ನಮ್ಮ ಭವಿಷ್ಯತ್ತು ಮುಂದಾಗಿಯೇ ಬರೆದಿಡಲ್ಪಟ್ಟಿದೆಯೊ?
ಕ್ರೈಸ್ತ, ಮುಸಲ್ಮಾನ, ಯೆಹೂದಿ, ಹಿಂದೂ ಅಥವಾ ಬೇರೆ ಯಾವುದೇ ಧರ್ಮದ ವಿಶ್ವಾಸಿ—ಎಲ್ಲ ನಂಬಿಕೆಗಳ ಜನರು ದುರಂತವನ್ನು ಅನುಭವಿಸುತ್ತಾರೆ ಮತ್ತು ಅದಕ್ಕಾಗಿ ದುಃಖಪಡುತ್ತಾರೆ.
ಉದಾಹರಣೆಗಾಗಿ, 1997ರ ಡಿಸೆಂಬರ್ 6ರಂದು, ಸೈಬೀರಿಯದ ಇರ್ಕುಟ್ಸ್ಕ್ ಎಂಬ ನಗರದಲ್ಲಿ ಒಂದು ಘೋರ ಅನಾಹುತವು ಸಂಭವಿಸಿತು. ಬೃಹತ್ಗಾತ್ರದ AN-124 ಸಾರಿಗೆ ವಿಮಾನವೊಂದು ಆಗ ತಾನೇ ಹೊರಟಿತ್ತು. ಆಗಲೇ ಅದರ ಇಂಜಿನುಗಳಲ್ಲಿ ಎರಡು ಕೈಕೊಟ್ಟವು. ಪೂರ್ತಿಯಾಗಿ ಇಂಧನವು ತುಂಬಿಸಲ್ಪಟ್ಟಿದ್ದ ಆ ವಿಮಾನವು, ಒಂದು ನಿವಾಸಿ ಕಾಂಪ್ಲೆಕ್ಸ್ನ ಮೇಲೆ ಬಿತ್ತು. ಅನೇಕ ಅಪಾರ್ಟ್ಮೆಂಟ್ ಮನೆಗಳನ್ನು ಜ್ವಾಲೆಗಳು ಮುತ್ತಿಕೊಂಡು, ಮುಗ್ಧ ಮಕ್ಕಳನ್ನು ಸೇರಿಸಿ, ಅನೇಕ ನಿಸ್ಸಹಾಯಕ ನಿವಾಸಿಗಳಿಗೆ ಮರಣ ಮತ್ತು ಗಾಯವನ್ನು ತಂದೊಡ್ಡಿತು.
ಆ ಅಪಘಾತವು ನಡೆದ ಸೈಬೀರಿಯದ ಕ್ಷೇತ್ರದಲ್ಲಿ, ವಿಭಿನ್ನ ಧಾರ್ಮಿಕ ದೃಷ್ಟಿಕೋನಗಳಿರುವ ಜನರಿದ್ದಿರಬಹುದು. ಕೆಲವರು ಕ್ರೈಸ್ತತ್ವದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಬಹುದಾದರೂ ಆ ದುರಂತವು ಹಣೆಬರಹದ ಫಲಿತಾಂಶವೆಂದು ಅವರು ಇನ್ನೂ ಯೋಚಿಸುತ್ತಿರಬಹುದು. ‘ಅದು ದೇವರ ಇಚ್ಛೆಯಾಗಿತ್ತು, ಮತ್ತು ಕೊಲ್ಲಲ್ಪಟ್ಟವರು ಈ ರೀತಿಯಲ್ಲಿ ಸಾಯದಿರುತ್ತಿದ್ದಲ್ಲಿ, ಅವರು ಬೇರೊಂದು ರೀತಿಯಲ್ಲಿ ಸಾಯುತ್ತಿದ್ದರು—ಅದು ಅವರ ಹಣೆಬರಹವಾಗಿತ್ತು’ ಎಂದು ಅವರು ಮತ್ತು ಇತರರು ಭಾವಿಸಬಹುದು.
ಅಂತಹ ಆಲೋಚನೆಯು, ಬಾಯಿಮಾತಿನ ಮೂಲಕ ತಿಳಿಸಲ್ಪಡಲಿ ಅಥವಾ ತಿಳಿಸಲ್ಪಡದಿರಲಿ, ಭೂಗೋಲದ ಸುತ್ತಲೂ ಅನೇಕ ಧರ್ಮಗಳಲ್ಲಿ ಕಂಡುಬರುವ ಒಂದು ವಿಚಾರ—ಹಣೆಬರಹವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಭವಿಷ್ಯತ್ತು, ನಮ್ಮ ಜನನ ದಿನದಿಂದ ಹಿಡಿದು, ನಮ್ಮ ಮರಣದ ದಿನದ ವರೆಗೆ, ಹೇಗೊ ಮುಂಚಿತವಾಗಿ ಬರೆದಿಡಲ್ಪಟ್ಟಿದೆಯೆಂದು ಅನೇಕ ಜನರು ನಂಬುತ್ತಾರೆ.
