ಸತ್ಯಕ್ಕೆ ತಕ್ಕ ಹಾಗೆ ದೇವರನ್ನು ಆರಾಧಿಸುವುದು
ಆರಾಧನೆಯು ದೇವರಿಂದ ಅಂಗೀಕರಿಸಲ್ಪಡಬೇಕಾದರೆ, ಅದು ಸತ್ಯದ ಮೇಲೆ ಆಧಾರಿತವಾಗಿರಬೇಕು. (ಯೋಹಾನ 4:23) ಸತ್ಯಾರಾಧಕರು ‘ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ, ಜೀವಸ್ವರೂಪನಾದ ದೇವರ ಸಭೆಗೆ’ ಸೇರಿದವರಾಗಿದ್ದಾರೆ ಎಂದು ಬೈಬಲು ಗುರುತಿಸುತ್ತದೆ. (1 ತಿಮೊಥೆಯ 3:15) ದೇವರ ಸಭೆಯಲ್ಲಿ ಒಳಗೂಡಿರುವವರೆಲ್ಲರೂ, ದೇವರ ವಾಕ್ಯದ ಸತ್ಯವನ್ನು ನಂಬುತ್ತಾರೆ ಮಾತ್ರವಲ್ಲ, ಅದಕ್ಕನುಸಾರ ಜೀವಿಸುತ್ತಾರೆ ಹಾಗೂ ಅದನ್ನು ಭೂವ್ಯಾಪಕವಾಗಿ ಸಾರುವ ಮೂಲಕ ಅದರ ಪಕ್ಷವಹಿಸುತ್ತಾರೆ.—ಮತ್ತಾಯ 24:14; ರೋಮಾಪುರ 10:9-15.
ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್ ಶೈಕ್ಷಣಿಕ ಕೆಲಸಕ್ಕೆ ಪ್ರಸಿದ್ಧರಾಗಿದ್ದಾರೆ. ಆ ಕೆಲಸವು ಈಗ 200ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ನಡೆಯುತ್ತಿದೆ. ಸಾಕ್ಷಿಗಳು ಬೈಬಲನ್ನು ಅಭ್ಯಾಸಿಸುತ್ತಾರೆ ಹಾಗೂ ಅದನ್ನು ಸತ್ಯವೆಂದು ಕಲಿಸುತ್ತಾರೆ. ಅದನ್ನು ಅವರು ಮಾನವ ತತ್ವಜ್ಞಾನಗಳೊಂದಿಗೆ ಕಲಬೆರಕೆಮಾಡುವುದಿಲ್ಲ. ಅವರ ಬೈಬಲಾಧಾರಿತ ಬೋಧನೆಗಳ ಪರಿಚಯ ನಿಮಗಿದೆಯೊ? ಅನೇಕರು, ಯೆಹೋವನ ಸಾಕ್ಷಿಗಳ ವಿರುದ್ಧ ಪ್ರಚಾರವಾಗಿರುವ ನಕಾರಾತ್ಮಕ ಸುದ್ದಿಯನ್ನು ಕೇಳಿಸಿಕೊಂಡು, ಅವರ ಸಂದೇಶಕ್ಕೆ ಕಿವಿಗೊಡಲು ಹಿಂಜರಿಯುತ್ತಾರೆ. ಆದರೆ ಸಹೃದಯಿ ಜನರೇ, ಸಾಕ್ಷಿಗಳು ಏನನ್ನು ಸಾರುತ್ತಾರೋ ಅದು ಸತ್ಯವೋ ಅಲ್ಲವೋ ಎಂಬುದನ್ನು ನೀವಾಗಿಯೇ ಪರೀಕ್ಷಿಸಿ ನೋಡುವ ಮೂಲಕ ಒಂದು ನಿರ್ಧಾರಕ್ಕೆ ಬನ್ನಿ. ಆ ಅತ್ಯಾವಶ್ಯಕ ನಿರ್ಧಾರವು, ಇತರರು ಹೇಳುವ ವಿಷಯದ ಮೇಲೆ ಆಧಾರಿತವಾಗಿರಬಾರದು. ಯೆಹೋವನ ಸಾಕ್ಷಿಗಳ ಬೋಧನೆಗಳನ್ನು ವೈಯಕ್ತಿಕವಾಗಿ ಪರೀಕ್ಷಿಸಿರುವ ಅನೇಕರು, ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.
