ಯೇಸು—‘ಪುರಾತನ ಕಾಲಗಳ ಮೂಲವುಳ್ಳ’ ಪ್ರಭು
ತುಂಬ ಸಮಯದಿಂದ ನೀವು ನೋಡಿರದ ಒಬ್ಬ ಸಂಬಂಧಿಕನ ಆಗಮನಕ್ಕಾಗಿ ನೀವು ಕಾಯುತ್ತಿದ್ದಂತೆಯೇ ಸಂಭ್ರಮವು ಹೆಚ್ಚುತ್ತದೆ. ಕೊನೆಗೆ, ನೀವು ಅವನನ್ನು ಭೇಟಿಯಾಗುತ್ತೀರಿ ಮತ್ತು ಹೃದಯೋಲ್ಲಾಸದಿಂದ ಅಭಿವಂದಿಸುತ್ತೀರಿ. ಆ ವ್ಯಕ್ತಿಯು ತನ್ನ ತಂದೆಯು ನಿಮ್ಮನ್ನು ಭೇಟಿಯಾಗುವಂತೆ ಕಳುಹಿಸಿರುವ ಕಾರಣವನ್ನು ಹೇಳುತ್ತಿರುವಾಗ, ನೀವು ಗಮನಕೊಟ್ಟು ಕಿವಿಗೊಡುತ್ತೀರಿ. ಅನಂತರ, ಅವನು ಮನೆಗೆ ಹಿಂದಿರುಗುವ ಸಮಯವು ಬೇಗನೆ ಬರುತ್ತದೆ. ನೀವು ದುಃಖದಿಂದ ಅವನನ್ನು ಬೀಳ್ಕೊಡುತ್ತೀರಿ. ಅವನು ಸುರಕ್ಷಿತವಾಗಿ ಮನೆಗೆ ತಲಪಿದನೆಂಬ ಸುದ್ದಿಯು ನಿಮಗೆ ಸಿಗುವಾಗ, ಅವನ ನಿರ್ಗಮನದಿಂದ ನಿಮಗಾದಂತಹ ದುಃಖವು ಕಡಿಮೆಯಾಗುತ್ತದೆ.
ತದನಂತರ, ಕೆಲವೊಂದು ಹಳೆಯ ಪತ್ರಗಳಲ್ಲಿ ನೀವು ಏನನ್ನೊ ಹುಡುಕುತ್ತಿರುವಾಗ, ನಿಮ್ಮ ಸಂಬಂಧಿಯು ನಿಮಗೆ ಭೇಟಿಯಾಗಲು ಬರುವ ಬಹಳ ಸಮಯದ ಹಿಂದೆಯೇ, ಅವನು ಮಾಡಿದಂತಹ ಸಾಹಸ ಕಾರ್ಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಪತ್ರಗಳನ್ನು ನೀವು ನೋಡುತ್ತೀರಿ. ಆ ಪತ್ರಗಳು ನಿಮಗೇನನ್ನು ಹೇಳುತ್ತವೊ ಅದು, ಅವನ ಹಿನ್ನೆಲೆಯ ವಿಷಯದಲ್ಲಿ ಆಸಕ್ತಿಕರ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಅವನ ಭೇಟಿ ಹಾಗೂ ಅವನ ಸದ್ಯದ ಕೆಲಸಕ್ಕಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸುತ್ತದೆ.
‘ಪುರಾತನ ಕಾಲಗಳಿಂದಲೂ’
ಪ್ರಥಮ ಶತಮಾನದ ಯೆಹೂದ್ಯರಿಗೆ ಲಭ್ಯವಿದ್ದ ಹಳೆಯ ಪತ್ರಗಳಲ್ಲಿ, ದೇವರ ಪ್ರವಾದಿಯಾದ ಮೀಕನ ಬರಹಗಳು ಇದ್ದವು. ಅವು ಸುಮಾರು ಏಳುನೂರು ವರ್ಷಗಳ ಹಿಂದೆ ದಾಖಲಿಸಲ್ಪಟ್ಟಿದ್ದವು. ಇವು ಮೆಸ್ಸೀಯನ ಜನ್ಮಸ್ಥಳಕ್ಕೆ ಕೈತೋರಿಸಿದವು. “ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು; ಆತನ ಹೊರಡೋಣದ ಮೂಲವು ಪುರಾತನವೂ ಅನಾದಿಯೂ ಆದದ್ದು.” (ಮೀಕ 5:2) ಆ ಮಾತುಗಳಿಗನುಸಾರವಾಗಿ, ಯಾವುದನ್ನು ಈಗ ಸಾ.ಶ.ಪೂ. 2 ಎಂದು ಕರೆಯಲಾಗುತ್ತದೊ, ಆ ವರ್ಷದಲ್ಲಿ ಬೇತ್ಲೆಹೇಮಿನ ಯೂದಾಯದ ಹಳ್ಳಿಯಲ್ಲಿ ಯೇಸು ಜನಿಸಿದನು. ಆದರೆ ಅವನ ಮೂಲವು ಹೇಗೆ ‘ಪುರಾತನ ಕಾಲಗಳ’ದ್ದು (NW) ಆಗಿರಸಾಧ್ಯವಿದೆ?
