ವಿಕಾಸವೇ? ವಿನ್ಯಾಸವೇ?
ಹುಟ್ಟಿನಿಂದಲೇ ಇಂಜಿನೀಯರ್ ಪೇಪರ್ ಕಣಜ
● ಪೇಪರ್ ಕಣಜವನ್ನು (ಪೇಪರ್ ವಾಸ್ಪ್/ಕಡಜ) ಕುಶಲ ಇಂಜಿನೀಯರ್ ಎಂದು ಕರೆಯಲಾಗುತ್ತದೆ. ಇದು ತಕ್ಕದಾದ ಹೆಸರು. ಏಕೆ?
ಪರಿಗಣಿಸಿ: ಪೇಪರ್ ಕಣಜ ಅನೇಕ ಕೋಶಗಳಿಂದ ಕೂಡಿದ ತನ್ನ ಗೂಡನ್ನು ವಿಶೇಷ ರೀತಿಯ ಪೇಪರ್ನಿಂದ ಕಟ್ಟುತ್ತದೆ.a ಈ ಪೇಪರನ್ನು ತಾನೇ ಸಿದ್ಧಪಡಿಸುತ್ತದೆ. ಅದಕ್ಕಾಗಿ ದಿಮ್ಮಿ, ಬೇಲಿಗಾಗಿ ಬಳಸಿರುವ ಮರದ ಕಂಬ, ಮರದ ಟೆಲಿಫೋನ್-ಕಂಬ, ಕಟ್ಟಡ ಕಟ್ಟಲು ಉಪಯೋಗಿಸುವ ಮರದ ಸಾಮಾಗ್ರಿ ಮುಂತಾದ ಒಣಮರಗಳ ಹಾಗೂ ಗಿಡಗಳ ನಾರನ್ನು ಸಂಗ್ರಹಿಸುತ್ತದೆ. ಅನಂತರ ಸೆಲ್ಯುಲೋಸ್ (ಸಸ್ಯಗಳ ಕಾರ್ಬೋಹೈಡ್ರೇಟು) ತುಂಬಿರುವ ಆ ನಾರನ್ನು ಅಗಿದು ತನ್ನ ಜೊಲ್ಲಿನೊಂದಿಗೆ ಬೆರೆಸುತ್ತದೆ. ಜೊಲ್ಲಲ್ಲಿ ಅಂಟಿನ ಅಂಶ ಹಾಗೂ ತುಂಬ ಪ್ರೋಟೀನ್ ಇದೆ. ಜೊಲ್ಲು ಸೆಲ್ಯೂಲೋಸ್ನೊಂದಿಗೆ ಬೆರೆತಾಗ ಒಂದು ರೀತಿಯ ಪೇಸ್ಟ್ ಉಂಟಾಗುತ್ತದೆ. ಕೀಟ ಆ ಪೇಸ್ಟನ್ನು ಒಂದೆಡೆ ಮೆತ್ತಿ, ಅದು ಒಣಗಿದಾಗ ಹಗುರವಾದ ಆದರೆ ಅತಿ ಗಟ್ಟಿಯಾದ ಪೇಪರ್ ಆಗುತ್ತದೆ. ಅಲ್ಲದೆ ಆ ಕೀಟದ ಜೊಲ್ಲಿನಲ್ಲಿರುವ ವಿಶೇಷ ಗುಣಗಳಿಂದಾಗಿ ಉಷ್ಣವನ್ನು ಹೀರಿಕೊಳ್ಳುವ ಮತ್ತು ಉತ್ಪಾದಿಸುವ ಸಾಮರ್ಥ್ಯ ಪೇಪರಿಗೆ ಸಿಗುತ್ತದೆ. ಇದರಿಂದಾಗಿ ಗೂಡಿನೊಳಗೆ ಚಳಿಗಾಲದಲ್ಲೂ ಸರಿಯಾದ ತಾಪಮಾನವಿದ್ದು ಕೀಟದ ಮೊಟ್ಟೆ, ಮರಿಹುಳುಗಳಿಗೆ ಸಾಕಷ್ಟು ಕಾವು ಸಿಗುತ್ತದೆ.
