ಯೆಹೋವನ ಆಶೀರ್ವಾದವು ನಮ್ಮನ್ನು ಸಂಪದ್ಭರಿತರನ್ನಾಗಿ ಮಾಡುತ್ತದೆ
“ಸಂಪದ್ಭರಿತರನ್ನಾಗಿ ಮಾಡುವುದು ಯೆಹೋವನ ಆಶೀರ್ವಾದವೇ, ಮತ್ತು ಆತನು ಅದಕ್ಕೆ ವೇದನೆಯನ್ನು ಕೂಡಿಸುವುದಿಲ್ಲ.”—ಜ್ಞಾನೋಕ್ತಿ 10:22, NW.
1, 2. ಸಂತೋಷವು ಪ್ರಾಪಂಚಿಕ ಸಂಪತ್ತಿನೊಂದಿಗೆ ಸಂಬಂಧವನ್ನು ಹೊಂದಿಲ್ಲವೇಕೆ?
ಇಂದು ಕೋಟ್ಯಂತರ ಜನರ ಜೀವಿತಗಳನ್ನು ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಆಳುತ್ತವೆ. ಆದರೆ ಪ್ರಾಪಂಚಿಕ ವಸ್ತುಗಳು ಅವರಿಗೆ ಸಂತೋಷವನ್ನು ತರುತ್ತವೋ? ಆಸ್ಟ್ರೇಲಿಯನ್ ವಿಮೆನ್ಸ್ ವೀಕ್ಲೀ ಎಂಬ ಪತ್ರಿಕೆಯು ಹೇಳುವುದು: “ತಮ್ಮ ಅದೃಷ್ಟದ ಕುರಿತು ಜನರು ಇಷ್ಟೊಂದು ವಿಷಣ್ಣರಾಗಿರುವ ಸಮಯವೇ ನನ್ನ ನೆನಪಿಗೆ ಬರುತ್ತಿಲ್ಲ.” ಅದು ಕೂಡಿಸಿ ಹೇಳುವುದು: “ಇದೊಂದು ಅಸಂಗತೋಕ್ತಿಯಾಗಿದೆ. ಆಸ್ಟ್ರೇಲಿಯವು ಆರ್ಥಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿದೆ, ಈ ಮುಂಚೆ ಜೀವಿತವು ಇಷ್ಟೊಂದು ಉತ್ತಮವಾಗಿದ್ದ ಸಮಯವೇ ಇರಲಿಲ್ಲ ಎಂದು ನಮಗೆ ಹೇಳಲಾಗುತ್ತದೆ. . . . ಆದರೂ ರಾಷ್ಟ್ರದಾದ್ಯಂತ ಕೇಡುನೋಟವು ವ್ಯಾಪಕವಾಗಿ ಹಬ್ಬಿದೆ. ತಮ್ಮ ಜೀವಿತಗಳಿಂದ ಏನೋ ಕಾಣೆಯಾಗಿದೆಯೆಂಬ ಅನಿಸಿಕೆ ಪುರುಷರಿಗೂ ಸ್ತ್ರೀಯರಿಗೂ ಇದೆಯಾದರೂ, ಅದೇನೆಂದು ಮಾತ್ರ ಅವರು ನಿರೂಪಿಸಶಕ್ತರಾಗಿರುವುದಿಲ್ಲ.” ಹಾಗಾದರೆ, ನಮ್ಮ ಬಳಿ ಇರುವಂತಹ ಸಂಪತ್ತುಗಳಿಂದ ಸಂತೋಷವಾಗಲಿ ಜೀವವಾಗಲಿ ಸಿಗುವುದಿಲ್ಲ ಎಂದು ತೋರಿಸುವುದರಲ್ಲಿ ಶಾಸ್ತ್ರವಚನಗಳು ಎಷ್ಟು ಸತ್ಯವಾಗಿವೆ!—ಪ್ರಸಂಗಿ 5:10; ಲೂಕ 12:15.
2 ಪರಮ ಸಂತೋಷವು ಬರುವುದು ದೇವರ ಆಶೀರ್ವಾದದಿಂದಲೇ ಎಂದು ಬೈಬಲು ಬೋಧಿಸುತ್ತದೆ. ಈ ವಿಷಯದಲ್ಲಿ ಜ್ಞಾನೋಕ್ತಿ 10:22 ಹೇಳುವುದು: “ಸಂಪದ್ಭರಿತರನ್ನಾಗಿ ಮಾಡುವುದು ಯೆಹೋವನ ಆಶೀರ್ವಾದವೇ, ಮತ್ತು ಆತನು ಅದಕ್ಕೆ ವೇದನೆಯನ್ನು ಕೂಡಿಸುವುದಿಲ್ಲ.” ಅನೇಕವೇಳೆ ದುರಾಶೆಯಿಂದ ಪ್ರಾಪಂಚಿಕ ಸಂಪತ್ತನ್ನು ಗಳಿಸುವುದರಿಂದಲೇ ಆ ವೇದನೆಯು ಉಂಟಾಗುತ್ತದೆ. ಅಪೊಸ್ತಲ ಪೌಲನು ಇದಕ್ಕೆ ಹೊಂದಿಕೆಯಾಗಿ ಹೇಳುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
3. ದೇವರ ಸೇವಕರು ಪರೀಕ್ಷೆಗಳನ್ನು ಅನುಭವಿಸುವುದೇಕೆ?
3 ಆದರೆ, “ಯೆಹೋವನ ಮಾತಿಗೆ ಕಿವಿಗೊಟ್ಟು” ನಡೆಯುವವರೆಲ್ಲರಿಗೆ ವೇದನೆರಹಿತ ಆಶೀರ್ವಾದಗಳು ಪ್ರಾಪ್ತವಾಗುತ್ತವೆ. (ಧರ್ಮೋಪದೇಶಕಾಂಡ 28:2) ಹಾಗಾದರೆ, ‘ಯೆಹೋವನ ಆಶೀರ್ವಾದಕ್ಕೆ ವೇದನೆಯನ್ನು ಕೂಡಿಸದಿರುವಲ್ಲಿ, ದೇವರ ಸೇವಕರಲ್ಲಿ ಅನೇಕರು ಬಾಧೆಯನ್ನು ಅನುಭವಿಸುತ್ತಿರುವುದೇಕೆ?’ ಎಂದು ಕೆಲವರು ಕೇಳಬಹುದು. ಆದರೆ ನಮ್ಮ ಪರೀಕ್ಷೆಗಳು ದೇವರಿಂದ ಅನುಮತಿಸಲ್ಪಟ್ಟರೂ, ಅವುಗಳ ಮೂಲವು ಸೈತಾನ, ಅವನ ದುಷ್ಟ ವ್ಯವಸ್ಥೆ ಮತ್ತು ನಮ್ಮ ಸ್ವಂತ ಅಪೂರ್ಣ ಪ್ರಕೃತಿಯಾಗಿದೆಯೆಂದು ಬೈಬಲು ತಿಳಿಯಪಡಿಸುತ್ತದೆ. (ಆದಿಕಾಂಡ 6:5; ಧರ್ಮೋಪದೇಶಕಾಂಡ 32:4, 5; ಯೋಹಾನ 15:19; ಯಾಕೋಬ 1:14, 15) ಯೆಹೋವನು ‘ಎಲ್ಲ ದಾನಗಳ ಮತ್ತು ಕುಂದಿಲ್ಲದ ಎಲ್ಲ ವರಗಳ’ ಮೂಲನು. (ಯಾಕೋಬ 1:17) ಆದಕಾರಣ ಆತನ ಆಶೀರ್ವಾದಗಳು ಎಂದಿಗೂ ವೇದನೆಯನ್ನು ಉಂಟುಮಾಡವು. ಹೀಗಿರುವುದರಿಂದ, ನಾವು ಆತನ ಕುಂದಿಲ್ಲದ ವರಗಳಲ್ಲಿ ಕೆಲವನ್ನು ಪರಿಗಣಿಸೋಣ.
