ಅಧ್ಯಾಯ ಹದಿಮೂರು
ಇಬ್ಬರು ರಾಜರ ಮಧ್ಯೆ ಹೋರಾಟ
1, 2. ದಾನಿಯೇಲ 11ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯಲ್ಲಿ ನಾವೇಕೆ ಆಸಕ್ತಿಯನ್ನು ತೋರಿಸಬೇಕು?
ಇಬ್ಬರು ಪ್ರತಿಸ್ಪರ್ಧಿ ರಾಜರು ಪರಮಾಧಿಕಾರವನ್ನು ಪಡೆದುಕೊಳ್ಳಲಿಕ್ಕಾಗಿ ಸರ್ವಶಕ್ತಿಯನ್ನೂ ಬಳಸಿ ಹೋರಾಡುತ್ತಿದ್ದಾರೆ. ವರ್ಷಗಳು ಗತಿಸಿದಂತೆ, ಮೊದಲನೆಯವನು, ತದನಂತರ ಎರಡನೆಯವನು ಅಧಿಕಾರಕ್ಕೆ ಬರುತ್ತಾರೆ. ಕೆಲವೊಮ್ಮೆ, ಒಬ್ಬ ರಾಜನು ಬಹಳಷ್ಟು ಅಧಿಕಾರದಿಂದ ಆಳುತ್ತಿರುವಾಗ, ಇನ್ನೊಬ್ಬನು ನಿಷ್ಕ್ರಿಯನಾಗುತ್ತಾನೆ, ಮತ್ತು ಹೋರಾಟವೇ ನಡೆಯದ ಸಮಯಾವಧಿಗಳೂ ಇವೆ. ಅಷ್ಟರಲ್ಲೇ ಇದ್ದಕ್ಕಿದ್ದಂತೆ ಇನ್ನೊಂದು ಕದನವು ತಲೆದೋರುತ್ತದೆ, ಹಾಗೂ ಹೋರಾಟವು ಮುಂದುವರಿಯುತ್ತದೆ. ಈ ನಾಟಕದಲ್ಲಿ ಭಾಗವಹಿಸುವ ಪಾತ್ರಧಾರಿಗಳಲ್ಲಿ, ಸಿರಿಯದ ರಾಜನಾದ Iನೆಯ ಸೆಲ್ಯೂಕಸ್ ನೈಕೇಟರ್, ಐಗುಪ್ತದ ರಾಜನಾದ ಟಾಲೆಮಿ ಲಾಗಸ್, ಸಿರಿಯದ ರಾಜಕುಮಾರಿಯಾಗಿದ್ದು, ಐಗುಪ್ತದ ರಾಣಿಯಾಗಿ ಪರಿಣಮಿಸಿದ Iನೆಯ ಕ್ಲಿಯೋಪಾತ್ರ, ಅಗಸ್ಟಸ್ ಹಾಗೂ ತಿಬೇರಿಯ ಎಂಬ ರೋಮನ್ ಸಾಮ್ರಾಟರು, ಮತ್ತು ಪಾಲ್ಮೈರದ ರಾಣಿ ಸೆನೋಬಿಯರು ಸೇರಿದ್ದಾರೆ. ಈ ಹೋರಾಟವು ಕೊನೆಗೊಳ್ಳುತ್ತಾ ಬಂದಂತೆ, ನಾಸಿ ಜರ್ಮನಿ, ಕಮ್ಯೂನಿಸ್ಟ್ ಒಕ್ಕೂಟದ ರಾಷ್ಟ್ರಗಳು, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿ, ಜನಾಂಗ ಸಂಘ, ಹಾಗೂ ವಿಶ್ವಸಂಸ್ಥೆಗಳು ಸಹ ಇದರಲ್ಲಿ ಒಳಗೂಡಿರುವವು. ಇದರ ಅಂತ್ಯಗತಿಯು, ಹೋರಾಟದಲ್ಲಿ ಒಳಗೂಡಿರುವ ಯಾವ ರಾಜಕೀಯ ಗುಂಪೂ ಮುನ್ನೋಡಿರದಂತಹ ಒಂದು ಘಟನಾವಳಿಯಾಗಿದೆ. ಸುಮಾರು 2,500 ವರ್ಷಗಳ ಹಿಂದೆ, ಯೆಹೋವನ ದೂತನು ದಾನಿಯೇಲನಿಗೆ ಈ ರೋಮಾಂಚಕ ಪ್ರವಾದನೆಯನ್ನು ಸ್ಪಷ್ಟವಾಗಿ ತಿಳಿಯಪಡಿಸಿದನು.—ದಾನಿಯೇಲ, 11ನೆಯ ಅಧ್ಯಾಯ.
2 ಮುಂದೆ ಬರಲಿಕ್ಕಿದ್ದ ಇಬ್ಬರು ರಾಜರ ನಡುವಿನ ಪ್ರತಿಸ್ಪರ್ಧೆಯನ್ನು ದೇವದೂತನು ತನಗೆ ಸವಿವರವಾಗಿ ಪ್ರಕಟಿಸುವುದನ್ನು ಕೇಳಿ ದಾನಿಯೇಲನು ಎಷ್ಟೊಂದು ರೋಮಾಂಚನಗೊಂಡಿದ್ದಿರಬೇಕು! ಆ ನಾಟಕವು ನಮಗೂ ಆಸಕ್ತಿಯ ವಿಚಾರವಾಗಿದೆ. ಏಕೆಂದರೆ ಇಬ್ಬರು ರಾಜರ ನಡುವಿನ ಅಧಿಕಾರದ ಹೋರಾಟವು ನಮ್ಮ ದಿನಗಳ ವರೆಗೂ ವ್ಯಾಪಿಸಿದೆ. ಈ ಪ್ರವಾದನೆಯ ಮೊದಲ ಭಾಗವು ಸತ್ಯವಾಗಿತ್ತು ಎಂಬುದನ್ನು ಇತಿಹಾಸವು ಹೇಗೆ ತೋರಿಸಿಕೊಟ್ಟಿದೆ ಎಂದು ಗಮನಿಸುವ ಮೂಲಕ, ಪ್ರವಾದನಾ ವೃತ್ತಾಂತದ ಕೊನೆಯ ಭಾಗದ ನಿಶ್ಚಿತ ನೆರವೇರಿಕೆಯಲ್ಲಿನ ನಮ್ಮ ನಂಬಿಕೆಯನ್ನು ಹಾಗೂ ದೃಢವಿಶ್ವಾಸವನ್ನು ನಾವು ಇನ್ನೂ ಬಲಗೊಳಿಸಿಕೊಳ್ಳುವೆವು. ನಾವು ಈ ಪ್ರವಾದನೆಗೆ ಗಮನ ಕೊಡುವುದರಿಂದ, ಕಾಲ ಪ್ರವಾಹದಲ್ಲಿ ನಾವು ಎಲ್ಲಿದ್ದೇವೆ ಎಂಬುದರ ಕುರಿತು ಸ್ಪಷ್ಟವಾದ ನೋಟವು ನಮಗೆ ದೊರಕುವುದು. ನಮ್ಮ ಪರವಾಗಿ ದೇವರು ಕಾರ್ಯನಡಿಸುವಂತೆ ನಾವು ತಾಳ್ಮೆಯಿಂದ ಆತನಿಗೋಸ್ಕರ ಕಾಯುತ್ತಿರುವಾಗ, ಆ ಹೋರಾಟದಲ್ಲಿ ತಟಸ್ಥರಾಗಿ ನಿಲ್ಲುವ ನಮ್ಮ ದೃಢನಿರ್ಧಾರವನ್ನು ಸಹ ಇದು ಬಲಗೊಳಿಸುವುದು. (ಕೀರ್ತನೆ 146:3, 5) ಆದುದರಿಂದ, ಯೆಹೋವನ ದೂತನು ದಾನಿಯೇಲನೊಂದಿಗೆ ಮಾತಾಡುವಾಗ, ನಾವು ತೀವ್ರಾಸಕ್ತಿಯಿಂದ ಕಿವಿಗೊಡೋಣ.
ಗ್ರೀಕ್ ರಾಜ್ಯದ ವಿರುದ್ಧ
3. “ಮೇದ್ಯಯನಾದ ದಾರ್ಯಾವೆಷನ ಆಳಿಕೆಯ ಮೊದಲನೆಯ ವರುಷದಲ್ಲಿ” ದೇವದೂತನು ಯಾರಿಗೆ ಬೆಂಬಲ ನೀಡಿದನು?
3 “ಮೇದ್ಯಯನಾದ ದಾರ್ಯಾವೆಷನ ಆಳಿಕೆಯ ಮೊದಲನೆಯ ವರುಷದಲ್ಲಿ [ಸಾ.ಶ.ಪೂ. 539/538] ನಾನೇ ಮೀಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆನು” ಎಂದು ದೇವದೂತನು ಹೇಳಿದನು. (ದಾನಿಯೇಲ 11:1) ಈ ಸಮಯದಲ್ಲಿ ದಾರ್ಯವೆಷನು ಬದುಕಿರಲಿಲ್ಲವಾದರೂ, ಅವನ ಆಳ್ವಿಕೆಯು ಪ್ರವಾದನಾ ಸಂದೇಶದ ಆರಂಭದ ಹಂತವಾಗಿತ್ತು ಎಂದು ದೇವದೂತನು ಸೂಚಿಸಿದನು. ದಾನಿಯೇಲನನ್ನು ಸಿಂಹಗಳ ಗವಿಯಿಂದ ಮೇಲೆತ್ತುವಂತೆ ಅಪ್ಪಣೆ ನೀಡಿದ್ದಂತಹ ರಾಜನು ಇವನೇ ಆಗಿದ್ದನು. ತನ್ನ ಪ್ರಜೆಗಳೆಲ್ಲರೂ ದಾನಿಯೇಲನ ದೇವರಿಗೆ ಭಯಪಡಬೇಕು ಎಂಬ ಆಜ್ಞೆಯನ್ನು ಸಹ ದಾರ್ಯಾವೆಷನೇ ಜಾರಿಗೆ ತಂದಿದ್ದನು. (ದಾನಿಯೇಲ 6:21-27) ಆದರೂ, ಯಾರಿಗೆ ದೇವದೂತನು ಬೆಂಬಲಿಗನಾಗಿ ನಿಂತನೋ ಅವನು ಮೇದ್ಯಯನಾದ ದಾರ್ಯಾವೆಷನಾಗಿರಲಿಲ್ಲ, ಬದಲಾಗಿ ದೇವದೂತನ ಸಂಗಾತಿಯಾಗಿದ್ದು, ದಾನಿಯೇಲನ ಜನರ ಪ್ರಭುವಾಗಿದ್ದ ಮೀಕಾಯೇಲನೇ ಆಗಿದ್ದನು. (ದಾನಿಯೇಲ 10:12-14ನ್ನು ಹೋಲಿಸಿರಿ.) ಮೀಕಾಯೇಲನು ಮೇದ್ಯಯ-ಪಾರಸಿಯದ ದೆವ್ವಾಧಿಪತಿಗಳೊಂದಿಗೆ ಹೋರಾಡುತ್ತಿರುವಾಗ, ದೇವದೂತನು ಅವನಿಗೆ ಬೆಂಬಲವನ್ನು ನೀಡಿದನು.
4, 5. ಮುಂತಿಳಿಸಲ್ಪಟ್ಟ ನಾಲ್ಕು ಮಂದಿ ಪಾರಸಿಯ ರಾಜರು ಯಾರಾಗಿದ್ದರು?
4 ದೇವದೂತನು ಮುಂದುವರಿಸಿದ್ದು: “ಇಗೋ, ಪಾರಸಿಯ ದೇಶದಲ್ಲಿ ಇನ್ನು ಮೂವರು ರಾಜರು ಏಳುವರು; ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕಧನವಂತನಾಗಿರುವನು; ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸುವನು.” (ದಾನಿಯೇಲ 11:2) ಈ ಪಾರಸಿಯ ರಾಜರು ಯಾರಾಗಿದ್ದರು?
5 ಮೊದಲ ಮೂವರು ರಾಜರು, ಮಹಾ ಕೋರೆಷ, IIನೆಯ ಕ್ಯಾಂಬೈಸೀಸ್, ಮತ್ತು Iನೆಯ ದಾರ್ಯಾವೆಷರೇ ಆಗಿದ್ದರು. ಬಾರ್ಡಿಯನು (ಅಥವಾ ಬಹುಶಃ ಗೌಮಾಟ ಎಂಬ ಹೆಸರಿನ ಒಬ್ಬ ಸುಳ್ಳು ಹಕ್ಕುದಾರನು) ಕೇವಲ ಏಳು ತಿಂಗಳುಗಳ ವರೆಗೆ ಆಳ್ವಿಕೆ ನಡೆಸಿದ್ದರಿಂದ, ಪ್ರವಾದನೆಯು ಅವನ ಅಲ್ಪಾವಧಿಯ ಆಳ್ವಿಕೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಾ.ಶ.ಪೂ. 490ರಲ್ಲಿ, ಮೂರನೆಯ ರಾಜನಾದ Iನೆಯ ದಾರ್ಯಾವೆಷನು, ಎರಡನೆಯ ಬಾರಿ ಗ್ರೀಸ್ ದೇಶಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು. ಆದರೂ, ಮ್ಯಾರಥಾನ್ನ ಬಳಿ ಪಾರಸಿಯರು ಸೋಲಿಸಲ್ಪಟ್ಟರು ಹಾಗೂ ಏಷ್ಯಾ ಮೈನರ್ಗೆ ಓಡಿಸಲ್ಪಟ್ಟರು. ಗ್ರೀಸ್ನ ವಿರುದ್ಧ ಇನ್ನೂ ಹೆಚ್ಚಿನ ದಂಡಯಾತ್ರೆಗಾಗಿ ದಾರ್ಯಾವೆಷನು ಜಾಗರೂಕವಾಗಿ ಸಿದ್ಧತೆಗಳನ್ನು ಮಾಡಿದನಾದರೂ, ನಾಲ್ಕು ವರ್ಷಗಳ ಬಳಿಕ ಅವನು ಸಾಯುವ ಮುಂಚೆ ಆ ಯೋಜನೆಯನ್ನು ಪೂರೈಸಲು ಅವನಿಂದ ಸಾಧ್ಯವಾಗಲಿಲ್ಲ. ಅವನ ಮಗನೂ ಅವನ ತರುವಾಯ ಪಟ್ಟಕ್ಕೆ ಬಂದ ರಾಜನೂ ಆಗಿದ್ದ “ನಾಲ್ಕನೆಯ ರಾಜ,” ಅಂದರೆ Iನೆಯ ಸರ್ಕ್ಸೀಸನು ಆ ಕೆಲಸವನ್ನು ಪೂರೈಸುವಂತೆ ಬಿಡಲಾಗಿತ್ತು. ಎಸ್ತೇರಳನ್ನು ಮದುವೆಯಾದ ರಾಜನಾದ ಅಹಷ್ವೇರೋಷನೇ ಅವನಾಗಿದ್ದನು.—ಎಸ್ತೇರಳು 1:1; 2:15-17.
6, 7. (ಎ) ನಾಲ್ಕನೆಯ ರಾಜನು “ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸಿ”ದ್ದು ಹೇಗೆ? (ಬಿ) ಗ್ರೀಸ್ನ ವಿರುದ್ಧ ನಡೆಸಿದ ಸರ್ಕ್ಸೀಸ್ನ ದಂಡಯಾತ್ರೆಯ ಫಲಿತಾಂಶವೇನಾಗಿತ್ತು?