ಯೇಸುವಿಗೆ ಒಂದು ಮಾನವಪೂರ್ವ ಅಸ್ತಿತ್ವವಿತ್ತು. ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಯೇಸುವನ್ನು, “ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ’ನೂ ಎಂದು ವರ್ಣಿಸಿದ್ದಾನೆ. (ಓರೆಅಕ್ಷರಗಳು ನಮ್ಮವು.)—ಕೊಲೊಸ್ಸೆ 1:15.
ವಿವೇಕದ ಮೂಲನಾಗಿರುವ ಯೆಹೋವನು ತನ್ನ ಪ್ರಥಮ ಪುತ್ರನನ್ನು—ಜ್ಞಾನೋಕ್ತಿ ಪುಸ್ತಕದಲ್ಲಿ ರಾಜ ಸೊಲೊಮೋನನಿಂದ ದಾಖಲಿಸಲ್ಪಟ್ಟಿರುವ ಪ್ರೇರಿತ ಅಭಿವ್ಯಕ್ತಿಯನ್ನು ಉಪಯೋಗಿಸಿ ಹೇಳುವುದಾದರೆ—ತನ್ನ ‘ಪುರಾತನಕಾರ್ಯಗಳಲ್ಲಿ ಪ್ರಥಮ’ನಾಗಿ ಸೃಷ್ಟಿಸಿದನು. ಭೂಮಿಯ ಮೇಲೆ ಯೇಸುವಿನ ತಾತ್ಕಾಲಿಕ ತಂಗುವಿಕೆ ಮತ್ತು ಸ್ವರ್ಗಕ್ಕೆ ಅವನ ಹಿಂದಿರುಗುವಿಕೆಯ ನಂತರ, ಅವನು ಖಂಡಿತವಾಗಿಯೂ “ದೇವರ ಸೃಷ್ಟಿಗೆ ಮೂಲನು” ಆಗಿದ್ದನೆಂಬುದಕ್ಕೆ ಸಾಕ್ಷ್ಯನೀಡಿದನು. ವ್ಯಕ್ತೀಕರಿಸಲ್ಪಟ್ಟ ವಿವೇಕದೋಪಾದಿ, ಮಾನವಪೂರ್ವ ಯೇಸು ಘೋಷಿಸಿದ್ದು: “[ಯೆಹೋವನು] ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು.”—ಜ್ಞಾನೋಕ್ತಿ 8:22, 23, 27; ಪ್ರಕಟನೆ 3:14.
ಆರಂಭದಿಂದಲೇ, ದೇವರ ಪುತ್ರನು ತನ್ನ ತಂದೆಯ ಬಳಿ “ಕುಶಲ ಕಾರ್ಮಿಕ”ನಾಗಿರುವ (NW) ಒಂದು ಅಪೂರ್ವ ನೇಮಕವನ್ನು ಪಡೆದುಕೊಂಡನು. ಅದು ಯೆಹೋವನಿಗೆ ಎಷ್ಟು ಆನಂದವನ್ನು ತಂದಿತು! “ನಾನು ದಿನದಿನವೂ ಆತನಿಗೆ [ಯೆಹೋವನಿಗೆ] ವಿಶೇಷವಾಗಿ ಅಚ್ಚುಮೆಚ್ಚಿನವನಾದೆನು” ಎಂದು ಜ್ಞಾನೋಕ್ತಿ 8:30 (NW) ಹೇಳುತ್ತಾ, “ನಾನು ಯಾವಾಗಲೂ ಆತನ ಮುಂದೆ ಆನಂದಿತನಾಗಿದ್ದೆನು” ಎಂದು ಕೂಡಿಸುತ್ತದೆ.
ಯೆಹೋವನು ತದನಂತರ ತನ್ನ ಜ್ಯೇಷ್ಠ ಪುತ್ರನನ್ನು ಮಾನವಕುಲದ ಸೃಷ್ಟಿಯಲ್ಲಿ ಪಾಲಿಗನಾಗಲು ಆಮಂತ್ರಿಸಿದನು. “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ” ಎಂದು ಆತನು ಘೋಷಿಸಿದನು. (ಆದಿಕಾಂಡ 1:26) ಇದರ ಫಲಿತಾಂಶವಾಗಿ, ಇನ್ನೊಂದು ಮೆಚ್ಚುಗೆಯು ಬೆಳೆಯಿತು. ಮಾನವಪೂರ್ವ ಯೇಸು ವಿವರಿಸಿದ್ದು, “ನಾನು ಮೆಚ್ಚುತ್ತಿದ್ದವರು, ಮನುಷ್ಯ ಪುತ್ರರಾಗಿದ್ದರು.” (ಜ್ಞಾನೋಕ್ತಿ 8:31, NW) ಅಪೊಸ್ತಲ ಯೋಹಾನನು ತನ್ನ ಸುವಾರ್ತೆ ಪುಸ್ತಕದ ಆರಂಭದಲ್ಲಿ, ಸೃಷ್ಟಿಕಾರ್ಯದಲ್ಲಿ ಯೇಸುವಿನ ಮಾನವಪೂರ್ವ ಪಾತ್ರವನ್ನು ಅಂಗೀಕರಿಸಿದನು: “ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ.”—ಯೋಹಾನ 1:3.
