ನಿಮ್ಮ ಜೀವನವು ಹೆಚ್ಚು ಅರ್ಥಭರಿತವಾಗಿರಲು ಸಾಧ್ಯವೇ?
ಒಂದು ವಸ್ತುವಿನ ನಿಜವಾದ ಮೌಲ್ಯವನ್ನು ಅದರ ಮೇಲೆ ಸೂಚಿಸಿರುವ ಬೆಲೆಯಿಂದ ನಿರ್ಣಯಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಒಮ್ಮೆ ಅಮೆರಿಕದಲ್ಲಿ 10,000 ಡಾಲರುಗಳ ಮೌಲ್ಯವಿದ್ದ ಬ್ಯಾಂಕಿನ ನೋಟನ್ನು ಹೊರತರಲಾಯಿತು. ಆದರೆ, ಆ ಹಣದ ಮೌಲ್ಯವನ್ನು ಮುದ್ರಿಸಲಾಗಿದ್ದ ಕಾಗದದ ಬೆಲೆಯನ್ನು ನೋಡುವುದಾದರೆ, ಅದರ ಮೌಲ್ಯವು ಏನೇನೂ ಇರಲಿಲ್ಲ.
ಅತಿ ಕಡಿಮೆ ಬೆಲೆಯಿರುವ ಈ ಕಾಗದದ ತುಂಡುಗಳು, ನಿಮ್ಮ ಜೀವನಕ್ಕೆ ನಿಜವಾಗಿಯೂ ಅರ್ಥವನ್ನು ಕೊಡಸಾಧ್ಯವಿದೆಯೇ? ಇದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೋ? ಅನೇಕರು ಹಣವೇ ಸರ್ವಸ್ವವೆಂದು ನೆನಸುತ್ತಾರೆ. ಆದ್ದರಿಂದಲೇ, ಲಕ್ಷಾಂತರ ಜನರು ತಮ್ಮಿಂದಾದಷ್ಟು ಹಣವನ್ನು ಸಂಪಾದಿಸುವುದಕ್ಕಾಗಿ ಹಗಲೂರಾತ್ರಿ ಒಂದೇ ಸಮನೆ ದುಡಿಯುತ್ತಿರುತ್ತಾರೆ. ಕೆಲವೊಮ್ಮೆ, ಅವರು ಹಣದ ಬೆನ್ನಟ್ಟುವಿಕೆಯಲ್ಲಿ ತಮ್ಮ ಆರೋಗ್ಯವನ್ನು ಸಹ ಅಲಕ್ಷಿಸುತ್ತಾರೆ ಹಾಗೂ ತಮ್ಮ ಸ್ನೇಹಿತರು ಮತ್ತು ತಮ್ಮ ಕುಟುಂಬವನ್ನೂ ಕೂಡ ಮರೆತುಬಿಡುತ್ತಾರೆ. ಆದರೆ, ಇದರಿಂದೇನು ಪ್ರಯೋಜನ? ಹಣವೋ ಅಥವಾ ಅದರಿಂದ ಖರೀದಿಸಬಹುದಾದ ವಸ್ತುಗಳೋ ಮನುಷ್ಯನಿಗೆ ನೆಮ್ಮದಿಯನ್ನು ಕೊಡಸಾಧ್ಯವಿದೆಯೇ?
ಭೌತಿಕ ವಸ್ತುಗಳ ಮೇಲೆ ನಾವು ಎಷ್ಟು ನಂಬಿಕೆಯನ್ನಿಡುತ್ತೇವೋ ಅವುಗಳಿಂದ ಅಷ್ಟೇ ನಮಗೆ ನಿರಾಶೆಯಾಗುವುದು ಖಂಡಿತ ಎಂದು ಸಂಶೋಧಕರು ಹೇಳುತ್ತಾರೆ. ಪತ್ರಿಕೋದ್ಯಮಿಯಾದ ಆಲ್ಫಿ ಕೊನ್ ಈ ರೀತಿಯಾದ ತೀರ್ಮಾನಕ್ಕೆ ಬರುತ್ತಾರೆ: “ತೃಪ್ತಿಯೆನ್ನುವುದು ಅಂಗಡಿಯಲ್ಲಿ ಸಿಗುವಂಥ ವಸ್ತುವಲ್ಲ . . . ಹಣವೇ ಸರ್ವಸ್ವವೆಂದು ನಂಬಿರುವ ಜನರಿಗೆ, ಯಾವಾಗಲೂ ಚಿಂತೆ ಮತ್ತು ಖಿನ್ನತೆಯು ಕಾಡುತ್ತಿರುತ್ತದೆ. ಮತ್ತು ಅವರದು ನೆಮ್ಮದಿಯೇ ಇಲ್ಲದ ಬದುಕಾಗಿರುತ್ತದೆ.”—ಇಂಟರ್ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್.