ಸತ್ಯದ ಕುರಿತಾದ ಜ್ಞಾನವು ಭಯವನ್ನು ಹೋಗಲಾಡಿಸುತ್ತದೆ
ಉದಾಹರಣೆಗಾಗಿ, ಒಕೇನ್ಯಳ ವಿಷಯವನ್ನು ಪರಿಗಣಿಸಿರಿ. ಅವಳು ಕಟ್ಟುನಿಟ್ಟಾದ ಕ್ಯಾಥೊಲಿಕ್ ಕುಟುಂಬದಲ್ಲಿ ಬೆಳೆಸಲ್ಪಟ್ಟಿದ್ದಳು. 1979ರಲ್ಲಿ, ಮೆಕ್ಸಿಕೊದಲ್ಲಿ ಪೋಪ್ನ ಸಂದರ್ಶನಕ್ಕಾಗಿ ಏರ್ಪಾಡುಗಳನ್ನು ಮಾಡಿದವರಲ್ಲಿ ಅವಳ ತಂದೆಯು ಒಬ್ಬರಾಗಿದ್ದರು. ಒಕೇನ್ಯಳು ತನ್ನ ಗೆಳತಿಯರನ್ನು ನೋಡಲು ಹೋಗಿದ್ದಾಗ, ಯೆಹೋವನ ಸಾಕ್ಷಿಗಳನ್ನು ಅವಳು ಭೇಟಿಮಾಡಿದಳು. ಅವರ ಸಹಾಯದಿಂದ ಅವಳು ಬೈಬಲು ಹೇಳುವಂತಹ ವಿಷಯಗಳನ್ನು ಹೆಚ್ಚು ಜಾಗರೂಕತೆಯಿಂದ ಪರಿಶೀಲಿಸಲು ಆರಂಭಿಸಿದಳು. ಅವಳು ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ಮೊದಮೊದಲು ನಾನು ತುಂಬ ಭಯಗೊಂಡೆ. ನನಗೆ ಸತ್ಯವು ಸಿಕ್ಕಿತ್ತು! ಆದರೆ ಇದರಿಂದ, ಈ ಹಿಂದೆ ನಾನು ನಂಬಿದ್ದಂತಹ ಅನೇಕ ವಿಷಯಗಳು ತಪ್ಪಾಗಿದ್ದವು ಎಂಬುದು ಗೊತ್ತಾಯಿತು. ನನ್ನ ಕುಟುಂಬ, ನನ್ನ ಮಿತ್ರರು, ನಾನು ಪ್ರೀತಿಸುತ್ತಿದ್ದ ಜನರು—ಎಲ್ಲರೂ ನಂಬುತ್ತಿದ್ದ ವಿಷಯವು ತಪ್ಪಾಗಿತ್ತು. ನನಗೆ ದಿಕ್ಕುಗೆಟ್ಟಂತಾಗಿತ್ತು. ನಾನು ಹೊಸದಾಗಿ ಕಂಡುಕೊಂಡಿರುವ ಸತ್ಯಕ್ಕೆ ನನ್ನ ಕುಟುಂಬವು ಹೇಗೆ ಪ್ರತಿಕ್ರಿಯಿಸಬಹುದು ಎಂದು ನಾನು ಕೇಳಿಕೊಳ್ಳುತ್ತಿದ್ದೆ. ಸಮಯ ಕಳೆದಂತೆ, ಯೆಹೋವನ ಸಹಾಯದಿಂದ ನಾನು ಈ ಎಲ್ಲ ಭಾರವಾದ ಅನಿಸಿಕೆಗಳಿಗೆ ಹೊಂದಿಕೊಳ್ಳತೊಡಗಿದೆ. ಒಂದು ದಿನ ನಾನು, ದೇವತಾಶಾಸ್ತ್ರದ ಪ್ರೊಫೆಸರನಾಗಿದ್ದ ನಮ್ಮ ಕುಟುಂಬದ ಸ್ನೇಹಿತನೊಂದಿಗೆ ಈ ವಿಷಯವನ್ನು ರಹಸ್ಯವಾಗಿ ಹೇಳಲು ನಿರ್ಧರಿಸಿದೆ. ಸತ್ಯವನ್ನು ಕಂಡುಹಿಡಿಯುವ ನನ್ನ ಬಯಕೆಯ ಕುರಿತು ನಾನು ಅವನಿಗೆ ಹೇಳಿದೆ. ತದನಂತರ ಅವನು ಹೇಳಿದ್ದು, ‘ನೀನು ಸತ್ಯವನ್ನು ತಿಳಿದುಕೊಳ್ಳಲು ಬಯಸುವಲ್ಲಿ, ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸು.’”
