ಯೆರೂಸಲೇಮ್—ಅದರಲ್ಲಿ ನೀವು ‘ಎಲ್ಲಾದಕ್ಕಿಂತ ಹೆಚ್ಚಾಗಿ ಆನಂದಪಡುತ್ತೀರೊ’?
“ಯೆರೂಸಲೇಮೇ, . . . ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.”—ಕೀರ್ತನೆ 137:6.
1. ದೇವರು ಆದುಕೊಂಡಿದ್ದ ನಗರದ ವಿಷಯವಾಗಿ, ಅನೇಕ ಯೆಹೂದಿ ದೇಶಭ್ರಷ್ಟರಿಗಿದ್ದ ಮನೋಭಾವವು ಏನಾಗಿತ್ತು?
ಮೊದಲ ಗುಂಪಿನ ಯೆಹೂದಿ ದೇಶಭ್ರಷ್ಟರು, ಸಾ.ಶ.ಪೂ. 537ರಲ್ಲಿ ಯೆರೂಸಲೇಮಿಗೆ ಹಿಂದಿರುಗಿದ್ದ ಸಮಯದಂದಿನಿಂದ ಸುಮಾರು ಏಳು ದಶಕಗಳು ಗತಿಸಿಹೋಗಿದ್ದವು. ದೇವರ ಆಲಯವನ್ನು ಕಟ್ಟಲಾಗಿತ್ತಾದರೂ, ನಗರವು ಇನ್ನೂ ಪಾಳುಬಿದ್ದಿತ್ತು. ಈ ಮಧ್ಯೆ, ದೇಶಭ್ರಷ್ಟರಲ್ಲಿ ಒಂದು ಹೊಸ ಸಂತತಿಯು ಹುಟ್ಟಿಕೊಂಡಿತ್ತು. ಅವರಲ್ಲಿ ಅನೇಕರಿಗೆ, “ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ ನನ್ನ ಬಲಗೈ ಮರೆತುಹೋಗಲಿ” ಎಂಬುದಾಗಿ ಹಾಡಿದ ಕೀರ್ತನೆಗಾರನಂತೆ ಅನಿಸಿತು. (ಕೀರ್ತನೆ 137:5) ಅವರಲ್ಲಿ ಕೆಲವರು ಯೆರೂಸಲೇಮನ್ನು ಕೇವಲ ನೆನಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದರು. ಅವರು ಅದರಲ್ಲಿ ‘ಎಲ್ಲಾದಕ್ಕಿಂತ ಹೆಚ್ಚಾಗಿ ಆನಂದಪಟ್ಟರು’ ಎಂಬುದನ್ನು ತಮ್ಮ ಕ್ರಿಯೆಗಳಿಂದ ತೋರಿಸಿಕೊಟ್ಟರು.—ಕೀರ್ತನೆ 137:6.
2. ಎಜ್ರನು ಯಾರಾಗಿದ್ದನು, ಮತ್ತು ಅವನು ಹೇಗೆ ಆಶೀರ್ವದಿಸಲ್ಪಟ್ಟನು?
2 ಉದಾಹರಣೆಗೆ, ಯಾಜಕನಾದ ಎಜ್ರನನ್ನು ಪರಿಗಣಿಸಿರಿ. ಅವನು ತನ್ನ ಸ್ವದೇಶಕ್ಕೆ ಹಿಂದಿರುಗುವ ಮೊದಲೇ, ಯೆರೂಸಲೇಮಿನಲ್ಲಿ ಕೇಂದ್ರೀಕೃತವಾಗಿದ್ದ ಶುದ್ಧಾರಾಧನೆಯನ್ನು ಹುರುಪಿನಿಂದ ಪ್ರವರ್ಧಿಸಿದ್ದನು. (ಎಜ್ರ 7:6, 10) ಅದಕ್ಕಾಗಿ ಎಜ್ರನು ಹೇರಳವಾಗಿ ಆಶೀರ್ವದಿಸಲ್ಪಟ್ಟನು. ದೇಶಭ್ರಷ್ಟರ ಮತ್ತೊಂದು ಗುಂಪನ್ನು ಯೆರೂಸಲೇಮಿಗೆ ನಡೆಸುವ ಅನುಮತಿಯನ್ನು ಪಾರಸೀಯ ರಾಜನು ಎಜ್ರನಿಗೆ ಕೊಡುವಂತೆ ಯೆಹೋವನು ಮಾಡಿದನು. ಅಲ್ಲದೆ, “ಯೆಹೋವನ ಆಲಯವನ್ನು ಶೋಭಿಸುವ”ದಕ್ಕಾಗಿ, ರಾಜನು ಅವರಿಗೆ ಬೆಳ್ಳಿಬಂಗಾರವನ್ನು ದೊಡ್ಡ ಪ್ರಮಾಣದಲ್ಲಿ ದಾನವಾಗಿ ನೀಡಿದನು.—ಎಜ್ರ 7:21-27.
3. ಯೆರೂಸಲೇಮಿನ ಕುರಿತು ನೆಹೆಮೀಯನು ಬಹಳ ಚಿಂತಿತನಾಗಿದ್ದನು ಎಂಬುದನ್ನು ಅವನು ಹೇಗೆ ರುಜುಪಡಿಸಿದನು?
3 ಸುಮಾರು 12 ವರ್ಷಗಳ ತರುವಾಯ, ನೆಹೆಮೀಯನೆಂಬ ಮತ್ತೊಬ್ಬ ಯೆಹೂದ್ಯನು ನಿರ್ಣಾಯಾತ್ಮಕವಾಗಿ ಕ್ರಿಯೆಗೈದನು. ಅವನು ಶೂಷನ್ನಲ್ಲಿದ್ದ ಪಾರಸೀಯ ಅರಮನೆಯಲ್ಲಿ ಸೇವೆಸಲ್ಲಿಸಿದನು. ಅವನು ರಾಜ ಅರ್ತಷಸ್ತನ ಪಾನಸೇವಕನೋಪಾದಿ ಒಂದು ಪ್ರತಿಷ್ಠೆಯ ಸ್ಥಾನದಲ್ಲಿದ್ದನು. ಆದರೂ, ನೆಹೆಮೀಯನು “ಆನಂದಪಡಲಿಕ್ಕಾಗಿದ್ದ ಮುಖ್ಯ ಕಾರಣ” ಅದೇ ಆಗಿರಲಿಲ್ಲ. ಬದಲಿಗೆ, ಅವನು ಹೋಗಿ ಯೆರೂಸಲೇಮನ್ನು ಪುನಃ ಕಟ್ಟಲು ಹಾತೊರೆದನು. ಅನೇಕ ತಿಂಗಳುಗಳ ಕಾಲ ನೆಹೆಮೀಯನು ಇದಕ್ಕಾಗಿ ಪ್ರಾರ್ಥಿಸಿದನು, ಮತ್ತು ಹಾಗೆ ಮಾಡಿದುದಕ್ಕಾಗಿ, ಯೆಹೋವ ದೇವರು ಅವನನ್ನು ಆಶೀರ್ವದಿಸಿದನು. ನೆಹೆಮೀಯನು ಯಾವುದರ ಕುರಿತು ಚಿಂತಿಸುತ್ತಿದ್ದನೆಂದು ಪಾರಸೀಯ ರಾಜನಿಗೆ ತಿಳಿದುಬಂದಾಗ, ಅವನು ಯೆರೂಸಲೇಮನ್ನು ಪುನಃ ಕಟ್ಟಲು ಅವನಿಗೆ ಮಿಲಿಟರಿ ಪಡೆಯನ್ನು ಮತ್ತು ಅನುಮತಿ ಪತ್ರಗಳನ್ನು ನೀಡಿದನು.—ನೆಹೆಮೀಯ 1:1–2:9.
4. ನಾವು ಆನಂದಪಡಬಹುದಾದ ಬೇರೆ ಯಾವುದೇ ಕಾರಣಕ್ಕಿಂತಲೂ ಯೆಹೋವನ ಆರಾಧನೆಯು ಹೆಚ್ಚಿನದ್ದಾಗಿದೆ ಎಂಬುದನ್ನು ನಾವು ಹೇಗೆ ತೋರಿಸಸಾಧ್ಯವಿದೆ?