6 ನಿಜವಾಗಿಯೂ Iನೆಯ ಸರ್ಕ್ಸೀಸನು “ಗ್ರೀಕ್ ರಾಜ್ಯಕ್ಕೆ ವಿರುದ್ಧ,” ಅಂದರೆ ಒಂದು ಗುಂಪಿನೋಪಾದಿ ಇದ್ದ ಗ್ರೀಸಿನ ಸ್ವತಂತ್ರ ರಾಜ್ಯಗಳ ವಿರುದ್ಧ “ತನ್ನ ಬಲವನ್ನೆಲ್ಲಾ ಎಬ್ಬಿಸಿ”ದನು. “ಮಹತ್ವಾಕಾಂಕ್ಷೆಯುಳ್ಳ ಆಸ್ಥಾನಿಕರಿಂದ ಪ್ರಚೋದಿತನಾದ ಸರ್ಕ್ಸೀಸನು, ಭೂಭಾಗದಲ್ಲಿಯೂ ಸಮುದ್ರ ಭಾಗದಲ್ಲಿಯೂ ಆಕ್ರಮಣವನ್ನು ಆರಂಭಿಸಿದನು” ಎಂದು ಮೇದ್ಯರು ಮತ್ತು ಪಾರಸಿಯರು—ವಿಜೇತರು ಹಾಗೂ ರಾಜತಂತ್ರಜ್ಞರು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್ ಇತಿಹಾಸಕಾರನಾದ ಹಿರಾಡಟಸನು ಬರೆಯುವುದೇನಂದರೆ, “ಇನ್ನಾವುದೇ ದಂಡಯಾತ್ರೆಯು ಸರ್ಕ್ಸೀಸ್ನ ಈ ಆಕ್ರಮಣಕ್ಕೆ ಸರಿಸಾಟಿಯಾಗಿರಲಿಲ್ಲ.” ಹಿರಾಡಟಸನ ದಾಖಲೆಯು ಹೇಳುವುದೇನೆಂದರೆ, ಸರ್ಕ್ಸೀಸ್ನ ನೌಕಾಪಡೆಯು “ಒಟ್ಟು 5,17,610 ಸೈನಿಕರಿಂದ ಕೂಡಿತ್ತು. 17,00,000 ಮಂದಿ ಕಾಲಾಳುಗಳು; 80,000 ಅಶ್ವಬಲ; ಇದರ ಜೊತೆಗೆ ಒಂಟೆಗಳ ಮೇಲೆ ಪ್ರಯಾಣಿಸಿದ ಅರಬ್ಬಿಗಳು, ಹಾಗೂ ರಥಗಳಲ್ಲಿ ಕಾದಾಡಿದ ಲಿಬ್ಯದವರನ್ನು ಸಹ ಕೂಡಿಸಬೇಕಾಗಿದ್ದು, ಅವರು ಸುಮಾರು 20,000ದಷ್ಟಿದ್ದರು ಎಂಬುದು ನನ್ನ ಅಂದಾಜು. ಆದುದರಿಂದ, ಭೂಸೈನ್ಯ ಹಾಗೂ ನೌಕಾ ಸೈನ್ಯದ ಸಂಖ್ಯೆಯನ್ನು ಒಟ್ಟುಗೂಡಿಸಿದಾಗ ಅದರ ಮೊತ್ತವು 23,17,610ರಷ್ಟಾಗಿತ್ತು.”
7 ಸಂಪೂರ್ಣ ವಿಜಯವನ್ನು ಸಾಧಿಸುವುದು ಅವನ ಉದ್ದೇಶವಾಗಿದ್ದುದರಿಂದ, ಸಾ.ಶ.ಪೂ. 480ರಲ್ಲಿ Iನೆಯ ಸರ್ಕ್ಸೀಸನು ತನ್ನ ದೊಡ್ಡ ಸೈನ್ಯವನ್ನು ಗ್ರೀಸ್ನ ವಿರುದ್ಧ ಮುನ್ನಡೆಸಿದನು. ಥರ್ಮಾಪಲೀ ಎಂಬ ಸ್ಥಳದಲ್ಲಿ ಗ್ರೀಕ್ ಸೈನಿಕರು, ಯುದ್ಧವನ್ನು ನಿಧಾನಿಸುವ ತಂತ್ರವನ್ನು ಹೂಡಿದರೂ, ಪಾರಸಿಯರು ಅಥೇನೆ ಪಟ್ಟಣವನ್ನು ಧ್ವಂಸಮಾಡಿಬಿಟ್ಟರು. ಆದರೂ, ಸ್ಯಾಲಮೀಸ್ನಲ್ಲಿ ಅವರು ಭೀಕರ ಸೋಲನ್ನು ಅನುಭವಿಸಿದರು. ಸಾ.ಶ.ಪೂ. 479ರಲ್ಲಿ, ಪ್ಲಟೀಯ ಎಂಬ ಸ್ಥಳದಲ್ಲಿ ಗ್ರೀಕ್ ಸೇನೆಗಳು ಇನ್ನೊಮ್ಮೆ ಪಾರಸಿಯ ಸೈನ್ಯವನ್ನು ಸೋಲಿಸಿಬಿಟ್ಟವು. ಮುಂದಿನ 143 ವರ್ಷಗಳಲ್ಲಿ, ಪಾರಸಿಯ ಸಾಮ್ರಾಜ್ಯದಲ್ಲಿ ಸರ್ಕ್ಸೀಸ್ನ ಬಳಿಕ ಪಟ್ಟಕ್ಕೆ ಬಂದ ಏಳು ರಾಜರಲ್ಲಿ ಯಾರೊಬ್ಬರೂ ಗ್ರೀಸ್ಗೆ ಮುತ್ತಿಗೆ ಹಾಕಲಿಲ್ಲ. ಆದರೆ ತದನಂತರ ಒಬ್ಬ ಬಲಿಷ್ಠ ರಾಜನು ಗ್ರೀಸ್ ದೇಶದಲ್ಲಿ ಅಧಿಕಾರಕ್ಕೆ ಬಂದನು.
ಒಂದು ದೊಡ್ಡ ರಾಜ್ಯವು ನಾಲ್ಕು ಭಾಗಗಳಾಗಿ ವಿಭಾಗಗೊಳ್ಳುತ್ತದೆ
8. ಯಾವ ‘ಪರಾಕ್ರಮಶಾಲಿಯಾದ ರಾಜನು’ ಅಧಿಕಾರಕ್ಕೆ ಬಂದನು, ಮತ್ತು ಅವನು ಹೇಗೆ “ಮಹಾ ಪ್ರಭುತ್ವದಿಂದ ಆಳ”ತೊಡಗಿದನು?
8 “ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾ ಪ್ರಭುತ್ವದಿಂದ ಆಳುತ್ತಾ ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು” ಎಂದು ದೇವದೂತನು ಹೇಳಿದನು. (ದಾನಿಯೇಲ 11:3) ಸಾ.ಶ.ಪೂ. 336ರಲ್ಲಿ, 20 ವರ್ಷ ಪ್ರಾಯದ ಅಲೆಕ್ಸಾಂಡರನು ರಾಜನೋಪಾದಿ ‘ಎದ್ದನು.’ ಅವನು “ಪರಾಕ್ರಮಶಾಲಿಯಾದ ಒಬ್ಬ ರಾಜ”—ಮಹಾ ಅಲೆಕ್ಸಾಂಡರ್—ನಾದನು. ತನ್ನ ತಂದೆಯಾದ IIನೆಯ ಫಿಲಿಪ್ಪನ ಯೋಜನೆಯಿಂದ ಪ್ರಭಾವಿತನಾದ ಅಲೆಕ್ಸಾಂಡರನು, ಮಧ್ಯಪೂರ್ವದಲ್ಲಿದ್ದ ಪಾರಸಿಯ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡನು. ಯೂಫ್ರೇಟೀಸ್ ಹಾಗೂ ಟೈಗ್ರಿಸ್ ನದಿಗಳನ್ನು ದಾಟಿಹೋದ ಅವನ 47,000 ಸೈನಿಕರು, ಗಾಗಮೇಲದಲ್ಲಿ IIIನೆಯ ದಾರ್ಯಾವೆಷನ 2,50,000 ಸೈನಿಕರನ್ನು ಚದುರಿಸಿಬಿಟ್ಟರು. ಇದರ ಪರಿಣಾಮವಾಗಿ, ದಾರ್ಯಾವೆಷನು ಪಲಾಯನಗೈದನು ಮತ್ತು ಕೊಲ್ಲಲ್ಪಟ್ಟನು. ಇದರಿಂದಾಗಿ ಪಾರಸಿಯ ರಾಜವಂಶವು ಕೊನೆಗೊಂಡಿತು. ಈಗ ಗ್ರೀಸ್ ಒಂದು ಲೋಕ ಶಕ್ತಿಯಾಗಿ ಪರಿಣಮಿಸಿತು, ಮತ್ತು ಅಲೆಕ್ಸಾಂಡರನು ‘ಮಹಾ ಪ್ರಭುತ್ವದಿಂದ ಹಾಗೂ ತನ್ನ ಇಷ್ಟಾರ್ಥಗಳಿಗನುಸಾರ’ ಆಳ್ವಿಕೆ ನಡಿಸಿದನು.
9, 10. ಅಲೆಕ್ಸಾಂಡರನ ರಾಜ್ಯವು ಅವನ ಸಂತತಿಯ ಭಾಗವಾಗುವುದಿಲ್ಲ ಎಂಬ ಪ್ರವಾದನೆಯು ಹೇಗೆ ಸತ್ಯವಾಗಿ ರುಜುವಾಯಿತು?
9 ಲೋಕದ ಮೇಲೆ ಅಲೆಕ್ಸಾಂಡರನ ಆಳ್ವಿಕೆಯು ತುಂಬ ಅಲ್ಪಾವಧಿಯದ್ದಾಗಿತ್ತು. ಏಕೆಂದರೆ ದೇವದೂತನು ಕೂಡಿಸಿದ್ದು: “ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ [ನಾಲ್ಕು] ಪಾಲಾಗುವದು; ಅದು ಅವನ ಸಂತತಿಗೆ ಭಾಗವಾಗದು, ಅವನ ಆಳಿಕೆಯಲ್ಲಿ ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು; ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವದು.” (ದಾನಿಯೇಲ 11:4) ಅಲೆಕ್ಸಾಂಡರನು ಇನ್ನೂ 33 ವರ್ಷ ಪ್ರಾಯದವನಾಗಿರುವಾಗಲೇ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿ, ಸಾ.ಶ.ಪೂ. 323ರಲ್ಲಿ ಬಾಬೆಲಿನಲ್ಲಿ ಮರಣಹೊಂದಿದನು.
10 ಅಲೆಕ್ಸಾಂಡರನ ದೊಡ್ಡ ಸಾಮ್ರಾಜ್ಯವು ‘ಅವನ ಸಂತತಿಯ ಭಾಗ’ವಾಗಲಿಲ್ಲ. ಅವನ ತಮ್ಮನಾದ IIIನೆಯ ಫಿಲಿಪ್ ಆ್ಯರಡೀಯಸನು ಏಳು ವರ್ಷಗಳಿಗಿಂತಲೂ ಕಡಿಮೆ ಕಾಲಾವಧಿಯ ವರೆಗೆ ಆಳ್ವಿಕೆ ನಡಿಸಿದನು. ಮತ್ತು ಸಾ.ಶ.ಪೂ. 317ರಲ್ಲಿ, ಅಲೆಕ್ಸಾಂಡರನ ತಾಯಿಯಾದ ಒಲಿಂಪಿಯಸಳ ಕೋರಿಕೆಯ ಮೇರೆಗೆ ಅವನು ಕೊಲ್ಲಲ್ಪಟ್ಟನು. ತದನಂತರ ಅಲೆಕ್ಸಾಂಡರನ ಮಗನಾದ IVನೆಯ ಅಲೆಕ್ಸಾಂಡರನು, ಸಾ.ಶ.ಪೂ. 311ರ ತನಕ ರಾಜ್ಯವಾಳಿದನು. ಆದರೆ ಅವನು ತನ್ನ ತಂದೆಯ ಸೇನಾಧಿಪತಿಗಳಲ್ಲಿ ಒಬ್ಬನಾಗಿದ್ದ ಕಸಾಂಡರನಿಂದ ಕೊಲ್ಲಲ್ಪಟ್ಟನು. ಅಲೆಕ್ಸಾಂಡರನ ಜಾರಜ ಪುತ್ರನಾಗಿದ್ದ ಹಿರಾಕ್ಲೀಸನು ತನ್ನ ತಂದೆಯ ಹೆಸರಿನಲ್ಲಿ ರಾಜ್ಯವನ್ನು ಆಳಲು ಪ್ರಯತ್ನಿಸಿದನಾದರೂ, ಸಾ.ಶ.ಪೂ. 309ರಲ್ಲಿ ಕೊಲ್ಲಲ್ಪಟ್ಟನು. ಹೀಗೆ ಅಲೆಕ್ಸಾಂಡರನ ರಾಜವಂಶವು, ಅಂದರೆ ಅವನ “ರಾಜ್ಯವು” ಅವನ ಕುಟುಂಬದ ಕೈತಪ್ಪಿಹೋಯಿತು.
11. ಅಲೆಕ್ಸಾಂಡರನ ರಾಜ್ಯವು ಹೇಗೆ “ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಯಿತು?”
11 ಅಲೆಕ್ಸಾಂಡರನ ಮರಣದ ಬಳಿಕ ಅವನ ರಾಜ್ಯವು “ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಯಿತು.” ಅವನ ಅನೇಕ ಸೇನಾಧಿಪತಿಗಳು ತಮ್ಮ ನಡುವೆಯೇ ಕಾದಾಟ ನಡೆಸಿ, ಬೇರೆ ಬೇರೆ ಕ್ಷೇತ್ರಗಳನ್ನು ಸ್ವಾಧೀನಪಡಿಸಿಕೊಂಡರು. ಒಕ್ಕಣ್ಣನಾದ Iನೆಯ ಆ್ಯಂಟೈಗೊನಸನು, ಅಲೆಕ್ಸಾಂಡರನ ಸಂಪೂರ್ಣ ಸಾಮ್ರಾಜ್ಯವನ್ನು ತನ್ನ ನಿಯಂತ್ರಣದ ಕೆಳಗೆ ತರಲು ಪ್ರಯತ್ನಿಸಿದನು. ಆದರೆ ಫ್ರಿಜ್ಯದಲ್ಲಿರುವ ಇಪ್ಸಸ್ನಲ್ಲಿ ನಡೆದ ಕದನದಲ್ಲಿ ಅವನು ಕೊಲ್ಲಲ್ಪಟ್ಟನು. ಸಾ.ಶ.ಪೂ. 301ನೆಯ ವರ್ಷದಷ್ಟಕ್ಕೆ, ಅಲೆಕ್ಸಾಂಡರನು ವಶಪಡಿಸಿಕೊಂಡಿದ್ದ ದೊಡ್ಡ ಸಾಮ್ರಾಜ್ಯವನ್ನು, ಅವನ ಸೇನಾಧಿಪತಿಗಳಲ್ಲಿ ನಾಲ್ಕು ಮಂದಿ ಆಳತೊಡಗಿದರು. ಕಸಾಂಡರನು ಮ್ಯಾಸಿಡೋನಿಯ ಹಾಗೂ ಗ್ರೀಸನ್ನು ನೋಡಿಕೊಳ್ಳತೊಡಗಿದನು. ಲೈಸಿಮೆಕಸನಿಗೆ ಏಷ್ಯಾ ಮೈನರ್ ಹಾಗೂ ಥ್ರೇಸ್ಗಳು ಸಿಕ್ಕಿದವು. Iನೆಯ ಸೆಲ್ಯೂಕಸ್ ನೈಕೇಟರನು ಮೆಸಪೊಟೇಮಿಯ ಹಾಗೂ ಸಿರಿಯವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡನು. ಮತ್ತು ಟಾಲೆಮಿ ಲಾಗಸ್ನು ಐಗುಪ್ತ ಹಾಗೂ ಪ್ಯಾಲೆಸ್ಟೈನನ್ನು ಆಳುತ್ತಿದ್ದನು. ಪ್ರವಾದನಾ ಮಾತುಗಳಿಗೆ ಅನುಸಾರವಾಗಿ, ಅಲೆಕ್ಸಾಂಡರನ ದೊಡ್ಡ ಸಾಮ್ರಾಜ್ಯವು ನಾಲ್ಕು ಗ್ರೀಕ್ ರಾಜ್ಯಗಳಾಗಿ ವಿಭಾಗಗೊಂಡಿತು.
ಇಬ್ಬರು ಪ್ರತಿಸ್ಪರ್ಧಿ ಅರಸರು ಉದಯಿಸುತ್ತಾರೆ
12, 13. (ಎ) ನಾಲ್ಕು ಗ್ರೀಕ್ ರಾಜ್ಯಗಳಲ್ಲಿ ಕೇವಲ ಎರಡೇ ಹೇಗೆ ಉಳಿದವು? (ಬಿ) ಸೆಲ್ಯೂಕಸನು ಸಿರಿಯದಲ್ಲಿ ಯಾವ ರಾಜವಂಶವನ್ನು ಸ್ಥಾಪಿಸಿದನು?
12 ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕಸಾಂಡರನು ಮೃತಪಟ್ಟನು. ಮತ್ತು ಸಾ.ಶ.ಪೂ. 285ರಲ್ಲಿ, ಗ್ರೀಕ್ ಸಾಮ್ರಾಜ್ಯದ ಐರೋಪ್ಯ ಭಾಗವನ್ನು ಲೈಸಿಮೆಕಸನು ಸ್ವಾಧೀನಪಡಿಸಿಕೊಂಡನು. ಸಾ.ಶ.ಪೂ. 281ರಲ್ಲಿ, Iನೆಯ ಸೆಲ್ಯೂಕಸ್ ನೈಕೇಟರನು ಲೈಸಿಮೆಕಸನನ್ನು ಕೊಂದುಹಾಕಿದನು. ಇದರಿಂದಾಗಿ ಏಷ್ಯಾದ ಬಹುತೇಕ ಭಾಗಗಳು ಸೆಲ್ಯೂಕಸನ ನಿಯಂತ್ರಣದ ಕೆಳಗೆ ಬಂದವು. ಸಾ.ಶ.ಪೂ. 276ರಲ್ಲಿ, ಅಲೆಕ್ಸಾಂಡರನ ಸೇನಾಧಿಪತಿಗಳಲ್ಲಿ ಒಬ್ಬನ ಮೊಮ್ಮಗನಾದ IIನೆಯ ಆ್ಯಂಟೈಗೊನಸ್ ಗಾನಟಸ್ನು, ಮ್ಯಾಸಿಡೋನಿಯದ ಸಿಂಹಾಸನವನ್ನು ಏರಿದನು. ಸಕಾಲದಲ್ಲಿ, ಮ್ಯಾಸಿಡೋನಿಯವು ರೋಮ್ನ ಮೇಲೆ ಅವಲಂಬಿಸಿತು, ಮತ್ತು ಸಾ.ಶ.ಪೂ. 146ರಲ್ಲಿ ರೋಮ್ನ ಒಂದು ಪ್ರಾಂತವಾಗಿ ಪರಿಣಮಿಸಿತು.
13 ನಾಲ್ಕು ಗ್ರೀಕ್ ರಾಜ್ಯಗಳಲ್ಲಿ ಕೇವಲ ಎರಡು ರಾಜ್ಯಗಳು ಈಗ ಅಗ್ರಗಣ್ಯವಾಗಿದ್ದವು—ಒಂದು ರಾಜ್ಯವು Iನೆಯ ಸೆಲ್ಯೂಕಸ್ ನೈಕೇಟರನ ನಿಯಂತ್ರಣದ ಕೆಳಗೆ ಹಾಗೂ ಇನ್ನೊಂದು ರಾಜ್ಯವು ಟಾಲೆಮಿ ಲಾಗಸ್ನ ಕೈಕೆಳಗೆ. ಸೆಲ್ಯೂಕಸನು ಸಿರಿಯದಲ್ಲಿ ಸೆಲ್ಯೂಕಸ್ ರಾಜವಂಶವನ್ನು ಸ್ಥಾಪಿಸಿದನು. ಅವನು ಸ್ಥಾಪಿಸಿದ ಪಟ್ಟಣಗಳಲ್ಲಿ ಕೆಲವು, ಸಿರಿಯದ ಹೊಸ ರಾಜಧಾನಿಯಾದ ಅಂತಿಯೋಕ್ಯ, ಹಾಗೂ ಸೆಲ್ಯೂಸಿಯದ ರೇವುಪಟ್ಟಣಗಳೇ ಆಗಿದ್ದವು. ಕಾಲಾನಂತರ ಅಪೊಸ್ತಲ ಪೌಲನು ಅಂತಿಯೋಕ್ಯದಲ್ಲಿ ಜನರಿಗೆ ಬೋಧಿಸಿದನು, ಮತ್ತು ಅಲ್ಲಿಯೇ ಯೇಸುವಿನ ಹಿಂಬಾಲಕರಿಗೆ ಮೊದಲಾಗಿ ಕ್ರೈಸ್ತರು ಎಂಬ ಹೆಸರು ಬಂತು. (ಅ. ಕೃತ್ಯಗಳು 11:25, 26; 13:1-4) ಸಾ.ಶ.ಪೂ. 281ರಲ್ಲಿ ಸೆಲ್ಯೂಕಸನು ಕೊಲ್ಲಲ್ಪಟ್ಟನು, ಆದರೆ ಸಾ.ಶ.ಪೂ. 64ರಲ್ಲಿ ರೋಮನ್ ಜನರಲ್ ನೈಯುಸ್ ಪಾಂಪೀಯು ಸಿರಿಯವನ್ನು ಒಂದು ರೋಮನ್ ಪ್ರಾಂತವನ್ನಾಗಿ ಮಾಡಿಕೊಳ್ಳುವ ವರೆಗೆ, ಸೆಲ್ಯೂಕಸನ ರಾಜವಂಶವು ಆಳ್ವಿಕೆ ನಡಿಸಿತು.
14. ಟಾಲೆಮಿಯ ರಾಜವಂಶವು ಐಗುಪ್ತದಲ್ಲಿ ಯಾವಾಗ ಸ್ಥಾಪಿಸಲ್ಪಟ್ಟಿತು?
14 ನಾಲ್ಕು ಗ್ರೀಕ್ ರಾಜ್ಯಗಳಲ್ಲಿ ಬಹಳ ದೀರ್ಘ ಸಮಯದ ವರೆಗೆ ಉಳಿದಿದ್ದ ರಾಜ್ಯವು, ಟಾಲೆಮಿ ಲಾಗಸ್ ಅಥವಾ Iನೆಯ ಟಾಲೆಮಿಯದ್ದಾಗಿತ್ತು. ಅವನು ಸಾ.ಶ.ಪೂ. 305ರಲ್ಲಿ ರಾಜನ ಸ್ಥಾನವನ್ನು ಪಡೆದುಕೊಂಡನು. ಸಾ.ಶ.ಪೂ. 30ರಲ್ಲಿ ಐಗುಪ್ತವು ರೋಮ್ನ ವಶವಾಗುವ ವರೆಗೆ, ಅವನು ಸ್ಥಾಪಿಸಿದ ಟಾಲೆಮಿಕ್ ರಾಜವಂಶವು ಐಗುಪ್ತವನ್ನು ಆಳುತ್ತಿತ್ತು.
15. ನಾಲ್ಕು ಗ್ರೀಕ್ ರಾಜ್ಯಗಳಿಂದ ಉದಯಿಸಿದ ಇಬ್ಬರು ಪ್ರಬಲ ರಾಜರು ಯಾರಾಗಿದ್ದರು, ಮತ್ತು ಅವರು ಯಾವ ಹೋರಾಟವನ್ನು ಆರಂಭಿಸಿದರು?
15 ಹೀಗೆ, ನಾಲ್ಕು ಗ್ರೀಕ್ ರಾಜ್ಯಗಳಿಂದ ಇಬ್ಬರು ಪ್ರಬಲ ರಾಜರು ಉದಯಿಸಿದರು—ಸಿರಿಯದ ರಾಜನಾದ Iನೆಯ ಸೆಲ್ಯೂಕಸ್ ನೈಕೇಟರ್ ಹಾಗೂ ಐಗುಪ್ತದ ರಾಜನಾದ Iನೆಯ ಟಾಲೆಮಿ. ದಾನಿಯೇಲ ಪುಸ್ತಕದ 11ನೆಯ ಅಧ್ಯಾಯದಲ್ಲಿ ವಿವರಿಸಲ್ಪಟ್ಟಿರುವಂತೆ, ಈ ಇಬ್ಬರು ರಾಜರಿಂದ “ಉತ್ತರದಿಕ್ಕಿನ ರಾಜ” ಹಾಗೂ “ದಕ್ಷಿಣದಿಕ್ಕಿನ ರಾಜ”ನ ನಡುವಿನ ಹೋರಾಟವು ಆರಂಭವಾಯಿತು. ಯೆಹೋವನ ದೂತನು ಆ ರಾಜರ ಹೆಸರುಗಳನ್ನು ತಿಳಿಸಲಿಲ್ಲ, ಏಕೆಂದರೆ ಈ ಇಬ್ಬರು ರಾಜರ ಗುರುತು ಹಾಗೂ ರಾಷ್ಟ್ರೀಯತೆಯು ಶತಮಾನಗಳಾದ್ಯಂತ ಬದಲಾಗುತ್ತಾ ಹೋಗಲಿತ್ತು. ಅನಗತ್ಯವಾದ ವಿವರಗಳನ್ನು ಬಿಟ್ಟುಬಿಟ್ಟು, ಹೋರಾಟಕ್ಕೆ ಸಂಬಂಧಪಟ್ಟ ರಾಜರು ಹಾಗೂ ಘಟನೆಗಳ ಬಗ್ಗೆ ಮಾತ್ರವೇ ದೇವದೂತನು ತಿಳಿಯಪಡಿಸಿದನು.
ಹೋರಾಟವು ಆರಂಭಗೊಳ್ಳುತ್ತದೆ
16. (ಎ) ಆ ಇಬ್ಬರು ರಾಜರು, ಯಾವ ಜನರ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿದ್ದರು? (ಬಿ) ಮೊದಲಾಗಿ “ಉತ್ತರದಿಕ್ಕಿನ ರಾಜ” ಹಾಗೂ “ದಕ್ಷಿಣದಿಕ್ಕಿನ ರಾಜ”ನ ಸ್ಥಾನವನ್ನು ಯಾರು ಪಡೆದುಕೊಂಡರು?
16 ಕಿವಿಗೊಡಿರಿ! ಈ ನಾಟಕೀಯ ಹೋರಾಟದ ಆರಂಭವನ್ನು ವರ್ಣಿಸುತ್ತಾ ಯೆಹೋವನ ದೂತನು ಹೇಳುವುದು: “ದಕ್ಷಿಣದಿಕ್ಕಿನ ರಾಜನೂ ಅವನ [ಅಲೆಕ್ಸಾಂಡರನ] ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು; ಸರದಾರನು [ಉತ್ತರದಿಕ್ಕಿನ ರಾಜನು] ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು; ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವದು.” (ದಾನಿಯೇಲ 11:5) “ಉತ್ತರ ರಾಜ” ಹಾಗೂ “ದಕ್ಷಿಣ ರಾಜ” ಎಂಬ ಬಿರುದುಗಳು, ದಾನಿಯೇಲನ ಜನರು ವಾಸಿಸುತ್ತಿದ್ದ ಸ್ಥಳದಿಂದ ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿದ್ದ ರಾಜರನ್ನು ಸೂಚಿಸುತ್ತವೆ. ಇಷ್ಟರಲ್ಲೇ ದಾನಿಯೇಲನ ಜನರು ಬಾಬೆಲಿನ ಬಂದಿವಾಸದಿಂದ ಬಿಡುಗಡೆಗೊಳಿಸಲ್ಪಟ್ಟು, ಯೆಹೂದದಲ್ಲಿರುವ ತಮ್ಮ ಸ್ವದೇಶಕ್ಕೆ ಹಿಂದಿರುಗಿದ್ದರು. ಆರಂಭದಲ್ಲಿ “ದಕ್ಷಿಣದಿಕ್ಕಿನ ರಾಜನು” ಐಗುಪ್ತದ Iನೆಯ ಟಾಲೆಮಿಯಾಗಿದ್ದನು. Iನೆಯ ಟಾಲೆಮಿಯ ವಿರುದ್ಧ ಜಯವನ್ನು ಗಳಿಸಿ, “ದೊಡ್ಡ ರಾಜ್ಯ”ದೊಂದಿಗೆ ಆಳ್ವಿಕೆ ನಡಿಸಿದ ಅಲೆಕ್ಸಾಂಡರನ ಸೇನಾಧಿಪತಿಗಳಲ್ಲಿ ಒಬ್ಬನು, ಸಿರಿಯದ ರಾಜನಾದ Iನೆಯ ಸೆಲ್ಯೂಕಸ್ ನೈಕೇಟರ್ ಆಗಿದ್ದನು. “ಉತ್ತರದಿಕ್ಕಿನ ರಾಜ”ನ ಪಾತ್ರವನ್ನು ಇವನೇ ಪಡೆದುಕೊಂಡನು.
17. ಉತ್ತರ ರಾಜ ಹಾಗೂ ದಕ್ಷಿಣ ರಾಜನ ನಡುವಿನ ಹೋರಾಟದ ಆರಂಭದಲ್ಲಿ, ಯೆಹೂದ ದೇಶವು ಯಾರ ಆಧಿಪತ್ಯದ ಕೆಳಗಿತ್ತು?
17 ಹೋರಾಟದ ಆರಂಭದಲ್ಲಿ, ಯೆಹೂದ ದೇಶವು ದಕ್ಷಿಣ ರಾಜನ ಆಧಿಪತ್ಯದ ಕೆಳಗಿತ್ತು. ಸುಮಾರು ಸಾ.ಶ.ಪೂ. 320ರಲ್ಲಿ, ಯೆಹೂದ್ಯರು ವಲಸೆಗಾರರೋಪಾದಿ ಐಗುಪ್ತಕ್ಕೆ ಬಂದು ನೆಲೆಸುವಂತೆ Iನೆಯ ಟಾಲೆಮಿಯು ಪ್ರಭಾವ ಬೀರಿದನು. ಆ್ಯಲೆಕ್ಸಾಂಡ್ರಿಯದಲ್ಲಿ ಒಂದು ಯೆಹೂದಿ ನೆಲಸುನಾಡು ಬಹು ಬೇಗನೆ ಅಭಿವೃದ್ಧಿ ಹೊಂದಿತು, ಮತ್ತು Iನೆಯ ಟಾಲೆಮಿಯು ಅಲ್ಲೇ ಒಂದು ಪ್ರಸಿದ್ಧ ಗ್ರಂಥಾಲಯವನ್ನು ಸ್ಥಾಪಿಸಿದನು. ಸಾ.ಶ.ಪೂ. 198ರ ತನಕ, ಯೆಹೂದದಲ್ಲಿದ್ದ ಯೆಹೂದ್ಯರು, ಟಾಲೆಮಿಗೆ ಸೇರಿದ್ದ ಐಗುಪ್ತದ ಅಥವಾ ದಕ್ಷಿಣ ರಾಜನ ಅಧಿಕಾರದ ಕೆಳಗಿದ್ದರು.
18, 19. ಸಮಯಾನಂತರ, ಈ ಇಬ್ಬರು ಪ್ರತಿಸ್ಪರ್ಧಿ ರಾಜರು ಹೇಗೆ “ನ್ಯಾಯಸಮ್ಮತವಾದ ಒಪ್ಪಂದ”ವನ್ನು ಮಾಡಿಕೊಂಡರು?