ಯೆಹೋವನ ವದನಕನು
ಯೋಹಾನನ ಮಾತುಗಳು ದೇವರ ಮಗನು ಆನಂದಿಸಿದ ಇನ್ನೊಂದು ಸುಯೋಗದೆಡೆಗೆ ಗಮನವನ್ನು ಸೆಳೆಯುತ್ತವೆ. ಅದೇನೆಂದರೆ, ಒಬ್ಬ ವದನಕನಾಗಿರುವ ಸುಯೋಗ. ಆರಂಭದಿಂದಲೇ, ಅವನು ವಾಕ್ಯದೋಪಾದಿ ಸೇವೆ ಸಲ್ಲಿಸಿದನು. ಹೀಗಿರುವುದರಿಂದ, ಯೆಹೋವನು ಆದಾಮನೊಡನೆ ಮಾತಾಡಿದಾಗ, ಮತ್ತು ತದನಂತರ ಆದಾಮನೊಂದಿಗೆ ಹವ್ವಳನ್ನು ಸಂಬೋಧಿಸಿದಾಗ, ಆತನು ವಾಕ್ಯದ ಮೂಲಕ ಅದನ್ನು ಮಾಡಿದ್ದಿರಬಹುದು. ಮತ್ತು ಮಾನವಕುಲದ ಹಿತಕ್ಕಾಗಿ ಬೇಕಾಗಿದ್ದ ದೇವರ ಉಪದೇಶಗಳನ್ನು ತಿಳಿಸಲಿಕ್ಕೆ, ಮಾನವರನ್ನು ಮೆಚ್ಚುತ್ತಿದ್ದ ಒಬ್ಬನಿಗಿಂತಲೂ ಇನ್ಯಾರು ಹೆಚ್ಚು ಅರ್ಹರಾಗಿದ್ದರು?—ಯೋಹಾನ 1:1, 2.
ಮೊದಲು ಹವ್ವ, ಮತ್ತು ಅನಂತರ ಆದಾಮನು ತಮ್ಮ ಸೃಷ್ಟಿಕರ್ತನಿಗೆ ಅವಿಧೇಯರಾದುದು ವಾಕ್ಯವನ್ನು ಎಷ್ಟು ನೋಯಿಸಿರಬೇಕು! ಮತ್ತು ಅವರ ಅವಿಧೇಯತೆಯು ಅವರ ಸಂತಾನದ ಮೇಲೆ ತಂದಿರುವ ಅನಿಷ್ಟಗಳನ್ನು ಬಗೆಹರಿಸಲು ಅವನು ಎಷ್ಟೊಂದು ಹಾತೊರೆದಿರಬೇಕು! (ಆದಿಕಾಂಡ 2:15-17; 3:6, 8; ರೋಮಾಪುರ 5:12) ದಂಗೆಯೇಳುವಂತೆ ಹವ್ವಳನ್ನು ಉತ್ತೇಜಿಸಿದ ಸೈತಾನನನ್ನು ಸಂಬೋಧಿಸುತ್ತಾ, ಯೆಹೋವನು ಘೋಷಿಸಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು.” (ಆದಿಕಾಂಡ 3:15) ಏದೆನಿನಲ್ಲಿ ಏನು ಸಂಭವಿಸಿತೊ ಅದನ್ನು ಪ್ರತ್ಯಕ್ಷವಾಗಿ ನೋಡಿರಲಾಗಿ, ಸ್ತ್ರೀಯ “ಸಂತಾನ”ದ ಪ್ರಮುಖ ಭಾಗದೋಪಾದಿ ತಾನು ಅತಿ ಕೆಡುಕಿನ ದ್ವೇಷಕ್ಕೆ ಗುರಿಯಾಗುವೆನೆಂದು ವಾಕ್ಯವಾದಾತನು ಗ್ರಹಿಸಿದ್ದನು. ಸೈತಾನನು ಒಬ್ಬ ಕೊಲೆಗಾರನೆಂಬುದು ಅವನಿಗೆ ತಿಳಿದಿತ್ತು.—ಯೋಹಾನ 8:44.
