ದೇವಪ್ರಭುತ್ವವೊಂದರಲ್ಲಿ ಕುರುಬರು ಮತ್ತು ಕುರಿಗಳು
“ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.”—ಯೆಶಾಯ 33:22.
1. ಪ್ರಥಮ ಶತಮಾನದ ಕ್ರೈಸ್ತರು ಮತ್ತು ಇಂದಿನ ಕ್ರೈಸ್ತರು ಒಂದು ದೇವಪ್ರಭುತ್ವವಾಗಿದ್ದಾರೆಂದು ಹೇಗೆ ಹೇಳಸಾಧ್ಯವಿದೆ?
ದೇವಪ್ರಭುತ್ವ ಎಂದರೆ ದೇವರಿಂದ ನಡೆಸಲ್ಪಡುವ ಒಂದು ಆಳಿಕೆ. ಅದು ಯೆಹೋವನ ಅಧಿಕಾರವನ್ನು ಸ್ವೀಕರಿಸಿ, ನಾವು ಜೀವನದಲ್ಲಿ ಮಾಡುವ ದೊಡ್ಡ ಹಾಗೂ ಸಣ್ಣ ನಿರ್ಣಯಗಳಲ್ಲಿ ಆತನ ಮಾರ್ಗದರ್ಶಕಗಳನ್ನು ಮತ್ತು ಉಪದೇಶಗಳನ್ನು ಹಿಂಬಾಲಿಸುವುದನ್ನು ಒಳಗೊಳ್ಳುತ್ತದೆ. ಪ್ರಥಮ ಶತಮಾನದ ಸಭೆಯು ಯಥಾರ್ಥವಾದ ದೇವಪ್ರಭುತ್ವವಾಗಿತ್ತು. ಆಗಿನ ಕ್ರೈಸ್ತರು ಪ್ರಾಮಾಣಿಕರಾಗಿ ಹೀಗೆ ಹೇಳಬಹುದಿತ್ತು: “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕನು, ಯೆಹೋವನು ನಮ್ಮ ರಾಜ.” (ಯೆಶಾಯ 33:22) ಅದರ ಕೇಂದ್ರದಂತೆ ಅಭಿಷಿಕ್ತ ಉಳಿಕೆಯವರೊಂದಿಗೆ, ಯೆಹೋವ ದೇವರ ಸಂಸ್ಥೆಯು ಇಂದು ಸಮಾನವಾಗಿ ನಿಜವಾದ ಒಂದು ದೇವಪ್ರಭುತ್ವವಾಗಿದೆ.
ಇಂದು ಯಾವ ವಿಧಗಳಲ್ಲಿ ನಾವು ದೇವಪ್ರಭುತ್ವವಾಗಿದ್ದೇವೆ?
2. ಯೆಹೋವನ ಸಾಕ್ಷಿಗಳು ಯೆಹೋವನ ಆಳಿಕೆಗೆ ಅಧೀನರಾಗುವ ಒಂದು ವಿಧವು ಏನಾಗಿದೆ?
2 ಯೆಹೋವನ ಭೂಸಂಸ್ಥೆಯು ಒಂದು ದೇವಪ್ರಭುತ್ವವಾಗಿದೆ ಎಂದು ನಾವು ಹೇಗೆ ಹೇಳಬಲ್ಲೆವು? ಏಕೆಂದರೆ ಅದಕ್ಕೆ ಸೇರಿರುವವರು ಖಂಡಿತವಾಗಿ ಯೆಹೋವನ ಆಳಿಕೆಗೆ ಅಧೀನರಾಗುತ್ತಾರೆ. ಯೆಹೋವನು ರಾಜನಂತೆ ಸಿಂಹಾಸನಕ್ಕೇರಿಸಿದ ಯೇಸು ಕ್ರಿಸ್ತನ ನಾಯಕತ್ವವನ್ನು ಅವರು ಹಿಂಬಾಲಿಸುತ್ತಾರೆ. ಉದಾಹರಣೆಗೆ, ಅಂತ್ಯದ ಸಮಯದಲ್ಲಿ, ಮಹಾ ದೇವಪ್ರಭುತ್ವಾಧಿಪತಿಯಿಂದ ಈ ನೇರವಾದ ಆಜ್ಞೆಯು ಯೇಸುವಿಗೆ ತಿಳಿಯಪಡಿಸಲಾಗಿದೆ: “ಭೂಮಿಯ ಪೈರು ಮಾಗಿ ಒಣಗಿದೆ; ಕೊಯ್ಯುವ ಕಾಲ ಬಂತು; ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ.” (ಪ್ರಕಟನೆ 14:15) ಯೇಸು ವಿಧೇಯನಾಗುತ್ತಾನೆ ಮತ್ತು ಭೂಮಿಯ ಕೊಯ್ಲಿನ ಕೆಲಸವನ್ನು ವಹಿಸಿಕೊಳ್ಳುತ್ತಾನೆ. ಸುವಾರ್ತೆಯನ್ನು ಹುರುಪಿನಿಂದ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಮೂಲಕ ಈ ಮಹಾ ಕೆಲಸದಲ್ಲಿ ಕ್ರೈಸ್ತರು ತಮ್ಮ ರಾಜನನ್ನು ಬೆಂಬಲಿಸುತ್ತಾರೆ. (ಮತ್ತಾಯ 28:19; ಮಾರ್ಕ 13:10; ಅ. ಕೃತ್ಯಗಳು 1:8) ಹಾಗೆ ಮಾಡುವಲ್ಲಿ, ಅವರು ಮಹಾ ದೇವಪ್ರಭುತ್ವಾಧಿಪತಿಯಾದ ಯೆಹೋವನೊಂದಿಗೂ ಸಹ ಜೊತೆ ಕೆಲಸಗಾರರಾಗಿದ್ದಾರೆ.—1 ಕೊರಿಂಥ 3:9.
3. ನೈತಿಕತೆಯ ವಿಷಯಗಳಲ್ಲಿ ಕ್ರೈಸ್ತರು ದೇವಪ್ರಭುತ್ವಕ್ಕೆ ಹೇಗೆ ಅಧೀನರಾಗುತ್ತಾರೆ?
3 ನಡತೆಯಲ್ಲಿಯೂ ಕೂಡ, ಕ್ರೈಸ್ತರು ದೇವರ ಆಳಿಕೆಗೆ ಅಧೀನರಾಗುತ್ತಾರೆ. ಯೇಸು ಹೇಳಿದ್ದು: “ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.” (ಯೋಹಾನ 3:21) ಇಂದು, ನೈತಿಕ ಮಟ್ಟಗಳ ಕುರಿತು ಕೊನೆಗೊಳ್ಳದ ವಾದವಿವಾದಗಳಿವೆ, ಆದರೆ ಈ ಕಲಹಗಳಿಗೆ ಕ್ರೈಸ್ತರ ಮಧ್ಯದಲ್ಲಿ ಅವಕಾಶವಿಲ್ಲ. ಯೆಹೋವನು ಅನೈತಿಕವೆಂದು ಹೇಳುವುದನ್ನು ಅವರು ಅನೈತಿಕವೆಂದು ವೀಕ್ಷಿಸುತ್ತಾರೆ, ಮತ್ತು ಅದನ್ನು ಮಾರಕವ್ಯಾಧಿಯಂತೆ ತೊರೆಯುತ್ತಾರೆ! ಅವರು ತಮ್ಮ ಕುಟುಂಬಗಳ ಕಾಳಜಿ ಕೂಡ ವಹಿಸುತ್ತಾರೆ, ತಮ್ಮ ಹೆತ್ತವರಿಗೆ ವಿಧೇಯರಾಗುತ್ತಾರೆ, ಮತ್ತು ಮೇಲಧಿಕಾರಿಗಳಿಗೆ ಅಧೀನರಾಗಿ ಉಳಿಯುತ್ತಾರೆ. (ಎಫೆಸ 5:3-5, 22-33; 6:1-4; 1 ತಿಮೊಥೆಯ 5:8; ತೀತ 3:1) ಹೀಗೆ ದೇವರೊಂದಿಗೆ ಹೊಂದಾಣಿಕೆಯಲ್ಲಿ ಅವರು ದೇವಪ್ರಭುತ್ವಾತ್ಮಕವಾಗಿ ನಡೆದುಕೊಳ್ಳುತ್ತಾರೆ.