18 ಆ ಇಬ್ಬರು ರಾಜರ ವಿಷಯದಲ್ಲಿ ದೇವದೂತನು ಪ್ರವಾದಿಸಿದ್ದು: “ಕೆಲವು ವರುಷಗಳ ಮೇಲೆ ಅವರು ಸೇರಿಕೊಳ್ಳುವರು; ದಕ್ಷಿಣ ರಾಜನ ಕುಮಾರಿಯು ಉತ್ತರದಿಕ್ಕಿನ ರಾಜನೊಂದಿಗೆ [“ನ್ಯಾಯಸಮ್ಮತವಾದ,” NW] ಒಪ್ಪಂದಮಾಡಿಕೊಳ್ಳಲಿಕ್ಕೆ ಬರುವಳು; ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಳು; ಅವನೂ ಅವನ ತೋಳೂ ನಿಲ್ಲವು; ಅವಳೂ ಅವಳನ್ನು ಕರತಂದವರೂ ಪಡೆದವನೂ ತಕ್ಕೊಂಡವನೂ [“ಅವಳನ್ನು ಬಲಗೊಳಿಸಿದವನೂ,” NW] ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು.” (ದಾನಿಯೇಲ 11:6) ಇದು ಹೇಗೆ ಸಂಭವಿಸಿತು?
19 ಒಂದನೆಯ ಸೆಲ್ಯೂಕಸ್ ನೈಕೇಟರನ ಮಗನೂ ಅವನ ತರುವಾಯ ರಾಜನಾಗಿ ಬಂದವನೂ ಆದ Iನೆಯ ಆ್ಯಂಟಾಯೊಕಸನು, ದಕ್ಷಿಣ ರಾಜನ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸಲಿಲ್ಲವಾದ್ದರಿಂದ, ಪ್ರವಾದನೆಯು ಅವನನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ಅವನ ನಂತರ ರಾಜನಾಗಿ ಬಂದ IIನೆಯ ಆ್ಯಂಟಾಯೊಕಸನು, Iನೆಯ ಟಾಲೆಮಿಯ ಮಗನಾಗಿದ್ದ IIನೆಯ ಟಾಲೆಮಿಯ ವಿರುದ್ಧ ದೀರ್ಘ ಸಮಯದ ವರೆಗೆ ಯುದ್ಧ ಮಾಡಿದನು. IIನೆಯ ಆ್ಯಂಟಾಯೊಕಸ್ ಹಾಗೂ IIನೆಯ ಟಾಲೆಮಿಯರು, ಅನುಕ್ರಮವಾಗಿ ಉತ್ತರ ಹಾಗೂ ದಕ್ಷಿಣ ರಾಜರ ಸ್ಥಾನವನ್ನು ಪಡೆದುಕೊಂಡರು. IIನೆಯ ಆ್ಯಂಟಾಯೊಕಸನು ಲೇಆಡಸೀಯನ್ನು ಮದುವೆಯಾಗಿದ್ದನು, ಮತ್ತು ಅವರಿಗೆ IIನೆಯ ಸೆಲ್ಯೂಕಸ್ ಎಂಬ ಮಗನಿದ್ದನು. ಆದರೆ IIನೆಯ ಟಾಲೆಮಿಗೆ ಬೆರನೈಸೀ ಎಂಬ ಹೆಸರಿನ ಒಬ್ಬ ಮಗಳಿದ್ದಳು. ಸಾ.ಶ.ಪೂ. 250ರಲ್ಲಿ, ಈ ಇಬ್ಬರು ರಾಜರು ಒಂದು “ನ್ಯಾಯಸಮ್ಮತವಾದ ಒಪ್ಪಂದಮಾಡಿ”ಕೊಂಡರು. ಈ ಮೈತ್ರಿ ಸಂಬಂಧದ ಬೆಲೆಯನ್ನು ತೆರಲಿಕ್ಕಾಗಿ, IIನೆಯ ಆ್ಯಂಟಾಯೊಕಸನು ತನ್ನ ಹೆಂಡತಿಯಾದ ಲೇಆಡಸೀಗೆ ವಿಚ್ಛೇದ ನೀಡಿ, “ದಕ್ಷಿಣ ರಾಜನ ಕುಮಾರಿ”ಯಾಗಿದ್ದ ಬೆರನೈಸೀಯನ್ನು ಮದುವೆಮಾಡಿಕೊಂಡನು. ಬೆರನೈಸೀಯ ಮೂಲಕ ಅವನು ಒಬ್ಬ ಮಗನನ್ನು ಪಡೆದನು, ಮತ್ತು ಲೇಆಡಸೀಯ ಪುತ್ರರಿಗೆ ಬದಲಾಗಿ ಇವನು ಸಿರಿಯದ ಸಿಂಹಾಸನದ ಉತ್ತರಾಧಿಕಾರಿಯಾದನು.
20. (ಎ) ಬೆರನೈಸೀಯ “ಭುಜಬಲ”ವು ಹೇಗೆ ಉಳಿಯಲಿಲ್ಲ? (ಬಿ) ಬೆರನೈಸೀಯ, “ಅವಳನ್ನು ಕರತಂದವರು,” ಹಾಗೂ “ಅವಳನ್ನು ಬಲಗೊಳಿಸಿದವನು” ಹೇಗೆ ನಾಶಕ್ಕೆ ಈಡಾದರು? (ಸಿ) IIನೆಯ ಆ್ಯಂಟಾಯೊಕಸನು ತನ್ನ ‘ತೋಳನ್ನು’ ಅಥವಾ ಅಧಿಕಾರವನ್ನು ಕಳೆದುಕೊಂಡ ಬಳಿಕ, ಯಾರು ಸಿರಿಯದ ರಾಜನಾದನು?
20 ಬೆರನೈಸೀಯ ತಂದೆಯಾಗಿದ್ದ IIನೆಯ ಟಾಲೆಮಿಯು, ಅವಳ “ಭುಜಬಲ” ಅಥವಾ ಬೆಂಬಲಿಗನಾಗಿದ್ದನು. ಸಾ.ಶ.ಪೂ. 246ರಲ್ಲಿ ಅವನು ಮರಣಪಟ್ಟಾಗ, ತನ್ನ ಗಂಡನೊಂದಿಗೆ ಅವಳು “ತನ್ನ ಭುಜಬಲವನ್ನು ಉಳಿಸಿಕೊಳ್ಳ”ಲಿಲ್ಲ. IIನೆಯ ಆ್ಯಂಟಾಯೊಕಸನು ಅವಳನ್ನು ತೊರೆದು, ಲೇಆಡಸೀಯನ್ನು ಪುನಃ ಮದುವೆಮಾಡಿಕೊಂಡು, ಅವರ ಮಗನನ್ನು ಉತ್ತರಾಧಿಕಾರಿಯಾಗಿ ಹೆಸರಿಸಿದನು. ಲೇಆಡಸೀಯ ಯೋಜನೆಯ ಪ್ರಕಾರ ಬೆರನೈಸೀಯನ್ನು ಹಾಗೂ ಅವಳ ಮಗನನ್ನು ಕೊಲ್ಲಲಾಯಿತು. ಬೆರನೈಸೀಯನ್ನು ಐಗುಪ್ತದಿಂದ ಸಿರಿಯಕ್ಕೆ ಕರೆತಂದಿದ್ದ ಸೇವಕರಿಗೆ—“ಅವಳನ್ನು ಕರತಂದವ”ರಿಗೆ—ಸಹ ಅದೇ ಗತಿಯಾಯಿತು ಎಂಬುದು ಸುವ್ಯಕ್ತ. ಲೇಆಡಸೀಯು IIಆ್ಯಂಟಾಯೊಕಸನಿಗೂ ವಿಷ ಕುಡಿಸಿದಳು, ಮತ್ತು ಹೀಗೆ “ಅವನ ತೋಳು” ಅಥವಾ ಅಧಿಕಾರವು ಸಹ “ನಿಲ್ಲ”ಲಿಲ್ಲ. ಆದುದರಿಂದ, ಬೆರನೈಸೀಯ ತಂದೆಯೂ—‘ಅವಳನ್ನು ಪಡೆದವನು’—ಅವಳನ್ನು ತಾತ್ಕಾಲಿಕವಾಗಿ “ಬಲಗೊಳಿ”ಸಿದ್ದ ಅವಳ ಸಿರಿಯದ ಗಂಡನೂ ಮರಣಪಟ್ಟರು. ಇದರಿಂದಾಗಿ, ಲೇಆಡಸೀಯ ಮಗನಾದ IIನೆಯ ಸೆಲ್ಯೂಕಸನು ಸಿರಿಯದ ರಾಜನಾದನು. ಟಾಲೆಮಿಯ ವಂಶದ ಮುಂದಿನ ರಾಜನು ಈ ಎಲ್ಲ ಘಟನೆಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿದ್ದನು?
ಒಬ್ಬ ಅರಸನು ತನ್ನ ಸಹೋದರಿಯ ಕೊಲೆಗೆ ಸೇಡು ತೀರಿಸಿಕೊಳ್ಳುತ್ತಾನೆ
21. (ಎ) ಬೆರನೈಸೀಯ “ಬುಡ”ದ “ಸಸಿ”ಯು ಯಾರಾಗಿದ್ದನು, ಮತ್ತು ಅವನು ಹೇಗೆ “ಎದ್ದುನಿಂತನು?” (ಬಿ) IIIನೆಯ ಟಾಲೆಮಿಯು ಹೇಗೆ “ಉತ್ತರರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು ಅವನ ದುರ್ಗದೊಳಗೆ ನುಗ್ಗಿ”ದನು ಮತ್ತು ಅವನ ವಿರುದ್ಧ ಜಯಶಾಲಿಯಾದನು?
21 “ಅನಂತರ ಅವಳು ಹುಟ್ಟಿದ ಬುಡದಿಂದ ಒಡೆದ ಸಸಿಯು ಅದರ ಸ್ಥಾನದಲ್ಲಿ ನಿಂತು ಉತ್ತರರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು [“ಎದ್ದುನಿಂತು,” NW] ಅವನ ದುರ್ಗದೊಳಗೆ ನುಗ್ಗಿ ಅಲ್ಲಿನವರಿಗೆ ಮಾಡುವಷ್ಟು ಮಾಡಿ ಗೆದ್ದು”ಕೊಂಡನು ಎಂದು ದೇವದೂತನು ಹೇಳಿದನು. (ದಾನಿಯೇಲ 11:7) ಬೆರನೈಸೀಯ ಹೆತ್ತವರ ಅಥವಾ “ಬುಡ”ದ “ಸಸಿ”ಯು ಅವಳ ಸಹೋದರನಾಗಿದ್ದನು. ತನ್ನ ತಂದೆಯು ಮೃತಪಟ್ಟಾಗ, ಐಗುಪ್ತದ ಫರೋಹನಾದ IIIನೆಯ ಟಾಲೆಮಿಯು ದಕ್ಷಿಣ ರಾಜನೋಪಾದಿ “ಎದ್ದುನಿಂತನು.” ಆ ಕೂಡಲೆ ಅವನು ತನ್ನ ಸಹೋದರಿಯ ಕೊಲೆಯ ಸೇಡನ್ನು ತೀರಿಸಿಕೊಳ್ಳಲು ಹೊರಟನು. ತನ್ನ ಸಹೋದರಿಯಾಗಿದ್ದ ಬೆರನೈಸೀಯನ್ನು ಹಾಗೂ ಅವಳ ಮಗನನ್ನು ಕೊಲ್ಲಲಿಕ್ಕಾಗಿ ಲೇಆಡಸೀಯು ಯಾರನ್ನು ಉಪಯೋಗಿಸಿದ್ದಳೋ, ಆ ಸಿರಿಯದ ರಾಜನಾದ IIನೆಯ ಸೆಲ್ಯೂಕಸನ ವಿರುದ್ಧ ಸೈನ್ಯವನ್ನು ಒಟ್ಟುಗೂಡಿಸಿ, “ಉತ್ತರ ರಾಜನ . . . ದುರ್ಗ”ಕ್ಕೆ ವಿರುದ್ಧವಾಗಿ ದಂಡೆತ್ತಿ ಹೋದನು. IIIನೆಯ ಟಾಲೆಮಿಯು ಅಂತಿಯೋಕ್ಯದ ಭದ್ರವಾದ ಕೋಟೆಕೊತ್ತಲಗಳುಳ್ಳ ಭಾಗವನ್ನು ವಶಪಡಿಸಿಕೊಂಡು, ಲೇಆಡಸೀಯನ್ನು ಕೊಂದುಹಾಕಿದನು. ಉತ್ತರ ರಾಜನ ಕ್ಷೇತ್ರದ ಮೂಲಕ ಪೂರ್ವ ಭಾಗಕ್ಕೆ ಹೋಗಿ, ಬಾಬೆಲನ್ನು ಸೂರೆಮಾಡಿ, ಅವನು ಭಾರತದ ಕಡೆಗೆ ಮುನ್ನುಗ್ಗಿದನು.
22. ಮೂರನೆಯ ಟಾಲೆಮಿಯು ಯಾವ ವಸ್ತುಗಳನ್ನು ಐಗುಪ್ತಕ್ಕೆ ತಂದನು, ಮತ್ತು ಅವನು ಏಕೆ “ಕೆಲವು ವರುಷಗಳ ತನಕ ಉತ್ತರರಾಜನ ತಂಟೆಗೆ ಹೋಗ”ಲಿಲ್ಲ?
22 ಮುಂದೆ ಏನು ಸಂಭವಿಸಿತು? ದೇವದೂತನು ನಮಗೆ ಹೀಗೆ ಹೇಳುತ್ತಾನೆ: “ಅವರ ದೇವರುಗಳನ್ನೂ ಎರಕದ ಬೊಂಬೆಗಳನ್ನೂ ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ ಸೂರೆಮಾಡಿಕೊಂಡು [“ಸೆರೆ ಒಯ್ದು,” NW] ಐಗುಪ್ತಕ್ಕೆ ಬಂದು ಕೆಲವು ವರುಷಗಳ ತನಕ [ಅವನು] ಉತ್ತರರಾಜನ ತಂಟೆಗೆ ಹೋಗುವದಿಲ್ಲ.” (ದಾನಿಯೇಲ 11:8) 200ಕ್ಕಿಂತಲೂ ಹೆಚ್ಚು ವರ್ಷಗಳ ಮುಂಚೆ, ಪಾರಸಿಯ ರಾಜನಾದ IIನೆಯ ಕ್ಯಾಂಬಿಸಿಸನು ಐಗುಪ್ತವನ್ನು ಗೆದ್ದು, ಐಗುಪ್ತದ ದೇವದೇವತೆಗಳನ್ನು, ಅಂದರೆ “ಅವರ ಎರಕದ ಬೊಂಬೆಗಳನ್ನು” ಸ್ವದೇಶಕ್ಕೆ ಕೊಂಡೊಯ್ದಿದ್ದನು. ಪಾರಸಿಯರ ಹಿಂದಿನ ರಾಜಮನೆತನದ ರಾಜಧಾನಿಯಾಗಿದ್ದ ಸೂಸವನ್ನು ಕೊಳ್ಳೆಹೊಡೆಯುವ ಮೂಲಕ, IIIನೆಯ ಟಾಲೆಮಿಯು ಈ ದೇವದೇವತೆಗಳನ್ನು ಹಿಂದಿರುಗಿ ಪಡೆದನು ಮತ್ತು ಅವುಗಳನ್ನು ಐಗುಪ್ತಕ್ಕೆ “ಸೆರೆ ಒಯ್ದ”ನು. ಯುದ್ಧದ ಕೊಳ್ಳೆಯೋಪಾದಿ ಅನೇಕ “ಬೆಳ್ಳಿಬಂಗಾರದ ಪಾತ್ರೆಗಳನ್ನು” ಸಹ ಅವನು ತನ್ನೊಂದಿಗೆ ತಂದನು. ಆಂತರಿಕ ಕ್ರಾಂತಿಯನ್ನು ಅಡಗಿಸಲಿಕ್ಕಾಗಿ IIIನೆಯ ಟಾಲೆಮಿಯು ಐಗುಪ್ತಕ್ಕೆ ಹಿಂದಿರುಗಬೇಕಾಗಿದ್ದರಿಂದ, ಅವನು ‘ಉತ್ತರ ರಾಜನ ತಂಟೆಗೆ ಹೋಗದೆ,’ ಅಂದರೆ ಉತ್ತರ ರಾಜನಿಗೆ ಹೆಚ್ಚಿನ ಹಾನಿಯನ್ನು ಉಂಟುಮಾಡದೆ ಇದ್ದುಬಿಟ್ಟನು.
