ನಿಜ ಪ್ರೀತಿಯು ಪ್ರತಿಫಲದಾಯಕ
“ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯಲು ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
1, 2. ನಿಜ ಪ್ರೀತಿ ನಮಗೆ ಸ್ವಂತವಾಗಿ ಏಕೆ ಪ್ರತಿಫಲದಾಯಕವಾಗಿದೆ?
ನಿಸ್ವಾರ್ಥ ಪ್ರೀತಿಯು ಮಹತ್ತಮವಾದ, ಅತ್ಯಂತ ಘನವಾದ ಮತ್ತು ಅತ್ಯಮೂಲ್ಯವಾದ ಗುಣ. ಈ ಪ್ರೀತಿ (ಗ್ರೀಕ್, ಅಗಾಪೆ) ಹೊಂದಿಕೆಯಾಗಿ ನಮ್ಮಿಂದ ಹೆಚ್ಚನ್ನು ಕೇಳಿಕೊಳ್ಳುತ್ತದೆ. ಆದರೆ, ನಾವು ನ್ಯಾಯ ಮತ್ತು ಪ್ರೀತಿಯ ದೇವರಿಂದ ಸೃಷ್ಟಿಸಲ್ಪಟ್ಟವರಾಗಿರುವುದರಿಂದ ಈ ನಿಸ್ವಾರ್ಥ ಪ್ರೇಮವು ಪ್ರತಿಫಲದಾಯಕವೆಂದು ಕಂಡುಕೊಳ್ಳುತ್ತೇವೆ. ಇದು ಹೀಗೇಕೆ?
2 ನಿಜ ಪ್ರೀತಿಯು ಪ್ರತಿಫಲದಾಯಕವಾಗಿರುವುದಕ್ಕೆ ಒಂದು ಕಾರಣವು, ಮನಶ್ಶಾರೀರಕ ಮೂಲಸೂತ್ರವು, ಅಂದರೆ ನಮ್ಮ ಶರೀರದ ಮೇಲೆ ಯೋಚನೆ ಮತ್ತು ಭಾವುಕತೆಗಳು ಮಾಡುವ ಪರಿಣಾಮವು ಇದರಲ್ಲಿ ಸೇರಿಕೊಂಡಿರುವುದರಿಂದಲೆ. ಒತ್ತಡವನ್ನು ಅಭ್ಯಾಸ ಮಾಡಿರುವ ಪಂಡಿತರೊಬ್ಬರು ಹೇಳಿದ್ದು: “‘ನೆರೆಯವನನ್ನು ಪ್ರೀತಿಸು’ ಎಂಬುದು ಕೊಡಲ್ಪಟ್ಟಿರುವ ಅತ್ಯಂತ ವಿವೇಕದ ಸಲಹೆಗಳಲ್ಲಿ ಒಂದಾಗಿದೆ.” ಹೌದು, “ಪರೋಪಕಾರವು ತನಗೂ ಉಪಕಾರ.” (ಜ್ಞಾನೋಕ್ತಿ 11:17) “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು” ಎಂಬುದೂ ಅಷ್ಟೆ ಅರ್ಥಗರ್ಭಿತವಾದ ಮಾತು.—ಜ್ಞಾನೋಕ್ತಿ 11:25; ಇದಕ್ಕೆ ಲೂಕ 6:38 ಹೋಲಿಸಿ.
3. ನಿಜ ಪ್ರೀತಿಯನ್ನು ಪ್ರತಿಫಲದಾಯಕ ಮಾಡಲು ದೇವರು ಹೇಗೆ ವರ್ತಿಸುತ್ತಾನೆ?
3 ನಿಸ್ವಾರ್ಥಕ್ಕೆ ದೇವರು ಪ್ರತಿಫಲ ನೀಡುವ ಕಾರಣದಿಂದಲೂ ಪ್ರೀತಿ ಪ್ರತಿಫಲದಾಯಕ. ನಾವು ಓದುವುದು: “ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡುವವನು; ಆ ಉಪಕಾರಕ್ಕೆ ಕರ್ತನೇ ಪ್ರತ್ಯುಪಕಾರ ಮಾಡುವನು.” (ಜ್ಞಾನೋಕ್ತಿ 19:17) ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆ ಸಾರುವಾಗ ಈ ಮಾತುಗಳಿಗೆ ಹೊಂದಿಕೆಯಾಗಿ ವರ್ತಿಸುತ್ತಾರೆ. ‘ದೇವರು ತಮ್ಮ ಕೆಲಸವನ್ನು ಮತ್ತು ತಾವು ಆತನ ನಾಮಕ್ಕೆ ತೋರಿಸಿದ ಪ್ರೀತಿಯನ್ನು ಮರೆಯುವುದಕ್ಕೆ ಅನೀತಿವಂತನಲ್ಲ’ ಎಂದು ಅವರು ಬಲ್ಲರು.—ಇಬ್ರಿಯ 6:10.
ನಮ್ಮ ಅತ್ಯುತ್ತಮ ಮಾದರಿ
4. ನಿಜ ಪ್ರೀತಿ ಪ್ರತಿಫಲದಾಯಕವಾಗಿದೆ ಎಂಬುದಕ್ಕೆ ಯಾರು ಅತ್ಯುತ್ತಮ ಮಾದರಿಯನ್ನು ಒದಗಿಸುತ್ತಾನೆ, ಮತ್ತು ಆತನಿದನ್ನು ಹೇಗೆ ಮಾಡಿದ್ದಾನೆ?
4 ನಿಜ ಪ್ರೀತಿ ಪ್ರತಿಫಲದಾಯಕವೆಂಬುದಕ್ಕೆ ಯಾವುದು ಅತ್ಯುತ್ತಮ ಮಾದರಿಯನ್ನು ಒದಗಿಸುತ್ತದೆ? ಇದನ್ನು ಬೇರೆ ಯಾವನೂ ಅಲ್ಲ, ದೇವರೇ ಒದಗಿಸಿದನು! ಆತನು “[ಮಾನವಸಂತತಿಯ] ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು.” (ಯೋಹಾನ 3:16) ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸುವವರು ನಿತ್ಯಜೀವ ಪಡೆಯುವಂತೆ ತನ್ನ ಪುತ್ರನನ್ನು ಕೊಟ್ಟದ್ದರಿಂದ ಯೆಹೋವನಿಗೆ ತುಂಬ ಬೆಲೆಯನ್ನು ತೆರಬೇಕಾಗಿ ಬಂತಾದರೂ ಆತನಿಗೆ ಪ್ರೀತಿ ಮತ್ತು ಸಹಾನುಭೂತಿ ಇದೆಯೆಂದು ಇದು ತೋರಿಸಿತು. ‘ಇಸ್ರಾಯೇಲ್ಯರು ಐಗುಪ್ತದಲ್ಲಿ ಶ್ರಮೆ ಪಟ್ಟಾಗ ಆತನೂ ಶ್ರಮೆಪಟ್ಟನು’ ಎಂಬುದರಿಂದ ಈ ನಿಜತ್ವವು ಇನ್ನೂ ಹೆಚ್ಚು ತೋರಿಸಲ್ಪಡುತ್ತದೆ. (ಯೆಶಾಯ 63:9) ಹಾಗಾದರೆ, ತನ್ನ ಪುತ್ರನು ಆ ಯಾತನೆಯ ಕಂಬದ ಮೇಲೆ ಕಷ್ಟಾನುಭವಿಸುವುದನ್ನು ನೋಡಲು ಮತ್ತು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಕೂಗುವುದನ್ನು ಕೇಳಲು ಯೆಹೋವನಿಗೆ ಎಷ್ಟೊಂದು ಬೇನೆಯಾಗಿದ್ದಿರಬೇಕು?—ಮತ್ತಾಯ 27:46.