4. ಯಾವ ತಪ್ಪಾದ ಮನೋಭಾವಗಳು ಆದಾಮ ಮತ್ತು ಹವ್ವ ಹಾಗೂ ಸೌಲನಿಂದ ಪ್ರದರ್ಶಿಸಲ್ಪಟ್ಟವು, ಮತ್ತು ಕ್ರೈಸ್ತರು ಹೇಗೆ ಒಂದು ಭಿನ್ನವಾದ ಮನೋಭಾವವನ್ನು ತೋರಿಸುತ್ತಾರೆ?
4 ಯಾವುದು ಸರಿಯಾಗಿತ್ತು ಮತ್ತು ಯಾವುದು ತಪ್ಪಾಗಿತ್ತು ಎಂಬುದರ ವಿಷಯದಲ್ಲಿ ತಮ್ಮ ಸ್ವಂತ ನಿರ್ಣಯಗಳನ್ನು ಮಾಡಲು ಬಯಸಿದ್ದರಿಂದ ಆದಾಮ ಮತ್ತು ಹವ್ವರು ಪ್ರಮೋದವನವನ್ನು ಕಳೆದುಕೊಂಡರು. ನೇರವಾಗಿ ವಿರುದ್ಧವಾದದ್ದನ್ನು ಯೇಸು ಬಯಸಿದನು. ಅವನಂದದ್ದು: “ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುತ್ತೇನೆ.” ಕ್ರೈಸ್ತರು ಕೂಡ ಅದೇ ವಿಷಯವನ್ನು ಅಪೇಕ್ಷಿಸುತ್ತಾರೆ. (ಯೋಹಾನ 5:30; ಲೂಕ 22:42; ರೋಮಾಪುರ 12:2; ಇಬ್ರಿಯ 10:7) ಇಸ್ರಾಯೇಲಿನ ಪ್ರಥಮ ರಾಜನಾದ ಸೌಲನು ಯೆಹೋವನಿಗೆ ವಿಧೇಯನಾದನು—ಆದರೆ ಆಂಶಿಕವಾಗಿ ಮಾತ್ರ. ಇದಕ್ಕಾಗಿ ಅವನು ತಿರಸ್ಕರಿಸಲ್ಪಟ್ಟನು. ಸಮುವೇಲನು ಅವನಿಗೆ ಹೇಳಿದ್ದು: “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.” (1 ಸಮುವೇಲ 15:22) ಸಾರುವ ಕೆಲಸದಲ್ಲಿ ಯಾ ಕೂಟಗಳನ್ನು ಹಾಜರಾಗುವುದರಲ್ಲಿ ಬಹುಶಃ ಕ್ರಮವಾಗಿರುವ ಮೂಲಕ ಒಂದು ನಿರ್ದಿಷ್ಟ ಹಂತದ ವರೆಗೆ ಯೆಹೋವನ ಚಿತ್ತವನ್ನು ಅನುಸರಿಸಿ, ಆಮೇಲೆ ನೈತಿಕ ವಿಷಯಗಳಲ್ಲಿ ಯಾ ಬೇರೆ ಯಾವುದೇ ವಿಧದಲ್ಲಿ ಒಪ್ಪಂದ ಮಾಡಿಕೊಳ್ಳುವುದು ದೇವಪ್ರಭುತ್ವಾತ್ಮಕವಾಗಿದೆಯೆ? ನಿಸ್ಸಂದೇಹವಾಗಿ ಇಲ್ಲ! ‘ದೇವರ ಚಿತ್ತವನ್ನು ಮನಃಪೂರ್ವಕವಾಗಿ’ ಮಾಡಲು ನಾವು ಹೆಣಗಾಡುತ್ತೇವೆ. (ಎಫೆಸ 6:6; 1 ಪೇತ್ರ 4:1, 2) ಸೌಲನಂತೆ ಇರದೆ, ನಾವು ದೇವರ ಆಳಿಕೆಗೆ ಸಂಪೂರ್ಣವಾಗಿ ಅಧೀನರಾಗುತ್ತೇವೆ.
ಆಧುನಿಕವಾದೊಂದು ದೇವಪ್ರಭುತ್ವ
5, 6. ಯೆಹೋವನು ಇಂದು ಮಾನವಕುಲದೊಂದಿಗೆ ಹೇಗೆ ವ್ಯವಹರಿಸುತ್ತಾನೆ, ಮತ್ತು ಈ ಏರ್ಪಾಡಿನೊಂದಿಗೆ ಸಹಕಾರವು ಯಾವುದರಲ್ಲಿ ಫಲಿಸುತ್ತದೆ?
5 ಪೂರ್ವದಲ್ಲಿ, ಯೆಹೋವನು ಪ್ರವಾದಿಗಳು, ರಾಜರು ಮತ್ತು ಅಪೊಸ್ತಲರಂತಹ ವ್ಯಕ್ತಿಗಳ ಮುಖಾಂತರ ಸತ್ಯಗಳನ್ನು ಪ್ರಕಟಿಸಿದನು ಮತ್ತು ಆಳಿಕೆ ನಡೆಸಿದನು. ಇಂದು ವಿಷಯವು ಹಾಗಿರುವುದಿಲ್ಲ; ಪ್ರೇರಿತ ಪ್ರವಾದಿಗಳು ಯಾ ಅಪೊಸ್ತಲರು ಇನ್ನಿಲ್ಲ. ಬದಲಿಗೆ, ತನ್ನ ರಾಜವೈಭವ ಸಾನ್ನಿಧ್ಯದ ಸಮಯದಲ್ಲಿ ತಾನು, ಹಿಂಬಾಲಕರ ಒಂದು ನಂಬಿಗಸ್ತ ವರ್ಗವನ್ನು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವನ್ನು ಗುರುತಿಸುವನು, ಮತ್ತು ಅದನ್ನು ತನ್ನ ಎಲ್ಲಾ ಸ್ವತ್ತುಗಳ ಮೇಲೆ ನೇಮಿಸುವನು ಎಂದು ಯೇಸು ಹೇಳಿದನು. (ಮತ್ತಾಯ 24:45-47; ಯೆಶಾಯ 43:10) ಇಸವಿ 1919 ರಲ್ಲಿ, ಆ ಆಳು ವರ್ಗವು ಅಭಿಷಿಕ್ತ ಕ್ರೈಸ್ತರ ಉಳಿಕೆಯವರೆಂದು ಗುರುತಿಸಲ್ಪಟ್ಟಿತು. ಆ ಸಮಯದಂದಿನಿಂದ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಮೂಲಕ ಪ್ರತಿನಿಧೀಕರಿಸಲ್ಪಟ್ಟಂತೆ, ಅದು ಭೂಮಿಯ ಮೇಲೆ ದೇವಪ್ರಭುತ್ವದ ಕೇಂದ್ರವಾಗಿದೆ. ಲೋಕದ ಸುತ್ತಲೂ, ಆಡಳಿತ ಮಂಡಳಿಯು, ಶಾಖಾ ಕಮಿಟಿಗಳ, ಸಂಚಾರಿ ಮೇಲ್ವಿಚಾರಕರ, ಮತ್ತು ಸಭಾ ಹಿರಿಯರ ಮೂಲಕ ಪ್ರತಿನಿಧೀಕರಿಸಲ್ಪಟ್ಟಿದೆ.