ಸಿರಿಯದ ಅರಸನು ಸೇಡು ತೀರಿಸಿಕೊಳ್ಳುತ್ತಾನೆ
23. ದಕ್ಷಿಣ ರಾಜನ ರಾಜ್ಯದೊಳಗೆ ಪ್ರವೇಶಿಸಿದ ಬಳಿಕ, ಉತ್ತರ ರಾಜನು ಏಕೆ “ಸ್ವದೇಶಕ್ಕೆ ಹಿಂದಿರುಗುವನು?”
23 ಉತ್ತರ ರಾಜನು ಹೇಗೆ ಪ್ರತಿಕ್ರಿಯೆ ತೋರಿಸಿದನು? ದಾನಿಯೇಲನಿಗೆ ಹೀಗೆ ಹೇಳಲಾಯಿತು: “ಬಳಿಕ ಉತ್ತರರಾಜನು ದಕ್ಷಿಣರಾಜನ ರಾಜ್ಯದೊಳಗೆ ನುಗ್ಗಿ ಸ್ವದೇಶಕ್ಕೆ ಹಿಂದಿರುಗುವನು.” (ದಾನಿಯೇಲ 11:9) ಉತ್ತರ ರಾಜನು, ಅಂದರೆ ಸಿರಿಯದ ರಾಜನಾದ IIನೆಯ ಸೆಲ್ಯೂಕಸನು ಆಕ್ರಮಣ ಮಾಡಿದನು. ಅವನು ದಕ್ಷಿಣದಲ್ಲಿರುವ ಐಗುಪ್ತ ರಾಜನ “ರಾಜ್ಯ”ವನ್ನು ಅಥವಾ ಸಾಮ್ರಾಜ್ಯವನ್ನು ಪ್ರವೇಶಿಸಿದನಾದರೂ, ಸೋಲನ್ನು ಅನುಭವಿಸಿದನು. ತನ್ನ ಸೈನ್ಯದಲ್ಲಿ ಉಳಿದಿದ್ದ ಚಿಕ್ಕ ಸೈನಿಕ ಗುಂಪಿನೊಂದಿಗೆ IIನೆಯ ಸೆಲ್ಯೂಕಸನು ‘ಸ್ವದೇಶಕ್ಕೆ ಹಿಂದಿರುಗಿದನು’ ಅಂದರೆ ಸಿರಿಯದ ರಾಜಧಾನಿಯಾದ ಅಂತಿಯೋಕ್ಯಕ್ಕೆ ಸುಮಾರು ಸಾ.ಶ.ಪೂ. 242ರಲ್ಲಿ ಹಿಂದೆ ಹೋದನು. ಅವನು ಮರಣಹೊಂದಿದಾಗ, ಅವನಿಗೆ ಬದಲಾಗಿ ಅವನ ಮಗನಾದ IIIನೆಯ ಸೆಲ್ಯೂಕಸನು ರಾಜನಾದನು.
24. (ಎ) ಮೂರನೆಯ ಸೆಲ್ಯೂಕಸನಿಗೆ ಏನು ಸಂಭವಿಸಿತು? (ಬಿ) ಸಿರಿಯದ ರಾಜನಾದ IIIನೆಯ ಆ್ಯಂಟಾಯೊಕಸನು, ದಕ್ಷಿಣ ರಾಜನ ಕ್ಷೇತ್ರಕ್ಕೆ “ಮುಂದರಿದು ತುಂಬಿತುಳುಕಿ ಹಬ್ಬಿಕೊಂಡ”ದ್ದು ಹೇಗೆ?
24 ಸಿರಿಯದ ರಾಜನಾದ IIನೆಯ ಸೆಲ್ಯೂಕಸನ ಸಂತಾನದ ಕುರಿತು ಏನು ಮುಂತಿಳಿಸಲ್ಪಟ್ಟಿತು? ದೇವದೂತನು ದಾನಿಯೇಲನಿಗೆ ಹೇಳಿದ್ದು: “ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹಮಾಡಿ ವ್ಯೂಹವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು; ಆ ಸೈನ್ಯವು ಮುಂದರಿದು ತುಂಬಿತುಳುಕಿ ಹಬ್ಬಿಕೊಳ್ಳುವದು; ಆದರೆ, ಅವನು ತನ್ನನ್ನು ಉದ್ರೇಕಿಸಿಕೊಂಡು ತನ್ನ ದುರ್ಗಕ್ಕೆ ಹಿಂದಿರುಗುವನು.” (ದಾನಿಯೇಲ 11:10, NW) ಹತ್ಯೆಯ ಕಾರಣದಿಂದಾಗಿ IIIನೆಯ ಸೆಲ್ಯೂಕಸನ ಆಳ್ವಿಕೆಯು ಮೂರು ವರ್ಷಗಳಿಗೆ ಮುಂಚೆಯೇ ಕೊನೆಗೊಂಡಿತು. ಅವನಿಗೆ ಬದಲಾಗಿ ಅವನ ತಮ್ಮನಾದ IIIನೆಯ ಆ್ಯಂಟಾಯೊಕಸನು ಸಿರಿಯದ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದನು. IIನೆಯ ಸೆಲ್ಯೂಕಸನ ಮಗನಾದ ಇವನು, ಆ ಸಮಯದಲ್ಲಿ ದಕ್ಷಿಣ ರಾಜನಾಗಿದ್ದ IVನೆಯ ಟಾಲೆಮಿಯ ವಿರುದ್ಧ ಆಕ್ರಮಣ ಮಾಡಲಿಕ್ಕಾಗಿ ದೊಡ್ಡ ದೊಡ್ಡ ಸೈನ್ಯಗಳನ್ನು ಒಟ್ಟುಗೂಡಿಸಿದನು. ಸಿರಿಯದ ಹೊಸ ಉತ್ತರ ರಾಜನು ಐಗುಪ್ತದ ವಿರುದ್ಧ ಯಶಸ್ವಿಕರವಾಗಿ ಹೋರಾಟ ನಡಿಸಿ, ಸೆಲ್ಯೂಸಿಯ ರೇವುಪಟ್ಟಣವನ್ನು, ಸೀಲಿ-ಸಿರಿಯ ಪ್ರಾಂತವನ್ನು, ತೂರ್ ಹಾಗೂ ಟಾಲೆಮೇಯಸ್ ಪಟ್ಟಣಗಳನ್ನು, ಮತ್ತು ಸಮೀಪದಲ್ಲಿದ್ದ ಊರುಗಳನ್ನು ಗೆದ್ದುಕೊಂಡನು. ಅವನು ರಾಜನಾದ IVನೆಯ ಟಾಲೆಮಿಯ ಸೈನ್ಯವನ್ನು ಸೋಲಿಸಿ, ಯೆಹೂದದ ಅನೇಕ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡನು. ಸಾ.ಶ.ಪೂ. 217ರ ವಸಂತಕಾಲದಲ್ಲಿ, IIIನೆಯ ಆ್ಯಂಟಾಯೊಕಸನು ಟಾಲೆಮೇಯಸನ್ನು ಬಿಟ್ಟು, ಉತ್ತರ ದಿಕ್ಕಿನ ಸಿರಿಯದಲ್ಲಿರುವ ತನ್ನ “ದುರ್ಗಕ್ಕೆ” ಹೋದನು. ಆದರೆ ಒಂದು ಬದಲಾವಣೆಯು ಸಂಭವಿಸಲಿಕ್ಕಿತ್ತು.
ಸನ್ನಿವೇಶಗಳು ಅದಲುಬದಲಾಗುತ್ತವೆ
25. ಕದನದಲ್ಲಿ IVನೆಯ ಟಾಲೆಮಿಯು IIIನೆಯ ಆ್ಯಂಟಾಯೊಕಸ್ನನ್ನು ಎಲ್ಲಿ ಸಂಧಿಸಿದನು, ಮತ್ತು ಯಾವುದು ಐಗುಪ್ತದ ದಕ್ಷಿಣ ರಾಜನ “ಕೈವಶವಾಗುವುದು?”
25 ಯೆಹೋವನ ದೂತನು ಮುಂತಿಳಿಸುವ ವಿಷಯವನ್ನು, ದಾನಿಯೇಲನಂತೆ ನಾವು ಸಹ ನಿರೀಕ್ಷಣೆಯಿಂದ ಆಲಿಸುತ್ತೇವೆ: “ಆಗ ದಕ್ಷಿಣರಾಜನು ಕ್ರೋಧದಿಂದುರಿಯುತ್ತಾ ಹೊರಟುಬಂದು ಉತ್ತರರಾಜನ ಸಂಗಡ ಯುದ್ಧ ಮಾಡುವನು; ಉತ್ತರರಾಜನು ಮಹಾವ್ಯೂಹವನ್ನು ಕಟ್ಟಿದರೂ ಅದೆಲ್ಲಾ [“ಅವನ ಕೈವಶವಾಗುವುದು,” NW].” (ದಾನಿಯೇಲ 11:11) ದಕ್ಷಿಣ ರಾಜನಾದ IVನೆಯ ಟಾಲೆಮಿಯು 75,000 ಸೈನಿಕರನ್ನು ಒಟ್ಟುಗೂಡಿಸಿಕೊಂಡು, ತನ್ನ ವೈರಿಯ ವಿರುದ್ಧ ಉತ್ತರ ದಿಕ್ಕಿನ ಕಡೆಗೆ ಮುನ್ನುಗ್ಗಿದನು. ಸಿರಿಯದ ಉತ್ತರ ರಾಜನಾದ IIIನೆಯ ಆ್ಯಂಟಾಯೊಕಸನು, ಟಾಲೆಮಿಯ ವಿರುದ್ಧ ಹೋರಾಡಲಿಕ್ಕಾಗಿ 68,000 ಮಂದಿಯ “ಮಹಾವ್ಯೂಹವನ್ನು” ಸಜ್ಜುಗೊಳಿಸಿದ್ದನು. ಆದರೆ ಐಗುಪ್ತದ ಗಡಿಪ್ರದೇಶದ ಸಮೀಪದಲ್ಲೇ ಇದ್ದ ರಫಾಯ ಎಂಬ ಕರಾವಳಿ ಪಟ್ಟಣದಲ್ಲಿ ನಡೆದ ಕದನದಲ್ಲಿ, ಆ “ಮಹಾವ್ಯೂಹವು” ದಕ್ಷಿಣ ರಾಜನ “ಕೈವಶ”ವಾಯಿತು.
26. (ಎ) ರಫಾಯದಲ್ಲಿ ನಡೆದ ಕದನದಲ್ಲಿ ಯಾವ “ಮಹಾವ್ಯೂಹವು” ದಕ್ಷಿಣ ರಾಜನಿಂದ ಒಯ್ಯಲ್ಪಟ್ಟಿತು, ಮತ್ತು ಅಲ್ಲಿ ಮಾಡಿಕೊಳ್ಳಲ್ಪಟ್ಟ ಶಾಂತಿ ಒಪ್ಪಂದದ ಷರತ್ತುಗಳು ಏನಾಗಿದ್ದವು? (ಬಿ) IVನೆಯ ಟಾಲೆಮಿಯು ಹೇಗೆ ತನ್ನ “ಪ್ರಬಲ ಸ್ಥಾನವನ್ನು ಉಪಯೋಗಿಸಲಿಲ್ಲ?” (ಸಿ) ಯಾರು ದಕ್ಷಿಣದ ಮುಂದಿನ ರಾಜನಾಗಿ ಪಟ್ಟಕ್ಕೆ ಬಂದರು?
26 ಆ ಪ್ರವಾದನೆಯು ಹೀಗೆ ಮುಂದುವರಿಯುತ್ತದೆ: “ಆ ಮಹಾವ್ಯೂಹವು ಒಯ್ಯಲ್ಪಡುವುದು. ಅವನ ಹೃದಯವು ಉಬ್ಬಿಕೊಳ್ಳುವುದು, ಮತ್ತು ಅವನು ಖಂಡಿತವಾಗಿಯೂ ಲಕ್ಷಾಂತರ ಸೈನಿಕರನ್ನು ಹತಿಸಿಬಿಡುವನು; ಆದರೂ ಅವನು ತನ್ನ ಪ್ರಬಲ ಸ್ಥಾನವನ್ನು ಉಪಯೋಗಿಸುವುದಿಲ್ಲ.” (ದಾನಿಯೇಲ 11:12, NW) ದಕ್ಷಿಣ ರಾಜನಾದ IVನೆಯ ಟಾಲೆಮಿಯು, ಸಿರಿಯದ 10,000 ಕಾಲಾಳುಗಳನ್ನು ಹಾಗೂ 300 ಅಶ್ವದಳವನ್ನು ಹತಿಸುವ ಮೂಲಕ ‘ಒಯ್ದನು,’ ಮತ್ತು 4,000 ಸೈನಿಕರನ್ನು ಸೆರೆಯಾಳುಗಳೋಪಾದಿ ಕರೆದೊಯ್ದನು. ತದನಂತರ ಈ ರಾಜರು ಒಂದು ಒಪ್ಪಂದವನ್ನು ಮಾಡಿಕೊಂಡರು, ಮತ್ತು ಇದಕ್ಕನುಸಾರವಾಗಿ IIIನೆಯ ಆ್ಯಂಟಾಯೊಕಸನಿಗೆ ಸಿರಿಯದ ರೇವುಪಟ್ಟಣವಾದ ಸೆಲ್ಯೂಸಿಯವು ಸಿಕ್ಕಿತಾದರೂ, ಫಿನೀಶಿಯ ಹಾಗೂ ಸೀಲಿ-ಸಿರಿಯ ಎಂಬ ಪಟ್ಟಣಗಳನ್ನು ಅವನು ಕಳೆದುಕೊಂಡನು. ಈ ವಿಜಯದ ಕಾರಣದಿಂದ, ದಕ್ಷಿಣದಲ್ಲಿರುವ ಐಗುಪ್ತ ರಾಜನ ಹೃದಯವು ವಿಶೇಷವಾಗಿ ಯೆಹೋವನ ವಿರುದ್ಧ ‘ಉಬ್ಬಿಕೊಂಡಿತು.’ ಯೆಹೂದವು IVನೆಯ ಟಾಲೆಮಿಯ ವಶದಲ್ಲೇ ಇತ್ತು. ಆದರೂ, ಸಿರಿಯದ ಉತ್ತರ ರಾಜನ ವಿರುದ್ಧ ತನ್ನ ಜಯವನ್ನು ಮುಂದುವರಿಸಲಿಕ್ಕಾಗಿ ಅವನು “ತನ್ನ ಪ್ರಬಲ ಸ್ಥಾನವನ್ನು ಉಪಯೋಗಿಸ”ಲಿಲ್ಲ. ಅದಕ್ಕೆ ಬದಲಾಗಿ, IVನೆಯ ಟಾಲೆಮಿಯು ವಿಷಯಲಂಪಟ ಜೀವನವನ್ನು ನಡೆಸಲಾರಂಭಿಸಿದನು. ಮತ್ತು IIIನೆಯ ಆ್ಯಂಟಾಯೊಕಸನು ಮರಣಪಡುವ ಕೆಲವು ವರ್ಷಗಳ ಮುಂಚೆಯೇ, IVನೆಯ ಟಾಲೆಮಿಯ ಐದು ವರ್ಷ ಪ್ರಾಯದ ಮಗನಾದ Vನೆಯ ಟಾಲೆಮಿಯು ದಕ್ಷಿಣ ರಾಜನಾಗಿ ಪಟ್ಟಕ್ಕೆ ಬಂದನು.
