ನೀವು ಒಂದು ಧರ್ಮಕ್ಕೆ ಸೇರಿದವರಾಗಿರಬೇಕೋ?
‘ದೇವರಲ್ಲಿ ನಂಬಿಕೆಯಿಡಲಿಕ್ಕಾಗಿ ನಾನು ಒಂದು ಚರ್ಚಿಗೆ ಸೇರಿದವನಾಗಿರಬೇಕೆಂದಿಲ್ಲ ಅಥವಾ ಚರ್ಚಿಗೆ ಕ್ರಮವಾಗಿ ಹೋಗಬೇಕೆಂದಿಲ್ಲ!’ ಅನೇಕರಿಗೆ, ಒಂದು ಚರ್ಚ್ ಅಥವಾ ಬೇರಾವುದೇ ಧಾರ್ಮಿಕ ಸಂಸ್ಥೆಯ ಸದಸ್ಯರಾಗಿರುವುದರ ಬಗ್ಗೆ ಈ ರೀತಿಯ ಭಾವನೆ ಇದೆ. ಇನ್ನೂ ಕೆಲವರು, ಒಂದು ಧಾರ್ಮಿಕ ವಿಧಿಸಮಾರಂಭಕ್ಕೆ ಉಪಸ್ಥಿತರಾಗಿರುವುದಕ್ಕಿಂತಲೂ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿರುವಾಗ ದೇವರಿಗೆ ಹೆಚ್ಚು ಸಮೀಪವಾಗಿರುವಂತೆ ಭಾಸವಾಗುತ್ತದೆ ಎಂದು ಹೇಳುತ್ತಾರೆ. ದೇವರಲ್ಲಿ ನಂಬಿಕೆಯಿಡಲಿಕ್ಕಾಗಿ ಒಂದು ಧಾರ್ಮಿಕ ಗುಂಪು ಅಥವಾ ಸಂಸ್ಥೆಯ ಸದಸ್ಯರಾಗಿರುವ ಆವಶ್ಯಕತೆಯಿಲ್ಲ ಎಂಬುದು ಇಂದಿನ ಸರ್ವಸಾಮಾನ್ಯ ಅಭಿಪ್ರಾಯವಾಗಿದೆ.
ಆದರೆ ಇತರರಿಗೆ, ಭಿನ್ನವಾದ ಅಭಿಪ್ರಾಯವಿದೆ. ಒಬ್ಬ ವ್ಯಕ್ತಿ ದೇವರ ಅನುಗ್ರಹವನ್ನು ಹೊಂದಬೇಕಾದರೆ, ಚರ್ಚ್ ಸದಸ್ಯತ್ವ ಮತ್ತು ಹಾಜರಿಯು ಆವಶ್ಯಕ ಮಾತ್ರವಲ್ಲ ಅತಿ ಪ್ರಾಮುಖ್ಯವೂ ಆಗಿದೆ ಎಂದು ಇವರು ಪ್ರತಿಪಾದಿಸುತ್ತಾರೆ. ಈ ರೀತಿಯ ವಿಭಿನ್ನ ಅಭಿಪ್ರಾಯಗಳ ಕಾರಣ, ಧಾರ್ಮಿಕ ಸದಸ್ಯತ್ವವು ನಿಜವಾಗಿಯೂ ಅಗತ್ಯವೊ ಇಲ್ಲವೊ ಎಂಬುದು, ಅಂಕಿಸಂಖ್ಯೆ ಮತ್ತು ಇತರ ವಾಸ್ತವಾಂಶಗಳಿಗಾಗಿ ಧರ್ಮಗಳನ್ನು ಅಧ್ಯಯನ ಮಾಡುವವರ ವಿಷಯವಾಗಿರುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬ ವ್ಯಕ್ತಿಗೆ ಮಹತ್ವಪೂರ್ಣವಾದ ವಿಷಯವಾಗಿದೆ. ಏನೇ ಆದರೂ, ದೇವರೊಂದಿಗಿನ ನಮ್ಮ ಸಂಬಂಧವು ಇದರಲ್ಲಿ ಒಳಗೂಡಿರುವುದರಿಂದ ಈ ವಿಷಯದಲ್ಲಿ ದೇವರ ದೃಷ್ಟಿಕೋನವೇನಾಗಿದೆ ಎಂಬುದನ್ನು ಕಂಡುಹಿಡಿಯುವುದು ನ್ಯಾಯಸಮ್ಮತವಲ್ಲವೋ? ಹಾಗಾದರೆ, ಈ ವಿಷಯದ ಕುರಿತು ಆತನ ವಾಕ್ಯವಾದ ಬೈಬಲಿನಿಂದ ನಾವೇನನ್ನು ಕಲಿಯಬಲ್ಲೆವು?