4 ಯೆರೂಸಲೇಮಿನಲ್ಲಿ ಕೇಂದ್ರೀಕೃತವಾಗಿದ್ದ ಯೆಹೋವನ ಆರಾಧನೆಯು ಬೇರೆ ಯಾವುದೇ ವಿಷಯಕ್ಕಿಂತಲೂ ಪ್ರಾಮುಖ್ಯವಾಗಿದ್ದು, ಅದು ‘ಎಲ್ಲಾದಕ್ಕಿಂತ ಹೆಚ್ಚಿನ ಆನಂದ’ವಾಗಿತ್ತು. ಅಂದರೆ, ಅವರು ಆನಂದಪಡಸಾಧ್ಯವಿರುವ ಬೇರೆ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿತ್ತೆಂಬುದನ್ನು, ಎಜ್ರ, ನೆಹೆಮೀಯ, ಮತ್ತು ಅವರೊಂದಿಗೆ ಸಹಕರಿಸುತ್ತಿದ್ದ ಅನೇಕ ಯೆಹೂದ್ಯರು ತೋರಿಸಿಕೊಟ್ಟರು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂದು ಯೆಹೋವ, ಆತನ ಆರಾಧನೆ, ಮತ್ತು ಆತ್ಮ ನಿರ್ದೇಶಿತ ಸಂಸ್ಥೆಯನ್ನು ಅದೇ ವಿಧದಲ್ಲಿ ವೀಕ್ಷಿಸುವಂತಹ ವ್ಯಕ್ತಿಗಳಿಗೆ ಇದು ಎಂತಹ ಉತ್ತೇಜನವಾಗಿದೆ! ನಿಮ್ಮ ವಿಷಯದಲ್ಲಿ ಇದು ಸತ್ಯವಾಗಿದೆಯೊ? ಆನಂದಪಡಲಿಕ್ಕಾಗಿರುವ ನಿಮ್ಮ ಅತ್ಯಂತ ದೊಡ್ಡ ಕಾರಣವು, ಯೆಹೋವನನ್ನು ಆತನ ಸಮರ್ಪಿತ ಜನರೊಂದಿಗೆ ಆರಾಧಿಸುವ ಸುಯೋಗವಾಗಿದೆ ಎಂಬುದನ್ನು ದೈವಿಕ ಕಾರ್ಯಗಳಲ್ಲಿನ ನಿಮ್ಮ ತಾಳ್ಮೆಯಿಂದ ನೀವು ತೋರಿಸುತ್ತೀರೊ? (2 ಪೇತ್ರ 3:11) ಆ ಸಂಬಂಧದಲ್ಲಿ ಹೆಚ್ಚಿನ ಉತ್ತೇಜನದೋಪಾದಿ, ಯೆರೂಸಲೇಮಿಗೆ ಎಜ್ರನು ಮಾಡಿದ ಪ್ರಯಾಣದ ಒಳ್ಳೆಯ ಫಲಿತಾಂಶಗಳನ್ನು ನಾವು ಪರಿಗಣಿಸೋಣ.
ಆಶೀರ್ವಾದಗಳು ಮತ್ತು ಜವಾಬ್ದಾರಿಗಳು
5. ಎಜ್ರನ ದಿನಗಳಲ್ಲಿ ಯೆಹೂದದ ನಿವಾಸಿಗಳು ಯಾವ ಸಮೃದ್ಧವಾದ ಆಶೀರ್ವಾದಗಳಲ್ಲಿ ಆನಂದಿಸಿದರು?
5 ಎಜ್ರನ ನೇತೃತ್ವದಲ್ಲಿ ದೇಶಭ್ರಷ್ಟತೆಯಿಂದ ಹಿಂದಿರುಗುತ್ತಿದ್ದ ಸುಮಾರು 6,000 ಜನರು, ಯೆಹೋವನ ಆಲಯಕ್ಕಾಗಿ ಬೆಳ್ಳಿಬಂಗಾರದ ದಾನಗಳನ್ನು ತಂದರು. ಸದ್ಯದ ಬೆಲೆಗನುಸಾರ ಅದು ಸುಮಾರು 140 ಕೋಟಿ ರೂಪಾಯಿಗಳಿಗೆ ಸಮನಾಗಿತ್ತು. ದೇಶಭ್ರಷ್ಟರ ಮೊದಲನೆಯ ಗುಂಪು ತರಸಾಧ್ಯವಿದ್ದ ಬೆಳ್ಳಿಬಂಗಾರಕ್ಕಿಂತಲೂ ಇದು ಏಳು ಪಟ್ಟು ಹೆಚ್ಚಾಗಿತ್ತು. ಈ ಎಲ್ಲ ಮಾನುಷ ಹಾಗೂ ಭೌತಿಕ ಬೆಂಬಲವನ್ನು ಪಡೆದುದಕ್ಕಾಗಿ, ಯೆರೂಸಲೇಮ್ ಮತ್ತು ಯೆಹೂದದ ನಿವಾಸಿಗಳು ಯೆಹೋವನಿಗೆ ಎಷ್ಟೊಂದು ಕೃತಜ್ಞರಾಗಿದ್ದಿರಬೇಕು! ಆದರೆ ದೇವರಿಂದ ಬರುವ ಸಮೃದ್ಧವಾದ ಆಶೀರ್ವಾದಗಳು ಜವಾಬ್ದಾರಿಯನ್ನೂ ತರುತ್ತವೆ.—ಲೂಕ 12:48.
6. ಯಾವ ಪರಿಸ್ಥಿತಿಯನ್ನು ಎಜ್ರನು ತನ್ನ ಸ್ವದೇಶದಲ್ಲಿ ಎದುರಿಸಿದನು, ಮತ್ತು ಅವನು ಹೇಗೆ ಪ್ರತಿಕ್ರಿಯಿಸಿದನು?
6 ಕೆಲವು ಯಾಜಕರು ಮತ್ತು ಹಿರಿಯರನ್ನು ಸೇರಿಸಿ, ಅನೇಕ ಯೆಹೂದ್ಯರು ವಿಧರ್ಮಿ ಸ್ತ್ರೀಯರನ್ನು ಮದುವೆಮಾಡಿಕೊಳ್ಳುವ ಮೂಲಕ, ದೇವರ ನಿಯಮವನ್ನು ಉಲ್ಲಂಘಿಸಿದ್ದರೆಂದು ಎಜ್ರನು ಬೇಗನೆ ಕಂಡುಕೊಂಡನು. (ಧರ್ಮೋಪದೇಶಕಾಂಡ 7:3, 4) ದೇವರ ನಿಯಮದ ಒಡಂಬಡಿಕೆಯ ಈ ಉಲ್ಲಂಘನೆಯ ವಿಷಯದಲ್ಲಿ ಅವನು ಬಹಳವಾಗಿ ಬೇಸರಪಟ್ಟನು. “ಈ ವರ್ತಮಾನವನ್ನು ಕೇಳಿದೊಡನೆ ನಾನು ಬಟ್ಟೆಮೇಲಂಗಿಗಳನ್ನು ಹರಿದುಕೊಂಡು . . . ಸ್ತಬ್ಧನಾಗಿ ಕೂತುಕೊಂಡೆನು.” (ಎಜ್ರ 9:3) ತರುವಾಯ, ಕಳವಳಗೊಂಡ ಇಸ್ರಾಯೇಲ್ಯರು ಕೂಡಿಬಂದಿದ್ದ ಸ್ಥಳದಲ್ಲಿ, ಎಜ್ರನು ಪ್ರಾರ್ಥನೆಯಲ್ಲಿ ಯೆಹೋವನಿಗೆ ತನ್ನ ಅಂತರಂಗವನ್ನು ತೋಡಿಕೊಂಡನು. ಗಟ್ಟಿಯಾಗಿ ಪ್ರಾರ್ಥಿಸುತ್ತಾ, ಎಜ್ರನು ಇಸ್ರಾಯೇಲಿನ ಗತ ಅವಿಧೇಯತೆಯನ್ನು ಮತ್ತು ಅವರು ಆ ದೇಶದ ವಿಧರ್ಮಿ ನಿವಾಸಿಗಳನ್ನು ಮದುವೆಮಾಡಿಕೊಳ್ಳುವಲ್ಲಿ ಏನಾಗುವುದೆಂಬುದರ ಕುರಿತು ದೇವರು ನೀಡಿರುವ ಎಚ್ಚರಿಕೆಯನ್ನು ಮರುಜ್ಞಾಪಿಸಿದನು. ಅವನು ಮುಕ್ತಾಯಗೊಳಿಸಿದ್ದು: “ಯೆಹೋವನೇ, ಇಸ್ರಾಯೇಲ್ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು.”—ಎಜ್ರ 9:15.