ಶೋಷಣೆಗಾರನು ಹಿಂದಿರುಗುತ್ತಾನೆ
27. ಐಗುಪ್ತಕ್ಕೆ ಸೇರಿದ್ದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲಿಕ್ಕಾಗಿ, “ಬಹು ವರುಷಗಳ ಕಾಲವಾದನಂತರ” ಉತ್ತರ ರಾಜನು ಹೇಗೆ ಹಿಂದಿರುಗಿದನು?
27 ತನ್ನ ಎಲ್ಲ ಯುದ್ಧಾಚರಣೆಗಳ ಕಾರಣದಿಂದ, IIIನೆಯ ಆ್ಯಂಟಾಯೊಕಸನು ಮಹಾ ಆ್ಯಂಟಾಯೊಕಸನೆಂದು ಪ್ರಸಿದ್ಧನಾದನು. ಅವನ ಕುರಿತು ದೇವದೂತನು ಹೇಳಿದ್ದು: “ತರುವಾಯ ಉತ್ತರರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿ ಬಹು ವರುಷಗಳ ಕಾಲವಾದನಂತರ ಮಹಾ ಸೈನ್ಯದಿಂದಲೂ ಅಧಿಕಸನ್ನಾಹದಿಂದಲೂ ಸಮೇತನಾಗಿ ಬರುವನು.” (ದಾನಿಯೇಲ 11:13) ಈ “ಕಾಲಗಳು,” ಐಗುಪ್ತದವರು ರಫಾಯದಲ್ಲಿ ಸಿರಿಯವನ್ನು ಸೋಲಿಸಿ 16 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳು ಗತಿಸಿದ ನಂತರದ ಕಾಲಾವಧಿಯನ್ನು ಸೂಚಿಸುತ್ತವೆ. ಎಳೆಯ ಪ್ರಾಯದ Vನೆಯ ಟಾಲೆಮಿಯು ದಕ್ಷಿಣ ರಾಜನಾಗಿ ಪಟ್ಟಕ್ಕೆ ಬಂದಾಗ, IIIನೆಯ ಆ್ಯಂಟಾಯೊಕಸನು ದಕ್ಷಿಣದ ಐಗುಪ್ತ ರಾಜನು ತನ್ನಿಂದ ಗೆದ್ದುಕೊಂಡಿದ್ದ ಭೂಪ್ರದೇಶಗಳನ್ನು ಪುನಃ ಹಿಂದೆ ಪಡೆಯಲಿಕ್ಕಾಗಿ, “ಹಿಂದಿನ ದಂಡಿಗಿಂತ ದೊಡ್ಡ ದಂಡ”ನ್ನು ಯುದ್ಧಕ್ಕೆ ಸಜ್ಜುಗೊಳಿಸಿದನು. ಈ ಕಾರಣದಿಂದ, ಅವನು ಮ್ಯಾಸಿಡೋನಿಯದ ರಾಜನಾದ Vನೆಯ ಫಿಲಿಪ್ನೊಂದಿಗೆ ಒಂದುಗೂಡಿದನು.
28. ದಕ್ಷಿಣದ ಎಳೆಯ ರಾಜನು ಯಾವ ತೊಂದರೆಗಳನ್ನು ಎದುರಿಸಿದನು?
28 ದಕ್ಷಿಣ ರಾಜನಿಗೆ, ತನ್ನ ರಾಜ್ಯದೊಳಗೂ ಅನೇಕ ತೊಂದರೆಗಳನ್ನು ಎದುರಿಸಲಿಕ್ಕಿತ್ತು. “ಆ ಕಾಲದಲ್ಲಿ ಅನೇಕರು ದಕ್ಷಿಣರಾಜನಿಗೆ ಎದುರುನಿಲ್ಲುವರು” ಎಂದು ದೇವದೂತನು ಹೇಳಿದನು. (ದಾನಿಯೇಲ 11:14ಎ) ಅನೇಕರು ‘ದಕ್ಷಿಣರಾಜನಿಗೆ ಎದುರುನಿಂತರು.’ IIIನೆಯ ಆ್ಯಂಟಾಯೊಕಸ್ ಹಾಗೂ ಮಿತ್ರರಾಷ್ಟ್ರವಾದ ಮ್ಯಾಸಿಡೋನಿಯದ ಸೈನ್ಯಗಳನ್ನು ಎದುರಿಸುವುದರ ಜೊತೆಗೆ, ದಕ್ಷಿಣದ ಈ ಎಳೆಯ ರಾಜನು ತನ್ನ ಸ್ವದೇಶವಾದ ಐಗುಪ್ತದಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಿದನು. ಈ ರಾಜನ ಹೆಸರಿನಲ್ಲಿ ಆಳುತ್ತಿದ್ದ ಅವನ ಪಾಲಕನಾದ ಅಗಾಥಕ್ಲೀಸನು ಐಗುಪ್ತದವರೊಂದಿಗೆ ದುರಹಂಕಾರದಿಂದ ವರ್ತಿಸಿದ್ದರಿಂದ, ಅನೇಕರು ಈ ರಾಜನ ವಿರುದ್ಧ ದಂಗೆಯೆದ್ದರು. ಆ ದೇವದೂತನು ಕೂಡಿಸಿದ್ದು: “ಇದಲ್ಲದೆ ನಿನ್ನ ಜನರಲ್ಲಿ ದುರಾಗ್ರಹಿಗಳು ಕನಸನ್ನು [“ದರ್ಶನವನ್ನು,” NW] ನಿಜಮಾಡಬೇಕೆಂದು ದಂಗೆಏಳುವರು; ಆದರೆ ಬಿದ್ದುಹೋಗುವರು.” (ದಾನಿಯೇಲ 11:14ಬಿ) ದಾನಿಯೇಲನ ಜನರಲ್ಲಿಯೂ ಕೆಲವರು ‘ದುರಾಗ್ರಹಿ’ಗಳಾದರು ಅಥವಾ ಕ್ರಾಂತಿಕಾರಿಗಳಾಗಿ ಪರಿಣಮಿಸಿದರು. ಆದರೆ ತಮ್ಮ ಸ್ವದೇಶದಿಂದ ಅನ್ಯರ ಆಧಿಪತ್ಯವನ್ನು ಕೊನೆಗೊಳಿಸುವುದರ ಬಗ್ಗೆ ಅಂತಹ ಯೆಹೂದಿ ಪುರುಷರು ಕಂಡಿದ್ದ ಯಾವುದೇ “ದರ್ಶನ”ವು ಸುಳ್ಳಾಗಿತ್ತು, ಮತ್ತು ಅವರು ಅಸಫಲರಾಗಲಿದ್ದರು ಅಥವಾ “ಬಿದ್ದುಹೋಗ”ಲಿದ್ದರು.
29, 30. (ಎ) “ದಕ್ಷಿಣದ ಭುಜಬಲವು” ಉತ್ತರದ ಆಕ್ರಮಣಕ್ಕೆ ಹೇಗೆ ತುತ್ತಾಯಿತು? (ಬಿ) ಯಾವ ರೀತಿಯಲ್ಲಿ ಉತ್ತರ ರಾಜನು “ಅಂದಚಂದದ ದೇಶದಲ್ಲಿ ನಿಂತು”ಕೊಂಡನು?
29 ಯೆಹೋವನ ದೂತನು ಇನ್ನೂ ಮುಂತಿಳಿಸಿದ್ದು: “ಉತ್ತರರಾಜನು ಬಂದು ದಿಬ್ಬಹಾಕಿ ಕೋಟೆಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು. ದಕ್ಷಿಣರಾಜನಿಗೆ ವಿರುದ್ಧವಾಗಿ ಬರುವವನು ಇಚ್ಛಾನುಸಾರ ನಡೆಯುವನು; ಅವನಿಗೆ ಎದುರೇ ಇಲ್ಲ; ನಾಶನವನ್ನು ಕೈಯಲ್ಲಿಟ್ಟುಕೊಂಡು ಅಂದಚಂದದ ದೇಶದಲ್ಲಿ ನಿಂತಿರುವನು.”—ದಾನಿಯೇಲ 11:15, 16.
30 ಐದನೆಯ ಟಾಲೆಮಿಯ ಅಥವಾ “ದಕ್ಷಿಣರಾಜನ ಭುಜಬಲದ” ಕೆಳಗಿದ್ದ ಮಿಲಿಟರಿ ಸೈನ್ಯಗಳು, ಉತ್ತರ ರಾಜನ ಆಕ್ರಮಣಕ್ಕೆ ತುತ್ತಾದವು. ಪನೀಅಸ್ (ಕೈಸರೈಯದ ಫಿಲಿಪ್ಪಿ)ನಲ್ಲಿ, ಐಗುಪ್ತದ ಸೇನಾಧಿಪತಿಯಾದ ಸ್ಕೋಪಸ್ನನ್ನು ಹಾಗೂ 10,000 ಉತ್ತಮ ಸೈನಿಕರನ್ನು ಅಥವಾ “ಮಹಾವೀರ”ರನ್ನು, IIIನೆಯ ಆ್ಯಂಟಾಯೊಕಸನು “ಕೋಟೆಕೊತ್ತಲದ ಪಟ್ಟಣ”ವಾಗಿದ್ದ ಸೀದೋನ್ಗೆ ಓಡಿಸಿದನು. ಅಲ್ಲಿ IIIನೆಯ ಆ್ಯಂಟಾಯೊಕಸನು ‘ದಿಬ್ಬಹಾಕಿ,’ ಸಾ.ಶ.ಪೂ. 198ರಲ್ಲಿ ಫಿನೀಶಿಯದ ಆ ರೇವುಪಟ್ಟಣವನ್ನು ಸ್ವಾಧೀನಪಡಿಸಿಕೊಂಡನು. ಅವನು ತನ್ನ “ಇಚ್ಛಾನುಸಾರ” ಕಾರ್ಯನಡಿಸಿದನು, ಏಕೆಂದರೆ ದಕ್ಷಿಣದಲ್ಲಿರುವ ಐಗುಪ್ತ ರಾಜನ ಸೈನ್ಯಗಳು ಅವನನ್ನು ಎದುರಿಸಲು ಅಸಮರ್ಥವಾಗಿದ್ದವು. ತದನಂತರ IIIನೆಯ ಆ್ಯಂಟಾಯೊಕಸನು ಯೆಹೂದದ ರಾಜಧಾನಿಯಾಗಿದ್ದ ಯೆರೂಸಲೇಮಿನ ವಿರುದ್ಧ, ಅಂದರೆ “ಅಂದಚಂದದ ದೇಶ”ದ ಕಡೆಗೆ ಮುನ್ನುಗ್ಗಿದನು. ಸಾ.ಶ.ಪೂ. 198ರಲ್ಲಿ, ಯೆರೂಸಲೇಮ್ ಹಾಗೂ ಯೆಹೂದ ದೇಶಗಳು ದಕ್ಷಿಣದ ಐಗುಪ್ತ ರಾಜನ ಆಧಿಪತ್ಯದಿಂದ ಬೇರ್ಪಟ್ಟು, ಸಿರಿಯದ ಉತ್ತರ ರಾಜನ ಕೈವಶವಾದವು. ಹೀಗೆ ಉತ್ತರ ರಾಜನಾದ IIIನೆಯ ಆ್ಯಂಟಾಯೊಕಸನು, “ಅಂದಚಂದದ ದೇಶದಲ್ಲಿ ನಿಂತು”ಕೊಳ್ಳಲು ಆರಂಭಿಸಿದನು. ವಿರೋಧವನ್ನು ವ್ಯಕ್ತಪಡಿಸುವ ಎಲ್ಲ ಯೆಹೂದ್ಯರು ಹಾಗೂ ಐಗುಪ್ತರಿಗೆ ಅವನು ‘ನಾಶನವನ್ನು ಕೈಯಲ್ಲಿಟ್ಟುಕೊಂಡಿ’ದ್ದನು. ಆದರೆ ಈ ಉತ್ತರದ ರಾಜನು ಎಷ್ಟರ ವರೆಗೆ ತನಗೆ ಇಷ್ಟಬಂದಂತೆ ಮಾಡಶಕ್ತನಾಗಿದ್ದನು?
ಶೋಷಣೆಗಾರನನ್ನು ರೋಮ್ ನಿರ್ಬಂಧಿಸುತ್ತದೆ
31, 32. ಕೊನೆಯದಾಗಿ ಉತ್ತರ ರಾಜನು ದಕ್ಷಿಣ ರಾಜನೊಂದಿಗೆ ಏಕೆ ಶಾಂತಿಯ “ಒಪ್ಪಂದಮಾಡಿ”ಕೊಂಡನು?
31 ಯೆಹೋವನ ದೂತನು ಈ ಉತ್ತರವನ್ನು ನಮಗೆ ಕೊಡುತ್ತಾನೆ: “ದಕ್ಷಿಣರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ [ಉತ್ತರ ರಾಜನು] ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನ ಸಂಗಡ ಒಪ್ಪಂದಮಾಡಿಕೊಳ್ಳುವನು; ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣುಮಗಳನ್ನು ಕೊಡುವನು; ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲಿಸದು.”—ದಾನಿಯೇಲ 11:17.
32 ಉತ್ತರದ ರಾಜನಾಗಿರುವ IIIನೆಯ ಆ್ಯಂಟಾಯೊಕಸನು, “ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ” ಐಗುಪ್ತವನ್ನು ಆಳಲಿಕ್ಕಾಗಿ “ಹೊರಟನು.” ಆದರೆ ಅವನು ದಕ್ಷಿಣ ರಾಜನಾದ Vನೆಯ ಟಾಲೆಮಿಯೊಂದಿಗೆ ಶಾಂತಿಯ “ಒಪ್ಪಂದಮಾಡಿಕೊಳ್ಳ”ಬೇಕಾಯಿತು. ರೋಮ್ನ ಬೇಡಿಕೆಗಳು, IIIನೆಯ ಆ್ಯಂಟಾಯೊಕಸನು ತನ್ನ ಯೋಜನೆಯನ್ನು ಬದಲಾಯಿಸುವಂತೆ ಮಾಡಿದ್ದವು. ಇವನೂ ಮ್ಯಾಸಿಡೋನಿಯದ ರಾಜನಾಗಿದ್ದ Vನೆಯ ಫಿಲಿಪ್ಪನೂ ಸೇರಿಕೊಂಡು, ಐಗುಪ್ತದ ಎಳೆಯ ಪ್ರಾಯದ ರಾಜನ ವಿರುದ್ಧ ಸೈನ್ಯವನ್ನು ಒಟ್ಟುಗೂಡಿಸಿ, ಅವನಿಗೆ ಸೇರಿದ್ದ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, Vನೆಯ ಟಾಲೆಮಿಯ ಪಾಲಕರು ರಕ್ಷಣೆಗಾಗಿ ರೋಮ್ನ ಮರೆಹೊಕ್ಕರು. ತನ್ನ ಪ್ರಭಾವ ಕ್ಷೇತ್ರವನ್ನು ವಿಸ್ತರಿಸಲಿಕ್ಕಾಗಿ ಸಿಕ್ಕಿದ ಅವಕಾಶವನ್ನು ಸದುಪಯೋಗಿಸುತ್ತಾ, ರೋಮ್ ತನ್ನ ಬಲವನ್ನು ಪ್ರದರ್ಶಿಸಿತು.