ಸೈತಾನನು ತದನಂತರ ನಂಬಿಗಸ್ತ ಯೋಬನ ಸಮಗ್ರತೆಯನ್ನು ಪ್ರಶ್ನಿಸಿದಾಗ, ತನ್ನ ತಂದೆಯ ವಿರುದ್ಧ ಮಾಡಲ್ಪಟ್ಟ ನಿಂದಾತ್ಮಕ ಆಪಾದನೆಗಳಿಂದ ಆ ವಾಕ್ಯವಾದಾತನು ಕೋಪಾವೇಶದಿಂದ ತುಂಬಿದ್ದಿರಬೇಕು. (ಯೋಬ 1:6-10; 2:1-4) ಪ್ರಧಾನ ದೇವದೂತನ ತನ್ನ ಪಾತ್ರದಲ್ಲಿ ಆ ವಾಕ್ಯವಾದಾತನು, ಮೀಕಾಯೇಲ್ ಎಂದು ಜ್ಞಾತನಾಗಿದ್ದಾನೆ. ಆ ಹೆಸರಿನ ಅರ್ಥ “ದೇವರಂತೆ ಯಾರಿದ್ದಾರೆ?” ಎಂದಾಗಿದೆ. ಮತ್ತು ಅದು, ದೇವರ ಪರಮಾಧಿಕಾರವನ್ನು ಅತಿಕ್ರಮಿಸಲು ಬಯಸುವವರೆಲ್ಲರ ವಿರುದ್ಧ ಅವನು ಯೆಹೋವನ ಪಕ್ಷವಹಿಸಿ ಹೋರಾಡುವ ವಿಧವನ್ನು ಸೂಚಿಸುತ್ತದೆ.—ದಾನಿಯೇಲ 12:1; ಪ್ರಕಟನೆ 12:7-10.
ಇಸ್ರಾಯೇಲಿನ ಇತಿಹಾಸವು ವಿಕಾಸಗೊಂಡಂತೆ, ಮಾನವರನ್ನು ಶುದ್ಧಾರಾಧನೆಯಿಂದ ವಿಮುಖಗೊಳಿಸುವ ಸೈತಾನನ ಪ್ರಯತ್ನಗಳನ್ನು ವಾಕ್ಯವಾದಾತನು ಗಮನಿಸಿದನು. ಐಗುಪ್ತದಿಂದ ಹೊರಟುಬಂದ ನಂತರ, ದೇವರು ಮೋಶೆಯ ಮೂಲಕ ಇಸ್ರಾಯೇಲಿಗೆ ಹೇಳಿದ್ದು: “ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವದಕ್ಕೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ಕರತರುವದಕ್ಕೂ ದೂತನನ್ನು ನಿಮ್ಮ ಮುಂದುಗಡೆಯಲ್ಲಿ ಕಳುಹಿಸುತ್ತೇನೆ. ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು; ಆತನಿಗೆ ಅವಿಧೇಯರಾಗಿರಬಾರದು; ಅವಿಧೇಯರಾದರೆ ನಿಮ್ಮನ್ನು ಕ್ಷಮಿಸಲಾರನು; ನನ್ನ ನಾಮ ಮಹಿಮೆ ಆತನಲ್ಲಿ ಇರುವದು.” (ವಿಮೋಚನಕಾಂಡ 23:20, 21) ಈ ದೇವದೂತನು ಯಾರಾಗಿದ್ದನು? ಸಂಭವನೀಯವಾಗಿ, ಮಾನವಪೂರ್ವ ಯೇಸುವೇ.
ನಂಬಿಗಸ್ತ ಅಧೀನತೆ
ಮೋಶೆಯು ಸಾ.ಶ.ಪೂ. 1473ರಲ್ಲಿ ಸತ್ತನು, ಮತ್ತು ಅವನ ಶವವು “ಮೋವಾಬ್ಯರ ದೇಶದಲ್ಲಿ ಬೇತ್ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ” ಹೂಳಲ್ಪಟ್ಟಿತು. (ಧರ್ಮೋಪದೇಶಕಾಂಡ 34:5, 6) ಸೈತಾನನು ಆ ಶವವನ್ನು, ಬಹುಶಃ ವಿಗ್ರಹಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸಲು ಬಯಸಿದನು. ಮೀಕಾಯೇಲನು ಇದನ್ನು ವಿರೋಧಿಸಿದನಾದರೂ, ತನ್ನ ತಂದೆಯಾದ ಯೆಹೋವನ ಅಧಿಕಾರಕ್ಕೆ ಅಧೀನತೆಯಿಂದ ತಲೆಬಾಗಿದನು. “ಸೈತಾನನ ಮೇಲೆ ದೂಷಣಾಭಿಪ್ರಾಯವನ್ನು ಹೇಳುವದಕ್ಕೆ ಧೈರ್ಯಗೊಳ್ಳದೆ” ಮೀಕಾಯೇಲನು ಸೈತಾನನಿಗೆ ಎಚ್ಚರಿಸಿದ್ದು: “ಕರ್ತನು [“ಯೆಹೋವನು,” NW] ನಿನ್ನನ್ನು ಖಂಡಿಸಲಿ.”—ಯೂದ 9.
