ರಾಜ್ಯ ಘೋಷಕರು ವರದಿಮಾಡುತ್ತಾರೆ
ಅವನು “ಬಹು ಬೆಲೆಯುಳ್ಳ ಒಂದು ಮುತ್ತನ್ನು” ಕಂಡುಕೊಂಡನು
“ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.” ಈ ಮಾತುಗಳಿಂದ ಯೇಸು, ದೇವರ ರಾಜ್ಯಕ್ಕಿರುವ ಅಪಾರ ಬೆಲೆಯನ್ನು ದೃಷ್ಟಾಂತಿಸಿದನು. (ಮತ್ತಾಯ 13:45, 46) ರಾಜ್ಯದ ಬೆಲೆಯನ್ನು ಗ್ರಹಿಸುವವರು ಅನೇಕ ವೇಳೆ, ಅದನ್ನು ಪಡೆದುಕೊಳ್ಳುವ ಸಲುವಾಗಿ ಮಹತ್ತರವಾದ ವೈಯಕ್ತಿಕ ತ್ಯಾಗಗಳನ್ನು ಮಾಡುತ್ತಾರೆ. ಇದು, ಟೈವಾನ್ನ ಪಿಂಗ್ಡಾಂಗ್ ಕೌಂಟಿಯಿಂದ ಬಂದ ಈ ಮುಂದಿನ ಅನುಭವದಿಂದ ದೃಷ್ಟಾಂತಿಸಲ್ಪಟ್ಟಿದೆ.
ಇಸವಿ 1991ರಲ್ಲಿ, ಲಿನ್ ದಂಪತಿಗಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದರು. ಸ್ಥಳಿಕ ಪಾದ್ರಿಯೊಬ್ಬನು ಇದನ್ನು ಕಂಡುಹಿಡಿದಾಗ, ಅವರು ತನ್ನ ಚರ್ಚಿಗೆ ಸೇರುವಂತೆ ಮಾಡಲು ಅವನು ಪ್ರಯತ್ನಿಸಿದನು. ಲಿನ್ ದಂಪತಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹಂದಿ ಮತ್ತು ಬಾತುಕೋಳಿಗಳ ರಕ್ತವನ್ನು ಮಾರಾಟಮಾಡುವ ವ್ಯಾಪಾರವಿದ್ದ ಕಾರಣ, ಆ ವಿಷಯದ ಬಗ್ಗೆ ಪಾದ್ರಿಯ ಅಭಿಪ್ರಾಯವನ್ನು ಕೇಳಲು ಅವರು ನಿಶ್ಚಯಿಸಿದರು. “ದೇವರು ಮಾಡಿರುವ ಪ್ರತಿಯೊಂದನ್ನೂ ಮನುಷ್ಯನ ಆಹಾರವಾಗಿ ಉಪಯೋಗಿಸಸಾಧ್ಯವಿದೆ” ಎಂಬುದಾಗಿ ಅವನು ಉತ್ತರಿಸಿದನು. ಆದರೆ ಇನ್ನೊಂದು ಕಡೆಯಲ್ಲಿ, ದೇವರ ವಾಕ್ಯಕ್ಕೆ ಹೇಳಲಿಕ್ಕಿದ್ದ ವಿಷಯವನ್ನು ಅವರು ಪರಿಗಣಿಸುವಂತೆ ಸಾಕ್ಷಿಗಳು ಉತ್ತೇಜಿಸಿದರು. ಯೆಹೋವ ದೇವರು ರಕ್ತವನ್ನು ಪವಿತ್ರವಾಗಿ ವೀಕ್ಷಿಸುತ್ತಾನೆಂದು ಅವರು ತಿಳಿದುಕೊಂಡರು, ಯಾಕೆಂದರೆ “ಒಂದು ಜೀವಿಯ ಜೀವವು ರಕ್ತವಾಗಿದೆ.” (ಯಾಜಕಕಾಂಡ 17:10, 11, ದ ನ್ಯೂ ಇಂಗ್ಲಿಷ್ ಬೈಬಲ್) ಆದುದರಿಂದ ಸತ್ಯ ಕ್ರೈಸ್ತರು “ರಕ್ತವನ್ನೂ ವಿಸರ್ಜಿಸ”ಬೇಕು. (ಅ. ಕೃತ್ಯಗಳು 15:20) ಈ ವಿಷಯದ ಕುರಿತಾದ ಶಾಸ್ತ್ರವಚನಗಳನ್ನು ಪರಿಶೀಲಿಸಿದ ಕಾರಣ, ರಕ್ತವು ಅವರ ವರಮಾನದ ಮುಖ್ಯ ಮೂಲವಾಗಿದ್ದರೂ, ಲಿನ್ ದಂಪತಿಗಳು ಅದರ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದರು. ಆದಾಗಲೂ, ಸ್ವಲ್ಪ ಸಮಯದೊಳಗೆ, ಅವರು ಮತ್ತಷ್ಟು ಕಠಿನವಾದ ಪರೀಕ್ಷೆಯನ್ನು ಎದುರಿಸಿದರು.
