮಾತಾಡುವುದು; ಸ್ವಹತ್ಯೆಯ ಕುರಿತಾದ ಲಿಖಿತ ಸಂದೇಶಗಳು; ವಿಶೇಷವಾಗಿ ತನ್ನ ವಿರುದ್ಧ ಹಿಂಸಾಚಾರವನ್ನು ವರ್ಣಿಸುವ ಚಿತ್ರಕಲೆ
• ದೋಷಿಭಾವನೆಗಳು
• ಆಶಾಹೀನತೆ, ಚಿಂತೆ, ಖಿನ್ನತೆ, ಅಳುವ ಸರದಿಗಳು
• ವೈಯಕ್ತಿಕ ಸ್ವತ್ತುಗಳನ್ನು ಬೇರೆಯವರಿಗೆ ದಾನಮಾಡುವುದು
• ಹೆಚ್ಚು ಹೊತ್ತು ಮನಸ್ಸನ್ನು ಕೇಂದ್ರೀಕರಿಸಲು ಸಮಸ್ಯೆಯಾಗುವುದು
• ಮನೋರಂಜನೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು
• ಅವಹೇಳನ ಮಾಡಿಕೊಳ್ಳುವುದು
• ಲೈಂಗಿಕ ಸ್ವೇಚ್ಛಾಚಾರ
• ಶಾಲೆಯ ಚಟುವಟಿಕೆಗಳಲ್ಲಿ ಇದ್ದಕ್ಕಿದ್ದಂತೆ ನಿಧಾನಗೊಳ್ಳುವುದು, ಶಾಲೆಯ ಹಾಜರಿಯಲ್ಲಿ ಇಳಿತ
• ಪಂಥ ಅಥವಾ ಗ್ಯಾಂಗ್ನ ಸದಸ್ಯತನ
• ಖಿನ್ನತೆಯ ಬಳಿಕ ಸುಖಭಾವನೆ
ಫಿಲಿಪ್ ಜಿ. ಪಟ್ರಸ್ ಮತ್ತು ಟಾನ್ಯ ಕೆ. ಶಾಮು ಅವರ, ಬಿಕ್ಕಟ್ಟಿನಲ್ಲಿರುವ ಹದಿವಯಸ್ಕರು (ಇಂಗ್ಲಿಷ್) (ಅಮೆರಿಕನ್ ಅಸೋಸಿಯೇಷನ್ ಆಫ್ ಸ್ಕೂಲ್ ಆ್ಯಡ್ಮಿನಿಸ್ಟ್ರೇಟರ್ಸ್) ಮತ್ತು ಮಕ್ಕಳಲ್ಲಿ ಹಾಗೂ ಹದಿವಯಸ್ಕರಲ್ಲಿ ಖಿನ್ನತೆ ಹಾಗೂ ಆತ್ಮಹತ್ಯೆ (ಇಂಗ್ಲಿಷ್) ಎಂಬ ಪುಸ್ತಕಗಳ ಮೇಲಾಧಾರಿತ
[ಪುಟ 7 ರಲ್ಲಿರುವ ಚಿತ್ರ]
ಹೃತ್ಪೂರ್ವಕವಾದ ಪ್ರೀತಿ ಹಾಗೂ ಅನುಕಂಪವು, ಜೀವನವನ್ನು ಗಣ್ಯಮಾಡಲು ಒಬ್ಬ ಯೌವನಸ್ಥನಿಗೆ ಸಹಾಯ ಮಾಡಸಾಧ್ಯವಿದೆ