ಪೂರ್ವದಲ್ಲಿ ದೇವರು ಜನರೊಂದಿಗೆ ವ್ಯವಹರಿಸಿದ ವಿಧ
ಸುಮಾರು 4,400 ವರ್ಷಗಳ ಹಿಂದೆ, ಒಂದು ವಿಪತ್ಕಾರಕ ಜಲಪ್ರಳಯವು ಇಡೀ ಭೂಮಿಯನ್ನು ಬಡಿಯಿತು. ಇಂಥ ಒಂದು ಘಟನೆಯನ್ನು ಸುಲಭವಾಗಿ ಮರೆಯಲಾಗುವುದಿಲ್ಲ, ಮತ್ತು ಲೋಕದಾದ್ಯಂತ ಜನರು ತಮ್ಮ ಆರಂಭದ ಇತಿಹಾಸದಲ್ಲಿ ಇದರ ಕುರಿತು ಕಥೆಗಳನ್ನು ಹೊಂದಿದ್ದಾರೆ. ಅದರ ಬಗ್ಗೆ ಕೊಡಲ್ಪಡುವ ವಿವರಗಳಲ್ಲಿ ವ್ಯತ್ಯಾಸಗಳು ಇರುವುದಾದರೂ, ಆ ಕಥೆಗಳ ಹೆಚ್ಚಿನಾಂಶಗಳು ಸಮಾನವಾದವುಗಳಾಗಿವೆ. ಮತ್ತು ಇವುಗಳಲ್ಲಿ, ಕೇವಲ ಕೆಲವೇ ಮಾನವರು ಹಾಗೂ ಕೆಲವು ಪ್ರಾಣಿಗಳು ಪಾರಾಗಿ ಉಳಿದವು ಎಂಬುದು ಒಂದು ಸಮಾನಾಂಶ.
ಜಲಪ್ರಳಯದಿಂದ ಪಾರಾದವರು, ನಾಶನದಿಂದ ಕೇವಲ ಆಕಸ್ಮಿಕವಾಗಿ ತಪ್ಪಿಸಿಕೊಂಡಿದ್ದ ವ್ಯಕ್ತಿಗಳಾಗಿದ್ದರೋ? ಇಲ್ಲವೆಂಬುದನ್ನು ಬೈಬಲ್ ದಾಖಲೆಯು ತೋರಿಸುತ್ತದೆ. ಗಮನಾರ್ಹ ಸಂಗತಿಯೇನೆಂದರೆ, ಬರಲಿದ್ದ ಜಲಪ್ರಳಯದ ಕುರಿತು ದೇವರು ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿಪರವಾಗಿ ತಿಳಿಸಲಿಲ್ಲ. ಬದಲಿಗೆ, ಆತನು ನೋಹನಿಗೆ ತಿಳಿಸಿದನು, ಮತ್ತು ನೋಹನು ಸಮೀಪಿಸುತ್ತಿದ್ದ ಜಲಪ್ರಳಯದ ಕುರಿತು ತನ್ನ ಸಮಕಾಲೀನರಿಗೆ ಎಚ್ಚರಿಸಿದನು.—ಆದಿಕಾಂಡ 6:13-16; 2 ಪೇತ್ರ 2:5.
ಅನ್ಯೋನ್ಯವಾಗಿ ಹೆಣೆಯಲ್ಪಟ್ಟಿದ್ದ ಈ ಗುಂಪಿನ ಭಾಗವಾಗಿರುವುದರ ಮತ್ತು ನೋಹನಿಗೆ ಕೊಡಲ್ಪಟ್ಟ ದೇವರ ನಿರ್ದೇಶನವನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುವುದರ ಮೇಲೆ ಪಾರಾಗುವಿಕೆಯು ಆತುಕೊಂಡಿತ್ತು. ಪ್ರಾಣಿಗಳು ಸಹ ಈ ಗುಂಪಿನೊಂದಿಗೆ ಇದ್ದುದರಿಂದಲೇ ಜಲಪ್ರಳಯದಿಂದ ಪಾರಾದವು. ಪ್ರಾಣಿಜೀವಿಗಳ ಸಂರಕ್ಷಣೆಗಾಗಿ ತಕ್ಕದಾದ ಏರ್ಪಾಡುಗಳನ್ನು ಮಾಡುವಂತೆ ನೋಹನಿಗೆ ನಿರ್ದಿಷ್ಟವಾದ ಸೂಚನೆಗಳು ಕೊಡಲ್ಪಟ್ಟಿದ್ದವು.—ಆದಿಕಾಂಡ 6:17-7:8.
