ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು”
ಸಿರಿಯದ ಪರಾಕ್ರಮಿ ಸೇನಾಪತಿಯಾದ ನಾಮಾನನಿಗೆ ಕುಷ್ಠ ರೋಗವಿದೆ. ಅದಕ್ಕೆ ಚಿಕಿತ್ಸೆ ನೀಡದೆ ಬಿಡುವಲ್ಲಿ, ಈ ಅಸಹ್ಯಕರ ರೋಗವು ವಿಕಾರಗೊಳಿಸುವಿಕೆಯನ್ನು ಹಾಗೂ ಮರಣವನ್ನು ಉಂಟುಮಾಡಸಾಧ್ಯವಿದೆ. ನಾಮಾನನು ಏನು ಮಾಡಬೇಕಾಗಿದೆ? ನಾಮಾನನ ಮನೆವಾರ್ತೆಯವರಲ್ಲಿ, ‘ಇಸ್ರಾಯೇಲ್ಯರ ಪ್ರಾಂತದಿಂದ ಹಿಡಿದುಕೊಂಡು ಬಂದ’ ಒಬ್ಬ ಚಿಕ್ಕ ಹುಡುಗಿಯಿದ್ದಾಳೆ. ಅವಳು ಧೈರ್ಯದಿಂದ ಮಾತಾಡಿ, ನಾಮಾನನನ್ನು ವಾಸಿಮಾಡಸಾಧ್ಯವಿರುವ ಒಬ್ಬನೋಪಾದಿ ಪ್ರವಾದಿ ಎಲೀಷನನ್ನು ಅವಳು ಗುರುತಿಸುತ್ತಾಳೆ.—2 ಅರಸುಗಳು 5:1-3.
ಅವಳ ಧೈರ್ಯಭರಿತ ನಿಲುವಿನ ಕಾರಣದಿಂದ, ನಾಮಾನನು ಎಲೀಷನನ್ನು ಹುಡುಕಿಕೊಂಡು ಹೋಗಿ, ಅವನಿಂದ ವಾಸಿಯಾಗುತ್ತಾನೆ. ಇದಲ್ಲದೆ, ನಾಮಾನನು ಯೆಹೋವನ ಒಬ್ಬ ಆರಾಧಕನಾಗಿ ಪರಿಣಮಿಸುತ್ತಾನೆ! ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಈ ಅನುಭವವು, ಸಾ.ಶ.ಪೂ. ಹತ್ತನೆಯ ಶತಮಾನದಲ್ಲಿ ಸಂಭವಿಸಿತು. (2 ಅರಸುಗಳು 5:4-15) ಇಂದು, ರಾಜ್ಯಾಭಿರುಚಿಗಳ ಪರವಾಗಿ ಮಾತಾಡುವುದರಲ್ಲಿ ಅನೇಕ ಯುವ ಜನರು ತದ್ರೀತಿಯ ಧೈರ್ಯವನ್ನು ತೋರಿಸುತ್ತಾರೆ. ಮೋಸಾಂಬೀಕ್ನಿಂದ ಬಂದ ಈ ಕೆಳಗಿನ ಅನುಭವವು ಇದನ್ನು ದೃಢೀಕರಿಸುತ್ತದೆ.
ಆರು ವರ್ಷ ಪ್ರಾಯದ ನೂನೂ ಸುವಾರ್ತೆಯ ಒಬ್ಬ ಅಸ್ನಾತ ಪ್ರಚಾರಕನಾಗಿದ್ದಾನೆ. ಒಬ್ಬ ಅಸ್ನಾತ ಪ್ರಚಾರಕನಾಗುವ ಮೊದಲೇ, ನೂನೂ ತನ್ನ ನೆರೆಹೊರೆಯ ಮಕ್ಕಳನ್ನು ಒಟ್ಟುಗೂಡಿಸಿ, ಒಂದು ಪ್ರಾರ್ಥನೆಯನ್ನು ಮಾಡಿ, ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬ ಪ್ರಕಾಶನವನ್ನು ಉಪಯೋಗಿಸುತ್ತಾ ಅವರಿಗೆ ಬೈಬಲನ್ನು ಕಲಿಸುತ್ತಿದ್ದನು.