ಹಣೆಬರಹದಲ್ಲಿನ ನಂಬಿಕೆಯು ವಿವಿಧ ರೂಪಗಳಲ್ಲಿ ಇರುತ್ತದೆ. ಆದಕಾರಣ ಎಲ್ಲವನ್ನೂ ಆವರಿಸುವ ಒಂದು ಅರ್ಥನಿರೂಪಣೆಯನ್ನು ಮಾಡುವುದು ಕಷ್ಟಕರ. ಸಂಭವಿಸುವಂತಹದ್ದೆಲ್ಲವೂ—ಪ್ರತಿಯೊಂದು ಕೃತ್ಯ, ಪ್ರತಿಯೊಂದು ಘಟನೆಯು—ಅದು ಒಳ್ಳೆಯದಾಗಿರಲಿ ಕೆಟ್ಟದ್ದಾಗಿರಲಿ, ಅನಿವಾರ್ಯವಾಗಿದೆಯೆಂಬ ವಿಚಾರವನ್ನು ಹಣೆಬರಹವು ಮೂಲತಃ ಕೊಡುತ್ತದೆ; ಅದು ಸಂಭವಿಸಲೇಬೇಕು ಯಾಕಂದರೆ, ಮನುಷ್ಯನ ನಿಯಂತ್ರಣಕ್ಕೆ ನಿಲುಕದ ಒಂದು ಉಚ್ಚ ಶಕ್ತಿಯಿಂದ ಅದು ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟಿದೆ. ಅಂತಹ ಒಂದು ಕಲ್ಪನಾ ವಿಚಾರವನ್ನು, ಜ್ಯೋತಿಶ್ಶಾಸ್ತ್ರದಲ್ಲಿ, ಹಿಂದೂಮತ ಮತ್ತು ಬೌದ್ಧಮತದ ಕರ್ಮ, ಹಾಗೂ ಕ್ರೈಸ್ತಪ್ರಪಂಚದ ಪೂರ್ವಾದೃಷ್ಟದ ಬೋಧನೆಯಲ್ಲಿ ಕಂಡುಕೊಳ್ಳಸಾಧ್ಯವಿದೆ. ಒಂದು ಲಿಖಿತ ದಾಖಲೆಯ ಮೂಲಕ ದೇವತೆಗಳು ಹಣೆಬರಹ ಮತ್ತು ಭವಿಷ್ಯತ್ತನ್ನು ನಿಯಂತ್ರಿಸಿದರೆಂದು, ಹಿಂದೆ ಪುರಾತನ ಬಬಿಲೋನ್ಯದಲ್ಲಿದ್ದ ಮನುಷ್ಯರು ನಂಬಿದರು. ನಂಬಿಕೆಗನುಸಾರ, ಈ “ಅಂತ್ಯಸ್ಥಿತಿಯ ಫಲಕಗಳನ್ನು” ನಿಯಂತ್ರಿಸಿದ ಯಾವುದೇ ದೇವತೆಯು, ಮನುಷ್ಯರ, ರಾಜ್ಯಗಳ ಮತ್ತು ಸ್ವತಃ ದೇವತೆಗಳ ಹಣೆಬರಹಗಳನ್ನು ನಿರ್ಣಯಿಸಸಾಧ್ಯವಿತ್ತು.
