ಮರಣಾನಂತರ ಜೀವನವಿದೆಯೆ?
ಎರಡು ಪ್ರಶ್ನೆಗಳು ಸಹಸ್ರಾರು ವರ್ಷಗಳಿಂದ ಮಾನವಕುಲಕ್ಕೆ ದಿಗ್ಭ್ರಮೆಹಿಡಿಸಿವೆ: ನಾವು ಏಕೆ ವೃದ್ಧರಾಗಿ, ಕಟ್ಟಕಡೆಗೆ ಸಾಯಬೇಕಾಗಿದೆ? ಮರಣಾನಂತರ ಯಾವುದೇ ರೀತಿಯ ಪ್ರಜ್ಞೆಯುಳ್ಳ ಜೀವನವು ಇದೆಯೆ?
ಮೊದಲನೆಯ ಪ್ರಶ್ನೆಯು ಅನೇಕ ಜನರನ್ನು ತಬ್ಬಿಬ್ಬುಗೊಳಿಸಿದೆ, ಏಕೆಂದರೆ ಆಧುನಿಕ ವೈದ್ಯಕೀಯ ವಿಜ್ಞಾನವು ಸಹ, ತನ್ನ ಎಲ್ಲಾ ಪ್ರಭಾವಶಾಲಿ ಅನ್ವೇಷಣೆಗಳೊಂದಿಗೆ, ಒಂದು ನಿರ್ಣಯಾತ್ಮಕವಾದ ಅಥವಾ ಸಂತೃಪ್ತಿಕರವಾದ ಉತ್ತರವನ್ನು ಕಂಡುಕೊಳ್ಳಲು ಸಮರ್ಥವಾಗಿರುವುದಿಲ್ಲ.
ಎರಡನೆಯ ಪ್ರಶ್ನೆಗೆ ವ್ಯತ್ಯಾಸಮಯವಾದ ಉತ್ತರಗಳು ಹೇರಳವಾಗಿ ದೊರಕಿದ್ದವು. ಆದರೂ, ಸಾಮಾನ್ಯವಾಗಿ, ಮರಣಾನಂತರ ಪ್ರಜ್ಞೆಯುಳ್ಳ ಜೀವನವಿದೆಯೊ ಇಲ್ಲವೊ ಎಂಬುದರ ಕುರಿತಾದ ಉತ್ತರಗಳು, ಇರುವುದು ಈ ಜೀವಿತ ಮಾತ್ರವೇ ಅಲ್ಲ ಎಂಬುದರ ಕುರಿತು ಸಕಾರಾತ್ಮಕರಾಗಿರುವವರು ಮತ್ತು ಪ್ರಜ್ಞಾಪೂರ್ವಕವಾದ ಜೀವನವು ಮರಣದಲ್ಲಿ ಕೊನೆಗೊಳ್ಳುತ್ತದೆ ಎಂದು ಅಷ್ಟೇ ಕಠಿನ ಹೃದಯದಿಂದ ವಿಶ್ವಾಸಿಸುವವರ ನಡುವೆ ವಿರುದ್ಧ ದೃಷ್ಟಿಕೋನವನ್ನು ಪಡೆದುಕೊಂಡಿವೆ. ಈ ಎರಡನೆಯ ಗುಂಪಿನ ಅಧಿಕಾಂಶ ಜನರು, ಮನುಷ್ಯನ ಅಲ್ಪಕಾಲದ ಜೀವನಾಯುಷ್ಯವು ತಾನೇ ಅವನು ನಿರೀಕ್ಷಿಸಸಾಧ್ಯವಿರುವ ಸಕಲ ವಿಷಯವಾಗಿದೆ ಎಂಬುದರ ಕುರಿತು ತಮ್ಮ ಮನಸ್ಸುಗಳಲ್ಲಿ ಸಂದೇಹವೇ ಇಲ್ಲವೆಂದು ನಮಗೆ ಹೇಳುತ್ತಾರೆ. ಅನೇಕವೇಳೆ, ಇದಕ್ಕೆ ವ್ಯತಿರಿಕ್ತವಾದ ಯಾವುದೇ ವಾಗ್ವಾದಗಳು ಮುಂತರಲ್ಪಟ್ಟಲ್ಲಿ, ಅವು “ಒಳ್ಳೇದು, ಇದನ್ನು ನಮಗೆ ಹೇಳಲಿಕ್ಕಾಗಿ ಎಂದೂ ಯಾರೊಬ್ಬನೂ ಹಿಂದಿರುಗಿ ಬಂದಿಲ್ಲ, ಅಲ್ಲವೇ?” ಎಂಬ ಸ್ವಸಂತುಷ್ಟ ಸ್ವಾಭಿಮಾನದ ಪ್ರತ್ಯುತ್ತರವನ್ನು ಪಡೆದುಕೊಳ್ಳುತ್ತವೆ.