6 ದೇವಪ್ರಭುತ್ವ ಸಂಸ್ಥೆಯೊಂದಿಗೆ ಸಹಕಾರವು, ದೇವಪ್ರಭುತ್ವಕ್ಕೆ ಅಧೀನರಾಗುವುದರ ಒಂದು ಪ್ರಮುಖ ಭಾಗವಾಗಿದೆ. ಅಂತಹ ಸಹಕಾರವು ಲೋಕವ್ಯಾಪಕವಾಗಿ, “ಸಹೋದರರ ಇಡೀ ಬಳಗ” ದಲ್ಲಿ ಕ್ರಮ ಮತ್ತು ಐಕ್ಯಕ್ಕಾಗಿ ಕೆಲಸಮಾಡುತ್ತದೆ. (1 ಪೇತ್ರ 2:17, NW) ಸರದಿಯಾಗಿ, “ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ”ದ ದೇವರಾದ ಯೆಹೋವನನ್ನು ಇದು ಮೆಚ್ಚಿಸುತ್ತದೆ.—1 ಕೊರಿಂಥ 14:33.
ದೇವಪ್ರಭುತ್ವವೊಂದರಲ್ಲಿ ಹಿರಿಯರು
7. ಕ್ರೈಸ್ತ ಹಿರಿಯರು ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಟ್ಟಿದ್ದಾರೆಂದು ಹೇಳಸಾಧ್ಯವಿದೆ ಏಕೆ?
7 ನೇಮಕಗೊಂಡಿರುವ ಎಲ್ಲಾ ಹಿರಿಯ ಪುರುಷರು, ಅವರ ಅಧಿಕಾರದ ಸ್ಥಾನವು ಏನೇ ಆಗಿರಲಿ, ಮೇಲ್ವಿಚಾರಕನ ಯಾ ಹಿರಿಯನ ಹುದ್ದೆಗೆ ಬೈಬಲಿನಲ್ಲಿ ರೂಪಿಸಲ್ಪಟ್ಟ ಅರ್ಹತೆಗಳನ್ನು ಪೂರೈಸುತ್ತಾರೆ. (1 ತಿಮೊಥೆಯ 3:1-7; ತೀತ 1:5-9) ಇನ್ನೂ ಹೆಚ್ಚಾಗಿ, ಎಫೆಸದ ಹಿರಿಯರಿಗೆ ಬರೆಯಲ್ಪಟ್ಟ ಪೌಲನ ಮಾತುಗಳು ಎಲ್ಲಾ ಹಿರಿಯರಿಗೆ ಅನ್ವಯಿಸುತ್ತವೆ: “ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:28) ಹೌದು, ಹಿರಿಯರು ಯೆಹೋವ ದೇವರಿಂದ ಬರುವ ಪವಿತ್ರಾತ್ಮದ ಮೂಲಕ ನೇಮಿಸಲ್ಪಡುತ್ತಾರೆ. (ಯೋಹಾನ 14:26) ಅವರ ನೇಮಕವು ದೇವಪ್ರಭುತ್ವಾತ್ಮಕವಾಗಿದೆ. ಇನ್ನೂ ಹೆಚ್ಚಾಗಿ, ಅವರು ದೇವರ ಮಂದೆಯನ್ನು ಕಾಯುತ್ತಾರೆ. ಮಂದೆಯು ಹಿರಿಯರಿಗಲ್ಲ, ಯೆಹೋವನಿಗೆ ಸೇರಿರುತ್ತದೆ. ದೇವರ ಸಂಸ್ಥೆಯು ಒಂದು ದೇವಪ್ರಭುತ್ವವಾಗಿದೆ.
8. ಇಂದು ಹಿರಿಯರ ಸಾಮಾನ್ಯ ಜವಾಬ್ದಾರಿಗಳು ಏನಾಗಿವೆ?
8 ಎಫೆಸದವರಿಗೆ ಬರೆದ ಪತ್ರದಲ್ಲಿ, ಅಪೊಸ್ತಲ ಪೌಲನು ಹಿರಿಯರ ಸಾಮಾನ್ಯ ಜವಾಬ್ದಾರಿಗಳನ್ನು ಹೀಗೆ ಹೇಳುತ್ತಾ ವಿವರಿಸಿದನು: “ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು. ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು.” (ಎಫೆಸ 4:11, 12) “ಕ್ರಿಸ್ತನ ದೇಹದ” ಬಾಲ್ಯಾವಸ್ಥೆಯೊಂದಿಗೆ ಅಪೊಸ್ತಲರು ಮತ್ತು ಪ್ರವಾದಿಗಳು ಗತಿಸಿಹೋದರು. (1 ಕೊರಿಂಥ 13:8.) ಆದರೆ ಹಿರಿಯರು ಇನ್ನೂ ಸೌವಾರ್ತಿಕ ಕೆಲಸಮಾಡುತ್ತಾ, ಕುರಿ ಪಾಲಿಸುವ ಕೆಲಸಮಾಡುತ್ತಾ, ಮತ್ತು ಬೋಧಿಸುತ್ತಾ ಬಹಳ ಕಾರ್ಯಮಗ್ನರಾಗಿದ್ದಾರೆ.—2 ತಿಮೊಥೆಯ 4:2; ತೀತ 1:9.
9. ಸಭೆಯಲ್ಲಿ ದೇವರ ಚಿತ್ತವನ್ನು ಪ್ರತಿನಿಧಿಸಲು ಹಿರಿಯರು ತಮ್ಮನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು?
9 ದೇವಪ್ರಭುತ್ವವು ದೇವರ ಆಳಿಕೆ ಆಗಿರುವುದರಿಂದ, ಕಾರ್ಯಕಾರಿ ಹಿರಿಯರು ದೇವರ ಚಿತ್ತದೊಂದಿಗೆ ಸಂಪೂರ್ಣವಾಗಿ ಪರಿಚಿತರಾಗಿದ್ದಾರೆ. ಧರ್ಮಶಾಸ್ತ್ರವನ್ನು ದಿನನಿತ್ಯವು ಓದುವಂತೆ ಯೆಹೋಶುವನು ಆಜ್ಞಾಪಿಸಲ್ಪಟ್ಟನು. ಶಾಸ್ತ್ರವಚನಗಳನ್ನು ಕ್ರಮವಾಗಿ ಅಭ್ಯಾಸಿಸಿ ಪರಾಮರ್ಶಿಸುವ ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಪ್ರಕಾಶಿಸಲಾದ ಬೈಬಲ್ ಸಾಹಿತ್ಯದೊಂದಿಗೆ ಸಂಪೂರ್ಣವಾಗಿ ಪರಿಚಿತರಾಗಿರುವ ಆವಶ್ಯಕತೆ ಹಿರಿಯರಿಗೆ ಕೂಡ ಇದೆ. (2 ತಿಮೊಥೆಯ 3:14, 15) ನಿರ್ದಿಷ್ಟವಾದ ಸನ್ನಿವೇಶಗಳಿಗೆ ಬೈಬಲ್ ತತ್ವಗಳು ಹೇಗೆ ಅನ್ವಯಿಸುತ್ತವೆ ಎಂದು ತೋರಿಸುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಮತ್ತು ಇತರ ಪ್ರಕಾಶನಗಳನ್ನು ಇದು ಒಳಗೊಳ್ಳುತ್ತದೆ.a ವಾಚ್ಟವರ್ ಸೊಸೈಟಿಯ ಸಾಹಿತ್ಯಗಳಲ್ಲಿ ಪ್ರಕಾಶಿಸಲಾದ ಮಾರ್ಗದರ್ಶಕಗಳನ್ನು ತಿಳಿದು ಅನುಸರಿಸುವುದು ಒಬ್ಬ ಹಿರಿಯನಿಗೆ ಪ್ರಾಮುಖ್ಯವಾದ ವಿಷಯವಾಗಿದ್ದರೂ, ಮಾರ್ಗದರ್ಶಕಗಳಿಗೆ ಆಧಾರವಾಗಿರುವ ಶಾಸ್ತ್ರೀಯ ತತ್ವಗಳೊಂದಿಗೆ ಸಹ ಅವನು ಸಂಪೂರ್ಣವಾಗಿ ಪರಿಚಿತನಾಗಿರಬೇಕು. ಆಗ ಅವನು ಶಾಸ್ತ್ರೀಯ ಮಾರ್ಗದರ್ಶಕಗಳನ್ನು ತಿಳಿವಳಿಕೆ ಮತ್ತು ಅನುಕಂಪದೊಂದಿಗೆ ಅನ್ವಯಿಸುವ ಸ್ಥಾನದಲ್ಲಿ ಇರುವನು.—ಹೋಲಿಸಿ ಮೀಕ 6:8.