5. ದೇವರು ಮಾನವಕುಲವನ್ನು ಎಷ್ಟೊ ಪ್ರೀತಿಸಿ ತನ್ನ ಪುತ್ರನನ್ನು ಯಜ್ಞವಾಗಿ ಕೊಟ್ಟ ಕಾರಣ ಏನು ಸಂಭವಿಸಿದೆ?
5 ಯೆಹೋವನು ತನ್ನ ಸ್ವಂತ ನಿಜ ಪ್ರೀತಿಯ ಅಭಿವ್ಯಕ್ತಿಯನ್ನು ಪ್ರತಿಫಲದಾಯಕವಾಗಿ ಕಂಡನೊ? ಹೌದು, ನಿಶ್ಚಯವಾಗಿ. ಪ್ರಧಾನವಾಗಿ, ಸೈತಾನನು ತಂದ ಸಕಲ ಉಪದ್ರವಗಳ ಎದುರಿನಲ್ಲೂ ಯೇಸು ನಂಬಿಗಸ್ತಿಗೆ ತೋರಿಸಿದ ಕಾರಣ ದೇವರು ಸೈತಾನನ ಮುಖಕ್ಕೆ ಎಂಥ ಉತ್ತಮ ಉತ್ತರವನ್ನು ಎಸೆಯುವ ಹಾಗಾಯಿತು! (ಜ್ಞಾನೋಕ್ತಿ 27:11) ವಾಸ್ತವವೇನಂದರೆ, ಯೆಹೋವನ ನಾಮಕ್ಕೆ ಹಚ್ಚಿದ ಕಳಂಕವನ್ನು ತೆಗೆಯುವ, ಭೂಮಿಗೆ ಪ್ರಮೋದವನವನ್ನು ಪುನಃಸ್ಥಾಪಿಸುವ ಮತ್ತು ಲಕ್ಷಗಟ್ಟಲೆ ಜನರಿಗೆ ನಿತ್ಯಜೀವವನ್ನು ಒದಗಿಸುವ, ಈ ಎಲ್ಲ ದೇವರ ರಾಜ್ಯದ ಸಾಧನೆಗಳು ನೆರವೇರುವುದು, ದೇವರು ಮಾನವಸಂತತಿಯನ್ನು ಎಷ್ಟೊ ಪ್ರೀತಿಸಿ ತನ್ನ ಹೃದಯಕ್ಕೆ ಅತಿ ಪ್ರಿಯವಾದ ನಿಧಿಯನ್ನು ಯಜ್ಞವಾಗಿ ಕೊಟ್ಟ ಕಾರಣದಿಂದಲೆ.
ಯೇಸುವಿನ ಉತ್ಕೃಷ್ಟ ಮಾದರಿ
6. ಯೇಸು ಏನು ಮಾಡುವಂತೆ ಪ್ರೀತಿ ಪ್ರಚೋದಿಸಿತು?
6 ನಿಜ ಪ್ರೀತಿ ಪ್ರತಿಫಲದಾಯಕ ಎಂಬುದರ ಇನ್ನೊಂದು ಉತ್ಕೃಷ್ಟ ಮಾದರಿ ದೇವಪುತ್ರನಾದ ಯೇಸು ಕ್ರಿಸ್ತನದ್ದು. ಅವನು ತನ್ನ ಸ್ವರ್ಗೀಯ ಪಿತನನ್ನು ಪ್ರೀತಿಸುತ್ತಾನೆ ಮತ್ತು ಈ ಪ್ರೀತಿ, ಏನೇ ಆದರೂ ಯೇಸು ಯೆಹೋವನ ಚಿತ್ತವನ್ನು ಮಾಡುವಂತೆ ಅವನನ್ನು ಪ್ರೇರಿಸಿದೆ. (ಯೋಹಾನ 14:31; ಫಿಲಿಪ್ಪಿ 2:5-8) ಹಲವು ಬಾರಿ ಯೇಸು ತನ್ನ ತಂದೆಗೆ “ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ” ಪ್ರಾರ್ಥಿಸಬೇಕಾಗಿ ಬಂದರೂ, ಯೇಸು ದೇವರಿಗೆ ಪ್ರೀತಿಯನ್ನು ತೋರಿಸುತ್ತಾ ಹೋದನು.—ಇಬ್ರಿಯ 5:7.
7. ನಿಜ ಪ್ರೀತಿ ಯಾವ ವಿಧಗಳಲ್ಲಿ ಪ್ರತಿಫಲದಾಯಕವೆಂದು ಯೇಸು ಕಂಡು ಹಿಡಿದನು?
7 ಇಂಥ ಆತ್ಮತ್ಯಾಗದ ಪ್ರೀತಿಯನ್ನು ತೋರಿಸಿದುದಕ್ಕಾಗಿ ಯೇಸುವಿಗೆ ಪ್ರತಿಫಲ ದೊರೆಯಿತೆ? ಹೌದು, ನಿಶ್ಚಯವಾಗಿ! ಅವನ ಮೂರುವರೆ ವರುಷಗಳ ಶುಶ್ರೂಷೆಯಲ್ಲಿ ಅವನು ಮಾಡಿದ ಸಕಲ ಸತ್ಕಾರ್ಯಗಳಿಂದ ಅವನು ಪಡೆದ ಆನಂದದ ಕುರಿತು ಯೋಚಿಸಿರಿ. ಅವನು ಜನರಿಗೆ ಆತ್ಮಿಕವಾಗಿಯೂ ಶಾರೀರಿಕವಾಗಿಯೂ ಎಷ್ಟೊಂದು ಸಹಾಯ ಮಾಡಿದನು! ಎಲ್ಲಕ್ಕೂ ಮಿಗಿಲಾಗಿ, ಸೈತಾನನು ತರಬಲ್ಲ ಸಕಲ ವಿಷಯಗಳ ಎದುರಿನಲ್ಲಿ ಪರಿಪೂರ್ಣ ಮನುಷ್ಯನು ದೇವರಿಗೆ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಬಲ್ಲನೆಂಬುದನ್ನು ತೋರಿಸಿದುದರ ಮೂಲಕ ಪಿಶಾಚನು ಸುಳ್ಳನೆಂದು ರುಜುಪಡಿಸುವ ಸಂತೃಪ್ತಿ ಯೇಸುವಿಗಿತ್ತು. ಇದಲ್ಲದೆ, ದೇವರ ನಂಬಿಗಸ್ತ ಸೇವಕನಾದ ಯೇಸುವಿಗೆ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನವಾದ ಬಳಿಕ ಅಮರತ್ವವೆಂಬ ಮಹಾ ಪ್ರತಿಫಲ ದೊರೆಯಿತು. (ರೋಮಾಪುರ 6:9; ಫಿಲಿಪ್ಪಿ 2:9-11; 1 ತಿಮೊಥಿ 6:15, 16; ಇಬ್ರಿಯ 1:3, 4) ಮತ್ತು, ಅರ್ಮಗೆದ್ದೋನಿನಲ್ಲಿ ಮತ್ತು ಸಹಸ್ರ ವರುಷಗಳ ಆಳಿಕೆಯಲ್ಲಿ, ಪ್ರಮೋದವನವು ಭೂಮಿಗೆ ಪುನಃಸ್ಥಾಪಿಸಲ್ಪಟ್ಟಾಗ ಮತ್ತು ಕೋಟ್ಯಂತರ ಜನರು ಸತ್ತವರೊಳಗಿಂದ ಎದ್ದು ಬರುವಾಗ ಅವನ ಮುಂದೆ ಅದೆಷ್ಟು ಆಶ್ಚರ್ಯಕರವಾದ ಸುಯೋಗಗಳಿವೆ! (ಲೂಕ 23:43) ನಿಜ ಪ್ರೀತಿಯು ಪ್ರತಿಫಲದಾಯಕವೆಂದು ಯೇಸು ತಿಳಿದಿದ್ದನೆಂಬುದಕ್ಕೆ ಸಂದೇಹವೇ ಇಲ್ಲ.