7. (ಎ) ತಪ್ಪುಮಾಡುವಿಕೆಯೊಂದಿಗೆ ವ್ಯವಹರಿಸಿದ ರೀತಿಯಿಂದ ಎಜ್ರನು ಯಾವ ಉತ್ತಮ ಮಾದರಿಯನ್ನಿಟ್ಟನು? (ಬಿ) ಎಜ್ರನ ದಿನದಲ್ಲಿದ್ದ ತಪ್ಪಿತಸ್ಥರು ಹೇಗೆ ಪ್ರತಿಕ್ರಿಯಿಸಿದರು?
7 ‘ನಾವು’ ಎಂಬ ಅಭಿವ್ಯಕ್ತಿಯನ್ನು ಎಜ್ರನು ಇಲ್ಲಿ ಬಳಸಿದನು. ಅವನು ವೈಯಕ್ತಿಕವಾಗಿ ತಪ್ಪಿತಸ್ಥನಾಗಿರದಿದ್ದರೂ, ತನ್ನನ್ನೂ ಸೇರಿಸಿಕೊಂಡನು. ಎಜ್ರನ ಅತಿಯಾದ ವ್ಯಥೆ ಹಾಗೂ ಅವನ ದೀನ ಪ್ರಾರ್ಥನೆಯು, ಜನರ ಹೃದಯಗಳನ್ನು ಪ್ರಭಾವಿಸಿ, ಪಶ್ಚಾತ್ತಾಪಕ್ಕೆ ಯೋಗ್ಯವಾದ ಕೆಲಸಗಳನ್ನು ಮಾಡುವಂತೆ ಅವರನ್ನು ಪ್ರಚೋದಿಸಿತು. ಅವರು ಸ್ವತಃ ಒಂದು ವೇದನಾಮಯ ಪರಿಹಾರವನ್ನು ಸೂಚಿಸಿದರು. ದೇವರ ನಿಯಮವನ್ನು ಉಲ್ಲಂಘಿಸಿದ್ದ ಎಲ್ಲರು, ತಮ್ಮ ವಿದೇಶಿ ಪತ್ನಿಯರನ್ನು, ಮತ್ತು ಅವರಿಗೆ ಹುಟ್ಟಿದ ಮಕ್ಕಳನ್ನು ತಮ್ಮ ಸ್ವದೇಶಗಳಿಗೆ ಕಳುಹಿಸಲು ತೀರ್ಮಾನಿಸಿದರು. ಎಜ್ರನು ಇದಕ್ಕೆ ಒಪ್ಪಿಕೊಂಡು, ತಪ್ಪಿತಸ್ಥರು ಅದಕ್ಕನುಗುಣವಾಗಿ ವರ್ತಿಸುವಂತೆ ಪ್ರೋತ್ಸಾಹಿಸಿದನು. ಪಾರಸೀಯ ರಾಜನು ಅವನಿಗೆ ಕೊಟ್ಟಿದ್ದ ಅಧಿಕಾರವನ್ನು ಉಪಯೋಗಿಸುತ್ತಾ, ನಿಯಮವನ್ನು ಉಲ್ಲಂಘಿಸುವ ಸಕಲರಿಗೆ ಮರಣದಂಡನೆ ವಿಧಿಸುವ ಇಲ್ಲವೆ ಅವರನ್ನು ಯೆರೂಸಲೇಮ್ ಮತ್ತು ಯೂದಾಯದಿಂದ ಗಡಿಪಾರುಮಾಡುವ ಅಧಿಕಾರವನ್ನು ಪಡೆದವನಾಗಿದ್ದನು. (ಎಜ್ರ 7:12, 26) ಆದರೆ ಅಂತಹ ಕ್ರಮಕೈಗೊಳ್ಳುವ ಸಂದರ್ಭ ಬರಲಿಲ್ಲವೆಂದು ತೋರುತ್ತದೆ. “ಕೂಡಿಬಂದವರೆಲ್ಲರೂ” ಹೇಳಿದ್ದು: “ನೀನು ಹೇಳಿದಂತೆಯೇ ಮಾಡುವದು ನಮ್ಮ ಕರ್ತವ್ಯ.” ಅವರು ಕೂಡಿಸಿ ಹೇಳಿದ್ದು: “ಈ ವಿಷಯದಲ್ಲಿ ನಮ್ಮ ಅಪರಾಧವು ದೊಡ್ಡದು.” (ಎಜ್ರ 10:11-13) ತಮ್ಮ ವಿದೇಶಿ ಪತ್ನಿಯರು ಹಾಗೂ ಅವರಿಗೆ ಹುಟ್ಟಿದ ಮಕ್ಕಳನ್ನು ಕಳುಹಿಸಿಬಿಡುವ ಮೂಲಕ, ಆ ನಿರ್ಧಾರದಂತೆ ನಡೆದುಕೊಂಡ 111 ಮಂದಿ ಪುರುಷರ ಹೆಸರುಗಳನ್ನು ಎಜ್ರ 10ನೆಯ ಅಧ್ಯಾಯವು ಪಟ್ಟಿಮಾಡುತ್ತದೆ.
8. ವಿದೇಶಿ ಪತ್ನಿಯರನ್ನು ಕಳುಹಿಸಿಬಿಡುವ ಉಗ್ರವಾದ ಕ್ರಿಯೆಯು, ಸಕಲ ಮಾನವಕುಲಕ್ಕೆ ಪ್ರಯೋಜನಕರವಾಗಿತ್ತು ಏಕೆ?
8 ಈ ಕ್ರಿಯೆಯು ಇಸ್ರಾಯೇಲಿಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ಪ್ರಯೋಜನಕರವಾಗಿತ್ತು. ವಿಷಯಗಳನ್ನು ಸರಿಪಡಿಸಲು ಏನೂ ಮಾಡದೆ ಇರುತ್ತಿದ್ದಲ್ಲಿ, ಇಸ್ರಾಯೇಲ್ಯರು ಸುತ್ತಮುತ್ತಲಿನ ರಾಷ್ಟ್ರದವರೊಂದಿಗೆ ಸೇರಿ ಬೆರೆಯಸಾಧ್ಯವಿತ್ತು. ಹಾಗೆ ಆಗುವಲ್ಲಿ, ಸಕಲ ಮಾನವಕುಲಕ್ಕೆ ಆಶೀರ್ವಾದವನ್ನು ತರಲಿದ್ದ ವಾಗ್ದತ್ತ ಸಂತಾನದ ವಂಶಾವಳಿಯು ಶುದ್ಧವಾಗಿರುತ್ತಿರಲಿಲ್ಲ. (ಆದಿಕಾಂಡ 3:15; 22:18) ವಾಗ್ದತ್ತ ಸಂತಾನವನ್ನು ಯೂದಾಯ ಕುಲದ ರಾಜ ದಾವೀದನ ವಂಶಜನಾಗಿ ಗುರುತಿಸುವುದು ತೀರ ಕಷ್ಟಕರವಾಗಿರುತ್ತಿತ್ತು. ಸುಮಾರು 12 ವರ್ಷಗಳ ಬಳಿಕ, “ಇಸ್ರಾಯೇಲ್ ಸಂತಾನದವರು ಎಲ್ಲಾ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿ”ಕೊಂಡಾಗ, ಈ ಅತ್ಯಾವಶ್ಯಕ ವಿಷಯಕ್ಕೆ ಪುನಃ ಗಮನಕೊಡಲಾಯಿತು.—ನೆಹೆಮೀಯ 9:1, 2; 10:29, 30.