ನೂರಾರು ವರ್ಷಗಳ ಬಳಿಕ, ಶೇಮ್ನ ಮೂಲಕವಾಗಿ ಬಂದಿದ್ದ ನೋಹನ ವಂಶಸ್ಥರು ಐಗುಪ್ತದಲ್ಲಿ ಬಂಧಿವಾಸದಲ್ಲಿದ್ದರು. ಆದರೂ, ಅವರನ್ನು ಬಿಡಿಸಿ ಅವರ ಮೂಲಪಿತನಾದ ಅಬ್ರಹಾಮನಿಗೆ ವಾಗ್ದಾನಿಸಿದ್ದ ದೇಶಕ್ಕೆ ಕರೆತರುವುದು ದೇವರ ಉದ್ದೇಶವಾಗಿತ್ತು. ಪುನಃ ಒಮ್ಮೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ತಿಳಿಸಲ್ಪಡಲಿಲ್ಲ, ಬದಲಿಗೆ ಅವರ ನಾಯಕರಾಗಿ ಆಯ್ಕೆಯಾಗಿದ್ದ ಮೋಶೆ ಮತ್ತು ಅವನ ಸಹೋದರನಾದ ಆರೋನನಿಗೆ ಮೊದಲು ತಿಳಿಸಲ್ಪಟ್ಟಿತು. (ವಿಮೋಚನಕಾಂಡ 3:7-10; 4:27-31) ಒಂದು ಗುಂಪಾಗಿ ಐಗುಪ್ತದಿಂದ ಬಿಡುಗಡೆಮಾಡಲ್ಪಟ್ಟ ಬಳಿಕ ಈ ಮಾಜಿ ಗುಲಾಮರಿಗೆ ಸೀನಾಯಿ ಬೆಟ್ಟದ ಬಳಿ ದೇವರ ಧರ್ಮಶಾಸ್ತ್ರವು ಕೊಡಲ್ಪಟ್ಟಿತು ಮತ್ತು ಇವರನ್ನು ಇಸ್ರಾಯೇಲ್ ಜನಾಂಗವಾಗಿ ರೂಪಿಸಲಾಯಿತು.—ವಿಮೋಚನಕಾಂಡ 19:1-6.
ಪ್ರತಿಯೊಬ್ಬ ಇಸ್ರಾಯೇಲ್ಯನು, ದೈವಿಕವಾಗಿ ಸ್ಥಾಪಿಸಲ್ಪಟ್ಟಿದ್ದ ಒಂದು ಗುಂಪಿನ ಭಾಗವಾಗಿದ್ದು ಆ ಗುಂಪಿನ ನೇಮಿತ ನಾಯಕರ ನಿರ್ದೇಶನವನ್ನು ಅನುಸರಿಸುತ್ತಿದ್ದುದರಿಂದ ಮಾತ್ರವೇ ಅವನಿಗೆ ಬಿಡುಗಡೆಯು ಸಾಧ್ಯವಾಯಿತು. ದೈವಾನುಗ್ರಹವಿದೆಯೆಂದು ಸುಸ್ಪಷ್ಟವಾಗಿ ತೋರುತ್ತಿದ್ದ ಈ ಗುಂಪಿನೊಂದಿಗೆ ಜೊತೆಗೂಡುವಂತೆ ಐಗುಪ್ತ್ಯ ವ್ಯಕ್ತಿಗಳಿಗೆ ಸಹ ಅನುಮತಿಯು ಕೊಡಲ್ಪಟ್ಟಿತು. ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೊರಟಾಗ ಈ ವ್ಯಕ್ತಿಗಳು ಸಹ ಅವರನ್ನು ಸೇರಿಕೊಂಡರು, ಮತ್ತು ಹೀಗೆ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವ ಪ್ರತೀಕ್ಷೆಯುಳ್ಳವರಾದರು.—ವಿಮೋಚನಕಾಂಡ 12:37, 38.