ಪೌಲನ ಮಾದರಿ
8. ದೇವರ ಮತ್ತು ನೆರೆಯವನ ಕಡೆಗೆ ಪೌಲನಿಗಿದ್ದ ನಿಜ ಪ್ರೀತಿಯ ಕಾರಣ ಪೌಲನ ಅನುಭವವೇನು?
8 ಅಪೊಸ್ತಲ ಪೇತ್ರನು ಒಮ್ಮೆ ಯೇಸುವಿಗೆ: “ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು” ಎಂದು ಕೇಳಲಾಗಿ ಯೇಸು ಅಂಶಿಕವಾಗಿ ಉತ್ತರಿಸಿದ್ದು: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣತ್ಣಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.” (ಮತ್ತಾಯ 19:27-29) ಇದರ ಒಂದು ಗಮನಾರ್ಹ ಮಾದರಿ, ವಿಶೇಷವಾಗಿ ಲೂಕ ಮತ್ತು ಅಪೊಸ್ತಲರ ಕೃತ್ಯ ಪುಸ್ತಕಗಳಲ್ಲಿ ದಾಖಲೆಯಾಗಿರುವಂತೆ ಅನೇಕಾಶೀರ್ವಾದಗಳನ್ನು ಅನುಭವಿಸಿರುವ ಅಪೊಸ್ತಲ ಪೌಲನದ್ದಾಗಿದೆ. ದೇವರ ಮತ್ತು ನೆರೆಯವನ ಕಡೆಗೆ ಪೌಲನಿಗಿದ್ದ ನಿಜ ಪ್ರೀತಿಯು ಅವನು ಗೌರವಾನಿತ್ವ ಫರಿಸಾಯನಾಗಿರುವ ಜೀವನೋಪಾಯವನ್ನು ತ್ಯಜಿಸುವಂತೆ ಮಾಡಿತು. ಮತ್ತು ಹೊಡೆತ, ಮರಣದ ಅಪಾಯ, ಗಂಡಾಂತರ, ಸೌಕರ್ಯಗಳ ಅಭಾವ, ಇವೆಲ್ಲವನ್ನು ದೇವರ ಮತ್ತು ಆತನ ಪವಿತ್ರ ಸೇವೆಯ ಕಡೆಗೆ ಅವನಿಗಿದ್ದ ನಿಜ ಪ್ರೀತಿಯ ಕಾರಣದಿಂದ ಪೌಲನು ಸಹಿಸಿಕೊಂಡದ್ದನ್ನೂ ಯೋಚಿಸಿರಿ.—2 ಕೊರಿಂಥ 11:23-27.
9. ನಿಜ ಪ್ರೀತಿಯನ್ನು ಪ್ರದರ್ಶಿಸಿದ್ದಕ್ಕಾಗಿ ಪೌಲನು ಹೇಗೆ ಪ್ರತಿಫಲ ಪಡೆದನು?
9 ನಿಜ ಪ್ರೀತಿಯನ್ನು ಪ್ರದರ್ಶಿಸುವುದರಲ್ಲಿ ಇಂಥ ಉತ್ತಮ ಮಾದರಿಯನ್ನಿಟ್ಟದ್ದಕ್ಕೆ ಯೆಹೋವನು ಪೌಲನಿಗೆ ಪ್ರತಿಫಲ ಕೊಟ್ಟನೆ? ಒಳ್ಳೆಯದು, ಪೌಲನ ಶುಶ್ರೂಷೆ ಎಷ್ಟು ಫಲಭರಿತವಾಗಿತ್ತೆಂದು ಯೋಚಿಸಿರಿ. ಅವನು ಒಂದರ ಹಿಂದೆ ಇನ್ನೊಂದು ಸಭೆಯನ್ನು ಸ್ಥಾಪಿಸಲು ಶಕ್ತನಾದನು. ಮತ್ತು ಎಂಥೆಂಥ ಅದ್ಭುತಗಳನ್ನು ಮಾಡಲು ದೇವರು ಅವನಿಗೆ ಶಕ್ತಿ ಕೊಟ್ಟನು! (ಅಪೊಸ್ತಲರ ಕೃತ್ಯ 19:11, 12) ಮಾನವಾತೀತ ದರ್ಶನಗಳನ್ನು ಪಡೆಯುವ ಮತ್ತು ಈಗ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಭಾಗವಾಗಿರುವ 14 ಪತ್ರಗಳನ್ನು ಬರೆಯುವ ಸುಯೋಗವೂ ಅವನಿಗೆ ಸಿಕ್ಕಿತು. ಎಲ್ಲದಕ್ಕೂ ಮೇಲಾಗಿ, ಸ್ವರ್ಗದಲ್ಲಿ ಅಮರತ್ವದ ಬಹುಮಾನ ಅವನಿಗೆ ನೀಡಲ್ಪಟ್ಟಿತು. (1 ಕೊರಿಂಥ 15:53, 54; 2 ಕೊರಿಂಥ 12:1-7; 2 ತಿಮೊಥಿ 4:7, 8) ನಿಜ ಪ್ರೀತಿಗೆ ದೇವರು ಪ್ರತಿಫಲ ನೀಡುತ್ತಾನೆಂದು ಪೌಲನು ನಿಶ್ಚಯವಾಗಿಯೂ ಕಂಡುಹಿಡಿದನು.
ನಿಜ ಪ್ರೀತಿ ನಮ್ಮ ದಿನಗಳಲ್ಲಿ ಪ್ರತಿಫಲದಾಯಕ
10. ಯೇಸುವಿನ ಶಿಷ್ಯರಾಗಲು ಮತ್ತು ಯೆಹೋವನಿಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನಮಗೆ ಯಾವ ವೆಚ್ಚ ತಗಲಬಹುದು?