ಮುಂದಕ್ಕೆ ಇಸ್ರಾಯೇಲ್ ಜನಾಂಗವು ಕಾನಾನಿನ ವಾಗ್ದತ್ತ ದೇಶದ ವಿಜಯವನ್ನು ಆರಂಭಿಸಿತು. ಯೆರಿಕೋ ಪಟ್ಟಣದ ಹತ್ತಿರ, ಜನಾಂಗದ ಮೇಲೆ ವಾಕ್ಯದ ಮುಂದುವರಿಯುವ ಮೇಲ್ವಿಚಾರಣೆಯ ಪುನರಾಶ್ವಾಸನೆಯನ್ನು ಯೆಹೋಶುವನು ಪಡೆದನು. ಕತ್ತಿಯನ್ನು ಹಿಡಿದಿರುವ ಒಬ್ಬ ಮನುಷ್ಯನನ್ನು ಅವನು ಸಂಧಿಸಿದನು. ಆ ಅಪರಿಚಿತನ ಬಳಿಗೆ ಹೋಗಿ, ಯೆಹೋಶುವನು ಕೇಳಿದ್ದು: “ನೀನು ನಮ್ಮವನೋ ಅಥವಾ ಶತ್ರುಪಕ್ಷದವನೋ”? ಆ ಅಪರಿಚಿತನು ತನ್ನ ಗುರುತನ್ನು ಪ್ರಕಟಪಡಿಸುತ್ತಾ, ಹೀಗೆ ಹೇಳಿದಾಗ ಯೆಹೋಶುವನಿಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ: “ನಾನು ಅಂಥವನಲ್ಲ, ಯೆಹೋವನ ಸೇನಾಪತಿಯು; ಈಗಲೇ ಬಂದಿದ್ದೇನೆ.” ಯೆಹೋವನ ಈ ಮಹಿಮೆಗೇರಿಸಲ್ಪಟ್ಟ ಪ್ರತಿನಿಧಿಯ ಮುಂದೆ ಯೆಹೋಶುವನು ಅಡ್ಡಬಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ನಿಸ್ಸಂದೇಹವಾಗಿ ಅವನು, ತದನಂತರ “ನಾಯಕನಾದ ಮೆಸ್ಸೀಯನು” (NW) ಆಗಿ ಪರಿಣಮಿಸಲಿದ್ದ ಮಾನವಪೂರ್ವ ಯೇಸು ಆಗಿದ್ದನು.—ಯೆಹೋಶುವ 5:13-15; ದಾನಿಯೇಲ 9:25.
ದೇವರ ಪ್ರವಾದಿಯಾದ ದಾನಿಯೇಲನ ದಿನಗಳಲ್ಲಿ ಸೈತಾನನೊಂದಿಗೆ ಇನ್ನೊಂದು ಎದುರಿಸುವಿಕೆಯು ಆಯಿತು. ಈ ಸಂದರ್ಭದಲ್ಲಿ, ಪಾರಸಿಯದ ದೆವ್ವ ರಾಜಕುಮಾರನು ಮೂರು ವಾರಗಳ ವರೆಗೆ ಮೀಕಾಯೇಲನ ಜೊತೆ ದೇವದೂತನನ್ನು ‘ತಡೆದಾಗ,’ ಮೀಕಾಯೇಲನು ಅವನಿಗೆ ಬೆಂಬಲನೀಡಿದನು. ಆ ದೇವದೂತನು ವಿವರಿಸಿದ್ದು: “ಇಗೋ, ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು; ಅಲ್ಲಿ ಪಾರಸಿಯ ರಾಜರ ಸಂಗಡ ಹೋರಾಡಿ ಉಳಿದು”ಕೊಂಡೆನು.—ದಾನಿಯೇಲ 10:13, 21.
ಮಾನವಪೂರ್ವ ಮತ್ತು ಮಾನವ ರೂಪದಲ್ಲಿ ಮಹಿಮೆ
ಸಾ.ಶ.ಪೂ. 778ರಲ್ಲಿ, ಯೆಹೂದಿ ರಾಜನಾದ ಉಜ್ಜೀಯನು ಸತ್ತ ವರ್ಷದಲ್ಲಿ, ದೇವರ ಪ್ರವಾದಿಯಾದ ಯೆಶಾಯನು, ಯೆಹೋವನು ತನ್ನ ಉನ್ನತ ಸಿಂಹಾಸನದಲ್ಲಿ ಕುಳಿತುಕೊಂಡಿರುವ ಒಂದು ದರ್ಶನವನ್ನು ಕಂಡನು. “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು”? (ಓರೆಅಕ್ಷರಗಳು ನಮ್ಮವು.) ಎಂದು ಯೆಹೋವನು ಕೇಳಿದನು. ಯೆಶಾಯನು ಮುಂದೆ ಬಂದನು, ಆದರೆ ಅವನ ಜೊತೆ ಇಸ್ರಾಯೇಲ್ಯರು ಅವನ ಘೋಷಣೆಗಳಿಗೆ ಪ್ರತಿಕ್ರಿಯೆಯನ್ನು ತೋರಿಸದೆ ಇರುವರೆಂದು ಯೆಹೋವನು ಅವನನ್ನು ಎಚ್ಚರಿಸಿದನು. ಪ್ರಥಮ ಶತಮಾನದ ಅವಿಶ್ವಾಸಿ ಯೆಹೂದ್ಯರನ್ನು ಅಪೊಸ್ತಲ ಪೌಲನು ಯೆಶಾಯನ ದಿನದ ಜನರಿಗೆ ಹೋಲಿಸಿ ಹೇಳಿದ್ದು: “ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯದಲ್ಲಿ ಮಾತಾಡುತ್ತಿರುವಾಗ ಆ ಮಾತನ್ನು ನುಡಿದನು.” ಯಾರ ಮಹಿಮೆಯನ್ನು ನೋಡಿದ್ದನು? ಯೆಹೋವನ ಹಾಗೂ ಸ್ವರ್ಗೀಯ ಆಸ್ಥಾನದಲ್ಲಿ ಆತನ ಪಕ್ಕದಲ್ಲಿದ್ದ ಮಾನವಪೂರ್ವ ಯೇಸುವಿನ ಮಹಿಮೆಯನ್ನೇ.—ಯೆಶಾಯ 6:1, 8-10; ಯೋಹಾನ 12:37-41.