ಕಣಜ ಒಂದು ಗೂಡನ್ನು ಕಟ್ಟಬೇಕಾದರೆ ಅನೇಕ ಬಾರಿ ಬಾಯಿತುಂಬ ಪೇಸ್ಟ್ ತಯಾರಿಸಿ ಅದನ್ನು ಮೆತ್ತಿ ಮೆತ್ತಿ ಕಟ್ಟುತ್ತದೆ. ಸಿದ್ಧವಾದ ಗೂಡು ಜಲನಿರೋಧಕ ಪೇಪರ್ ಕೊಡೆಯಂತಿದೆ. ಅದು ಷಡ್ಭುಜಾಕೃತಿ ಕೋಶಗಳ ಗೊಂಚಲಿನಂತಿದೆ. ಷಡ್ಭುಜಾಕೃತಿಯಿಂದಾಗಿ ಅದು ಬಹು ಗಟ್ಟಿಯಾಗಿರುತ್ತದೆ. ಗೂಡಿನೊಳಗೆ ಸ್ಥಳ ಸ್ವಲ್ಪವೂ ವ್ಯರ್ಥವಾಗುವುದಿಲ್ಲ. ತೇವವಿರುವ ಸ್ಥಳದಲ್ಲಿ ಗೂಡು ಕಟ್ಟುವಾಗ ಇನ್ನಷ್ಟು ಹೆಚ್ಚು ಜೊಲ್ಲನ್ನು ಸೇರಿಸಿ ಹೆಚ್ಚು ಜಲನಿರೋಧಕವಾಗಿ ಮಾಡುತ್ತದೆ. ಕೀಟವು ಸುರಕ್ಷಿತವಾದ ಸ್ಥಳಕ್ಕೆ ಅಂದರೆ ಮರದ ಕೊಂಬೆಗೊ ಎಲೆಯ ತೊಟ್ಟಿಗೊ ತನ್ನ ಗೂಡನ್ನು ನೇತುಹಾಕುತ್ತದೆ. ಮಾನವರ ಪೇಪರ್ ಕಾರ್ಖಾನೆಯಿಂದಾಗಿ ವಾಯು, ಜಲ, ಭೂ ಮಾಲಿನ್ಯವಾಗುತ್ತದೆ. ಆದರೆ ಪೇಪರ್ ಕಣಜದಿಂದ ಪರಿಸರಕ್ಕೆ ಯಾವ ಹಾನಿಯೂ ಇಲ್ಲ.
ಕಣಜದ ಗೂಡು ಹಗುರ, ಗಟ್ಟಿ, ಸುಲಭವಾಗಿ ಬಾಗುವಂಥದ್ದು ಮತ್ತು ಪರಿಸರಸ್ನೇಹಿ. ಇಂಥ ಗುಣಗಳುಳ್ಳ ಉತ್ತಮ ದರ್ಜೆಯ ಕಟ್ಟಡ ಸಾಮಾಗ್ರಿಗಳನ್ನು ತಯಾರಿಸಲು ವಾಸ್ತುಶಿಲ್ಪಿಗಳು ಹಾಗೂ ಸಂಶೋಧಕರು ಕಣಜಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ನೀವೇನು ನೆನಸುತ್ತೀರಿ? ಹೆಚ್ಚುಕಡಿಮೆ ಮರಳಿನ ಎರಡು ಕಣದಷ್ಟೇ ಗಾತ್ರದ ಮಿದುಳಿರುವ ಈ ಕೀಟಕ್ಕೆ ಪೇಪರ್ ತಯಾರಿಸುವ ಮತ್ತು ಗೂಡು ಕಟ್ಟುವ ಕಲೆ ವಿಕಾಸವಾಗಿ ಬಂತೇ? ಅಥವಾ ಕೆಮಿಕಲ್ ಹಾಗೂ ಮೆಕ್ಯಾನಿಕಲ್ ಇಂಜಿನೀಯರಿಂಗ್ನ ಅದರ ಕೌಶಲಗಳು ಸೃಷ್ಟಿಕರ್ತನ ವಿನ್ಯಾಸವೇ? (g12-E 02)
[ಪಾದಟಿಪ್ಪಣಿ]
a ಅನೇಕ ಜಾತಿಯ ಕಣಜಗಳು ಪೇಪರ್ ಗೂಡುಗಳನ್ನು ಕಟ್ಟುತ್ತವೆ. ಆ ಗೂಡುಗಳಲ್ಲಿರುವ ಕೋಶಗಳು ಮೊಟ್ಟೆ ಇಡುವ ಸ್ಥಳಗಳು. ಆ ಮೊಟ್ಟೆಗಳು ಮುಂದಕ್ಕೆ ಮರಿಹುಳುಗಳಾಗುತ್ತವೆ.