ಅನೇಕ ಬಾರಿ ನೂನೂ ಶನಿವಾರ ಬೆಳಗ್ಗೆ ಬೇಗನೆ ಎದ್ದು, “ಇಂದು ನಾವು ಕ್ಷೇತ್ರ ಸೇವೆಗೆ ಹೋಗಬೇಕು” ಎಂದು ತನ್ನ ಕುಟುಂಬಕ್ಕೆ ಜ್ಞಾಪಕಹುಟ್ಟಿಸುತ್ತಾನೆ. ಶುಶ್ರೂಷೆಗಾಗಿರುವ ಅವನ ಹುರುಪು ಇನ್ನಿತರ ವಿಧಗಳಲ್ಲಿಯೂ ಕಂಡುಬರುತ್ತದೆ. ಮಾಪೂಟೊದಲ್ಲಿನ ಬೀದಿ ಸೇವೆಯಲ್ಲಿ ತನ್ನ ಹೆತ್ತವರೊಂದಿಗೆ ಜೊತೆಗೂಡಿ ಹೋಗುವಾಗ, ನೂನೂ ಅನೇಕವೇಳೆ ತಾನಾಗಿಯೇ ಜನರನ್ನು ಸಮೀಪಿಸುತ್ತಾನೆ. ಅಂತಹ ಒಂದು ಸಂದರ್ಭದಲ್ಲಿ, ಒಬ್ಬ ವ್ಯಾಪಾರಸ್ಥನು ಅವನ ಬಳಿಗೆ ಬಂದು ಕೇಳಿದ್ದು: “ನೀನೇಕೆ ಈ ಪತ್ರಿಕೆಗಳನ್ನು ಮಾರುತ್ತಿದ್ದೀ?” ನೂನೂ ಹೇಳಿದ್ದು: “ನಾನು ಈ ಪತ್ರಿಕೆಗಳನ್ನು ಮಾರುತ್ತಿಲ್ಲ, ಆದರೆ ಸಾರುವ ಕಾರ್ಯಕ್ಕೆ ಧನಸಹಾಯ ನೀಡಲಿಕ್ಕಾಗಿ ನಾನು ಕಾಣಿಕೆಗಳನ್ನು ಸ್ವೀಕರಿಸುತ್ತೇನೆ ಅಷ್ಟೆ.” ವ್ಯಾಪಾರಸ್ಥನು ಪ್ರತಿಕ್ರಿಯಿಸಿದ್ದು: “ನನಗೆ ಆಸಕ್ತಿಯಿಲ್ಲವಾದರೂ, ನಿನ್ನ ಮನೋಭಾವ ಹಾಗೂ ಸಾಮರ್ಥ್ಯದಿಂದ ನಾನು ಪ್ರಭಾವಿತನಾಗಿದ್ದೇನೆ. ಈ ಕೆಲಸಕ್ಕಾಗಿ ಕಾಣಿಕೆಯನ್ನು ನೀಡಲು ನಾನು ಬಯಸುತ್ತೇನೆ.”