9. ಅವಿಶ್ವಾಸಿಗಳನ್ನು ವಿವಾಹವಾಗಿರುವ ಕ್ರೈಸ್ತರಿಗೆ ಬೈಬಲು ಯಾವ ಉತ್ತಮ ಸಲಹೆಯನ್ನು ನೀಡುತ್ತದೆ?
9 ಈ ವೃತ್ತಾಂತದಿಂದ ಯೆಹೋವನ ಆಧುನಿಕ ದಿನದ ಸೇವಕರು ಯಾವ ಪಾಠವನ್ನು ಕಲಿತುಕೊಳ್ಳಬಲ್ಲರು? ಕ್ರೈಸ್ತರು ನಿಯಮದ ಒಡಂಬಡಿಕೆಯ ಕೆಳಗಿಲ್ಲ. (2 ಕೊರಿಂಥ 3:14) ಬದಲಿಗೆ, ಅವರು “ಕ್ರಿಸ್ತನ ನಿಯಮ”ಕ್ಕೆ ವಿಧೇಯರಾಗುತ್ತಾರೆ. (ಗಲಾತ್ಯ 6:2) ಹೀಗೆ, ಅವಿಶ್ವಾಸಿಯೊಬ್ಬಳನ್ನು ವಿವಾಹವಾಗಿರುವ ಕ್ರೈಸ್ತನು ಪೌಲನ ಸಲಹೆಗೆ ವಿಧೇಯನಾಗುತ್ತಾನೆ: “ಒಬ್ಬ ಸಹೋದರನಿಗೆ ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.” (1 ಕೊರಿಂಥ 7:12) ಅಲ್ಲದೆ, ಅವಿಶ್ವಾಸಿಗಳನ್ನು ವಿವಾಹವಾಗಿರುವ ಕ್ರೈಸ್ತರಿಗೆ, ತಮ್ಮ ವಿವಾಹವನ್ನು ಸಫಲಗೊಳಿಸುವಂತೆ ಪ್ರಯತ್ನಿಸುವ ಶಾಸ್ತ್ರೀಯ ಹಂಗಿದೆ. (1 ಪೇತ್ರ 3:1, 2) ಈ ಉತ್ತಮ ಸಲಹೆಗೆ ವಿಧೇಯರಾಗಿರುವುದರಿಂದ, ಅನೇಕ ವೇಳೆ ಅವಿಶ್ವಾಸಿ ಸಂಗಾತಿಗಳು ಪರಿವರ್ತನೆಗೊಂಡು, ಸತ್ಯಾರಾಧನೆಯನ್ನು ಸ್ವೀಕರಿಸಿದ್ದಾರೆ. ಅವರಲ್ಲಿ ಕೆಲವರು ದೀಕ್ಷಾಸ್ನಾನ ಪಡೆದುಕೊಂಡ ನಂಬಿಗಸ್ತ ಕ್ರೈಸ್ತರಾಗಿಯೂ ಪರಿಣಮಿಸಿದ್ದಾರೆ.—1 ಕೊರಿಂಥ 7:16.
10. ತಮ್ಮ ವಿದೇಶಿ ಪತ್ನಿಯರನ್ನು ಕಳುಹಿಸಿಬಿಟ್ಟ 111 ಮಂದಿ ಇಸ್ರಾಯೇಲ್ಯ ಪುರುಷರಿಂದ ಯಾವ ಪಾಠವನ್ನು ಕ್ರೈಸ್ತರು ಕಲಿತುಕೊಳ್ಳಬಲ್ಲರು?
10 ಹಾಗಿದ್ದರೂ, ತಮ್ಮ ವಿದೇಶಿ ಪತ್ನಿಯರನ್ನು ಕಳುಹಿಸಿಬಿಟ್ಟ ಇಸ್ರಾಯೇಲ್ಯರ ಉದಾಹರಣೆಯು, ಅವಿವಾಹಿತ ಕ್ರೈಸ್ತರಿಗೂ ಒಂದು ಅತ್ಯುತ್ಕೃಷ್ಟವಾದ ಪಾಠವನ್ನು ಕಲಿಸುತ್ತದೆ. ಇವರು ಅವಿಶ್ವಾಸಿಗಳಾಗಿರುವ ವಿರುದ್ಧ ಲಿಂಗದವರೊಂದಿಗೆ ಪ್ರೇಮ ವ್ಯವಹಾರವನ್ನು ಆರಂಭಿಸಬಾರದು. ಅಂತಹ ಸಂಬಂಧವನ್ನು ದೂರವಿರಿಸುವುದು ಕಷ್ಟಕರವೂ ವೇದನಾಮಯವೂ ಆಗಿರಬಹುದು. ಆದರೂ, ಸತತವಾಗಿ ದೇವರ ಆಶೀರ್ವಾದವನ್ನು ಒಬ್ಬನು ಪಡೆದುಕೊಳ್ಳಬೇಕಾದರೆ, ಅದೇ ಅತ್ಯುತ್ತಮ ಮಾರ್ಗಕ್ರಮವಾಗಿದೆ. “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ,” ಎಂಬುದಾಗಿ ಕ್ರೈಸ್ತರು ಆಜ್ಞಾಪಿಸಲ್ಪಟ್ಟಿದ್ದಾರೆ. (2 ಕೊರಿಂಥ 6:14) ವಿವಾಹ ಮಾಡಿಕೊಳ್ಳಲು ಬಯಸುವ ಯಾವನೇ ಕ್ರೈಸ್ತನು, ಒಬ್ಬ ಪ್ರಾಮಾಣಿಕ ಜೊತೆ ವಿಶ್ವಾಸಿಯನ್ನು ವಿವಾಹವಾಗಲು ಯೋಜಿಸಬೇಕು.—1 ಕೊರಿಂಥ 7:39.
11. ಇಸ್ರಾಯೇಲ್ಯ ಪುರುಷರಂತೆ, ಆನಂದಪಡಲಿಕ್ಕಾಗಿರುವ ನಮ್ಮ ಕಾರಣದ ವಿಷಯದಲ್ಲಿ ನಾವು ಹೇಗೆ ಪರೀಕ್ಷಿಸಲ್ಪಡಬಹುದು?