ದೇವರ ವಾಕ್ಯ—ಬೆಲೆಕಟ್ಟಲಾಗದ ಕೊಡುಗೆ
4. ಈ “ಅಂತ್ಯಕಾಲ”ದಲ್ಲಿ ಯೆಹೋವನ ಜನರು ಯಾವ ಆಶೀರ್ವಾದವನ್ನು ಹಾಗೂ ಅಮೂಲ್ಯ ಕೊಡುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ?
4 “ಅಂತ್ಯಕಾಲ”ದಲ್ಲಿ ನಿಜವಾದ “ತಿಳುವಳಿಕೆಯು ಹೆಚ್ಚುವದು” ಎಂದು ದಾನಿಯೇಲನ ಪ್ರವಾದನೆಯು ಹೇಳುತ್ತದೆ. ಆದರೆ “ದುಷ್ಟರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವದು” ಎಂಬ ಮಾತುಗಳು ಇದರ ಅರ್ಥವನ್ನು ಸೀಮಿತಗೊಳಿಸುತ್ತವೆ. (ದಾನಿಯೇಲ 12:4, 10) ಸ್ವಲ್ಪ ಊಹಿಸಿ ನೋಡಿ! ದೇವರ ವಾಕ್ಯವು ಅಂದರೆ ವಿಶೇಷವಾಗಿ ಪ್ರವಾದನೆಯು ಎಷ್ಟು ದೈವಿಕ ವಿವೇಕದಿಂದ ವ್ಯಕ್ತಪಡಿಸಲ್ಪಟ್ಟಿದೆಯೆಂದರೆ, ಅದು ಯೆಹೋವನ ಜನರಿಗೆ ಅರ್ಥವಾಗುವುದಾದರೂ ದುಷ್ಟರಿಗೆ ಅದರ ನಿಜಾರ್ಥ ತಿಳಿಯದು. ದೇವಕುಮಾರನು ಪ್ರಾರ್ಥಿಸಿದ್ದು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ.” (ಲೂಕ 10:21) ಬೆಲೆಕಟ್ಟಲಾಗದ ಕೊಡುಗೆಯಾದ ಬೈಬಲೆಂಬ ದೇವರ ಲಿಖಿತ ವಾಕ್ಯವನ್ನು ಹೊಂದಿದವರಾಗಿದ್ದು, ಯೆಹೋವನು ಆತ್ಮಿಕ ಒಳನೋಟವನ್ನು ಕೊಟ್ಟಿರುವವರ ಮಧ್ಯೆ ಇರುವುದು ಎಷ್ಟು ಆಶೀರ್ವಾದದಾಯಕ!—1 ಕೊರಿಂಥ 1:21, 27, 28; 2:14, 15.
5. ವಿವೇಕವೆಂದರೇನು, ನಾವು ಅದನ್ನು ಸಂಪಾದಿಸುವುದು ಹೇಗೆ?
5 “ಮೇಲಣಿಂದ ಬರುವ ಜ್ಞಾನವು [“ವಿವೇಕವು,” NW]” ಇಲ್ಲದಿರುತ್ತಿದ್ದಲ್ಲಿ ನಮಗೆ ಆತ್ಮಿಕ ಒಳನೋಟವೇ ಇರುತ್ತಿರಲಿಲ್ಲ. (ಯಾಕೋಬ 3:17) ಸಮಸ್ಯೆಗಳನ್ನು ಬಗೆಹರಿಸಲು ಜ್ಞಾನ ಮತ್ತು ತಿಳಿವಳಿಕೆಯನ್ನು ಉಪಯೋಗಿಸುವ, ಅಪಾಯಗಳನ್ನು ತಪ್ಪಿಸುವ ಅಥವಾ ನಿವಾರಿಸುವ, ಗುರಿಗಳನ್ನು ಸಾಧಿಸುವ ಅಥವಾ ಸ್ವಸ್ಥವಾದ ಸಲಹೆಯನ್ನು ಒದಗಿಸುವ ಸಾಮರ್ಥ್ಯವೇ ವಿವೇಕವಾಗಿದೆ. ಹಾಗಾದರೆ ನಾವು ದೈವಿಕ ವಿವೇಕವನ್ನು ಪಡೆಯುವುದು ಹೇಗೆ? ಜ್ಞಾನೋಕ್ತಿ 2:6 (NW) ಹೇಳುವುದು: “ಯೆಹೋವನೇ ವಿವೇಕವನ್ನು ಕೊಡುವಾತನು, ಆತನ ಬಾಯಿಂದಲೇ ಜ್ಞಾನವೂ ವಿವೇಚನೆಯೂ ಹೊರಟು ಬರುತ್ತವೆ.” ಹೌದು, ನಾವು ವಿವೇಕಕ್ಕಾಗಿ ಪಟ್ಟುಹಿಡಿದು ಪ್ರಾರ್ಥಿಸುವಲ್ಲಿ, ಯೆಹೋವನು ರಾಜ ಸೊಲೊಮೋನನಿಗೆ “ಜ್ಞಾನವನ್ನೂ ವಿವೇಕವನ್ನೂ” ಕೊಟ್ಟಂತೆಯೇ ನಮಗೂ ಅದನ್ನು ಅನುಗ್ರಹಿಸುವನು. (1 ಅರಸುಗಳು 3:11, 12; ಯಾಕೋಬ 1:5-8) ವಿವೇಕವನ್ನು ಪಡೆಯಬೇಕಾದರೆ, ನಾವು ಯೆಹೋವನ ವಾಕ್ಯವನ್ನು ಕ್ರಮವಾಗಿ ಅಧ್ಯಯನಮಾಡಿ ಅನ್ವಯಿಸುವ ಮೂಲಕ ಆತನಿಗೆ ಕಿವಿಗೊಡುತ್ತ ಮುಂದುವರಿಯಬೇಕು.
6. ದೇವರ ನಿಯಮ ಮತ್ತು ಮೂಲತತ್ತ್ವಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವುದು ವಿವೇಕದ ಮಾರ್ಗವಾಗಿದೆ ಏಕೆ?
6 ಬೈಬಲಿನ ನಿಯಮ ಮತ್ತು ಮೂಲತತ್ತ್ವಗಳಲ್ಲಿ ನಾವು ದೈವಿಕ ವಿವೇಕದ ಪ್ರಧಾನ ಉದಾಹರಣೆಗಳನ್ನು ಕಂಡುಕೊಳ್ಳುತ್ತೇವೆ. ಅವು ನಮಗೆ ಸಕಲ ವಿಧಗಳಲ್ಲಿಯೂ, ಅಂದರೆ ಶಾರೀರಿಕ, ಮಾನಸಿಕ, ಭಾವನಾತ್ಮಕ ಮತ್ತು ಆತ್ಮಿಕ ರೀತಿಯಲ್ಲಿ ಲಾಭದಾಯಕವಾಗಿವೆ. ಕೀರ್ತನೆಗಾರನು ಯೋಗ್ಯವಾಗಿಯೇ ಹಾಡಿದ್ದು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು.”—ಕೀರ್ತನೆ 19:7-10; 119:72.
