ಅಧ್ಯಾಯ 73
ನೆರೆಯವನಾದ ಸಮಾರ್ಯದವನು
ಯೇಸುವು ಯೆರೂಸಲೇಮಿನಿಂದ ಸುಮಾರು ಎರಡು ಮೈಲು ದೂರದಲ್ಲಿರುವ ಬೇಥಾನ್ಯವೆಂಬ ಹಳ್ಳಿಯ ಬಳಿಯಲ್ಲಿದ್ದಿರಬಹುದು. ಮೋಶೆಯ ನಿಯಮದಲ್ಲಿ ನಿಪುಣನಾದ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಒಂದು ಪ್ರಶ್ನೆಯೊಂದಿಗೆ ಸಮೀಪಿಸಿ, ಅವನನ್ನು ಕೇಳುವದು: “ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?“
ಈ ಮನುಷ್ಯನು, ಒಬ್ಬ ವಕೀಲನೆಂದೂ, ವಿಷಯವನ್ನು ಕೇವಲ ತಿಳಿಯಲಿಕ್ಕಾಗಿ ಪ್ರಶ್ನಿಸದೇ, ಅವನನ್ನು ಪರೀಕ್ಷಿಸಲು ಅವನು ಬಯಸುತ್ತಾನೆಂದೂ ಯೇಸುವು ತಿಳಿದು ಕೊಳ್ಳುತ್ತಾನೆ. ಯೆಹೂದ್ಯರ ಮನನೋಯಿಸುವ ರೀತಿಯಲ್ಲಿ ಯೇಸುವು ಉತ್ತರಿಸಬೇಕೆಂಬದು ವಕೀಲನ ಧ್ಯೇಯವಾಗಿದ್ದಿರಬಹುದು. ಆದುದರಿಂದ, ಆ ವಕೀಲನೇ ಸ್ವತಃ ಉತ್ತರ ಕೊಡುವಂತೆ ಯೇಸುವು ಮಾಡುತ್ತಾ, ಕೇಳುವದು: “ಶಾಸ್ತ್ರದಲ್ಲಿ ಏನು ಬರೆದದೆ? ನೀನು ಹೇಗೆ ಓದಿದ್ದೀ?”
ಉತ್ತರವಾಗಿ, ವಕೀಲನು ಅಸಾಧಾರಣವಾದ ಒಳನೋಟವನ್ನು ಪ್ರಯೋಗಿಸುತ್ತಾ, ಧರ್ಮೋಪದೇಶಕಾಂಡ 6:5 ಮತ್ತು ಯಾಜಕಕಾಂಡ 19:18ರಲ್ಲಿರುವ ದೇವರ ನಿಯಮಗಳನ್ನು ಉದ್ಧರಿಸುತ್ತಾನೆ: “ನಿನ್ನ ದೇವರಾದ ಕರ್ತ [ಯೆಹೋವ, NW] ನನ್ನು ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಪ್ರಾಣ [ಆತ್ಮ, NW] ದಿಂದಲೂ, ನಿನ್ನ ಪೂರ್ಣ ಶಕ್ತಿಯಿಂದಲೂ, ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”
“ನೀನು ಸರಿಯಾಗಿ ಉತ್ತರಕೊಟ್ಟಿ,” ಯೇಸುವು ಪ್ರತಿವರ್ತಿಸಿ ಹೇಳಿದ್ದು: “ಇದರಂತೆ ಮಾಡು, ಮಾಡಿದರೆ ಜೀವಿಸುವಿ.”
ಆದಾಗ್ಯೂ, ವಕೀಲನು ಇದರಿಂದ ತೃಪ್ತನಾಗಲಿಲ್ಲ. ಅವನಿಗೆ ಯೇಸುವಿನ ಉತ್ತರವು ಬೇಕಾಗುವಷ್ಟು ನಿರ್ದಿಷ್ಟತೆಯದ್ದಾಗಿರಲಿಲ್ಲ. ಅವನ ಸ್ವಂತ ನೋಟಗಳು ಸರಿಯಾಗಿದ್ದವು ಮತ್ತು ಇತರರನ್ನು ಸತ್ಕರಿಸುವದರಲ್ಲಿ ತಾನು ನೀತಿವಂತನು ಎಂದು ಯೇಸುವಿನಿಂದ ಸ್ಥಿರೀಕರಣ ಅವನು ಬಯಸಿದನು. ಆದಕಾರಣ, ಅವನು ಕೇಳುವದು: “ನನ್ನ ನೆರೆಯವನು ನಿಜವಾಗಿ ಯಾರು?”