ಕ್ರೈಸ್ತ ಆತ್ಮದೊಂದಿಗೆ ಸೇವಿಸುವುದು
10. ಯಾವ ಕೆಟ್ಟ ಮನೋಭಾವದ ವಿರುದ್ಧ ಹಿರಿಯರು ಎಚ್ಚರವಹಿಸಬೇಕು, ಮತ್ತು ಹೇಗೆ?
10 ಸುಮಾರು ಸಾ.ಶ. 55 ನೆಯ ವರ್ಷದಲ್ಲಿ, ಕೊರಿಂಥದಲ್ಲಿದ್ದ ಸಭೆಗೆ ಅಪೊಸ್ತಲ ಪೌಲನು ತನ್ನ ಪ್ರಥಮ ಪತ್ರವನ್ನು ಬರೆದನು. ಅವನು ನಿರ್ವಹಿಸಿದ ಸಮಸ್ಯೆಗಳಲ್ಲಿ ಒಂದು, ಸಭೆಯಲ್ಲಿ ಪ್ರಧಾನರಾಗಲು ಬಯಸುತ್ತಿದ್ದ ಕೆಲವು ಪುರುಷರ ವಿಷಯದಲ್ಲಿತ್ತು. ಪೌಲನು ಬರೆದದ್ದು: “ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಮ್ಮ ಸಹಾಯವಿಲ್ಲದೆ ಅರಸರಾದಿರಿ. ನೀವು ನಿಜವಾಗಿ ಅರಸರಾಗಿದ್ದರೆ ನನಗೆ ಎಷ್ಟೋ ಆನಂದವಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಅರಸರಾಗಿರುತ್ತಿದ್ದೆವು.” (1 ಕೊರಿಂಥ 4:8) ಸಾ.ಶ. ಮೊದಲನೆಯ ಶತಮಾನದಲ್ಲಿ, ಎಲ್ಲಾ ಕ್ರೈಸ್ತರಿಗೆ ಯೇಸುವಿನೊಂದಿಗೆ ಸ್ವರ್ಗೀಯ ರಾಜರು ಮತ್ತು ಯಾಜಕರಂತೆ ಆಳುವ ನಿರೀಕ್ಷೆ ಇತ್ತು. (ಪ್ರಕಟನೆ 20:4, 6) ಆದರೂ, ಸ್ಪಷ್ಟವಾಗಿಗಿ, ಕೊರಿಂಥದಲ್ಲಿ ಕೆಲವರು ಭೂಮಿಯ ಮೇಲೆ ಕ್ರೈಸ್ತ ದೇವಪ್ರಭುತ್ವದಲ್ಲಿ ಅರಸರುಗಳಿಲ್ಲ ಎಂಬುದನ್ನು ಮರೆತರು. ಈ ಲೋಕದ ರಾಜರಂತೆ ವರ್ತಿಸುವ ಬದಲು, ಕ್ರೈಸ್ತ ಕುರುಬರು, ಯೆಹೋವನನ್ನು ಮೆಚ್ಚಿಸುವ ಗುಣವಾದ ದೀನತೆಯನ್ನು ಬೆಳೆಸುತ್ತಾರೆ.—ಕೀರ್ತನೆ 138:6; ಲೂಕ 22:25-27.
11. (ಎ) ದೀನತೆಯ ಕೆಲವು ಎದ್ದುಕಾಣುವ ಮಾದರಿಗಳು ಯಾವುವು? (ಬಿ) ಸ್ವತಃ ತಮ್ಮ ಕುರಿತಾಗಿಯೇ ಹಿರಿಯರಿಗೆ ಮತ್ತು ಬೇರೆ ಎಲ್ಲಾ ಕ್ರೈಸ್ತರಿಗೆ ಯಾವ ನೋಟವಿರಬೇಕು?
11 ದೀನತೆ ಒಂದು ಬಲಹೀನತೆಯಾಗಿದೆಯೊ? ಖಂಡಿತವಾಗಿಯೂ ಇಲ್ಲ! ಯೆಹೋವನು ತಾನೇ ದೀನನಾಗಿ ವರ್ಣಿಸಲ್ಪಟ್ಟಿದ್ದಾನೆ. (ಕೀರ್ತನೆ 18:35) ಇಸ್ರಾಯೇಲಿನ ರಾಜರು ಯೆಹೋವನ ಕೆಳಗೆ ಸೇನೆಗಳನ್ನು ಯುದ್ಧಕ್ಕೆ ನಡೆಸಿದರು ಮತ್ತು ಜನಾಂಗವನ್ನು ಆಳಿದರು. ಆದರೂ, ಪ್ರತಿಯೊಬ್ಬನು ‘ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ’ ಇರುವಂತೆ ಜಾಗರೂಕನಾಗಿರಬೇಕಿತ್ತು. (ಧರ್ಮೋಪದೇಶಕಾಂಡ 17:20) ಪುನರುತ್ಥಾನಗೊಂಡ ಯೇಸು ಸ್ವರ್ಗೀಯ ರಾಜನಾಗಿದ್ದಾನೆ. ಭೂಮಿಯ ಮೇಲೆ ಇದ್ದಾಗ, ಅವನು ತನ್ನ ಶಿಷ್ಯರ ಕಾಲುಗಳನ್ನು ತೊಳೆದನು. ಎಂತಹ ದೀನತೆ! ತನ್ನ ಅಪೊಸ್ತಲರು ಅದೇ ರೀತಿಯಲ್ಲಿ ದೀನರಾಗಿರಬೇಕು ಎಂಬುದನ್ನು ತೋರಿಸುತ್ತಾ, ಅವನಂದದ್ದು: “ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ.” (ಯೋಹಾನ 13:14; ಫಿಲಿಪ್ಪಿ 2:5-8) ಎಲ್ಲಾ ಮಹಿಮೆ ಮತ್ತು ಸ್ತುತಿ ಯೆಹೋವನಿಗೆ ಹೋಗಬೇಕು, ಯಾವ ಮನುಷ್ಯನಿಗೂ ಅಲ್ಲ. (ಪ್ರಕಟನೆ 4:11) ಅವರು ಹಿರಿಯರಾಗಿರಲಿ ಇಲ್ಲದಿರಲಿ, ಎಲ್ಲಾ ಕ್ರೈಸ್ತರು, “ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ” ಎಂಬ ಯೇಸುವಿನ ಮಾತುಗಳ ಪ್ರಕಾಶದಲ್ಲಿ ತಮ್ಮ ಕುರಿತಾಗಿ ಯೋಚಿಸಬೇಕು. (ಲೂಕ 17:10) ಬೇರೆ ಯಾವುದೇ ನೋಟವು ದೇವಪ್ರಭುತ್ವಾತ್ಮಕವಲ್ಲ.
