ಹಿಂಸಾಚಾರ—ಶೀಘ್ರದಲ್ಲೇ ಸದಾಕಾಲಕ್ಕಾಗಿ ಕೊನೆಗೊಳ್ಳಲಿದೆ!
“ಹಿಂಸಾಚಾರವು ರಾಷ್ಟ್ರವನ್ನು ಗಂಡಾಂತರಕ್ಕೊಳಗಾಗಿಸುತ್ತದೆ”—ದ ನ್ಯೂ ಯಾರ್ಕ್ ಟೈಮ್ಸ್, ಅಮೆರಿಕ.
“ಮನೆಯಲ್ಲಿ ಹಿಂಸಾಚಾರ”—ಊ ಗ್ಲೋಬೂ, ಬ್ರಸಿಲ್.
“ಲೋಕದ ಸ್ತ್ರೀಯರನ್ನು ಹಿಂಸಾಚಾರವು ಮರೆಯಲ್ಲಿ ಬೆನ್ನಟ್ಟುತ್ತದೆ”—ದ ಗ್ಲೋಬ್ ಆ್ಯಂಡ್ ಮೇಲ್, ಕೆನಡ.
ಉತ್ತರ ಹಾಗೂ ದಕ್ಷಿಣ ಅಮೆರಿಕದ ವಾರ್ತಾಪತ್ರಿಕೆಗಳಲ್ಲಿ ಕಾಣಿಸಿಕೊಂಡ ಈ ತಲೆಬರಹಗಳು, ಕ್ಷೋಭೆಗೊಳಿಸುವಂತಹ ಲೋಕವ್ಯಾಪಕ ಪ್ರವೃತ್ತಿಯನ್ನು ತೋರ್ಪಡಿಸುತ್ತವೆ. ಇದನ್ನೇ ಲೋಕಾರೋಗ್ಯ ಸಂಸ್ಥೆಯು ಈ ರೀತಿಯಲ್ಲಿ ವರ್ಣಿಸಿದೆ: “ಇತ್ತೀಚಿನ ದಶಕಗಳಲ್ಲಿ ಎಲ್ಲ ರೀತಿಯ ಹಿಂಸಾಚಾರವು ಏಕಾಏಕಿಯಾಗಿ ಹೆಚ್ಚಿದೆ.”
ಕೆಲವೊಂದು ವಾಸ್ತವವಾದ ಅಂಕಿಅಂಶಗಳನ್ನು ಪರಿಗಣಿಸಿರಿ:
ನರಹತ್ಯೆಗಳು. ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ಕ್ಷೇತ್ರಗಳಲ್ಲಿ, ಪ್ರತಿ ದಿನ ಸುಮಾರು 1,250 ಜನರು ಹಿಂಸಾತ್ಮಕ ಮರಣಕ್ಕೆ ಬಲಿಯಾಗುತ್ತಾರೆ. ಈ ಕಾರಣ, “ಆ ಕ್ಷೇತ್ರದ ಅರ್ಧದಷ್ಟು ದೇಶಗಳಲ್ಲಿರುವ 15-24ರ ವಯೋಮಾನದ ಯುವ ಜನರಲ್ಲಿ, ಮರಣದ ಎರಡನೆಯ ಪ್ರಮುಖ ಕಾರಣವು ಕೊಲೆಯಾಗಿದೆ.”
ಮಕ್ಕಳ ಮೇಲೆ ಹಿಂಸಾಚಾರ. ಮಕ್ಕಳ ಶಾರೀರಿಕ, ಲೈಂಗಿಕ ಹಾಗೂ ಭಾವನಾತ್ಮಕ ದುರುಪಯೋಗವು, ಲೋಕದ ಎಲ್ಲೆಡೆಯೂ ವ್ಯಾಪಿಸಿರುವಂತಹ ಸಮಸ್ಯೆಯಾಗಿದೆ. ಉದಾಹರಣೆಗೆ, “ಹಲವಾರು ಔದ್ಯೋಗಿಕ ದೇಶಗಳಲ್ಲಿ ನಡೆಸಲ್ಪಟ್ಟ ವಯಸ್ಕರ ಸಮೀಕ್ಷೆಗಳು ಸೂಚಿಸುವುದೇನೆಂದರೆ, 10-15 ಪ್ರತಿಶತದಷ್ಟು ಮಕ್ಕಳು ಲೈಂಗಿಕ ದುರುಪಯೋಗದ ಬಲಿಗಳಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಹುಡುಗಿಯರಾಗಿದ್ದಾರೆ.”
