ಬಡವರಿಗಾಗಿ ನಿಜವಾದ ಸಹಾಯ
ದೇವಕುಮಾರನಾದ ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಬಡವರಿಗೆ ಸಹಾಯಮಾಡುವುದರಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದನು. ಯೇಸುವಿನ ಶುಶ್ರೂಷೆಯನ್ನು ಕಣ್ಣಾರೆ ಕಂಡ ಒಬ್ಬ ವ್ಯಕ್ತಿಯು ತಿಳಿಸಿದ್ದು: “ಕುರುಡರಿಗೆ ಕಣ್ಣು ಬರುತ್ತವೆ; ಕುಂಟರಿಗೆ ಕಾಲು ಬರುತ್ತವೆ; ಕುಷ್ಠರೋಗಿಗಳು ಶುದ್ಧರಾಗುತ್ತಾರೆ. ಕಿವುಡರಿಗೆ ಕಿವಿ ಬರುತ್ತವೆ; ಸತ್ತವರು ಜೀವವನ್ನು ಹೊಂದುತ್ತಾರೆ; ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.” (ಮತ್ತಾಯ 11:4, 5) ಆದರೂ, ಇಂದಿರುವ ಕೋಟಿಗಟ್ಟಲೆ ಬಡಜನರ ಕುರಿತಾಗಿ ಏನು? ಅವರಿಗಾಗಿ ಯಾವುದಾದರೂ ಸುವಾರ್ತೆಯು ಲಭ್ಯವಿದೆಯೋ? ಹೌದು, ಅವರಿಗಾಗಿ ಒಂದು ನಿರೀಕ್ಷೆಯ ಸಂದೇಶವಿದೆ!
ಸಾಮಾನ್ಯವಾಗಿ ಲೋಕವು ಬಡವರನ್ನು ತುಚ್ಛವಾಗಿ ಕಂಡು, ಅವರನ್ನು ಮರೆತುಬಿಡುತ್ತದಾದರೂ, ದೇವರ ವಾಕ್ಯವಾದ ಬೈಬಲು ವಾಗ್ದಾನಿಸುವುದು: “ದಿಕ್ಕಿಲ್ಲದವರು ಕಡೆಯ ವರೆಗೆ ಮರೆಯಲ್ಪಡುವದಿಲ್ಲ; ದೀನರ ನಿರೀಕ್ಷಣೆಯು ಕೆಡುವದೇ ಇಲ್ಲ.” (ಕೀರ್ತನೆ 9:18) ಒಂದು ನೈಜ ಸ್ವರ್ಗೀಯ ಸರಕಾರವಾಗಿರುವ ದೇವರ ರಾಜ್ಯವು ಸರ್ವ ಮಾನವಾಳ್ವಿಕೆಯನ್ನು ಸ್ಥಾನಪಲ್ಲಟಗೊಳಿಸುವಾಗ, ಈ ಸಾಂತ್ವನದಾಯಕ ಮಾತುಗಳು ನೆರವೇರುವವು. (ದಾನಿಯೇಲ 2:44) ಆ ಸ್ವರ್ಗೀಯ ಸರಕಾರದ ರಾಜನೋಪಾದಿ ಯೇಸು, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:13, 14.
ಕ್ರಿಸ್ತನು ಭೂಮಿಯ ಮೇಲೆ ಆಳ್ವಿಕೆ ನಡೆಸುವಾಗ ಜೀವನ ಪರಿಸ್ಥಿತಿಗಳು ಹೇಗಿರುವವು? ಕ್ರಿಸ್ತನ ಲೋಕದ ಕೆಳಗೆ ಜೀವಿಸುವವರು, ತಮ್ಮ ಕೈಕೆಲಸಗಳ ಫಲವನ್ನು ತಾವೇ ಅನುಭವಿಸುವರು. ಮೀಕ 4:3, 4ರಲ್ಲಿ ಬೈಬಲ್ ಹೇಳುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.” ದೇವರ ರಾಜ್ಯವು ಅಸ್ವಸ್ಥತೆ ಹಾಗೂ ಮರಣದ ಸಮಸ್ಯೆಗಳನ್ನೂ ಬಗೆಹರಿಸುವುದು. (ಯೆಶಾಯ 25:8) ಅದೆಷ್ಟು ಭಿನ್ನವಾದ ಲೋಕವಾಗಿರುವುದು! ಈ ಬೈಬಲ್ ವಾಗ್ದಾನಗಳನ್ನು ನಾವು ನಂಬಸಾಧ್ಯವಿದೆ, ಏಕೆಂದರೆ ಇವು ಸ್ವತಃ ದೈವಪ್ರೇರಿತವಾಗಿವೆ.
ಬೈಬಲು ನಿರೀಕ್ಷೆಯ ಸಂದೇಶವನ್ನು ಕೊಡುವುದರೊಂದಿಗೆ, ಬಡವರಾಗಿರುವುದರಿಂದ ಉಂಟಾಗಬಹುದಾದ ಆತ್ಮಗೌರವದ ಕೊರತೆಯನ್ನು ಹೇಗೆ ಹೋಗಲಾಡಿಸುವುದು ಎಂಬಂಥ ದೈನಂದಿನ ಪಂಥಾಹ್ವಾನಗಳನ್ನು ನಿಭಾಯಿಸಲು ಸಹ ನಮಗೆ ಸಹಾಯಮಾಡುತ್ತದೆ. ಒಬ್ಬ ಧನಿಕ ಕ್ರೈಸ್ತನು ದೇವರ ದೃಷ್ಟಿಯಲ್ಲಿ ಎಷ್ಟು ಅಮೂಲ್ಯನಾಗಿದ್ದಾನೋ ತಾನೂ ಆತನ ದೃಷ್ಟಿಯಲ್ಲಿ ಅಷ್ಟೇ ಅಮೂಲ್ಯನಾಗಿದ್ದೇನೆ ಎಂಬುದನ್ನು, ಅಗತ್ಯದಲ್ಲಿರುವ ಒಬ್ಬ ಕ್ರೈಸ್ತನು ತನ್ನ ಬೈಬಲ್ ಅಧ್ಯಯನದಿಂದ ಅರಿತಿರುತ್ತಾನೆ. ದೇವರು “ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ” ಎಂದು ಬೈಬಲಿನ ಯೋಬ ಪುಸ್ತಕವು ತಿಳಿಸುತ್ತದೆ. (ಯೋಬ 34:19) ದೇವರು ಎರಡೂ ವರ್ಗದವರನ್ನು ಒಂದೇ ಸಮನಾಗಿ ಪ್ರೀತಿಸುತ್ತಾನೆ.—ಅ. ಕೃತ್ಯಗಳು 10:34, 35.