12. ಪ್ರೀತಿಯನ್ನು ಬೆಳೆಸುವುದು ಕ್ರೈಸ್ತ ಹಿರಿಯರಿಗೆ ಅತ್ಯಾವಶ್ಯಕವಾದ ಒಂದು ಗುಣವಾಗಿದೆ ಏಕೆ?
12 ದೀನತೆಯೊಂದಿಗೆ ಕ್ರೈಸ್ತ ಹಿರಿಯರು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು,” ಎಂದು ಹೇಳಿದಾಗ, ಅಪೊಸ್ತಲ ಯೋಹಾನನು ಪ್ರೀತಿಯ ಪ್ರಾಮುಖ್ಯತೆಯನ್ನು ತೋರಿಸಿದನು. (1 ಯೋಹಾನ 4:8) ಪ್ರೀತಿಯಿಲ್ಲದ ವ್ಯಕ್ತಿಗಳು ದೇವಪ್ರಭುತ್ವಾತ್ಮಕರಲ್ಲ. ಅವರಿಗೆ ಯೆಹೋವನ ಅರಿವು ಇರುವುದಿಲ್ಲ. ದೇವರ ಮಗನ ಕುರಿತು, ಬೈಬಲ್ ಹೇಳುವುದು: “ಯೇಸು . . . ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು.” (ಯೋಹಾನ 13:1) ಕ್ರೈಸ್ತ ಸಭೆಯಲ್ಲಿ ಆಡಳಿತ ಮಂಡಳಿಯ ಭಾಗವಾಗಿರಲಿದ್ದ 11 ಪುರುಷರೊಂದಿಗೆ ಮಾತಾಡುತ್ತಾ, ಯೇಸು ಅಂದದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ.” (ಯೋಹಾನ 15:12) ನಿಜ ಕ್ರೈಸ್ತತ್ವವನ್ನು ಗುರುತಿಸುವ ಸಂಕೇತ ಪ್ರೀತಿಯಾಗಿದೆ. ಅದು ಎದೆಯೊಡೆದವರನ್ನು, ದುಃಖಿಸುವವರನ್ನು, ಮತ್ತು ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ ಆತ್ಮಿಕ ಬಂದಿಗಳನ್ನು ಆಕರ್ಷಿಸುತ್ತದೆ. (ಯೆಶಾಯ 61:1, 2; ಯೋಹಾನ 13:35) ಪ್ರೀತಿಯನ್ನು ತೋರಿಸುವುದರಲ್ಲಿ ಹಿರಿಯರು ಆದರ್ಶಪ್ರಾಯರಾಗಿರಬೇಕು.
13. ಇಂದು ಸಮಸ್ಯೆಗಳು ಕಠಿನವಾಗಿರಬಹುದಾದರೂ, ಎಲ್ಲಾ ಸನ್ನಿವೇಶಗಳಲ್ಲಿ ಒಬ್ಬ ಹಿರಿಯನು ಹೇಗೆ ಪ್ರಯೋಜನಕಾರಿ ಪ್ರಭಾವವಾಗಿರಬಲ್ಲನು?
13 ಇಂದು, ಜಟಿಲ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯಮಾಡುವಂತೆ ಹಿರಿಯರು ಅನೇಕ ಬಾರಿ ಕೇಳಿಕೊಳ್ಳಲ್ಪಡುತ್ತಾರೆ. ವಿವಾಹದ ತೊಂದರೆಗಳು ಆಳವಾಗಿ ಬೇರೂರಿರಬಲ್ಲವು ಹಾಗೂ ಪಟ್ಟುಹಿಡಿದಿರುವವುಗಳಾಗಿರಬಲ್ಲವು. ವಯಸ್ಕರಿಗೆ ಗ್ರಹಿಸಲು ಕಠಿನವಾಗಿ ಕಾಣಬಹುದಾದ ಸಮಸ್ಯೆಗಳು ಯುವ ಜನರಿಗೆ ಇವೆ. ಭಾವನಾತ್ಮಕ ಅಸ್ವಸ್ಥತೆಗಳು ಅನೇಕ ವೇಳೆ ಅರ್ಥಮಾಡಿಕೊಳ್ಳಲು ಕಠಿನವಾಗುತ್ತವೆ. ಇಂತಹ ವಿಷಯಗಳನ್ನು ಎದುರುಗೊಂಡ ಒಬ್ಬ ಹಿರಿಯನು, ಏನನ್ನು ಮಾಡಬೇಕು ಎಂಬುದರ ಕುರಿತು ಅನಿಶ್ಚಿತನಾಗಿರಬಹುದು. ಆದರೆ ಯೆಹೋವನ ವಿವೇಕದ ಮೇಲೆ ಅವನು ಪ್ರಾರ್ಥನಾಪೂರ್ವಕವಾಗಿ ಆತುಕೊಂಡರೆ, ಬೈಬಲಿನಲ್ಲಿ ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಪ್ರಕಾಶಿಸಲಾದ ಮಾಹಿತಿಯಲ್ಲಿ ಸಂಶೋಧನೆ ಮಾಡುವುದಾದರೆ, ಮತ್ತು ಕುರಿಗಳೊಂದಿಗೆ ಅವನು ದೈನ್ಯವಾಗಿ ಮತ್ತು ಪ್ರೀತಿಪರವಾಗಿ ನಡೆದುಕೊಂಡರೆ, ಅತಿ ಕಠಿನವಾದ ಸನ್ನಿವೇಶದಲ್ಲಿಯೂ ಕೂಡ ಅವನು ಪ್ರಯೋಜನಕಾರಿ ಪ್ರಭಾವವಾಗಿರುವನೆಂಬ ಭರವಸೆಯಿಂದ ಇರಬಲ್ಲನು.
14, 15. ಯೆಹೋವನು ಆತನ ಜನರನ್ನು ಅನೇಕ ಉತ್ತಮ ಹಿರಿಯರಿಂದ ಆಶೀರ್ವದಿಸಿದ್ದಾನೆಂದು ತೋರಿಸುವ ಕೆಲವು ಅಭಿವ್ಯಕ್ತಿಗಳು ಯಾವುವಾಗಿವೆ?