10 ಯೆಹೋವನ ಸಾಕ್ಷಿಗಳು ಇಂದು, ಅದೇ ರೀತಿ, ನಿಜ ಪ್ರೀತಿ ಪ್ರತಿಫಲದಾಯಕವೆಂದು ಕಂಡುಕೊಂಡಿದ್ದಾರೆ. ಯೆಹೋವನ ಪಕ್ಷ ಹಿಡಿಯುವುದರ ಮೂಲಕ ಆತನ ಕಡೆಗೆ ನಮ್ಮ ಪ್ರೀತಿಯನ್ನು ತೋರಿಸಿ ಕ್ರಿಸ್ತನ ಶಿಷ್ಯರಾಗುವುದು ಸಮಗ್ರತೆ ಕಾಪಾಡುವವರಾದ ನಮಗೆ ಪ್ರಾಣನಷ್ಟವನ್ನೂ ಉಂಟುಮಾಡೀತು. (ಪ್ರಕಟನೆ 2:10 ಹೋಲಿಸಿ.) ಈ ಕಾರಣದಿಂದಲೆ ಯೇಸು ಆಗುಹೋಗುಗಳನ್ನು ಗುಣಿಸಿನೋಡಬೇಕೆಂದು ಹೇಳಿದನು. ಆದರೆ, ಶಿಷ್ಯನಾಗುವುದು ಪ್ರತಿಫಲದಾಯಕವೊ ಅಲ್ಲವೊ ಎಂದು ನಿರ್ಧರಿಸಲಿಕ್ಕಾಗಿ ನಾವು ಇದನ್ನು ಮಾಡುವುದಿಲ್ಲ. ಶಿಷ್ಯತನಕ್ಕೆ ಎಷ್ಟೇ ಬೆಲೆ ತಗಲಲಿ ಅದನ್ನು ತೆರಲು ತಯಾರಿಸಲಿಕ್ಕಾಗಿಯೆ ನಾವು ಹೀಗೆ ಲೆಕ್ಕ ಹಾಕುತ್ತೇವೆ.—ಲೂಕ 14:28.
11. ಕೆಲವರು ದೇವರಿಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಏಕೆ ತಪ್ಪುತ್ತಾರೆ?
11 ಇಂದು ಅನೇಕರು—ಲಕ್ಷಗಟ್ಟಲೆ ಜನರೆಂಬುದಕ್ಕೆ ಸಂದೇಹವಿಲ್ಲ—ಯೆಹೋವನ ಸಾಕ್ಷಿಗಳು ದೇವರ ವಾಕ್ಯದಿಂದ ತರುವ ಸಂದೇಶವನ್ನು ನಂಬುತ್ತಾರೆ. ಆದರೆ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದಲು ಅವರು ಹಿಂಜರಿಯುತ್ತಾರೆ. ಅವರು ಹೀಗೆ ಮಾಡುವುದು, ಇತರರಲ್ಲಿರುವ ನಿಜ ಪ್ರೀತಿಯ ಕೊರತೆ ಅವರಲ್ಲಿರುವುದರಿಂದ ಆಗಿರಬಹುದೊ? ಅನೇಕರು, ಅವಿಶ್ವಾಸಿಯಾದ ವಿವಾಹಜೊತೆಯ ಮೆಚ್ಚಿಕೆ ಪಡೆಯಲಿಕ್ಕಾಗಿ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹೆಜ್ಜೆಯನ್ನು ಇಡಲು ತಪ್ಪುತ್ತಾರೆ. ಇನ್ನು ಕೆಲವರಲ್ಲಿ, “ನನಗೆ ಪಾಪವೇ ಇಷ್ಟ” ಎಂದು ಒಬ್ಬ ಸಾಕ್ಷಿಗೆ ಹೇಳಿದ ವ್ಯಾಪಾರಿಯೊಬ್ಬನ ಮನೋಭಾವವಿರುವುದರಿಂದ ಅವರು ದೇವರಿಗೆ ನಿಕಟವಾಗುವುದಿಲ್ಲ. ಇಂಥವರು, ದೇವರು ಮತ್ತು ಕ್ರಿಸ್ತನು ಅವರಿಗೆ ಮಾಡಿರುವುದನ್ನು ಗಣ್ಯ ಮಾಡುವುದಿಲ್ಲವೆಂಬುದು ವ್ಯಕ್ತ.
12. ನಮ್ಮನ್ನು ನಿಜ ಪ್ರೀತಿಯಲ್ಲಿ ದೇವರಿಗೆ ಹೆಚ್ಚು ನಿಕಟವಾಗಿ ಎಳೆಯುವ ಜ್ಞಾನದ ಪ್ರತಿಫಲಗಳನ್ನು ಎತ್ತಿಹೇಳುವಂತೆ ಈ ಪತ್ರಿಕೆ ಏನಂದಿದೆ?
12 ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನಮಗೆ ಮಾಡಿರುವುದಕ್ಕೆ ನಮಗೆ ನೈಜ ಗಣ್ಯತೆ ಇರುವಲ್ಲಿ, ನಮ್ಮ ಸ್ವರ್ಗೀಯ ಪಿತನನ್ನು ಸೇವಿಸಲು ಮತ್ತು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಲು ತಗಲುವ ಎಲ್ಲ ಖರ್ಚನ್ನು ಇಚ್ಫಾಪೂರ್ವಕವಾಗಿ ಕೊಟ್ಟು ಇದನ್ನು ನಾವು ತೋರಿಸುವೆವು. ದೇವರ ಕಡೆಗೆ ತಮಗಿರುವ ನಿಜ ಪ್ರೀತಿಯ ಕಾರಣ ಸಕಲ ವೃತ್ತಿಯ ಸ್ತ್ರೀ ಪುರುಷರು—ಯಶಸ್ಸು ಪಡೆದಿರುವ ವ್ಯಾಪಾರಿಗಳು, ಪ್ರಮುಖ ಕ್ರೀಡಾಪಟುಗಳು, ಇತ್ಯಾದಿ ಜನರು— ಪೌಲನಂತೆ, ತಮ್ಮ ಸ್ವಾರ್ಥಾನ್ವೇಷಕ ಜೀವನೋಪಾಯಗಳ ಬದಲಿಗೆ ಕ್ರೈಸ್ತ ಶುಶ್ರೂಷೆಯನ್ನು ಆಯ್ದುಕೊಂಡಿದ್ದಾರೆ. ದೇವರನ್ನು ತಿಳಿದು ಸೇವಿಸುವುದರಲ್ಲಿರುವ ಪ್ರತಿಫಲಕ್ಕೆ ಬದಲಾಗಿ ಅವರು ಇನ್ನೇನನ್ನೂ ತೆಗೆದುಕೊಳ್ಳುವುದಿಲ್ಲ. ಈ ಸಂಬಂಧದಲ್ಲಿ, ದ ವಾಚ್ಟವರ್ ಪತ್ರಿಕೆ ಒಮ್ಮೆ ಹೇಳಿದ್ದು: “ನಾವು ಕೆಲವು ಬಾರಿ, ಎಷ್ಟು ಜನ ಸಹೋದರರು ತಮಗೆ ತಿಳಿದಿರುವ ಸತ್ಯಕ್ಕೆ ಬದಲಾಗಿ ಒಂದು ಸಾವಿರ ಡಾಲರುಗಳನ್ನು ತೆಗೆದುಕೊಂಡಾರು? ಎಂದು ಕೇಳಿದ್ದೇವೆ. ಒಂದೇ ಒಂದು ಕೈಯೂ ಕಂಡುಬರಲಿಲ್ಲ! ಹತ್ತು ಸಾವಿರ ಡಾಲರುಗಳನ್ನು ಯಾರು ತಕ್ಕೊಳ್ಳುವರು? ಯಾರೂ ಇಲ್ಲ! ದಶಲಕ್ಷ ಡಾಲರುಗಳು? ದೈವಿಕ ಲಕ್ಷಣ ಮತ್ತು ದೈವಿಕ ಯೋಜನೆಯ ವಿಷಯ ತನಗೆ ತಿಳಿದಿರುವುದನ್ನು ಕೊಟ್ಟು ಇಡೀ ಲೋಕವನ್ನು ಯಾರು ತಕ್ಕೊಳ್ಳುವರು? ಯಾರೂ ಇಲ್ಲ! ಆ ಬಳಿಕ ನಾವು, ನೀವೇನೂ ಅಷ್ಟೊಂದು ಅಸಂತುಷ್ಟ ಜನರಂತೆ ಕಾಣುವುದಿಲ್ಲ, ಪ್ರಿಯ ಮಿತ್ರರೇ. ದೇವರ ಜ್ಞಾನಕ್ಕೆ ಬದಲಾಗಿ ನೀವು ಏನೂ ತಕ್ಕೊಳ್ಳದಿರುವಷ್ಟು ಐಶ್ವರ್ಯವಂತರು ಎಂದು ನೀವೆಣಿಸುವಲ್ಲಿ, ನೀವು ನಮ್ಮಷ್ಟೇ ಐಶ್ವರ್ಯವಂತರು ಎಂದು ಹೇಳಿದೆವು.” (ಡಿಸೆಂಬರ್ 15, 1914, ಪುಟ 377) ಹೌದು, ದೇವರ ಮತ್ತು ಆತನ ಉದ್ದೇಶಗಳ ನಿಷ್ಕೃಷ್ಟ ಜ್ಞಾನ ನಿಜವಾಗಿಯೂ ಪ್ರತಿಫಲದಾಯಕವಾದ ನಿಜ ಪ್ರೀತಿಯಲ್ಲಿ ನಮ್ಮನ್ನು ಆತನ ಬಳಿಗೆ ಒತ್ತಾಗಿ ಎಳೆಯುತ್ತದೆ.