ದೈವಸಂಕಲ್ಪಕ್ಕನುಸಾರ ಮಾನವರು ಹುಟ್ಟುವ ಮುಂಚೆಯೇ, ಅವರ ಜೀವನಾಯುಷ್ಯವನ್ನು ಸೇರಿಸಿ, ಅವರು ಗಂಡಾಗಿರುವರೊ ಹೆಣ್ಣಾಗಿರುವರೊ, ಧನಿಕರಾಗಿರುವರೊ ಬಡವರಾಗಿರುವರೊ, ಸಂಕಷ್ಟಪಡುವರೊ ಸಂತೋಷಪಡುವರೊ ಎಂಬಂತಹ, ಜನರಿಗೆ ಸಂಭವಿಸುವಂತಹ ವಿಷಯಗಳನ್ನೆಲ್ಲಾ ದೇವರು ನಿರ್ಣಯಿಸುತ್ತಾನೆಂದು ಅನೇಕ ವಿಶ್ವಾಸಿಗಳು ನಂಬುತ್ತಾರೆ. ಒಂದು ಘಟನೆಯು ಸಂಭವಿಸುವ ಮುಂಚೆ ಇದೆಲ್ಲವೂ ದೇವರ ಮನಸ್ಸಿನಲ್ಲಿರುತ್ತದೆ ಅಥವಾ ಒಂದು ಪುಸ್ತಕದಲ್ಲಿ ಬರೆಯಲ್ಪಟ್ಟಿರುತ್ತದೆಂದು ಹೇಳಲಾಗುತ್ತದೆ. ಹೀಗಿರುವುದರಿಂದ, ವಿಪತ್ತು ಬಡಿಯುವಾಗ, “ಮೆಕ್ಟೂಬ್”—ಅದು ಬರೆಯಲ್ಪಟ್ಟಿದೆ—ಎಂದು ಒಬ್ಬ ವಿಶ್ವಾಸಿ ಹೇಳುವುದು ಅಸಾಮಾನ್ಯವೇನಲ್ಲ! ದೇವರು ಎಲ್ಲವನ್ನೂ ಮುಂಚೆಯೇ ಬಲ್ಲವನಾಗಿರುವುದರಿಂದ, ತನಗೆ ಯಾರು ವಿಧೇಯರಾಗುವರು ಮತ್ತು ಯಾರು ಅವಿಧೇಯರಾಗುವರು ಎಂಬುದನ್ನು ಆತನು ನಿರ್ಧರಿಸುತ್ತಾನೆಂದು ತರ್ಕಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಜನಿಸುವ ಮುಂಚೆಯೇ, ಅವನು ಪರದೈಸಿನಲ್ಲಿ ಅನಂತ ಸುಖದ ಅಂತ್ಯಫಲವನ್ನು ಪಡೆಯುವನೋ ಅಥವಾ ನಿತ್ಯ ದಂಡನೆಯನ್ನು ಪಡೆಯುವನೊ ಎಂಬುದನ್ನು ದೇವರು ಈಗಾಗಲೇ ನಿರ್ಧರಿಸಿದ್ದಾನೆಂದು ಅನೇಕ ಅನುಯಾಯಿಗಳು ನಂಬುತ್ತಾರೆ.
ಇದು ಬಹುಮಟ್ಟಿಗೆ ಕ್ರೈಸ್ತಪ್ರಪಂಚದ ಕೆಲವು ಚರ್ಚುಗಳಲ್ಲಿ ಕಲಿಸಲ್ಪಟ್ಟಿರುವ ಪೂರ್ವಾದೃಷ್ಟದ ಬೋಧನೆಯಂತೆಯೇ ಧ್ವನಿಸುತ್ತದೆಂದು ನಿಮಗನಿಸಬಹುದು. ಪೂರ್ವಾದೃಷ್ಟದ ಅಗ್ರಗಣ್ಯ ಪ್ರೊಟೆಸ್ಟಂಟ್ ಪ್ರತಿಪಾದಕನು, 16ನೆಯ ಶತಮಾನದ ಫ್ರೆಂಚ್ ಸುಧಾರಕ ಜಾನ್ ಕ್ಯಾಲ್ವಿನ್ ಆಗಿದ್ದನು. ಅವನು ಪೂರ್ವಾದೃಷ್ಟವನ್ನು ಹೀಗೆ ನಿರೂಪಿಸಿದನು: “ಪೂರ್ವಾದೃಷ್ಟವು ದೇವರ ಅನಂತ ಕಟ್ಟಳೆಯಾಗಿದೆ. ಅದರ ಮೂಲಕ ಪ್ರತಿಯೊಬ್ಬ ಮನುಷ್ಯನೊಂದಿಗೆ ತಾನು ಏನು ಮಾಡಬಯಸುತ್ತಾನೊ ಅದನ್ನು ಆತನು ನಿರ್ಧರಿಸಿದ್ದಾನೆ. ಎಲ್ಲರೂ ಒಂದೇ ಪರಿಸ್ಥಿತಿಯಲ್ಲಿ ಸೃಷ್ಟಿಸಲ್ಪಟ್ಟಿಲ್ಲ, ಬದಲಾಗಿ ಕೆಲವರಿಗೆ ನಿತ್ಯಜೀವ ಇತರರಿಗೆ ನಿತ್ಯಶಾಪವು ಮುಂದಾಗಿಯೇ ನೇಮಿಸಲ್ಪಟ್ಟಿದೆ.” ಕ್ಯಾಲ್ವಿನ್ ಇನ್ನೂ ಪ್ರತಿಪಾದಿಸಿದ್ದು: “ದೇವರು ಪ್ರಥಮ ಮನುಷ್ಯನ ಪತನವನ್ನು ಮತ್ತು ಅವನಲ್ಲಿ ಅವನ ಸಂತತಿಯ ವಿನಾಶವನ್ನು ಮುಂಗಂಡನು ಮಾತ್ರವಲ್ಲ, ಅದನ್ನು ತನ್ನ ಸ್ವಂತ ಇಷ್ಟದಿಂದ ಏರ್ಪಡಿಸಿದನು ಕೂಡ.”