ವಿವಾದಾಸ್ಪದವಾದ ಬೇರೆ ಪ್ರಶ್ನೆಗಳ ವಿಷಯದಲ್ಲಿರುವಂತೆ, ಒಂದಲ್ಲ ಒಂದು ವಿಧದಲ್ಲಿ ತಾವು ಯಾವಾಗಲೂ ಮನಗಾಣಿಕೆಗೆ ಸಿದ್ಧರಾಗಿದ್ದೇವೆಂದು ಪ್ರತಿಪಾದಿಸುತ್ತಾ, ಇನ್ನೂ ನಿರ್ಧಾರವನ್ನು ಮಾಡಿರದ ಅನೇಕ ಜನರಿದ್ದಾರೆ. ಆದರೆ ಇತರರು, ಬಹುಶಃ ಹುಡುಗಾಟಿಕೆಯಿಂದ, “ಆ ಸಮಯವು ಬರುವ ತನಕ ನಾವು ಕಾದುನೋಡಬೇಕು!” ಎಂದು ಉತ್ತರಿಸುವರು.
ಬಹಳ ಕಾಲದಿಂದಿರುವ ಒಂದು ಪ್ರಶ್ನೆ
ಮರಣಾನಂತರ ಜೀವನದ ಕುರಿತಾದ ಆರಂಭದ ಪ್ರಶ್ನೆಯೊಂದು, ಕಷ್ಟಾನುಭವದ ಎದುರಿನಲ್ಲಿನ ತನ್ನ ತಾಳ್ಮೆಗಾಗಿ ಪ್ರಖ್ಯಾತನಾಗಿರುವ ಪೂರ್ವ ದೇಶದ ಸುಪ್ರಸಿದ್ಧ ಯೋಬನಿಂದ, ಸುಮಾರು 3,500 ವರ್ಷಗಳ ಹಿಂದೆ ಎಬ್ಬಿಸಲ್ಪಟ್ಟಿತು. ಯೋಬನು ತನ್ನ ಪ್ರಶ್ನೆಯನ್ನು ಮುಂದಿಟ್ಟ ವಿಧವು ಇದಾಗಿದೆ: “ಮನುಷ್ಯನಾದರೋ ಸತ್ತು ಬೋರಲಬೀಳುವನು, ಪ್ರಾಣಹೋಗಲು ಅವನು ಎಲ್ಲಿಯೋ! ಸರೋವರದ ನೀರು ಬತ್ತುವಂತೆಯೂ ನದಿಯು ಆರಿ ಒಣಗುವ ಹಾಗೆಯೂ ಮನುಷ್ಯರು ಮಲಗಿಕೊಂಡು ಏಳದೇ ಇರುವರು; . . . ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?”—ಯೋಬ 14:10-14.
ಆದರೆ ಮರಣಾನಂತರ ಜೀವನದ ಕುರಿತಾಗಿರುವ ತನ್ನ ವಿಚಾರಣೆಯಲ್ಲಿ ಯೋಬನು ಏಕಮಾತ್ರನಾಗಿರಲಿಲ್ಲ. ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಆ್ಯಂಡ್ ಎಥಿಕ್ಸ್, “ಮೃತರ ಸ್ಥಿತಿ” ಎಂಬ ತಲೆಬರಹದ ಕೆಳಗೆ, ಜ್ಞಾನೋದಯವನ್ನುಂಟುಮಾಡುವ ಈ ಮಾಹಿತಿಯನ್ನು ಪ್ರತಿಪಾದಿಸುತ್ತದೆ: “ಮರಣಾನಂತರದ ತನ್ನ ಸ್ಥಿತಿಯ ಕುರಿತಾಗಿ ಮನುಷ್ಯನ ಮನಸ್ಸನ್ನು ಆಕ್ರಮಿಸಿರುವಷ್ಟು ಹೆಚ್ಚಾಗಿ, ಅವನ ಅಭೌತ ಜೀವಿತದೊಂದಿಗೆ ಸಂಬಂಧಿಸಿದ ಯಾವುದೇ ವಿಷಯವು ಅವನ ಮನಸ್ಸನ್ನು ಆಕ್ರಮಿಸಿಲ್ಲ. ಲೋಕದ ಎಲ್ಲಾ ಪ್ರದೇಶಗಳಲ್ಲಿರುವ [ಸ್ಥಳೀಯ ಜನರು], ಸರ್ವಸಾಮಾನ್ಯವಾಗಿ ಆತ್ಮ ಲೋಕ, ಅದರ ಜೀವನ, ಅದರ ವೈಶಿಷ್ಟ್ಯಗಳು, ಅದರ ಭೂದೃಶ್ಯಗಳ ಕುರಿತಾಗಿ ತುಂಬಾ ಸ್ಪಷ್ಟವಾದ ಹಾಗೂ ವಿಶದವಾದ ಕಲ್ಪನೆಗಳನ್ನು