ಒಕೇನ್ಯಳು ಈ ಮೊದಲೇ ಹೆದರಿದ್ದಂತೆ, ಅವಳ ಕುಟುಂಬದವರು ಅವಳನ್ನು ಮನೆಯಿಂದ ಹೊರಗೆಹಾಕಿದರು. ಆದರೂ, ಸಾಕ್ಷಿಗಳು ಅವಳಿಗೆ ಆತ್ಮಿಕ ಸಹಾಯವನ್ನು ಕೊಡುವುದನ್ನು ಮುಂದುವರಿಸಿದರು. ಅವಳು ಹೇಳುವುದು: “ಸತ್ಯಕ್ಕಾಗಿ ಒಂದು ನಿಲುವನ್ನು ತೆಗೆದುಕೊಳ್ಳುವಂತೆ ನಾನು ಬಲಪಡಿಸಲ್ಪಟ್ಟೆ. ನಾನು ಯಾವುದಕ್ಕಾಗಿ ಹೋರಾಡುತ್ತಿದ್ದೆನೊ ಅದು ಸಾರ್ಥಕವಾಗಿತ್ತು ಎಂದು ನನಗನಿಸಿತು. ಯೆಹೋವನ ಸಾಕ್ಷಿಗಳಿಂದ ನನಗೆ ದೊರಕಿದ ಸಹಾಯವು ತುಂಬ ಪ್ರಾಮುಖ್ಯವಾದದ್ದಾಗಿತ್ತು. ಕ್ರೈಸ್ತ ಸಭೆಯಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆಂಬ ಅನಿಸಿಕೆ ನನಗಾಯಿತು. ದೇವರ ಸಂಸ್ಥೆಗೆ ಹತ್ತಿರವಾಗುವುದು, ನನ್ನ ಕುಟುಂಬದ ಸಹಾಯವಿಲ್ಲದೆ ನಾನೊಬ್ಬಳೇ ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಂಡಿದ್ದೇನೆಂಬ ಒಂಟಿ ಭಾವನೆಯನ್ನು ಹೊಡೆದೋಡಿಸಲು ನನಗೆ ಸಹಾಯ ಮಾಡಿತು.”
ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಬೈಬಲಿನ ಕುರಿತು ಕ್ರಮವಾದ ಕುಟುಂಬ ಚರ್ಚೆಗಳು ನಡೆಸಲ್ಪಡುತ್ತಿದ್ದಂತಹ ಒಂದು ವಾತಾವರಣದಲ್ಲಿ ಸಬ್ರೀನಾ ಬೆಳೆಸಲ್ಪಟ್ಟಳು. ವಾಸ್ತವದಲ್ಲಿ, ಅವರು ‘ತಮ್ಮದೇ ಆದ ಒಂದು ಧರ್ಮ’ವನ್ನು ರೂಪಿಸಿಕೊಂಡರು. ಬೇರೆ ಬೇರೆ ಧರ್ಮಗಳ ಸದಸ್ಯರೊಂದಿಗೆ ಸಹವಾಸ ಬೆಳೆಸಿ, ಅವರ ಧರ್ಮದ ಲೋಪದೋಷಗಳನ್ನು ಬಯಲುಪಡಿಸುವುದನ್ನು ಅವಳು ರೂಢಿಯಾಗಿ ಮಾಡಿಕೊಂಡಿದ್ದಳು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಅವಳಿಗೆ ಬೈಬಲ್ ಅಭ್ಯಾಸವನ್ನು ಮಾಡುವಂತೆ ಕೇಳಿಕೊಂಡಾಗ, ಅವಳು ಅದಕ್ಕೆ ಮನಃಪೂರ್ವಕವಾಗಿ ಒಪ್ಪಿಕೊಂಡಳು. ಇದು ಅವರ ನಂಬಿಕೆಗಳನ್ನು ತಪ್ಪೆಂದು ರುಜುಪಡಿಸುವ ಉದ್ದೇಶದಿಂದಲೇ ಆಗಿತ್ತು. ಅವಳು ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದ ವರೆಗೆ ಅಭ್ಯಾಸಮಾಡಿದ ಬಳಿಕ, ನಾನು ‘ನನ್ನ ಸ್ವಂತ ಧರ್ಮ’ವನ್ನು ಬಿಟ್ಟುಬಿಡುವೆನೇನೋ ಎಂದು ಭಯಪಟ್ಟೆ. ಇಷ್ಟರ ವರೆಗೆ ನಾನು ಅನೇಕ ಧರ್ಮಗಳನ್ನು ಸುಳ್ಳೆಂದು ರುಜುಪಡಿಸಿದ್ದೆ, ಆದರೆ ಈ ಬಾರಿ ಹಾಗೆ ಮಾಡಲಾಗಲಿಲ್ಲ.”
ಸಬ್ರೀನಾಳ ಭಯವು, ಯೆಹೋವನ ಸಾಕ್ಷಿಗಳೊಂದಿಗಿನ ತನ್ನ ಬೈಬಲ್ ಅಭ್ಯಾಸವನ್ನು ನಿಲ್ಲಿಸುವಂತೆ ಮಾಡಿತು. ಆದರೆ ಆತ್ಮಿಕವಾಗಿ ಅವಳಿಗೆ, ಖಾಲಿಖಾಲಿಯಾದ ಅನಿಸಿಕೆಯಾಗತೊಡಗಿತು. ಅವಳು ಅಭ್ಯಾಸವನ್ನು ಪುನಃ ಆರಂಭಿಸಲು ನಿರ್ಧರಿಸಿದಳು, ಮತ್ತು ಕಾಲಕ್ರಮೇಣ ಬೈಬಲಿನಲ್ಲಿ ಕಂಡುಕೊಳ್ಳಲ್ಪಟ್ಟ ಸತ್ಯವನ್ನು ಅಂಗೀಕರಿಸಿದಳು. ತಾನು ಏನನ್ನು ಕಲಿಯುತ್ತಿದ್ದಳೋ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವ ಹಂತದ ವರೆಗೆ ಸಬ್ರೀನಾ ಪ್ರಗತಿಯನ್ನು ಮಾಡಿದಳು. ಸಾಕ್ಷಿಗಳು ಮನೆಯಿಂದ ಮನೆಗೆ ಸಾರಲು ಹೋಗುವಾಗ, ಅವರೊಂದಿಗೆ ತಾನೂ ಜೊತೆಗೂಡುತ್ತೇನೆಂದು ಅವಳು ಕೇಳಿಕೊಂಡಳು. ಸಬ್ರೀನಾ ವಿವರಿಸುವುದು: “ನನಗೆ ಯೆಹೋವನ ಸಾಕ್ಷಿಗಳೊಂದಿಗೆ ಸಾರಲು ಹೋಗುವ ಅನುಮತಿಯು ದೊರಕುವ ಮುಂಚೆ, ‘ನಿಜವಾಗಿಯೂ ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರಲು ಬಯಸುತ್ತೀಯೊ?’ ಎಂದು ನನ್ನನ್ನು ಕೇಳಲಾಯಿತು. ‘ಇಲ್ಲ!’ ಎಂದು ನಾನು ಉತ್ತರಿಸಿದೆ. ಪುನಃ ನನಗೆ ತುಂಬ ಭಯವಾಯಿತು.” ಕೊನೆಯದಾಗಿ, ಸಬ್ರೀನಾ ಎಲ್ಲ ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಿ, ದೇವರ ಜನರನ್ನು ಹಾಗೂ ಅವರು ಬೈಬಲ್ ಮೂಲತತ್ವಗಳಿಗನುಸಾರ ಹೇಗೆ ಜೀವಿಸುತ್ತಾರೆಂಬುದನ್ನು ಗಮನಿಸಿ, ಅದು ನಿಜವಾಗಿಯೂ ಸತ್ಯ ಧರ್ಮವಾಗಿತ್ತು ಎಂಬ ನಿರ್ಧಾರಕ್ಕೆ ಬಂದಳು. ಅವಳು ದೀಕ್ಷಾಸ್ನಾನ ಪಡೆದುಕೊಂಡು, ಈಗ ಪೂರ್ಣಸಮಯದ ಸೌವಾರ್ತಿಕಳಾಗಿದ್ದಾಳೆ.