7. ದೇವರ ನೀತಿಯ ಮಟ್ಟಗಳನ್ನು ಅಲಕ್ಷಿಸುವುದರಿಂದ ಏನು ಪರಿಣಮಿಸುತ್ತದೆ?
7 ಆದರೆ ದೇವರ ನೀತಿಯ ಮಟ್ಟಗಳನ್ನು ಅಲಕ್ಷಿಸುವವರಿಗೆ ಅವರು ಹುಡುಕುತ್ತಿರುವ ಸಂತೋಷ ಮತ್ತು ಸ್ವಾತಂತ್ರ್ಯಗಳು ಲಭ್ಯವಾಗುವುದಿಲ್ಲ. ದೇವರು ತಿರಸ್ಕಾರವನ್ನು ಸಹಿಸುವಾತನಲ್ಲ, ಏಕೆಂದರೆ ಒಬ್ಬನು ಏನನ್ನು ಬಿತ್ತುತ್ತಾನೊ ಅದನ್ನೇ ಕೊಯ್ಯುತ್ತಾನೆಂದು ಅವರು ಇಂದಲ್ಲ ನಾಳೆ ಕಂಡುಕೊಳ್ಳುತ್ತಾರೆ. (ಗಲಾತ್ಯ 6:7) ಬೈಬಲ್ ಮೂಲತತ್ತ್ವಗಳನ್ನು ಅಲಕ್ಷಿಸುವ ಕೋಟ್ಯಂತರ ಜನರು, ಅನಪೇಕ್ಷಿತ ಗರ್ಭಧಾರಣೆ, ಭೀಕರ ರೋಗಗಳು ಅಥವಾ ಶಕ್ತಿಗುಂದಿಸುವ ಚಟಗಳಂತಹ ದುರಂತಕರವಾದ ಫಲಗಳನ್ನು ಕೊಯ್ಯುತ್ತಾರೆ. ಅವರು ಪಶ್ಚಾತ್ತಾಪಪೂರ್ವಕವಾಗಿ ತಮ್ಮ ಜೀವನಪಥವನ್ನು ಬದಲಾಯಿಸದೆ ಹೋಗುವಲ್ಲಿ, ಅದು ಅವರನ್ನು ಅಂತಿಮವಾಗಿ ಮರಣಕ್ಕೆ ಮತ್ತು ಪ್ರಾಯಶಃ ದೇವರ ಕೈಯಿಂದ ಬರುವ ನಾಶನಕ್ಕೆ ನಡೆಸುವುದು.—ಮತ್ತಾಯ 7:13, 14.
8. ದೇವರ ವಾಕ್ಯವನ್ನು ಪ್ರೀತಿಸುವವರು ಏಕೆ ಸಂತೋಷಭರಿತರಾಗಿದ್ದಾರೆ?
8 ಆದರೆ ದೇವರ ವಾಕ್ಯವನ್ನು ಪ್ರೀತಿಸಿ ಅದನ್ನು ಅನ್ವಯಿಸಿಕೊಳ್ಳುವವರಿಗೆ ಈಗಲೂ ಭವಿಷ್ಯತ್ತಿನಲ್ಲಿಯೂ ಸಮೃದ್ಧವಾದ ಆಶೀರ್ವಾದಗಳು ಪ್ರಾಪ್ತವಾಗುವವು. ದೇವರ ನಿಯಮವು ತಮ್ಮನ್ನು ವಿಮೋಚಿಸಿದೆ ಎಂದು ಅವರು ನ್ಯಾಯವಾಗಿಯೇ ತಿಳಿದುಕೊಂಡು, ನಿಜವಾದ ಸಂತೋಷವನ್ನು ಪಡೆದು, ಪಾಪ ಮತ್ತು ಅದರ ಮರಣಕರವಾದ ಪರಿಣಾಮಗಳಿಂದ ವಿಮೋಚಿತರಾಗುವ ಸಮಯವನ್ನು ಬಹಳ ಉತ್ಸಾಹದಿಂದ ಎದುರುನೋಡುತ್ತಾರೆ. (ರೋಮಾಪುರ 8:20, 21; ಯಾಕೋಬ 1:25) ಈ ನಿರೀಕ್ಷೆಯು ನಿಶ್ಚಿತ ನಿರೀಕ್ಷೆಯಾಗಿದೆ, ಏಕೆಂದರೆ ಅದು ಮಾನವಕುಲಕ್ಕೆ ದೇವರು ಕೊಟ್ಟಿರುವ ಅತ್ಯಂತ ಪ್ರೀತಿಪೂರ್ಣವಾದ ಕೊಡುಗೆಯ ಮೇಲೆ, ಅಂದರೆ ಆತನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೇಲೆ ಆಧಾರಿತವಾಗಿದೆ. (ಮತ್ತಾಯ 20:28; ಯೋಹಾನ 3:16; ರೋಮಾಪುರ 6:23) ಇಂತಹ ಪರಮೋತ್ತಮ ಕೊಡುಗೆಯು ಮಾನವಕುಲಕ್ಕೆ ದೇವರು ತೋರಿಸುವ ಪ್ರೀತಿಯ ಗಾಢತೆಯನ್ನು ದೃಢೀಕರಿಸಿ, ಯೆಹೋವನಿಗೆ ಕಿವಿಗೊಡುತ್ತ ಮುಂದುವರಿಯುವವರಿಗೆ ಬರಲಿರುವ ಅನಂತಾಶೀರ್ವಾದಗಳ ಖಾತ್ರಿಯನ್ನು ಕೊಡುತ್ತದೆ.—ರೋಮಾಪುರ 8:32.
ಪವಿತ್ರಾತ್ಮದ ಕೊಡುಗೆಗೆ ಕೃತಜ್ಞರು
9, 10. ನಾವು ಯೆಹೋವನ ಪವಿತ್ರಾತ್ಮದ ಕೊಡುಗೆಯಿಂದ ಹೇಗೆ ಪ್ರಯೋಜನ ಪಡೆಯುತ್ತೇವೆ? ಒಂದು ಉದಾಹರಣೆಯನ್ನು ಕೊಡಿರಿ.