ಕೆಲವು ಶತಮಾನಗಳ ಬಳಿಕ, ಆ ಸಮಯದ ವರೆಗೆ ಯೇಸುವಿಗಿದ್ದ ನೇಮಕಗಳಲ್ಲೇ ಅತಿ ಶ್ರೇಷ್ಠವಾದ ನೇಮಕವು ಬಂತು. ಯೆಹೋವನು ಸ್ವರ್ಗದಿಂದ ತನ್ನ ಪ್ರಿಯ ಪುತ್ರನ ಜೀವಶಕ್ತಿಯನ್ನು ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. ಒಂಬತ್ತು ತಿಂಗಳುಗಳ ಬಳಿಕ ಅವಳು ಒಂದು ಗಂಡು ಮಗುವನ್ನು—ಯೇಸುವನ್ನು ಹೆತ್ತಳು. (ಲೂಕ 2:1-7, 21) ಅಪೊಸ್ತಲ ಪೌಲನ ಮಾತುಗಳಲ್ಲಿ ಅದು ಹೀಗೆ ತಿಳಿಸಲ್ಪಟ್ಟಿದೆ: “ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. . . . ಆತನು ಸ್ತ್ರೀಯಲ್ಲಿ ಹುಟ್ಟಿದ”ನು. (ಗಲಾತ್ಯ 4:4) ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಅಂಗೀಕರಿಸಿದ್ದು: “ಆ ವಾಕ್ಯವೆಂಬವನು ನರಾವತಾರ ಎತ್ತಿ [“ಮನುಷ್ಯನಾಗಿ,” NW] ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.”—ಯೋಹಾನ 1:14.
ಮೆಸ್ಸೀಯನು ಗೋಚರವಾಗುತ್ತಾನೆ
ಕಡಿಮೆಪಕ್ಷ 12ನೆಯ ವಯಸ್ಸಿನೊಳಗೆ, ಎಳೆಯ ಯೇಸು, ತಾನು ತನ್ನ ಸ್ವರ್ಗೀಯ ತಂದೆಯ ಕೆಲಸವನ್ನು ಮಾಡುವುದರಲ್ಲಿ ಕಾರ್ಯಮಗ್ನನಾಗಿರಬೇಕೆಂಬುದನ್ನು ಗ್ರಹಿಸಲಾರಂಭಿಸಿದನು. (ಲೂಕ 2:48, 49) ಸುಮಾರು 18 ವರ್ಷಗಳ ಬಳಿಕ ಯೇಸು, ಯೊರ್ದಾನ್ ಹೊಳೆಯ ಬಳಿಯಿದ್ದ ಸ್ನಾನಿಕನಾದ ಯೋಹಾನನ ಬಳಿ ಬಂದು ದೀಕ್ಷಾಸ್ನಾನಪಡೆದುಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಂತೆ, ಆಕಾಶವು ತೆರೆಯಿತು ಮತ್ತು ಪವಿತ್ರಾತ್ಮವು ಅವನ ಮೇಲೆ ಇಳಿಯಿತು. ಕುಶಲ ಕಾರ್ಮಿಕನು, ವದನಕನು, ದೇವರ ಸೇನಾಪತಿಯು, ಮತ್ತು ಪ್ರಧಾನ ದೇವದೂತನಾದ ಮೀಕಾಯೇಲನೋಪಾದಿ ಅವನು ತನ್ನ ತಂದೆಯ ಪಕ್ಕದಲ್ಲಿದ್ದುಕೊಂಡು ಸೇವೆಸಲ್ಲಿಸಿದ್ದ ಅಸಂಖ್ಯಾತ ಸಹಸ್ರ ವರ್ಷಗಳನ್ನು ಅವನು ಜ್ಞಾಪಿಸಿಕೊಂಡಂತೆ, ಅವನ ಮನಸ್ಸಿಗೆ ಬಂದ ನೆನಪುಗಳ ಸುರಿಮಳೆಯ ಕುರಿತು ಊಹಿಸಿಕೊಳ್ಳಿರಿ. ಅನಂತರ, ತನ್ನ ತಂದೆಯ ಧ್ವನಿಯು ಸ್ನಾನಿಕನಾದ ಯೋಹಾನನಿಗೆ ಹೀಗೆ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುವ ರೋಮಾಂಚನವು ಇತ್ತು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.”—ಮತ್ತಾಯ 3:16, 17; ಯೋಹಾನ 3:21, 22.