14 ಯೆಹೋವನು ಆತನ ಸಂಸ್ಥೆಯನ್ನು ‘ಮನುಷ್ಯರಲ್ಲಿ ದಾನಗಳೊಂದಿಗೆ’ ಯಥೇಚ್ಛವಾಗಿ ಆಶೀರ್ವದಿಸಿದ್ದಾನೆ. (ಎಫೆಸ 4:8) ಆಗಿಂದಾಗ್ಗೆ, ದೇವರ ಕುರಿಗಳನ್ನು ಅನುಕಂಪದಿಂದ ಕಾಯುವ ದೀನ ಹಿರಿಯರ ಮೂಲಕ ತೋರಿಸಲಾದ ಪ್ರೀತಿಯನ್ನು ರುಜುಪಡಿಸುವ ಸೌಹಾರ್ದದ ಪತ್ರಗಳನ್ನು ವಾಚ್ ಟವರ್ ಸೊಸೈಟಿಯು ಪಡೆಯುತ್ತದೆ. ಉದಾಹರಣೆಗೆ, ಒಬ್ಬ ಸಭಾ ಹಿರಿಯನು ಬರೆಯುವುದು: “ನನ್ನನ್ನು ಇದಕ್ಕಿಂತ ಹೆಚ್ಚಾಗಿ ಪ್ರಭಾವಿಸಿದ ಸರ್ಕಿಟ್ ಮೇಲ್ವಿಚಾರಕನ ಭೇಟಿಯನ್ನು ಯಾ ಅದರ ಕುರಿತು ಸಭೆಯಲ್ಲಿ ಇನ್ನೂ ಹೇಳಿಕೆಗಳು ನೀಡಲಾಗುತ್ತಿರುವುದನ್ನು ನಾನು ಜ್ಞಾಪಿಸಿಕೊಳ್ಳಸಾಧ್ಯವಿಲ್ಲ. ಪ್ರಶಂಸೆಯ ಮೇಲೆ ಒತ್ತನ್ನು ಹಾಕುತ್ತಾ, ಸಹೋದರರೊಂದಿಗೆ ವ್ಯವಹರಿಸುವಾಗ ಸಕಾರಾತ್ಮಕ ಮನೋಭಾವದ ಪ್ರಾಮುಖ್ಯತೆಯನ್ನು ನೋಡುವಂತೆ ಸರ್ಕಿಟ್ ಮೇಲ್ವಿಚಾರಕನು ನನಗೆ ಸಹಾಯಮಾಡಿದನು.”
15 ಚಿಕಿತ್ಸೆಯನ್ನು ಪಡೆಯಲು ದೂರದ ಆಸ್ಪತ್ರೆಗೆ ಪ್ರಯಾಣಿಸಬೇಕಾಗಿದ್ದ ಒಬ್ಬ ಸಹೋದರಿಯು ಬರೆಯುವುದು: “ಮನೆಯಿಂದ ಅಷ್ಟು ದೂರವಿರುವ ಆಸ್ಪತ್ರೆಯೊಂದರಲ್ಲಿ ಆ ಪ್ರಥಮ ಚಿಂತೆಗೊಳಪಡಿಸುವ ರಾತ್ರಿಯಂದು ಒಬ್ಬ ಹಿರಿಯನನ್ನು ಭೇಟಿಯಾಗಲು ಸಾಧ್ಯವಾದದ್ದು ಎಷ್ಟು ಆಶ್ವಾಸನದಾಯಕ! ಅವನು ಮತ್ತು ಇತರ ಸಹೋದರರು ನನ್ನೊಂದಿಗೆ ಬಹಳಷ್ಟು ಸಮಯವನ್ನು ಕಳೆದರು. ನಾನು ಅನುಭವಿಸುತ್ತಿದ್ದ ವಿಷಯದೊಂದಿಗೆ ಪರಿಚಿತರಾಗಿದ್ದ ಲೋಕದಲ್ಲಿರುವ ಜನರಿಗೂ ಕೂಡ, ಆ ಪ್ರೀತಿಪರ ಹಾಗೂ ಸಮರ್ಪಿತ ಸಹೋದರರ ಸಾಂತ್ವನ, ಕಾಳಜಿ, ಮತ್ತು ಪ್ರಾರ್ಥನೆಗಳಿಲ್ಲದೆ ನಾನು ಎಂದೂ ಬದುಕಿ ಉಳಿದಿರುತ್ತಿದ್ದಿಲ್ಲ ಎಂದು ಅನಿಸಿತು.” ಇನ್ನೊಬ್ಬ ಸಹೋದರಿಯು ಬರೆಯುವುದು: “ನಾನು ಇಂದು ಜೀವಂತಳಾಗಿದ್ದೇನೆ ಯಾಕಂದರೆ ಭಾರಿ ಖಿನ್ನತೆಯೊಂದಿಗೆ ಮಾಡಿದ ನನ್ನ ಹೋರಾಟದಲ್ಲಿ ಹಿರಿಯರ ಮಂಡಳಿಯು ನನ್ನನ್ನು ತಾಳ್ಮೆಯಿಂದ ಮಾರ್ಗದರ್ಶಿಸಿತು. . . . ನನಗೆ ಏನು ಹೇಳಬೇಕೆಂದು ಒಬ್ಬ ಸಹೋದರ ಮತ್ತು ಅವನ ಹೆಂಡತಿಗೆ ಗೊತ್ತಾಗಲಿಲ್ಲ. . . . . ನಾನು ಏನನ್ನು ಅನುಭವಿಸುತ್ತಿದ್ದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದರೂ, ಪ್ರೀತಿಪರವಾಗಿ ಅವರು ನನ್ನ ಕುರಿತು ಚಿಂತಿಸಿದರು ಎಂಬ ವಿಷಯವು ನನ್ನನ್ನು ಬಹಳವಾಗಿ ಸ್ಪರ್ಶಿಸಿತು.”
16. ಹಿರಿಯರಿಗೆ ಯಾವ ಪ್ರಬೋಧನೆಯನ್ನು ಪೇತ್ರನು ಕೊಡುತ್ತಾನೆ?
16 ಹೌದು, ಅನೇಕ ಹಿರಿಯರು ಅಪೊಸ್ತಲ ಪೇತ್ರನ ಪ್ರಬೋಧನೆಯನ್ನು ಅನ್ವಯಿಸುತ್ತಿದ್ದಾರೆ: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.” (1 ಪೇತ್ರ 5:1-3) ಇಂತಹ ದೇವಪ್ರಭುತ್ವದ ಹಿರಿಯರು ಎಂತಹ ಆಶೀರ್ವಾದವಾಗಿದ್ದಾರೆ!
ದೇವಪ್ರಭುತ್ವದಲ್ಲಿ ಕುರಿಗಳು
17. ಸಭೆಯ ಎಲ್ಲಾ ಸದಸ್ಯರು ಬೆಳೆಸಿಕೊಳ್ಳಬೇಕಾದ ಕೆಲವು ಗುಣಗಳನ್ನು ಹೆಸರಿಸಿರಿ.
17 ಹಾಗಿದ್ದರೂ, ಒಂದು ದೇವಪ್ರಭುತ್ವವು ಕೇವಲ ಹಿರಿಯರಿಂದ ರಚಿತವಾಗಿಲ್ಲ. ಕುರುಬರು ದೇವಪ್ರಭುತ್ವಾತ್ಮಕವಾಗಿರಬೇಕಾದರೆ, ಕುರಿಗಳು ಸಹ ಹಾಗಿರಬೇಕು. ಯಾವ ವಿಧಗಳಲ್ಲಿ? ಒಳ್ಳೆಯದು, ಕುರುಬರನ್ನು ಮಾರ್ಗದರ್ಶಿಸುವ ಅವೇ ಮೂಲತತ್ವಗಳು ಕುರಿಗಳನ್ನೂ ಮಾರ್ಗದರ್ಶಿಸಬೇಕು. ಯೆಹೋವನ ಆಶೀರ್ವಾದವನ್ನು ಅವರು ಪಡೆಯಬೇಕಾದರೆ, ಹಿರಿಯರು ಮಾತ್ರವಲ್ಲ ಎಲ್ಲಾ ಕ್ರೈಸ್ತರು ದೀನರಾಗಿರಬೇಕು. (ಯಾಕೋಬ 4:6) ಎಲ್ಲರು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಯಾಕೆಂದರೆ ಅದಿಲ್ಲದೆ ಯೆಹೋವನಿಗೆ ನಮ್ಮ ಬಲಿಗಳು ಆತನನ್ನು ಮೆಚ್ಚಿಸುವಂಥವುಗಳಾಗಿರುವುದಿಲ್ಲ. (1 ಕೊರಿಂಥ 13:1-3) ಮತ್ತು ನಾವೆಲ್ಲರೂ, ಕೇವಲ ಹಿರಿಯರು ಮಾತ್ರವಲ್ಲ, “ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ [ಯೆಹೋವನ] ಚಿತ್ತದ ವಿಷಯವಾದ ತಿಳುವಳಿಕೆಯಿಂದ” ತುಂಬಿಕೊಂಡಿರಬೇಕು.—ಕೊಲೊಸ್ಸೆ 1:9.
