ರಾಜ್ಯ ಘೋಷಕರು ವರದಿ ಮಾಡುತ್ತಾರೆ
‘ಇಲ್ಲಿಗೆ ಬಂದು ನಮಗೆ ನೆರವಾಗಿರಿ’
ಇಸವಿ 2000ದ ಜುಲೈ ತಿಂಗಳಿನಲ್ಲಿ, ಆಸ್ಟ್ರೀಯ, ಜರ್ಮನಿ, ಮತ್ತು ಸ್ವಿಟ್ಸರ್ಲೆಂಡ್ನಲ್ಲಿದ್ದ ಜರ್ಮನ್ ಭಾಷೆಯನ್ನಾಡುವ ಸಾಕ್ಷಿಗಳು ಬೊಲಿವಿಯಕ್ಕೆ ಸ್ಥಳಾಂತರಿಸುವಂತೆ ಒಂದು ಕರೆ ಹೊರಡಿಸಲಾಯಿತು. ಏಕೆ? ಏಕೆಂದರೆ, ಬೊಲಿವಿಯದ ಸ್ಯಾಂಟ ಕ್ರೂಸ್ನಿಂದ 300 ಕಿಲೊಮೀಟರ್ ವ್ಯಾಪ್ತಿಯೊಳಗಿರುವ ಏಕಾಂತ ವ್ಯವಸಾಯ ಕಾಲನಿಗಳಲ್ಲಿದ್ದ ಜರ್ಮನ್ ಭಾಷೆಯನ್ನಾಡುವ ಮೆನನೈಟ್ಗಳು ಬೈಬಲಿನಲ್ಲಿ ತೀವ್ರ ಆಸಕ್ತಿಯನ್ನು ತೋರಿಸುತ್ತಿದ್ದರು.
ಈ ಕರೆಗೆ ಸುಮಾರು 140 ಸಾಕ್ಷಿಗಳು ಪ್ರತಿಕ್ರಿಯೆ ತೋರಿಸಿದರು. ಕೆಲವರು ಕೆಲವು ವಾರಗಳಿಗಾಗಿ, ಇತರರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯಕ್ಕಾಗಿ ಅಲ್ಲಿಗೆ ಹೋದರು. ಹೀಗೆ ಮಾಡುವ ಮೂಲಕ ಅವರು, “ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು” ಮಾಡಲ್ಪಟ್ಟ ಕರೆಗೆ ಪ್ರತಿಕ್ರಿಯಿಸಿದ ಪ್ರಥಮ ಶತಮಾನದ ಮಿಷನೆರಿಗಳ ಆತ್ಮವನ್ನು ಪ್ರದರ್ಶಿಸಿದರು.—ಅ. ಕೃತ್ಯಗಳು 16:9, 10.
ಆ ಟೆರಿಟೊರಿಯಲ್ಲಿ ಕೆಲಸಮಾಡುವುದು ಎಂತಹ ಅನುಭವವಾಗಿರುವುದು? ಸ್ಥಳಿಕ ಸಭೆಯಲ್ಲಿರುವ ಒಬ್ಬ ಹಿರಿಯನು ವಿವರಿಸುವುದು: “ಇಲ್ಲಿರುವ 43 ಮೆನನೈಟ್ ಕಾಲನಿಗಳಲ್ಲಿ ಒಂದು ಕಾಲನಿಗೆ ಪ್ರಯಾಣಿಸಲು ಫೋರ್ ವೀಲ್ ಡ್ರೈವ್ ವಾಹನವೊಂದರಲ್ಲಿ ಎಂಟು ತಾಸುಗಳಷ್ಟು ದೀರ್ಘಕಾಲ ಮಣ್ಣಿನ ರಸ್ತೆಗಳ ಮೇಲೆ ಹೋಗಬೇಕಾಗುತ್ತದೆ. ಇನ್ನೂ ದೂರದ ಪ್ರದೇಶಗಳಿಗೆ ಭೇಟಿಕೊಡಲು ಅನೇಕಾವರ್ತಿ ನಾಲ್ಕು ದಿನಗಳು ಬೇಕಾಗುತ್ತವೆ ಮತ್ತು ಕೆಲವು ರಾತ್ರಿಗಳಲ್ಲಿ ಗುಡಾರಗಳಲ್ಲಿ ನಿದ್ರಿಸಬೇಕಾಗುತ್ತದೆ. ಆದರೆ ಈ ಪರಿಶ್ರಮವು ನಿಶ್ಚಯವಾಗಿಯೂ ಸಾರ್ಥಕವಾಗಿದೆ, ಏಕೆಂದರೆ ಈ ಜನರಲ್ಲಿ ಯಾರೊಬ್ಬನೂ ಹಿಂದೆಂದೂ ಸುವಾರ್ತೆಯನ್ನು ಕೇಳಿಸಿಕೊಂಡಿರಲಿಲ್ಲ.”