ಸ್ನಾನಿಕನಾದ ಯೋಹಾನನು ನಿಶ್ಚಯವಾಗಿಯೂ ಯೇಸುವಿನ ಮಾನವಪೂರ್ವ ಅಸ್ತಿತ್ವದ ಕುರಿತು ಸಂದೇಹಿಸಲಿಲ್ಲ. ಯೇಸು ಅವನನ್ನು ಸಮೀಪಿಸಿದಂತೆ, ಯೋಹಾನನು ಘೋಷಿಸಿದ್ದು: “ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.” ಮತ್ತು ಅವನು ಕೂಡಿಸಿದ್ದು: “ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು.” (ಓರೆಅಕ್ಷರಗಳು ನಮ್ಮವು.) (ಯೋಹಾನ 1:15, 29, 30) ಅಪೊಸ್ತಲ ಯೋಹಾನನಿಗೂ ಯೇಸುವಿನ ಪೂರ್ವಅಸ್ತಿತ್ವದ ಕುರಿತು ತಿಳಿದಿತ್ತು. ಅವನು ಬರೆದುದು: “ಮೇಲಣಿಂದ ಬರುವವನು ಎಲ್ಲರ ಮೇಲೆ ಇದ್ದಾನೆ” ಮತ್ತು “ಪರಲೋಕದಿಂದ ಬರುವವನು ಎಲ್ಲರ ಮೇಲೆ ಇದ್ದಾನೆ. ತಾನು ನೋಡಿ ಕೇಳಿದ್ದಕ್ಕೆ ಸಾಕ್ಷಿಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾರೂ ಒಪ್ಪುವದಿಲ್ಲ.” (ಓರೆಅಕ್ಷರಗಳು ನಮ್ಮವು.)—ಯೋಹಾನ 3:31, 32.
ಸಾ.ಶ. 61ನೆಯ ಇಸವಿಯಷ್ಟಕ್ಕೆ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ, ಭೂಮಿಯ ಮೇಲೆ ಯೇಸುವಿನ ಆಗಮನ ಮತ್ತು ಮಹಾಯಾಜಕನೋಪಾದಿ ಅವನ ಕೆಲಸದ ಪೂರ್ಣ ಮಹತ್ವವನ್ನು ಗಣ್ಯಮಾಡುವಂತೆ ಪ್ರೇರೇಪಿಸಿದನು. ವದನಕನೋಪಾದಿ ಯೇಸುವಿನ ಪಾತ್ರಕ್ಕೆ ಗಮನವನ್ನು ಸೆಳೆಯುತ್ತಾ, ಪೌಲನು ಬರೆದುದು: “ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತಾಡಿದ್ದಾನೆ. . . . ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು.” ಇದು, ಸೃಷ್ಟಿಯ ಸಮಯದಲ್ಲಿ “ಕುಶಲ ಕಾರ್ಮಿಕ”ನಾಗಿ ಯೇಸುವಿನ ಪಾತ್ರಕ್ಕೆ ಸೂಚಿಸುತ್ತಿರಲಿ ಇಲ್ಲವೇ ಮನುಷ್ಯನ ಸಂಧಾನಕ್ಕಾಗಿರುವ ದೇವರ ಪ್ರಗತಿಪರ ಏರ್ಪಾಡುಗಳಲ್ಲಿ ಅವನ ಒಳಗೂಡುವಿಕೆಗೆ ಸೂಚಿಸುತ್ತಿರಲಿ, ಪೌಲನು ಇಲ್ಲಿ ಯೇಸುವಿನ ಮಾನವಪೂರ್ವ ಅಸ್ತಿತ್ವಕ್ಕೆ ತನ್ನ ಸಾಕ್ಷ್ಯವನ್ನು ಕೂಡಿಸುತ್ತಾನೆ.—ಇಬ್ರಿಯ 1:1-6; 2:9.
‘ಪುರಾತನ ಕಾಲ’ಗಳಿಂದಲೂ ನಿಷ್ಠೆ
ಫಿಲಿಪ್ಪಿಯಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಪೌಲನು ಈ ಉತ್ತೇಜನವನ್ನು ಕೊಟ್ಟನು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:5-8) ಯೇಸುವನ್ನು ಪುನರುತ್ಥಾನಗೊಳಿಸುವ ಮೂಲಕ ಮತ್ತು ಅನಂತರ ಅವನನ್ನು ಪುನಃ ಸ್ವರ್ಗಕ್ಕೆ ಸ್ವಾಗತಿಸುವ ಮೂಲಕ, ಯೆಹೋವನು ಅವನ ನಿಷ್ಠಾವಂತ ಮಾರ್ಗಕ್ರಮಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿದನು. ಯೇಸು ಗಣನಾತೀತ ಸಮಯದಿಂದ ನಮಗಾಗಿ ಎಂತಹ ಒಂದು ಅತ್ಯುತ್ತಮ ಮಾದರಿಯನ್ನು ಬಿಟ್ಟುಹೋಗಿದ್ದಾನೆ!—1 ಪೇತ್ರ 2:21.
