ವಾಚಕರಿಂದ ಪ್ರಶ್ನೆಗಳು
ಯೆಹೋವನ ಸಾಕ್ಷಿಗಳು ಪ್ರಾಮಾಣಿಕರಾಗಿರಲು ಪ್ರಯಾಸಪಟ್ಟು ಒಬ್ಬರ ಮೇಲೊಬ್ಬರು ಭರವಸೆಯನ್ನಿಡುವುದರಿಂದ, ಅವರ ಮಧ್ಯೆ ವ್ಯಾಪಾರ ವಹಿವಾಟುಗಳಿರುವಾಗ ಲಿಖಿತ ಕರಾರನ್ನು ಮಾಡುವುದು ಪ್ರಾಮುಖ್ಯವೆಂದು ಅವರು ಎಣಿಸುವುದೇಕೆ?
ಅವರು ಹಾಗೆ ಮಾಡುವುದು ಶಾಸ್ತ್ರೀಯವೂ, ಪ್ರಾಯೋಗಿಕವೂ, ಪ್ರೀತಿಪ್ರದವೂ ಆಗಿದೆ. ಅದು ಹೇಗೆ? ವ್ಯಾಪಾರ ಕರಾರುಗಳ ಆ ಅಂಶಗಳನ್ನು ಪರ್ಯಾಲೋಚಿಸೋಣ.
ತನ್ನ ಕರಾರಿನ ಜನರಾದ ಇಸ್ರಾಯೇಲ್ಯರೊಂದಿಗೆ ಮಾಡಿದ ದೇವರ ವ್ಯವಹಾರಗಳ ಲಿಖಿತ ದಾಖಲೆಯನ್ನು ಬೈಬಲು ಒದಗಿಸುತ್ತದೆ. ಅದರಲ್ಲಿ ಸತ್ಯಾರಾಧಕರನ್ನೊಳಗೊಂಡ ವ್ಯಾಪಾರ ವಹಿವಾಟುಗಳೂ ಸೇರಿವೆ. ಆದಿಕಾಂಡ 23ನೆಯ ಅಧ್ಯಾಯವು ನಾವು ಗಮನಿಸಬಹುದಾದ ಒಂದನ್ನು ಒಳಗೊಂಡಿದೆ. ತನ್ನ ಪ್ರಿಯ ಪತ್ನಿಯಾದ ಸಾರಳು ತೀರಿಕೊಂಡಾಗ, ಅಬ್ರಹಾಮನು ಒಂದು ಸಮಾಧಿ ಸ್ಥಳವನ್ನು ಪಡೆಯಬಯಸಿದನು. ಹೆಬ್ರೋನಿನ ಸಮೀಪ ಜೀವಿಸುತ್ತಿದ್ದ ಕಾನಾನ್ಯರೊಂದಿಗೆ ಅವನು ವ್ಯವಹರಿಸಲಾರಂಭಿಸಿದನು. ತಾನು ಬಯಸಿದ ಜಮೀನಿಗೆ ಅವನು ಒಂದು ಸ್ಪಷ್ಟವಾದ ಬೆಲೆಯನ್ನು ನೀಡಲು ಸಿದ್ಧನಾದನೆಂದು 7-9ನೆಯ ವಚನಗಳು ತೋರಿಸುತ್ತವೆ. ಈ ನೀಡಿಕೆ ಬಹಿರಂಗವಾಗಿ, ಪಟ್ಟಣದ ದ್ವಾರದಲ್ಲಿ ಇತರರಿಗೆ ಕೇಳಿಸುವಂತೆ ಮಾಡಲ್ಪಟ್ಟಿತೆಂದು 10ನೆಯ ವಚನ ರುಜುಪಡಿಸುತ್ತದೆ. ಅದರ ಧಣಿಯು ಆ ಜಮೀನನ್ನು ಅಬ್ರಹಾಮನಿಗೆ ಕೊಟ್ಟುಬಿಡಲು ಬಯಸಿದನೆಂದು 13ನೆಯ ವಚನ ತೋರಿಸುತ್ತದೆ, ಆದರೆ ಅದನ್ನು ಖರೀದಿಗೆ ಮಾತ್ರ ತಾನು ತೆಗೆದುಕೊಳ್ಳುವೆನೆಂದು ಅಬ್ರಹಾಮನು ಹೇಳಿದನು. ಮತ್ತು ಅದು ಕೊನೆಗೊಂಡಿದ್ದು ಹೀಗೆ ಎಂಬುದನ್ನು 17, 18 ಮತ್ತು 20ನೆಯ ವಚನಗಳು ವಿವರಿಸುತ್ತ, “ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ದೃಢವಾಯಿತು” ಎಂದು ಹೇಳುತ್ತವೆ.