ನಂತರ ಪ್ರಥಮ ಶತಮಾನದಲ್ಲಿ, ಯೇಸು ತನ್ನ ಸಾರುವ ಚಟುವಟಿಕೆಯನ್ನು ಆರಂಭಿಸಿ ಜನರನ್ನು ತನ್ನ ಶಿಷ್ಯರನ್ನಾಗಿ ಒಟ್ಟುಗೂಡಿಸಿದನು. ಅವನು ಅವರೊಂದಿಗೆ ಒಂದು ಗುಂಪಿನೋಪಾದಿ ವ್ಯವಹರಿಸಿದನು, ಆದರೆ ಅದೇ ಸಮಯದಲ್ಲಿ ಅವರಲ್ಲಿ ಒಬ್ಬೊಬ್ಬರಿಗೂ ಅವರ ಅಗತ್ಯಕ್ಕೆ ತಕ್ಕ ಹಾಗೆ ಪ್ರೀತಿಪರ ಗಮನವನ್ನು ಕೊಟ್ಟನು. ಹನ್ನೊಂದು ಮಂದಿ ನಂಬಿಗಸ್ತ ಅಪೊಸ್ತಲರಿಗೆ ಯೇಸು ಹೇಳಿದ್ದು: “ನೀವು ನನ್ನ ಅನೇಕ ಹೋರಾಟಗಳಲ್ಲಿ ನನ್ನ ಸಂಗಡ ಇದ್ದವರು. ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ.” (ಲೂಕ 22:28, 29, ಪರಿಶುದ್ಧ ಬೈಬಲ್a) ತದನಂತರ, ಶಿಷ್ಯರು ಒಂದು ಗುಂಪಾಗಿ ಕೂಡಿಕೊಂಡಿದ್ದಾಗ ದೇವರ ಪವಿತ್ರಾತ್ಮವು ಅವರ ಮೇಲೆ ಬಂತು.—ಅ. ಕೃತ್ಯಗಳು 2:1-4.
ಈ ಎಲ್ಲಾ ಉದಾಹರಣೆಗಳು, ಪೂರ್ವದಲ್ಲಿ ದೇವರು ಯಾವಾಗಲೂ ತನ್ನ ಜನರೊಂದಿಗೆ ಒಂದು ಸಂಘಟಿತ ಗುಂಪಿನೋಪಾದಿ ವ್ಯವಹರಿಸಿದ್ದಾನೆ ಎಂಬುದನ್ನು ತೋರಿಸುತ್ತವೆ. ದೇವರು ವೈಯಕ್ತಿಕವಾಗಿ ವ್ಯವಹರಿಸಿದ ಆ ಕೊಂಚ ಮಂದಿ—ನೋಹ, ಮೋಶೆ, ಯೇಸು, ಮತ್ತು ಇನ್ನಿತರರು—ವಾಸ್ತವದಲ್ಲಿ, ನಿಕಟವಾಗಿ ಸಂಘಟಿಸಲ್ಪಟ್ಟಿದ್ದ ಒಂದು ಗುಂಪಿನೊಂದಿಗೆ ಸಂವಾದಮಾಡಲಿಕ್ಕಾಗಿ ಉಪಯೋಗಿಸಲ್ಪಟ್ಟರು. ದೇವರು ಇಂದು ತನ್ನ ಸೇವಕರೊಂದಿಗೆ ಬೇರೆ ರೀತಿಯಲ್ಲಿ ವ್ಯವಹರಿಸುತ್ತಾನೆ ಎಂದು ನಂಬಲು ಯಾವುದೇ ಕಾರಣವಿರುವುದಿಲ್ಲ. ಆದರೆ ಇದು ಮತ್ತೊಂದು ಪ್ರಶ್ನೆಗೆ ಎಡೆಮಾಡಿಕೊಡುತ್ತದೆ: ಯಾವುದೇ ಒಂದು ಧಾರ್ಮಿಕ ಗುಂಪಿನ ಸದಸ್ಯರಾಗಿರುವುದಷ್ಟೇ ಸಾಕೊ? ಈ ಪ್ರಮುಖ ಪ್ರಶ್ನೆಯನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 4ರಲ್ಲಿರುವ ಚಿತ್ರ]
ದೇವರು ಆದಿಯಿಂದಲೂ ತನ್ನ ಜನರೊಂದಿಗೆ ಒಂದು ಸಂಘಟಿತ ಗುಂಪಿನೋಪಾದಿ ವ್ಯವಹರಿಸಿದ್ದಾನೆ