33. (ಎ) ಮೂರನೆಯ ಆ್ಯಂಟಾಯೊಕಸ್ ಹಾಗೂ Vನೆಯ ಟಾಲೆಮಿಯ ನಡುವೆ ಯಾವ ಶಾಂತಿ ಒಪ್ಪಂದವು ಮಾಡಿಕೊಳ್ಳಲ್ಪಟ್ಟಿತು? (ಬಿ) Iನೆಯ ಕ್ಲಿಯೋಪಾತ್ರ ಹಾಗೂ Vನೆಯ ಟಾಲೆಮಿಯ ನಡುವಿನ ವಿವಾಹದ ಉದ್ದೇಶವು ಏನಾಗಿತ್ತು, ಮತ್ತು ಈ ಹಂಚಿಕೆಯು ಏಕೆ ಅಸಫಲವಾಯಿತು?
33 ರೋಮ್ನ ಒತ್ತಾಯದ ಮೇರೆಗೆ, IIIನೆಯ ಆ್ಯಂಟಾಯೊಕಸನು ದಕ್ಷಿಣ ರಾಜನೊಂದಿಗೆ ಶಾಂತಿಯ ಒಪ್ಪಂದವನ್ನು ಮಾಡಿಕೊಂಡನು. ರೋಮ್ ತಗಾದೆ ಮಾಡಿದ್ದಂತೆ, ಗೆದ್ದುಕೊಂಡ ಭೂಪ್ರದೇಶಗಳನ್ನು ಬಿಟ್ಟುಕೊಡುವ ಬದಲಿಗೆ, IIIನೆಯ ಆ್ಯಂಟಾಯೊಕಸನು ಆ ಭೂಪ್ರದೇಶಗಳನ್ನು ನಾಮ ಮಾತ್ರಕ್ಕೆ ವರ್ಗಾಯಿಸಲು ಯೋಜಿಸಿದನು. ಆದುದರಿಂದ ಅವನು ತನ್ನ ಮಗಳಾದ Iನೆಯ ಕ್ಲಿಯೋಪಾತ್ರಳನ್ನು—“ಹೆಣ್ಣುಮಗಳನ್ನು”—Vನೆಯ ಟಾಲೆಮಿಗೆ ಮದುವೆಮಾಡಿಕೊಡಲು ನಿರ್ಧರಿಸಿದನು. ಮತ್ತು “ಅಂದಚಂದದ ದೇಶ”ವಾಗಿದ್ದ ಯೆಹೂದವೂ ಸೇರಿದ್ದ ಪ್ರಾಂತಗಳನ್ನು ವರದಕ್ಷಿಣೆಯೋಪಾದಿ ಕೊಡಲಿದ್ದನು. ಆದರೂ, ಸಾ.ಶ.ಪೂ. 193ರಲ್ಲಿ ನಡೆದ ಆ ವಿವಾಹದಲ್ಲಿ, ಸಿರಿಯದ ರಾಜನು ಈ ಪ್ರಾಂತಗಳನ್ನು Vನೆಯ ಟಾಲೆಮಿಗೆ ಕೊಡಲಿಲ್ಲ. ಇದು ಐಗುಪ್ತವನ್ನು ಸಿರಿಯದ ಅಧೀನಕ್ಕೆ ಒಳಪಡಿಸಿಕೊಳ್ಳಲಿಕ್ಕಾಗಿ ಮಾಡಲ್ಪಟ್ಟ ಒಂದು ರಾಜಕೀಯ ವಿವಾಹವಾಗಿತ್ತು. ಆದರೆ ಈ ರಾಜನ ಯೋಜನೆಯು ಅಸಫಲವಾಯಿತು, ಏಕೆಂದರೆ Iನೆಯ ಕ್ಲಿಯೋಪಾತ್ರಳಿಂದಾಗಿ ‘ಈ ಉಪಾಯವು’ ಫಲಿಸಲಿಲ್ಲ; ವಿವಾಹದ ಬಳಿಕ ಅವಳು ತನ್ನ ಗಂಡನ ಪಕ್ಷವನ್ನು ವಹಿಸಿದಳು. IIIನೆಯ ಆ್ಯಂಟಾಯೊಕಸ್ ಹಾಗೂ ರೋಮನರ ನಡುವೆ ಯುದ್ಧವು ಆರಂಭವಾದಾಗ, ಐಗುಪ್ತವು ರೋಮ್ನ ಪಕ್ಷವನ್ನು ಸೇರಿತು.
34, 35. (ಎ) ಉತ್ತರ ರಾಜನು ಯಾವ “ಕರಾವಳಿ” ಪ್ರದೇಶಗಳ ಕಡೆಗೆ ಕಣ್ಣಿಟ್ಟನು? (ಬಿ) ಉತ್ತರ ರಾಜನ “ಅವಮಾನ”ವನ್ನು ರೋಮ್ ಹೇಗೆ ಕೊನೆಗೊಳಿಸಿತು? (ಸಿ) IIIನೆಯ ಆ್ಯಂಟಾಯೊಕಸನು ಹೇಗೆ ಮರಣಪಟ್ಟನು, ಮತ್ತು ಯಾರು ಉತ್ತರ ರಾಜ್ಯದ ಮುಂದಿನ ರಾಜನಾಗಿ ಪಟ್ಟಕ್ಕೆ ಬಂದರು?
34 ಉತ್ತರ ರಾಜನ ಸೋಲಿನ ಕುರಿತು ತಿಳಿಸುತ್ತಾ, ದೇವದೂತನು ಕೂಡಿಸಿದ್ದು: “ಆ ಮೇಲೆ ಅವನು [IIIನೆಯ ಆ್ಯಂಟಾಯೊಕಸನು] ಕರಾವಳಿಯ ಕಡೆಗೆ ಕಣ್ಣಿಟ್ಟು ಅಲ್ಲಿ ಬಹು ದೇಶಗಳನ್ನು ಆಕ್ರಮಿಸುವನು; ಆದರೆ ಅವನು [IIIನೆಯ ಆ್ಯಂಟಾಯೊಕಸನು] ಮಾಡುವ ಅವಮಾನವನ್ನು ಒಬ್ಬ ಸರದಾರನು [ರೋಮ್] ನಿಲ್ಲಿಸಿಬಿಡುವದಲ್ಲದೆ ಅದು ಅವನಿಗೇ ತಗಲುವಂತೆ [ರೋಮ್] ಮಾಡುವನು. ಆ ಮೇಲೆ [IIIನೆಯ ಆ್ಯಂಟಾಯೊಕಸನು] ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗಿ ಎಡವಿಬಿದ್ದು ಇಲ್ಲವಾಗುವನು.”—ದಾನಿಯೇಲ 11:18, 19.
35 ಆ “ಕರಾವಳಿ” ಪ್ರದೇಶಗಳು, ಮ್ಯಾಸಿಡೋನಿಯ, ಗ್ರೀಸ್, ಹಾಗೂ ಏಷ್ಯಾ ಮೈನರ್ನ ಕರಾವಳಿಗಳಾಗಿದ್ದವು. ಸಾ.ಶ.ಪೂ. 192ರಲ್ಲಿ ಗ್ರೀಸ್ನಲ್ಲಿ ಒಂದು ಯುದ್ಧವು ಆರಂಭವಾಯಿತು, ಮತ್ತು IIIನೆಯ ಆ್ಯಂಟಾಯೊಕಸನು ಗ್ರೀಸ್ಗೆ ಬರುವಂತೆ ಪ್ರಚೋದಿಸಲ್ಪಟ್ಟನು. ಅಲ್ಲಿನ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳಲಿಕ್ಕಾಗಿ ಸಿರಿಯದ ರಾಜನು ಮಾಡುತ್ತಿರುವ ಪ್ರಯತ್ನಗಳಿಂದ ಅಸಮಾಧಾನಗೊಂಡ ರೋಮ್, ಔಪಚಾರಿಕವಾಗಿ ಅವನ ಮೇಲೆ ಯುದ್ಧವನ್ನು ಘೋಷಿಸಿತು. ಥರ್ಮಾಪಲೀ ಎಂಬ ಸ್ಥಳದಲ್ಲಿ ಅವನು ರೋಮನರ ಕೈಯಿಂದ ಸೋಲನ್ನು ಅನುಭವಿಸಿದನು. ಸುಮಾರು ಒಂದು ವರ್ಷದ ಬಳಿಕ, ಸಾ.ಶ.ಪೂ. 190ರಲ್ಲಿ ನಡೆದ ಮ್ಯಾಗ್ನೀಷ ಕದನದಲ್ಲಿ ಸಂಪೂರ್ಣವಾಗಿ ಸೋತ ನಂತರ, ಗ್ರೀಸ್, ಏಷ್ಯಾ ಮೈನರ್, ಹಾಗೂ ಟಾರಸ್ ಮೌಂಟೆನ್ಸ್ನ ಪಶ್ಚಿಮ ದಿಕ್ಕಿನಲ್ಲಿದ್ದ ಕ್ಷೇತ್ರಗಳನ್ನು ಅವನು ಬಿಟ್ಟುಕೊಡಬೇಕಾಯಿತು. ಭಾರಿ ಮೊತ್ತದ ಕಪ್ಪಕಾಣಿಕೆಯನ್ನು ತೆರುವಂತೆ ರೋಮ್ ತಗಾದೆಮಾಡಿತು ಹಾಗೂ ಸಿರಿಯದ ಉತ್ತರ ರಾಜನ ಮೇಲೆ ತನ್ನ ಸರ್ವಾಧಿಕಾರವನ್ನು ಸ್ಥಾಪಿಸಿತು. ಗ್ರೀಸ್ ಹಾಗೂ ಏಷ್ಯಾ ಮೈನರ್ನಿಂದ ಓಡಿಸಲ್ಪಟ್ಟು, ತನ್ನ ಅಧಿಕಾಂಶ ನೌಕಾಬಲವನ್ನು ಕಳೆದುಕೊಂಡ IIIನೆಯ ಆ್ಯಂಟಾಯೊಕಸನು ‘ಸ್ವದೇಶದ ದುರ್ಗಗಳ ಕಡೆಗೆ,’ ಅಂದರೆ ಸಿರಿಯಕ್ಕೆ ಹಿಂದಿರುಗಿದನು. ರೋಮನರು ‘ಅವನು ಮಾಡಿದ ಅವಮಾನವನ್ನು ಅವನಿಗೇ ತಗಲುವಂತೆ ಮಾಡಿದ್ದರು.’ ಸಾ.ಶ.ಪೂ. 187ರಲ್ಲಿ, ಪರ್ಷಿಯದ ಎಲಮೇಅಸ್ನಲ್ಲಿದ್ದ ಒಂದು ದೇವಾಲಯವನ್ನು ಸುಲಿಗೆಮಾಡಲು ಪ್ರಯತ್ನಿಸುತ್ತಿದ್ದಾಗ IIIನೆಯ ಆ್ಯಂಟಾಯೊಕಸನು ಮರಣಪಟ್ಟನು. ಹೀಗೆ ಅವನು ಮರಣದಲ್ಲಿ ‘ಎಡವಿಬಿದ್ದು’ ಇಲ್ಲವಾದನು. ಅವನಿಗೆ ಬದಲಾಗಿ ಅವನ ಮಗನಾದ IVನೆಯ ಸೆಲ್ಯೂಕಸನು, ಮುಂದಿನ ಉತ್ತರ ರಾಜನಾಗಿ ಪಟ್ಟಕ್ಕೆ ಬಂದನು.
ಹೋರಾಟವು ಮುಂದುವರಿಯುತ್ತದೆ
36. (ಎ) ದಕ್ಷಿಣ ರಾಜನು ಹೇಗೆ ಹೋರಾಟವನ್ನು ಮುಂದುವರಿಸಲು ಪ್ರಯತ್ನಿಸಿದನು, ಮತ್ತು ಅವನಿಗೆ ಏನು ಸಂಭವಿಸಿತು? (ಬಿ) IVನೆಯ ಸೆಲ್ಯೂಕಸನು ಹೇಗೆ ಮರಣಹೊಂದಿದನು, ಮತ್ತು ಅವನಿಗೆ ಬದಲಾಗಿ ಯಾರು ರಾಜನಾದನು?
36 ದಕ್ಷಿಣ ರಾಜನಾದ Vನೆಯ ಟಾಲೆಮಿಯು, ಕ್ಲಿಯೋಪಾತ್ರಳ ವರದಕ್ಷಿಣೆಯೋಪಾದಿ ತನಗೆ ಬರಬೇಕಾಗಿದ್ದ ಪ್ರಾಂತಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದಾಗ, ವಿಷವು ಅವನ ಪ್ರಯತ್ನವನ್ನು ನಿಲ್ಲಿಸಿತು. ಅವನಿಗೆ ಬದಲಾಗಿ VIನೆಯ ಟಾಲೆಮಿಯು ರಾಜನಾದನು. IVನೆಯ ಸೆಲ್ಯೂಕಸನ ಕುರಿತಾಗಿ ಏನು? ರೋಮ್ ಹೊರಿಸಿದ್ದ ಭಾರಿ ದಂಡವನ್ನು ತೆರಲಿಕ್ಕಾಗಿ ಹಣದ ಅಗತ್ಯವಿದ್ದುದರಿಂದ, ಯೆರೂಸಲೇಮಿನ ದೇವಾಲಯದಲ್ಲಿ ಶೇಖರಿಸಿಡಲ್ಪಟ್ಟಿದೆಯೆಂದು ಹೇಳಲಾಗುತ್ತಿದ್ದ ಸಂಪತ್ತನ್ನು ವಶಪಡಿಸಿಕೊಳ್ಳಲಿಕ್ಕಾಗಿ, ಅವನು ತನ್ನ ಕೋಶಾಧಿಕಾರಿಯಾದ ಹೀಲಿಓಡೋರಸ್ನನ್ನು ಕಳುಹಿಸಿದನು. ಹೀಲಿಓಡೋರಸನಿಗೆ ಸಿಂಹಾಸನವನ್ನೇರುವ ಬಯಕೆಯಿತ್ತು, ಆದುದರಿಂದ ಅವನು IVನೆಯ ಸೆಲ್ಯೂಕಸನನ್ನು ಕೊಲೆಮಾಡಿದನು. ಆದರೂ, ಪೆರ್ಗಮಮ್ನ ರಾಜನಾದ ಯೂಮನೀಸ್ ಹಾಗೂ ಅವನ ತಮ್ಮನಾದ ಆ್ಯಟಲಸ್ರು ಸೇರಿಕೊಂಡು, ಕೊಲೆಯಾದ ರಾಜನ ತಮ್ಮನಾದ IVನೆಯ ಆ್ಯಂಟಾಯೊಕಸ್ನನ್ನು ಸಿಂಹಾಸನಕ್ಕೆ ಏರಿಸಿದರು.
37. (ಎ) ನಾಲ್ಕನೆಯ ಆ್ಯಂಟಾಯೊಕಸನು, ಯೆಹೋವ ದೇವರಿಗಿಂತಲೂ ತಾನೇ ಬಲಿಷ್ಠನು ಎಂಬುದನ್ನು ತೋರಿಸಲು ಹೇಗೆ ಪ್ರಯತ್ನಿಸಿದನು? (ಬಿ) IVನೆಯ ಆ್ಯಂಟಾಯೊಕಸನು ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಅಪವಿತ್ರಗೊಳಿಸಿದ್ದರಿಂದ ಏನು ಸಂಭವಿಸಿತು?