ಯಾಜಕಕಾಂಡ 19:18ರ ಪೂರ್ವಾಪರ ಸೂಚಿಸುತ್ತದೆ ಎಂದು ತೋರುವ “ನೆರೆಯವನು” ಎಂಬ ಪದವು, ಕೇವಲ ಜತೆ ಯೆಹೂದ್ಯರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಯೆಹೂದ್ಯರು ನಂಬುತ್ತಿದ್ದರು. ವಾಸ್ತವದಲ್ಲಿ, ಅಪೊಸ್ತಲ ಪೇತ್ರನು ನಂತರ ಒಮ್ಮೆ ಹೇಳಿದ್ದು: “ಯೆಹೂದ್ಯರು ಅನ್ಯಜನರ ಕೂಡ ಹೊಕ್ಕುಬಳಿಕೆ ಮಾಡುವದು ಯೆಹೂದ್ಯರ ಸಂಪ್ರದಾಯಕ್ಕೆ ವಿರುದ್ಧವಾಗಿದೆ.” ಆದುದರಿಂದ, ವಕೀಲನು ಮತ್ತು ಯೇಸುವಿನ ಶಿಷ್ಯರು ಕೂಡ, ಕೇವಲ ತಮ್ಮ ಜತೆ ಯೆಹೂದ್ಯರನ್ನು ಮಾತ್ರ ದಯೆಯಿಂದ ಉಪಚರಿಸಿದರೆ ತಾವು ನೀತಿವಂತರೆಂದು ಭಾವಿಸಿದ್ದರು, ಆದ್ದರಿಂದ ಅವರ ನೋಟದಲ್ಲಿ, ಯೆಹೂದ್ಯೇತರರು ಅವರ ನಿಜವಾದ ನೆರೆಯವರಲ್ಲ.
ತನ್ನನ್ನು ಆಲಿಸುವವರನ್ನು ನೋಯಿಸದೆ, ಯೇಸುವು ಅವರ ನೋಟವನ್ನು ಹೇಗೆ ಸರಿಪಡಿಸಸಾಧ್ಯವಿದೆ? ಅವನೊಂದು ಕಥೆಯನ್ನು ಹೇಳುತ್ತಾನೆ, ಪ್ರಾಯಶಃ ಇದು ವಾಸ್ತವದಲ್ಲಿ ನಡೆದಿರಬಹುದಾದ ಘಟನೆಯ ಮೇಲೆ ಆಧರಿಸಿರಬಹುದು. “ಒಬ್ಬಾನೊಬ್ಬ [ಯೆಹೂದ್ಯ] ಮನುಷ್ಯನು,” ಯೇಸುವು ವಿವರಿಸುವದು, “ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.”
“ಆಗ ಹೇಗೋ,” ಯೇಸುವು ಮುಂದುವರಿಸುವದು, “ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ಕನಿಕರಿಸಿದನು.”
ಹಲವಾರು ಮಂದಿ ಯಾಜಕರು ಮತ್ತು ದೇವಾಲಯದಲ್ಲಿ ಅವರ ಲೇವ್ಯ ಸಹಾಯಕರು ಯೆರಿಕೋವಿನಲ್ಲಿ ಜೀವಿಸುತ್ತಿದ್ದರು, ಇದು ಅವರು ಸೇವೆ ಸಲ್ಲಿಸುತ್ತಿದ್ದ ಯೆರೂಸಲೇಮಿನ ಮಂದಿರದಿಂದ 3,000 ಅಡಿ ಇಳಿಜಾರಿನಲ್ಲಿ ಸುಮಾರು 22 ಕಿಲೊಮೀಟರುಗಳು ದೂರದ ಅಪಾಯಕರ ರಸೆಯಲ್ಲಿತ್ತು. ಸಂಕಟದಲ್ಲಿರುವ ಜತೆ ಯೆಹೂದ್ಯರಿಗೆ ಸಹಾಯ ಮಾಡುವಂತೆ ಯಾಜಕನಿಂದ ಮತ್ತು ಲೇವಿಯನಿಂದ ನಿರೀಕ್ಷಿಸಲ್ಪಡುತ್ತಿತ್ತು. ಆದರೆ ಅವರು ಮಾಡುವದಿಲ್ಲ. ಅದಕ್ಕೆ ಬದಲು, ಒಬ್ಬ ಸಮಾರ್ಯದವನು ಮಾಡುತ್ತಾನೆ. ಯೆಹೂದ್ಯರು ಸಮಾರ್ಯದವರನ್ನು ದ್ವೇಷಿಸುತ್ತಿದ್ದರು, ಎಷ್ಟೆಂದರೆ ಇತ್ತೇಚೆಗೆ ಅವರು ಯೇಸುವನ್ನು “ಒಬ್ಬ ಸಮಾರ್ಯನು” ಎಂದು ಕರೆಯುವದರ ಮೂಲಕ, ಅತಿ ಕಠಿಣವಾದ ಪದದಿಂದ ಅವಮಾನಿಸಿದ್ದರು.