ಯೇಸುವಿನ ಮಾನವಪೂರ್ವ ಅಸ್ತಿತ್ವದ ಕುರಿತು ಬೈಬಲು ನಮಗೆ ಕೊಡುವ ನಸುನೋಟಗಳಿಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! ನಿಷ್ಠಾವಂತ ಸೇವೆಯ ಅವನ ಮಾದರಿಯನ್ನು—ವಿಶೇಷವಾಗಿ ಈಗ ಅವನು ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ರಾಜನಾಗಿ ಆಳುವುದರಿಂದ—ಅನುಕರಿಸುವ ನಮ್ಮ ದೃಢನಿಶ್ಚಯವನ್ನು ಅವು ನಿಶ್ಚಯವಾಗಿಯೂ ದೃಢಪಡಿಸುತ್ತವೆ. ಯಾರ “ಮೂಲವು ಪುರಾತನ ಕಾಲಗಳ”ದ್ದು (NW) ಆಗಿದೆಯೊ ಆ ನಮ್ಮ ರಾಜ್ಯಭಾರಿ ಮತ್ತು ಅಧಿಪತಿಯಾಗಿರುವ, “ಸಮಾಧಾನದ ಪ್ರಭು”ವಾದ ಕ್ರಿಸ್ತ ಯೇಸುವಿಗೆ ನಾವು ಜಯಕಾರವೆತ್ತೋಣ!—ಯೆಶಾಯ 9:6; ಮೀಕ 5:2.
[ಪುಟ 23 ರಲ್ಲಿರುವ ಚೌಕ]
ಮಾನವಪೂರ್ವ ಅಸ್ತಿತ್ವಕ್ಕೆ ಸಾಕ್ಷ್ಯ
ಈ ಕೆಳಗೆ ಕೊಡಲ್ಪಟ್ಟಿರುವಂತಹ ಯೇಸುವಿನ ಸ್ವಂತ ಮಾತುಗಳು, ಅವನ ಮಾನವಪೂರ್ವ ಅಸ್ತಿತ್ವಕ್ಕೆ ಹೇರಳವಾದ ಸಾಕ್ಷ್ಯವನ್ನು ಕೊಡುತ್ತವೆ:
◻ “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.”—ಯೋಹಾನ 3:13.
◻ “ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ; ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. ದೇವರು ಕೊಡುವ ಆ ರೊಟ್ಟಿ ಯಾವದಂದರೆ ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದೇ . . . ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು.”—ಯೋಹಾನ 6:32, 33, 38.
◻ “ಪರಲೋಕದಿಂದ ಇಳಿದು ಬರುವ ರೊಟ್ಟಿ ಎಂಥದೆಂದರೆ ಅದನ್ನು ತಿಂದವನು ಸಾಯುವದಿಲ್ಲ. ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು.”—ಯೋಹಾನ 6:50, 51.
◻ “ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ?”—ಯೋಹಾನ 6:62.
◻ “ನಾನು ಎಲ್ಲಿಂದ ಬಂದವನಾಗಿಯೂ ಎಲ್ಲಿಗೆ ಹೋಗುವವನಾಗಿಯೂ ಇದ್ದೇನೆಂಬದು ನನಗೆ ಗೊತ್ತಿರುವದರಿಂದ . . . ನನ್ನ ಸಾಕ್ಷಿ ನಿಜವಾಗಿರುವದು. ನೀವು ಕೆಳಗಿನವರು, ನಾನು ಮೇಲಿನವನು; ನೀವು ಈ ಲೋಕದವರು, ನಾನು ಈ ಲೋಕದವನಲ್ಲ.”—ಯೋಹಾನ 8:14, 23.
◻ “ದೇವರು ನಿಮ್ಮ ತಂದೆಯಾಗಿದ್ದರೆ, ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆತನೇ ನನ್ನನ್ನು ಕಳುಹಿಸಿದ್ದಾನೆ.”—ಯೋಹಾನ 8:42.
◻ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ.”—ಯೋಹಾನ 8:58.
◻ “ತಂದೆಯೇ, . . . ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು. ತಂದೆಯೇ, ನೀನು ಯಾರನ್ನು ನನಗೆ ಕೊಟ್ಟಿಯೋ ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಫೈಸುತ್ತೇನೆ.”—ಯೋಹಾನ 17:5, 24.
[ಪುಟ 23 ರಲ್ಲಿರುವ ಚಿತ್ರ]
ಯೆಹೋಶುವನು ಯೆಹೋವನ ಸೇನಾಪತಿಯನ್ನು ಭೇಟಿಯಾಗುತ್ತಾನೆ