11 ಇನ್ನೂ ಅನೇಕ ವಿಧಗಳಲ್ಲಿಯೂ, ಕ್ರೈಸ್ತರು ಅಶಾಸ್ತ್ರೀಯವಾಗಿ ನಡೆಯುತ್ತಿದ್ದಾರೆ ಎಂಬುದನ್ನು ಅವರ ಗಮನಕ್ಕೆ ತರಲಾದಾಗ, ಅವರು ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಾರೆ. (ಗಲಾತ್ಯ 6:1) ದೇವರ ಸಂಸ್ಥೆಯ ಭಾಗವಾಗಿ ಉಳಿಯುವುದರಿಂದ ಒಬ್ಬ ವ್ಯಕ್ತಿಯನ್ನು ಅನರ್ಹನನ್ನಾಗಿ ಮಾಡುವ ಅಂತಹ ಅಶಾಸ್ತ್ರೀಯ ನಡತೆಯನ್ನು ಈ ಪತ್ರಿಕೆಯು ಆಗಿಂದಾಗ್ಗೆ ಗುರುತಿಸಿದೆ. ಉದಾಹರಣೆಗೆ 1973ರಲ್ಲಿ, ಅಮಲೌಷಧಗಳ ದುರುಪಯೋಗ ಮತ್ತು ತಂಬಾಕು ಸೇವನೆಯು ಗಂಭೀರವಾದ ಪಾಪಗಳಾಗಿವೆ ಎಂದು ಯೆಹೋವನ ಜನರು ಸಂಪೂರ್ಣವಾಗಿ ತಿಳಿದುಕೊಂಡರು. ಒಂದು ದೈವಿಕ ಜೀವನಕ್ರಮವನ್ನು ಬೆನ್ನಟ್ಟಲು, ನಾವು “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿ”ಕೊಳ್ಳಬೇಕು. (2 ಕೊರಿಂಥ 7:1) ಇಂತಹ ಕ್ರಮವನ್ನು ಕೈಗೊಳ್ಳುವುದು ಆರಂಭದಲ್ಲಿ ಬಹಳ ಕಷ್ಟಕರವಾಗಿದ್ದರೂ, ಅನೇಕ ಜನರು ಇಂತಹ ಬೈಬಲ್ ಸಲಹೆಯನ್ನು ಆಚರಣೆಗೆ ತಂದರು. ಮತ್ತು ದೇವರ ಶುದ್ಧ ಜನರ ಭಾಗವಾಗಿ ಉಳಿಯಲಿಕ್ಕಾಗಿ, ಅವರು ಕಷ್ಟಾನುಭವಿಸಲೂ ಸಿದ್ಧರಾಗಿದ್ದರು. ಲೈಂಗಿಕ ವಿಷಯಗಳು, ಉಡುಗೆ ತೊಡುಗೆ, ಕೇಶಾಲಂಕಾರ, ಉದ್ಯೋಗ, ಮನೋರಂಜನೆ ಮತ್ತು ಸಂಗೀತದ ಯೋಗ್ಯ ಆಯ್ಕೆಯ ಸಂಬಂಧದಲ್ಲೂ, ಸ್ಪಷ್ಟವಾದ ಶಾಸ್ತ್ರೀಯ ನಿರ್ದೇಶನವು ಕೊಡಲ್ಪಟ್ಟಿದೆ. ನಮ್ಮ ಗಮನಕ್ಕೆ ತರಲ್ಪಡುವ ಶಾಸ್ತ್ರೀಯ ತತ್ವಗಳು ಯಾವುವೇ ಆಗಿರಲಿ, ನಾವು ಆ 111 ಮಂದಿ ಇಸ್ರಾಯೇಲ್ಯ ಪುರುಷರಂತೆ “ಕ್ರಮಪಡಿಸಿ”ಕೊಳ್ಳಲು ಸಿದ್ಧರಾಗಿರೋಣ. (2 ಕೊರಿಂಥ 13:11) ಯೆಹೋವನನ್ನು ಆತನ ಪರಿಶುದ್ಧ ಜನರೊಂದಿಗೆ ಆರಾಧಿಸುವ ಸುಯೋಗವು, ‘ಎಲ್ಲಾದಕ್ಕಿಂತ ಹೆಚ್ಚಿನ ಆನಂದವಾಗಿದೆ’ ಎಂಬುದನ್ನು ತೋರಿಸುವುದು.
12. ಸಾ.ಶ.ಪೂ. 455ರಲ್ಲಿ ಏನು ಸಂಭವಿಸಿತು?
12 ವಿದೇಶಿ ಪತ್ನಿಯರನ್ನು ಒಳಗೊಂಡ ಘಟನೆಯನ್ನು ವರದಿಸಿದ ಬಳಿಕ, ಯೆರೂಸಲೇಮಿನಲ್ಲಿ ಮುಂದಿನ 12 ವರ್ಷಗಳ ವರೆಗೆ ಏನು ಸಂಭವಿಸಿತು ಎಂಬುದನ್ನು ಬೈಬಲು ನಮಗೆ ಹೇಳುವುದಿಲ್ಲ. ಅನೇಕ ವಿವಾಹಸಂಬಂಧಗಳು ರದ್ದುಗೊಳಿಸಲ್ಪಟ್ಟ ಕಾರಣ, ಇಸ್ರಾಯೇಲಿನ ನೆರೆಹೊರೆ ರಾಷ್ಟ್ರಗಳು ಹೆಚ್ಚು ವೈರತ್ವವನ್ನು ವ್ಯಕ್ತಪಡಿಸಿದರೆಂಬುದರಲ್ಲಿ ಸಂದೇಹವಿಲ್ಲ. ಸಾ.ಶ.ಪೂ. 455ರಲ್ಲಿ, ನೆಹೆಮೀಯನು ಮಿಲಿಟರಿ ಕಾವಲಿನೊಂದಿಗೆ ಯೆರೂಸಲೇಮಿಗೆ ಬಂದನು. ಅವನು ಯೆಹೂದದ ರಾಜ್ಯಪಾಲನಾಗಿ ನೇಮಿಸಲ್ಪಟ್ಟಿದ್ದನು, ಮತ್ತು ನಗರವನ್ನು ಪುನಃ ಕಟ್ಟುವಂತೆ ಅನುಮತಿ ನೀಡುವ ಪತ್ರಗಳನ್ನು ಅವನು ಪಾರಸೀಯ ರಾಜನಿಂದ ತಂದಿದ್ದನು.—ನೆಹೆಮೀಯ 2:9, 10: 5:14.
ಹೊಟ್ಟೆಕಿಚ್ಚಿನ ನೆರೆಯವರಿಂದ ಬಂದ ವಿರೋಧ
13. ಯಾವ ಮನೋಭಾವವನ್ನು ಯೆಹೂದ್ಯರ ಸುಳ್ಳು ಧಾರ್ಮಿಕ ನೆರೆಯವರು ಪ್ರದರ್ಶಿಸಿದರು, ಮತ್ತು ನೆಹೆಮೀಯನು ಹೇಗೆ ಪ್ರತಿಕ್ರಿಯಿಸಿದನು?
13 ಸುಳ್ಳು ಧಾರ್ಮಿಕ ನೆರೆಯವರು, ನೆಹೆಮೀಯನು ಅಲ್ಲಿಗೆ ಬಂದ ಕಾರಣವನ್ನು ವಿರೋಧಿಸಿದರು. “ಅರಸನಿಗೆ ವಿರೋಧವಾಗಿ ತಿರುಗಿಬೀಳಬೇಕೆಂದಿರುತ್ತೀರೋ” ಎಂದು ಕೇಳುವ ಮೂಲಕ ಅವರ ನಾಯಕರು ಅವನಿಗೆ ಬೆದರಿಕೆ ಒಡ್ಡಿದರು. ಯೆಹೋವನಲ್ಲಿ ನಂಬಿಕೆಯನ್ನು ತೋರ್ಪಡಿಸುತ್ತಾ, ನೆಹೆಮೀಯನು ಉತ್ತರಿಸಿದ್ದು: “ಪರಲೋಕದೇವರು ನಮಗೆ ಸಾಫಲ್ಯವನ್ನನುಗ್ರಹಿಸುವನು. ಆದದರಿಂದ ಆತನ ಸೇವಕರಾದ ನಾವು ಕಟ್ಟುವದಕ್ಕೆ ಮನಸ್ಸುಮಾಡಿದ್ದೇವೆ. ನಿಮಗಾದರೋ ಯೆರೂಸಲೇಮಿನಲ್ಲಿ ಪಾಲೂ ಹಕ್ಕೂ ಹೆಸರೂ ಇರುವದಿಲ್ಲ.” (ನೆಹೆಮೀಯ 2:19, 20) ಗೋಡೆಗಳ ದುರಸ್ತಿಕೆಲಸವು ಆರಂಭಿಸಿದಾಗ, ಆ ವೈರಿಗಳೇ ಅಪಹಾಸ್ಯ ಮಾಡಿದ್ದು: ‘ನಿತ್ರಾಣಿಗಳಾದ ಈ ಯೆಹೂದ್ಯರು ಮಾಡುವದೇನು? ಸುಟ್ಟುಹೋದ ಪಟ್ಟಣದ ಧೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸುವರೇನೋ? ಅವರು ಕಟ್ಟುವ ಕಲ್ಲುಗೋಡೆಯ ಮೇಲೆ ನರಿ ಹಾರಿದರೆ ಅದು ಬಿದ್ದುಹೋಗುವದು.’ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಬದಲಿಗೆ, ನೆಹೆಮೀಯನು ಪ್ರಾರ್ಥಿಸಿದ್ದು: “ನಮ್ಮ ದೇವರೇ ಕೇಳು; ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು.” (ನೆಹೆಮೀಯ 4:2-4) ನೆಹೆಮೀಯನು ಸತತವಾಗಿ ಯೆಹೋವನ ಮೇಲೆ ಆತುಕೊಳ್ಳುವ ಈ ಉತ್ತಮ ಮಾದರಿಯನ್ನಿಟ್ಟನು.—ನೆಹೆಮೀಯ 6:14; 13:14.