18. (ಎ) ಸತ್ಯದ ಕೇವಲ ಮೇಲ್ಮೈ ಜ್ಞಾನವು ಸಾಕಾಗದು ಏಕೆ? (ಬಿ) ನಾವೆಲ್ಲರು ನಿಷ್ಕೃಷ್ಟ ಜ್ಞಾನದಿಂದ ಹೇಗೆ ತುಂಬಿರಬಲ್ಲೆವು?
18 ಸೈತಾನನ ಲೋಕದಲ್ಲಿ ಜೀವಿಸುತ್ತಾ ಇರುವುದಾದರೂ ನಂಬಿಗಸ್ತರಾಗಿ ಉಳಿಯಲು ಅವರು ಪ್ರಯತ್ನಿಸುವಾಗ, ಯುವ ಮತ್ತು ವೃದ್ಧ ಜನರು ಸಮಾನವಾಗಿ ಕಠಿನ ನಿರ್ಣಯಗಳಿಂದ ಸಂತತವಾಗಿ ಎದುರುಗೊಳ್ಳುತ್ತಾರೆ. ಉಡುಪು ಧರಿಸುವಿಕೆ, ಸಂಗೀತ, ಚಲನಚಿತ್ರಗಳು, ಮತ್ತು ಸಾಹಿತ್ಯದಲ್ಲಿರುವ ಲೋಕದ ಪ್ರವೃತ್ತಿಗಳು ಕೆಲವರ ಆತ್ಮಿಕತೆಗೆ ಸವಾಲೊಡ್ಡುತ್ತವೆ. ನಮ್ಮ ಸಮತೂಕವನ್ನು ಕಾಪಾಡುವಂತೆ ಸಹಾಯ ಮಾಡಲು ಸತ್ಯದ ಮೇಲ್ಮೈ ಜ್ಞಾನ ಸಾಕಾಗುವುದಿಲ್ಲ. ನಂಬಿಗಸ್ತರಾಗಿ ಉಳಿಯುವುದರ ಕುರಿತು ನಿಶ್ಚಿತವಾಗಿರಲು, ನಿಷ್ಕೃಷ್ಟ ಜ್ಞಾನದಿಂದ ನಾವು ತುಂಬಿರುವ ಆವಶ್ಯಕತೆಯಿದೆ. ದೇವರ ವಾಕ್ಯವು ಮಾತ್ರ ನಮಗೆ ಕೊಡಬಲ್ಲ ಸೂಕ್ಷ್ಮದೃಷ್ಟಿ ಮತ್ತು ವಿವೇಕದ ಆವಶ್ಯಕತೆ ನಮಗಿದೆ. (ಜ್ಞಾನೋಕ್ತಿ 2:1-5) ಇದರ ಅರ್ಥವು ಒಳ್ಳೆಯ ಅಭ್ಯಾಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ನಾವು ಕಲಿತ ವಿಷಯಗಳ ಕುರಿತು ಮನನಮಾಡುವುದು, ಮತ್ತು ಅದನ್ನು ಕಾರ್ಯರೂಪದಲ್ಲಿ ಹಾಕುವುದಾಗಿದೆ. (ಕೀರ್ತನೆ 1:1-3; ಪ್ರಕಟನೆ 1:3) “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ,” ಎಂಬುದಾಗಿ ಬರೆದಾಗ, ಪೌಲನು ಕೇವಲ ಹಿರಿಯರಿಗಲ್ಲ, ಎಲ್ಲಾ ಕ್ರೈಸ್ತರಿಗೆ ಬರೆಯುತ್ತಾ ಇದ್ದನು.—ಇಬ್ರಿಯ 5:14.
ಕುರುಬರು ಮತ್ತು ಕುರಿಗಳು ಒಟ್ಟಾಗಿ ಕೆಲಸಮಾಡುತ್ತಾರೆ
19, 20. ಹಿರಿಯರೊಂದಿಗೆ ಸಹಕರಿಸಲು ಯಾವ ಪ್ರಬೋಧನೆಗಳು ಎಲ್ಲರಿಗೆ ಕೊಡಲ್ಪಟ್ಟಿದೆ, ಮತ್ತು ಯಾಕೆ?
19 ಕೊನೆಯದಾಗಿ, ಹಿರಿಯರೊಂದಿಗೆ ಸಹಕರಿಸುವವರಿಂದ ಖಂಡಿತವಾಗಿಯೂ ಒಂದು ದೇವಪ್ರಭುತ್ವ ಆತ್ಮವು ತೋರಿಸಲ್ಪಡುತ್ತದೆ ಎಂಬುದಾಗಿ ಹೇಳಲ್ಪಡಬೇಕು. ಪೌಲನು ತಿಮೊಥೆಯನಿಗೆ ಬರೆದದ್ದು: “ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.” (1 ತಿಮೊಥೆ 5:17; 1 ಪೇತ್ರ 5:5, 6) ಹಿರಿಯತನವು ಅದ್ಭುತಕರವಾದ ಒಂದು ಸುಯೋಗವಾಗಿದೆ, ಆದರೆ ಹೆಚ್ಚಿನ ಹಿರಿಯರು ತಮ್ಮ ಐಹಿಕ ಕೆಲಸಕ್ಕೆ ಪ್ರತಿದಿನ ಹೋಗುವ ಮತ್ತು ಪೋಷಿಸಲು ಪತ್ನಿಯರನ್ನು ಮತ್ತು ಮಕ್ಕಳನ್ನು ಹೊಂದಿರುವ ಕುಟುಂಬಸ್ಥ ಪುರುಷರಾಗಿದ್ದಾರೆ. ಅವರು ಸೇವೆ ಮಾಡಲು ಸಂತೋಷಿಸಿದರೂ, ಸಭೆಯು ಬೆಂಬಲ ಕೊಡುವಂತಹ, ಅತಿಯಾಗಿ ಟೀಕೆ ಮತ್ತು ತಗಾದೆ ಮಾಡದ ಸಭೆಯಾಗಿದ್ದರೆ, ಅವರ ಸೇವೆಯು ಸರಳವಾಗಿರುತ್ತದೆ ಮತ್ತು ಹೆಚ್ಚು ಫಲದಾಯಕವಾಗಿರುತ್ತದೆ.—ಇಬ್ರಿಯ 13:17.
