ಯೆಹೋವನ ಸೇವೆಯು ನನಗೆ ತಂದ ಸಂತೋಷ
ಜಾರ್ಜ್ ಬ್ರಮ್ಲಿ ಎಂಬವರಿಂದ ಹೇಳಲ್ಪಟ್ಟಂತೆ
ಸಾಮ್ರಾಟ ಹೇಲಿ ಸೆಲಾಸಿಯ ಯುವ ಪೊಲೀಸ್ ಕೆಡೆಟ್ಗಳಿಗೆ ಒಂದು ರೇಡಿಯೋ ಕ್ಲಾಸನ್ನು ಕಲಿಸುವುದನ್ನು ನಾನಾಗಲೇ ಮುಗಿಸಿದಾಗ, ಅವರಲ್ಲೊಬ್ಬನು ನಾನು ಯೆಹೋವನ ಸಾಕ್ಷಿಗಳ ಮಿಷನೆರಿಯೆಂದು ತನಗೆ ಗೊತ್ತಿದೆಯೆಂದು ನನಗೆ ಖಾಸಗಿಯಾಗಿ ನುಡಿದನು. “ನನ್ನೊಂದಿಗೆ ಬೈಬಲ್ ಅಧ್ಯಯನ ಮಾಡುವಿರೋ?” ಎಂದನವನು ಆತುರದಿಂದ.
ಇಥಿಯೋಪಿಯದಲ್ಲಿ ನಮ್ಮ ಕಾರ್ಯವು ಆಗ ನಿಷೇಧಿಸಲ್ಪಟ್ಟಿತ್ತಾದರ್ದಿಂದ, ಮತ್ತು ನನ್ನ ಕುರಿತಾಗಿ ಅಧಿಕಾರಿಗಳಿಗೆ ತಿಳಿದಿದ್ದರೆ, ಇತರ ಸಾಕ್ಷಿಗಳಿಗೆ ಮಾಡಲ್ಪಟ್ಟಂತೆ, ನಾನೂ ದೇಶದಿಂದ ಹೊರಗೆ ಹಾಕಲ್ಪಡುತ್ತಿದ್ದೆನು. ಈ ವಿದ್ಯಾರ್ಥಿಯು ಪ್ರಾಮಾಣಿಕನೋ ಅಥವಾ ನನ್ನನ್ನು ಸಿಕ್ಕಿಸಿಹಾಕಲು ಕಳುಹಿಸಲ್ಪಟ್ಟ ಸರಕಾರಿ ಏಜೆಂಟನೋ ಎಂದು ಯೋಚನೆಗೀಡಾದೆ ನಾನು. ಮೂರು ಚಿಕ್ಕ ಮಕ್ಕಳನ್ನು ಪೋಷಿಸಲಿಕ್ಕಿದ್ದ ಕುಟುಂಬ ತಲೆಯಾದ ನನಗೆ, ನನ್ನ ಕೆಲಸವನ್ನು ಕಳಕೊಳ್ಳುವ ಮತ್ತು ನಾನು ಪ್ರೀತಿಸಲು ತೊಡಗಿದ್ದ ದೇಶವನ್ನೂ ಮಿತ್ರರನ್ನೂ ಬಿಟ್ಟುಹೋಗಲು ಬಲಾತ್ಕರಿಸಲ್ಪಡುವ ವಿಚಾರವೇ ಗಾಬರಿಗೊಳಿಸಿತ್ತು.
‘ಆದರೆ,’ ನೀವು ಕೇಳಬಹುದು, ‘ಕುಟುಂಬವನ್ನು ಪೋಷಿಸಲಿಕ್ಕಿದ್ದ ಒಬ್ಬ ಅಮೆರಿಕನ್ ವ್ಯಕ್ತಿಯು ತನ್ನ ಸದ್ವೇಶ ಮತ್ತು ಸಂಬಂಧಿಕರಿಂದ ದೂರವಾಗಿ, ಉತ್ತರ ಆಫ್ರಿಕದಲ್ಲಿ ವಾಸಿಸಲು ಇಷ್ಟಪಟ್ಟದ್ದು ಹೇಗೆ?’ ನಾನದನ್ನು ವಿವರಿಸುವಂತೆ ಬಿಡಿರಿ.
ಅಮೆರಿಕದಲ್ಲಿ ಬೆಳೆದದ್ದು
ನಾನಿನ್ನೂ ಗ್ರೇಡ್ ಸ್ಕೂಲಿನಲ್ಲಿದ್ದ 1920 ರುಗಳಲ್ಲಿ, ನನ್ನ ತಂದೆಯು ವಾಚ್ಟವರ್ ಪತ್ರಿಕೆಗೆ ಚಂದಾ ಮಾಡಿದರು ಮತ್ತು ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ನ ಒಂದು ಸೆಟ್ನ್ನು ಪಡಕೊಂಡರು. ತಂದೆಗೆ ವಾಚನ ಬಲು ರುಚಿಸುತ್ತಿತ್ತು ಮತ್ತು ಆ ಪುಸ್ತಕಗಳನ್ನು ಆತುರದಿಂದ ಓದಿಮುಗಿಸಿದರು. ಅವರಿಗೆ ಒಂದು ಸ್ವಾರಸ್ಯದ ಮತ್ತು ತುಂಟತನದ ವ್ಯಕ್ತಿತ್ವವಿತ್ತು. ಭಾನುವಾರದಂದು ತಾನು ಆಮಂತ್ರಿಸಿದ ಸಂದರ್ಶಕರನ್ನು ಉಪಾಯದಿಂದ ನಿರ್ವಹಿಸುತ್ತಿದ್ದ ರೀತಿಯಲ್ಲಿ ಅದು ತೋರಿಬರುತ್ತಿತ್ತು. ಅವರೊಂದಿಗೆ, ಎದುರಲ್ಲಿ ಮತ್ತು ಬೆನ್ನಲ್ಲಿ “ಪವಿತ್ರ ಬೈಬಲ್” ಎಂಬ ಸ್ವರ್ಣಾಕ್ಷರದಲ್ಲಿ ಬರೆದ ಒಂದು ಸುಂದರ ಚರ್ಮರಕ್ಷಾವರಣವಿದ್ದ ಪುಸ್ತಕವಿತ್ತು. “ಒಳ್ಳೇದು, ಇವತ್ತು ಭಾನುವಾರ. ನಮಗಾಗಿ ಕೆಲವು ವಚನಗಳನ್ನು ನೀವು ಓದುವಿರೋ?” ಎಂದು ಹೇಳುವ ಮೂಲಕ ಅವರು ಒಂದು ಸಂಭಾಷಣೆಯನ್ನು ಆರಂಭಿಸುತ್ತಿದ್ದರು.
ಸಂದರ್ಶಕನು ಯಾವಾಗಲೂ ಸಮ್ಮತಿಸುತ್ತಿದ್ದನು, ಆದರೆ ಅವನು ಪುಸ್ತಕವನ್ನು ತೆರೆಯುವಾಗ, ಯಾವ ಪುಟದಲ್ಲೂ ಯಾವುದೇ ಮುದ್ರಣವು ಇರುತ್ತಿರಲಿಲ್ಲ! ನಿಶ್ಚಯವಾಗಿ ವ್ಯಕ್ತಿಗೆ ಆಶ್ಚರ್ಯವಾಗುತ್ತಿತ್ತು. ‘ಉಪದೇಶಿಗಳಿಗೆ ಬೈಬಲ್ನ ಕುರಿತು ಏನೂ ತಿಳಿದಿಲ್ಲ’ ಎಂದು ಅನಂತರ ಅನ್ನುತ್ತಿದ್ದರು ತಂದೆ, ತದನಂತರ ಒಂದು ಪ್ರತಿಯನ್ನು ತಂದು, ಆದಿಕಾಂಡ 2:7 ನ್ನು ಓದುತ್ತಿದ್ದರು. ಅಲ್ಲಿ, ಮೊದಲನೆಯ ಮನುಷ್ಯನ ನಿರ್ಮಾಣವನ್ನು ವಿವರಿಸುತ್ತಾ, ಬೈಬಲ್ ಅನ್ನುವುದು: “ಆಗ ಮನುಷ್ಯನು ಬದುಕುವ ಆತ್ಮನಾದನು.”—ಆದಿಕಾಂಡ 2:7, ಕಿಂಗ್ ಜೇಮ್ಸ್ ವರ್ಷನ್.