37 ಉತ್ತರದ ಹೊಸ ರಾಜನಾದ IVನೆಯ ಆ್ಯಂಟಾಯೊಕಸನು, ಯೆಹೋವನ ಆರಾಧನಾ ಏರ್ಪಾಡನ್ನು ನಿರ್ಮೂಲಮಾಡಲು ಪ್ರಯತ್ನಿಸುವ ಮೂಲಕ, ತಾನೇ ದೇವರಿಗಿಂತ ಬಲಿಷ್ಠನು ಎಂಬುದನ್ನು ತೋರಿಸಲು ಮುಂದಾದನು. ಯೆಹೋವನನ್ನು ಕಡೆಗಣಿಸಿ, ಅವನು ಯೆರೂಸಲೇಮಿನ ದೇವಾಲಯವನ್ನು ಸೂಸ್ ಅಥವಾ ಜೂಪಿಟರ್ ದೇವತೆಗೆ ಮೀಸಲಾಗಿಟ್ಟನು. ಸಾ.ಶ.ಪೂ. 167ರ ಡಿಸೆಂಬರ್ ತಿಂಗಳಿನಲ್ಲಿ, ಎಲ್ಲಿ ಯೆಹೋವನಿಗೆ ದಿನಾಲೂ ಯಜ್ಞನೈವೇದ್ಯಗಳನ್ನು ಅರ್ಪಿಸಲಾಗುತ್ತಿತ್ತೋ ಆ ದೇವಾಲಯದ ಅಂಗಣದಲ್ಲಿದ್ದ ದೊಡ್ಡ ಯಜ್ಞವೇದಿಯ ಮೇಲೆ ಒಂದು ವಿಧರ್ಮಿ ಯಜ್ಞವೇದಿಯು ಸ್ಥಾಪಿಸಲ್ಪಟ್ಟಿತು. ಹತ್ತು ದಿನಗಳ ತರುವಾಯ, ಆ ವಿಧರ್ಮಿ ಯಜ್ಞವೇದಿಯ ಮೇಲೆ ಸೂಸ್ ದೇವತೆಗೆ ಬಲಿಯು ಅರ್ಪಿಸಲ್ಪಟ್ಟಿತು. ಈ ಅಪವಿತ್ರೀಕರಣದಿಂದಾಗಿ, ಮಕಬೀಯರ ನಾಯಕತ್ವದ ಕೆಳಗೆ ಯೆಹೂದ್ಯರು ದಂಗೆಯೆದ್ದರು. IVನೆಯ ಆ್ಯಂಟಾಯೊಕಸನು ಮೂರು ವರ್ಷಗಳ ವರೆಗೆ ಯೆಹೂದ್ಯರ ವಿರುದ್ಧ ಹೋರಾಡಿದನು. ಸಾ.ಶ.ಪೂ. 164ರಲ್ಲಿ, ದೇವಾಲಯದ ಅಪವಿತ್ರೀಕರಣವಾಗಿ ಒಂದು ವರ್ಷ ಕಳೆದ ಬಳಿಕ, ಜೂಡಾಸ್ ಮಕಬೀಯಸ್ನು ಆ ದೇವಾಲಯವನ್ನು ಪುನಃ ಯೆಹೋವನಿಗೆ ಪ್ರತಿಷ್ಠಾಪಿಸಿದನು. ಮತ್ತು ಆಗ ಹನುಕಾ ಎಂಬ ದೇವಾಲಯ ಪ್ರತಿಷ್ಠೆಯ ಹಬ್ಬವು ಸ್ಥಾಪಿಸಲ್ಪಟ್ಟಿತು.—ಯೋಹಾನ 10:22.
38. ಮಕಬೀಯರ ಆಳ್ವಿಕೆಯು ಹೇಗೆ ಕೊನೆಗೊಂಡಿತು?
38 ಬಹುಶಃ ಸಾ.ಶ.ಪೂ. 161ರಲ್ಲಿ ಮಕಬೀಯರು ರೋಮ್ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು, ಸಾ.ಶ.ಪೂ. 104ರಲ್ಲಿ ಒಂದು ರಾಜ್ಯವನ್ನು ಸ್ಥಾಪಿಸಿದರು. ಆದರೆ ಇವರು ಹಾಗೂ ಸಿರಿಯದ ಉತ್ತರ ರಾಜನ ನಡುವಿನ ಸಂಘರ್ಷವು ಹಾಗೆಯೇ ಮುಂದುವರಿಯಿತು. ಕೊನೆಯದಾಗಿ, ಹಸ್ತಕ್ಷೇಪಮಾಡುವಂತೆ ರೋಮ್ಗೆ ಕೇಳಿಕೊಳ್ಳಲಾಯಿತು. ಹೀಗೆ ರೋಮನ್ ಜನರಲ್ ನೈಯುಸ್ ಪಾಂಪೀಯು, ಮೂರು ತಿಂಗಳುಗಳ ವರೆಗೆ ಮುತ್ತಿಗೆ ಹಾಕಿದ ಬಳಿಕ ಸಾ.ಶ.ಪೂ. 63ರಲ್ಲಿ ಯೆರೂಸಲೇಮನ್ನು ವಶಪಡಿಸಿಕೊಂಡನು. ಸಾ.ಶ.ಪೂ. 39ರಲ್ಲಿ ರೋಮನ್ ಶಾಸನಸಭೆಯು, ಏದೋಮ್ಯನಾದ ಹೆರೋದನನ್ನು ಯೂದಾಯದ ರಾಜನನ್ನಾಗಿ ನೇಮಿಸಿತು. ಮಕಬೀಯರ ಆಳ್ವಿಕೆಯನ್ನು ಕೊನೆಗೊಳಿಸುತ್ತಾ, ಅವನು ಸಾ.ಶ.ಪೂ. 37ರಲ್ಲಿ ಯೆರೂಸಲೇಮನ್ನು ಸ್ವಾಧೀನಪಡಿಸಿಕೊಂಡನು.
39. ದಾನಿಯೇಲ 11:1-19ನ್ನು ಪರಿಗಣಿಸುವ ಮೂಲಕ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ?
39 ಹೋರಾಟ ನಡಿಸುತ್ತಿರುವ ಇಬ್ಬರು ರಾಜರ ಕುರಿತಾದ ಪ್ರವಾದನೆಯ ಮೊದಲ ಭಾಗವು ಸವಿವರವಾಗಿ ನೆರವೇರುವುದನ್ನು ನೋಡುವುದು ಎಷ್ಟು ರೋಮಾಂಚಕ ಸಂಗತಿಯಾಗಿದೆ! ನಿಜವಾಗಿಯೂ, ಪ್ರವಾದನಾ ಸಂದೇಶವು ದಾನಿಯೇಲನಿಗೆ ಕೊಡಲ್ಪಟ್ಟ ಸುಮಾರು 500 ವರ್ಷಗಳ ನಂತರದ ಇತಿಹಾಸದೊಳಗೆ ಇಣಿಕಿ ನೋಡುವುದು ಹಾಗೂ ಉತ್ತರ ರಾಜ ಮತ್ತು ದಕ್ಷಿಣ ರಾಜನ ಸ್ಥಾನವನ್ನು ಪಡೆದುಕೊಳ್ಳುವವರನ್ನು ಗುರುತಿಸುವುದು ಎಷ್ಟು ಭಾವೋದ್ರೇಕಗೊಳಿಸುವ ವಿಷಯವಾಗಿದೆ! ಆದರೂ, ಯೇಸು ಭೂಮಿಯ ಮೇಲಿದ್ದಾಗಿನ ಸಮಯದಿಂದ ನಮ್ಮ ದಿನಗಳ ವರೆಗೆ ಈ ಇಬ್ಬರು ರಾಜರ ನಡುವಿನ ಹೋರಾಟವು ಮುಂದುವರಿದಂತೆ, ಅವರ ರಾಜಕೀಯ ಸ್ವರೂಪಗಳು ಬದಲಾಗುತ್ತಾ ಹೋಗುತ್ತವೆ. ಈ ಪ್ರವಾದನೆಯಲ್ಲಿ ಪ್ರಕಟಪಡಿಸಿರುವ ಆಸಕ್ತಿದಾಯಕ ವಿವರಗಳೊಂದಿಗೆ ಐತಿಹಾಸಿಕ ಬೆಳವಣಿಗೆಗಳನ್ನು ಸರಿಹೊಂದಿಸುವ ಮೂಲಕ, ಹೋರಾಡುತ್ತಿರುವ ಈ ಇಬ್ಬರು ರಾಜರನ್ನು ನಾವು ಗುರುತಿಸಲು ಶಕ್ತರಾಗುವೆವು.
ನೀವೇನನ್ನು ಗ್ರಹಿಸಿದಿರಿ?
• ಗ್ರೀಕ್ ರಾಜ್ಯಗಳಿಂದ ಯಾವ ಪ್ರಬಲ ರಾಜರ ಎರಡು ವಂಶಗಳು ಉದಯಿಸಿದವು, ಮತ್ತು ಆ ರಾಜರು ಯಾವ ಹೋರಾಟವನ್ನು ಆರಂಭಿಸಿದರು?
• ದಾನಿಯೇಲ 11:6ರಲ್ಲಿ ಮುಂತಿಳಿಸಲ್ಪಟ್ಟಂತೆ, ಆ ಇಬ್ಬರು ರಾಜರು ಹೇಗೆ ‘ನ್ಯಾಯಸಮ್ಮತವಾದ ಒಪ್ಪಂದವನ್ನು ಮಾಡಿಕೊಂಡರು’?
• ಈ ಕೆಳಗಿನ ರಾಜರ ನಡುವೆ ಹೋರಾಟವು ಹೇಗೆ ಮುಂದುವರಿಯಿತು?
IIನೆಯ ಸೆಲ್ಯೂಕಸ್ ಮತ್ತು IIIನೆಯ ಟಾಲೆಮಿ (ದಾನಿಯೇಲ 11:7-9)?
IIIನೆಯ ಆ್ಯಂಟಾಯೊಕಸ್ ಮತ್ತು IVನೆಯ ಟಾಲೆಮಿ (ದಾನಿಯೇಲ 11:10-12)?
IIIನೆಯ ಆ್ಯಂಟಾಯೊಕಸ್ ಮತ್ತು Vನೆಯ ಟಾಲೆಮಿ (ದಾನಿಯೇಲ 11:13-16)?
• ಒಂದನೆಯ ಕ್ಲಿಯೋಪಾತ್ರ ಹಾಗೂ Vನೆಯ ಟಾಲೆಮಿಯ ನಡುವಿನ ವಿವಾಹದ ಉದ್ದೇಶವು ಏನಾಗಿತ್ತು, ಮತ್ತು ಆ ಒಳಸಂಚು ಏಕೆ ಅಸಫಲವಾಯಿತು (ದಾನಿಯೇಲ 11:17-19)?
• ದಾನಿಯೇಲ 11:1-19ಕ್ಕೆ ಗಮನಕೊಡುವುದು, ನಿಮಗೆ ಹೇಗೆ ಪ್ರಯೋಜನವನ್ನು ತಂದಿದೆ?
[Chart/Pictures on page 228]
ದಾನಿಯೇಲ 11:5-19ರಲ್ಲಿ ತಿಳಿಸಲ್ಪಟ್ಟಿರುವ ಅರಸರು
ಉತ್ತರ ದಕ್ಷಿಣ
ರಾಜ ರಾಜ
ದಾನಿಯೇಲ 11:5 Iನೆಯ ಸೆಲ್ಯೂಕಸ್ ನೈಕೇಟರ್ Iನೆಯ ಟಾಲೆಮಿ
ದಾನಿಯೇಲ 11:6 IIನೆಯ ಆ್ಯಂಟಾಯೊಕಸ್ IIನೆಯ ಟಾಲೆಮಿ
(ಹೆಂಡತಿ ಲೇಆಡಸೀ) (ಮಗಳು ಬೆರನೈಸೀ)
ದಾನಿಯೇಲ 11:7-9 IIನೆಯ ಸೆಲ್ಯೂಕಸ್ IIIನೆಯ ಟಾಲೆಮಿ
ದಾನಿಯೇಲ 11:10-12 IIIನೆಯ ಆ್ಯಂಟಾಯೊಕಸ್ IVನೆಯ ಟಾಲೆಮಿ
ದಾನಿಯೇಲ 11:13-19 IIIನೆಯ ಆ್ಯಂಟಾಯೊಕಸ್ Vನೆಯ ಟಾಲೆಮಿ
(ಮಗಳಾದ Iನೆಯ ಕ್ಲಿಯೋಪಾತ್ರ) ಉತ್ತರಾಧಿಕಾರಿ:
ಉತ್ತರಾಧಿಕಾರಿಗಳು: VIನೆಯ ಟಾಲೆಮಿ
IVನೆಯ ಸೆಲ್ಯೂಕಸ್ ಮತ್ತು
IVನೆಯ ಆ್ಯಂಟಾಯೊಕಸ್
[ಚಿತ್ರ]
II ನೆಯ ಟಾಲೆಮಿ ಹಾಗೂ ಅವನ ಹೆಂಡತಿಯನ್ನು ಚಿತ್ರಿಸುತ್ತಿರುವ ನಾಣ್ಯ
[ಚಿತ್ರ]
I ನೆಯ ಸೆಲ್ಯೂಕಸ್ ನೈಕೇಟರ್
[ಚಿತ್ರ]
III ನೆಯ ಆ್ಯಂಟಾಯೊಕಸ್
[ಚಿತ್ರ]
VI ನೆಯ ಟಾಲೆಮಿ
[ಚಿತ್ರ]
ಐಗುಪ್ತದ ಕಾರ್ನಾಕ್ನಲ್ಲಿರುವ IIIನೆಯ ಟಾಲೆಮಿಯ ಹೆಬ್ಬಾಗಿಲು
[Map/Pictures on page 216, 217]
(For fully formatted text, see publication)
“ಉತ್ತರ ರಾಜ” ಹಾಗೂ “ದಕ್ಷಿಣ ರಾಜ” ಎಂಬ ಬಿರುದುಗಳು, ದಾನಿಯೇಲನ ಜನರು ವಾಸಿಸುತ್ತಿದ್ದ ಸ್ಥಳದಿಂದ ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಅಸ್ತಿತ್ವದಲ್ಲಿದ್ದ ಅರಸರನ್ನು ಸೂಚಿಸುತ್ತವೆ
ಮ್ಯಾಸಿಡೋನಿಯ
ಗ್ರೀಸ್
ಏಷ್ಯಾ ಮೈನರ್
ಇಸ್ರೇಲ್
ಲಿಬ್ಯ
ಈಜಿಪ್ಟ್
ಇಥಿಯೋಪಿಯ
ಸಿರಿಯ
ಬಾಬೆಲ್
ಅರೇಬಿಯ
[ಚಿತ್ರ]
II ನೆಯ ಟಾಲೆಮಿ
[ಚಿತ್ರ]
ಮಹಾ ಆ್ಯಂಟಾಯೊಕಸ್
[ಚಿತ್ರ]
ಮಹಾ ಆ್ಯಂಟಾಯೊಕಸ್ನಿಂದ ಚಲಾವಣೆಗೆ ತರಲ್ಪಟ್ಟ ಅಧಿಕೃತ ಶಾಸನಗಳಿರುವ ಒಂದು ಕಲ್ಲಿನ ಫಲಕ
[ಚಿತ್ರ]
Vನೆಯ ಟಾಲೆಮಿಯನ್ನು ಚಿತ್ರಿಸುತ್ತಿರುವ ನಾಣ್ಯ
[ಚಿತ್ರ]
III ನೆಯ ಟಾಲೆಮಿ ಹಾಗೂ ಅವನ ಉತ್ತರಾಧಿಕಾರಿಗಳು, ಐಗುಪ್ತದ ಮೇಲ್ಪ್ರದೇಶದಲ್ಲಿರುವ ಇಡ್ಫೂನಲ್ಲಿ ಹಾರಸ್ನ ಈ ದೇವಾಲಯವನ್ನು ಕಟ್ಟಿದರು
[ಪುಟ 321 ರಲ್ಲಿ ಇಡೀ ಪುಟದ ಚಿತ್ರ]
[Picture on page 215]
I ನೆಯ ಸೆಲ್ಯೂಕಸ್ ನೈಕೇಟರ್
[Picture on page 218]
I ನೆಯ ಟಾಲೆಮಿ