9 ನಾವು ಕೃತಜ್ಞರಾಗಿರಬೇಕಾದ ದೇವರ ಇನ್ನೊಂದು ಪ್ರೀತಿಪೂರ್ವಕ ಕೊಡುಗೆಯು, ಆತನ ಪವಿತ್ರಾತ್ಮವೇ ಆಗಿದೆ. ಅಪೊಸ್ತಲ ಪೇತ್ರನು ಸಾ.ಶ. 33ರ ಪಂಚಾಶತ್ತಮ ದಿನದಂದು ಯೆರೂಸಲೇಮಿನಲ್ಲಿ ನೆರೆದುಬಂದಿದ್ದ ಜನಸಮೂಹಕ್ಕೆ, “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ” ಎಂದು ಹೇಳಿ ಪ್ರೋತ್ಸಾಹಿಸಿದನು. (ಅ. ಕೃತ್ಯಗಳು 2:38) ಇಂದು ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳುವ ಹಾಗೂ ದೇವರಿಗೆ ಇಷ್ಟವಾದುದನ್ನು ಮಾಡಬಯಸುವ ಸಮರ್ಪಿತ ಸೇವಕರಿಗೆ ಯೆಹೋವನು ಅದನ್ನು ಕೊಡುತ್ತಾನೆ. (ಲೂಕ 11:9-13) ಪುರಾತನ ಕಾಲಗಳಲ್ಲಿ, ವಿಶ್ವದ ಅತಿ ಬಲಾಢ್ಯವಾದ ಶಕ್ತಿಯಾದ ಈ ಪವಿತ್ರಾತ್ಮವು ಅಥವಾ ಕ್ರಿಯಾಕಾರಿ ಶಕ್ತಿಯು, ಆದಿಕ್ರೈಸ್ತರು ಸೇರಿದ್ದ ನಂಬಿಕೆಯ ಸ್ತ್ರೀಪುರುಷರಿಗೆ ಶಕ್ತಿಯನ್ನು ನೀಡಿತು. (ಜೆಕರ್ಯ 4:6; ಅ. ಕೃತ್ಯಗಳು 4:31) ಯೆಹೋವನ ಜನರಾದ ನಾವು ದುಸ್ಸಾಧ್ಯವಾದ ತಡೆಗಳನ್ನು ಇಲ್ಲವೆ ಪಂಥಾಹ್ವಾನಗಳನ್ನು ಎದುರಿಸಬಹುದಾದರೂ, ಪವಿತ್ರಾತ್ಮವು ನಮಗೆ ಶಕ್ತಿನೀಡಬಲ್ಲದು.—ಯೋವೇಲ 2:28, 29.
10 ಲಾರೆಲ್ ಎಂಬಾಕೆಯ ಮಾದರಿಯನ್ನು ಪರಿಗಣಿಸಿ. ಆಕೆಗೆ ಪೋಲಿಯೊ ರೋಗ ತಗಲಿದ್ದುದರಿಂದ, 37 ವರ್ಷಗಳ ವರೆಗೆ ಆಕೆ ಕಬ್ಬಿಣದ ಶ್ವಾಸಕೋಶವನ್ನು ಉಪಯೋಗಿಸುತ್ತ ಬದುಕಿದಳು.a ಆಕೆಯ ಪರಿಸ್ಥಿತಿ ವಿಪರೀತ ಕಷ್ಟಕರವಾಗಿದ್ದರೂ, ಆಕೆ ಮರಣದ ತನಕ ದೇವರನ್ನು ಹುರುಪಿನಿಂದ ಸೇವಿಸಿದಳು. ಆ ವರ್ಷಗಳಲ್ಲಿ ಯೆಹೋವನ ಹೇರಳವಾದ ಆಶೀರ್ವಾದಗಳು ಲಾರೆಲ್ಗೆ ಪ್ರಾಪ್ತವಾದವು. ಉದಾಹರಣೆಗೆ, ದಿನದಲ್ಲಿ 24 ತಾಸು ಆಕೆ ಆ ಯಂತ್ರಕ್ಕೆ ನಿರ್ಬಂಧಿತಳಾಗಿದ್ದರೂ, ಆಕೆ ಬೈಬಲ್ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು 17 ಮಂದಿಗೆ ಸಹಾಯಮಾಡಿದಳು! ಆಕೆಯ ಸನ್ನಿವೇಶವು ನಮಗೆ, “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ” ಎಂಬ ಅಪೊಸ್ತಲ ಪೌಲನ ಮಾತುಗಳನ್ನು ಮನಸ್ಸಿಗೆ ತರುತ್ತದೆ. (2 ಕೊರಿಂಥ 12:10) ಹೌದು, ಸುವಾರ್ತೆಯನ್ನು ಸಾರುವುದರಲ್ಲಿ ನಮಗೆ ದೊರೆಯುವ ಯಾವುದೇ ಸಾಫಲ್ಯವು, ನಮ್ಮ ಸ್ವಂತ ಸಾಮರ್ಥ್ಯ ಮತ್ತು ಶಕ್ತಿಯಿಂದ ಬರುವುದಿಲ್ಲ. ಅದು ತನ್ನ ಮಾತನ್ನು ಕೇಳುತ್ತ ಮುಂದುವರಿಯುವವರಿಗೆ ದೇವರು ತನ್ನ ಪವಿತ್ರಾತ್ಮದ ಮೂಲಕ ಕೊಡುವ ಸಹಾಯದಿಂದ ಬರುತ್ತದೆ.—ಯೆಶಾಯ 40:29-31.
11. “ನೂತನಸ್ವಭಾವ”ವನ್ನು ಧರಿಸುವವರಲ್ಲಿ ದೇವರಾತ್ಮವು ಯಾವ ಗುಣಗಳನ್ನು ಉಂಟುಮಾಡುತ್ತದೆ?
11 ನಾವು ಯೆಹೋವನಿಗೆ ವಿಧೇಯತೆಯಿಂದ ಕಿವಿಗೊಡುವಲ್ಲಿ, ಆತನ ಆತ್ಮವು ನಮ್ಮಲ್ಲಿ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಒಳ್ಳೆತನ, ನಂಬಿಕೆ, ಸೌಮ್ಯತೆ ಮತ್ತು ಆತ್ಮ ನಿಯಂತ್ರಣಗಳಂತಹ ಗುಣಗಳನ್ನು ಉಂಟುಮಾಡುತ್ತದೆ. (ಗಲಾತ್ಯ 5:22, 23, NW) ಈ ‘ಆತ್ಮದ ಫಲವು,’ ಕ್ರೈಸ್ತರು ಒಂದುವೇಳೆ ಈ ಹಿಂದೆ ತೋರಿಸಿದ್ದಿರಬಹುದಾದ ದುರಾಶಾ ಪ್ರವೃತ್ತಿಯ, ಪಾಶವೀಯ ಗುಣಗಳ ಸ್ಥಾನದಲ್ಲಿ ಧರಿಸುವ “ನೂತನಸ್ವಭಾವ”ದ ಭಾಗವಾಗಿರುತ್ತದೆ. (ಎಫೆಸ 4:20-24; ಯೆಶಾಯ 11:6-9) ಈ ಫಲಗಳಲ್ಲಿ ಅತಿ ಪ್ರಾಮುಖ್ಯವಾದ ಫಲವು, “ಸಂಪೂರ್ಣಮಾಡುವ ಬಂಧ”ವಾದ ಪ್ರೀತಿಯಾಗಿದೆ.—ಕೊಲೊಸ್ಸೆ 3:14.
ಕ್ರೈಸ್ತ ಪ್ರೀತಿ—ಮಾನ್ಯತೆಯಿಂದ ನೋಡಿಕೊಳ್ಳಬೇಕಾದ ಕೊಡುಗೆ
12. ಪ್ರಥಮ ಶತಮಾನದ ಕ್ರೈಸ್ತರಾದ ತಬಿಥಾ ಮತ್ತು ಇತರರು ಪ್ರೀತಿಯನ್ನು ಹೇಗೆ ಪ್ರದರ್ಶಿಸಿದರು?