14, 15. (ಎ) ವೈರಿ ಹಿಂಸಾಚಾರದ ಬೆದರಿಕೆಯನ್ನು ನೆಹೆಮೀಯನು ಹೇಗೆ ನಿರ್ವಹಿಸಿದನು? (ಬಿ) ತೀವ್ರವಾದ ವಿರೋಧದ ಎದುರಿನಲ್ಲೂ ಯೆಹೋವನ ಸಾಕ್ಷಿಗಳು ತಮ್ಮ ಆತ್ಮಿಕ ಕಟ್ಟುವಿಕೆಯ ಕೆಲಸದಲ್ಲಿ ಮುಂದುವರಿಯಲು ಹೇಗೆ ಶಕ್ತರಾಗಿದ್ದಾರೆ?
14 ಪ್ರಮುಖವಾದ ಸಾರುವ ನೇಮಕವನ್ನು ನೆರವೇರಿಸಲಿಕ್ಕಾಗಿ, ಇಂದು ಯೆಹೋವನ ಸಾಕ್ಷಿಗಳು ಕೂಡ ದೇವರ ಮೇಲೆ ಆತುಕೊಂಡಿರುತ್ತಾರೆ. ಗೇಲಿಮಾಡುವ ಮೂಲಕ ಈ ಕೆಲಸವನ್ನು ತಡೆಯಲು ವಿರೋಧಿಗಳು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ, ರಾಜ್ಯ ಸಂದೇಶದಲ್ಲಿ ಆಸಕ್ತರಾಗಿರುವ ಜನರು, ಅಪಹಾಸ್ಯವನ್ನು ತಾಳಿಕೊಳ್ಳಲು ಅಸಮರ್ಥರಾದ ಕಾರಣ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಪಹಾಸ್ಯವು ಅಸಫಲವಾಗುವುದಾದರೆ, ವಿರೋಧಿಗಳು ಕೋಪಗೊಂಡು, ಹಿಂಸಾಚಾರದ ಬೆದರಿಕೆಗಳನ್ನು ಒಡ್ಡಬಹುದು. ಯೆರೂಸಲೇಮಿನ ಗೋಡೆಗಳನ್ನು ಕಟ್ಟುತ್ತಿದ್ದವರು ಇದನ್ನೇ ಅನುಭವಿಸಿದರು. ಆದರೆ ನೆಹೆಮೀಯನು ಎದೆಗುಂದಲಿಲ್ಲ. ಬದಲಿಗೆ ಅವನು ಕಟ್ಟುವವರನ್ನು ವೈರಿಗಳ ಆಕ್ರಮಣದ ವಿರುದ್ಧ ಶಸ್ತ್ರಸಜ್ಜಿತರನ್ನಾಗಿ ಮಾಡಿ, ಹೀಗೆ ಹೇಳುವ ಮೂಲಕ ಅವರ ನಂಬಿಕೆಯನ್ನು ಬಲಪಡಿಸಿದನು: “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗೋಸ್ಕರವೂ ಗಂಡು ಹೆಣ್ಣು ಮಕ್ಕಳಿಗೋಸ್ಕರವೂ ಹೆಂಡತಿಯರಿಗೋಸ್ಕರವೂ ನಿಮ್ಮ ಮನೆಗಳಿಗೋಸ್ಕರವೂ ಕಾದಾಡಿರಿ.”—ನೆಹೆಮೀಯ 4:13, 14.
15 ನೆಹೆಮೀಯನ ದಿನಗಳಲ್ಲಾದಂತೆಯೇ, ತೀವ್ರವಾದ ವಿರೋಧದ ಎದುರಿನಲ್ಲೂ ಯೆಹೋವನ ಸಾಕ್ಷಿಗಳು ತಮ್ಮ ಆತ್ಮಿಕ ಕಟ್ಟುವ ಕೆಲಸವನ್ನು ಮುಂದುವರಿಸುವಂತೆ ಸುಸಜ್ಜಿತಗೊಳಿಸಲ್ಪಟ್ಟಿದ್ದಾರೆ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು, ನಂಬಿಕೆಯನ್ನು ಬಲಪಡಿಸುವ ಆತ್ಮಿಕ ಆಹಾರವನ್ನು ಒದಗಿಸಿದೆ. ಇದು, ಕೆಲಸವು ನಿಷೇಧಿಸಲ್ಪಟ್ಟಿರುವ ಸ್ಥಳಗಳಲ್ಲಿಯೂ ದೇವರ ಜನರು ಫಲಪ್ರದರಾಗಿರುವಂತೆ ಮಾಡಿದೆ. (ಮತ್ತಾಯ 24:45) ಫಲಸ್ವರೂಪವಾಗಿ, ಯೆಹೋವನು ಭೂಮಿಯಾದ್ಯಂತ ಅಭಿವೃದ್ಧಿಯನ್ನು ನೀಡುವ ಮೂಲಕ ತನ್ನ ಜನರನ್ನು ಸತತವಾಗಿ ಆಶೀರ್ವದಿಸಿದ್ದಾನೆ.—ಯೆಶಾಯ 60:22.
ಆಂತರಿಕ ಸಮಸ್ಯೆಗಳು
16. ಯೆರೂಸಲೇಮಿನ ಗೋಡೆಯನ್ನು ಕಟ್ಟುತ್ತಿದ್ದವರ ಮನೋಭಾವವನ್ನು ಯಾವ ಆಂತರಿಕ ಸಮಸ್ಯೆಗಳು ಬೆದರಿಸಿದವು?