ಈ ಯೆಹೂದ್ಯನಿಗೆ ಸಹಾಯ ಮಾಡಲು ಸಮಾರ್ಯದವನು ಏನು ಮಾಡಿದನು? “ಅವನ ಹತ್ತಿರ ಹೋಗಿ,” ಯೇಸುವು ಹೇಳುವದು, “ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಚತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆ ಮಾಡಿದನು. ಮರುದಿನ ಅವನು ಎರಡು ಹಣ [ಎರಡು ದಿನಾರಿ—ಸುಮಾರು ಎರಡು ದಿವಸಗಳ ಸಂಬಳ] ಗಳನ್ನು ತೆಗೆದು ಚತ್ರದವನಿಗೆ ಕೊಟ್ಟು—ಇವನನ್ನು ಆರೈಕೆ ಮಾಡು; ಇದಕ್ಕಿಂತ ಹೆಚ್ಚಾದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು.”
ಈ ಕಥೆಯನ್ನು ಹೇಳಿದ ನಂತರ, ಯೇಸು ವಕೀಲನಿಗೆ ಕೇಳುವದು: “ಈ ಮೂವರಲ್ಲಿ ಯಾವನು ಕಳ್ಳನಿಗೆ ಸಿಕ್ಕಿದವನಿಗೆ ನೆರೆಯವನಾದನು ಎಂದು ನಿನಗೆ ತೋರುತ್ತದೆ, ಹೇಳು?”
ಸಮಾರ್ಯದವನಿಗೆ ಯಾವುದೇ ಗೌರವ ತೋರಿಸುವದರಲ್ಲಿ ಸ್ವಲ್ಪ ಮುಜುಗರ ಪಟ್ಟು, ವಕೀಲನು ಸರಳವಾಗಿ ಉತ್ತರಿಸುವದು: “ಅವನಿಗೆ ದಯೆತೋರಿಸಿದವನೇ.”
“ಹೋಗು, ನೀನೂ ಅದರಂತೆ ಮಾಡು,” ಯೇಸುವು ಕೊನೆಗೊಳಿಸುತ್ತಾನೆ.
ಯೆಹೂದ್ಯೇತರರು ಕೂಡ ಅವನ ನೆರೆಯವರು ಎಂದು ನೇರವಾಗಿ ವಕೀಲನಿಗೆ ಯೇಸುವು ಹೇಳಿದ್ದರೆ, ಇದನ್ನು ಆ ಮನುಷ್ಯನು ಸ್ವೀಕರಿಸುತ್ತಿರಲಿಲ್ಲ ಮಾತ್ರವಲ್ಲ, ಅವನನ್ನು ಆಲಿಸುತ್ತಿದ್ದ ಅಧಿಕಾಂಶ ಸಭಿಕರು ಯೇಸುವಿನೊಂದಿಗಿನ ಅವನ ತರ್ಕದಲ್ಲಿ ಅವನ ಪಕ್ಕವನ್ನು ಹಿಡಿಯುವ ಸಂಭಾವ್ಯತೆ ಅಲ್ಲಿತ್ತು. ಆದಾಗ್ಯೂ, ಈ ನಿಜ-ಜೀವನ-ಕಥೆಯು, ನಮ್ಮ ನೆರೆಯವರಲ್ಲಿ ನಮ್ಮ ಸ್ವಂತ ಜಾತಿ ಮತ್ತು ರಾಷ್ಟ್ರದ ಜನರ ಹೊರತಾಗಿಯೂ ಇತರರೂ ಸೇರಿರುತ್ತಾರೆ ಎಂಬುದನ್ನು ಅಬದ್ಧವೆಂದು ಸಾಧಿಸಲಾಗದ ವಿಧದಲ್ಲಿ ರುಜುಪಡಿಸಿತು. ಎಂಥಾ ಅದ್ಭುತಕರ ಬೋಧನಾ ವಿಧಾನವು ಯೇಸುವಿನಲ್ಲಿತ್ತು! ಲೂಕ 10:25-37; ಅ. ಕೃತ್ಯಗಳು 10:28; ಯೋಹಾನ 4:9; 8:48.
▪ ವಕೀಲನು ಯೇಸುವಿಗೆ ಯಾವ ಪ್ರಶ್ನೆಗಳನ್ನು ಹಾಕಿದನು, ಮತ್ತು ಇದನ್ನು ಕೇಳುವದರಲ್ಲಿ ಅವನ ಕಾರಣವೇನಾಗಿತ್ತು ಎಂದು ವ್ಯಕ್ತವಾಗುತ್ತದೆ?
▪ ಅವರ ನೆರೆಯವರು ಯಾರೆಂದು ಯೆಹೂದ್ಯರು ನಂಬುತ್ತಿದ್ದರು, ಮತ್ತು ಅವನ ಶಿಷ್ಯರೂ ಕೂಡ ಆ ನೋಟವುಳ್ಳವರಾಗಿದ್ದರೆಂದು ನಂಬಲು ಯಾವ ಕಾರಣ ಅಲ್ಲಿದೆ?
▪ ವಕೀಲನು ನಿರಾಕರಿಸಲಾಗದ ರೀತಿಯಲ್ಲಿ ಯೇಸು ಯೋಗ್ಯ ನೋಟವನ್ನು ಹೇಗೆ ದಾಟಿಸಶಕ್ತನಾದನು?