ಭಿನ್ನವಾದ ಬೋಧನೆಗಳು—ಏಕೆ?
‘ಬೇರೆ ಧರ್ಮಗಳ ಬೋಧನೆಗಳಿಗಿಂತ ಯೆಹೋವನ ಸಾಕ್ಷಿಗಳ ಬೋಧನೆಗಳು ಏಕೆ ಭಿನ್ನವಾಗಿವೆ?’ ಎಂದು ಯಾರಾದರೊಬ್ಬರು ಕೇಳಬಹುದು. ಸಾಕ್ಷಿಗಳು ಏನನ್ನು ನಂಬುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು, ಅವರು ಪ್ರಾಮಾಣಿಕರಾದ, ಶ್ರದ್ಧೆಯುಳ್ಳ ಬೈಬಲ್ ವಿದ್ಯಾರ್ಥಿಗಳೆಂದು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದು. ನೀವು ನಿಮ್ಮ ಸ್ವಂತ ಬೈಬಲುಗಳನ್ನು ತೆರೆದು, ಮೇಲೆ ತೋರಿಸಲ್ಪಟ್ಟಿರುವ ಅವರ ಮೂಲಭೂತ ನಂಬಿಕೆಗಳ ಸಾರಾಂಶದಲ್ಲಿರುವ ವಚನಗಳನ್ನು ನೀವೇಕೆ ನೋಡಬಾರದು?
ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೆ ಮತ್ತು ಬೈಬಲು ಬೋಧಿಸುವ ವಿಷಯವನ್ನು ಅವರು ಹೇಗೆ ಅನ್ವಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ, ಸತ್ಯವು ಒದಗಿಸುವ ಬಿಡುಗಡೆಯಿಂದ ನೀವು ಸಹ ಆಶೀರ್ವಾದಗಳನ್ನು ಪಡೆದುಕೊಳ್ಳಸಾಧ್ಯವಿದೆ. (ಯೋಹಾನ 17:17) ಸತ್ಯದ ಕುರಿತು ನೀವು ಭಯಪಡುವ ಅಗತ್ಯವಿಲ್ಲ. ಯೇಸುವಿನ ವಾಗ್ದಾನವನ್ನು ಜ್ಞಾಪಿಸಿಕೊಳ್ಳಿರಿ: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:32.
[ಪುಟ 6 ರಲ್ಲಿರುವ ಚೌಕ]
ಯೆಹೋವನ ಸಾಕ್ಷಿಗಳ ಕೆಲವು ಮೂಲಭೂತ ನಂಬಿಕೆಗಳು
◯ ಯೆಹೋವನು ಸರ್ವಶಕ್ತನಾದ ದೇವರಾಗಿದ್ದಾನೆ. ಬೈಬಲಿನ ಅತ್ಯಂತ ಪ್ರಾಚೀನ ಹಸ್ತಪ್ರತಿಗಳಲ್ಲಿ, ಆತನ ವೈಯಕ್ತಿಕ ಹೆಸರು 7,000ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತದೆ.—ಕೀರ್ತನೆ 83:18.