12 ಕ್ರೈಸ್ತ ಪ್ರೀತಿಯು ಯೆಹೋವನಿಂದ ಬಂದ ಒಂದು ಆಶೀರ್ವದಿತ ಕೊಡುಗೆಯಾಗಿದ್ದು, ನಾವು ಇದನ್ನು ಮಾನ್ಯತೆಯಿಂದ ನೋಡುವುದು ಯೋಗ್ಯವಾದದ್ದಾಗಿದೆ. ಇದು ಮೂಲತತ್ತ್ವದಿಂದ ನಿಯಂತ್ರಿಸಲ್ಪಡುವುದಾದರೂ, ಮಮತೆಯಲ್ಲಿ ಎಷ್ಟು ವಿಪುಲವಾಗಿದೆಯೆಂದರೆ, ವಿಶ್ವಾಸಿಗಳನ್ನು ರಕ್ತಸಂಬಂಧಿಗಳಿಂತಲೂ ಹೆಚ್ಚು ಹತ್ತಿರಕ್ಕೆ ಸೆಳೆಯುತ್ತದೆ. (ಯೋಹಾನ 15:12, 13; 1 ಪೇತ್ರ 1:22) ಉದಾಹರಣೆಗೆ, ಪ್ರಥಮ ಶತಮಾನದ ಅತ್ಯುತ್ತಮ ಕ್ರೈಸ್ತ ಸ್ತ್ರೀಯಾಗಿದ್ದ ತಬಿಥಾ ಎಂಬವಳನ್ನು ತೆಗೆದುಕೊಳ್ಳಿರಿ. ಆಕೆ ವಿಶೇಷವಾಗಿ ಸಭೆಯ ವಿಧವೆಯರಿಗಾಗಿ “ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.” (ಅ. ಕೃತ್ಯಗಳು 9:36) ಈ ಸ್ತ್ರೀಯರಿಗೆ ರಕ್ತಸಂಬಂಧಿಗಳು ಇದ್ದಿರಬಹುದಾದರೂ, ಅವರಿಗೆ ಸಹಾಯಮಾಡಿ ಅವರನ್ನು ಪ್ರೋತ್ಸಾಹಿಸಲು ತನಗೆ ಸಾಧ್ಯವಿರುವುದನ್ನು ಮಾಡಲು ತಬಿಥಾ ಬಯಸಿದಳು. (1 ಯೋಹಾನ 3:18) ತಬಿಥಾಳು ಎಷ್ಟು ಉತ್ತಮವಾದ ಮಾದರಿಯನ್ನಿಟ್ಟಳು! ಸಹೋದರ ಪ್ರೀತಿಯು ಪ್ರಿಸ್ಕ ಮತ್ತು ಅಕ್ವಿಲರನ್ನು, ಅವರು ಪೌಲನ ಪರವಾಗಿ “ತಮ್ಮ ಪ್ರಾಣಗಳನ್ನು ಅಪಾಯಕ್ಕೆ” ಒಡ್ಡುವ ಮಟ್ಟಿಗೂ ಪ್ರಚೋದಿಸಿತು. ಈ ಅಪೊಸ್ತಲನು ರೋಮಿನಲ್ಲಿ ಸೆರೆಮನೆಯಲ್ಲಿದ್ದಾಗ, ಎಪಫ್ರ, ಲೂಕ, ಒನೇಸಿಫೊರ ಮತ್ತಿತರನ್ನು ಸಹಾಯಮಾಡಲು ಪ್ರಚೋದಿಸಿದ್ದು ಈ ಪ್ರೀತಿಯೇ. (ರೋಮಾಪುರ 16:3, 4; 2 ತಿಮೊಥೆಯ 1:16; 4:11; ಫಿಲೆಮೋನ 23, 24) ಹೌದು, ಆ ರೀತಿಯ ಕ್ರೈಸ್ತರಲ್ಲಿ “ಒಬ್ಬರ ಮೇಲೊಬ್ಬರಿಗೆ ಪ್ರೀತಿ” ಇದೆ. ಇದು ಅವರನ್ನು ಯೇಸುವಿನ ನಿಜ ಶಿಷ್ಯರೆಂದು ತೋರಿಸುವ ದೇವರ ಆಶೀರ್ವದಿತ ಕೊಡುಗೆಯಾಗಿದೆ.—ಯೋಹಾನ 13:34, 35.
13. ನಾವು ನಮ್ಮ ಕ್ರೈಸ್ತ ಸಹೋದರತ್ವವನ್ನು ಆಳವಾಗಿ ಮಾನ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು?
13 ಕ್ರೈಸ್ತ ಸಭೆಯಲ್ಲಿ ತೋರಿಸಲ್ಪಡುವ ಪ್ರೀತಿಯನ್ನು ನೀವು ಮಾನ್ಯಮಾಡುತ್ತೀರೊ? ಭೂಗೋಲವನ್ನೇ ಆವರಿಸುವ ಆತ್ಮಿಕ ಸಹೋದರತ್ವಕ್ಕೆ ನೀವು ಆಭಾರಿಗಳೊ? ಇವು ಕೂಡ ಮೇಲಣಿಂದ ಬರುವ ಧನ್ಯವೂ ಪುಷ್ಟಿಕರವೂ ಆದ ಕೊಡುಗೆಗಳಾಗಿವೆ. ನಾವು ಅವನ್ನು ಬೆಲೆಯುಳ್ಳವುಗಳಾಗಿ ಎಣಿಸುತ್ತೇವೆಂದು ಹೇಗೆ ತೋರಿಸಬಲ್ಲೆವು? ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತ, ಕ್ರೈಸ್ತ ಕೂಟಗಳಲ್ಲಿ ಭಾಗವಹಿಸುತ್ತ, ಮತ್ತು ದೇವರಾತ್ಮದ ಫಲಗಳಾದ ಪ್ರೀತಿ ಹಾಗೂ ಇತರ ಫಲಗಳನ್ನು ಪ್ರದರ್ಶಿಸುತ್ತ ಇದನ್ನು ತೋರಿಸಬಲ್ಲೆವು.—ಫಿಲಿಪ್ಪಿ 1:9; ಇಬ್ರಿಯ 10:24, 25.
“ಪುರುಷರಲ್ಲಿ ದಾನಗಳು”
14. ಒಬ್ಬ ಕ್ರೈಸ್ತನು ಹಿರಿಯನೊ ಶುಶ್ರೂಷಾ ಸೇವಕನೊ ಆಗಿ ಸೇವೆ ಮಾಡಬೇಕಾದರೆ ಅವನಿಂದ ಏನು ಅಪೇಕ್ಷಿಸಲ್ಪಡುತ್ತದೆ?