13. ಸ್ವಂತ ಅಧ್ಯಯನವನ್ನು ನಾವು ಹೇಗೆ ವೀಕ್ಷಿಸಬೇಕು?
13 ನಾವು ದೇವರನ್ನು ಪ್ರೀತಿಸುವಲ್ಲಿ, ನಾವಾತನನ್ನು ತಿಳಿಯಲು ಮತ್ತು ಆತನ ಚಿತ್ತವನ್ನು ಮಾಡಲು ಪ್ರಯತ್ನಿಸುವೆವು. (1 ಯೋಹಾನ 5:3) ಸ್ವಂತ ಅಧ್ಯಯನ, ಪ್ರಾರ್ಥನೆ ಮತ್ತು ಕ್ರೈಸ್ತ ಕೂಟಗಳಲ್ಲಿ ಹಾಜರಿಯನ್ನು ನಾವು ಮಹತ್ವದ್ದಾಗಿ ಕಾಣುವೆವು. ಇವೆಲ್ಲವುಗಳಿಗೆ ಆತ್ಮತ್ಯಾಗ ಅಗತ್ಯ, ಏಕಂದರೆ ಈ ಚಟುವಟಿಕೆಗಳಲ್ಲಿ ಸಮಯ, ಶಕ್ತಿ ಮತ್ತು ಇತರ ಸಾಧನಗಳ ವ್ಯಯ ಸೇರಿದೆ. ಟೆಲಿವಿಶನ್ ಕಾರ್ಯಕ್ರಮವನ್ನು ನೋಡುವುದೊ ಸ್ವಂತ ಬೈಬಲ್ ಅಧ್ಯಯನ ಮಾಡುವುದೊ, ಇವುಗಳ ಮಧ್ಯೆ ನಮಗೆ ಒಂದನ್ನು ಆರಿಸಿಕೊಳ್ಳಬೇಕಾಗಿ ಬಂದೀತು. ಆದರೆ, ನಾವು ಇಂಥ ಅಧ್ಯಯನವನ್ನು ಮಹತ್ವದ್ದಾಗಿ ಕಂಡು ಅದಕ್ಕೆ ಯಥೋಚಿತ ಸಮಯವನ್ನು ಬದಿಗಿಡುವಲ್ಲಿ ನಾವು ಆತ್ಮಿಕವಾಗಿ ಅದೆಷ್ಟು ಹೆಚ್ಚು ಬಲವುಳ್ಳವರೂ ಇತರರಿಗೆ ಸಾಕ್ಷಿ ನೀಡಲು ಹೆಚ್ಚು ಸಮರ್ಥರೂ ಕ್ರೈಸ್ತ ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯುವವರೂ ಆಗಿರುವೆವು!—ಕೀರ್ತನೆ 1:1-3.
14. ಪ್ರಾರ್ಥನೆ ಮತ್ತು ಯೆಹೋವ ದೇವರೊಂದಿಗೆ ಸುಸಂಬಂಧ ಎಷ್ಟು ಪ್ರಾಮುಖ್ಯ?
14 ನಾವು ‘ಬೇಸರಗೊಳ್ಳದೆ ಮಾಡುವ ಪ್ರಾರ್ಥನೆ’ಯ ಮೂಲಕ ನಮ್ಮ ಸ್ವರ್ಗೀಯ ಪಿತನೊಂದಿಗೆ ಮಾತನಾಡಲು ಸಂತೋಷಿಸುತ್ತೇವೊ? (ರೋಮಾಪುರ 12:12) ಇಲ್ಲವೆ, ನಾವು ಅನೇಕ ವೇಳೆ ಇಂಥ ಅಮೂಲ್ಯ ಸುಯೋಗವನ್ನು ತೃಪ್ತಿಕರವಾಗಿ ಉಪಯೋಗಿಸಲು ತೀರಾ ಕಾರ್ಯಮಗ್ನತೆ ತೋರಿಸುತ್ತೇವೊ? ‘ಪ್ರಾರ್ಧನೆಯನ್ನು ಎಡೆಬಿಡದೆ’ ಮಾಡುವುದು ಯೆಹೋವ ದೇವರೊಂದಿಗೆ ನಮಗಿರುವ ಸಂಬಂಧವನ್ನು ಬಲಪಡಿಸುವ ಒಂದು ಜೀವದಾಯಕ ಮಾರ್ಗವಾಗಿದೆ. (1 ಥೆಸಲೊನೀಕ 5:17) ಮತ್ತು ನಾವು ಶೋಧನೆಗಳನ್ನು ಎದುರಿಸುವಾಗ ನಮ್ಮ ಸಹಾಯಕ್ಕಾಗಿ ಯೆಹೋವನೊಂದಿಗಿರುವ ಸುಸಂಬಂಧಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಯೋಸೇಫನು ಪೊಟೀಫರನ ಪತ್ನಿಯಿಂದ ಶೋಧನೆಗೊಳಗಾದಾಗ ಅದನ್ನು ತಡೆಯುವಂತೆ ಯಾವುದು ಸಾಧ್ಯ ಮಾಡಿತು? ಮೇದ್ಯ ಪಾರಸೀಯರ ಕಾನೂನು ಯೆಹೋವನಿಗೆ ಮಾಡುವ ಪ್ರಾರ್ಥನೆಯನ್ನು ನಿಷೇಧಿಸಿದಾಗ ದಾನಿಯೇಲನು ಪ್ರಾರ್ಥಿಸುವುದನ್ನು ನಿಲ್ಲಿಸದಂತೆ ಯಾವುದು ಸಾಧ್ಯ ಮಾಡಿತು? (ಆದಿಕಾಂಡ 39:7-16; ದಾನಿಯೇಲ 6:4-11) ದೇವರೊಂದಿಗಿದ್ದ ಸುಸಂಬಂಧವೇ ಅವರು ಜಯಗಳಿಸುವಂತೆ ಮಾಡಿತು ಮತ್ತು ನಮಗೂ ಸಹಾಯ ಮಾಡುವುದು!