20 ಅಪೊಸ್ತಲ ಪೌಲನು ಅಂದದ್ದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” (ಇಬ್ರಿಯ 13:7) ಇಲ್ಲ, ಹಿರಿಯರನ್ನು ಸಹೋದರರು ಹಿಂಬಾಲಿಸುವಂತೆ ಪೌಲನು ಉತ್ತೇಜಿಸಲಿಲ್ಲ. (1 ಕೊರಿಂಥ 1:12) ಒಬ್ಬ ಮನುಷ್ಯನನ್ನು ಹಿಂಬಾಲಿಸುವುದು ದೇವಪ್ರಭುತ್ವಾತ್ಮಕವಲ್ಲ. ಆದರೆ ಸೌವಾರ್ತಿಕ ಕೆಲಸದಲ್ಲಿ ಸಕ್ರಿಯನಾಗಿರುವ, ಕೂಟಗಳಲ್ಲಿ ಕ್ರಮವಾಗಿರುವ, ಮತ್ತು ಸಭೆಯೊಂದಿಗೆ ದೈನ್ಯದಿಂದ ಮತ್ತು ಪ್ರೀತಿಯಿಂದ ವ್ಯವಹರಿಸುವ ಒಬ್ಬ ದೇವಪ್ರಭುತ್ವಾತ್ಮಕನಾದ ಹಿರಿಯನ ರುಜುವಾದ ನಂಬಿಕೆಯನ್ನು ಅನುಸರಿಸುವುದು ಖಂಡಿತವಾಗಿ ವಿವೇಕಪ್ರದವಾಗಿದೆ.
ನಂಬಿಕೆಗೆ ಒಂದು ಒಡಂಬಡಿಕೆ
21. ಮೋಶೆಯಂತಹ ಬಲವಾದ ನಂಬಿಕೆಯನ್ನು ಕ್ರೈಸ್ತರು ಹೇಗೆ ಪ್ರದರ್ಶಿಸುತ್ತಾರೆ?
21 ನಿಜವಾಗಿಯೂ, ಮಾನವ ಇತಿಹಾಸದ ಅತಿ ಭ್ರಷ್ಟ ಸಮಯದಲ್ಲಿ ಒಂದು ದೇವಪ್ರಭುತ್ವ ಸಂಸ್ಥೆಯ ಅಸ್ತಿತ್ವವು, ಮಹಾ ದೇವಪ್ರಭುತ್ವಾಧಿಪತಿಯ ಶಕ್ತಿಗೆ ಒಂದು ಪ್ರಮಾಣವಾಗಿದೆ. (ಯೆಶಾಯ 2:2-5) ಪ್ರತಿದಿನ ಜೀವಿತದ ಸಮಸ್ಯೆಗಳೊಂದಿಗೆ ಹೋರಾಡುವ, ಆದರೆ ಯೆಹೋವನು ತಮ್ಮ ಅರಸನೆಂದು ಎಂದಿಗೂ ಮರೆಯದ ಸುಮಾರು 50 ಲಕ್ಷ ಕ್ರೈಸ್ತ ಪುರುಷರ, ಸ್ತ್ರೀಯರ, ಮತ್ತು ಮಕ್ಕಳ ನಂಬಿಕೆಗೆ ಸಹ ಅದು ಒಂದು ಪ್ರಮಾಣವಾಗಿದೆ. ಹೇಗೆ ನಂಬಿಗಸ್ತ ಮೋಶೆಯು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತ” ನಾಗಿದ್ದನೋ, ಹಾಗೆಯೇ ಇಂದು ಕ್ರೈಸ್ತರಿಗೆ ಸಮಾನವಾದ ದೃಢ ನಂಬಿಕೆಯಿದೆ. (ಇಬ್ರಿಯ 11:27) ದೇವಪ್ರಭುತ್ವವೊಂದರಲ್ಲಿ ಜೀವಿಸಲು ಅವರು ಸುಯೋಗ ಉಳ್ಳವರಾಗಿದ್ದಾರೆ, ಮತ್ತು ಅದಕ್ಕಾಗಿ ಅವರು ಪ್ರತಿನಿತ್ಯವು ಯೆಹೋವನಿಗೆ ಉಪಕಾರಗಳನ್ನು ಸಲ್ಲಿಸುತಾರ್ತೆ. (ಕೀರ್ತನೆ 100:4, 5) ಯೆಹೋವನ ರಕ್ಷಣಾ ಶಕ್ತಿಯನ್ನು ಅವರು ಅನುಭವಿಸುವಾಗ, “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು,” ಎಂಬುದಾಗಿ ಘೋಷಿಸಲು ಅವರು ಸಂತೋಷಿಸುತ್ತಾರೆ.—ಯೆಶಾಯ 33:22.
[ಅಧ್ಯಯನ ಪ್ರಶ್ನೆಗಳು]
a ಶಾಸ್ತ್ರೀಯ ಮಾರ್ಗದರ್ಶಕಗಳನ್ನು ಹೊಂದಿರುವ ಮತ್ತು ನೇಮಕಗೊಂಡಿರುವ ಸಭಾ ಮೇಲ್ವಿಚಾರಕರಿಗೆ, ಯಾ ಹಿರಿಯರಿಗೆ ಒದಗಿಸಲ್ಪಡುವ “ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ,” ಎಂಬ ಪುಸ್ತಕವು ಇಂತಹ ಪ್ರಕಾಶನಗಳಲ್ಲಿ ಒಂದಾಗಿದೆ.
ಬೈಬಲ್ ಏನನ್ನು ತೋರಿಸುತ್ತದೆ?
▫ ಯಾವ ವಿಧದಲ್ಲಿ ಕ್ರೈಸ್ತರು ದೇವಪ್ರಭುತ್ವಕ್ಕೆ ಅಧೀನರಾಗುತ್ತಾರೆ?
▫ ಇಂದು ದೇವಪ್ರಭುತ್ವವು ಹೇಗೆ ಸಂಘಟಿತವಾಗಿದೆ?
▫ ತಮ್ಮ ಜವಾಬ್ದಾರಿಗಳನ್ನು ನೆರವೇರಿಸಲು ಹಿರಿಯರು ತಮ್ಮನ್ನು ಯಾವ ವಿಧಗಳಲ್ಲಿ ಸಿದ್ಧಪಡಿಸಿಕೊಳ್ಳಬೇಕು?
▫ ಯಾವ ಕ್ರೈಸ್ತ ಗುಣಗಳನ್ನು ಹಿರಿಯರು ಬೆಳೆಸಿ ಪ್ರದರ್ಶಿಸುವುದು ಅತ್ಯಾವಶ್ಯಕವಾಗಿದೆ?
▫ ದೇವಪ್ರಭುತ್ವದಲ್ಲಿ, ಕುರಿಗಳು ಮತ್ತು ಕುರುಬರ ನಡುವೆ ಯಾವ ರೀತಿಯ ಸಂಬಂಧವು ಇರಬೇಕು?
[ಪುಟ 16 ರಲ್ಲಿರುವ ಚಿತ್ರ]
ಸರಿ ಮತ್ತು ತಪ್ಪಿನ ಕುರಿತು ತಮ್ಮ ಸ್ವಂತ ನಿರ್ಣಯಗಳನ್ನು ಮಾಡಲು ಬಯಸಿದ್ದರಿಂದ ಆದಾಮ ಮತ್ತು ಹವ್ವರು ಪ್ರಮೋದವನವನ್ನು ಕಳೆದುಕೊಂಡರು
[ಪುಟ 18 ರಲ್ಲಿರುವ ಚಿತ್ರ]
ಕುರಿಗಳೊಂದಿಗೆ ಒಬ್ಬ ಹಿರಿಯನು ದೈನ್ಯದಿಂದ ಮತ್ತು ಪ್ರೀತಿಯಿಂದ ವ್ಯವಹರಿಸುವುದಾದರೆ, ಅವನು ಯಾವಾಗಲೂ ಒಬ್ಬ ಪ್ರಯೋಜನಕಾರಿ ಪ್ರಭಾವವಾಗಿರುವನು