ಸತ್ಯವನ್ನು ಕಲಿಯುವ ಮೊದಲು, ಲಿನ್ ದಂಪತಿಗಳು ತಮ್ಮ ಜಮೀನಿನಲ್ಲಿ 1,300 ಅಡಕೆ ಮರಗಳನ್ನು ನೆಟ್ಟಿದ್ದರು. ಆ ಮರಗಳು ಫಲಕೊಡಲು ಐದು ವರ್ಷಗಳು ಹಿಡಿಯುತ್ತವಾದರೂ, ಒಮ್ಮೆ ಅವು ಪೂರ್ಣವಾಗಿ ಉತ್ಪಾದಿಸುವಲ್ಲಿ, ಲಿನ್ ದಂಪತಿಗಳು ಪ್ರತಿ ವರ್ಷ 77,000 ಡಾಲರುಗಳಷ್ಟು ಹಣವನ್ನು ನಿರೀಕ್ಷಿಸಸಾಧ್ಯವಿತ್ತು. ಪ್ರಥಮ ಕೊಯ್ಲಿನ ಸಮಯವು ಹತ್ತಿರವಾದಂತೆ, ಲಿನ್ ದಂಪತಿಗಳು ಪ್ರಾಮುಖ್ಯವಾದ ನಿರ್ಣಯವೊಂದನ್ನು ಮಾಡಬೇಕಿತ್ತು. ಕ್ರೈಸ್ತರು, ಹೊಗೆಸೊಪ್ಪಿನ ಸೇವನೆ, ಅಮಲೌಷಧದ ದುರುಪಯೋಗ, ಮತ್ತು ಅಡಕೆಯನ್ನು ಜಗಿಯುವಂತಹ ಅಶುದ್ಧ ಅಭ್ಯಾಸಗಳ ಬಳಕೆ, ಇಲ್ಲವೆ ಪ್ರವರ್ಧನೆಯಿಂದ ದೂರವಿರುವ ಮೂಲಕ, ತಮ್ಮನ್ನು “ಶರೀರಾತ್ಮಗಳ ಕಲ್ಮಶ”ದಿಂದ ಶುದ್ಧಗೊಳಿಸಿಕೊಳ್ಳಬೇಕೆಂದು, ಅವರು ತಮ್ಮ ಬೈಬಲಿನ ಅಭ್ಯಾಸದಿಂದ ಕಲಿತಿದ್ದರು. (2 ಕೊರಿಂಥ 7:1) ಅವರು ಏನು ಮಾಡಲಿದ್ದರು?
ಪಾಪಪ್ರಜ್ಞೆಯುಳ್ಳ ಮನಸ್ಸಾಕ್ಷಿಯ ಒತ್ತಡದಿಂದ, ಶ್ರೀ. ಲಿನ್ ತಮ್ಮ ಅಭ್ಯಾಸವನ್ನು ನಿಲ್ಲಿಸಲು ನಿರ್ಧರಿಸಿದರು. ಈ ಮಧ್ಯೆ ಶ್ರೀಮತಿ ಲಿನ್, ಕೆಲವು ಬಲಿತ ಮರಗಳಿಂದ ತೆಗೆದ ಅಡಕೆಗಳ ಮಾರಾಟಮಾಡಿ, 3,000ಕ್ಕಿಂತಲೂ ಹೆಚ್ಚು ಡಾಲರುಗಳ ಲಾಭವನ್ನು ಗಳಿಸಿದರು. ಇದು, ಅವರು ತಮ್ಮ ಮರಗಳನ್ನು ನಾಶಮಾಡದೆ ಇಟ್ಟುಕೊಳ್ಳುವುದಾದರೆ ಬೇಗನೆ ಬರಲಿದ್ದ ಲಾಭದ ಪೂರ್ವಾನುಭವ ಆಗಿತ್ತಷ್ಟೇ. ಆದಾಗಲೂ, ಶ್ರೀ. ಲಿನ್ ಅವರ ಮನಸ್ಸಾಕ್ಷಿಯು ಅವರನ್ನು ಕಾಡಿಸುತ್ತ ಇತ್ತು.