◯ ಯೇಸು ಕ್ರಿಸ್ತನು ದೇವರ ಪುತ್ರನಾಗಿದ್ದಾನೆ. ಅವನು ಮಾನವಕುಲಕ್ಕೋಸ್ಕರ ತನ್ನ ಜೀವವನ್ನು ಕೊಡಲಿಕ್ಕಾಗಿ ಭೂಮಿಗೆ ಬಂದನು. (ಯೋಹಾನ 3:16, 17) ಸುವಾರ್ತಾ ಪುಸ್ತಕಗಳಲ್ಲಿ ಕಂಡುಬರುವ ಯೇಸು ಕ್ರಿಸ್ತನ ಬೋಧನೆಗಳನ್ನು ಯೆಹೋವನ ಸಾಕ್ಷಿಗಳು ಅನುಸರಿಸುತ್ತಾರೆ.
◯ ಯೆಹೋವನ ಸಾಕ್ಷಿಗಳು ಎಂಬ ಹೆಸರು ಯೆಶಾಯ 43:10ರ ಮೇಲಾಧಾರಿತವಾಗಿದೆ. ಅದು ಹೀಗೆ ಹೇಳುತ್ತದೆ: “ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ.”
◯ “ಕರ್ತನ” ಪ್ರಾರ್ಥನೆಯಲ್ಲಿ ಜನರು ಯಾವ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಾರೋ, ಆ ರಾಜ್ಯವು ಒಂದು ಸ್ವರ್ಗೀಯ ಸರಕಾರವಾಗಿದೆ. ಅತಿ ಬೇಗನೆ ಅದು ಲೋಕದಲ್ಲಿರುವ ಕಷ್ಟಾನುಭವ ಹಾಗೂ ವೇದನೆಯನ್ನು ತೆಗೆದುಹಾಕುವುದು, ಮತ್ತು ಬೈಬಲು ವಾಗ್ದಾನಿಸುವ ಪ್ರಮೋದವನವನ್ನು ಸ್ಥಾಪಿಸುವುದು.—ಯೆಶಾಯ 9:6, 7; ದಾನಿಯೇಲ 2:44; ಮತ್ತಾಯ 6:9, 10; ಪ್ರಕಟನೆ 21:3, 4.
◯ ದೇವರ ಚಿತ್ತವನ್ನು ಮಾಡುವ ಪ್ರತಿಯೊಬ್ಬನಿಗೂ, ರಾಜ್ಯವು ತರುವ ಆಶೀರ್ವಾದಗಳನ್ನು ಶಾಶ್ವತವಾಗಿ ಅನುಭವಿಸುವ ಅವಕಾಶವಿದೆ.—ಯೋಹಾನ 17:3; 1 ಯೋಹಾನ 2:17.
◯ ಬೈಬಲು ಹೇಳುವ ವಿಷಯಕ್ಕನುಸಾರ ಕ್ರೈಸ್ತರು ತಮ್ಮ ನಡತೆಯನ್ನು ಬದಲಾಯಿಸಿಕೊಳ್ಳಬೇಕು. ಅವರು ಪ್ರಾಮಾಣಿಕರಾಗಿರಲು, ಶುದ್ಧವಾದ, ಸದ್ಗುಣಭರಿತ ಜೀವಿತವನ್ನು ನಡೆಸಲು, ಮತ್ತು ತಮ್ಮ ನೆರೆಯವರಿಗೆ ಪ್ರೀತಿಯನ್ನು ತೋರಿಸಲು ಪ್ರಯತ್ನಿಸಬೇಕು.—ಮತ್ತಾಯ 22:39; ಯೋಹಾನ 13:35; 1 ಕೊರಿಂಥ 6:9, 10.
[ಪುಟ 5 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು 200ಕ್ಕಿಂತಲೂ ಹೆಚ್ಚು ದೇಶಗಳಲ್ಲಿರುವ ಜನರಿಗೆ ಬೈಬಲ್ ಸತ್ಯತೆಯನ್ನು ಸಾರುತ್ತಾರೆ