14 ಹಿರಿಯರಾಗಿಯೂ ಶುಶ್ರೂಷಾ ಸೇವಕರಾಗಿಯೂ ತಮ್ಮ ಜೊತೆವಿಶ್ವಾಸಿಗಳ ಸೇವೆಮಾಡಲು ಅಪೇಕ್ಷಿಸುವ ಕ್ರೈಸ್ತ ಪುರುಷರು ಉತ್ತಮವಾದ ಗುರಿಯುಳ್ಳವರಾಗಿದ್ದಾರೆ. (1 ತಿಮೊಥೆಯ 3:1, 8) ಈ ಸುಯೋಗಗಳಿಗೆ ಅರ್ಹನಾಗಬೇಕಾದರೆ, ಒಬ್ಬ ಸಹೋದರನು ಆತ್ಮಿಕ ಪುರುಷನೂ ಶಾಸ್ತ್ರವಚನಗಳಲ್ಲಿ ನುರಿತವನೂ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಹುರುಪುಳ್ಳವನೂ ಆಗಿರಬೇಕು. (ಅ. ಕೃತ್ಯಗಳು 18:24; 1 ತಿಮೊಥೆಯ 4:15; 2 ತಿಮೊಥೆಯ 4:5) ಅವನು ದೀನಭಾವ, ವಿನಯಶೀಲತೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಬೇಕು, ಏಕೆಂದರೆ ಅಹಂಕಾರ, ಹೆಮ್ಮೆ ಮತ್ತು ಹೆಬ್ಬಯಕೆಯಿರುವ ಜನರಿಗೆ ದೈವಿಕ ಆಶೀರ್ವಾದಗಳು ಪ್ರಾಪ್ತವಾಗುವುದಿಲ್ಲ. (ಜ್ಞಾನೋಕ್ತಿ 11:2; ಇಬ್ರಿಯ 6:15; 3 ಯೋಹಾನ 9, 10) ವಿವಾಹಿತನಾಗಿದ್ದರೆ, ಅವನು ತನ್ನ ಇಡೀ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರೀತಿಭರಿತ ಕುಟುಂಬ ಶಿರಸ್ಸಾಗಿರಬೇಕು. (1 ತಿಮೊಥೆಯ 3:4, 5, 12) ಅವನು ಆತ್ಮಿಕ ಐಶ್ವರ್ಯವನ್ನು ಮಾನ್ಯಮಾಡುವುದರಿಂದ ಯೆಹೋವನ ಆಶೀರ್ವಾದವು ಅವನಿಗೆ ದೊರೆಯುವಂತಾಗುತ್ತದೆ.—ಮತ್ತಾಯ 6:19-21.
15, 16. ಯಾರು “ಮನುಷ್ಯರಲ್ಲಿ ದಾನ”ಗಳಾಗಿ ಪರಿಣಮಿಸುತ್ತಾರೆ? ಉದಾಹರಣೆಗಳನ್ನು ಕೊಡಿ.
15 ಸಭೆಯಲ್ಲಿ ಹಿರಿಯರಾಗಿ ಸೇವೆ ಮಾಡುವವರು ಸೌವಾರ್ತಿಕರಾಗಿ, ಕುರಿಪಾಲಕರಾಗಿ ಮತ್ತು ಬೋಧಕರಾಗಿ ಕೆಲಸಮಾಡಲು ಪ್ರಯಾಸಪಡುವಾಗ, ಅವರನ್ನು “ಪುರುಷರಲ್ಲಿ ದಾನ”ಗಳಾಗಿ ನೋಡಲು ಅವರು ನಮಗೆ ಯೋಗ್ಯವಾದ ಕಾರಣಗಳನ್ನು ಕೊಡುತ್ತಾರೆ. (ಎಫೆಸ 4:8, 11, NW) ನಂಬಿಗಸ್ತ ಹಿರಿಯರ ಪ್ರೀತಿಪೂರ್ವಕವಾದ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವವರು ತಮ್ಮ ಕೃತಜ್ಞತೆಯನ್ನು ಯಾವಾಗಲೂ ಸೂಚಿಸದಿದ್ದರೂ, ಅಂತಹ ಹಿರಿಯರು ಮಾಡುವ ಕೆಲಸವನ್ನು ಯೆಹೋವನು ನೋಡುತ್ತಾನೆ. ಅವರು ತನ್ನ ಜನರ ಸೇವೆಮಾಡಿ, ತನ್ನ ನಾಮಕ್ಕೆ ತೋರಿಸುವ ಪ್ರೀತಿಯನ್ನು ಆತನು ಎಂದಿಗೂ ಮರೆಯನು.—1 ತಿಮೊಥೆಯ 5:17; ಇಬ್ರಿಯ 6:10.
16 ಪ್ರಯಾಸಪಟ್ಟು ಕೆಲಸಮಾಡುವ ಒಬ್ಬ ಹಿರಿಯನ ದೃಷ್ಟಾಂತವನ್ನು ತೆಗೆದುಕೊಳ್ಳಿ. ಅವನು ಮಿದುಳಿನ ಶಸ್ತ್ರಚಿಕಿತ್ಸೆ ನಡೆಯಲಿಕ್ಕಿದ್ದ ಒಬ್ಬ ಕ್ರೈಸ್ತ ಹುಡುಗಿಯನ್ನು ಭೇಟಿಮಾಡಿದನು. ಕುಟುಂಬ ಮಿತ್ರನೊಬ್ಬನು ಬರೆದುದು: “ಅವನು ಎಷ್ಟೋ ದಯಾಪರನೂ ಬೆಂಬಲಕೊಡುವವನೂ ಪರಾಮರಿಸುವವನೂ ಆಗಿದ್ದನು. ನಮ್ಮ ಜೊತೆಯಲ್ಲಿ ಯೆಹೋವನಿಗೆ ಪ್ರಾರ್ಥಿಸಲು ನಮ್ಮ ಅನುಮತಿಯನ್ನು ಕೇಳಿದನು. ಅವನು ಪ್ರಾರ್ಥಿಸಿದಾಗ, ತಂದೆ [ಅವರು ಯೆಹೋವನ ಸಾಕ್ಷಿಯಲ್ಲ] ಬಿಕ್ಕಿ ಬಿಕ್ಕಿ ಅತ್ತರು ಮತ್ತು ಆಸ್ಪತ್ರೆಯ ಆ ಕೋಣೆಯಲ್ಲಿದ್ದ ಎಲ್ಲರೂ ಕಣ್ಣೀರು ಸುರಿಸಿದರು. ಆ ಹಿರಿಯನ ಪ್ರಾರ್ಥನೆ ಎಷ್ಟೊಂದು ಮನಸ್ಸು ಕರಗಿಸುವಂತಹದ್ದಾಗಿತ್ತು ಮತ್ತು ಇಂತಹ ಸಮಯದಲ್ಲಿ ಅವನನ್ನು ಯೆಹೋವನು ಕಳುಹಿಸಿದ್ದು ಎಷ್ಟು ಪ್ರೀತಿಪೂರ್ವಕವಾದ ವಿಷಯವಾಗಿತ್ತು!” ಸಾಕ್ಷಿಯಾಗಿದ್ದ ಇನ್ನೊಬ್ಬ ರೋಗಿಯು ತನ್ನನ್ನು ಭೇಟಿಮಾಡಿದ ಹಿರಿಯರ ಕುರಿತು ಹೇಳಿದ್ದು: “ಅವರು ಇಂಟೆನ್ಸೀವ್ ಕೇರ್ ಯೂನಿಟ್ನಲ್ಲಿದ್ದ ನನ್ನ ಮಂಚದ ಬಳಿ ಬಂದಾಗ, ಆ ಸಮಯದಿಂದ ಹಿಡಿದು ನನಗೆ ಏನಾದರೂ ನಾನು ಸಹಿಸಿಕೊಳ್ಳಬಲ್ಲೆ ಎಂದು ನನಗೆ ಅನಿಸಿತು. ನಾನು ಒಡನೆ ಬಲಾಢ್ಯಳೂ ಶಾಂತಚಿತ್ತಳೂ ಆದೆ.” ಇಂತಹ ಪ್ರೀತಿಯ ಆರೈಕೆಯನ್ನು ಯಾರಾದರೂ ಹಣಕ್ಕೆ ಕೊಂಡುಕೊಳ್ಳಸಾಧ್ಯವಿದೆಯೊ? ಇಲ್ಲವೇ ಇಲ್ಲ! ಇದು ದೇವರಿಂದ ಬರುವ ದಾನವಾಗಿದ್ದು ಕ್ರೈಸ್ತ ಸಭೆಯ ಮುಖಾಂತರ ಲಭ್ಯವಾಗುತ್ತದೆ.—ಯೆಶಾಯ 32:1, 2.