15. ಕ್ರೈಸ್ತ ಕೂಟಗಳನ್ನು ನಾವು ಹೇಗೆ ವೀಕ್ಷಿಸಬೇಕು, ಮತ್ತು ಏಕೆ?
15 ನಮ್ಮ ಪಂಚ ಸಾಪ್ತಾಹಿಕ ಕೂಟಗಳ ಹಾಜರಿಯನ್ನು ನಾವು ಎಷ್ಟು ಮಹತ್ವದ್ದಾಗಿ ನೋಡುತ್ತೇವೆ? ಆಯಾಸ, ತುಸು ಶಾರೀರಿಕ ಅಸುಖ ಯಾ ಅಲ್ಪ ಕೆಟ್ಟ ಹವಾಮಾನ, ಸಹವಿಶ್ವಾಸಿಗಳೊಂದಿಗೆ ಕೂಡಿ ಬರಬೇಕಾದ ನಮ್ಮ ಜವಾಬ್ದಾರಿಗೆ ಅಡಬ್ಡರುವಂತೆ ನಾವು ಬಿಡುತ್ತೇವೊ? (ಇಬ್ರಿಯ 10:24, 25) ತುಂಬ ವೇತನವಿದ್ದ ಅಮೆರಿಕದ ಒಬ್ಬ ಯಂತ್ರಚಾಲಕನು, ಕ್ರೈಸ್ತ ಕೂಟಗಳ ಹಾಜರಿಗೆ ತನ್ನ ಕೆಲಸ ಪದೇ ಪದೇ ಅಡಬ್ಡರುವುದನ್ನು ನೋಡಿದನು. ಈ ಕಾರಣ, ಎಲ್ಲ ಸಭಾಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಅವನು ಹಣನಷ್ಟವಾದರೂ ತನ್ನ ಕೆಲಸವನ್ನು ಬದಲಾಯಿಸಿದನು. ನಮ್ಮ ಕೂಟಗಳು, ನಾವು ಪ್ರೋತ್ಸಾಹ ವಿನಿಮಯವನ್ನು ಮಾಡಿ ಒಬ್ಬನು ಇನ್ನೊಬ್ಬನ ನಂಬಿಕೆಯನ್ನು ಬಲಪಡಿಸುವಂತೆ ಮಾಡುತ್ತವೆ. (ರೋಮಾಪುರ 1:11, 12) ಇವೆಲ್ಲವುಗಳಲ್ಲಿ, “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು” ಎಂಬುದನ್ನು ನಾವು ನೋಡುವುದಿಲ್ಲವೆ? (2 ಕೊರಿಂಥ 9:6) ಹೌದು, ನಿಜ ಪ್ರೀತಿಯನ್ನು ಇಂಥ ರೀತಿಗಳಲ್ಲಿ ತೋರಿಸುವುದು ತೀರಾ ಪ್ರತಿಫಲದಾಯಕವಾಗಿದೆ.
ನಿಜ ಪ್ರೀತಿ ಮತ್ತು ನಮ್ಮ ಶುಶ್ರೂಷೆ
16. ನಾವು ಅನೌಪಚಾರಿಕವಾಗಿ ಸಾಕ್ಷಿ ನೀಡಲು ಪ್ರೀತಿಯು ಪ್ರಚೋದಿಸುವಾಗ ಯಾವ ಪರಿಣಾಮವಾಗಬಹುದು?
16 ಪ್ರೀತಿಯು, ಯೆಹೋವನ ಜನರಾಗಿರುವ ನಾವು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಉದಾಹರಣೆಗೆ, ನಾವು ಅನೌಪಚಾರಿಕ ಸಾಕ್ಷಿಯಲ್ಲಿ ಭಾಗವಹಿಸುವಂತೆ ಇದು ಪ್ರೇರಿಸುತ್ತದೆ. ಅನೌಪಚಾರಿಕವಾಗಿ ಸಾಕ್ಷಿ ನೀಡಲು ನಾವು ಹಿಂಜರಿಯಬಹುದಾದರೂ ಪ್ರೀತಿ ನಾವು ಮಾತಾಡುವಂತೆ ನಡೆಸುವುದು. ವಾಸ್ತವವಾಗಿ, ಪ್ರೀತಿಯು ನಾವು ಸಂಭಾಷಣೆಯನ್ನು ಆರಂಭಿಸಲು ಸಮಯೋಚಿತ ಮಾರ್ಗಗಳನ್ನು ಯೋಚಿಸುವಂತೆ ಮಾಡಿ, ಬಳಿಕ ಅದನ್ನು ರಾಜ್ಯಾಭಿಮುಖವಾಗಿ ನಡೆಸುವುದು. ದೃಷ್ಟಾಂತ: ಒಂದು ವಿಮಾನದಲ್ಲಿ, ಒಬ್ಬ ಕ್ರೈಸ್ತ ಹಿರಿಯನಿಗೆ ತಾನು ಒಬ್ಬ ರೋಮನ್ ಕ್ಯಾಥಲಿಕ್ ಪಾದ್ರಿಯ ಜೊತೆ ಕುಳಿತಿರುವುದು ತಿಳಿದುಬಂತು. ಮೊದಲಲ್ಲಿ, ಹಿರಿಯನು ಆ ಪಾದ್ರಿಗೆ ನಿರಾಕ್ಷೇಪದ ಪ್ರಶ್ನೆಗಳನ್ನು ಹಾಕಿದನು. ಆದರೆ ಪಾದ್ರಿಯು ವಿಮಾನದಿಂದ ಇಳಿಯುವುದರೊಳಗೆ ಅವನು ಎರಡು ಪುಸ್ತಕಗಳನ್ನು ಕೊಳ್ಳುವಂತೆ ಅವನ ಆಸಕ್ತಿ ಪ್ರೇರಿಸಿತು. ಅನೌಪಚಾರಿಕವಾಗಿ ಸಾಕ್ಷಿನೀಡಿದ್ದಕ್ಕೆ ಎಂಥ ಉತ್ತಮ ಫಲ!
17, 18. ಕ್ರೈಸ್ತ ಶುಶ್ರೂಷೆಯ ಸಂಬಂಧದಲ್ಲಿ ಪ್ರೀತಿ ನಾವು ಏನು ಮಾಡುವಂತೆ ಪ್ರೇರಿಸುವುದು?