ಇನ್ನೊಂದು ಸಂದರ್ಭದಲ್ಲಿ, ನೂನೂ ಬೀದಿಯಲ್ಲಿ ಒಬ್ಬ ವ್ಯಕ್ತಿಯನ್ನು ಸಮೀಪಿಸಿ, ನಿಜ ಶಾಂತಿ ಮತ್ತು ಭದ್ರತೆ—ನೀವು ಅದನ್ನು ಹೇಗೆ ಕಂಡುಕೊಳ್ಳಬಲ್ಲಿರಿ? (ಇಂಗ್ಲಿಷ್) ಎಂಬ ಪುಸ್ತಕವನ್ನು ಅವನಿಗೆ ಕೊಟ್ಟನು. “ಅಲ್ಲಿ ಕಾಣುತ್ತಿರುವ ಶಾಲೆಗೆ ನೀನು ಹೋಗುವುದಿಲ್ಲವೊ?” ಎಂದು ಆ ವ್ಯಕ್ತಿಯು ಕೇಳಿದನು. “ಹೋಗುತ್ತೇನೆ” ಎಂದು ನೂನೂ ಉತ್ತರಿಸಿದನು, “ನಾನು ಆ ಶಾಲೆಗೆ ಹೋಗುತ್ತೇನೆ, ಆದರೆ ಇಂದು ನಾನು ಈ ಪುಸ್ತಕದಿಂದ ಒಂದು ಪ್ರಮುಖವಾದ ಸಂದೇಶವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಈ ಪುಸ್ತಕದಲ್ಲಿರುವ ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ದೇವರು ತರಲಿರುವ ಹೊಸ ಲೋಕದಲ್ಲಿ ನೀವು ಜೀವಿಸಸಾಧ್ಯವಿದೆ ಎಂಬುದನ್ನು ಇದು ತೋರಿಸುತ್ತದೆ.” ಅವನು ಯಾರೊಂದಿಗೆ ಮಾತಾಡಿದನೋ ಅವರು ಅವನ ಶಾಲೆಯ ಶಿಕ್ಷಕರಾಗಿದ್ದರೆಂಬುದನ್ನು ನೂನೂ ಗ್ರಹಿಸಲಿಲ್ಲ. ಆ ಶಿಕ್ಷಕರು ಆ ಪುಸ್ತಕವನ್ನು ಸ್ವೀಕರಿಸಿದರಲ್ಲದೆ, ಈಗ ಅವರು ನೂನೂವಿನಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸಹ ಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ.
ಅವನು ಸಾರುವ ಕೆಲಸದಲ್ಲಿ ಒಳಗೂಡಲು ಏಕೆ ಇಷ್ಟಪಡುತ್ತಾನೆಂದು ನೂನೂವನ್ನು ಕೇಳಿದಾಗ, ಅವನು ಹೇಳುವುದು: “ನಾನು ಜನರೊಂದಿಗೆ ಮಾತಾಡಲು ಮತ್ತು ಯೆಹೋವನ ಕುರಿತು ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ಕುರಿತು ಅವರಿಗೆ ಕಲಿಸಲು ಬಯಸುತ್ತೇನೆ.” ಅವನು ಕೂಡಿಸುವುದು: “ಮತ್ತು ಜನರು ಕಿವಿಗೊಡಲು ಬಯಸದಿದ್ದಲ್ಲಿ, ಬೇಸರಗೊಳ್ಳಲು ಯಾವುದೇ ಕಾರಣವಿಲ್ಲ.”
ಲೋಕವ್ಯಾಪಕವಾಗಿ, ನೂನೂವಿನಂತೆ ಸಾವಿರಾರು ಯುವ ಜನರು, ದೇವರ ರಾಜ್ಯದ ಕುರಿತು ಕಲಿಸುವುದರಲ್ಲಿ ಹಾಗೂ ಸಾರುವುದರಲ್ಲಿ “ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳು”ತ್ತಿದ್ದಾರೆ. (ಕೀರ್ತನೆ 110:3) ಆದರೆ ಇದು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಯೆಹೋವನ ಕುರಿತಾಗಿ ಶೈಶವದಿಂದಲೇ ತಮ್ಮ ಮಕ್ಕಳಿಗೆ ಕಲಿಸುವ, ಶುಶ್ರೂಷೆಯಲ್ಲಿ ಒಂದು ಒಳ್ಳೆಯ ಉದಾಹರಣೆಯನ್ನು ಇಡುವ, ಹಾಗೂ ಹುರುಪಿನಿಂದ ರಾಜ್ಯಾಭಿರುಚಿಗಳನ್ನು ಬೆನ್ನಟ್ಟುವ ಹೆತ್ತವರಿಗೆ ಸಮೃದ್ಧವಾದ ಪ್ರತಿಫಲವು ದೊರಕುವುದು.