ಹೊಂದಿದ್ದಾರೆ ಮತ್ತು ಇದು ಮರಣಾನಂತರ ಜೀವನದ ವಿಷಯದೊಂದಿಗೆ ತೀವ್ರವಾದ ಅವಿಚಾರಾಭಿಪ್ರಾಯವನ್ನು ಸೂಚಿಸುತ್ತದೆ. ಮೃತರ ಕುರಿತು ವ್ಯಾಪಕವಾಗಿ ಹಬ್ಬಿರುವ ಭಯವು, ಮೃತರ ಸ್ಥಿತಿಯು ಜೀವಿತವು ಕೊನೆಗೊಂಡಿದ್ದಂತಹ ಒಂದು ಸ್ಥಿತಿಯಾಗಿರಲಿಲ್ಲ ಎಂಬ ತುಂಬಾ ಪುರಾತನವಾದೊಂದು ಕಲ್ಪನೆಯ ಕಡೆಗೆ ನಿರ್ದೇಶಿಸುತ್ತದೆ. ಮರಣವು ಶಕ್ತಿಗಳನ್ನು ಕಡಿತಗೊಳಿಸಿತ್ತು; ಅದು ಸಾಕಷ್ಟು ಸುವ್ಯಕ್ತವಾಗಿತ್ತು; ಆದರೆ ಇತರ ಶಕ್ತಿಗಳು ಅಲ್ಲಿ ಕಾರ್ಯನಡಿಸುತ್ತಿರಲಿಲ್ಲವೊ, ಅಥವಾ ಆ ಶಕ್ತಿಗಳು ಮಾರ್ಮಿಕವಾದ, ರಹಸ್ಯಗರ್ಭಿತ ವಿಧಾನಗಳಲ್ಲಿ ತೋರ್ಪಡಿಸಿಕೊಳ್ಳಲು ಸಮರ್ಥವಾಗಿರಲಿಲ್ಲವೊ? ಆರಂಭದಲ್ಲಿ ಮನುಷ್ಯರು, ದೇಹದಿಂದ ಪ್ರತ್ಯೇಕವಾದ ಒಂದು ಆತ್ಮದಲ್ಲಿ, ಪ್ರಾಣದಲ್ಲಿ, ಅಥವಾ ಪ್ರೇತದಲ್ಲಿ ನಂಬಿಕೆಯಿಟ್ಟಿದ್ದರೋ ಇಲ್ಲವೋ, ಅವರು ಮೃತರನ್ನು ಇನ್ನೂ ಯಾವುದೋ ರೀತಿಯ ಅಸ್ತಿತ್ವದಲ್ಲಿ ಮುಂದುವರಿಯುತ್ತಿರುವವರೋಪಾದಿ ಪರಿಗಣಿಸಿದರೆಂಬುದನ್ನು ನಂಬುವುದಕ್ಕೆ ಪ್ರತಿಯೊಂದು ಕಾರಣವು ಇರುವಂತೆ ತೋರುತ್ತದೆ.”
ಈ ಮೇಲೆ ಪ್ರಸ್ತಾಪಿಸಲ್ಪಟ್ಟ ಮೂರು ವರ್ಗಗಳಲ್ಲಿ ಯಾವುದಾದರೂ ಒಂದು ವರ್ಗದಲ್ಲಿ ನೀವು ಸೇರಿರಬಹುದು: ಮರಣಾನಂತರ ಏನು ಸಂಭವಿಸುತ್ತದೆ ಎಂಬುದರ ಕುರಿತು ಅನಿಶ್ಚಿತರು; ಮರಣಾನಂತರ ಯಾವುದೋ ರೀತಿಯ ಜೀವನವಿದೆ ಎಂಬುದಾಗಿ ಮನಗಾಣಿಸಲ್ಪಟ್ಟಿರುವವರು; ಅಥವಾ ಇರುವುದು ಈ ಜೀವಿತ ಮಾತ್ರವೇ ಎಂದು ಮನಗಾಣಿಸಲ್ಪಟ್ಟಿರುವವರು. ವಿದ್ಯಮಾನವು ಏನೇ ಆಗಿರಲಿ, ಈ ಮುಂದಿನ ಲೇಖನವನ್ನು ಜಾಗರೂಕತೆಯಿಂದ ಪರಿಗಣಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ನೀವು ಅದರಲ್ಲಿ, ಮರಣಾನಂತರ ಒಂದು ಸಂತೋಷಮಯವಾದ ಜೀವನದ ಕುರಿತಾದ ಅದ್ಭುತಕರ ಪ್ರತೀಕ್ಷೆಯಿದೆ, ಅದು ಹೇಗೆ ನೆರವೇರಲಿರುವುದು, ಎಲ್ಲಿ, ಮತ್ತು ಯಾವಾಗ ಎಂಬ ಮನವೊಪ್ಪಿಸುವ ಬೈಬಲ್ ಸಂಬಂಧಿತ ರುಜುವಾತನ್ನು ಕಂಡುಕೊಳ್ಳುವಿರೋ ಎಂಬುದನ್ನು ನೋಡಿರಿ.