ಆದರೆ, ಇಂತಹ ವಹಿವಾಟಿರುವ ಇಬ್ಬರು ಸತ್ಯಾರಾಧಕರಾಗಿರುವಲ್ಲಿ ವಿಷಯವು ಬೇರೆಯಾಗಿರುವುದೊ? ಯೆರೆಮೀಯ 32ನೆಯ ಅಧ್ಯಾಯವು ಒಂದು ಉತ್ತರವನ್ನು ಒದಗಿಸುತ್ತದೆ. ವಚನ 6ರಿಂದ, ಯೆರೆಮೀಯನು ತನ್ನ ಸೋದರ ಸಂಬಂಧಿಯಿಂದ ಹೊಲವನ್ನು ಖರೀದಿಸಲಿದ್ದನೆಂದು ನಾವು ನೋಡುತ್ತೇವೆ. ಒಂದು ನ್ಯಾಯವಾದ ಬೆಲೆಯು ಉಭಯಸಮ್ಮತವಾಯಿತೆಂದು 9ನೆಯ ವಚನವು ತೋರಿಸುತ್ತದೆ. ಈಗ ವಚನಗಳು 10-12ನ್ನು ಓದಿರಿ: “ಪತ್ರಕ್ಕೆ ರುಜುಹಾಕಿ ಮುಚ್ಚಿ [ಮುಚ್ಚಳಕ್ಕೆ] ಸಾಕ್ಷಿಗಳನ್ನು ಹಾಕಿಸಿ ತ್ರಾಸಿನಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು. ಆ ಮೇಲೆ ನಾನು [ಯೆರೆಮೀಯ] ಕ್ರಯಪತ್ರವನ್ನು, ಅಂದರೆ ಚಕ್ಕುಬಂದಿಷರತ್ತುಗಳಿಂದೊಡಗೂಡಿ ಮುಚ್ಚಿದ್ದ ಪತ್ರವನ್ನೂ ಮುಚ್ಚಳದ ಪತ್ರವನ್ನೂ ತೆಗೆದುಕೊಂಡು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮ ಕಾರಾಗೃಹದ ಅಂಗಳದಲ್ಲಿ ಕೂತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು.”
ಹೌದು, ಯೆರೆಮೀಯನು ಜೊತೆ ಆರಾಧಕನೊಂದಿಗೆ—ಸಂಬಂಧಿಯೊಡನೆಯೂ—ವ್ಯವಹರಿಸುತ್ತಿದ್ದರೂ, ಕೆಲವು ಸಮಂಜಸವಾದ ಶಾಸನಬದ್ಧ ಕ್ರಮಗಳನ್ನು ಕೈಕೊಂಡನು. ಎರಡು ಲಿಖಿತ ದಾಖಲೆಗಳು ಮಾಡಲ್ಪಟ್ಟವು. ಒಂದು ದಾಖಲೆಯು ಸುಲಭವಾಗಿ ವಿಚಾರಿಸಲು ಸಾಧ್ಯವಾಗುವಂತೆ ತೆರೆದಿಡಲ್ಪಟ್ಟಿತು. ಎರಡನೆಯದ್ದು, ತೆರೆದಿರುವ ಪತ್ರದ ನಿಷ್ಕೃಷ್ಟತೆಯು ಎಂದಾದರೂ ಸಂಶಯಕ್ಕೊಳಗಾಗುವುದಾದರೆ ಬೆಂಬಲಿಸುವ ರುಜುವಾತನ್ನು ಒದಗಿಸುವರೆ ಮುದ್ರೆಯೊತ್ತಿ ಇಡಲ್ಪಟ್ಟಿತು. 13ನೆಯ ವಚನವು ಹೇಳುವಂತೆ, ಈ ವಹಿವಾಟೆಲ್ಲ ನಡೆದದ್ದು “ಅವರೆಲ್ಲರ ಮುಂದೆ.” ಹೀಗೆ ಇದೊಂದು ಬಹಿರಂಗವಾದ, ಸಾಕ್ಷಿಗಳ ಮುಂದೆ ನಡೆದ, ಶಾಸನಬದ್ಧ ವ್ಯಾಪಾರ ವಹಿವಾಟಾಗಿತ್ತು. ಹಾಗಾದರೆ, ಸತ್ಯಾರಾಧಕರು ಇಂತಹ ದೃಢೀಕರಿಸಿದ ಮತ್ತು ಪ್ರಮಾಣೀಕೃತ ವಿಧದಲ್ಲಿ ವಿಷಯಗಳನ್ನು ಮಾಡುವುದು ಶಾಸ್ತ್ರೀಯ ಪೂರ್ವನಿದರ್ಶನವಿರುವ ಕಾರಣದಿಂದಲೇ ಎಂಬುದು ಸ್ಪಷ್ಟ.
