ಭವಿಷ್ಯತ್ತಿನಲ್ಲಿ ಒಂದು ಪಾತಕರಹಿತ ಲೋಕ
ಪಾತಕಿಗಳಿಲ್ಲದಿರುವ ಲೋಕವನ್ನು ಸಾಧ್ಯವಾದರೆ ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಪೊಲೀಸರು, ಸೆರೆಮನೆಗಳು, ಅಥವಾ ದುಬಾರಿ ಹಾಗೂ ಜಟಿಲವಾದ ಪಾತಕ ನ್ಯಾಯ ವ್ಯವಸ್ಥೆಗಳ ಅಗತ್ಯವು ಅಲ್ಲಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಇತರ ವ್ಯಕ್ತಿಯ ಜೀವ ಮತ್ತು ಸ್ವತ್ತನ್ನು ಗೌರವಿಸುವ ಲೋಕ ಅದಾಗಿರುವುದು. ಆದರೆ ಇದು ಅಸಾಧ್ಯವಾದ ವಿಷಯವೆಂದು ತೋರುತ್ತದೋ? ನಿಮಗೆ ಹಾಗನಿಸಬಹುದು, ಆದರೆ ಈ ರೀತಿಯ ಅದ್ಭುತಕರವಾದ ಬದಲಾವಣೆಯನ್ನು ಬೈಬಲ್ ವಾಗ್ದಾನಿಸುತ್ತದೆ. ಈ ಭೂಮಿಯಲ್ಲಿ ನಡೆಯುತ್ತಿರುವ ಪಾತಕ ಮತ್ತು ಇತರ ರೀತಿಯ ದುಷ್ಕೃತ್ಯಗಳ ಕುರಿತು ಬೈಬಲ್ ಏನನ್ನುತ್ತದೆ ಎಂಬುದನ್ನು ನೀವೇಕೆ ಪರಿಗಣಿಸಬಾರದು?
ಕೀರ್ತನೆ ಪುಸ್ತಕದಲ್ಲಿ ನಾವು ಓದುವುದು: “ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ. ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:1, 2, 11) ನಿಜವಾಗಿಯೂ, ದೇವರ ಈ ವಾಗ್ದಾನವನ್ನು ಮತ್ತು ಇತರ ಉತ್ತೇಜನದಾಯಕ ವಾಗ್ದಾನಗಳನ್ನು ನೆರವೇರಿಸುವುದರಿಂದ ಆತನನ್ನು ಯಾರೂ ತಡೆಹಿಡಿಯಲಾರರು.
ಈ ಎಲ್ಲಾ ಆಶೀರ್ವಾದಗಳನ್ನು ತರಲು ದೇವರು ಉಪಯೋಗಿಸುವ ಮಾಧ್ಯಮವು ಆತನ ರಾಜ್ಯವಾಗಿದೆ. ಕರ್ತನ ಪ್ರಾರ್ಥನೆಯಲ್ಲಿ, ಈ ರಾಜ್ಯವು ಬರುವುದಕ್ಕಾಗಿ ಮತ್ತು ದೇವರ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ” ನೆರವೇರುವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಬೇಗನೆ ಆ ರಾಜ್ಯದ ಕೆಳಗೆ, ಈ ಭೂಮಿಯಲ್ಲಿರುವ ಯಾವನೂ ಬಡತನ, ದಬ್ಬಾಳಿಕೆ, ಅಥವಾ ಸ್ವಾರ್ಥದ ಕಾರಣ ಪಾತಕವನ್ನು ಮಾಡುವಂತೆ ಪ್ರೇರೇಪಿಸಲ್ಪಡುವುದಿಲ್ಲ. ಬದಲಾಗಿ ದೇವರ ವಾಕ್ಯವು ಹೇಳುವುದು: ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಿರುವುದು.’ (ಕೀರ್ತನೆ 72:16) ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲರಿಗೂ ಒಳ್ಳೆಯ ವಿಷಯಗಳನ್ನು ಸಮೃದ್ಧವಾಗಿ ನಿತ್ಯಕ್ಕೂ ಒದಗಿಸುವನು ಎಂಬುದು ನಿಶ್ಚಯ. ಅದಕ್ಕಿಂತಲೂ ಪ್ರಾಮುಖ್ಯವಾಗಿ, ಮಾನವ ಸಮಾಜವು ದೇವರಿಗಾಗಿರುವ ಮತ್ತು ನೆರೆಯವರಿಗಾಗಿರುವ ಪ್ರೀತಿಯ ಮೇಲೆ ಆಧಾರಗೊಂಡಿದ್ದು, ಪಾತಕದಿಂದ ಲೋಕವು ಮುಂದೆಂದೂ ಶಾಂತಿಭಂಗವಾಗದು.