ತನಗಾಗಿ ತನ್ನ ಅಡಕೆ ಮರಗಳನ್ನು ಕಡಿದುಹಾಕುವಂತೆ ಅವನು ಸ್ಥಳೀಯ ಸಾಕ್ಷಿಗಳ ಬಳಿ ಕೇಳಿಕೊಂಡ ದಿನದ ವರೆಗೆ, ಅವನು ಈ ವಿವಾದಾಂಶದೊಂದಿಗೆ ಹೆಣಗಾಡಿದನು. ಅದು, ಅವರು ಮಾಡಬೇಕಾದ ನಿರ್ಣಯವಾಗಿತ್ತೆಂದು ಸಾಕ್ಷಿಗಳು ವಿವರಿಸಿದರು; ಆದುದರಿಂದ, ಅವರು ‘ತಮ್ಮ ಸ್ವಂತ ಹೊರೆಯನ್ನು ಹೊತ್ತುಕೊಳ್ಳ’ಬೇಕಿತ್ತು ಮತ್ತು ತಾವೇ ಮರಗಳನ್ನು ಕಡಿದುಹಾಕಬೇಕಿತ್ತು. (ಗಲಾತ್ಯ 6:4, 5) 1 ಕೊರಿಂಥ 10:13ರಲ್ಲಿರುವ ವಾಗ್ದಾನವನ್ನು ಸ್ಮರಿಸಿಕೊಳ್ಳುವಂತೆ ಸಾಕ್ಷಿಗಳು ಅವರನ್ನು ಉತ್ತೇಜಿಸಿದರು. ಅದು ಹೇಳುವುದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಸಾಕ್ಷಿಗಳು ಹೀಗೆ ಹೇಳುತ್ತಾ ಅವರೊಂದಿಗೆ ತರ್ಕಿಸಿದರು ಸಹ: “ನಿಮಗಾಗಿ ನಾವು ನಿಮ್ಮ ಮರಗಳನ್ನು ಕಡಿದುಹಾಕುವುದಾದರೆ, ನೀವು ಅದಕ್ಕಾಗಿ ವಿಷಾದಪಟ್ಟು, ಆದ ನಷ್ಟಕ್ಕಾಗಿ ನಮ್ಮನ್ನು ದೂಷಿಸಬಹುದು.” ಸ್ವಲ್ಪ ಸಮಯದ ಅನಂತರ, ಶ್ರೀಮತಿ ಲಿನ್ ಸರಪಣಿ ಗರಗಸದ ಶಬ್ದವನ್ನು ಕೇಳಿ ಎಚ್ಚೆತ್ತರು. ಅವರ ಗಂಡ ಮತ್ತು ಮಕ್ಕಳು ಅಡಕೆ ಮರಗಳನ್ನು ಕಡಿದುಹಾಕುತ್ತಿದ್ದರು!
ಯೆಹೋವನು ತನ್ನ ವಾಗ್ದಾನಕ್ಕೆ ನಿಷ್ಠಾವಂತನಾಗಿದ್ದಾನೆಂದು ಶ್ರೀ. ಲಿನ್ ಕಂಡುಕೊಂಡರು. ಯೆಹೋವನ ಸ್ತುತಿಗಾರರಾಗುವಂತೆ ಅವರನ್ನು ಶಕ್ತಗೊಳಿಸುತ್ತಾ, ಶುದ್ಧವಾದ ಮನಸ್ಸಾಕ್ಷಿಯನ್ನು ಹೊಂದುವಂತೆ ಅನುಮತಿಸಿದ ಕೆಲಸವನ್ನು ಅವರು ಕಂಡುಕೊಂಡರು. ಅವರು 1996ರ ಎಪ್ರಿಲ್ ತಿಂಗಳಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸರ್ಕಿಟ್ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು.
ಹೌದು, ಶ್ರೀ. ಲಿನ್ ಕಾರ್ಯತಃ ‘ತಮ್ಮ ಬದುಕನ್ನೆಲ್ಲಾ ಮಾರಿ,’ ‘ಬಹು ಬೆಲೆಯುಳ್ಳ ಒಂದು ಮುತ್ತನ್ನು’ ಕೊಂಡುಕೊಂಡರು. ಈಗ ಅವರಿಗೆ, ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಪಡೆದಿರುವ ಮತ್ತು ಆತನ ರಾಜ್ಯಾಭಿರುಚಿಗಳಿಗಾಗಿ ದುಡಿಯುವ ಅಮೂಲ್ಯವಾದ ಸುಯೋಗವಿದೆ.