ಆದರೂ, ಪೂರ್ವಾದೃಷ್ಟ ಅಥವಾ ವಿಧಿವಾದವನ್ನು ಕಲಿಸುವ ಧರ್ಮಗಳ ಸದಸ್ಯರೆಲ್ಲರೂ ಅದನ್ನು ವೈಯಕ್ತಿಕವಾಗಿ ನಂಬುವುದಿಲ್ಲ. ಧಾರ್ಮಿಕ ಗ್ರಂಥಗಳು ಮನುಷ್ಯನ ಇಚ್ಛಾ ಸ್ವಾತಂತ್ರ್ಯದ ಕುರಿತು ತಿಳಿಸುತ್ತವೆಂದು ಕೆಲವರು ಸರಿಯಾಗಿ ಹೇಳುತ್ತಾರೆ. ವಾಸ್ತವದಲ್ಲಿ, ಮನುಷ್ಯನ ಕೃತ್ಯಗಳ ಕುರಿತಾಗಿ, ಅವು ಮನುಷ್ಯನ ಸ್ವತಂತ್ರ ಆಯ್ಕೆಯ ಫಲಿತಾಂಶವಾಗಿವೆಯೊ ಅಥವಾ ದೇವರಿಂದ ಪೂರ್ವನಿರ್ಧಾರಿತವಾಗಿವೆಯೊ ಎಂಬ ವಿಷಯದಲ್ಲಿ ಒಂದು ದೊಡ್ಡ ವಾಗ್ವಾದವಿದೆ. ಉದಾಹರಣೆಗಾಗಿ, ದೇವರು ನ್ಯಾಯವಂತನಾಗಿದ್ದು, ಮನುಷ್ಯನನ್ನು ತನ್ನ ಕೃತ್ಯಗಳಿಗಾಗಿ ಜವಾಬ್ದಾರನು ಮತ್ತು ಹೊಣೆಗಾರನಾಗಿ ಹಿಡಿಯುವುದರಿಂದ, ಮನುಷ್ಯನು ಆಯ್ಕೆಮಾಡಲು ಮತ್ತು ಕ್ರಿಯೆಗೈಯಲು ಸ್ವತಂತ್ರನಾಗಿರಬೇಕೆಂದು ಕೆಲವರು ವಾದಿಸಿದ್ದಾರೆ. ದೇವರು ಮನುಷ್ಯನ ಕೃತ್ಯಗಳನ್ನು ರಚಿಸುತ್ತಾನೆ, ಆದರೆ ಮನುಷ್ಯನು ಅದನ್ನು ಹೇಗೋ “ಪಡೆದುಕೊಳ್ಳು”ತ್ತಾನೆ ಮತ್ತು ಅವುಗಳಿಗಾಗಿ ಜವಾಬ್ದಾರನಾಗುತ್ತಾನೆಂದು ಇತರರು ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಹೇಳುವುದಾದರೆ, ನಮ್ಮ ದೈನಂದಿನ ಜೀವಿತಗಳಲ್ಲಿನ ಪ್ರತಿಯೊಂದು ಘಟನೆಯು, ದೊಡ್ಡದಾಗಿರಲಿ ಚಿಕ್ಕದಾಗಿರಲಿ, ಅದು ದೇವರಿಂದ ವಿಧಿಸಲ್ಪಟ್ಟಿದೆಯೆಂದು ಅನೇಕರು ನಂಬುತ್ತಾರೆ.
ನೀವೇನು ನಂಬುತ್ತೀರಿ? ನಿಮ್ಮ ಭವಿಷ್ಯತ್ತು ಏನಾಗಿರುವುದೆಂಬುದನ್ನು ದೇವರು ಈಗಾಗಲೇ ನಿರ್ಧರಿಸಿದ್ದಾನೊ? ಮಾನವರಿಗೆ ನಿಜವಾಗಿಯೂ ಇಚ್ಛಾ ಸ್ವಾತಂತ್ರ್ಯ, ತಮ್ಮ ಭವಿಷ್ಯತ್ತಿನ ಕುರಿತಾಗಿ ನಿಜವಾದ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವಿದೆಯೊ? ನಮ್ಮ ಅಂತ್ಯಸ್ಥಿತಿಯು ಎಷ್ಟರ ಮಟ್ಟಿಗೆ ನಮ್ಮ ಸ್ವಂತ ಕ್ರಿಯೆಗಳ ಮೇಲೆ ಅವಲಂಬಿಸಿದೆ? ಮುಂದಿನ ಲೇಖನವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಲು ಪ್ರಯತ್ನಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
SEL/Sipa Press