ಮನುಷ್ಯನಿಗೆ ಒಂದು ಆತ್ಮವು ಇಲ್ಲ, ಅವನೇ ಒಬ್ಬ ಆತ್ಮ, ಮತ್ತು ಪಾಪದ ಸಂಬಳ ಮರಣವಾಗಿದೆ ಮತ್ತು ಒಬ್ಬ ಮನುಷ್ಯನು ಸಾಯುವಾಗ, ಅವನು ನಿಜವಾಗಿಯೂ ಸತ್ತವನು, ಯಾವುದೇ ಪ್ರಜ್ಞೆಯಿಲ್ಲದವನು ಆಗಿದ್ದಾನೆ ಎಂದು ತಂದೆ ಹೇಳುತ್ತಿದ್ದರು. (ಪ್ರಸಂಗಿ 9:5, 10; ಯೆಹೆಜ್ಕೇಲ 18:4; ರೋಮಾಪುರ 6:23) ನನಗೆ ಚೆನ್ನಾಗಿ ಓದುಬರುವ ಮುಂಚೆಯೇ, ಆದಿಕಾಂಡ 2:7 ನ್ನು ನಾನು ಕಂಠಪಾಠ ಮಾಡಿದ್ದೆ. ಬೈಬಲಿನ ಸತ್ಯವನ್ನು ತಿಳಿಯುವ ಮತ್ತು ಅದನ್ನು ಇತರರೊಂದಿಗೆ ಹಂಚುವ ನಿಜ ಸಂತೋಷದ ನನ್ನ ಮೊದಲನೆಯ ಮರುಜ್ಞಾಪಕಗಳು ಅವಾಗಿವೆ.
ನಾವಾಗ ವಾಚ್ಟವರ್ ನ್ನು ಮನೆಯಲ್ಲಿ ಪಡೆಯುತ್ತಿದ್ದೇವಾದ್ದರಿಂದ, ಇಡೀ ಕುಟುಂಬವು ಈ ಆತ್ಮಿಕ ಪೋಷಣೆಯನ್ನು ಆನಂದಿಸತೊಡಗಿತು. ನನ್ನ ತಾಯಿ ಕಡೆಯ ಅಜಿಯ್ಜು ನಮ್ಮೊಂದಿಗೆ ವಾಸಿಸುತ್ತಿದ್ದರು, ಮತ್ತು ಅವರು ನಮ್ಮ ಮನೆಯಲ್ಲಿ ಸುವಾರ್ತೆಯ ಪ್ರಚಾರಕರಲ್ಲಿ ಮೊದಲನೆಯವರಾದರು. ನಾವು ವಾಸಿಸುತ್ತಿದ್ದ ಇಲಿನ್ಲೊಯಿಸ್ನ ಕಾರ್ಬನ್ಡೇಲ್ನಲ್ಲಿ ಸಭೆಯು ಇರಲಿಲ್ಲ, ಆದರೆ ಅವಿಧಿ ಕೂಟಗಳು ನಡೆಯುತ್ತಿದ್ದವು. ಊರಿನಾಚೆಕಡೆ ಎಲ್ಲಿ ಕೆಲವು ವೃದ್ಧ ಸ್ತ್ರೀಯರು ಒಂದು ವಾಚ್ಟವರ್ ಅಭ್ಯಾಸ ನಡೆಸುತ್ತಿದ್ದರೋ ಅಲ್ಲಿಗೆ ನಮ್ಮ ತಾಯಿ ನಾವು ಐವರು ಮಕ್ಕಳನ್ನು ಒಯ್ಯುತ್ತಿದ್ದರು. ನಾವು ಸಹ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲುಗಾರರಾಗ ತೊಡಗಿದೆವು.
ರೇಡಿಯೋ ಕೆಲಸದಿಂದ ಸೆರೆಮನೆಗೆ
ನಾನು 1937 ರಲ್ಲಿ, ಕೇವಲ 17 ವರ್ಷದವನಾಗಿದ್ದಾಗ, ವಿವಾಹವಾದೆನು. ರೇಡಿಯೋ ರಿಪೇರಿ ಮಾಡುವ ಮೂಲಕ ಜೀವನೋಪಾಯ ನಡಿಸಲು ಪ್ರಯತ್ನಿಸಿದೆ ಹಾಗೂ ಆ ಕಲೆಯನ್ನು ಕಲಿಸುತ್ತಲೂ ಇದ್ದೆ. ಇಬ್ಬರು ಮಕ್ಕಳಾದ ಪೆಗಿ ಮತ್ತು ಹ್ಯಾಂಕ್ ಹುಟ್ಟಿದ ಮೇಲೆ ನನ್ನ ವಿವಾಹವು ಕೊನೆಗೊಂಡಿತು. ವಿಚ್ಛೇದನೆಯು ನನ್ನ ತಪ್ಪಾಗಿತ್ತು; ನಾನೊಂದು ಕ್ರೈಸ್ತ ಜೀವಿತವನ್ನು ನಡಿಸತ್ತಿರಲಿಲ್ಲ. ನನ್ನ ಇಬ್ಬರು ದೊಡ್ಡ ಮಕ್ಕಳನ್ನು ಬೆಳೆಸಲು ನನಗೆ ದೊರಕಲಿಲ್ಲವೆಂಬ ನಿಜತ್ವವು ನನಗೆ ಒಂದು ಜೀವಮಾನದ ಹೃದಯವೇದನೆಯಾಗಿತ್ತು.
ಎರಡನೆಯ ಲೋಕ ಯುದ್ಧವು ಆಗಮಿಸಿತು ಮತ್ತು ಅದು ನನ್ನನ್ನು ಅನೇಕ ವಿಷಯಗಳ ಕುರಿತು ಚಿಂತಿಸುವಂತೆ ಮಾಡಿತು. ಮಿಲಿಟರಿ ಗುಂಪುಗಳು ನನಗೆ ಲೆಫನ್ಟಂಟ್ ಆಗುವ ಮತ್ತು ಸೇನಾದಳದವರಿಗೆ ರೇಡಿಯೋ ಕಲಿಸುವ ಸಂದರ್ಭವನ್ನು ನೀಡಿದವು, ಆದರೆ ಯುದ್ಧದ ಬಗ್ಗೆ ಯೆಹೋವನ ವಿಚಾರವು ಏನಾಗಿತ್ತೋ ಅದರ ಚಿಂತನೆಯು ದಿನವೂ ನನ್ನನ್ನು ಪ್ರಾರ್ಥಿಸುವಂತೆ ಪ್ರೇರೇಪಿಸಿತು. ನನ್ನ ವಾಚ್ಟವರ್ ನ ಚಂದಾ ಮುಗಿದಿತ್ತು, ಮತ್ತು ಲುಸಿಲ್ ಹೆವರ್ತ್ಗೆ ಚಂದಾ ಮುಗಿದ ನೋಟೀಸ್ ಸಿಕ್ಕಿತು ಮತ್ತು ಅವಳು ನನ್ನನ್ನು ಸಂದರ್ಶಿಸಿದಳು. ಲುಸಿಲ್ಳ ತಂದೆಯಾದ ಪೆರಿ ಹೆವರ್ತ್, ಮತ್ತು ಅವಳ ದೊಡ್ಡ ಕುಟುಂಬದ ಹೆಚ್ಚಿನ ಜನರು 1930 ರುಗಳಿಂದ ಸಾಕ್ಷಿಗಳಾಗಿದ್ದರು. ಲುಸಿಲ್ ಮತ್ತು ನಾನು ಅನುರಕ್ತರಾದೆವು, ಮತ್ತು ಡಿಸೆಂಬರ್ 1943 ರಲ್ಲಿ ನಾವು ವಿವಾಹವಾದೆವು.
ನಾನು 1944 ರಲ್ಲಿ ದೀಕ್ಷಾಸ್ನಾನ ಪಡೆದೆನು ಮತ್ತು ಪಯನೀಯರನಾಗಿ ನನ್ನ ಪತ್ನಿಯೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗಿಯಾದೆನು. ಬೇಗನೇ ನನ್ನನ್ನು ಮಿಲಿಟರಿ ದಳವನ್ನು ಸೇರುವಂತೆ ಕರೆಯಲಾಯಿತು, ಆ ಸೇರಿಕೆಯನ್ನು ನಾನು ನಿರಾಕರಿಸಿದೆ. ಫಲಿತಾಂಶವಾಗಿ, ಓಕಹ್ಲೋಮದ ಎಲ್ ರೆನೋದ ಫೆಡರಲ್ ರಿಫಾರ್ಮಟರಿಯಲ್ಲಿ ಮೂರು ವರ್ಷದ ಶಿಕ್ಷೆಯನ್ನು ನನಗೆ ವಿಧಿಸಲಾಯಿತು. ಯೆಹೋವನಿಗಾಗಿ ಕಷ್ಟಾನುಭವಿಸುವುದು ನನಗೆ ಸಂತೋಷದ ವಿಷಯವಾಗಿತ್ತು. ಪ್ರತಿ ಬೆಳಗಾತ ನಾನು ಎಚ್ಚರಗೊಂಡಾಗ ಮತ್ತು ನಾನು ಎಲ್ಲಿದ್ದೇನೆ ಮತ್ತು ಏತಕ್ಕಾಗಿ ಎಂಬದನ್ನು ಅರಿತಾಗ, ನನಗೆ ತುಂಬಾ ಸಂತೃಪ್ತಿಯ ಅನಿಸಿಕೆಯಾಗುತ್ತಿತ್ತು ಮತ್ತು ನಾನು ಯೆಹೋವನಿಗೆ ಉಪಕಾರ ಹೇಳುತ್ತಿದ್ದೆನು. ಯುದ್ಧಾನಂತರ ನಮ್ಮಲ್ಲಿ ಯಾರು 25 ವರ್ಷ ಪ್ರಾಯಕ್ಕಿಂತ ಮೇಲಿನವರಾಗಿದ್ದರೋ ಅವರಿಗೆ ನಂಬಿಕೆಯ ವಾಗ್ದಾನದ ಮೇಲೆ ಸ್ವಾತಂತ್ರ್ಯ ಕೊಡಲಾರಂಭಿಸಿದರು. ಫೆಬ್ರವರಿ 1946 ರಲ್ಲಿ ನನಗೆ ಬಿಡುಗಡೆಯಾಯಿತು.
ಪೂರ್ಣ ಸಮಯದ ಶುಶ್ರೂಷೆ
ನಾನು ಲುಸಿಲ್ಳನ್ನು ಪುನಃ ಜತೆಗೂಡಿದಾಗ, ಅವಳು ಓಕಹ್ಲೋಮದ ಒಂದು ಚಿಕ್ಕ ಊರಾದ ವ್ಯಾಗ್ನರ್ನಲ್ಲಿ ಪಯನೀಯರ ಸೇವೆ ಮಾಡುತ್ತಿದ್ದಳು. ನಮಗೆ ಮೋಟಾರುಕಾರ್ ಇರಲಿಲ್ಲ, ಆದ್ದರಿಂದ ನಾವು ಎಲ್ಲಾ ಕಡೆ ಕಾಲ್ನಡೆಯಾಗಿ ಹೋಗುತ್ತಾ ಇಡೀ ಊರನ್ನು ಆವರಿಸುತ್ತಿದ್ದೆವು. ತದನಂತರ, ನಾವು ಓಕಹ್ಲೋಮದ ವಿವೂಕಕ್ಕೆ ಸ್ಥಳ ಬದಲಾಯಿಸಿದೆವು. ಬೇಗನೇ ಹತ್ತಿರದ ಒಂದು ರೇಡಿಯೋ ಸೇಷ್ಟನ್ನಲ್ಲಿ ನನಗೊಂದು ಕೆಲಸ ಸಿಕ್ಕಿತು ಮತ್ತು ನಾನು ವಾರ್ತಾಪ್ರಸರಣದಲ್ಲಿ ಕೆಲಸ ಮಾಡತೊಡಗಿದೆ. ದಿನಕ್ಕೆ ಆರು ತಾಸುಗಳ ಕೆಲಸಮಾಡುವುದು ಮತ್ತು ಪಯನೀಯರ ಸಮಯವನ್ನೂ ಹಾಕುವುದೇನೂ ಸುಲಭವಾಗಿರಲಿಲ್ಲ, ಆದರೆ ನಮಗಿರುವ ಯೆಹೋವನ ಸೇವಾ ಸುಯೋಗದಲ್ಲಿ ನಾವು ಉಲ್ಲಾಸಿಸಿದೆವು. ಲಾಸ್ ಏಂಜಲಿಸ್ನಲ್ಲಿ 1947 ರಲ್ಲಿ ನಡೆದ ಅಧಿವೇಶನಕ್ಕೆ ಸರಿಯಾಗಿ ನಾವೊಂದು ಹಳೇ ಕಾರನ್ನು ಖರೀದಿಸಲು ಶಕ್ತರಾದೆವು. ಅಲ್ಲಿ ನಾವು ಮಿಷನೆರಿ ತರಬೇತಿಗಾಗಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ಗೆ ಅರ್ಜಿಹಾಕಲು ಯೋಚಿಸ ತೊಡಗಿದೆವು.
ಇದೊಂದು ದೊಡ್ಡ ಹೆಜ್ಜೆಯೆಂದು ನಾವು ಅರಿತೆವು ಮತ್ತು ಅಮೆರಿಕವನ್ನು ಬಿಟ್ಟುಹೋಗುವ ನಿರ್ಣಯವನ್ನು ಮಾಡುವುದರಲ್ಲಿ ನಾವು ಅವಸರ ಮಾಡಲು ಬಯಸಲಿಲ್ಲ. ನಾನು ಇನ್ನೂ ನನ್ನ ಮಕ್ಕಳನ್ನು ಕಳಕೊಂಡ ಮನೋಬೇಗುದಿಯಲ್ಲಿದ್ದೆನು, ಅದುದರಿಂದ ಅವರ ಸ್ವಾಧೀನಕ್ಕಾಗಿ ನಾವು ಇನ್ನೊಮ್ಮೆ ಪ್ರಯತ್ನಿಸಿದೆವು. ಆದರೆ ನನ್ನ ಹಿಂದಣ ಜೀವನಶೈಲಿ ಮತ್ತು ಸೆರೆಮನೆಯ ದಾಖಲೆಯಿಂದಾಗಿ ಅದು ನನಗೆ ಸಿಕ್ಕಲಿಲ್ಲ. ಆದ್ದರಿಂದ ಮಿಷನೆರಿಗಳಾಗುವಂತೆ ಪ್ರಯತ್ನಿಸಲು ನಾವು ನಿರ್ಧರಿಸಿದೆವು. ಗಿಲ್ಯಾದ್ನ 12 ನೆಯ ತರಗತಿಗೆ ನಮ್ಮನ್ನು ಆಮಂತ್ರಿಸಲಾಯಿತು.
ನಾವು 1949 ರಲ್ಲಿ ಶಾಲೆಯಿಂದ ಪದವಿಯನ್ನು ಪಡೆದೆವು, ಆದರೆ ಮೊದಲಲ್ಲಿ ಟೆನೆಸ್ಸೀಯ ಸಭೆಗಳನ್ನು ಸಂದರ್ಶಿಸುವ ನೇಮಕವು ನಮಗೆ ಸಿಕ್ಕಿತು. ಅಮೆರಿಕದಲ್ಲಿ ಮೂರು ವರ್ಷಗಳ ಸಂಚಾರ ಸೇವೆಯನ್ನು ಮಾಡಿದ ಅನಂತರ, ಸಾರುವ ಕೆಲಸ ಮಾಡುವುದು ಮಾತ್ರವಲ್ಲದೆ ಇಥಿಯೋಪಿಯದಲ್ಲಿ ಶಾಲೆ ಕಲಿಸಲು ನಮಗೆ ಮನಸ್ಸಿದೆಯೇ ಎಂದು ಕೇಳಿದ ಪತ್ರವೊಂದು ವಾಚ್ಟವರ್ ಸೊಸೈಟಿಯ ಪ್ರೆಸಿಡೆಂಟರ ಆಫೀಸಿನಿಂದ ನಮಗೆ ಸಿಕ್ಕಿತು. ಮಿಷನೆರಿಗಳು ಕಲಿಸಬೇಕು ಎಂಬದು ಆ ಸರಕಾರದ ಆವಶ್ಯಕತೆಗಳಲ್ಲಿ ಒಂದಾಗಿತ್ತು. ನಾವು ಒಪ್ಪಿದೆವು, ಮತ್ತು 1952 ರ ಬೇಸಗೆಯಲ್ಲಿ, ನಾವು ಇಥಿಯೋಪಿಯಕ್ಕೆ ಹೊರಟೆವು.
ಇಥಿಯೋಪಿಯಕ್ಕೆ ಬಂದು ಸೇರಿದಾಗ, ಪ್ರಾತಃಕಾಲಗಳಲ್ಲಿ ನಾವು ಗ್ರೇಡ್-ಸ್ಕೂಲ್ ಕ್ಲಾಸ್ಗಳನ್ನು ಕಲಿಸಿದೆವು ಮತ್ತು ಅಪರಾಹ್ನಗಳಲ್ಲಿ ಉಚಿತ ಬೈಬಲ್ ಕ್ಲಾಸುಗಳನ್ನು ನಡಿಸಿದೆವು. ಬೇಗನೇ ಬೈಬಲ್ ಅಧ್ಯಯನಗಳಿಗಾಗಿ ಎಷ್ಟು ಮಂದಿ ಬರತೊಡಗಿದರೆಂದರೆ, ನಾವು ಹೆಚ್ಚಾಗಿ ಪ್ರತಿ ದಿನ ಮೂರು ಅಥವಾ ನಾಲ್ಕು ತಾಸು ಬೈಬಲನ್ನು ಕಲಿಸುತ್ತಿದ್ದೆವು. ವಿದ್ಯಾರ್ಥಿಗಳಲ್ಲಿ ಕೆಲವರು ಪೊಲೀಸರಾಗಿದ್ದರು; ಇತರರು ಅಧ್ಯಾಪಕರಾಗಿದ್ದರು ಅಥವಾ ಮಿಷನೆರಿ ಶಾಲೆಗಳಲ್ಲಿ ಮತ್ತು ಇಥಿಯೋಪಿಯನ್ ಆರ್ತೊಡಾಕ್ಸ್ ಶಾಲೆಗಳಲ್ಲಿ ಡೀಕನ್ಗಳಾಗಿದ್ದರು. ಕೆಲವೊಮ್ಮೆ ಪ್ರತಿ ಬೈಬಲ್ ಅಧ್ಯಯನ ಕ್ಲಾಸ್ನಲ್ಲಿ 20 ಅಥವಾ ಹೆಚ್ಚು ಮಂದಿ ಇರುತ್ತಿದ್ದರು! ವಿದ್ಯಾರ್ಥಿಗಳಲ್ಲಿ ಅನೇಕರು ಸುಳ್ಳು ಧರ್ಮವನ್ನು ತ್ಯಜಿಸಿದರು ಮತ್ತು ಯೆಹೋವನನ್ನು ಸೇವಿಸ ತೊಡಗಿದರು. ನಾವು ಅತ್ಯುಲ್ಲಾಸಪಟ್ಟೆವು. ಪುನಃ ಪ್ರತಿ ಮುಂಜಾನೆ ನಾನು ಎದ್ದಾಗ, ಯೆಹೋವನಿಗೆ ಉಪಕಾರ ಹೇಳಿದೆನು.
ಮಾತಾಪಿತೃತ್ವ ಮತ್ತು ನಿಷೇಧದ ಕೆಳಗೆ ಸಾರುವಿಕೆ
ನಾವು ಹೆತ್ತವರಾಗಲಿದ್ದೇವೆಂದು 1954 ರಲ್ಲಿ ನಮಗೆ ತಿಳಿದುಬಂತು, ಆದ್ದರಿಂದ ಹಿಂದೆ ಅಮೆರಿಕಕ್ಕೆ ಹೋಗಲೋ ಇಲ್ಲವೇ ಇಥಿಯೋಪಿಯದಲ್ಲಿ ಉಳಿಯಲೋ ಎಂಬ ನಿರ್ಣಯವನ್ನು ನಮಗೆ ಮಾಡಬೇಕಾಯಿತು. ಉಳಿಯುವುದು ನಿಶ್ಚಯವಾಗಿಯೂ, ನನಗೆ ಒಂದು ಐಹಿಕ ಉದ್ಯೋಗವು ಸಿಕ್ಕುವುದರ ಮೇಲೆ ಆಧರಿಸಿತ್ತು. ವಾರ್ತಾಪ್ರಸರಣದ ಎಂಜಿನಿಯರ್ ಆಗಿ, ಸಾಮ್ರಾಟ ಹೇಲಿ ಸೆಲಾಸಿಗಾಗಿ ಒಂದು ರೇಡಿಯೋ ಸೇಷ್ಟನ್ ನಡಿಸುವ ಕೆಲಸ ನನಗೆ ದೊರೆಯಿತು. ಆದುದರಿಂದ ನಾವು ಅಲ್ಲಿ ಉಳಿದೆವು.
ನಮ್ಮ ಮಗಳು ಜೂಡಿತ್ ಸಪ್ಟಂಬರ 8, 1954 ರಲ್ಲಿ ಹುಟ್ಟಿದಳು. ಸಾಮ್ರಾಟನಿಗಾಗಿ ಕೆಲಸ ಮಾಡುತ್ತಿದ್ದದರಿಂದ ನನ್ನ ಕೆಲಸ ಭದ್ರವಾಗಿತ್ತೆಂದು ನಾನು ನೆನಸಿದ್ದೆ. ಆದರೆ ಎರಡು ವರ್ಷಗಳ ಅನಂತರ ನಾನು ಆ ಕೆಲಸವನ್ನು ಕಳಕೊಂಡೆನು. ಆದರೂ, ಒಂದು ತಿಂಗಳಿಗಿಂತಲೂ ಕಡಿಮೆ ಸಮಯದೊಳಗೆ, ಪೊಲೀಸ್ ವಿಭಾಗವು ನನ್ನನ್ನು ಕೆಲಸಕ್ಕಿಟ್ಟಿತು—ಹೆಚ್ಚು ಸಂಬಳದ ಮೇಲೆ—ದಿಮ್ವಾರ್ಗಿ ರೇಡಿಯೋಗಳನ್ನು ರಿಪೇರಿಮಾಡಲು ಯುವಕರ ಒಂದು ತರಗತಿಗೆ ಕಲಿಸುವುದಕ್ಕಾಗಿ. ಮುಂದಿನ ಮೂರು ವರ್ಷಗಳೊಳಗೆ, ನಮ್ಮ ಗಂಡು ಮಕ್ಕಳು, ಫಿಲಿಪ್ ಮತ್ತು ಲೆಸ್ಲಿ ಹುಟ್ಟಿದರು.
ಈ ಮಧ್ಯೆ ಸಾರುವ ಕಾರ್ಯದಲ್ಲಿ ಭಾಗವಹಿಸುವ ನಮ್ಮ ಸ್ವಾತಂತ್ರ್ಯವು ಬದಲಾಗುತ್ತಾ ಬಂತು. ಇಥಿಯೋಪಿಯದ ಆರ್ತೊಡಾಕ್ಸ್ ಚರ್ಚು ಯೆಹೋವನ ಸಾಕ್ಷಿಗಳ ಎಲ್ಲಾ ಮಿಷನೆರಿಗಳನ್ನು ಹೊರಗಟ್ಟಲು ಸರಕಾರವನ್ನು ಪ್ರೇರೇಪಿಸಿತ್ತು. ಸೊಸೈಟಿಯ ಸಲಹೆಯ ಮೇರೆಗೆ, ನನ್ನ ವೀಸಾವನ್ನು ಮಿಷನೆರಿ ಕಾರ್ಯದಿಂದ ಐಹಿಕ ಉದ್ಯೋಗಕ್ಕೆ ನಾನು ಬದಲಾಯಿಸಿದೆ. ನಮ್ಮ ಮಿಷನೆರಿ ಕಾರ್ಯವು ನಿಷೇಧಿಸಲ್ಪಟ್ಟಿತ್ತು, ಮತ್ತು ನಾವು ಜಾಗರೂಕತೆಯಿಂದಲೂ ಎಚ್ಚರಿಕೆಯಿಂದಲೂ ಇರಬೇಕಿತ್ತು. ಎಲ್ಲಾ ಸಭಾ ಕೂಟಗಳು ಮುಂದರಿದವು, ಆದರೆ ನಾವು ಚಿಕ್ಕ ಅಭ್ಯಾಸ ಗುಂಪುಗಳಾಗಿ ಕೂಡಿಬಂದೆವು.
ಸಾಕ್ಷಿಗಳೆಂಬ ಸಂದೇಹದ ಮೇಲೆ ಹಲವಾರು ಮನೆಗಳನ್ನು ಪೊಲೀಸರು ತಲಾಷು ಮಾಡಿದರು. ಆದರೂ, ಅವರಿಗೆ ಅರಿವಿಲ್ಲದಂತೆ, ಯೆಹೋವನ ಆರಾಧಕನಾದ ಒಬ್ಬ ಪೊಲೀಸ್ ಲೆಫನ್ಟಂಟ್ ದಾಳಿಗಳ ಗೊತ್ತಾದ ಸಮಯವನ್ನು ಯಾವಾಗಲೂ ನಮಗೆ ತಿಳಿಸುತ್ತಿದ್ದನು. ಫಲಿತಾಂಶವಾಗಿ, ಆ ವರ್ಷಗಳಲ್ಲಿ ಯಾವ ಸಾಹಿತ್ಯವೂ ಜಪಿಯ್ತಾಗಲಿಲ್ಲ. ನಾವು ನಮ್ಮ ವಾಚ್ಟವರ್ ಅಭ್ಯಾಸಗಳನ್ನು, ಎಲ್ಲಿ ಹೊರಗೆ ಊಟಕ್ಕಾಗಿ ಪಿಕ್ನಿಕ್ ಮೇಜುಗಳು ದೊರೆಯುತ್ತಿದ್ದವೋ ಆ ಊರಿನಂಚಿನ ರೆಸ್ಟೊರಂಟ್ಗಳಿಗೆ ಹೋಗುವ ಮೂಲಕ ನಡಿಸುತ್ತಿದ್ದೆವು.
ಪೊಲೀಸ್ ಕೆಡೆಟ್ಗಳಿಗೆ ನಾನು ರೇಡಿಯೋ ಕಲಿಸುತ್ತಿದ್ದ ಈ ಸಮಯಾವಧಿಯಲ್ಲಿಯೇ, ನಾನು ಪ್ರಾರಂಭದಲ್ಲಿ ತಿಳಿಸಿದ ಆ ವಿದ್ಯಾರ್ಥಿಯು ಒಂದು ಬೈಬಲ್ ಅಭ್ಯಾಸಕ್ಕಾಗಿ ನನ್ನನ್ನು ಕೇಳಿದ್ದನು. ಅವನು ಪ್ರಾಮಾಣಿಕನೆಂದು ನಾನು ಊಹಿಸಿದೆ, ಆದ್ದರಿಂದ ನಾವು ಆರಂಭಿಸಿದೆವು. ಕೇವಲ ಎರಡೇ ಅಭ್ಯಾಸಗಳ ಅನಂತರ, ಎರಡನೆಯ ವಿದ್ಯಾರ್ಥಿ ಅವನೊಂದಿಗೆ ಬಂದನು, ಆ ಮೇಲೆ ಮೂರನೆಯವನು. ಅವರು ನನ್ನೊಂದಿಗೆ ಅಭ್ಯಾಸ ಮಾಡುತ್ತಾರೆಂದು ಯಾರಿಗೂ ಎಂದೂ ಹೇಳದಂತೆ ನಾನವರನ್ನು ಎಚ್ಚರಿಸಿದ್ದೆ, ಮತ್ತು ಅವರೆಂದೂ ಹೇಳಲಿಲ್ಲ.
ನ್ಯೂ ಯಾರ್ಕ್ನ ಯಾಂಕೀ ಸ್ಟೇಡಿಯಮ್ ಮತ್ತು ಪೊಲೋ ಗ್ರೌಂಡ್ನಲ್ಲಿ, 1958 ರಲ್ಲಿ, ದೈವಿಕ ಚಿತ್ತ ಅಂತರ್ರಾಷ್ಟ್ರೀಯ ಸಮ್ಮೇಳನವು ನಡೆಯಿತು. ಈ ಮಧ್ಯೆ ಪೆಗಿ ಮತ್ತು ಹ್ಯಾಂಕ್, ಹಾಗೂ ನನ್ನ ದೊಡ್ಡ ಕುಟುಂಬದ ಇತರ ಅನೇಕ ಸದಸ್ಯರು ಕ್ರಿಯಾಶೀಲ ಸಾಕ್ಷಿಗಳಾಗಿದ್ದರು. ಹಾಜರಾಗಲು ಶಕ್ತನಾದದ್ದಕ್ಕಾಗಿ ನಾನೆಷ್ಟು ಹರ್ಷಗೊಂಡೆನು! ನನ್ನ ಇಬ್ಬರು ದೊಡ್ಡ ಮಕ್ಕಳೊಂದಿಗೆ ಮತ್ತು ಕುಟುಂಬ ಸದಸ್ಯರೊಂದಿಗೆ ಒಂದು ಪುನರ್ಮಿಲನದಲ್ಲಿ ನಾನು ಆನಂದಿಸಿದೆ ಮಾತ್ರವೇ ಅಲ್ಲ, ಅಧಿವೇಶನದ ಕೊನೆಯ ದಿನದಲ್ಲಿ ಕೂಡಿಬಂದ 2.5 ಲಕ್ಷಕ್ಕಿಂತಲೂ ಹೆಚ್ಚು ದೊಡ್ಡ ಜನ ಸಮುದಾಯವನ್ನು ಕಾಣಲು ಸಹ ನಾನು ಪುಳಕಿತಗೊಂಡೆನು!
ಮಾರಣೆಯ ವರ್ಷ ಸೊಸೈಟಿಯ ಪ್ರೆಸಿಡೆಂಟರಾದ ನೇತನ್ ಎಚ್ ನೋರ್, ನಮ್ಮ ಸಂದರ್ಶನೆಗಾಗಿ ಇಥಿಯೋಪ್ಯಕ್ಕೆ ಬಂದರು. ನಿಷೇಧದ ಕೆಳಗೆ ಕಾರ್ಯವನ್ನು ಮುಂದರಿಸಲು ಅವರಲ್ಲಿ ಒಳ್ಳೇ ಸಲಹೆಗಳಿದ್ದವು, ಮತ್ತು ನಮ್ಮ ಕುಟುಂಬದಲ್ಲಿ ಮತ್ತು ನಮ್ಮ ಆತ್ಮಿಕ ಪ್ರಗತಿಯಲ್ಲಿ ಅವರು ಆಸಕ್ತಿ ತೋರಿಸಿದರು. ನಾವು ಮಕ್ಕಳಿಗೆ ಪ್ರಾರ್ಥನೆ ಮಾಡಲು ಕಲಿಸುತ್ತಿದ್ದೇವೆಂದು ನಾನು ವಿವರಿಸಿದೆನು. ಜೂಡಿತ್ ಪ್ರಾರ್ಥನೆ ಮಾಡುವುದನ್ನು ಕೇಳಬಯಸುವಿರೋ ಎಂದೆನು. ಅವರು ಹೌದೆಂದರು ಮತ್ತು ಅನಂತರ ಅವಳಿಗೆ ಅವರಂದದ್ದು: “ಅದು ಬಹು ಚೆಲೋದಾಗಿತ್ತು, ಜೂಡಿತ್.” ಆ ಮೇಲೆ ಊಟದ ವೇಳೆ ನಮ್ಮ ಪ್ರಾರ್ಥನೆ ಮಾಡುವಂತೆ ನಾನು ಸಹೋದರ ನೋರ್ರನ್ನು ಕೇಳಿಕೊಂಡೆ ಮತ್ತು ಅವರು ಮುಗಿಸಿದಾಗ, ಜೂಡಿತ್ ಅಂದದ್ದು: “ಅದು ಬಹು ಚೆಲೋದಾಗಿತ್ತು, ಸಹೋದರ ನೋರ್!”
ನಮ್ಮ ಮಕ್ಕಳನ್ನು ಅಮೆರಿಕದಲ್ಲಿ ಬೆಳೆಸಿದ್ದು
ಪೊಲೀಸ್ ವಿಭಾಗದೊಂದಿಗೆ ನನ್ನ ಕೆಲಸದ ಕರಾರು 1959 ರಲ್ಲಿ ಕೊನೆಗೊಂಡಿತು. ನಮಗೆ ಉಳಿಯಲು ಮನಸ್ಸಿತ್ತು, ಆದರೆ ಸರಕಾರವು ನನಗೆ ಯಾವುದೇ ಕೆಲಸದ ಹೊಸ ಕರಾರಿಗೆ ಸಮ್ಮತಿಸಲಿಲ್ಲ. ಹೀಗೆ ನಾವು ಎಲ್ಲಿಗೆ ಹೋಗಸಾಧ್ಯವಿತ್ತು? ಸಹೋದರರಿಗಾಗಿ ಹೆಚ್ಚು ಅಗತ್ಯತೆ ಇದ್ದ ದೇಶಗಳಿಗೆ ಹೋಗಲು ನಾನು ಪ್ರಯತ್ನಿಸಿದ್ದೆ, ಆದರೆ ಹಾಗೆ ಮಾಡಲು ಶಕ್ತನಾಗಲಿಲ್ಲ. ಕೊಂಚಮಟ್ಟಿಗೆ ದುಃಖದಿಂದಲೇ, ನಾವು ಅಮೆರಿಕಕ್ಕೆ ಹಿಂತಿರುಗಿದೆವು. ಆಗಮಿಸಿದಾಗ, ಕುಟುಂಬದ ಒಂದು ಹರ್ಷಭರಿತ ಪುನರ್ಮಿಲನವು ನಮಗಾಯಿತು; ನನ್ನ ಎಲ್ಲಾ ಐವರು ಮಕ್ಕಳು ಪರಸ್ಪರ ಪರಿಚಯ ಮಾಡಿಕೊಂಡರು ಮತ್ತು ಆ ಕ್ಷಣವೇ ಒಬ್ಬರನ್ನೊಬ್ಬರು ಪ್ರೀತಿಸಿದರು. ಅಂದಿನಿಂದ ಅವರು ಯಾವಾಗಲೂ ಆಪ್ತರಾಗಿಯೇ ಇದ್ದಾರೆ.
ನಾವು ಕ್ಯಾನ್ಸಸ್ನ ವಿಚಿಟ್ಚದಲ್ಲಿ ನೆಲೆಸಿದೆವು, ಅಲ್ಲಿ ರೇಡಿಯೋ ಎಂಜಿನಿಯರ್ ಮತ್ತು ಡಿಸ್ಕ್ ಜಾಕಿಯ ಕೆಲಸ ನನಗೆ ಸಿಕ್ಕಿತು. ಲುಸಿಲ್ ಗೃಹಕೃತ್ಯಗಳಿಗೆ ತನ್ನನ್ನು ಒಗ್ಗಿಸಿಕೊಂಡಳು, ಮತ್ತು ಮಕ್ಕಳು ಮನೆಗೆ ಹತ್ತಿರದ ಶಾಲೆಗೆ ಹಾಜರಾದರು. ಪ್ರತಿ ಸೋಮವಾರ ರಾತ್ರಿ ನಾನು ಒಂದು ಕುಟುಂಬ ವಾಚ್ಟವರ್ ಅಭ್ಯಾಸ ನಡಿಸುತ್ತಿದ್ದೆ, ಅದನ್ನು ಯಾವಾಗಲೂ ಸಜೀವಭರಿತವಾಗಿ ಮತ್ತು ಆಸಕ್ತಿಯುಳ್ಳದ್ದಾಗಿ ಮಾಡಲು ಪ್ರಯತ್ನಿಸುತ್ತಿದ್ದೆನು. ಶಾಲೆಯಲ್ಲಿ ಸಮಸ್ಯೆಗಳಿವೆಯೋ ಎಂದು ಕಾಣಲು ನಾವು ದಿನದಿನವೂ ಪರೀಕ್ಷಿಸುತ್ತಿದೆವ್ದು.
ಮಕ್ಕಳಲ್ಲಿ ಪ್ರತಿಯೊಬ್ಬರು ದೇವಪ್ರಭುತ್ವ ಶುಶ್ರೂಷೆ ಶಾಲೆಯನ್ನು ಸೇರಿದಂತೆ, ಈ ತರಬೇತು ಅವರ ಶಾಲಾ ಶಿಕ್ಷಣಕ್ಕೆ ಸಹಾಯ ನೀಡಿತು. ಬಾಲ್ಯದಿಂದಲೇ ಕ್ಷೇತ್ರ ಶುಶ್ರೂಷೆಯಲ್ಲಿ ನಾವು ಅವರಿಗೆ ತರಬೇತು ಕೊಟ್ಟೆವು. ಮನೆಬಾಗಲಲ್ಲಿ ಬೈಬಲ್ ಸಾಹಿತ್ಯವನ್ನು ಕೊಡಲು ಅವರು ಕಲಿತರು, ಮತ್ತು ನಮ್ಮೊಂದಿಗೆ ಮನೆ ಬೈಬಲಭ್ಯಾಸಗಳಿಗೆ ಬಂದರು.
ಇತರರಲ್ಲಿ ಒಬ್ಬರಿಗೆ ಏನಿದೆಯೇ ಅದು ಅವರಲ್ಲಿ ಪ್ರತಿಯೊಬ್ಬರಿಗೂ ಯಾವಾಗಲೂ ಸಿಗಸಾಧ್ಯವಿಲ್ಲವೆಂಬದನ್ನು ವಿವರಿಸುತ್ತಾ, ಜೀವಿತದ ಮೂಲಭೂತ ವಿಷಯಗಳನ್ನು ಮಕ್ಕಳಿಗೆ ಕಲಿಸಲು ಸಹ ನಾವು ಪ್ರಯತ್ನಿಸಿದೆವು. ದೃಷ್ಟಾಂತಕ್ಕೆ, ಒಂದೇ ರೀತಿಯ ಇನಾಮು ಎಲ್ಲರಿಗೂ ಯಾವಾಗಲೂ ದೊರೆಯುತ್ತಿರಲಿಲ್ಲ. “ನಿನ್ನ ಸಹೋದರ ಅಥವಾ ಸಹೋದರಿಗೆ ಒಂದು ಆಟಿಕೆಯು ದೊರೆಯುವುದಾದರೆ,” ನಾವು ಅವರೊಂದಿಗೆ ವಿವೇಚಿಸಿದ್ದು, “ಮತ್ತು ನಿನಗೆ ಅದು ದೊರೆಯುವುದಿಲ್ಲವಾದರೆ, ನೀನು ಗುಣುಗುಟ್ಟುವುದು ಯೋಗ್ಯವೋ?” ನಿಶ್ಚಯವಾಗಿ ಬೇರೆಯವರಿಗೆ ಬೇರೆ ಸಮಯಗಳಲ್ಲಿ ಏನಾದರೂ ದೊರಕುತ್ತಿತ್ತು, ಹೀಗೆ ಯಾರೂ ದುರ್ಲಕ್ಷಿಸಲ್ಪಡುತ್ತಿರಲಿಲ್ಲ. ನಾವು ಯಾವಾಗಲೂ ಅವರೆಲ್ಲರನ್ನೂ ಪ್ರೀತಿಸಿದೆವು, ಒಬ್ಬನಿಗೆ ಬೇರೆ ಇಬ್ಬರಿಗಿಂತ ಹೆಚ್ಚು ಮೆಚ್ಚಿಗೆ ಎಂದೂ ತೋರಿಸತ್ತಿರಲಿಲ್ಲ.
ನಮ್ಮ ಮಕ್ಕಳಿಗೆ ಮಾಡಲು ಅನುಮತಿಯಿಲ್ಲದ ವಿಷಯಗಳನ್ನು ಮಾಡಲು ಬೇರೆ ಮಕ್ಕಳಿಗೆ ಕೆಲವೊಮ್ಮೆ ಅನುಮತಿ ಸಿಗುತ್ತಿತ್ತು. “ಇಂಥಿಂಥವರು ಅದನ್ನು ಮಾಡಬಹುದು, ನಾವೇಕೆ ಮಾಡಬಾರದು?” ಎಂದು ಹೇಳುವುದು ಆಗಾಗ್ಯೆ ನನಗೆ ಕೇಳಬಂತು. ನಾನು ವಿವರಿಸಲು ಪ್ರಯತ್ನಿಸಿದೆ, ಆದರೆ ಕೆಲವು ಸಾರಿ ಉತ್ತರವು ಕೇವಲ ಹೀಗಿರಬೇಕಾಗಿತ್ತು, “ನೀವು ಆ ಕುಟುಂಬದಲ್ಲಿಲ್ಲ, ನೀವು ಒಬ್ಬ ಬ್ರಮ್ಲಿ. ನಮಗೆ ಬೇರೆ ನಿಯಮಗಳಿವೆ.”
ಪೆರುವಿನಲ್ಲಿ ಸೇವೆಮಾಡಿದ್ದು
ಇಥಿಯೋಪಿಯದಿಂದ ಹಿಂತಿರುಗಿದ ಸಮಯದಿಂದಲೂ, ಲುಸಿಲ್ ಮತ್ತು ನಾನು ಪುನಃ ಮಿಷನೆರಿ ಕೆಲಸದಲ್ಲಿ ಭಾಗವಹಿಸಲು ಹಂಬಲಿಸಿದ್ದೆವು. ಕೊನೆಗೆ 1972 ರಲ್ಲಿ, ದಕ್ಷಿಣ ಅಮೆರಿಕದ ಪೆರುವಿಗೆ ಹೋಗುವ ಸಂದರ್ಭ ಬಂತು. ನಮ್ಮ ಮಕ್ಕಳನ್ನು ಅವರ ಹದಿಹರೆಯದ ವರ್ಷಗಳಲ್ಲಿ ಪಾಲಿಸಲು, ಇದಕ್ಕಿಂತ ಉತ್ತಮ ಸ್ಥಳವನ್ನು ನಾವು ಆರಿಸುವಂತಿರಲಿಲ್ಲ. ಪೆರುವಿಗೆ ಸೇವೆ ಮಾಡಲು ಬಂದಿದ್ದ ಮಿಷನೆರಿಗಳು, ವಿಶೇಷ ಪಯನೀಯರರು, ಮತ್ತು ಇತರರೊಂದಿಗೆ ಅವರು ಆನಂದಿಸಿದ ಸಹವಾಸವು, ಯಾರು ರಾಜ್ಯಾಭಿರುಚಿಗಳನ್ನು ನಿಜವಾಗಿಯೂ ಪ್ರಥಮವಾಗಿ ಹುಡುಕುತ್ತಾರೋ ಅವರೆಷ್ಟು ಸಂತೋಷಿತರೆಂದು ಮೊತ್ತಮೊದಲಾಗಿ ಕಾಣಲು ಅವರಿಗೆ ಸಹಾಯಮಾಡಿತು. ಫಿಲಿಪ್ ತನ್ನ ಸಹವಾಸವನ್ನು ಸಕಾರಾತ್ಮಕ ಸಮಾನಸ್ಥ ಒತ್ತಡವೆಂದು ಕರೆದನು.
ರಾಜ್ಯ ಶುಶ್ರೂಷೆಯಲ್ಲಿ ಎಷ್ಟು ಸಾಫಲ್ಯವು ನಮಗೆ ದೊರೆಯುತ್ತಿತ್ತೆಂದು ಕೆಲವು ಸಮಯದ ನಂತರ ಕ್ಯಾನ್ಸಸ್ನ ಕೆಲವು ಹಳೇ ಸ್ನೇಹಿತರಿಗೆ ತಿಳಿಯಿತು, ಮತ್ತು ಅವರು ಪೆರುವಿನಲ್ಲಿ ನಮ್ಮೊಂದಿಗೆ ಜತೆಗೂಡಿದರು. ನಾನು ನಮ್ಮ ಮನೆಯನ್ನು ಒಂದು ಮಿಷನೆರಿ ಮನೆಯಂತೆ ವ್ಯವಸ್ಥಾಪಿಸಿದೆನು. ಎಲ್ಲರಿಗೂ ಕ್ಷೇತ್ರ ಸೇವೆಯಲ್ಲಿ ಆನಂದಿಸಲು ಸಮಯವು ದೊರಕುವಂತೆ ಪ್ರತಿಯೊಬ್ಬನಿಗೆ ನೇಮಿತ ಕೆಲಸಗಳು ಕೊಡಲ್ಪಟ್ಟವು. ಪ್ರತಿ ಬೆಳಿಗ್ಗೆ ಬೈಬಲ್ ವಚನದ ಒಂದು ಚರ್ಚೆಯು ನಡಿಸಲ್ಪಟ್ಟಿತು. ಅದು ನಮಗೆಲ್ಲರಿಗೆ ಬಹಳ ಸಂತೋಷದ ಸಮಯವಾಗಿತ್ತು. ಪುನಃ, ನಾನು ಪ್ರತಿ ಬೆಳಿಗ್ಗೆ ಎಚ್ಚತ್ತಾಗ ಮತ್ತು ನಾನು ಎಲ್ಲಿದ್ದೇನೆ ಮತ್ತು ಏತಕ್ಕಾಗಿ ಎಂದು ಅರಿತಾಗ, ನಾನು ಮೌನವಾಗಿ ಯೆಹೋವನಿಗೆ ಆಳವಾದ ಕೃತಜ್ಞತೆಯನ್ನು ಸಲ್ಲಿಸಿದೆನು.
ತಕ್ಕ ಸಮಯದಲ್ಲಿ ಜೂಡಿತ್ ವಿವಾಹವಾದಳು ಮತ್ತು ಅಮೆರಿಕಕ್ಕೆ ಹಿಂತಿರುಗಿ ಅಲ್ಲಿ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದರಿಸಿದಳು. ಮೂರು ವರ್ಷಗಳ ವಿಶೇಷ ಪಯನೀಯರ ಸೇವೆಯ ಅನಂತರ, ಫಿಲಿಪ್, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ ಬೆತೆಲ್ ಸೇವೆಗಾಗಿ ಅರ್ಜಿ ಹಾಕಿದನು ಮತ್ತು ಸ್ವೀಕರಿಸಲ್ಪಟ್ಟನು. ಕೊನೆಗೆ ಲೆಸ್ಲಿ ಸಹ ಅಮೆರಿಕಕ್ಕೆ ಹಿಂತಿರುಗಿದನು. ಅವರು ಸಂಮಿಶ್ರಿತ ಭಾವುಕತೆಗಳಿಂದ ಹೊರಟುಹೋದರು ಮತ್ತು ಅವರಿಗಾಗಿ ನಾವು ಮಾಡಿದ ಎಲ್ಲವುಗಳಲ್ಲಿ ಅತ್ಯುತ್ತಮ ವಿಷಯವು ಅವರನ್ನು ಪೆರುವಿಗೆ ಕೊಂಡೊಯ್ದದ್ದೇ ಎಂದವರು ಅನೇಕಾವರ್ತಿ ನಮಗೆ ಹೇಳಿದ್ದಾರೆ.
ಪೆರುವಿನ ಆರ್ಥಿಕ ಪರಿಸ್ಥಿತಿಯು ಕೆಡುತ್ತಾ ಬಂದಂತೆ, ನಾವೂ ಬಿಟ್ಟು ಹೊರಡಬೇಕಾದ ವಾಸ್ತವಿಕತೆ ತೋರಿಬಂತು. ವಿಚಿಟ್ಚಕ್ಕೆ 1978 ರಲ್ಲಿ ಹಿಂದೆ ಬಂದಾಗ, ಸ್ಪ್ಯಾನಿಷ್-ಮಾತಾಡುವ ಸಾಕ್ಷಿಗಳ ಒಂದು ಗುಂಪನ್ನು ನಾವು ಕಂಡೆವು. ನಾವು ಉಳುಕೊಂಡು ಅವರಿಗೆ ನೆರವಾಗುವಂತೆ ಅವರು ಕೇಳಿಕೊಂಡರು. ನಾವು ಸಂತೋಷದಿಂದ ಸಮ್ಮತಿಸಿದೆವು. ಒಂದು ಸಭೆಯು ರಚಿಸಲ್ಪಟ್ಟಿತು, ಮತ್ತು ಬೇಗನೇ ಅದು, ನಾವು ಹಿಂದೆ ಸೇವೆಮಾಡಿದ್ದವುಗಳು ಹೇಗೋ ಹಾಗೆ, ನಮಗೆ ಅತಿ ಪ್ರಿಯವಾಯಿತು.
ಎಕಡ್ವಾರ್ ಸಂಜ್ಞೆಮಾಡುತ್ತದೆ
ಒಂದು ಲಕ್ವಾ ಹೊಡೆತ ನನ್ನನ್ನು ಅಂಶಿಕವಾಗಿ ಶಕಿಹ್ತೀನ ಮಾಡಿದರೂ, ಲುಸಿಲ್ ಮತ್ತು ನಾನು ಇನ್ನೊಂದು ದೇಶದಲ್ಲಿ ಪುನಃ ಸೇವೆಮಾಡ ಸಾಧ್ಯವಿದೆಂದು ನಾನು ಚಾಪಲ್ಯದಿಂದ ನಿರೀಕ್ಷಿಸಿದ್ದೆನು. ಎಕಡ್ವಾರ್ನ ಬೆಳವಣಿಗೆಯ ಕುರಿತು ಮತ್ತು ಕ್ರೈಸ್ತ ಹಿರಿಯರಿಗಾಗಿ ಅಲ್ಲಿರುವ ಅಗತ್ಯವನ್ನು ಒಬ್ಬ ಸಂಚಾರ ಮೇಲ್ವಿಚಾರಕನು 1984 ರಲ್ಲಿ ನಮಗೆ ತಿಳಿಸಿದನು. ನನ್ನ ಊನತೆಯಿಂದಾಗಿ ಕ್ಷೇತ್ರ ಶುಶ್ರೂಷೆಯಲ್ಲಿ ಹೆಚ್ಚೇನೂ ಮಾಡಶಕ್ತನಲ್ಲವೆಂದು ನಾನು ತಿಳಿಸಿದೆನು, ಆದರೆ ಅಂಶಿಕವಾಗಿ ಲಕ್ವಾಹೊಡೆದ, 65 ವರ್ಷ ಪ್ರಾಯದ ಹಿರಿಯನು ಕೂಡ ಸಹಾಯಕಾರಿ ಆಗಿರಬಲ್ಲನೆಂಬ ಆಶ್ವಾಸನೆಯನ್ನು ಅವನು ನನಗೆ ಕೊಟ್ಟನು.
ಅವನ ಹೋದ ಮೇಲೆ, ಎಕಡ್ವಾರ್ಗೆ ಹೋಗುವ ಸಂಭವನೀಯತೆಯ ಕುರಿತು ಮಾತಾಡುತ್ತಾ, ನಾವು ಇಡೀ ರಾತ್ರಿ ಮಲಗಲಿಲ್ಲ. ಹೋಗಲು ನನಗಿದ್ದಂಥ ಅದೇ ತೀವ್ರಾಪೇಕ್ಷೆಯು ಲುಸಿಲ್ಳಿಗೂ ಇತ್ತು. ಆದುದರಿಂದ ನಾವು ನಮ್ಮ ಚಿಕ್ಕ ಕೀಟ-ನಿಯಂತ್ರಣ ವ್ಯಾಪಾರವನ್ನು ಜಾಹೀರಾತುಮಾಡಿ, ಅದನ್ನು ಎರಡು ವಾರಗಳಲ್ಲಿ ಮಾರಿದೆವು. ಮತ್ತು ನಮ್ಮ ಮನೆಯನ್ನು ಕೇವಲ ಹತ್ತು ದಿನಗಳಲ್ಲೇ ಮಾರಿಬಿಟ್ಟೆವು. ಹೀಗೆ, ನಮ್ಮ ಹೊಂಬಣ್ಣದ ವರ್ಷಗಳಲ್ಲಿ, ವಿದೇಶ ಮಿಷನೆರಿ ಸೇವೆಯ ನಮ್ಮ ಅತ್ಯಂತ ಮಹತ್ತಾದ ಸಂತೋಷಕ್ಕೆ ನಾವು ಪುನಃ ಹಿಂತಿರುಗಿದೆವು.
ನಾವು ಕ್ವಿಟ್ಟೋದಲ್ಲಿ ನೆಲೆಸಿದೆವು, ಮತ್ತು ಕ್ಷೇತ್ರ ಸೇವೆಯು ಉಲ್ಲಾಸಕರವಾಗಿದ್ದು, ದಿನದಿನವೂ ಒಂದು ಹೊಸ ಅನುಭವವನ್ನು ಅಥವಾ ಸಾಹಸವನ್ನು ತರುತಲ್ತಿತ್ತು. ಆದರೆ 1987 ರಲ್ಲಿ, ನನಗೆ ದೊಡ್ಡ ಕರುಳಿನ ಕ್ಯಾನ್ಸರ್ ಇದೆಯೆಂಬ ರೋಗನಿರ್ಣಯ ಸಿಕ್ಕಿತು; ಮತ್ತು ಕೂಡಲೇ ಶಸ್ತ್ರಕ್ರಿಯೆಯ ಅಗತ್ಯವಿತ್ತು. ಶಸ್ತ್ರಕ್ರಿಯೆಗಾಗಿ ನಾವು ವಿಚಿಟ್ಚಕ್ಕೆ ಹಿಂತಿರುಗಿದೆವು, ಮತ್ತು ಅದು ಯಶಸ್ವಿಯಾಯಿತು. ಹಿಂದೆ ಕ್ವಿಟ್ಟೋಗೆ ಬಂದ ಎರಡೇ ವರ್ಷಗಳಲ್ಲಿ ಕ್ಯಾನ್ಸರ್ ಪುನಃ ತೋರಿಬಂತು, ಮತ್ತು ನಾವು ಅಮೆರಿಕಕ್ಕೆ ಕಾಯಂ ಆಗಿ ಹಿಂತಿರುಗಬೇಕಾಯಿತು. ನಾವು ಉತ್ತರ ಕ್ಯಾರೊಲಿನದಲ್ಲಿ ನೆಲೆಸಿದೆವು, ಪ್ರಸ್ತುತ ಅಲ್ಲಿಯೇ ವಾಸಿಸುತ್ತಿದ್ದೇವೆ.
ಒಂದು ಸಂಪದ್ಭರಿತ, ಪ್ರತಿಫಲದಾಯಕ ಜೀವಿತ
ನನ್ನ ದೈಹಿಕ ಭವಿಷ್ಯತ್ತು ಅಸ್ಥಿರವಾಗಿದೆ. ನನಗೆ 1989 ರಲ್ಲಿ ಬ್ರಹದಂತ್ರ ಭೇದನ (colostomy) ಮಾಡಬೇಕಾಯಿತು. ಹೀಗಿದ್ದರೂ ಕೂಡ ನಾನು ಹಿರಿಯನಾಗಿ ಸೇವೆಮಾಡಲು ಮತ್ತು ನನ್ನ ಮನೆಗೆ ಬರುವವರೊಂದಿಗೆ ಹಲವಾರು ಬೈಬಲ್ ಅಭ್ಯಾಸಗಳನ್ನು ನಡಿಸಲು ಶಕ್ತನಾಗಿದ್ದೇನೆ. ಸತ್ಯದ ಬೀಜಗಳನ್ನು ನೆಡುವ, ನೀರು ಹೊಯ್ಯುವ, ಮತ್ತು ಕೃಷಿಮಾಡುವ ಮೂಲಕ ವರ್ಷಾಂತರಗಳಲ್ಲಿ ನಾವು ಅಕ್ಷರಾರ್ಥವಾಗಿ ನೂರಾರು ಜನರಿಗೆ ಸಹಾಯಮಾಡಿದ್ದೇವೆ. ಅದು ಎಷ್ಟೇ ಸಾರಿ ಪುನರಾವರ್ತಿಸಲ್ಪಡಲಿ, ಅದು ಎಂದೆಂದಿಗೂ ಕುಂದದ ಒಂದು ಸಂತೋಷವಾಗಿದೆ.
ಅಷ್ಟಲ್ಲದೆ, ನನ್ನ ಮಕ್ಕಳೆಲ್ಲರು ಯೆಹೋವನನ್ನು ಸೇವಿಸುವುದನ್ನು ಕಾಣುವುದರಲ್ಲಿ ಮಹಾ ಸಂತೋಷವು ನನಗೆ ಸಿಕ್ಕಿದೆ. ಪೆಗಿ 30 ವರ್ಷಗಳಿಂದಲೂ ತನ್ನ ಗಂಡ ಪೌಲ್ ಮಾಸ್ಕ್ನೊಂದಿಗೆ ಅಮೆರಿಕದಲ್ಲಿ ಸಂಚಾರ ಸೇವೆಯಲ್ಲಿ ಜತೆಗೂಡಿರುತ್ತಾಳೆ. ಫಿಲಿಪ್ ಮತ್ತು ಅವನ ಪತ್ನಿ ಎಲಿಸಬೇತ್, ಜೂಡಿತ್ನೊಂದಿಗೆ ಜತೆಗೂಡಿ, ನ್ಯೂ ಯಾರ್ಕ್ನಲ್ಲಿ ವಿಶೇಷ ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ. ಹ್ಯಾಂಕ್ ಮತ್ತು ಲೆಸ್ಲಿ ಮತ್ತು ಅವರ ಸಂಗಾತಿಗಳು ಕ್ರಿಯಾಶೀಲ ಸಾಕ್ಷಿಗಳಾಗಿದ್ದಾರೆ, ಮತ್ತು ನನ್ನ ನಾಲ್ವರು ಸಹೋದರ ಮತ್ತು ಸಹೋದರಿಯರು ಮತ್ತು ಅವರ ಕುಟುಂಬಗಳು, ಹಾಗೂ 80 ಕ್ಕಿಂತಲೂ ಹೆಚ್ಚು ರಕ್ತ ಸಂಬಂಧಿಗಳು ಸೇರಿ, ಎಲ್ಲರೂ ಯೆಹೋವನನ್ನು ಸೇವಿಸುತ್ತಿದ್ದಾರೆ. ಮತ್ತು ಲುಸಿಲ್, 50 ವರ್ಷಗಳಿಗೆ ಹತ್ತಿರವಾಗಿರುವ ನಮ್ಮ ಮದುವೆಯಲ್ಲಿ ಒಬ್ಬ ಆದರ್ಶ ಕ್ರೈಸ್ತ ಪತ್ನಿಯಾಗಿದ್ದಾಳೆ. ಇತ್ತೀಚಿಗಿನ ವರ್ಷಗಳಲ್ಲಿ ನನ್ನ ಶಿಥಿಲಗೊಳ್ಳುತ್ತಿರುವ ದೇಹದ ಪರಾಮರಿಕೆಯಲ್ಲಿ ನನಗೆ ನೆರವಾಗುವುದರಲ್ಲಿ ಅನೇಕ ಅಹಿತಕರ ಕೆಲಸಗಳನ್ನು ಅವಳು ಗುಣುಗುಟ್ಟದೆ ಮಾಡಿದ್ದಾಳೆ.
ನಿಜವಾಗಿಯೂ ನನ್ನ ಜೀವಿತವು ಸಂತೋಷಭರಿತವು. ಮಾತುಗಳಿಂದ ವರ್ಣಿಸಲಾಗದಷ್ಟು ಆನಂದಕರವಾದದ್ದು. ಯೆಹೋವನನ್ನು ಸೇವಿಸುವುದು ಎಷ್ಟು ಹರ್ಷಕರವಾಗಿದೆಯೆಂದರೆ, ಈ ಭೂಮಿಯ ಮೇಲೆ ಆತನನ್ನು ಸದಾ ಆರಾಧಿಸುವುದೇ ನನ್ನ ಹೃದಯಪ್ರೇರಿತ ಅಪೇಕ್ಷೆಯಾಗಿದೆ. ನಾನು ಯಾವಾಗಲೂ ಕೀರ್ತನೆ 59:16 ನ್ನು ನೆನಪು ಮಾಡುತ್ತೇನೆ, ಅದನ್ನುವುದು: “ನಾನಾದರೋ ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು; ಪ್ರಾತಃಕಾಲದಲ್ಲಿ ನಿನ್ನ ಪ್ರೇಮವನ್ನು ಉಲ್ಲಾಸದಿಂದ ಕೊಂಡಾಡುವೆನು.”
[ಪುಟ 23 ರಲ್ಲಿರುವ ಚಿತ್ರ]
ಇಥಿಯೋಪಿಯದ ಸಾಮ್ರಾಟ ಹೇಲಿ ಸೆಲಾಸಿಯೊಂದಿಗೆ ಜಾರ್ಜ್ ಬ್ರಮ್ಲಿ
[ಪುಟ 25 ರಲ್ಲಿರುವ ಚಿತ್ರ]
ಜಾರ್ಜ್ ಬ್ರಮ್ಲಿ ಮತ್ತು ಅವರ ಪತ್ನಿ, ಲುಸಿಲ್