ಸ್ತ್ರೀಯರ ಮೇಲೆ ಹಿಂಸಾಚಾರ. ಲೋಕವ್ಯಾಪಕವಾಗಿ 1997ರಲ್ಲಾದ ಮಾನವ ಹಕ್ಕುಗಳ ದುರುಪಯೋಗದ ವಿದ್ಯಮಾನಗಳ ತನಿಖೆ ನಡೆಸಿದ ಮೇಲೆ, “ಬಹುಮಟ್ಟಿಗೆ ಲೋಕದ ಪ್ರತಿಯೊಂದು ದೇಶದಲ್ಲಿ, ಸ್ತ್ರೀ ಹಾನಿಯ ಪ್ರಧಾನ ಕಾರಣಗಳಲ್ಲಿ ಗೃಹಸಂಬಂಧಿತ ಹಿಂಸಾಚಾರವು ಒಂದಾಗಿದೆ” ಎಂಬುದಾಗಿ ಸಂಶೋಧಕರು ತೀರ್ಮಾನಿಸಿದರು. (ಹ್ಯೂಮನ್ ರೈಟ್ಸ್ ವಾಚ್ ವರ್ಲ್ಡ್ ರಿಪೋರ್ಟ್ 1998) ಗೃಹಸಂಬಂಧಿತ ಹಿಂಸಾಚಾರವು ವ್ಯಾಪಕವಾಗಿದ್ದರೂ ಸರಿಯಾಗಿ ವರದಿಸಲ್ಪಡದ ಕಾರಣ, ಅದು 20ನೆಯ ಶತಮಾನದ “ನಿಶ್ಶಬ್ದ ಬಿಕ್ಕಟ್ಟು” ಎಂಬುದಾಗಿ ಈಗ ಕರೆಯಲ್ಪಡುತ್ತದೆ.—ದ ಗ್ಲೋಬ್ ಆ್ಯಂಡ್ ಮೇಲ್, ಕೆನಡ.
ಇದೇ ರೀತಿಯಲ್ಲಿ, ನೋಹನ ದಿನಗಳಲ್ಲಿ ಈ ಭೂಮಿಯು “ಹಿಂಸಾಚಾರದಿಂದ ತುಂಬಿತ್ತು.” (ಆದಿಕಾಂಡ 6:9-12, NW) ಆಗ, ಯೆಹೋವ ದೇವರು “ಭಕ್ತಿಹೀನರಾದ ಪುರಾತನರ . . . ಮೇಲೆ ಜಲಪ್ರಲಯವನ್ನು ಬರಮಾಡಿ”ದಾಗ, “ಸುನೀತಿಯನ್ನು ಸಾರುವವನಾಗಿದ್ದ” ನೋಹನನ್ನೂ ಅವನ ಕುಟುಂಬವನ್ನೂ ಉಳಿಸಿದನು. ದೇವರು ನಮ್ಮ ದಿನದಲ್ಲಿ ತದ್ರೀತಿಯಾಗಿ ಕ್ರಿಯೆಗೈಯುವನು. ಆತನು ತನ್ನ ವಾಗ್ದತ್ತ ಹೊಸ ಲೋಕದಲ್ಲಿ, ಹಿಂಸಾತ್ಮಕರನ್ನು ಮತ್ತು ದುಷ್ಟರನ್ನು ತೆಗೆದುಹಾಕಿ ಭೂಮಿಯನ್ನು ಒಂದು ಪ್ರಮೋದವನವಾಗಿ ರೂಪಿಸುವಾಗ, “ಭಕ್ತರನ್ನು” ಕಾಪಾಡುವನು. (2 ಪೇತ್ರ 2:4-9; 3:11-13) ಹಿಂಸಾಚಾರವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬುದನ್ನು ಅರಿಯಲು ನೀವು ಹರ್ಷಿಸುವುದಿಲ್ಲವೊ?