17 ನಿಜ ಪ್ರೀತಿಯು ನಾವು ಕ್ರಮವಾಗಿ ಮನೆಮನೆಯ ಸಾರುವ ಕೆಲಸ ಮತ್ತು ಕ್ರೈಸ್ತ ಶುಶ್ರೂಷೆಯ ಇತರ ರೂಪಗಳಲ್ಲಿ ಭಾಗವಹಿಸುವಂತೆಯೂ ಪ್ರೇರಿಸುವುದು. ಎಷ್ಟರ ಮಟ್ಟಿಗೆ ಬೈಬಲ್ ಚರ್ಚೆಗಳನ್ನು ನಮಗೆ ಮಾಡಸಾಧ್ಯವಾಗುತ್ತದೊ ಅಷ್ಟರ ಮಟ್ಟಿಗೆ ನಾವು ಯೆಹೋವನಿಗೆ ಗೌರವವನ್ನು ತಂದು ಕುರಿಸದೃಶರು ನಿತ್ಯ ಜೀವದ ಮಾರ್ಗದಲ್ಲಿ ನಡೆಯುವಂತೆ ಸಹಾಯ ಮಾಡುವೆವು. (ಮತ್ತಾಯ 7:13, 14 ಹೋಲಿಸಿ.) ನಮಗೆ ಬೈಬಲ್ ಚರ್ಚೆಗಳನ್ನು ನಡೆಸುವುದು ಅಸಾಧ್ಯವಾದರೂ ನಮ್ಮ ಪ್ರಯತ್ನಗಳು ವ್ಯರ್ಥವಾಗವು. ಜನರ ಮನೆಗಳಲ್ಲಿ ನಮ್ಮ ಇರವೇ ಸಾಕ್ಷಿಯಾಗಿ ಪರಿಣಮಿಸುವುದು. ಮತ್ತು ಶುಶ್ರೂಷೆಯಿಂದ ನಮಗೆ ನಾವೇ ಪ್ರಯೋಜನ ತಂದುಕೊಳ್ಳುವೆವು. ಏಕೆಂದರೆ ಬೈಬಲ್ ಸತ್ಯಗಳನ್ನು ಪ್ರಕಟಿಸುವಾಗ ನಾವು ನಮ್ಮ ನಂಬಿಕೆಯನ್ನು ಬಲಪಡಿಸದೆ ಇರಲಾರೆವು. ಹೌದು, ‘ನಾವು ಸುವಾರ್ತೆಯಲ್ಲಿ ಇತರರೊಂದಿಗೆ ಭಾಗಿಗಳಾಗಿ ಎಲ್ಲವನ್ನು ಸುವಾರ್ತೆಗೋಸ್ಕರ ಮಾಡುತ್ತಾ’ ಮನೆಯಿಂದ ಮನೆಗೆ ಹೋಗಲು ನಮಗೆ ನಮ್ರತೆ ಬೇಕೆಂಬುದು ನಿಜ. (1 ಕೊರಿಂಥ 9:19-23) ಆದರೆ, ದೇವರ ಮತ್ತು ನೆರೆಯವನ ಮೇಲಿನ ಪ್ರೀತಿಯ ಕಾರಣ ನಾವು ದೈನ್ಯತೆಯಿಂದ ಪ್ರಯತ್ನಿಸುವಲ್ಲಿ ಹೇರಳಾಶೀರ್ವಾದಗಳ ಪ್ರತಿಫಲ ನಮಗೆ ದೊರೆಯುವುದು.—ಜ್ಞಾನೋಕ್ತಿ 10:22.
18 ಯೆಹೋವನ ಜನರು ಬೈಬಲಿನಲ್ಲಿ ಆಸಕ್ತಿಯುಳ್ಳ ಜನರನ್ನು ಪುನರ್ಭೇಟಿ ಮಾಡುವ ವಿಷಯದಲ್ಲಿ ಶುದ್ಧಾಂತಃಕರಣದಿಂದಿರಲಿಕ್ಕೂ ನಿಜ ಪ್ರೀತಿ ಅಗತ್ಯ. ಬೈಬಲ್ ಅಧ್ಯಯನಗಳನ್ನು ವಾರವಾರ, ಮಾಸಮಾಸಗಳಲ್ಲಿ ನಡೆಸುವುದೂ ದೇವರ ಮತ್ತು ನೆರೆಯವನ ಮೇಲಿರುವ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಹೇಗೆಂದರೆ ಈ ಕೆಲಸಕ್ಕೆ ಸಮಯ, ಪ್ರಯತ್ನ ಮತ್ತು ಸಂಪತ್ತಿನ ಖರ್ಚು ತಗಲುತ್ತದೆ. (ಮಾರ್ಕ 12:28-31) ಆದರೂ, ಈ ಬೈಬಲ್ ಶಿಕ್ಷಾರ್ಥಿಗಳಲ್ಲಿ ಒಬ್ಬನು ದೀಕ್ಷಾಸ್ನಾನ ಹೊಂದುವುದನ್ನು ನಾವು ನೋಡುವಾಗ ಮತ್ತು ಅವನು ಪ್ರಾಯಶಃ ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವಾಗ ನಿಜ ಪ್ರೀತಿಯು ಪ್ರತಿಫಲದಾಯಕವೆಂದು ನಮಗೆ ದೃಢವಾಗುವುದಿಲ್ಲವೆ?—2 ಕೊರಿಂಥ 3:1-3 ಹೋಲಿಸಿ.
19. ಪ್ರೀತಿ ಮತ್ತು ಪೂರ್ಣ ಸಮಯದ ಸೇವೆಯ ಮಧ್ಯೆ ಯಾವ ಸಂಬಂಧವಿದೆ?
19 ನಮಗೆ ಪೂರ್ಣ ಸಮಯದ ಸೇವೆಯಲ್ಲಿ ಭಾಗವಹಿಸಲು ಸಾಧ್ಯವಿರುವುದಾದರೆ ಅದಕ್ಕೋಸ್ಕರ ಪ್ರಾಪಂಚಿಕ ಸೌಕರ್ಯಗಳನ್ನು ತ್ಯಜಿಸುವಂತೆ ನಿಸ್ವಾರ್ಥ ಪ್ರೀತಿ ಪ್ರಚೋದಿಸುತ್ತದೆ. ತಾವು ಇಷ್ಟರ ಮಟ್ಟಿಗೆ ಪ್ರೀತಿಯನ್ನು ತೋರಿಸಿದ್ದು ಅತ್ಯಂತ ಪ್ರತಿಫಲದಾಯಕವಾಗಿತ್ತೆಂಬುದಕ್ಕೆ ಸಾವಿರ, ಸಾವಿರಾರು ಜನ ಸಾಕ್ಷಿಗಳು ಸಾಕ್ಷಿ ಹೇಳಬಲ್ಲರು. ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲಿಗರಾಗಲು ಪರಿಸ್ಥಿತಿಗಳು ನಿಮ್ಮನ್ನು ಅನುಮತಿಸಿದರೂ ನೀವು ಅದರ ಪ್ರಯೋಜನವನ್ನು ಪಡೆಯದಿರುವಲ್ಲಿ ಎಂಥ ಆಶೀರ್ವಾದಗಳನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ.—ಮಾರ್ಕ 10:29, 30.
ಇತರ ವಿಧಗಳಲ್ಲಿ ಪ್ರತಿಫಲದಾಯಕ
20. ನಾವು ಕ್ಷಮಾಭಾವ ತೋರಿಸುವಂತೆ ಪ್ರೀತಿ ಹೇಗೆ ಸಹಾಯ ಮಾಡುತ್ತದೆ?
20 ನಿಜ ಪ್ರೀತಿ ಪ್ರತಿಫಲದಾಯಕವಾಗಿರುವ ಇನ್ನೊಂದು ವಿಧವು ನಾವು ಕ್ಷಮಾಭಾವದವರಾಗುವಂತೆ ಸಹಾಯ ಮಾಡಿಯೆ. ಹೌದು, ಪ್ರೀತಿ “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.” ವಾಸ್ತವವಾಗಿ, “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಕೊರಿಂಥ 13:5; 1 ಪೇತ್ರ 4:8) “ಬಹು ಪಾಪ” ವೆಂದರೆ ಅನೇಕಾನೇಕ ಪಾಪಗಳೆಂದರ್ಥ, ಅಲ್ಲವೆ? ಮತ್ತು, ಕ್ಷಮಿಸುವವರಾಗುವುದು ಎಷ್ಟು ಪ್ರತಿಫಲದಾಯಕ! ನೀವು ಕ್ಷಮಿಸುವಾಗ ನಿಮಗೂ ನಿಮ್ಮ ವಿರುದ್ಧ ತಪ್ಪು ಮಾಡಿರುವವನಿಗೂ ನೆಮ್ಮದಿ ಸಿಗುತ್ತದೆ. ಆದರೆ ಎಷ್ಟೋ ಹೆಚ್ಚು ಮುಖ್ಯವಾದ ನಿಜತ್ವವೇನಂದರೆ ನಮಗೆ ತಪ್ಪು ಮಾಡಿದವರನ್ನು ನಾವು ಆಗಲೆ ಕ್ಷಮಿಸದೆ ಇರುವಲ್ಲಿ ಯೆಹೋವನು ನಮ್ಮನ್ನು ಕ್ಷಮಿಸುವನೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ.—ಮತ್ತಾಯ 6:12; 18:23-35.
21. ನಾವು ಅಧೀನತೆ ತೋರಿಸುವಂತೆ ಪ್ರೀತಿ ಹೇಗೆ ಸಹಾಯ ಮಾಡುತ್ತದೆ?
21 ಇದಲ್ಲದೆ, ನಿಜ ಪ್ರೀತಿ ಪ್ರತಿಫಲದಾಯಕ ಹೇಗೆಂದರೆ ನಾವು ಅಧೀನರಾಗುವಂತೆ ಇದು ಸಹಾಯ ನೀಡುತ್ತದೆ. ನಾವು ಯೆಹೋವನನ್ನು ಪ್ರೀತಿಸುವಲ್ಲಿ ಆತನ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳುವೆವು. (1 ಪೇತ್ರ 5:6) ನಮಗೆ ಆತನ ಮೇಲಿರುವ ಪ್ರೀತಿಯು, ನಾವು ಆತನು ಆಯ್ದುಕೊಂಡಿರುವ ಉಪಕರಣವಾದ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ಗೆ ಅಧೀನರಾಗುವಂತೆ ನಮ್ಮನ್ನು ಪ್ರೇರಿಸುವುದು. ಇದರಲ್ಲಿ, ಸಭೆಯಲ್ಲಿ ನಾಯಕತ್ವ ವಹಿಸುವವರಿಗೆ ಅಧೀನತೆಯೂ ಸೇರಿದೆ. ಇದು ಪ್ರತಿಫಲದಾಯಕ, ಏಕೆಂದರೆ ಹೀಗೆ ಮಾಡದಿರುವುದು ನಮಗೆ “ಹಾನಿಕರ” ವಾಗಿರುವುದು. (ಮತ್ತಾಯ 24:45-47; ಇಬ್ರಿಯ 13:17, NW) ಹೌದು, ಅಧೀನತೆಯ ಈ ಮೂಲಸೂತ್ರವು ಕುಟುಂಬ ವೃತ್ತದಲಿಯ್ಲೂ ಅನ್ವಯಿಸುತ್ತದೆ. ಇಂಥ ಮಾರ್ಗ ಪ್ರತಿಫಲದಾಯಕ, ಹೇಗೆಂದರೆ ಅದು ಕೌಟುಂಬಿಕ ಸಂತೋಷ, ಶಾಂತಿ, ಮತ್ತು ಸಾಮರಸ್ಯವನ್ನು ಬೆಳೆಸುವುದು ಮಾತ್ರವಲ್ಲ ನಾವು ದೇವರನ್ನು ಮೆಚ್ಚಿಸುತ್ತೇವೆಂಬ ತಿಳುವಳಿಕೆಯಿಂದ ಬರುವ ಸಂತೃಪ್ತಿಯನ್ನೂ ನಮಗೊದಗಿಸುತ್ತದೆ.—ಎಫೆಸ 5:22; 6:1-3.
22. ನಾವು ಹೇಗೆ ನಿಜವಾಗಿಯೂ ಸಂತುಷ್ಟರಾಗಿರಬಲ್ಲೆವು?
22 ಹಾಗಾದರೆ, ಸ್ಪಷ್ಟವಾಗಿಗಿ, ನಾವು ಬೆಳೆಸಬಹುದಾದ ಮಹತ್ತಮ ಗುಣವು ನಿಸ್ವಾರ್ಥದ, ಮೂಲತಾತ್ವಿಕ ರೀತಿಯ ಪ್ರೀತಿಯಾದ ಅಗಾಪೆಯೆ. ಮತ್ತು ನಿಜ ಪ್ರೀತಿ ಪ್ರತಿಫಲದಾಯಕವೆಂಬುದಕ್ಕೆ ಸಂದೇಹವೇ ಇಲ್ಲ, ಆದುದರಿಂದ, ನಮ್ಮ ಪ್ರೀತಿಯ ದೇವರಾದ ಯೆಹೋವನ ಮಹಿಮೆಗಾಗಿ ನಾವು ಈ ಗುಣವನ್ನು ಹೆಚ್ಚೆಚ್ಚಾಗಿ ಬೆಳೆಸಿ ವ್ಯಕ್ತಪಡಿಸುವಲ್ಲಿ ನಾವು ಸಂತುಷ್ಟರೆ ಸರಿ. (w90 11/15)
ನಿಮ್ಮ ಉತ್ತರವೇನು?
▫ ಯೆಹೋವನು ನಿಜ ಪ್ರೀತಿಯನ್ನು ಯಾವ ವಿಧಗಳಲ್ಲಿ ತೋರಿಸಿದ್ದಾನೆ?
▫ ಯೇಸು ಕ್ರಿಸ್ತನಿಂದ ಪ್ರೀತಿ ಹೇಗೆ ತೋರಿಸಲ್ಪಟ್ಟಿತು?
▫ ನಿಜ ಪ್ರೀತಿಯನ್ನು ತೋರಿಸುವುದರಲ್ಲಿ ಅಪೊಸ್ತಲ ಪೌಲನು ಯಾವ ಮಾದರಿಯನ್ನಿಟ್ಟನು?
▫ ಯೆಹೋವನ ಸಾಕ್ಷಿಗಳು ಹೇಗೆ ಪ್ರೀತಿಯನ್ನು ತೋರಿಸುತ್ತಿದ್ದಾರೆ?
▫ ನಿಜ ಪ್ರೀತಿ ಪ್ರತಿಫಲದಾಯಕವೆಂದು ನೀವೇಕೆ ಹೇಳುವಿರಿ?
[ಪುಟ 16 ರಲ್ಲಿರುವ ಚಿತ್ರ]
ಮಾನವ ಸಂತತಿಯ ಕಡೆಗೆ ಯೆಹೋವನಿಗಿದ್ದ ಪ್ರೀತಿ, ನಾವು ನಿತ್ಯಜೀವ ಪಡೆಯುವಂತೆ ಆತನು ತನ್ನ ಪುತ್ರನನ್ನು ಕೊಡುವಂತೆ ನಡೆಸಿತು. ಇಂಥ ನಿಜ ಪ್ರೀತಿಯನ್ನು ನೀವು ಗಣ್ಯಮಾಡುತ್ತೀರೊ?
[ಪುಟ 18 ರಲ್ಲಿರುವ ಚಿತ್ರ]
ಯೆಹೋವನ ಕಡೆ ನಮಗಿರುವ ನಿಜ ಪ್ರೀತಿ, ನಾವು “ಬೇಸರಗೊಳ್ಳದೆ ಪ್ರಾರ್ಥನೆ” ಮಾಡುವಂತೆ ನಮ್ಮನ್ನು ಪ್ರಚೋದಿಸುವುದು