ಆರಂಭದಲ್ಲಿ, ಅನೇಕಮಂದಿ ಮೆನನೈಟ್ಗಳು ಈ ಭೇಟಿಗಳನ್ನು ಸಂತೋಷದಿಂದ ಸ್ವೀಕರಿಸಲಿಲ್ಲ. ಆದರೆ ಪದೇಪದೇ ಮಾಡಲಾದ ಪ್ರಯತ್ನಗಳು, ಸಾಕ್ಷಿಗಳು ತಮಗೆ ಏನನ್ನೋ ನೀಡಲು ಬಂದಿದ್ದಾರೆ ಎಂಬುದನ್ನು ಅವರು ಮನಗಾಣಲು ನೆರವುನೀಡಿದವು. ಉದಾಹರಣೆಗೆ, ಒಬ್ಬ ರೈತನು ತಾನು ಒಂದು ವರ್ಷದಿಂದ ಎಚ್ಚರ! ಪತ್ರಿಕೆಯನ್ನು ಓದುತ್ತಿರುವುದಾಗಿ ಹೇಳಿದನು. ನಂತರ ಅವನು ಕೂಡಿಸಿದ್ದು: “ಇಲ್ಲಿರುವ ಅನೇಕ ಜನರು ನೀವು ಹೇಳುವುದನ್ನು ನಂಬುವುದಿಲ್ಲ ಎಂಬುದು ನನಗೆ ಗೊತ್ತು, ಆದರೆ ಇದೇ ಸತ್ಯವೆಂದು ನಾನು ನಂಬುತ್ತೇನೆ.” ಮತ್ತೊಂದು ಕಾಲನಿಯಲ್ಲಿನ ಒಬ್ಬ ವ್ಯಕ್ತಿ ಹೇಳಿದ್ದು: “ನನ್ನ ನೆರೆಯವರಲ್ಲಿ ಕೆಲವರು ನಿಮ್ಮನ್ನು ಸುಳ್ಳು ಪ್ರವಾದಿಗಳೆಂದು, ಮತ್ತಿತರರು ನಿಮ್ಮಲ್ಲಿ ಸತ್ಯವಿದೆಯೆಂದು ಹೇಳುತ್ತಾರೆ. ಅದನ್ನು ಸ್ವತಃ ನಾನೇ ಕಂಡುಕೊಳ್ಳಲು ಬಯಸುತ್ತೇನೆ.”
ಈಗ ಬೊಲಿವಿಯದಲ್ಲಿ, 14 ಮಂದಿ ಪೂರ್ಣ ಸಮಯದ ಸೌವಾರ್ತಿಕರನ್ನು ಸೇರಿಸಿ 35 ಪ್ರಚಾರಕರಿರುವ ಜರ್ಮನ್ ಭಾಷೆಯನ್ನಾಡುವ ಒಂದು ಸಭೆಯಿದೆ. ಇಂದಿನ ವರೆಗೆ 14 ಮಾಜಿ ಮೆನನೈಟ್ಗಳು ರಾಜ್ಯ ಘೋಷಕರಾಗಿದ್ದಾರೆ, ಮತ್ತು ಇನ್ನೂ 9 ಮಂದಿ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಾರೆ. ಇತ್ತೀಚೆಗೆ ದೀಕ್ಷಾಸ್ನಾನವನ್ನು ಹೊಂದಿದ ಒಬ್ಬ ವೃದ್ಧನು ಹೇಳಿದ್ದು: “ನಾವು ಯೆಹೋವನ ಮಾರ್ಗದರ್ಶನವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಆತನು ನಮಗೆ ನೆರವುನೀಡಲು ಜರ್ಮನ್ ಭಾಷೆಯನ್ನಾಡುವ ಅನುಭವಸ್ಥ ಸಹೋದರ ಸಹೋದರಿಯರನ್ನು ಕಳುಹಿಸಿಕೊಟ್ಟಿದ್ದಾನೆ. ನಾವು ತುಂಬ ಆಭಾರಿಗಳಾಗಿದ್ದೇವೆ.” ಈ ವ್ಯಕ್ತಿಯ 17 ವರ್ಷ ಪ್ರಾಯದ ಮಗಳು—ಇವಳು ಕೂಡ ದೀಕ್ಷಾಸ್ನಾನ ಪಡೆದುಕೊಂಡಿದ್ದಾಳೆ—ಕೂಡಿಸಿ ಹೇಳಿದ್ದು: “ಇಲ್ಲಿಗೆ ಬಂದಿರುವ ಯುವ ಸಹೋದರ ಸಹೋದರಿಯರ ಹುರುಪು ಒಬ್ಬರಿಂದ ಒಬ್ಬರಿಗೆ ಹರಡುವಂಥದ್ದಾಗಿದೆ. ಅವರಲ್ಲಿ ಹೆಚ್ಚಿನವರು ಪಯನೀಯರರಾಗಿದ್ದು, ತಮ್ಮ ಸಮಯ ಮತ್ತು ಹಣವನ್ನು ಇತರರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸುತ್ತಿದ್ದಾರೆ. ನಾನು ಸಹ ಅದನ್ನೇ ಮಾಡುವಂತೆ ಇದು ನನ್ನನ್ನು ಪ್ರೇರಿಸುತ್ತದೆ.”
ನಿಜವಾಗಿಯೂ, “ಬಂದು” ನೆರವುನೀಡಲು ಯಾರು ಪ್ರಯತ್ನಿಸಿದರೋ ಅವರು ಮಹಾ ಆನಂದ ಮತ್ತು ಸಂತೃಪ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ.