ಯೆಹೋವ—ಸತ್ಯ ಮತ್ತು ಜೀವಂತ ದೇವರು
ಐಗುಪ್ತದ ಫರೋಹನು: “ಯೆಹೋವನೆಂಬವನು ಯಾರು?” ಎಂದು ಕೇಳಿದಾಗ ಅವನು ಪ್ರತಿಭಟನಾತ್ಮಕವಾಗಿ ಮತ್ತು ತಿರಸ್ಕಾರದಿಂದ ಮಾತಾಡಿದನು. (ವಿಮೋಚನಕಾಂಡ 5:2) ಹಿಂದಿನ ಲೇಖನದಲ್ಲಿ ತೋರಿಸಿದಂತೆ, ಆ ಮನೋಭಾವವು ಐಗುಪ್ತ್ಯರ ಮೇಲೆ, ಫರೋಹ ಮತ್ತು ಅವನ ಸೈನ್ಯಕ್ಕೆ ಜಲಸಮಾಧಿ ಸೇರಿದ್ದ, ಬಾಧೆಗಳನ್ನು ಮತ್ತು ಮರಣವನ್ನು ಬರಮಾಡಿತು.
ಪ್ರಾಚೀನ ಐಗುಪ್ತದಲ್ಲಿ, ಸುಳ್ಳು ದೇವರುಗಳ ಮೇಲೆ ತನ್ನ ಶ್ರೇಷ್ಠತೆಯನ್ನು ಯೆಹೋವ ದೇವರು ರುಜುಪಡಿಸಿದನು. ಆದರೆ ಆತನ ಕುರಿತು ಇನ್ನೂ ಹೆಚ್ಚಿನದ್ದು ಕಲಿಯಲಿಕ್ಕಿದೆ. ಆತನ ವ್ಯಕ್ತಿತ್ವದ ಕೆಲವು ಮುಖಗಳು ಯಾವುವು? ಮತ್ತು ಆತನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
ಆತನ ನಾಮ ಮತ್ತು ಪ್ರಖ್ಯಾತಿ
ಐಗುಪ್ತದ ಫರೋಹನಲ್ಲಿ ಹಕ್ಕು ಕೇಳಿಕೆಗಳನ್ನು ಮಾಡಿದಾಗ, ‘ಮುಂತಾದವುಗಳನ್ನು ಕರ್ತನು ಅನ್ನುತ್ತಾನೆ,’ ಎಂದು ಮೋಶೆಯು ಹೇಳಲಿಲ್ಲ. ಫರೋಹನು ಮತ್ತು ಇತರ ಐಗುಪ್ತ್ಯರು ತಮ್ಮ ಅನೇಕ ದೇವರುಗಳನ್ನು ಕರ್ತರೆಂದು ನೆನಸಿದ್ದರು. ಇಲ್ಲ, ಮೋಶೆಯು ಯೆಹೋವವೆಂಬ ದೈವಿಕ ನಾಮವನ್ನು ಉಪಯೋಗಿಸಿದನು. ಮಿದ್ಯಾನ್ ದೇಶದಲ್ಲಿ ಉರಿಯುವ ಪೊದೆಯ ಬಳಿ ಅವನಿದ್ದಾಗ ಮೇಲಣಿಂದ ಅದು ಹೇಳಲ್ಪಡುವಾಗ ಅವನು ಸ್ವತಃ ಅದನ್ನು ಕೇಳಿದ್ದನು. ಪ್ರೇರಿತ ದಾಖಲೆಯು ಹೇಳುವುದು:
“ಇದಲ್ಲದೆ ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದನು—ನಾನು ಯೆಹೋವನು; . . . ಐಗುಪ್ತ್ಯರು ದಾಸರನ್ನಾಗಿ ಮಾಡಿಕೊಂಡಿರುವ ಇಸ್ರಾಯೇಲ್ಯರ ಗೋಳು ಈಗ ನನಗೆ ಕೇಳಿಸಿತು. ನಾನು ಮಾಡಿದ ವಾಗ್ದಾನವನ್ನು ನೆನಸಿಕೊಂಡೆನು. ಆದದರಿಂದ ನೀನು ಇಸ್ರಾಯೇಲ್ಯರಿಗೆ [ನನ್ನ ಹೆಸರಿನಲ್ಲಿ] ಹೇಳಬೇಕಾದದ್ದೇನಂದರೆ—ನಾನು ಯೆಹೋವನು; ಐಗುಪ್ತ್ಯರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸಗಳನ್ನು ನಾನು ತಪ್ಪಿಸಿ ಅವರಲ್ಲಿ ನಿಮಗಿರುವ ದಾಸ್ವತವನ್ನು ತೊಲಗಿಸಿ ನನ್ನ ಕೈ ಚಾಚಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು. ನಾನು ನಿಮ್ಮನ್ನು ನನ್ನ ಪ್ರಜೆಯೆಂದು ಆರಿಸಿಕೊಂಡು ನಿಮಗೆ ದೇವರಾಗಿರುವೆನು. ಐಗುಪ್ತ್ಯರು ಮಾಡಿಸುವ ಬಿಟೀಸ್ಟೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನು ಎಂಬ ನಾನೇ ನಿಮ್ಮ ದೇವರಾಗಿದ್ದೇನೆಂಬದು ನಿಮಗೆ ತಿಳಿದುಬರುವುದು. ಇದಲ್ಲದೆ [ನಿಮ್ಮ ಪಿತೃಗಳಾದ] ಅಬ್ರಹಾಮ ಇಸಾಕ ಯಾಕೋಬರಿಗೆ ಕೊಡುವೆನೆಂದು ನಾನು ಪ್ರಮಾಣವಾಗಿ ಹೇಳಿದ [ಕಾನಾನ್ಯರ] ದೇಶಕ್ಕೆ ನಿಮ್ಮನ್ನು ಸೇರಿಸಿ ಅದನ್ನು ನಿಮಗೆ ಸ್ವದೇಶವನ್ನಾಗಿ ಕೊಡುವೆನು; ಯೆಹೋವನೇ ನಾನು.”—ವಿಮೋಚನಕಾಂಡ 6:1-8.
ಯೆಹೋವನು ಅದನ್ನೇ ಮಾಡಿದನು. ಆತನು ಇಸ್ರಾಯೇಲ್ಯರನ್ನು ಐಗುಪ್ತದ ಬಂಧನದಿಂದ ಬಿಡಿಸಿದನು ಮತ್ತು ಕಾನಾನ್ ದೇಶವನ್ನು ಅವರು ಸ್ವಾಧಿನಪಡಿಸಿಕೊಳ್ಳುವಂತೆ ಮಾಡಿದನು. ಆತನು ವಾಗ್ದಾನಿಸಿದಂತೆಯೆ ಇವೆಲ್ಲವು ಸಂಭವಿಸುವಂತೆ ಮಾಡಿದನು. ಯೆಹೋವ, ಎಂಬ ಆತನ ನಾಮದ ಅರ್ಥವು “ಆಗುವಂತೆ ಮಾಡುವಾತನು,” ಎಂಬುದು ಎಷ್ಟು ತಕ್ಕುದ್ದಾಗಿದೆ! ಬೈಬಲ್ ಯೆಹೋವನನ್ನು “ದೇವರು,” “ಸಾರ್ವಭೌಮ ಕರ್ತ,” “ಸೃಷ್ಟಿಕರ್ತ,” “ತಂದೆ,” “ಸರ್ವಶಕ್ತ” ಮತ್ತು “ಅತ್ಯುನ್ನತನು” ಎಂಬ ಪದವಿಗಳಿಂದ ಸೂಚಿಸುತ್ತದೆ. ಆದರೂ ಯೆಹೋವ ಎಂಬ ನಾಮವು ಆತನ ಮಹಾ ಉದ್ದೇಶಗಳನ್ನು ಪ್ರಗತಿಪರವಾಗಿ ನೆರವೇರಿಕೆಗೆ ತರುವ ಸತ್ಯ ದೇವರೆಂದು ಆತನನ್ನು ಗುರುತಿಸುತ್ತದೆ.—ಯೆಶಾಯ 42:8.
ಒಂದು ವೇಳೆ ನಾವು ಬೈಬಲನ್ನು ಅದರ ಮೂಲ ಭಾಷೆಯಲ್ಲಿ ಓದುವುದಾದರೆ, ದೇವರ ಹೆಸರನ್ನು ಸಾವಿರಾರು ಬಾರಿ ಕಂಡುಕೊಳ್ಳುವೆವು. ಇಬ್ರಿಯ ಭಾಷೆಯಲ್ಲಿ, ಬಲದಿಂದ ಎಡಕ್ಕೆ ಓದಲ್ಪಡುವ, ಚತುರಕ್ಷರಿ ಎಂದು ಕರೆಯಲಾದ, ನಾಲ್ಕು ವ್ಯಂಜನಗಳಾದ ಯಾದ್ ಹೆ ವಾವ್ ಹೆ (יהוה) ಮೂಲಕ ಇದು ಪ್ರತಿನಿಧಿಸಲ್ಪಟ್ಟಿದೆ. ಇಬ್ರಿಯ ಭಾಷೆಯನ್ನು ಮಾತಾಡುವವರು ಸ್ವರಾಕ್ಷರದ ಧ್ವನಿಯನ್ನು ಒದಗಿಸುತ್ತಿದ್ದರು, ಆದರೆ ಇಂದು ಜನರಿಗೆ ಆ ಸರ್ವಗಳು ಯಾವುವಾಗಿದ್ದವೆಂದು ನಿಶ್ಚಿತವಾಗಿ ತಿಳಿದಿರುವುದಿಲ್ಲ. ಕೆಲವರು ಆ ಅಕ್ಷರಗಳನ್ನು ಯಾಹ್ವೆ ಎಂದು ಒಪ್ಪಿಕೊಳ್ಳುವದಾದರೂ, ಯೆಹೋವ ಎಂಬ ವಿಧವು ಸಾಮಾನ್ಯವಾಗಿದೆ ಮತ್ತು ತಕ್ಕುದಾಗಿ ನಮ್ಮ ಸೃಷ್ಟಿಕರ್ತನನ್ನು ಗುರುತಿಸುತ್ತದೆ.
ಯೆಹೋವನೆಂಬ ನಾಮದ ಉಪಯೋಗವು, ಕೀರ್ತನೆ 110:1 ರಲ್ಲಿ ಒಂದು ಭಾಷಾಂತರವು: “ಕರ್ತನು [ಹೀಬ್ರೂ, יהוה] ನನ್ನ ಕರ್ತನಿಗೆ, ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು,” (ಕಿಂಗ್ ಜೇಮ್ಸ್ ವರ್ಶನ್) ಎಂದು ಹೇಳಿದಾಗ ಅಲ್ಲಿ “ನನ್ನ ಕರ್ತ”ನಿಂದ ದೇವರನ್ನು ಪ್ರತ್ಯೇಕಿಸುತ್ತದೆ. ಇಲ್ಲಿ ಹೀಬ್ರೂ ಗ್ರಂಥಪಾಠದಲ್ಲಿ ದೇವರ ನಾಮದ ಸಂಭವವನ್ನು ಒಪ್ಪಿಕೊಂಡು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಓದುವುದು: “ನನ್ನ ಕರ್ತನಿಗೆ ಯೆಹೋವನ ಮಾತೇನೆಂದರೆ: ‘ನಿನ್ನ ವಿರೋಧಿಗಳನ್ನು ನಿನಗೆ ಪಾದ ಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು.” ಯೆಹೋವ ದೇವರ ಆ ಮಾತುಗಳ ಬರಹಗಾರನು ಯಾರನ್ನು “ನನ್ನ ಕರ್ತನು” ಎಂದು ಕರೆದನೋ ಆ ಯೇಸು ಕ್ರಿಸ್ತನಿಗೆ ಪ್ರವಾದನಾರೂಪವಾಗಿ ಅನ್ವಯಿಸುತ್ತದೆ.
ಫರೋಹನ ದಿನಗಳಲ್ಲಿ ಯೆಹೋವನು ತನಗಾಗಿಯೇ ಒಂದು ಹೆಸರನ್ನು ಮಾಡಿದನು. ಮೋಶೆಯ ಮೂಲಕ, ಆ ಕಠಿನ ಹೃದಯದ ಅರಸನಿಗೆ ದೇವರು ಹೇಳಿದ್ದು: “ಈ ಸಾರಿ ನಾನು ನನ್ನ ವಶದಲ್ಲಿರುವ ಈತಿಬಾಧೆಗಳನ್ನು ನಿನ್ನ ಪ್ರಜಾಪರಿವಾರದವರಿಗೆ ಉಂಟಾಗುವಂತೆಯೂ ನಿನ್ನ ಹೃದಯಕ್ಕೂ ತಗಲುವಂತೆಯೂ ಮಾಡುವೆನು. ಅದರಿಂದ ಸಮಸ್ತಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನನ್ನ ವಿಷಯದಲ್ಲಿ ತಿಳುಕೊಳ್ಳುವಿ. ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು; ಆಗ ನೀನು ಈ ವರೆಗೆ ಭೂಮಿಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದಿ. ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.”—ವಿಮೋಚನಕಾಂಡ 9:14-16.
ಐಗುಪ್ತದಿಂದ ಇಸ್ರಾಯೇಲ್ಯರ ನಿರ್ಗಮನ ಮತ್ತು ನಿರ್ದಿಷ್ಟ ಕಾನಾನ್ಯ ಅರಸರುಗಳ ಉರುಳಿಸುವಿಕೆಯ ಕುರಿತು, ಇಬ್ಬರು ಇಬ್ರಿಯ ಗೂಢಚಾರರಿಗೆ ಯೆರಿಕೋವಿನ ಸ್ತ್ರೀಯಾದ ರಾಹಾಬಳು ಹೇಳಿದ್ದು: “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು ಬಲ್ಲೆನು. ನಿಮ್ಮ ನಿಮಿತ್ತ ನಮಗೆ ಮಹಾಭೀತಿಯುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ. ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಿರ್ಮೂಲಮಾಡಿದ್ದನ್ನೂ ಕೇಳಿ ನಮ್ಮ ಎದೆಯೊಡೆದುಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಒಬ್ಬನಲ್ಲಿಯೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.” (ಯೆಹೋಶುವ 2:9-11) ಹೌದು, ಯೆಹೋವನ ಪ್ರಖ್ಯಾತಿಯು ಹರಡಿತ್ತು.
ಯೆಹೋವನು ಮತ್ತು ಆತನ ಗುಣಗಳು
ಕೀರ್ತನೆಗಾರನು ಈ ಹೃದಯಪೂರ್ವಕ ಬಯಕೆಯನ್ನು ವ್ಯಕ್ತಪಡಿಸಿದನು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೂನ್ನತನೆಂದು ಗ್ರಹಿಸುವರು.” (ಕೀರ್ತನೆ 83:18) ಯೆಹೋವನ ಸಾರ್ವಭೌಮತೆಯು ವಿಶ್ವವ್ಯಾಪಕವಾಗಿರುವುದರಿಂದ, ಯೇಸುವಿನ ಹಿಂಸಿಸಲ್ಪಟ್ಟ ಅನುಯಾಯಿಗಳು ಪ್ರಾರ್ಥಿಸಶಕ್ತರಾದದ್ದು: “ಒಡೆಯನೇ, ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ.” (ಅ. ಕೃತ್ಯಗಳು 4:24) ಮತ್ತು ಯೆಹೋವನು “ಪ್ರಾರ್ಥನೆಯನ್ನು ಕೇಳುವವನು” ಎಂದು ತಿಳಿದುಕೊಳ್ಳುವುದು ಎಷ್ಟೊಂದು ನೆಮ್ಮದಿದಾಯಕ!—ಕೀರ್ತನೆ 65:2.
ಯೆಹೋವನ ಪ್ರಧಾನ ಗುಣವು ಪ್ರೀತಿಯಾಗಿದೆ. “ದೇವರು ಪ್ರೀತಿಸ್ವರೂಪಿಯು,” ನಿಶ್ಚಯ—ಆತನು ಈ ಗುಣದ ಸಾರವೇ ಆಗಿರುವನು. (1 ಯೋಹಾನ 4:8) ಇನ್ನೂ, “ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು.” ಯೆಹೋವನು ಸರ್ವವಿವೇಕಿಯು ಮತ್ತು ಸರ್ವಶಕ್ತಿಯುಳ್ಳಾತನು, ಆದರೆ ಆತನು ತನ್ನ ಶಕ್ತಿಯನ್ನು ಎಂದೂ ದುರುಪಯೋಗಿಸನು. (ಯೋಬ 12:13; 37:23) ಯೆಹೋವನು ನಮ್ಮೊಂದಿಗೆ ಯಾವಾಗಲೂ ನ್ಯಾಯದಿಂದ ವ್ಯವಹರಿಸುವನು ಎಂದೂ ನಾವು ಖಾತರಿಯಿಂದಿರಬಲ್ಲೆವು, ಯಾಕಂದರೆ “ನೀತಿನ್ಯಾಯಗಳು ಆತನ ಸಿಂಹಾಸನದ ಆಸ್ತಿವಾರ.” (ಕೀರ್ತನೆ 97:2) ನಾವು ತಪ್ಪು ಮಾಡಿ ಪಶ್ಚಾತ್ತಾಪಪಟ್ಟಿರುವಲ್ಲಿ, ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ಧೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು,” ಎಂಬ ಜ್ಞಾನದಿಂದ ನಾವು ಆದರಣೆಯನ್ನು ಪಡಕೊಳ್ಳಬಲ್ಲೆವು. (ವಿಮೋಚನಕಾಂಡ 34:6) ಯೆಹೋವನನ್ನು ಸೇವಿಸುವುದರಲ್ಲಿ ನಾವು ಆನಂದವನ್ನು ಹೊಂದಸಾಧ್ಯವಿರುವುದರಲ್ಲಿ ಆಶ್ಚರ್ಯವಿಲ್ಲ!—ಕೀರ್ತನೆ 100:1-5.
ಅತುಲ್ಯ ಸ್ವರ್ಗೀಯ ರಾಜನು
ಯೆಹೋವನ ಮಗನಾದ ಯೇಸು ಕ್ರಿಸ್ತನು ಅಂದದ್ದು: “ದೇವರು ಆತ್ಮಸ್ವರೂಪನು.” (ಯೋಹಾನ 4:24) ಆದುದರಿಂದ, ಯೆಹೋವನು ಮಾನವ ನೇತ್ರಗಳಿಗೆ ಅಗೋಚರನು. ನಿಜತ್ವದಲ್ಲಿ, ಯೆಹೋವನು ಮೋಶೆಗೆ ಹೇಳಿದ್ದು: “ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.” (ವಿಮೋಚನಕಾಂಡ 33:20) ಈ ಸ್ವರ್ಗೀಯ ರಾಜನು ಎಷ್ಟು ಮಹಿಮಾಭರಿತನೆಂದರೆ, ಮಾನವರು ಆತನನ್ನು ನೋಡುವ ಅನುಭವವನ್ನು ಸಹಿಸಲಾರರು.
ಯೆಹೋವನು ನಮ್ಮ ನೇತ್ರಗಳಿಗೆ ಅದೃಶ್ಯನಾಗಿರುವುದಾದರು ಕೂಡ, ಸರ್ವಶಕ್ತ ದೇವರೋಪಾದಿ ಆತನ ಅಸ್ತಿತ್ವಕ್ಕೆ ಹೇರಳವಾದ ಸಾಕ್ಷ್ಯವಿದೆ. ನಿಶ್ಚಯವಾಗಿ, “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಭೂಮಿಯು—ಅದರ ಹುಲ್ಲು, ಮರ, ಹಣ್ಣುಹಂಪಲು, ತರಕಾರಿ, ಮತ್ತು ಹೂಗಳೊಂದಿಗೆ—ಯೆಹೋವನ ದೇವತ್ವಕ್ಕೆ ಸಾಕ್ಷಿಕೊಡುತ್ತವೆ. ಬೆಲೆ ಇಲ್ಲದ ವಿಗ್ರಹ-ದೇವರುಗಳಿಗೆ ಅಸದೃಶವಾಗಿ, ಯೆಹೋವನು ಮಳೆ ಮತ್ತು ಫಲದಾಯಕ ಋತುಗಳನ್ನು ಕೊಡುತ್ತಾನೆ. (ಅ. ಕೃತ್ಯಗಳು 14:16, 17) ರಾತ್ರಿಯ ಆಕಾಶದಲ್ಲಿ ನಕ್ಷತ್ರಗಳನ್ನು ವೀಕ್ಷಿಸಿರಿ. ಯೆಹೋವನ ದೇವತ್ವಕ್ಕೆ ಮತ್ತು ಸಂಘಟನಾ ಸಾಮರ್ಥ್ಯಕ್ಕೆ ಎಂತಹ ಮಹಾ ರುಜುವಾತು!
ಯೆಹೋವನು ಸ್ವರ್ಗದಲ್ಲಿ ತನ್ನ ಪವಿತ್ರ, ಬುದ್ಧಿಶಕ್ತಿಯ ಆತ್ಮ ಜೀವಿಗಳನ್ನು ಕೂಡ ಸಂಘಟಿಸಿರುವನು. ಕೀರ್ತನೆಗಾರನು ಅನ್ನುವಂತೆ, ಒಂದು ಹೊಂದಾಣಿಕೆಯುಳ್ಳ ಸಂಸ್ಥೆಯೋಪಾದಿ ಅವರು ದೇವರ ಚಿತ್ತವನ್ನು ಕಾರ್ಯರೂಪಕ್ಕೆ ತರುತ್ತಾರೆ: “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ. ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.” (ಕೀರ್ತನೆ 103:20, 21) ಯೆಹೋವನು ಭೂಮಿಯ ಮೇಲೆ ತನ್ನ ಜನರನ್ನು ಕೂಡ ಸಂಘಟಿಸಿರುವನು. ಇಸ್ರಾಯೇಲ್ ಜನಾಂಗವು ಉತ್ತಮವಾಗಿ ಸಂಘಟಿಸಲ್ಪಟ್ಟಿತ್ತು, ಮತ್ತು ಅಂತೆಯೆ ದೇವರ ಮಗನ ಆರಂಭದ ಹಿಂಬಾಲಕರು ಕೂಡ. ಅದೇ ರೀತಿಯಲ್ಲಿ ಇಂದು, ಆತನ ರಾಜ್ಯವು ಸನ್ನಿಹಿತವಾಗಿದೆಯೆಂದು ಘೋಷಿಸುವ ಆಸಕ್ತಿಭರಿತ ಸಾಕ್ಷಿಗಳ ಲೋಕವ್ಯಾಪಕ ಸಂಸ್ಥೆಯೊಂದು ಯೆಹೋವನಿಗೆ ಇದೆ.—ಮತ್ತಾಯ 24:14.
ಯೆಹೋವನು ಸತ್ಯ ಮತ್ತು ಜೀವಂತ ದೇವರು
ಯೆಹೋವನ ದೇವತ್ವವು ಎಷ್ಟೋ ವಿಧಗಳಲ್ಲಿ ಪ್ರದರ್ಶಿಸಲ್ಪಟ್ಟಿರುತ್ತದೆ! ಆತನು ಐಗುಪ್ತದ ಸುಳ್ಳು ದೇವರುಗಳ ತೇಜೋಭಂಗ ಮಾಡಿದನು ಮತ್ತು ಇಸ್ರಾಯೇಲ್ಯರನ್ನು ಸುರಕ್ಷಿತವಾಗಿ ವಾಗ್ದಾನ ದೇಶಕ್ಕೆ ತಂದನು. ಯೆಹೋವನ ದೇವತ್ವಕ್ಕೆ ಸೃಷ್ಟಿಯು ಹೇರಳ ರುಜುವಾತನ್ನೀಯುತ್ತದೆ. ಮತ್ತು ಸರಳವಾಗಿ ಆತನ ಮತ್ತು ಸುಳ್ಳು ಧರ್ಮಗಳ ನಿಷ್ಪಯ್ರೋಜಕ ವಿಗ್ರಹ ದೇವರುಗಳ ನಡುವೆ ಹೋಲಿಕೆಯೇ ಇರುವುದಿಲ್ಲ.
ಜೀವಂತ ದೇವರಾದ ಯೆಹೋವ, ಮತ್ತು ನಿರ್ಜೀವ ಮಾನವ ನಿರ್ಮಿತ ವಿಗ್ರಹಗಳ ನಡುವೆ ಮಹಾ ವ್ಯತ್ಯಾಸವನ್ನು ಪ್ರವಾದಿ ಯೆರೆಮೀಯನು ತೋರಿಸಿದನು. ಆ ವ್ಯತ್ಯಾಸವು ಯೆರೆಮೀಯ 10 ನೇ ಅಧ್ಯಾಯದಲ್ಲಿ ಉತ್ತಮವಾಗಿ ವ್ಯಕ್ತಪಡಿಸಲ್ಪಟ್ಟಿದೆ. ಇತರ ವಿಷಯಗಳ ನಡುವೆ ಯೆರೆಮೀಯನು ಬರೆದದ್ದು: “ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಶಾಶ್ವತ ರಾಜನೂ ಆಗಿದ್ದಾನೆ.” (ಯೆರೆಮೀಯ 10:10) ಜೀವಂತ ಮತ್ತು ಸತ್ಯ ದೇವರಾದ ಯೆಹೋವನು, ಎಲ್ಲ ವಿಷಯಗಳನ್ನು ಸೃಷ್ಟಿಸಿದನು. ಐಗುಪ್ತದ ಬಂಧನದಲ್ಲಿ ಕ್ಷೀಣಿಸುತ್ತಿದ್ದ ಇಸ್ರಾಯೇಲ್ಯರನ್ನು ಪಾರುಮಾಡಿದನು. ಆತನಿಗೆ ಯಾವುದೂ ಅಸಾಧ್ಯವಲ್ಲ.
“ಸರ್ವ ಯುಗಗಳ ಅರಸನಾದ” ಯೆಹೋವನು, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಎಂಬ ಪ್ರಾರ್ಥನೆಯನ್ನು ಉತ್ತರಿಸುವನು. (1 ತಿಮೊಥೆ 1:17; ಮತ್ತಾಯ 6:9, 10) ಈಗಾಗಲೆ ಯೇಸು ಕ್ರಿಸ್ತನ ಕೈಯಲ್ಲಿರುವ ಸ್ವರ್ಗೀಯ ಮೆಸ್ಸೀಯ ರಾಜ್ಯವು, ಬೇಗನೆ ದುಷ್ಟರ ವಿರುದ್ಧ ಕ್ರಮ ತಕ್ಕೊಳ್ಳುವುದು ಮತ್ತು ಎಲ್ಲಾ ಯೆಹೋವನ ವೈರಿಗಳನ್ನು ನಾಶಮಾಡುವುದು. (ದಾನಿಯೇಲ 7:13, 14) ಆ ರಾಜ್ಯವು ವಿಧೇಯ ಮಾನವಕುಲಕ್ಕೆ ಶಾಶ್ವತ ಆಶೀರ್ವಾದಗಳ ಹೊಸ ಲೋಕವನ್ನು ಒಳತರುವುದು.—2 ಪೇತ್ರ 3:13.
ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಎಷ್ಟೋ ಹೆಚ್ಚಿನದ್ದನ್ನು ಕಲಿಯಲಿಕ್ಕಿದೆ. ಇಂಥ ಜ್ಞಾನವನ್ನು ಪಡೆಯಲು ಮತ್ತು ಅದರ ಹೊಂದಿಕೆಯಲ್ಲಿ ಕ್ರಿಯೆ ಕೈಕೊಳ್ಳಲು ನೀವು ಯಾಕೆ ದೃಢನಿರ್ಧಾರವನ್ನು ಮಾಡಬಾರದು? ನೀವು ಇದನ್ನು ಮಾಡುವಲ್ಲಿ, ರಾಜ್ಯದ ಆಳಿಕೆಯ ಕೆಳಗೆ ಒಂದು ಭೂಪ್ರಮೋದವನದಲ್ಲಿ ನಿತ್ಯ ಜೀವದಲ್ಲಿ ಆನಂದಿಸುವ ಸುಯೋಗವುಳ್ಳವರಾಗುವಿರಿ. ದುಃಖ, ನೋವು, ಮತ್ತು ಮರಣವು ಕೂಡ ಇಲ್ಲದೆ ಹೋಗುವಾಗ ಮತ್ತು ಯೆಹೋವನ ಜ್ಞಾನವು ಭೂಮಿಯನ್ನು ತುಂಬುವಾಗ ನೀವು ಜೀವಿಸುವಿರಿ. (ಯೆಶಾಯ 11:9; ಪ್ರಕಟನೆ 21:1-4) “ಯೆಹೋವನು ಯಾರು?” ಎಂಬ ಪ್ರಶ್ನೆಗೆ ಬೈಬಲಾಧಾರಿತ ಉತ್ತರಗಳನ್ನು ನೀವು ಹುಡುಕಿ, ಕಂಡು, ಮತ್ತು ಅದಕ್ಕನುಸಾರವಾಗಿ ಕ್ರಿಯೆ ಕೈಕೊಳ್ಳುವಲ್ಲಿ, ಅದು ನಿಮ್ಮ ಭವಿಷ್ಯದ ಫಲವಾಗಬಲ್ಲದು.
[ಪುಟ 7 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.