ಕ್ಷೇತ್ರ ಶುಶ್ರೂಷೆಯ ಕೊಡುಗೆ
17, 18. (ಎ) ಯೆಹೋವನು ತನ್ನ ಜನರೆಲ್ಲರಿಗೆ ಯಾವ ಸೇವಾ ಸುಯೋಗವನ್ನು ಲಭ್ಯಗೊಳಿಸಿದ್ದಾನೆ? (ಬಿ) ನಾವು ಶುಶ್ರೂಷೆಯನ್ನು ಪೂರೈಸುವಂತೆ ದೇವರು ಯಾವ ಸಹಾಯವನ್ನು ಒದಗಿಸಿದ್ದಾನೆ?
17 ಸರ್ವೋನ್ನತ ದೇವರಾದ ಯೆಹೋವನ ಸೇವೆ ಮಾಡುವುದಕ್ಕಿಂತ ಹೆಚ್ಚು ದೊಡ್ಡ ಗೌರವವು ಯಾವ ಮನುಷ್ಯನಿಗೂ ದೊರೆಯದು. (ಯೆಶಾಯ 43:10; 2 ಕೊರಿಂಥ 4:7; 1 ಪೇತ್ರ 2:9) ಹೀಗಿದ್ದರೂ, ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವ ಸುಯೋಗವು ದೇವರನ್ನು ಸೇವಿಸಲು ನಿಜವಾದ ಅಪೇಕ್ಷೆಯಿರುವ ಎಲ್ಲರಿಗೂ, ಅಂದರೆ ಯುವಜನರಿಗೂ ವೃದ್ಧರಿಗೂ, ಪುರುಷರಿಗೂ ಸ್ತ್ರೀಯರಿಗೂ ತೆರೆದಿದೆ. ಈ ಅಮೂಲ್ಯ ಕೊಡುಗೆಯನ್ನು ನೀವು ಉಪಯೋಗಿಸುತ್ತೀರೋ? ಕೆಲವರು ತಾವು ಅಯೋಗ್ಯರೆಂದು ಎಣಿಸಿ ಹಿಂಜರಿಯಬಹುದಾದರೂ, ಯೆಹೋವನು ತನ್ನನ್ನು ಸೇವಿಸುವವರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆಂಬುದು ನೆನಪಿರಲಿ ಮತ್ತು ಅದು ನಮ್ಮಲ್ಲಿರುವ ಕೊರತೆಯನ್ನು ನೀಗಿಸುವುದು.—ಯೆರೆಮೀಯ 1:6-8; 20:11.
18 ರಾಜ್ಯದ ಕುರಿತು ಸಾರುವ ಕೆಲಸವನ್ನು ಯೆಹೋವನು ಅಹಂಕಾರ ಪ್ರವೃತ್ತಿಯುಳ್ಳವರಿಗೆ ಮತ್ತು ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಹೊಂದಿಕೊಳ್ಳುವವರಿಗೆ ಕೊಡದೆ ತನ್ನ ದೀನ ಸೇವಕರಿಗೆ ಕೊಟ್ಟಿದ್ದಾನೆ. (1 ಕೊರಿಂಥ 1:20, 26-29) ದೀನರೂ ವಿನಯಶೀಲರೂ ಆಗಿರುವ ಜನರು ತಮ್ಮ ಇತಿಮಿತಿಗಳನ್ನು ಅಂಗೀಕರಿಸಿ, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ ದೇವರ ಸಹಾಯದ ಮೇಲೆ ಹೊಂದಿಕೊಳ್ಳುತ್ತಾರೆ. ಆತನು ತನ್ನ ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕ ಕೊಡುವ ಆತ್ಮಿಕ ಸಹಾಯವನ್ನೂ ಅವರು ಗಣ್ಯಮಾಡುತ್ತಾರೆ.—ಲೂಕ 12:42-44; ಜ್ಞಾನೋಕ್ತಿ 22:4.
ಸಂತೋಷದ ಕೌಟುಂಬಿಕ ಜೀವನ —ಒಂದು ಅತ್ಯುತ್ತಮ ಕೊಡುಗೆ
19. ಮಕ್ಕಳನ್ನು ಬೆಳೆಸುವುದರಲ್ಲಿ ಯಾವ ಅಂಶಗಳು ಯಶಸ್ಸಿಗೆ ನಡೆಸುತ್ತವೆ?
19 ವಿವಾಹವೂ ಕುಟುಂಬ ಜೀವನವೂ ದೇವರ ಕೊಡುಗೆಗಳಾಗಿವೆ. (ರೂತಳು 1:9; ಎಫೆಸ 3:14, 15) ಮಕ್ಕಳು “ಯಹೋವನಿಂದ ಬಂದ ಸ್ವಾಸ್ತ್ಯ”ವಾಗಿದ್ದು, ಅವರಲ್ಲಿ ದೈವಿಕ ಗುಣಗಳನ್ನು ಜಯಪ್ರದವಾಗಿ ತುಂಬುವ ಹೆತ್ತವರಿಗೆ ಅವರು ಹರ್ಷವನ್ನು ಉಂಟುಮಾಡುತ್ತಾರೆ. (ಕೀರ್ತನೆ 127:3) ನೀವು ಹೆತ್ತವರಾಗಿರುವಲ್ಲಿ, ನಿಮ್ಮ ಎಳೆಯರನ್ನು ಯೆಹೋವನ ವಾಕ್ಯದ ಪ್ರಕಾರ ತರಬೇತುಗೊಳಿಸುವ ಮೂಲಕ ಆತನ ಮಾತಿಗೆ ಕಿವಿಗೊಡುತ್ತ ಮುಂದುವರಿಯಿರಿ. ಹೀಗೆ ಮಾಡುವವರು ಯೆಹೋವನ ಬೆಂಬಲವನ್ನೂ ಸಮೃದ್ಧವಾದ ಆಶೀರ್ವಾದವನ್ನೂ ಪಡೆಯುವುದು ಖಂಡಿತ.—ಜ್ಞಾನೋಕ್ತಿ 3:5, 6; 22:6; ಎಫೆಸ 6:1-4.
20. ಸತ್ಯಾರಾಧನೆಯಿಂದ ದೂರ ತೊಲಗಿರುವ ಮಕ್ಕಳ ಹೆತ್ತವರಿಗೆ ಯಾವುದು ಸಹಾಯಕರವಾಗಿರಬಹುದು?