ಒಂದು ಅರ್ಥಭರಿತ ಜೀವನಕ್ಕೆ ಹಣಕ್ಕಿಂತಲೂ ಹೆಚ್ಚಿನದ್ದು ಅಗತ್ಯ ಎಂಬುದನ್ನು ಸಂಶೋಧಕರು ಅರ್ಥಮಾಡಿಕೊಂಡಿದ್ದಾರೆ. ಆದರೆ, ಅನೇಕರು ಅದನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ. ಅದರಲ್ಲಿ ಆಶ್ಚರ್ಯವೇನೂ ಇಲ್ಲ! ಏಕೆಂದರೆ, ಜಾಹೀರಾತುಗಳು ಜನರನ್ನು ಈ ರೀತಿಯಲ್ಲಿ ಮೋಡಿಮಾಡಿವೆ. ಉದಾಹರಣೆಗೆ, ಪಾಶ್ಚಾತ್ಯ ದೇಶಗಳಲ್ಲಿ ಒಂದು ದಿನಕ್ಕೆ ಏನ್ನಿಲ್ಲವೆಂದರೂ 3,000ಕ್ಕಿಂತಲೂ ಹೆಚ್ಚು ಜಾಹೀರಾತುಗಳು ಜನರ ಕಂಗಳನ್ನು ಕುಕ್ಕುತ್ತಿರುತ್ತವೆ. ಈ ಜಾಹೀರಾತುಗಳು ಕಾರಿನ ಕುರಿತಾಗಿಯಾದರೂ ಇರಬಹುದು ಇಲ್ಲವೇ ಪೆಪರ್ಮೆಂಟಿನ ಕುರಿತಾಗಿಯಾದರೂ ಇರಬಹುದು. ಅವುಗಳ ಮೂಲ ಸಂದೇಶವು, ‘ಕೊಂಡು ಸಂತೋಷಪಡಿರಿ’ ಎಂಬುದೇ ಆಗಿದೆ.
ಹಣ! ಹಣ! ಎಂದು ಬಿಡುವಿಲ್ಲದೆ, ಅದರ ಹಿಂದೆ ಬೆನ್ನಟ್ಟುವುದರ ಪರಿಣಾಮವೇನಾಗಿದೆ? ಅನೇಕವೇಳೆ ಆತ್ಮಿಕ ಮೌಲ್ಯಗಳು ಕಡೆಗಣಿಸಲ್ಪಟ್ಟಿವೆ! ಇತ್ತೀಚೆಗೆ ನ್ಯೂಸ್ವೀಕ್ ಪತ್ರಿಕೆಯಲ್ಲಿ, ಇದರ ಕುರಿತಾಗಿ ಜರ್ಮನಿಯ ಆರ್ಚ್ಬಿಷಪ್ ಆಫ್ ಕೊಲೊನ್ ಈ ರೀತಿಯಾಗಿ ಹೇಳಿದ್ದಾರೆ: “ನಮ್ಮ ಸಮಾಜದಲ್ಲಿ ದೇವರೆಂಬ ವಿಷಯಕ್ಕೆ ಸ್ಥಳವೇ ಇಲ್ಲ.”
ಬಹುಶಃ, ನೀವು ಜೀವನೋಪಾಯಕ್ಕಾಗಿಯೇ ನಿಮ್ಮ ಸಮಯ ಶಕ್ತಿಯನ್ನೆಲ್ಲಾ ವ್ಯಯಿಸುತ್ತಿರಬೇಕು. ಹೀಗಾಗಿ, ಬೇರೆ ಯಾವ ಕೆಲಸವನ್ನು ಮಾಡಲು ಸಮಯವೇ ಇಲ್ಲವೆಂದು ನಿಮಗೆ ಅನಿಸಬಹುದು. ಕೆಲವೊಮ್ಮೆ ನಿಮಗೆ ಹೀಗೂ ಅನಿಸಬಹುದು: ನಿಮ್ಮ ಆರೋಗ್ಯ ಕೆಟ್ಟುಹೋಗುವವರೆಗೋ ಅಥವಾ ಸಾವು ಬರುವವರೆಗೋ ಗಾಣದ ಎತ್ತಿನಂತೆ ದುಡಿಯುತ್ತಿರುವುದೇ ಜೀವನವೇ?
ಆತ್ಮಿಕ ವಿಷಯಗಳಿಗೆ ಹೆಚ್ಚು ಗಮನಕೊಡುವುದಾದರೆ ಜೀವನದಲ್ಲಿ ತೃಪ್ತಿಯನ್ನು ಕಾಣಲು ಸಾಧ್ಯವೇ? ನಿಮ್ಮ ಜೀವನಕ್ಕೆ ಹೆಚ್ಚು ಅರ್ಥವನ್ನು ಯಾವುದು ಕೊಡುವುದು?