ಇದು ಪ್ರಾಯೋಗಿಕವೂ ಆಗಿದೆ. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ಮಾತು ಎಷ್ಟು ಖರೆಯೆಂಬುದು ನಮಗೆ ಗೊತ್ತು. (ಪ್ರಸಂಗಿ 9:11) ಇದರಲ್ಲಿ ಅಚಲ ಶ್ರದ್ಧೆಯುಳ್ಳ ಮತ್ತು ನಂಬಿಗಸ್ತ ಕ್ರೈಸ್ತರೂ ಸೇರಿದ್ದಾರೆ. ಯಾಕೋಬ 4:13, 14, ಅದನ್ನು ಈ ರೀತಿಯಲ್ಲಿ ಹೇಳುತ್ತದೆ: “ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು.” ಆದಕಾರಣ, ಖರೀದಿಸುವ, ಸಮ್ಮತಿಸಿರುವ ಒಂದು ಕೆಲಸವನ್ನೊ ಸೇವೆಯನ್ನೊ ಮಾಡುವ ಅಥವಾ ಯಾರಿಗಾದರೂ ಒಂದು ವಸ್ತುವನ್ನು ತಯಾರಿಸುವಂತಹ ಯೋಜನೆಯೊಂದನ್ನು ನಾವು ಆರಂಭಿಸಬಹುದು. ಆದರೆ ನಾಳೆ ಅಥವಾ ಮುಂದಿನ ತಿಂಗಳು ಅಥವಾ ಮುಂದಿನ ವರ್ಷ ಏನಾದೀತು? ನಾವೊ ಆ ಕರಾರಿನಲ್ಲಿರುವ ಬೇರೆ ಪಕ್ಷದವರೊ, ಒಂದು ಅಪಘಾತಕ್ಕೆ ಸಿಕ್ಕಿಕೊಳ್ಳುವುದಾದರೆ ಆಗೇನು? ಆ ಒಪ್ಪಂದದ ವಾಗ್ದಾನದಂತೆ ಮಾಡುವುದನ್ನು ಅದು ಅಸಾಧ್ಯವಾಗಿಸಬಹುದು. ನಾವು ಆ ಕೆಲಸವನ್ನೊ ಸೇವೆಯನ್ನೊ ಮಾಡಸಾಧ್ಯವಿಲ್ಲದಿರುವುದಾದರೆ ಅಥವಾ ಆ ವ್ಯಕ್ತಿಯು ಹಣ ತೆರುವುದನ್ನೊ ಒಪ್ಪಂದದಲ್ಲಿ ತನಗಿರುವ ಭಾಗವನ್ನು ಮಾಡುವುದನ್ನೊ ಅಸಾಧ್ಯವೆಂದು ಕಂಡುಕೊಳ್ಳುವುದಾದರೆ, ಆಗೇನು? ಲಿಖಿತ ಒಪ್ಪಂದವಿಲ್ಲದಿದ್ದರೆ ನಿಜ ಸಮಸ್ಯೆಗಳು—ಒಂದು ಸರಳವಾದ ಲಿಖಿತ ಕರಾರಿರುತ್ತಿದ್ದಲ್ಲಿ ಪರಿಹರಿಸಸಾಧ್ಯವಿರುತ್ತಿದ್ದ ಅಥವಾ ತಪ್ಪಿಸಸಾಧ್ಯವಿರುತ್ತಿದ್ದ ಸಮಸ್ಯೆಗಳು—ಎದ್ದುಬರಸಾಧ್ಯವಿದೆ.
ಅಲ್ಲದೆ, ನಮ್ಮ ಜೀವದ ಅನೇಕ ಅಂಶಗಳ ಅನಿಶ್ಚಿತ ಪ್ರಕೃತಿಯು, ನಮ್ಮ (ಅಥವಾ ಅವನ) ವ್ಯಾಪಾರ ವಿಷಯಗಳನ್ನು ಇನ್ನೊಬ್ಬನು ವಹಿಸಿಕೊಳ್ಳುವುದನ್ನೂ ಅರ್ಥೈಸಬಹುದೆಂಬುದನ್ನು ನಾವು ಮರೆಯಬಾರದು. ಯಾಕೋಬನು 14ನೆಯ ವಚನದಲ್ಲಿ, “ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ” ಎಂದು ಕೂಡಿಸಿ ಹೇಳುತ್ತಾನೆ. ನಾವು ಅನಿರೀಕ್ಷಿತವಾಗಿ ಸಾಯಬಹುದೆನ್ನುವುದು ವಾಸ್ತವಿಕ. ಒಂದು ಲಿಖಿತ ಒಪ್ಪಂದ, ಒಂದು ಕರಾರು, ವಾಸ್ತವವಾಗಿ ನಮ್ಮಲ್ಲಿ ಯಾವ ಪಕ್ಷಕ್ಕಾದರೂ ಅನಿರೀಕ್ಷಿತವಾಗಿ ಏನಾದರೂ ಸಂಭವಿಸುವಲ್ಲಿ, ಇತರರು ವಿಷಯಗಳನ್ನು ನಿರ್ವಹಿಸುತ್ತ ಮಂದುವರಿಯುವಂತೆ ಅನುಮತಿಸಬಲ್ಲದು.