20 ದೇವಭಕ್ತಿಯುಳ್ಳ ಹೆತ್ತವರ ಮನಃಪೂರ್ವಕ ಪ್ರಯತ್ನಗಳ ಹೊರತೂ, ಮಕ್ಕಳಲ್ಲಿ ಕೆಲವರು ದೊಡ್ಡವರಾದಾಗ ಸತ್ಯಾರಾಧನೆಯನ್ನು ಬಿಟ್ಟುಹೋಗುವ ಆಯ್ಕೆಮಾಡಬಹುದು. (ಆದಿಕಾಂಡ 26:34, 35) ಇದು ಹೆತ್ತವರಿಗೆ ಭಾವನಾತ್ಮಕ ರೀತಿಯಲ್ಲಿ ವಿನಾಶಕರವಾಗಿರಬಲ್ಲದು. (ಜ್ಞಾನೋಕ್ತಿ 17:21, 25) ಆದರೆ ಸಕಲ ನಿರೀಕ್ಷೆಯನ್ನು ತೊರೆದುಬಿಡುವ ಬದಲಿಗೆ, ಪೋಲಿಹೋದ ಮಗನ ಕುರಿತಾದ ಯೇಸುವಿನ ಸಾಮ್ಯವನ್ನು ನೆನಪಿಸಿಕೊಳ್ಳುವುದು ಸಹಾಯಕರವಾಗಿದ್ದೀತು. ಆ ಮಗನು ಮನೆಬಿಟ್ಟುಹೋಗಿ ವಕ್ರಮಾರ್ಗವನ್ನು ಅನುಸರಿಸಿದರೂ, ಸಮಯಾನಂತರ ಅವನು ತನ್ನ ತಂದೆಯ ಮನೆಗೆ ಹಿಂದಿರುಗಿದನು. ಆಗ ಆ ತಂದೆ ಅವನನ್ನು ಹರ್ಷದಿಂದಲೂ ಪ್ರೀತಿಯಿಂದಲೂ ಅಂಗೀಕರಿಸಿದನು. (ಲೂಕ 15:11-32) ಏನೇ ಸಂಭವಿಸಲಿ, ನಂಬಿಗಸ್ತರಾದ ಕ್ರೈಸ್ತ ಹೆತ್ತವರು ಯೆಹೋವನ ತಿಳಿವಳಿಕೆ, ಆತನ ಪ್ರೀತಿಯ ಪರಾಮರಿಕೆ ಮತ್ತು ಆತನ ತಪ್ಪದ ಬೆಂಬಲದ ಖಾತ್ರಿಯುಳ್ಳವರಾಗಿರಬಲ್ಲರು.—ಕೀರ್ತನೆ 145:14.
21. ನಾವು ಯಾರಿಗೆ ಕಿವಿಗೊಡಬೇಕು, ಮತ್ತು ಏಕೆ?
21 ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ನಿಜವಾಗಿಯೂ ಯಾವುದು ಪ್ರಾಮುಖ್ಯವಾಗಿದೆ ಎಂಬುದನ್ನು ನಿರ್ಣಯಿಸೋಣ. ನಾವು ನಮಗೂ ನಮ್ಮ ಕುಟುಂಬಗಳಿಗೂ ವೇದನೆಯನ್ನು ತರಬಲ್ಲ ಪ್ರಾಪಂಚಿಕ ಸಮೃದ್ಧಿಯನ್ನು ತೀವ್ರಾಪೇಕ್ಷೆಯಿಂದ ಬೆನ್ನಟ್ಟುತ್ತಿದ್ದೇವೊ? ಇಲ್ಲವೆ, ನಾವು, “ಸಕಲವಿಧವಾದ ಬೆಳಕಿಗೂ ಮೂಲಕಾರಣ”ನಾದಾತನಿಂದ ಬರುವ ‘ಒಳ್ಳೇ ದಾನಗಳನ್ನೂ ಕುಂದಿಲ್ಲದ ವರಗಳನ್ನೂ’ ಬೆನ್ನಟ್ಟುತ್ತಿದ್ದೇವೊ? (ಯಾಕೋಬ 1:17) ‘ಸುಳ್ಳಿಗೆ ಮೂಲಪುರುಷನು’ ಆಗಿರುವ ಸೈತಾನನು, ನಾವು ಪ್ರಾಪಂಚಿಕ ಐಶ್ವರ್ಯಕ್ಕಾಗಿ ದುಡಿಯುವಂತೆ ಬಯಸಿ, ನಮಗೆ ಸಂತೋಷ ಮತ್ತು ಜೀವಗಳು ನಷ್ಟವಾಗುವಂತೆ ಮಾಡುತ್ತಾನೆ. (ಯೋಹಾನ 8:44; ಲೂಕ 12:15) ಆದರೆ ಯೆಹೋವನು ನಮ್ಮ ಅತ್ಯುತ್ತಮ ಹಿತವನ್ನು ಬಯಸುತ್ತಾನೆ. (ಯೆಶಾಯ 48:17, 18) ಆದಕಾರಣ, ನಮ್ಮನ್ನು ಪ್ರೀತಿಸುವ ಸ್ವರ್ಗೀಯ ತಂದೆಗೆ ನಾವು ಕಿವಿಗೊಡುತ್ತ ಇದ್ದು, ಸದಾ ಆತನಲ್ಲಿ ‘ಸಂತೋಷಿಸೋಣ.’ (ಕೀರ್ತನೆ 37:4) ನಾವು ಇಂತಹ ಮಾರ್ಗವನ್ನು ಬೆನ್ನಟ್ಟುವಲ್ಲಿ, ಯೆಹೋವನ ಬೆಲೆಕಟ್ಟಲಾಗದಂತಹ ವರಗಳು ಮತ್ತು ಹೇರಳವಾದ ಆಶೀರ್ವಾದಗಳು ನಮ್ಮನ್ನು, ವೇದನೆಯ ಯಾವ ಸುಳಿವೂ ಇಲ್ಲದ ರೀತಿಯಲ್ಲಿ ಸಂಪದ್ಭರಿತರನ್ನಾಗಿ ಮಾಡುವವು.
[ಪಾದಟಿಪ್ಪಣಿ]
ನಿಮಗೆ ನೆನಪಿದೆಯೇ?
• ಪರಮ ಸಂತೋಷವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
• ಯೆಹೋವನು ತನ್ನ ಜನರಿಗೆ ಕೊಡುವ ಕೆಲವು ಕೊಡುಗೆಗಳಾವುವು?
• ಕ್ಷೇತ್ರ ಶುಶ್ರೂಷೆಯು ಒಂದು ಕೊಡುಗೆಯಾಗಿರುವುದೇಕೆ?
• ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವಾಗ ದೇವರ ಆಶೀರ್ವಾದವನ್ನು ಪಡೆಯಲು ಅವರು ಏನು ಮಾಡಬಲ್ಲರು?
[ಪುಟ 16ರಲ್ಲಿರುವ ಚಿತ್ರ]
ದೇವರ ಕೊಡುಗೆಯಾದ ಆತನ ಲಿಖಿತ ವಾಕ್ಯಕ್ಕೆ ನೀವು ಕೃತಜ್ಞತೆ ತೋರಿಸುತ್ತೀರೊ?
[ಪುಟ 17ರಲ್ಲಿರುವ ಚಿತ್ರ]
ಅತಿ ಕಷ್ಟಕರವಾದ ಪರಿಸ್ಥಿತಿಗಳಲ್ಲಿಯೂ ಲಾರೆಲ್ ನಿಸ್ಬೆಟ್ ದೇವರನ್ನು ಹುರುಪಿನಿಂದ ಸೇವಿಸಿದಳು
[ಪುಟ 18ರಲ್ಲಿರುವ ಚಿತ್ರಗಳು]
ತಬಿಥಾಳಂತೆ ಇಂದಿನ ಕ್ರೈಸ್ತರು ತಮ್ಮ ಪ್ರೀತಿಯ ಕ್ರಿಯೆಗಳಿಗಾಗಿ ಸುಪ್ರಸಿದ್ಧರಾಗಿದ್ದಾರೆ
[ಪುಟ 19ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರು ಜೊತೆ ವಿಶ್ವಾಸಿಗಳಿಗೆ ಪ್ರೀತಿಯ ಪರಾಮರಿಕೆಯನ್ನು ತೋರಿಸುತ್ತಾರೆ