16 ಯೆರೂಸಲೇಮಿನ ಗೋಡೆಗಳ ಪುನರ್ಕಟ್ಟುವಿಕೆಯು ಮುಂದುವರಿದಂತೆ ಮತ್ತು ಗೋಡೆಯು ಎತ್ತರವಾದಂತೆ, ಕೆಲಸವು ಹೆಚ್ಚು ಕಷ್ಟಕರವಾಯಿತು. ಆ ಸಮಯದಲ್ಲೇ, ಹೆಣಗಾಡುತ್ತಿದ್ದ ಕಟ್ಟುವವರ ಮನೋಭಾವವನ್ನು ಕುಂದಿಸಿದ ಒಂದು ಸಮಸ್ಯೆಯು ಗೋಚರವಾಯಿತು. ಆಹಾರ ಅಭಾವಗಳ ಕಾರಣ, ತಮ್ಮ ಕುಟುಂಬಗಳಿಗೆ ಆಹಾರವನ್ನು ಒದಗಿಸುವುದು ಹಾಗೂ ಪಾರಸೀಯ ಸರಕಾರಕ್ಕೆ ತೆರಿಗೆಗಳನ್ನು ಸಲ್ಲಿಸುವುದು ಕೆಲವು ಯೆಹೂದ್ಯರಿಗೆ ಕಷ್ಟಕರವಾಗಿತ್ತು. ಶ್ರೀಮಂತ ಯೆಹೂದ್ಯರು ಅವರಿಗೆ ಆಹಾರ ಮತ್ತು ಹಣವನ್ನು ಎರವಲಾಗಿ ಕೊಟ್ಟರು. ಆದರೆ, ದೇವರ ನಿಯಮಕ್ಕೆ ವಿರುದ್ಧವಾಗಿ, ಬಡವರಾದ ಇಸ್ರಾಯೇಲ್ಯರು ಹಣವನ್ನು ಬಡ್ಡಿಯ ಸಮೇತ ಹಿಂದಿರುಗಿಸುವರೆಂಬುದನ್ನು ದೃಢಪಡಿಸಲು, ತಮ್ಮ ಜಮೀನು ಹಾಗೂ ಮಕ್ಕಳನ್ನು ಅಡವಿಡಬೇಕಿತ್ತು. (ವಿಮೋಚನಕಾಂಡ 22:25; ಯಾಜಕಕಾಂಡ 25:35-37; ನೆಹೆಮೀಯ 4:6, 10; 5:1-5) ಈಗ ಸಾಲಗಾರರು, ಇಸ್ರಾಯೇಲ್ಯರ ಜಮೀನುಗಳನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಒಡ್ಡಿ, ಅವರ ಮಕ್ಕಳನ್ನು ಗುಲಾಮರೋಪಾದಿ ಮಾರುವಂತೆ ಒತ್ತಾಯಿಸುತ್ತಿದ್ದರು. ಈ ಪ್ರೀತಿಪೂರ್ಣವಲ್ಲದ, ಪ್ರಾಪಂಚಿಕ ಮನೋಭಾವದಿಂದ ನೆಹೆಮೀಯನು ಕೋಪಗೊಂಡನು. ಯೆರೂಸಲೇಮಿನ ಗೋಡೆಯ ಪುನರ್ಕಟ್ಟುವಿಕೆಯ ಮೇಲೆ ಯೆಹೋವನ ಹೇರಳವಾದ ಆಶೀರ್ವಾದವನ್ನು ಖಚಿತಪಡಿಸಿಕೊಳ್ಳಲು ಅವನು ಬೇಗನೆ ಕಾರ್ಯವೆಸಗಿದನು.
17. ನಿರ್ಮಾಣಕಾರ್ಯದ ಮೇಲೆ ಯೆಹೋವನ ಹೇರಳವಾದ ಆಶೀರ್ವಾದವನ್ನು ಖಚಿತಪಡಿಸಲು ನೆಹೆಮೀಯನು ಏನು ಮಾಡಿದನು, ಮತ್ತು ಯಾವ ಪರಿಣಾಮದೊಂದಿಗೆ?
17 ಒಂದು “ಮಹಾಸಭೆಯನ್ನು” ಕೂಡಿಸಲಾಯಿತು, ಮತ್ತು ಶ್ರೀಮಂತ ಇಸ್ರಾಯೇಲ್ಯರು ಏನನ್ನು ಮಾಡಿದ್ದರೊ ಅದು ಯೆಹೋವನನ್ನು ಅಪ್ರಸನ್ನಗೊಳಿಸಿತ್ತು ಎಂಬುದನ್ನು ನೆಹೆಮೀಯನು ಸ್ಪಷ್ಟವಾಗಿ ತೋರಿಸಿಕೊಟ್ಟನು. ತದನಂತರ ಅವನು, ಕೆಲವು ಯಾಜಕರನ್ನು ಒಳಗೊಂಡಿದ್ದ ತಪ್ಪಿತಸ್ಥರಿಗೆ ಮನವಿಮಾಡಿಕೊಂಡನು. ತಾವು ಪಡೆದುಕೊಂಡಿದ್ದ ಬಡ್ಡಿಯನ್ನು ಹಿಂದಿರುಗಿಸುವಂತೆ ಮತ್ತು ಬಡ್ಡಿಯನ್ನು ಕೊಡಲು ಅಸಮರ್ಥರಾಗಿದ್ದವರಿಂದ ಅನ್ಯಾಯವಾಗಿ ತೆಗೆದುಕೊಂಡಿದ್ದ ಜಮೀನುಗಳನ್ನು ಹಿಂದಿರುಗಿಸುವಂತೆ ಅವನು ವಿನಂತಿಸಿದನು. ಪ್ರಶಂಸನೀಯವಾಗಿ, ತಪ್ಪಿತಸ್ಥರು ಹೀಗೆ ಹೇಳಿದರು: “ಹಿಂದಕ್ಕೆ ಕೊಡುತ್ತೇವೆ; ಅವರಿಂದ ಏನೂ ಕೇಳುವದಿಲ್ಲ, ನೀನು ಹೇಳಿದಂತೆಯೇ ಮಾಡುತ್ತೇವೆ.” ಇವು ಪೊಳ್ಳುಮಾತುಗಳಾಗಿರಲಿಲ್ಲ, ಏಕೆಂದರೆ ಬೈಬಲು ವರದಿಸುವುದೇನೆಂದರೆ, “ಸಭೆಯವರೆಲ್ಲಾ . . . [ನೆಹೆಮೀಯನಿಗೆ] ಕೊಟ್ಟ ಮಾತನ್ನು ಕೈಕೊಂಡರು.” ಮತ್ತು ಸಭೆಯು ಯೆಹೋವನನ್ನು ಕೊಂಡಾಡಿತು.—ನೆಹೆಮೀಯ 5:7-13.
18. ಯಾವ ಮನೋಭಾವಕ್ಕಾಗಿ ಯೆಹೋವನ ಸಾಕ್ಷಿಗಳು ಪ್ರಸಿದ್ಧರಾಗಿದ್ದಾರೆ?
18 ನಮ್ಮ ದಿನದ ಕುರಿತಾಗಿ ಏನು? ವಿಪತ್ತಿಗೊಳಗಾಗಿರುವ ಜೊತೆ ಸಾಕ್ಷಿಗಳು ಹಾಗೂ ಇತರರನ್ನು ಸ್ವಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಬದಲಿಗೆ, ಯೆಹೋವನ ಸಾಕ್ಷಿಗಳು ಅಂತಹವರ ಕಡೆಗೆ ಉದಾರಭಾವವನ್ನು ತೋರಿಸಿದ್ದಾರೆ. ನೆಹೆಮೀಯನ ದಿನಗಳಲ್ಲಾದಂತೆ, ಇದು ಯೆಹೋವನಿಗೆ ಅನೇಕ ಕೃತಜ್ಞತಾಭರಿತ ಸ್ತುತಿಗಳಲ್ಲಿ ಫಲಿಸಿದೆ. ಆದರೆ ಅದೇ ಸಮಯದಲ್ಲಿ, ವ್ಯಾಪಾರದ ವಿಷಯಗಳ ಕುರಿತು ಮತ್ತು ಸ್ವಲಾಭಕ್ಕಾಗಿ ಇತರರನ್ನು ಸುಲಿಗೆಮಾಡುವ ವಿಷಯದಿಂದ ದೂರವಿರಿಸುವ ಅಗತ್ಯದ ಕುರಿತು, ಶಾಸ್ತ್ರೀಯ ಸಲಹೆಯನ್ನು ನೀಡುವುದು ಅಗತ್ಯವೆಂಬುದನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಕಂಡುಕೊಂಡಿದೆ. ಕೆಲವು ದೇಶಗಳಲ್ಲಿ ಮಿತಿಮೀರಿದ ವಧೂದಕ್ಷಿಣೆಯನ್ನು ಕೇಳುವುದು ಸರ್ವಸಾಧಾರಣ ವಿಷಯವಾಗಿದೆ, ಆದರೆ ಲೋಭಿಗಳೂ ಸುಲಿಗೆಕೋರರೂ ದೇವರ ರಾಜ್ಯವನ್ನು ಪ್ರವೇಶಿಸರೆಂದು ಬೈಬಲು ಸ್ಪಷ್ಟವಾಗಿ ಎಚ್ಚರಿಸುತ್ತದೆ. (1 ಕೊರಿಂಥ 6:9, 10) ಇಂತಹ ಸಲಹೆಗೆ ಹೆಚ್ಚಿನ ಕ್ರೈಸ್ತರು ತೋರ್ಪಡಿಸುವ ಉತ್ತಮ ಪ್ರತಿಕ್ರಿಯೆಯು, ತಮ್ಮ ಬಡ ಸಹೋದರರನ್ನು ಶೋಷಿಸುವುದರಲ್ಲಿರುವ ಪಾಪವನ್ನು ಮನಗಂಡ ಆ ಯೆಹೂದ್ಯರನ್ನು ಮನಸ್ಸಿಗೆ ತರುತ್ತದೆ.