ಒಂದು ಅರ್ಥದಲ್ಲಿ, ಇದು ಮೂರನೆಯ ಅಂಶಕ್ಕೆ, ಲಿಖಿತ ಕರಾರುಗಳು ಪ್ರೀತಿಪ್ರದವೆಂಬ ಅಂಶಕ್ಕೆ ನಡೆಸುತ್ತದೆ. ಯಾವುದೇ ಒಂದು ಪಕ್ಷವು ಸಾಯುವಲ್ಲಿ ಅಥವಾ ಅದಕ್ಕೆ ಅನರ್ಹಗೊಳಿಸುವ ಅಪಘಾತವಾಗುವಲ್ಲಿ, ಒಬ್ಬ ಕ್ರೈಸ್ತನು ತನ್ನ ಅವಶ್ಯ ಕರ್ತವ್ಯಗಳನ್ನು ಅಥವಾ ಹಣಕಾಸಿನ ನಿರೀಕ್ಷಣೆಗಳನ್ನು ತೋರಿಸುವ ಲಿಖಿತ ದಾಖಲೆಗಳನ್ನು ಒದಗಿಸಿರುವುದು ಪ್ರೀತಿಪ್ರದವೆಂಬುದು ನಿಶ್ಚಯ. ಇದು ಅಪನಂಬಿಕೆಯನ್ನು ಪ್ರತಿಬಿಂಬಿಸುವ ಬದಲು, ಒಬ್ಬನ ಅವಶ್ಯ ಕರ್ತವ್ಯಗಳು ಯಾವುವು ಅಥವಾ ಅವನು ಎಷ್ಟನ್ನು ಪಡೆಯುವ ಸ್ಥಾನದಲ್ಲಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ನಮೂದಿಸಿರುವ ಒಂದು ಲಿಖಿತ ಕರಾರನ್ನು ಮಾಡುವುದು ನಾವು ವ್ಯವಹರಿಸುವ ಸಹೋದರನ ಕಡೆಗೆ ಪ್ರೀತಿಯನ್ನು ತೋರಿಸುತ್ತದೆ. ಈ ಪ್ರೀತಿಪ್ರದ ಹೆಜ್ಜೆಯು, ಅಪೂರ್ಣ ಪಕ್ಷಗಳಲ್ಲಿ ಒಂದು ಪಕ್ಷವು ಕೆಲವು ವಿವರಗಳನ್ನು ಅಥವಾ ಜವಾಬ್ದಾರಿಗಳನ್ನು ಮರೆತುಬಿಡುವಲ್ಲಿ ಎದ್ದು ಬರುವ ಕೋಪಕಾರಣಗಳನ್ನು ಕಡಮೆಮಾಡುವುದು. ಮತ್ತು ಅಪೂರ್ಣತೆಯಿಲ್ಲದ, ಮರೆಯದ, ಅಥವಾ ವಿವರಗಳನ್ನು ಮತ್ತು ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳದವರು ನಮ್ಮಲ್ಲಿ ಯಾರಿದ್ದಾರೆ?—ಮತ್ತಾಯ 16:5.
ಲಿಖಿತ ವ್ಯಾಪಾರ ಒಪ್ಪಂದಗಳನ್ನು ಮಾಡುವುದರಲ್ಲಿ, ನಮ್ಮ ಸಹೋದರನ ಕಡೆಗೆ, ನಮ್ಮ ಕುಟುಂಬಕ್ಕೆ ಮತ್ತು ಸಾಮಾನ್ಯವಾಗಿ ಸಭೆಗೆ ಪ್ರೀತಿಯನ್ನು ಪ್ರತಿಬಿಂಬಿಸುವ ಇತರ ವಿಧಗಳಿವೆ. ಆದರೆ ಪ್ರೀತಿಪ್ರದವಾಗಿರುವುದು ಮಾತ್ರವಲ್ಲ, ಸಾಕಷ್ಟು ವಿವರವಾಗಿರುವ ಇಂತಹ ಲಿಖಿತ ದಾಖಲೆಗಳು ಪ್ರಾಯೋಗಿಕವೂ ಶಾಸ್ತ್ರೀಯವೂ ಆಗಿವೆ ಎಂಬುದು ಸ್ಪಷ್ಟವಾಗಿರಬೇಕು.