ಯೆರೂಸಲೇಮಿನ ಗೋಡೆಯ ಕಟ್ಟುವಿಕೆಯು ಪೂರ್ಣಗೊಂಡದ್ದು
19, 20. (ಎ) ಯೆರೂಸಲೇಮಿನ ನಿರ್ಮಾಣಕಾರ್ಯದ ಪೂರ್ತಿಯು ಧಾರ್ಮಿಕ ವಿರೋಧಿಗಳ ಮೇಲೆ ಯಾವ ಪ್ರಭಾವವನ್ನು ಬೀರಿತು? (ಬಿ) ಯಾವ ವಿಜಯವನ್ನು ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ ಅನುಭವಿಸಿದ್ದಾರೆ?
19 ಈ ಎಲ್ಲ ವಿರೋಧದ ಎದುರಿನಲ್ಲೂ, ಯೆರೂಸಲೇಮಿನ ಗೋಡೆಯು 52 ದಿನಗಳಲ್ಲಿ ಪೂರ್ಣಗೊಂಡಿತು. ಇದು ವಿರೋಧಿಗಳ ಮೇಲೆ ಯಾವ ಪ್ರಭಾವವನ್ನು ಬೀರಿತು? ನೆಹೆಮೀಯನು ಹೇಳಿದ್ದು: “ಈ ಸುದ್ದಿಯು ನಮ್ಮ ವಿರೋಧಿಗಳಾದ ಸುತ್ತಣ ಎಲ್ಲಾ ಜನಾಂಗಗಳವರಿಗೆ ಮುಟ್ಟಿದಾಗ ಅವರು ಭಯವುಳ್ಳವರಾಗಿ ಸೊಕ್ಕನ್ನು ಬಿಟ್ಟು ಬಹಳ ಮನಗುಂದಿದವರಾದರು. ಈ ಕಾರ್ಯವು ನಮ್ಮ ದೇವರಿಂದಲೇ ಪೂರೈಸಿತು ಎಂದು ಅವರಿಗೆ ಮಂದಟ್ಟಾಯಿತು.”—ನೆಹೆಮೀಯ 6:16.
20 ಇಂದು ದೇವರ ಕೆಲಸಕ್ಕಿರುವ ವಿರೋಧವು ಹಲವಾರು ವಿಧಗಳಲ್ಲಿ ಮತ್ತು ಸ್ಥಳಗಳಲ್ಲಿ ಮುಂದುವರಿಯುತ್ತದೆ. ಹಾಗಿದ್ದರೂ, ಯೆಹೋವನ ಸಾಕ್ಷಿಗಳನ್ನು ವಿರೋಧಿಸುವ ನಿರರ್ಥಕತೆಯನ್ನು ಲಕ್ಷಾಂತರ ಜನರು ನೋಡಿದ್ದಾರೆ. ಉದಾಹರಣೆಗೆ, ನಾಸಿ ಜರ್ಮನಿ, ಪೂರ್ವ ಯೂರೋಪ್ ಮತ್ತು ಆಫ್ರಿಕದ ಅನೇಕ ದೇಶಗಳಲ್ಲಿನ ಸಾರುವ ಕೆಲಸವನ್ನು ನಿಲ್ಲಿಸಲು ಮಾಡಲಾದ ಹಿಂದಿನ ಪ್ರಯತ್ನಗಳನ್ನು ಪರಿಗಣಿಸಿರಿ. ಅಂತಹ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ, ಮತ್ತು ‘ನಮ್ಮ ಕೆಲಸವು ದೇವರಿಂದ ನಡೆಸಲ್ಪಡುತ್ತಿದೆ’ ಎಂಬುದನ್ನು ಅನೇಕ ಜನರು ಈಗ ಅಂಗೀಕರಿಸುತ್ತಾರೆ. ಇಂತಹ ದೇಶಗಳಲ್ಲಿ ಯೆಹೋವನ ಆರಾಧನೆಯಲ್ಲಿ ‘ಎಲ್ಲಾದಕ್ಕಿಂತ ಹೆಚ್ಚಾಗಿ ಆನಂದಪಟ್ಟ’ ನಂಬಿಗಸ್ತ ಹಳಬರಿಗೆ ಇದು ಎಂತಹ ಪ್ರತಿಫಲವಾಗಿ ಪರಿಣಮಿಸಿದೆ!
21. ಮುಂದಿನ ಲೇಖನದಲ್ಲಿ ಯಾವ ಪ್ರಮುಖ ಘಟನೆಗಳು ಪರಿಗಣಿಸಲ್ಪಡುವವು?
21 ಮುಂದಿನ ಲೇಖನದಲ್ಲಿ, ಪುನಃ ಕಟ್ಟಲ್ಪಟ್ಟ ಯೆರೂಸಲೇಮಿನ ಗೋಡೆಯ ಆನಂದಭರಿತ ಪ್ರತಿಷ್ಠಾಪನೆಗೆ ನಡೆಸಿದ ಪ್ರಮುಖ ಘಟನೆಗಳನ್ನು ನಾವು ಪುನರ್ವಿಮರ್ಶಿಸುವೆವು. ಎಲ್ಲ ಮಾನವಕುಲದ ಪ್ರಯೋಜನಕ್ಕಾಗಿ ಹೆಚ್ಚು ಮಹೋನ್ನತವಾದ ಪಟ್ಟಣದ ಪೂರ್ತಿಯು ಹೇಗೆ ನಿಕಟವಾಗಿದೆ ಎಂಬುದನ್ನೂ ನಾವು ಪರಿಗಣಿಸುವೆವು.
ನಿಮಗೆ ನೆನಪಿದೆಯೊ?
◻ ಎಜ್ರನು ಮತ್ತು ಇತರರು ಯೆರೂಸಲೇಮಿನ ವಿಷಯವಾಗಿ ಹೇಗೆ ಆನಂದಿಸಿದರು?
◻ ಯಾವ ತಪ್ಪುಗಳನ್ನು ಯೆಹೂದ್ಯರು ಸರಿಪಡಿಸಿಕೊಳ್ಳುವಂತೆ ಎಜ್ರ ಮತ್ತು ನೆಹೆಮೀಯರು ಸಹಾಯಮಾಡಿದರು?
◻ ಎಜ್ರ ಮತ್ತು ನೆಹೆಮೀಯರನ್ನು ಒಳಗೊಂಡ ವೃತ್ತಾಂತಗಳಿಂದ ನೀವು ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?
[ಪುಟ 15 ರಲ್ಲಿರುವ ಚಿತ್ರ]
ನೆಹೆಮೀಯನಿಗೆ, ಶೂಷನ್ನಲ್ಲಿದ್ದ ಅವನ ಪ್ರತಿಷ್ಠೆಯ ಕೆಲಸವಲ್ಲ, ಬದಲಿಗೆ ಯೆರೂಸಲೇಮ್ ಅವನ ಮುಖ್ಯ ಚಿಂತೆಯಾಗಿತ್ತು
[ಪುಟ 16,17 ರಲ್ಲಿರುವಚಿತ್ರಗಳು]
ನೆಹೆಮೀಯನಂತೆ, ಎಲ್ಲಕ್ಕಿಂತಲೂ ಪ್ರಾಮುಖ್ಯವಾದ ನಮ್ಮ ಸಾರುವ ನೇಮಕದಲ್ಲಿ ಮುಂದುವರಿಯುವಂತೆ ಬೇಕಾದ ಯೆಹೋವನ ಮಾರ್ಗದರ್ಶನ ಹಾಗೂ ಬಲಕ್ಕಾಗಿ ನಾವು ಪ್ರಾರ್ಥಿಸತಕ್ಕದ್ದು